Tuesday, August 25, 2009

ಹಿರಿಯ ಮನಸ್ಸು ನೊಂದಿದೆ...ಹಾಗೇ ಓದಿಕೊಳ್ಳಿ ಸುಮ್ಮನೆ...

ಅದೇಕೋ ಗೊತ್ತಿಲ್ಲ...ಕಳೆದ ಹದಿನೈದು ದಿನಗಳಿಂದ ಹಿರಿಯರಾದ ಇಟಗಿ ಈರಣ್ಣ ಅವರು ಮುನಿಸಿಕೊಂಡಿದ್ದಾರೆ...ಮನಸ್ಸಿಗೆ ತುಂಬಾ ನೋವಾಗಿದೆಯಂತೆ......ನಾನು ಫೋನ್ ಮಾಡಿದ ತಕ್ಷಣ ಎರಡನೇ ಬಾರಿ ಅದು ಕೂಗುವುದಕ್ಕೂ ಮೊದಲೆ ಅದನ್ನು ಎತ್ತಿಕೊಳ್ಳುವ ಸ್ನೇಹಜೀವಿ, ಅಷ್ಟು ಸುಲಭವಾಗಿ ತಮ್ಮ ಮನಸ್ಸನ್ನು ನೋಯಿಸಿಕೊಳ್ಳುವುದಿಲ್ಲ ಎಂದು ನನಗೆ ಅವರು ಕಳೆದ ಹತ್ತು ವರ್ಷಗಳ ಪರಿಚಯದಲ್ಲಿ ಮನವರಿಕೆಯಾಗಿದೆ..ಇದು ಬಹುಶಃ ಗಂಭೀರವಾದ ವಿಷಯವೇ ಇರಬೇಕು...ನಾನು ಖುದ್ದಾಗಿ ಹೊಸಪೇಟೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬರಲು ನಿರ್ಧರಿಸಿದ್ದೇನೆ...ಅವರ ಧ್ವನಿ, ಹಿತನುಡಿ, ಶಾಯರಿ, ಗಜಲ್ ಕೇಳುತ್ತಿದ್ದರೆ, "ರಾವೀ ನದಿಯ ದಂಡೆಯ ಮೇಲೆ" ನಾಟಕಕ್ಕೆ ಅವರು ಬರೆದ ಈ ಕೆಳಗಿನ ಗಜಲ್ ನೆನಪಿಗೆ ಬರುತ್ತದೆ... ಹಾಗೆ ಓದಿಕೊಳ್ಳಿ ಸುಮ್ಮನೆ...

ನಮ್ಮ ಸುತ್ತಿನ ಸಂಬಂಧಗಳನು, ಸ್ವಲ್ಪ, ಕಿವಿಗೊಟ್ಟು ಕೇಳು!
ಏಕೆ ತುಂಬಿದೆ, ಗದ್ದಲವೂ ಇಲ್ಲಿ? ಸ್ವಲ್ಪ, ಕಿವಿಗೊಟ್ಟು ಕೇಳು!!

ಉದಯಿಸುವ ಸೂರ್ಯನ, ಹಾವ-ಭಾವಗಳ, ಕಣ್ಣಿಟ್ಟು ನೋಡು!
ಮುಳುಗುತಿಹ ಸೂರ್ಯನ-ನಿಂದೆಗಳ, ಸ್ವಲ್ಪ, ಕಿವಿಗೊಟ್ಟು ಕೇಳು!!

ನಮ್ಮೀ ನಿವಾಸದಲ್ಲೇ ಇವೆ, ವಿಶಾಲ-ಋತು-ಸಂವತ್ಸರಾದಿಗಳು!
ನೀರಗುಳ್ಳೆಗಳಂತೆ, ಒಡೆದು ಹೋಗುತಿವೆ, ಸ್ವಲ್ಪ, ಕಿವಿಗೊಟ್ಟು ಕೇಳು!!

ಏಕಿಂತು ಹಾಳು ಬಿದ್ದಿದೆ ಹೇಳು? ಈ ನಮ್ಮ ಪುಣ್ಯ - ಕಾಬಾ?!
ತೆಗೆಯಾ ಕೈಗಳನು ಕೈಯಿಂದ! ಸ್ವಲ್ಪ ಕಿವಿಗೊಟ್ಟು ಕೇಳು!!

"ನಿನ್ನ ಬಿಟ್ಟು ನಾನಿಲ್ಲ" - ಎಂಬ ನುಡಿ ಬರುತಲಿದೆ - ಒಳಗಿಂದಲೇ!
ಯಾರವರು ನುಡಿವವರು ನಮ್ಮೊಳಗೆ? ಸ್ವಲ್ಪ ಕಿವಿಗೊಟ್ಟು ಕೇಳು!!

ನಾವು ಅಡಿಯಿಡುವ ದಾರಿಯಲಿ, ಹೆಜ್ಜೆ-ಹೆಜ್ಜೆಗೂ "ನಾಸಿರ್"!
ಮಿಡಿವ ಹೃದಯವದೇನೋ, ನುಡಿಯುತಿದೆ! ಸ್ವಲ್ಪ ಕಿವಿಗೊಟ್ಟು ಕೇಳು!

Saturday, August 22, 2009

ಪಾರಿವಾಳದ ಆಟ ಛಂದ....


ಕನ್ನಡದ ಕಬೀರರೆಂದೆ ಖ್ಯಾತರಾಗಿರುವ ಶರೀಫರ "ಪಾರಿವಾಳದ ಆಟ ಛಂದ...ಅದ ನೋಡುತ ಕುಂತರೆ ಮನಸಿಗಾನಂದ......" ಈ ಹಾಡನ್ನು ಕೇಳುತ್ತಿದ್ದರೆ ನಿಜಕ್ಕೂ ಮನಸಿಗಾನಂದವಾಗುತ್ತದೆ...ಹಿರಿಯ ಗಾಯಕ ಸಿ.ಅಶ್ವಥ್ ಇದನ್ನು ಬಹಳ ಸೊಗಸಾಗಿ ಸಂಯೋಜಿಸಿದ್ದಾರೆ...ಈಗ ನಾನು ಶರೀಫರು, ಪಾರಿವಾಳ ಮತ್ತು ಅಶ್ವಥ್ ಅವರ ನೆನಪನ್ನು ತೆಗೆಯಲು ಕಾರಣವಿಷ್ಟೇ...ನನ್ನ ಮನೆಯ ಬಾಲ್ಕನಿಯಲ್ಲಿ ನಾನೇ ನಿರ್ಮಿಸಿಕೊಂಡ ಒಂದು ಪುಟ್ಟ ಕೈತೋಟದಲ್ಲಿ ಪಾರಿವಾಳ ದಂಪತಿ ಈಗ ೨೦-೨೫ ದಿನಗಳ ಹಿಂದೆ ತಮ್ಮ ಸಂಸಾರ ಹೂಡಲು ಆರಂಭಿಸಿವೆ...ಬೆಳಗಾಗೆದ್ದು ನೋಡಿದರೆ ಒಂದು ಖಾಲಿ ಹೂವಿನ ಕುಂಡದಲ್ಲಿ ಒಂದು ಪುಟ್ಟ ಮೊಟ್ಟೆ ಕಾಣಿಸಿತು.ಮಾರನೆ ದಿನ ಮತ್ತೊಂದು ಮೊಟ್ಟೆ...ಸುತ್ತ ಸಿಗುವ ಒಣ ಹುಲ್ಲು ಗರಿಕೆ, ಒಣಗಿದ ಎಲೆಗಳನ್ನು ತಂದು ಸಂಸಾರವನ್ನು ಹೂಡುವ ತಯಾರಿ ನಡೆಸಿಯೇ ಬಿಟ್ಟವು ಆ ಪಾರಿವಾಳ ದಂಪತಿ...ಬಹಳ ಜತನದಿಂದ ಮೊಟ್ಟೆಯನ್ನು ನೋಡಿಕೊಳ್ಳ ತೊಡಗಿದವು...


ಮೊದ ಮೊದಲು ನನ್ನನ್ನ ಹಾಗು ನನ್ನ ಮಗ ಸುಮೇಧನನ್ನು ನೋಡಿದರೆ ಪುರ್ರನೆ ಹಾರಿ ಹೋಗುತ್ತಿದ್ದ ಪಾರಿವಾಳಗಳು ಕ್ರಮೇಣ ನಮಗೆ ಈಲಾದವು...ಬರೋಬ್ಬರಿ ಮೊಟ್ಟೆ ಇಟ್ಟ ಹದಿನೆಂಟನೇ ದಿನಕ್ಕೆ ನಾನು ಬೆಳಿಗ್ಗೆ ಎದ್ದು ಗಿಡಗಳಿಗೆ ನೀರುಣಿಸಲು ಬಾಲ್ಕನಿಗೆ ಬಂದಾಗ ಮೊಟ್ಟೆಯೊಡೆದು ಎರಡು ಪುಟ್ಟ ಪಾರಿವಾಳಗಳು ಜಗತ್ತಿಗೆ ಕಣ್ಣು ಬಿಡುತ್ತಿದ್ದವು... ನನ್ನ ಮಗನಿಗೆ ಅವುಗಳ ಮೇಲಿನ ಕಾಳಜಿ ಇನ್ನೂ ಹೆಚ್ಚಾಯಿತು... ಮೊಟ್ಟೆ ಇಟ್ಟಾಗಿನಿಂದ ಹಿಡಿದು ಪ್ರತಿದಿನ ಅವುಗಳ ವಿವಿಧ ಭಂಗಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದೇನೆ....ನಿಜಕ್ಕೂ ಇದೊಂದು ಅದ್ಭುತ ಅನುಭವ...ಹುಟ್ಟಿದ ದಿನವೇ ತೆಗೆದ ಈ ಫೋಟೋ ನನಗೆ ಮತ್ತೆ ಮತ್ತೆ ಗೆಳೆಯ ಪ್ರಮೋದನ ಕವನದ ಸಾಲುಗಳನ್ನು ನೆನಪಿಗೆ ತರುತ್ತಿವೆ...


ಮಗಿವಿನ
ಭಾಷೆ
ತಾಯಿಗೆ ಮಾತ್ರ
ಅರ್ಥವಾಗುತ್ತೆ
ಯಾಕಂದರೆ
ತಾಯಿ-ಮಗುವಿನ
ಭಾಷೆ
ಪ್ರೀತಿಯಾಗಿರುತ್ತದೆ....


Saturday, August 15, 2009

ನಗೆ ಹಂಚಿ ನೋವು ನುಂಗಿದ ಹಿರಿಯಣ್ಣ....


ಅವು ೧೯೮೯ ರ ವಿಜಯದಶಮಿಯ ದಿನ . ಜಿ ಎಚ್ ಪರಿಚಯವಾಗಿ ಕೇವಲ ಒಂದು ವರ್ಷವಾಗಿತ್ತಷ್ಟೆ. ನನ್ನನ್ನು ಹುಬ್ಬಳ್ಳಿಯ ಕೆ .ಎಂ .ಸಿ ಆಸ್ಪತ್ರೆಗೆ ಸಂಜೆ ೫ ಗಂಟೆಗೆ ಬರಲು ಹೇಳಿದ್ದರು. ಕಾರಣ ಕೇಳಿದ್ದಕ್ಕೆ "ಸ್ವಲ್ಪ ಕೆಲಸ ಅದ..... ಬರ್ರಿ" ಎಂದಷ್ಟೇ ಹೇಳಿದ್ದರು. ಸರಿಯಾಗಿ ೫ ಗಂಟೆಗೆ ಅಲ್ಲಿಗೆ ಹೋದಾಗ ಜಿ .ಎಚ್ ತಮ್ಮ ಎಂದಿನ ಶೈಲಿಯಲ್ಲಿ ಬೀಡಿ ಸೇದುತ್ತ ನನಗಾಗಿ ಕಾಯುತ್ತ ನಿಂತಿದ್ದರು . ಇಬ್ಬರು ಸೇರಿ ಅದು...ಇದು ಅಂತ ಮಾತನಾಡುತ್ತಾ ಕೆ .ಎಂ .ಸಿ ಸಭಾಂಗಣದ ಕಡೆಗೆ ಹೆಜ್ಜೆ ಹಾಕಿದೆವು. ನಮಗಾಗಿ ಸುಮಾರು ೨೦ ಜನರು ಕಾಯುತ್ತಿದ್ದರು. ಅವರಿಗೆಲ್ಲ ಜಿ .ಎಚ್ ನನ್ನನ್ನು ಪರಿಚಯ ಮಾಡಿಸಿದ ರೀತಿ ಸ್ವಲ್ಪ ಮುಜುಗರವನ್ನುಂಟು ಮಾಡಿಟ್ಟು. ನಂತರ ಗೊತ್ತಾದ ವಿಷಯವೆಂದರೆ ಕೆ .ಎಂ .ಸಿ ತಂಡಕ್ಕೆ ಜಿ .ಎಚ್ "ಬೇಲಿ ಮತ್ತು ಹೊಲ" ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಮತ್ತು ಅದರ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಲು ಅಲ್ಲಿಗೆ ಕರೆಸಿದ್ದರು ಎಂದು. ನಾಟಕ ವಾಚನ ಮುಗಿದು , ಕಲಾವಿದರೊಂದಿಗೆ ಹರಟೆ ಹೊಡೆದು ಅಲ್ಲಿಂದ ಹೊರಟಾಗ ಸಂಜೆ ೮ ಗಂಟೆಯ ಸಮಯ. ಜಿ .ಎಚ್ ನನ್ನನ್ನು ನೇರವಾಗಿ ತಮ್ಮ ಕಾಯಂ ಜಾಗಕ್ಕೆ ಕರೆದುಕೊಂಡು ಹೋಗಿ , ಶೇಂಗಾ ಹಾಗೂ ರಂ ತರಲು ಆದೇಶಿಸಿದರು. ಮತ್ತೆ ನಮ್ಮ ಮಾತು ನಾಟಕ ತಯಾರಿಯ ಕಡೆಗೆ ವಾಲಿತು. ನಾವು ಹಿಂದೆ ಜಿ .ಎಚ್ ನಿರ್ದೇಶನದಲ್ಲಿ ಪ್ರದರ್ಶಿಸಿದ "ಒಂದು ಬೀದಿಯ ಕಥೆ" ಅದರ ಹಿಂದಿನ ಅನುಭವಗಳು...ಹೀಗೆ ಒಂದರ ಹಿಂದೆ ಒಂದರಂತೆ ಹಳೆಯ ನೆನಪಿನ ಬುತ್ತಿಯನ್ನು ಜಿ .ಎಚ್ ಬಿಚ್ಚುತ್ತಾ ಹೋದಂತೆ, ನಾನು ಒಬ್ಬ ವಿಧೇಯ ವಿದ್ಯಾರ್ಥಿಯಮ್ತೆ ಅದನ್ನು ಕೇಳುತ್ತಾ, ಅವರು ಸಿಡಿಸುತ್ತಿದ್ದ ಜೋಕುಗಳಿಗೆ ಹೊಟ್ಟೆತುಂಬ ನಗುತ್ತ ಕುಳಿತಿದ್ದಾಗ ಜಿ .ಎಚ್ ಇದ್ದಕ್ಕಿದ್ದಂತೆ ಭಾವುಕರಾದರು. ನನಗೆ ಏನು ಮಾತನಾಡಬೇಕೆಂದು ತೋಚುವ ಮೊದಲೇ, ಜಿ .ಎಚ್ ಎದ್ದು ಬಂಡು ನನ್ನ ಪಕ್ಕ ಕುಳಿತು ನನ್ನ ಕೈ ಹಿಡಿದುಕೊಂಡಿದ್ದರು ಮತ್ತು ನಿಜಕ್ಕೂ ಅಳುತ್ತಿದ್ದರು. ಅವರಾಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿವೆ "ಧನಂಜಯ ...ನನ್ನ ತಮ್ಮ ವಸಂತ ಸತ್ತು ಇವತ್ತಿಗೆ ಒಂದು ವರ್ಷ ಆತು ....ನಿಮ್ಮನ್ನ ನೋಡಿದ್ರ ವಸಂತನ್ನ ನೋಡಿಧಂಗ ಆಗ್ತದ...."


ಅಂದಿನಿಂದ ಜಿ .ಎಚ್ ನನ್ನನ್ನು ತಮ್ಮ ಸ್ವಂತ ತಮ್ಮನಂತೆಯೇ ನೋಡಿಕೊಂಡರು. ಮನೆಗೆ ಹೋದಾಗಲೂ ಸಹ ವೈನಿ ನನ್ನನ್ನು ತಮ್ಮ ಸ್ವಂತ ಮೈದುನನಂತೆ ಬರಮಾದಿಕೊಳ್ಳುತ್ತಿದ್ದರು.


ಒಂದು ಅರ್ಥದಲ್ಲಿ ಜಿ .ಎಚ್ ಅವರಿಂದ ನನ್ನ ರಂಗಭೂಮಿಯ ಅರಗೇಟ್ರಮ ಆರಂಭವಾಯಿತು ಎಂದು ಹೇಳಿದರೆ ತಪ್ಪಾಗಲಾರದು . ೧೯೮೨ ರಿಂದ ಶಾಲೆಗಳಲ್ಲಿ ಸಣ್ಣ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ , ಬೇರೆಯವರ ನಾಟಕಗಳನ್ನು ನೋಡುತ್ತಾ ನನ್ನ ಆಸಕ್ತಿಯನ್ನು ತನಿಸಿಕೊಳ್ಳುತ್ತಿದ್ದ ನನಗೆ ಜಿ .ಎಚ್ ಅವರ ನಾಟಕದಲ್ಲಿ ಅಭಿನಯಿಸಲು ಅನುವು ಮಾಡಿಕೊಟ್ಟಿದ್ದು ಸಮುದಾಯ. ೧೯೮೯ರ ಮೊದಲ ದಿನ ಉತ್ತರ ಪ್ರದೇಶದ ಸಾಯಿಬಾಬಾದ್ ನಗರದಲ್ಲಿ "ಹಲ್ಲಾ ಬೋಲ್" ಎಂಬ ಕಾರ್ಮಿಕರ ಸಮಸ್ಯೆಯನ್ನು ಕುರಿತಾದ ಬೀದಿ ನಾಟಕವನ್ನು ಅಭಿನಯಿಸುತ್ತಿದ್ದಾಗ ಅತ್ಯಂತ ಕ್ರೂರವಾಗಿ ಹಲ್ಲೆಯಾದ ರಂಗಕರ್ಮಿ ಸಫ್ದರ್ ಹಶ್ಮಿ ಸ್ಮರಣಾರ್ಥ ಬೆಂಗಳುರಿನಲ್ಲಿ ೧೯೮೯, ಎಪ್ರಿಲ್ ೧೨ ರಿಂದ ೧೯ ರವರೆಗೆ ಒಂದು ವಾರದ ಬೀದಿನಾಟಕ, ವಿಚಾರಸಂಕಿರಣ , ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಮುದಾಯ ರಾಜ್ಯ ಸಂಗತನೆ ಹಮ್ಮಿ ಕೊಂಡಿತ್ತು . ಇದಕ್ಕಾಗಿ ಜಿ .ಎಚ್ ಧಾರವಾಡ ಸಮುದಾಯಕ್ಕಾಗಿ ಒಂದು ಬೀದಿ ನಾಟಕವನ್ನು ಬರೆದು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಸಮುದಾಯದೊಂದಿಗೆ ಮೊದಲಿನಿಂದ ನನಗೆ ಒಡನಾಟವಿದ್ದ ಕಾರಣ, ಈ ನಾಟಕದಲ್ಲಿ ಅಭಿನಯಿಸಲು ನನಗೆ ಅವಕಾಶ ಸಿಕ್ಕಿತು. ಇದಕ್ಕೂ ಮೊದಲು ಜಿ .ಎಚ್ ಅವರು ಬರೆದ ಅನೇಕ ರೇಡಿಯೋ ನಾಟಕ , ಪ್ರಹಸನಗಳಲ್ಲಿ ನಾನು ಅಭಿನಯಿಸಿದ್ದೆ . ಆದರೆ ಜಿ .ಎಚ್ ಅವರೊಂದಿಗೆ ಕುಡಿ ಕೆಲಸ ಮಾಡುವ ಅವಕಾಶ ದೊರೆತದ್ದು ಇದೆ ಮೊದಲು.


"ಹಲ್ಲಾ ಬೋಲ್" ಎಂಬ ನಾಟಕವನ್ನು ಅಭಿನಯಿಸುತ್ತಿರುವಾಗ ಹಲ್ಲೆ ಗೊಳಗಾಗಿ ಮರಣ ಹೊಂದಿದ ನಂತರ ಸಫ್ದರ್ ಹಶ್ಮಿ ಅವರ ಬಗ್ಗೆ ಹಾಗೂ ಹಲ್ಲಾ ಬೋಲ್ ನಾಟಕದ ಬಗ್ಗೆ ಅನೇಕ ಪತ್ರಿಕೆಗಳು ಪುಟಗಟ್ಟಲೆ ವರದಿಗಳನ್ನು ಬರೆದವು....ಅನೇಕ ಪತ್ರಿಕೆಗಳು ಸಂಪಾದಕೀಯವನ್ನು ಬರೆದವು. ಇದನ್ನು ಆಧರಿಸಿ ಜಿ .ಎಚ್ ಧಾರವಾಡ ಸಮುದಾಯ ತಂಡಕ್ಕೆ "ಒಂದು ಬೀದಿಯ ಕಥೆ" ಎಂಬ ಬೀದಿ ನಾಟಕವನ್ನು ಬರೆದರು. ಅತ್ಯಂತ ಸೂಕ್ಷ್ಮ ಹಾಗೂ ವಿಡಂಬನಾತ್ಮಕ ವಿಷಯಗಳನ್ನು ನವಿರಾದ ಹಾಸ್ಯ ಬಳಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆ ಜಿ .ಎಚ್ ಅವರಿಗೆ ಸಿದ್ಧಿಸಿತ್ತು. ಎಪ್ರಿಲ್ ೧೩, ೧೯೮೯ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ರಂಗಮಂದಿರದಲ್ಲಿ ನಾವು "ಒಂದು ಬೀದಿಯ ಕಥೆ"ಯನ್ನು ಅಭಿನಯಿಸುತ್ತಿದ್ದಾಗ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಇದಕ್ಕೆ ಒಂದು ಜೀವಂತ ನಿದರ್ಶನ. ಸಫ್ದರ್ ಹಶ್ಮಿ ಅವರ ಮೂಲ ಹಲ್ಲಾ ಬೋಲ್ ನಾಟಕವನ್ನು ನೋಡಿದ ಅನೇಕ ಜನರಿಂದ ಬಂದ ಒಂದೆ ಪ್ರತಿಕ್ರೀಯೆ ಎಂದರೆ "ಜಿ .ಎಚ್ ಅವರ ಈ ನಾಟಕ ಹಿಂದಿಯ ಹಲ್ಲಾ ಬೋಲ್ ನಾಟಕವನ್ನು ನೆನಪಿಗೆ ತರುತ್ತದೆ" ಇದು ಜಿ .ಎಚ್ ಅವರ ಕ್ರಿಯಾಶೀಲತೆಗೆ ಸಾಕ್ಷಿ.


ಜಿ .ಎಚ್ ಅವರು ಬರೆದದ್ದು ಕೆಲವೇ ಕೆಲವು ನಾತಕಗಲಾದರು ಅವು ಗಳಿಸಿದ ಜನಮನ್ನಣೆ ಅಪಾರ. "ಬೇಲಿ ಮತ್ತು ಹೊಲ", "ಬಂಗಾರದ ಕೊಡ", "ಬಾಗಿಲಾ ತೆಗೀರಪ್ಪೋ ಬಾಗಲಾ", "ಸುದ್ದಿ ಸುದ್ದಿ ಸುದ್ದಿ", "ಭಾರತ ಸುಂದರಿ" ಹೀಗೆ ಕೆಲವೇ ನಾಟಕಗಳನ್ನು ಅವರು ಬರೆದರು ನಾಡಿನ ಬಹುತೇಕ ನಿರ್ದೇಶಕರು ಅವುಗಳನ್ನು ನಿರ್ದೇಶಿಸಿದರು . ಮುಖ್ಯವಾಗಿ ಜಿ .ಎಚ್ ಅವರ ನಾಟಕಗಳಲ್ಲಿ ನಾನು ಗುರುತಿಸಿದ ಪ್ರಮುಖ ಅಂಶವೆಂದರೆ ನಮ್ಮ ನಡುವೆ ನಡೆಯುವ ಘಟನೆಗಳಿಗೆ ಹಾಸ್ಯದ ಲೇಪನವನ್ನು ನೀಡಿ ಅವುಗಳನ್ನು ಜನರ ಮುಂದೆ ಬಿಚ್ಚಿಡುತಿದ್ದ ರೀತಿ . ಹೆಚ್ಚಿನ ತಂತ್ರಗಾರಿಕೆಯನ್ನು ಬಳಸದೆ ಅತ್ಯಂತ ಕಡಿಮೆ ಕರ್ಚಿನಲ್ಲಿ ಉತ್ತಮ ನಾಟಕವನ್ನು ಹೇಗೆ ಮಾಡಬಹುದು ಎಂದು ಅವರು ತೋರಿಸಿಕೊಟ್ಟರು. ಇದೆ ಕಾರಣಕ್ಕಾಗಿ ಅವರ ನಾಟಕಗಳು ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚು ಪ್ರೀತಿಗೆ ಪಾತ್ರವಾಗಿದ್ದವು . ೮೦ ಹಾಗೂ ೯೦ರ ದಶಕದ ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಪ್ರತೀ ವರ್ಷ ಜಿ .ಎಚ್ ಅವರ ನಾಟಕ ಹಾಗೂ ಪ್ರಹಸನಗಳು ಸತತವಾಗಿ ಪ್ರಶಸ್ತಿಯನ್ನು ಗಳಿಸಿದವು. ಅದರಲ್ಲಿ ಭಾರತ ಸುಂದರಿ ನಾಟಕವಂತು ೧೯೯೧, ೯೨ ಹಾಗೂ ೯೩ ಹೀಗೆ ಮೂರು ವರ್ಷ ಸತತವಾಗಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಹ್ಯಾಟ್ರಿಕ್ ಗಳಿಸಿದ್ದು ಈಗ ಇತಿಹಾಸ.


ಒಂದು ಬೀದಿಯ ಕಥೆ ನಾಟಕ ಅನೇಕ ಕಡೆ ಪ್ರದರ್ಶನ ಕಂಡು ಅನೇಕ ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿತು . ಈ ಮಧ್ಯೆ ಜಿ .ಎಚ್ ಕೆಲಸ ಮಾಡುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ತೊಂದರೆಗಳಿಂದ ಅನೇಕ ಕೆಲಸಗಾರರನ್ನು ಕೆಲಸದಿಂದ ಹೊರಹಾಕಲಾಯಿತು. ಅದರಲ್ಲಿ ಜಿ .ಎಚ್ ಕೂಡ ಒಬ್ಬರು. ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದರು ಜಿ .ಎಚ್ ಆಗ. ಮನೆಯಲ್ಲಿ ಚಿಕ್ಕ ಮಕ್ಕಳು, ಓದುತ್ತಿದ್ದ ತಮ್ಮ ಹೀಗೆ ಹತ್ತು ಹಲವು ಸಮಸ್ಯೆಗಲಿದ್ದರು , ಜಿ .ಎಚ್ ಅವರಲ್ಲಿ ಹಾಸ್ಯಕ್ಕೆ ಬಡತನವಿರಲಿಲ್ಲ. ಮನೆಯಲ್ಲಿ ತಮ್ಮ ತಂದೆಯವರನ್ನು ಇದೆ ಸಮಯದಲ್ಲಿ ಕಳೆದುಕೊಂಡರು , ಅನೇಕ ಸಾವು ನೋವುಗಳು ಮನೆಯಲ್ಲಿ ಬಂದರು ನಗುವೇ ನನ್ನ ಬದುಕು ಎನ್ನುವಂತೆ ಬದುಕಿದರು.


ನಂತರ ೧೯೯೩ ರಲ್ಲಿ ನಾನು ಬಿ .ಎಸ್ಸಿ ಮುಗಿಸಿ ರಾಷ್ಟೀಯ ನಾಟಕ ಶಾಲೆಯನ್ನು ಸೇರಬೇಕು , ರಂಗಭೂಮಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಆಸೆಯಿಂದ ಜಿ .ಎಚ್ ಹತ್ತಿರ ಹೋದೆ. ಅವರಲ್ಲಿ ನಾನು ಏನ್ .ಎಸ್ .ಡಿ ಸೇರುವ ಆಸೆಯನ್ನು ವ್ಯಕ್ತಪಡಿಸಿದಾಗ "ಧನಂಜಯ ಸುಮ್ಮನ ನಾಟಕಾ ...ಪಾತಕಾ ಅಂತ ತಲೀಗೆ ಹಚ್ಚಿಕೊಂಡು ನಿಮ್ಮ ಭವಿಷ್ಯ ಹಾಲು ಮಾಡ್ಕ ಬ್ಯಾಡ್ರಿ ....ಏನಾರ ಮುಂದ ಓದ್ರಿ ...ಇಲ್ಲಾ ಅಂದ್ರ ಏನಾರ ಕೆಲಸಾ ಮಾಡ್ರಿ" ಎಂದು ಬಿಟ್ಟರು ....ಮೊದಲ ನಿರಾಶೆ ನನಗೆ ಕಾದಿತ್ತು. ಮುಂದೆ ಕೆಲವು ತಾಂತ್ರಿಕ ಕಾರಣಗಳಿಂದ ನಾನು ರಾಷ್ಟೀಯ ನಾಟಕ ಶಾಲೆಯನ್ನು ಸೇರಲು ಸಾಧ್ಯವಾಗಲಿಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಾಗ ಅದಕ್ಕೂ ಸಹ ಜಿ .ಎಚ್ "ಧನಂಜಯ ಪತ್ರಿಕೋದ್ಯಮ ಹೊಟ್ಟಿ ತುಂಬ್ಸುದುಲ್ಲ ...ಬ್ಯಾರೆ ಏನಾರ ಮಾಡಬೇಕಿತ್ತು ನೀವು" ಎಂದರು. ಅಂದಿನ ದಿನಗಳೇ ಹಾಗಿದ್ದವು . ಜಿ .ಎಚ್ ನಮಗೆ ಹೇಳುತ್ತಿದ್ದರು. ನಾವು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರೆ ನಮ್ಮೆದುರಿಗಿರುವವರು ಅದು ಸರಿ ...ಆದ್ರ ಹೊತ್ತಿಗೆ ಏನು ಮಾಡ್ತೀರಿ ಎಂದು ಕೇಳುತ್ತಿದ್ದರು . ಹೀಗಾಗಿ ಕೆಲವೊಂದು ಬಾರಿ ಜಿ .ಎಚ್ ಅವರಿಗೆ ಪತ್ರಿಕೋದ್ಯಮದ ಬಗ್ಗೆಯೂ ಕೂಡ ಆಸಕ್ತಿ ಕಳೆದು ಕೊಂಡಿದ್ದರು. ಆದರೆ ಬರವಣಿಗೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.


ಮುಂದೆ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಸಿಕ್ಕಿತು . ನಾಟಕದ ವಿಷಯದಲ್ಲಿ ಜಿ .ಎಚ್ ಅವರೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ನಂತರ ಈಗ ಪತ್ರಿಕೋದ್ಯಮದಲ್ಲಿ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ಆಗ ನಾನು ಧಾರವಾಡದಲ್ಲಿ ಒಂದು ಸಣ್ಣ ರೂಂ ಮಾಡಿಕೊಂಡಿದ್ದೆ. ನನ್ನ ತಂದೆಯವರಿಗೆ ರಾಣೆಬೆನ್ನೂರಿಗೆ ವರ್ಗವಾಗಿದ್ದರಿಂದ ನನ್ನ ತಂದೆ - ತಾಯಿ ರಾಣೆಬೆನ್ನೂರಿನಲ್ಲಿ ಇರುತ್ತಿದ್ದರು. ೧೯೯೪ ಡಿಸೆಂಬರ್ ೩೧ ರಂದು ನಾನು ಸಂಯುಕ್ತ ಕರ್ನಾಟಕದಲ್ಲಿ ನನ್ನ ಕಾಯಕವನ್ನು ಆರಂಭಿಸಿದೆ. ಬೆಳಿಗ್ಗೆ ೧೧ ಗಂಟೆಗೆ ಸಂಯುಕ್ತ ಕರ್ಣಾಟಕದ ಕಚೇರಿಗೆ ಹೋದಾಗ ಅಂದಿನ ಸಂಪಾದಕರಾದ ಏನ್ .ವಿ .ಜೋಶಿ ಅವರು ನನ್ನನ್ನು ಉಳಿದ ಸಹೋದ್ಯೋಗಿಗಳಿಗೆ ಪರಿಚಯ ಮಾಡಿಸುತ್ತಿದ್ದರು. ಜಿ .ಎಚ್ ಅವರನ್ನು ಪರಿಚಯ ಮಾಡಿಸುವಾಗ, ಏನ್ .ವಿ .ಜೋಷಿ ಅವರನ್ನು ತಡೆದು ಜಿ .ಎಚ್ ತಿರುಗಿ ನನ್ನನ್ನೇ ಅವರಿಗೆ ಪರಿಚಯ ಮಾಡಿಸಿದ ರೀತಿಯಿಂದ ಕಛೇರಿಯ ಎಲ್ಲಾ ಸಿಬ್ಬಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಇಂದಿಗೂ ನನಗೆ ನೆನಪಿದೆ. ಮಧ್ಯಾಹ್ನ ಉಟಕ್ಕೆ ಕರೆದುಕೊಂಡು ಹೋದಾಗ ತಾವು ಮನೆಯಿಂದ ತಂದ ಊಟದಲ್ಲಿ ನನಗು ಪಾಲು ಕೊಟ್ಟು ತಿನ್ನುತ್ತಿದ್ದುದು, ಕೆಲಸದ ಮಧ್ಯೆ ಚಹಾ ಕುಡಿಯಲು ನನ್ನನ್ನು ಮರೆಯದೆ ಕರೆದುಕೊಂಡು ಹೋಗುತ್ತಿದ್ದುದು ಗತಿಸಿ ಹೋದ ಸುಂದರ ನೆನಪುಗಳು.


ಹೀಗೆ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದೆ. ನನಗೆ ಕೆಲಸವೂ ಅತ್ಯಂತ ಅಗತ್ಯವಾಗಿತ್ತು ಅಂತೆಯೇ ವಿದ್ಯಾಭ್ಯಾಸವು ಕೂಡ. ಸಂಯುಕ್ತ ಕರ್ನಾಟಕದಲ್ಲಿ ನಾನು ಮೊದಲನೇ ಅಥವಾ ಎರಡನೇ ಪಾಳಿಯಲ್ಲಿ ಕೆಲಸ ಮಾಡಿದರೆ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಈ ಸಮಸ್ಯೆಯನ್ನು ಜಿ .ಎಚ್ ಹಾಗೂ ಗುರುರಾಜ ಜೋಶಿ ಅವರಲ್ಲಿ ತೋಡಿಕೊಂಡಾಗ ಅವರು ನನಗೆ ರಾತ್ರಿ ಪಾಳಿ ಕೆಲಸ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆ ಎಂದು, ತಾವೇ ಸ್ವತಃ ಸಂಪಾದಕರ ಹತ್ತಿರ ಈ ಕುರಿತು ಮಾತನಾಡುವುದಾಗಿ ಹೇಳಿದರು. ಅದರಂತೆ ನನಗೆ ರಾತ್ರಿ ಪಾಳಿ ಕೆಲಸ ಮಾಡುವ ಅವಕಾಶ ದೊರೆಯಿತು, ಅಂತೆಯೇ ಬೆಳಿಗ್ಗೆ ತರಗತಿಗಳನ್ನು ಹಾಜರಾಗಲು ಸಾಧ್ಯವಾಯಿತು. ನಾನು ಮೊತ್ತ ಮೊದಲದಿನ ರಾತ್ರಿ ಪಾಳಿ ಮುಗಿಸಿಕೊಂಡು ಎರಡನೇ ದಿನದ ಕೆಲಸಕ್ಕೆ ಬಂದಾಗ ಜಿ .ಎಚ್ ತಮ್ಮ ಎರಡನೇ ಪಾಳಿ ಮುಗಿಸಿಕೊಂಡು ಹೊರಡಲು ತಯಾರಾಗುತ್ತಿದ್ದರು. ನನ್ನನ್ನು ನೋಡಿದವರೇ "ಧನಂಜಯ ಹೆಂಗಿತ್ತ್ ನಿನ್ನೆ ಫಸ್ಟ ನೈಟ್?" ಎಂದಾಗ ಇಡೀ ಕಚೇರಿಯೇ ನಗುವಿನ ಕಡಲಲ್ಲಿ ತೇಲಿತ್ತು. ಇದು ಜಿ .ಎಚ್ ಅವರ ಹಾಸ್ಯ ಮನೋಭಾವಕ್ಕೆ ಒಂದು ಸಾಕ್ಷಿ.


ಮುಂದೆ ನಾನು ಸಂಯುಕ್ತ ಕರ್ನಾಟಕ ಬಿಟ್ಟು , ಪ್ರಜಾವಾಣಿ ಸೇರಿಕೊಂಡೆ . ಅಲ್ಲಿ ಕೆಲ ಕಾಲ ಕೆಲಸ ಮಾಡಿ ಪತ್ರಿಕೋದ್ಯಮ ತೊರೆದು ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಧುಮುಕಿದೆ. ಜಿ .ಎಚ್ . ತುಂಬಾ ಕುಷಿ ಪಟ್ಟರು . ಬರ ಬರುತ್ತಾ ಅವರ ಆರೋಗ್ಯವು ಕ್ಷೀಣಿಸುತ್ತಿತ್ತು . ಅವರ ಆರೋಗ್ಯ ಮೊದಲಿನಂತೆ ಉಳಿದಿಲ್ಲ ಎಂದು ಅವರ ತಮ್ಮ ನರಸಿಂಹ ಆಗಾಗ ಹೇಳುತ್ತಲೇ ಇದ್ದ. ನಾನು ಧಾರವಾಡಕ್ಕೆ ಹೋದಾಗೊಮ್ಮೆ ಅವರನ್ನು ಭೇಟಿಯಾಗಿ ಬರುತ್ತಿದ್ದೆ. ಅವರ ಆರೋಗ್ಯ ಕ್ಷೀನಿಸುತ್ತಿದ್ದುದು ನನ್ನ ಗಮನಕ್ಕೆ ಬಂದಿದ್ದರು ಅವರಲ್ಲಿ ಹಾಸ್ಯ ಪ್ರಜ್ಞೆ ಹಾಗೆಯೇ ಉಳಿದಿತ್ತು. ಬದುಕನ್ನು ಅಷ್ಟೇ ಗಾಢವಾಗಿ ಅವರು ಪ್ರೀತಿಸುತ್ತಿದ್ದರು. ಅದೊಂದು ದಿನ ನಾನು ಮತ್ತು ಯಶವಂತ ನನ್ನ ಬೆಂಗಳೂರಿನ ಮನೆಯಲ್ಲಿ ಕುಳಿತು ಉಭಯ ಕುಶಲೋಪರಿ ಮಾತನಾಡುತ್ತಿದ್ದಾಗ ಒಂದು ಆಘಾತಕಾರಿ ವಿಷಯವನ್ನು ಹೇಳಿದ "ಧನ್ಯಾ ಜಿ .ಎಚ್ ಕ್ಯಾನ್ಸರಿನ ಲಾಸ್ಟ್ ಸ್ಟೇಜಿನ್ಯಾಗಿದ್ದಾರ ....ಆಪರೆಶನ್ನಿಗಂತ ಬೆಂಗಳೂರಿಗೆ ಬರ್ಲಿಕತ್ಯಾರ..." ಈ ವಿಷಯವನ್ನು ಕೇಳಲು ನಾನು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ . ತೀರ ಖಿನ್ನನಾದೆ....


ಮುಂದೆ ಜಿ .ಎಚ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದರು . ನರಸಿಂಹನನ್ನು ಎರಡು ದಿನಗಳಿಗೊಮ್ಮೆ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದೆ . ಸ್ವಲ್ಪ ಮಟ್ಟಿನ ಗುಣಮುಕರಾದಮೇಲೆ ಜಿ .ಎಚ್ ತಿರುಗಿ ಹುಬ್ಬಳ್ಳಿಗೆ ಬಂದರು . ಅವರು ತೀರಿಕೊಳ್ಳುವುದಕ್ಕೆ ಎರಡು ತಿಂಗಳ ಮುಂಚೆ ನಾನು ನನ್ನ ಕಾರನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗಿದ್ದೆ . ಜಿ .ಎಚ್ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ ನನ್ನನ್ನು ಕಂಡು ಅವರಿಗಾದ ಆನಂದ ಅಷ್ಟಿಷ್ಟಲ್ಲ. ಅವರ ದೇಹ ಸ್ವಲ್ಪ ಕ್ಷೀಣಿಸಿತ್ತು ... ಅದರ ಹೊರತಾಗಿ ಅವರಲ್ಲಿ ಮೊದಲಿದ್ದ ಹಾಸ್ಯದ ಹೊನಲಿಗೆ ಯಾವುದೇ ಬರ ಬಂದಿರಲಿಲ್ಲ . ಸುಮಾರು ಮೂರು ಗಂಟೆಗಳ ಕಾಲ ನಮ್ಮನ್ನು ಬಿಟ್ಟು ಬಿಡದೆ ನಗಿಸಿದರು . ನನ್ನ ಕಾರನ್ನು ಪದೇ ಪದೇ ಮುಟ್ಟಿನೋಡಿ ಬಹಳ ಆನಂದ ಪಟ್ಟರು . ಆದರೆ ಇದು ನನ್ನ ಹಾಗೂ ಜಿ .ಎಚ್ ಅವರ ಕೊನೆಯ ಭೇಟಿಯಾಗಲಿದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.


ಅವರು ತೀರಿಕೊಂಡ ದಿನ ನಾನು ಮಿರಜನಲ್ಲಿ ನನ್ನ ಸೋದರನ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದೆ . ನರಸಿಂಹ ನನ್ನನ್ನು ಸಂಪರ್ಕಿಸಲು ಬಹಳ ಪ್ರಯತ್ನಿಸಿದ ...ಆದರೆ ಸಾಧ್ಯವಾಗಲಿಲ್ಲಿ ...ಜಿ .ಎಚ್ ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿ ...ತಾವು ಮಾತ್ರ ತಿರುಗಿ ಬರದ ದಾರಿಯಲ್ಲಿ ಸಾಗಿದ್ದರು ....


ಇಂದಿಗೂ ಕೂಡ ವಿದ್ಯಾರ್ಥಿ ಸಮುದಾಯದಲ್ಲಿ ಜಿ .ಎಚ್ ಅವರ ನಾಟಕಗಳಿಗೆ ವಿಶೇಷವಾದ ಸ್ಥಾನವಿದೆ . ಹುಬ್ಬಳ್ಳಿ -ಧಾರವಾಡದಲ್ಲಿ ೯೦ರ ದಶಕದಲ್ಲಿದ್ದ ರಂಗ ಚಟುವಟಿಕೆಯ ಹುರುಪು ಈಗ ಉಳಿದಿಲ್ಲ . ಈ ಕುರಿತು ನಾನು ನನ್ನ ಅನೇಕ ರಂಗ ಸಂಗಾತಿಗಲೋಮ್ದಿಗೆ ಚರ್ಚಿಸಿದ್ದೇನೆ ಕೂಡ . ನಾನು , ನರಸಿಂಹ , ಜಗುಚಂದ್ರ , ರವಿ , ಯಶವಂತ ಮುಂತಾದವರೆಲ್ಲ ಸೇರಿ ಜಿ .ಎಚ್ ಹೆಸರಿನಲ್ಲಿ ಪ್ರತಿ ವರ್ಷ ವಿಶಿಷ್ಟವಾದ ರೀತಿಯಲ್ಲಿ ನಾಟಕೋತ್ಸವವನ್ನು ನಡೆಸಬೇಕೆಂಬ ಮಹದಾಸೆ ...ತನ್ಮೂಲಕ ಧಾರವಾಡದಲ್ಲಿ ಮತ್ತೆ ಹಳೆಯ ರಂಗ ವೈಭವ ಮರುಕಳಿಸಲು ಸಾಧ್ಯವಾದೀತೆಂಬ ಒಂದು ಸಣ್ಣ ಕನಸಷ್ಟೇ.....

Wednesday, August 12, 2009

ನೀವು ಭಾಳ ಚಂದ ಹಾಡ್ತೀರಂತ??


ನಾನು ನಿನಗೆ ಹಾಗೇಕೆ ಕರೆಯುತ್ತಿದ್ದೆ?? ಗೊತ್ತಿಲ್ಲ...ಅದು ಪ್ರೀತಿನಾ....ಪ್ರೇಮಾನಾ...ಸ್ನೇಹಾನಾ...ಇದನ್ನ ನಾನು ನಿನ್ನ ಹತ್ತಿಯ ಸಾವಿರ ಬಾರಿ ಕೇಳಿದ್ದೇನೆ...ನೀನು ಮತ್ತೆ ಮತ್ತೆ ಅದೇ ಉತ್ತರ ಕೊಟ್ಟಿದ್ದೀಯ..ನಿನ್ನ ಮೌನ ನನ್ನನ್ನು ಬಹಳ ಕಾಡಿಸಿದೆ...ಆ ಮೌನವನ್ನೇ ನಾನು ಸಮ್ಮತಿ ಲಕ್ಷಣಂ ಅಂತ ತಿಳಿಯುವ ಹೊತ್ತಿಗೆ ನಿನ್ನ ಬಾಯಿಂದ ಮತ್ತೆ ಥಟ್ಟನೆ ಮಾತೊಂದು ಉದುರುತ್ತಿತ್ತು...ಹೀಗಾಗಿ ಆ ಸಮ್ಮತಿಯು ಸಹ ಅಸಮ್ಮತಿಯ ದಾರಿ ಹಿಡಿಯುತ್ತಿತ್ತು... ಮತ್ತೆ ನನ್ನ ಮನಸ್ಸಿನ ಹುಚ್ಚು ಕುದುರೆ ಲಂಗು ಲಗಾಮಿಲ್ಲದೆ ನಿನ್ನ ಹಿಂದೆ ಬೀಳುತ್ತಿತ್ತು...ಮತ್ತೆ ನಿನಗೆ ಮೌನವೇ ಆಸರೆ ಆಗ...


ಅದೇಕೆ ಹೀಗಾಗುತ್ತಿತ್ತೋ ಗೊತ್ತಿಲ್ಲ...ನನ್ನು ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಆಡಲು ಇಳಿದಾಗ ನೀನು ನಿನ್ನ ಗೆಳತಿಯರೊಂದಿಗೆ ಬಂದು ನನ್ನ ಕಡೆ ಕೈ ಬೀಸುತ್ತಿದ್ದೆ...ನನಗೂ ಖುಷಿಯಾಗಿ ನಿನ್ನತ್ತ ನೋಡುತ್ತಾ...ಜೋರಾಗಿ ಬ್ಯಾಟ್ ಬೀಸುವ ಬದಲು ಔಟಾಗಿ ಬಂದು ನಿನ್ನ ಪಕ್ಕ ಕುಳಿತುಬಿಡುತ್ತಿದ್ದೆ... ನೀನು ಮಾತನಾಡಲೆಂದು ಹಲಬುತ್ತಿದ್ದೆ...ನಾನು ಮೈದಾನದಲ್ಲಿದ್ದಾಗ ನಿನ್ನಲ್ಲಿದ್ದ ಸಂಭ್ರಮ ಎಲ್ಲಿ ಹೋಯಿತು ಎಂದು ನಿನ್ನನ್ನು ಪ್ರಶ್ನಾರ್ಥಕವಾಗಿ ನೋಡುವ ಹೊತ್ತಿಗೆ ನೀನು ಮತ್ತೆ ಮೌನಕ್ಕೆ ಶರಣಾಗಿ ಬಿಡುತ್ತಿದ್ದೆ....ನಾನು ಮತ್ತೆ ಹತಾಶನಾಗಿ...."ಮತ್ತದೇ ಸಂಜೆ.... ಅದೇ ಮೌನ..ಅದೇ ಏಕಾಂತ..." ಹಾಡಿನ ಮೊರೆ ಹೋಗುತ್ತಿದ್ದೆ...


ನಿನ್ನ ಆ ಬೊಗಸೆ ಕಣ್ಣುಗಳನ್ನು ನೋಡುತ್ತಿದ್ದಂತೆಯೇ...ಅಲ್ಲಿ ನನಗೆ ಭರವಸೆಗಳು ಕಾಣುತ್ತಿದ್ದವು...ಆಸೆಗಳಲ್ಲಿದ್ದವು...ಕನಸುಗಳಿದ್ದವು...ಅಷ್ಟೆ ಅಲ್ಲ...ಆ ಭರವಸೆ..ಆಸೆ..ಕನಸುಗಳಲ್ಲಿ ನನ್ನನ್ನು ನಾನು ಕಾಣ ಬಯಸಿದ್ದೆ...ಅದರಲ್ಲಿ ತಪ್ಪಿತ್ತೆ? ಗೊತ್ತಿಲ್ಲ...ನಿನ್ನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗ ನನಗೆ ಬೇರೆ ಏನು ಕಾನಿಸುತ್ತಿದ್ದಿಲ್ಲ..ನಿನ್ನ ಕಣ್ಣುಗಳ ಹೊರತಾಗಿ...ನನ್ನ ಕ್ಯಾಮರಾದ ಲೆನ್ಸ್ ತುಂಬ ನಿನ್ನ ಕಣ್ಣುಗಳನ್ನೇ ತುಂಬಿಕೊಳ್ಳುವ ಆಸೆ ನನಗಾಗ...ಅವುಗಳಲ್ಲಿ ನಗುವಿತ್ತು...ಸಿಟ್ಟು..ಕೋಪ..ತಾಪ..ಎಲ್ಲವಿತ್ತು...ಒಬ್ಬ ಅದ್ಭುತ ನಟಿಗಿರಬೇಕಾದ ಎಲ್ಲ ಲಕ್ಷಣಗಳು ಸಹ ನಿನ್ನ ಕಣ್ಣಿಗಿದ್ದವು... ಆದರೆ ಅದಾವುದು ಸಹ ನನಗೆ ಸಿಗದೇ ಹೋಯಿತು...."ಸಾಗುತ ದೂರ ದೂರ...ಮೇಲೇರುವ ಬಾರಾ ಬಾರಾ..ನಾವಗುವ ಚಂದಿರ ತಾರ..."ಎನ್ನುವಂತೆ ನಾವು ದೂರ ದೂರವೆ ಉಳಿದು ಬಿಟ್ಟೆವು...


ಇದು ಪ್ರೀತಿನಾ...ಪ್ರೇಮಾನಾ..ಸ್ನೇಹಾನಾ...ಇದೇನಿದು ಹೊಸ ಚಲನ ಚಿತ್ರಗಳಿಗೆ ಸಾಲು ಸಾಲಾಗಿ ಹೆಸರುಗಳನ್ನೂ ಸಜೆಸ್ಟ್ ಮಾಡುತ್ತಿದ್ದೀಯ ಎನ್ನಬೇಡ...ಏಕೋ ಗೊತ್ತಿಲ್ಲ...ಸುಮಾರು ಹದಿನಾರು ವರ್ಷಗಳ ನಂತರ ಮತ್ತೆ ಇಂದು ಬೆಳಿಗ್ಗೆಯಿಂದ ನೀನು ನನ್ನೊಂದಿಗಾಡಿದ ಮೊದಲ ಮಾತು ತಲೆ ಕೆಡಿಸುತ್ತಿದೆ...

"ನೀವು ಭಾಳ ಚಂದ ಹಾಡ್ತೀರಂತ...."


ಬಿಡುವು ಸಿಕ್ಕರೆ ಓದು...




Saturday, August 8, 2009

ಮಗುವಿನ ಪ್ರೀತಿ...ಆಟ...ಚಿನ್ನಾಟ...


ಗೆಳೆಯ ಪ್ರಮೋದ್ ನಿನ್ನೆ ಮತ್ತೆ ಫೋನಾಯಿಸಿ, ಕೆಲವು ಅಪರೂಪದ ಪದ್ಯಗಳನ್ನು ಓದಿದ....ಇಗೋ ಇಲ್ಲಿವೆ...


೧. ಮಗುವಿನೊಡಲಲ್ಲಿ
ಮಮತೆ ಮಾತಿನ
ಒರತೆಗಳಿವೆ
ದೊಡ್ದವರೂಡಲಲ್ಲಿ
ಕಲಹದ ಕಡಲುಗಳೇ
ತುಂಬಿವೆ...


೨. ಮಗುವಿನ
ಭಾಷೆ
ತಾಯಿಗೆ ಮಾತ್ರ
ತಿಳಿಯುತ್ತೆ
ಯಾಕೆಂದರೆ
ತಾಯಿ ಮಗುವಿನ
ಭಾಷೆ
ಪ್ರೀತಿಯಾಗಿರುತ್ತೆ..


೩. ಮಗು
ಮುತ್ತು ಕೊಟ್ಟವರೊಂದಿಗೆ
ಪ್ರೀತಿಯಿಂದ
ಚಿನ್ನಾಟವಾಡುತ್ತದೆ
ನಾವೋ
ಕೆಲವರ ಬದುಕಿನೊಂದಿಗೆ
ಚಲ್ಲಾಟವಾಡುತ್ತೇವೆ...


೪. ಮಗು
ಆಟ ಮಾತ್ರ ಆಡುತ್ತದೆ
ನಾವು
ನಾಟಕವನ್ನೂ ಆಡುತ್ತೇವೆ...


ನನ್ನ ಬ್ಲಾಗ್ನಲ್ಲಿ ಈ ಪದ್ಯಗಳನ್ನು ಹಾಕಿರುವುದಾಗಿ ಪ್ರಮೋದನಿಗೆ ತಿಳಿಸಿದಾಗ..ಅವನು ಒಂದು ಚುಟುಕಾದ ಸಂದೇಶವನ್ನು ತನ್ನ ಮೊಬೈಲ್ ಮೂಲಕ ಕಳುಹಿಸಿದ....


"ಗೆಳೆಯ ನಿನ್ನ ಪ್ರೀತಿಗೆ ಅಭಿನಂದನೆ...ನಿನ್ನ ಒಡನಾಟ ಹೀಗೆ ಇರಲಿ..ಕವಿತೆ ಕಥೆಗಳ ಬರೆಸಲಿ..."


ನಾನದಕ್ಕೆ ತಕ್ಷಣ ಪ್ರತಿಕ್ರಿಯಿಸಿದೆ...


"ಅದಕ್ಕೆ ಇರಬೇಕು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದದ್ದು...ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...." ಎಂದು...


Friday, August 7, 2009

ಮಗುವೆ ನಿನ್ನ ಹೂನಗೆ.......




ನನ್ನ ಬಹಳ ಅಪರೂಪದ ಗೆಳೆಯ ಪ್ರಮೋದ್ ತುರ್ವಿಹಾಳ್ ನೆನ್ನೆ ಹೊಸಪೇಟೆಯಲ್ಲಿ ಸಿಕ್ಕಿದ್ದ...ಸಂಜೆ ೪ ಗಂಟೆಗೆ ಆರಂಭವಾದ ನಮ್ಮ ಹರಟೆ ಒತ್ತಾಯಪೂರ್ವಕವಾಗಿ ಮುಗಿಸಿದಾಗ ಬರೋಬ್ಬರಿ ರಾತ್ರಿ ೧೦ ಗಂಟೆ..ಯಾಕಾದರೂ ಹತ್ತು ಗಂಟೆ ಆಯಿತೋ ಎಂದು ಪರಿತಪಿಸುತ್ತಿದ್ದೆ..ಆದರೆ ಬೇರೆ ವಿಧಿಯಿರಲಿಲ್ಲ...ನಾನು ಬೆಂಗಳೂರಿಗೆ ಬರಲೇ ಬೇಕಾಗಿತ್ತು.....ಮತ್ತು ನನ್ನ ಬಸ್ ೧೦.೧೫ ಕ್ಕೆ ಹೊರದುವುದಿತ್ತು...ಹೀಗಾಗಿ ಅನಿವಾರ್ಯವಾಗಿ ನಮ್ಮ ಹರಟೆಯನ್ನು ಮುಗಿಸಲೇ ಬೇಕಾಯ್ತು...

ಹಿಂದೆ ಪ್ರಮೋದ್ ಕಾಗೆಗಳ ಹಿಂದೆ ಬಿದ್ದು..ಅವುಗಳ ಕುರಿತು ಆಳವಾದ ಅಧ್ಯಯನ ನಡೆಸಿ....ಅವುಗಳ ಮೇಲೆ ಸಾಲು ಸಾಲಾಗಿ ಕವನಗಳನ್ನು ಬರೆದ...ಗುಲ್ಬರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕಾಗೆಯ ಕುರಿತಾಗಿ ಒಂದು ಕವನ ವನ್ನು ಓದಿ ಜಿ.ಎಸ.ಶಿವರುದ್ರಪ್ಪ, ಎಚ್ ಎಸ ರಾಘವೇಂದ್ರ ಮುಂತಾದ ಹಿರಿಯ ಕವಿಗಳನ್ನು ಬೆಚ್ಚಿ ಬೀಳಿಸಿದ ಪುಣ್ಯಾತ್ಮ ಈತ...

ಈಗ ಮಕ್ಕಳ ಕುರಿತಾಗಿ ಅಧ್ಯಯನ ನಡೆಸಿದ್ದಾನೆ ಮತ್ತು ಮಕ್ಕಳ ಮನಸ್ಸು, ಭಾವನೆಗಳ ಕುರಿತಾಗಿ ಅವನ ಕವನ ರಚನೆ ಸಹ ನಡೆದಿದೆ...ಅವುಗಳಲ್ಲಿ ಕೆಲವನ್ನು ನೆನ್ನೆ ನನ್ನ ಮುಂದೆ ಓದಿದಾಗ ನಾನು ನಿಜಕ್ಕೂ ವಿಸ್ಮಯ ಗೊಂಡೆ..ಅವುಗಳಲ್ಲಿ ಒಂದೆರಡನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವೆ...

೧. ಮಗುವಿನಂಬೆಗಾಲಿಗೆ
ವಿಶ್ವ
ಯಾವ ಲೆಕ್ಕ...

೨. ಮಗುವ ನಗುವಿಂದ
ಬೆಳಕು
ಕಡ ತೆಗೆದುಕೊಂಡಿದೆ...

೩. ಮಗುವಾಗಿಯೇ
ದೊಡ್ದವರಾದವರ ನಡುವೆ
ಮಗು ಮನುಷ್ಯರನ್ನು ಹುಡುಕುತ್ತಿದೆ....


ಎಂಥ ಅದ್ಭುತ ಕಲ್ಪನೆಯಿದೆ ಇಲ್ಲಿ...ಮಗುವಿನ ನಗುವಿಗೆ.... ಕೋಪಕ್ಕೆ...ತಾಪಕ್ಕೆ...ಎಲ್ಲದಕ್ಕೂ ಒಂದೊಂದು ಅರ್ಥವನ್ನು ಕಲ್ಪಿಸುವ ಪ್ರಯತ್ನ ನಡೆದಿದೆ...ಅವನ ಇನ್ನೊಂದು ಪದ್ಯದಲ್ಲಿ ಒಂದು ಸಾಲನ್ನು ಬಳಸುತ್ತಾನೆ..."ಮಗುವಿನ ಉಸುರಿನ ಶಾಪದಿಂದ..." ಎಂದು...ಅನೇಕ ಜನ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ....ಮಗು ಎಂದಾದರೂ ಶಾಪ ಹಾಕುವುದೇ ಎಂದು...ನಮ್ಮ ಚರ್ಚೆಗಳು ಹೀಗೆಯೇ ಸಾಗುತ್ತಿರುವಾಗ ನನಗೆ ಥಟ್ಟನೆ ನೆನಪಾಗಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಗೆಜ್ಜೆ ಪೂಜೆ" ಚಿತ್ರದ

"ಮಗುವೆ ನಿನ್ನ ಹೂನಗೆ
ಒಡವೆ ನನ್ನ ಬಾಳಿಗೆ
ತುಂಬು ನನ್ನ ಜೋಳಿಗೆ..."

ಅದಕ್ಕೆ ಇರಬೇಕು ನಾವೆಲ್ಲಾ ಯಾವತ್ತು ಮಗುವಾಗಿಯೇ ಇರಲು ಬಯಸುವುದು.....

Wednesday, August 5, 2009

ಕನಸು ಕುತೂಹಲಗಳ ಮಧ್ಯೆ....



ಈ ಕನಸುಗಳ ಬಗ್ಗೆ ನನಗೆ ವಿಚಿತ್ರ ಕುತೂಹಲ...ಅವು ಹೇಗೆ ಬೀಳುತ್ತವೆ, ಏಕೆ ಬೀಳುತ್ತವೆ...ಮುಂತಾದವುಗಳ ಬಗ್ಗೆ ನಾನು ಆಗಾಗ ಚಿಂತಿಸುತ್ತಿರುತ್ತೇನೆ...



ನನ್ನ ಗೆಳೆಯನೊಬ್ಬನಿದ್ದಾನೆ... ಶಾಂತರಾಜು ಪೋಲಿಸ್ ಪಾಟಿಲ್ ಎಂದು ಜಿಂದಾಲ್ ನಲ್ಲಿ ನಾನಿರುವಾಗ ನನ್ನೊಂದಿಗಿದ್ದ...ಅವನು ಮೂಲತಃ ಇಂಜಿನೀಯರ್...ಆದರು ಸಹ ಅದು ಹೇಗೋ ಗೊತ್ತಿಲ್ಲ ನನ್ನ ಮತ್ತು ಅವನ ಗೆಳೆತನ ಬಹು ಬೇಗ ಗಟ್ಟಿಯಾಯ್ತು ಮತ್ತು ಅವನು ತನ್ನ ಜೀವನದ ಪ್ರತಿಯೊಂದು ಘಳಿಗೆಗಳನ್ನು ನನ್ನೊಂದಿಗೆ ಯಾವಾಗಲು ಚರ್ಚಿಸುತ್ತಿರುತ್ತಾನೆ...ಅವನೀಗ ತನ್ನ ಕುಟುಂಬ ಸಮೇತನಾಗಿ ಅಮೆರಿಕದಲ್ಲಿದ್ದಾನೆ...ಅವನೀಗ ಅಮೆರಿಕಕ್ಕೆ ಹೋಗಿ ೯ ವರ್ಷಗಳೇ ಕಳೆದಿವೆ...ಆದರು ನಿರಂತರ ಸಂಪರ್ಕದಲ್ಲಿದ್ದಾರೆ....ಈಗ ಇವನ ಪ್ರಸ್ತಾಪ ಏಕೆ ಬಂದಿತೆಂದರೆ...ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅವನೊಂದು ಮನೆ ಕಟ್ಟಿಸಿದ....ಅದರ ಗೃಹ ಪ್ರವೇಶಕ್ಕೆ ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವುದಿತ್ತು..ತಕ್ಷಣ ನನ್ನ ಮನೆಗೆ ದೌಡಾಯಿಸಿದವನೇ..."ಧನು ನನ್ನ ಮನಿಗೆ ಕನಸು ಅಂತ ಹೆಸರಿಡಬೇಕು ಅಂತ ಮಾಡೆನಿ..ನಿನಗ ಎನನಸ್ತೈತಿ?" ಎಂದ...ನಾನು ತಕ್ಷಣ ಏನನ್ನು ಚಿಂತಿಸದೆ ಒಳ್ಳೆಯ ಹೆಸರು ಇದು ಎಂದು ಬಿಟ್ಟೆ....ನೋಡಿ ಕನಸುಗಳಿಗೆ ಎಷ್ಟೊಂದು ಕಲ್ಪನೆಗಳಿವೆ....



ಕನಸುಗಳಿಗೆ ಸಂಬಂಧಪಟ್ಟಂತೆ ನನ್ನ ಎರಡು ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ....ಈ ಎರಡು ಘಟನೆಗಳು ತೀರ ಭಿನ್ನ ವಾಗಿದ್ದು..ಎರಡರಲ್ಲಿಯೂ ಸಹ ನೀವು ವೈರುಧ್ಯಗಳನ್ನು ಕಾಣಬಹುದಾಗಿದೆ....



ಮೊದಲನೆಯದು...



ನಾನು ಹತ್ತನೇ ತರಗತಿಯ ಅಂತಿಮ ಪರೀಕ್ಷೆ ಬರೆಯುತ್ತಿದ್ದೆ...ಆವತ್ತು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯಿತ್ತು...ಮೊದಲಿನಿಂದಲೂ ಇತಿಹಾಸ ಓದುವುದೆಂದರೆ ನನಗೆ ಒಂದು ತರಹದ ಅಲರ್ಜಿ...ಅಕ್ಷರಶಃ ನಾನು ಏನನ್ನು ಓದಿರಲಿಲ್ಲ...ಹಾಗೆಯೆ ಪರೀಕ್ಷೆ ಬರೆಯಲು ಹೋದೆ..ಅಂದು ಪರೀಕ್ಷೆಗೆ ಎಕ್ಸಾಮಿನರ್ ಆಗಿ ಕಾತೋಟಿ ಎಂಬ ತಿಚರ್ ಬಂದಿದ್ದರು.ಅವರು ಧಾರವಾಡದಲ್ಲಿ ನಮ್ಮ ಮನೆಯ ಹತ್ತಿರವೇ ಇರುತ್ತಿದ್ದರು ಮತ್ತು ನನ್ನ ತಾಯಿಯ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು....ಪರೀಕ್ಷೆ ಆರಂಭವಾಯಿತು..ಪ್ರಶ್ನೆ ಪತ್ರಿಕೆ ನೋಡಿದರೆ ಅದರಲಿ ನನಗೇನು ಅರ್ಥವಾಗುತ್ತಿಲ್ಲ...ಏನು ಬರೆಯಬೇಕೆಂದು ತಿಳಿಯುತ್ತಿಲ್ಲ....ಸುಮ್ಮನೆ ಬರೆಯುವವನಂತೆ ನಟಿಸಿ..ಕುಳಿತುಕೊಂಡೆ...ಕಾತೋಟಿ ಮೇಡಂ ನನ್ನ ಹತ್ತಿರ ಬಂದವರೇ ಪರಿಸ್ಥಿತಿಯನ್ನು ತಿಳಿದುಕೊಂಡವರೇ.. ನನ್ನ ಮಗ್ಗುಲಲ್ಲಿ ಬಂದು ನಿಂತು ಇಡೀ ಪತ್ರಿಕೆಯ ಉತ್ತರವನ್ನು ಹೇಳಿದರು....ಮುಂದೆ ನಾನು ಆ ವಿಷಯದಲ್ಲಿ ಪಾಸಾದೆ..ಆ ವಿಚಾರ ಬೇರೆ...ಈಗ ನಾನು ಎಸ್.ಎಸ್.ಎಲ್.ಸಿ ಮುಗಿಸಿ ೨೩ ವರ್ಷಗಳೇ ಕಳೆದಿವೆ...ನನಗೆ ಈಗಲೂ ಆಗಾಗ ಕನಸು ಬೀಳುತ್ತಿರುತ್ತದೆ....ನಾಳೆ ಪರೀಕ್ಷೆ ಇದೆ...ಸಮಾಜ ವಿಜ್ಞಾನ ವಿಷಯ.ಅದನ್ನು ಓದಬೇಕು...ಮುಂತಾದ ವಿಚಿತ್ರ ಕನಸುಗಳು....ತಕ್ಷಣ ನನಗೆ ಏನೋ ಒಂದು ತರಹದ ಕಸಿವಿಸಿ....ಹಾಸಿಗೆಯಿಂದ ಎದ್ದು ಕುದುತ್ತೇನೆ....ನಂತರ ಅದು ಕನಸು ಎಂದು ತಿಳಿದು ವಿಚಿತ್ರ ರೀತಿಯ ಚಡಪಡಿಕೆ ಶುರುವಾಗುತ್ತದೆ....ಹೀಗೇಕೆ ಕನಸುಗಳು ನನಗೆ ಬೀಳುತ್ತಿವೆ ತಿಳಿಯುತ್ತಿಲ್ಲ....

ಎರಡನೆಯದು:

ನನ್ನಜ್ಜಿ ನನ್ನನ್ನು ತುಂಬಾ ಪ್ರೀತಿಸುತಿದ್ದರು...ಅವರು ಬೆಳಗಾವಿ ಜಿಲ್ಲೆಯ ಇಟಗಿ ಗ್ರಾಮದಲ್ಲಿ ವಾಸಿಸುತ್ತಿದರು...೮೪ ವರ್ಷ ವಯಸ್ಸಾದರೂ ಅತ್ಯಂತ ಘಾಟಿ ಮುದುಕಿ ಅದು...ಯಾರನ್ನು ತನ್ನ ಸಹಾಯಕ್ಕೆ ಕರೆಯದೆ ಊರಿಂದ ಊರಿಗೆ ಒಬ್ಬರೇ ಓಡಾಡುತ್ತಿದರು....ಅದು ೧೯೯೪ ಆಗಸ್ಟ್ ೧೪ ರ ಬೆಳಗಿನ ಜಾವ ೫.೩೦...ನನಗೆ ವಿಚಿತ್ರ ಕನಸು ಬಿಟ್ಟು...ನನ್ನ ಪ್ರೀತಿಯ ಅಜ್ಜಿ ಸತ್ತು ಹೋದ ಸುದ್ದಿ ಅದು..ನಾನಾಗ ನನ್ನ ಅಂತಿಮ ವರ್ಷದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೆ..ಧಾರವಾಡದಲ್ಲಿ ಚಿಕ್ಕ ರೂಂ ಮಾಡಿಕೊಂಡು ಇರುತ್ತಿದ್ದೆ...ಈ ಕನಸು ಬಿದ್ದ ತಕ್ಷಣ ಅಕ್ಷರಶಃ ನಾನು ಅಳುತ್ತ ಹಾಸಿಗೆ ಮೇಲೆ ಎದ್ದು ಕೂತೆ...ನಂತರ ಅದು ಕನಸು ಎಂದು ತೀಡು ಸುಧಾರಿಸಿಕೊಳ್ಳಲು ಸುಮಾರು ಅರ್ಧಗಂಟೆ ಬೇಕಾಯ್ತು...ನನ್ನ ಮುಂಜಾನೆಯ ಎಲ ಕೆಲಸಗಳನ್ನು ಮುಗಿಸಿಕೊಂಡು, ನನ್ನ ರೂಮಿನಲ್ಲಿ ಪೇಪರ್ ಓದುತ್ತ ಕುಳಿತಿದ್ದೆ..ನಾನಿದ್ದ ರೂಮಿನ ಮಾಲಿಕರಾದ ದೇಶಪಾಂಡೆ ಮಾಮಿ ಮನೆಗೆ ನನ್ನ ತಮ್ಮ ಫೋನ್ ಮಾಡಿದ್ದ..ಮತ್ತು ನನ್ನ ಅಜ್ಜಿ ಅಂದು ಮುಂಜಾನೆ ತಿರಿಹೊಗಿದಾರೆ..ತಕ್ಷಣ ಬೆಳಗಾವಿಗೆ ಬರಬೇಕು ಎಂಬ ಸಂದೇಶವನ್ನು ಕೊಟ್ಟಿದ್ದ...ನನಗೆ ಕನಸು ಬಿದ್ದ ಸಮಯದಲಿಯೇ ನನ್ನ ಅಜ್ಜಿಗೆ ಹೃದಯಾಘಾತವಾಗಿದೆ ಮತ್ತು ಅದೇ ಸಮಯಕ್ಕೆ ಅವರು ತೀರಿ ಹೋಗಿದ್ದಾರೆ...

ಈ ಎರಡು ವೈರುಧ್ಯದ ಕನಸುಗಳ ಬಗ್ಗೆ ನಾನು ಯಾವಾಗಲು ಚಿಂತಿಸುತ್ತಿರುತ್ತೇನೆ...ಉತ್ತರ ಇನ್ನು ಸಿಕ್ಕಿಲ್ಲ....



Tuesday, August 4, 2009

ಹೋರಾಟದ ಸಾಗರಕೆ ಸಾವಿರಾರು ನದಿಗಳು...


ರಂಗಭೂಮಿ ಒಂದು ಹೋರಾಟ...ಅದೊಂದು ತಪಸ್ಸು...ಯೋಗ....ಹಠ....ಸಾಧನೆ...ಎಷ್ಟೆಲ್ಲ ವ್ಯಾಖ್ಯಾನಗಳು...ಅದಕ್ಕೆ ರಂಗಭೂಮಿ ಒಂದು ತಂಡ ಕ್ರೀಯೆಯಾಗಲು ಸಾಧ್ಯವಾದದ್ದು ಮತ್ತು ದೃಶ್ಯ ಮಾಧ್ಯಮದಲ್ಲಿ ತನ್ನದೇ ಆದಂತಹ ಒಂದು ಛಾಪನ್ನು ಮೂಡಿಸಲು ಸಾಧ್ಯವಾದದ್ದು.....


ನಾಟಕ ಕಟ್ಟುವ ಕ್ರೀಯೆ...ಅದೆಂದಿಗೂ ನಿಂತ ನೀರಾಗಬಾರದು..ಅದಕ್ಕೆಂದೇ ನಾನು ಅದನ್ನು ಜಂಗಮ ಎಂದು ನಂಬಿರುವುದು...ಅದೆಂದಿಗೂ ಒಂದು ಸ್ಥಾವರವಾಗಲೇ ಬಾರದು...


ನಾನು ೧೯೯೭ ರಲ್ಲಿ ಪ್ರಜಾವಾಣಿ ಬಿಟ್ಟು ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಂದ ನಂತರ ಸುಮಾರು ಒಂದು ವರ್ಷಗಳ ಕಾಲ ನನ್ನ ಎಲ್ಲ ನಾಟಕ ಚಟುವಟಿಕೆಗಳು ನಿಂತೇ ಹೋಗಿದ್ದವು..ಆಕಸ್ಮಿಕವಾಗಿ ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಾಗ ಅದನ್ನು ಒಲ್ಲದ ಮನಸ್ಸಿನಿಂದಲೇ ಅಪ್ಪಿಕೊಂಡಿದ್ದೆ...ನಂತರ ಮುಂಬೈನಲ್ಲಿ ಪ್ರತಿ ವರ್ಷ ನಡೆಯುವ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ನಾಟಕ ಸ್ಪರ್ಧೆಯಲ್ಲಿ ದಫನ, ನಾಯೀಕತೆ, ರಾಕ್ಷಸ ಎಂಬ ಮೂರೂ ನಾಟಕಗಳನ್ನು ನಿರ್ದೇಶಿಸಿ, ಅವುಗಳಿಗೆ ವಿನ್ಯಾಸ ಹಾಗು ಸಂಗೀತ ಸಂಯೋಜನೆ ಮಾಡಿ ಮೂರೂ ವರ್ಷವೂ ಅನಾಮತ್ತಾಗಿ ಪ್ರಥಮ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಪಡೆದದ್ದು ಈಗ ಇತಿಹಾಸ...ವಿಶೇಷವೆಂದರೆ ನಮ್ಮ ತಂಡ ಹ್ಯಾಟ್ರಿಕ್ ಪ್ರಶಸ್ತಿಯನು ಗಳಿಸಿದ ಹತ್ತು ವರ್ಷಗಳ ನಂತರವೂ ಆ ಸಾಧನೆಯನ್ನು ಇದುವರೆಗೆ ಯಾರು ಮುರಿದಿಲ್ಲ..ಅದಿನ್ನೂ ಕನ್ನಡ ಕಲಾ ಸಂಘದ ಹೆಸರಿನಲ್ಲಿಯೇ ಇದೆ...


ಈ ಎಲ್ಲ ಸಾಧನೆಗಳ ಹಿಂದೆ ಅನೇಕ ಕಲಾವಿದರ ತ್ಯಾಗ ಸಾಕಷ್ಟಿದೆ...ರಾಕ್ಷಸ ನಾಟಕ ಮಾಡುವಾಗ ಅದರಲ್ಲಿನ ಮುಖ್ಯ ಪಾತ್ರಧಾರಿ ಚಂದ್ರಶೇಖರ್ ತನ್ನ ಮನೆಯಲಿ ಒಡಹುಟ್ಟಿದ ತಂಗಿಯ ಮದುವೆಯನ್ನು ಸಹ ಲೆಕಿಸದೆ ನಾಟಕದಲ್ಲಿ ಭಾಗವಹಿಸಿ ಉತ್ತಮ ನಟ ಪ್ರಶಸ್ತಿಯನು ಪಡೆದದ್ದು.ಅವರು ಈ ನಾಟಕಕ್ಕೆ ಬರಬೇಕೆಂದರೆ ರಾಜಗೋಪಾಲ್ ಅವರು ಸ್ವಾಮಿಜಿಯ ಪೋಷಾಕಿನಲ್ಲಿ ಚಂದ್ರು ಮನೆಗೆ ತೆರಳಿ ಅವರ ತಂದೆಗೆ ಸುಳ್ಳು ಹೇಳಿ...ಮುಂಬೈನಲ್ಲಿ ಒಂದು ಕಂಪನಿಯಲ್ಲಿ ನಿಮ್ಮ ಮಗನಿಗೆ ಸಂದರ್ಶನಕ್ಕೆ ಕರೆ ಬಂದಿದೆ...ಅದರಲ್ಲಿ ಆಯ್ಕೆಯಾದರೆ ಕೈತುಂಬ ಸಂಬಳ ಸಿಗುತ್ತದೆ...ನಿಮ್ಮ ಮಗನ ಭಾವಿಸ್ಯ ಉಜ್ವಲವಾಗುತ್ತದೆ ಎಂದೆಲ್ಲ ಓಳು ಬಿಟ್ಟು ಅವರನ್ನು ಮುಂಬೈಗೆ ಕರೆದುಕೊಂಡು ಹೋದದ್ದಾಯ್ತು....ನಾಟಕದ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು....ನಾಟಕ ಮುಗಿದ ನಂತರ ಚಂದ್ರು ತನ್ನ ಬಾಲ್ಯ ಸ್ನೇಹಿತ ಗಿರಿಶನನ್ನು ಟೆರೇಸಿನ ಮೇಲೆ ಕರೆದುಕೊಂಡು ಹೋಗಿ..ಅವನ ತೊಡೆಯಮೇಲೆ ಅರ್ಧ ಗಂಟೆಯ ಕಾಲ ಅತ್ತಿದ್ದಾರೆ....ನಂತರ ಪ್ರಶಸ್ತಿ ಬಂದ ನಂತರ ಅವನ ತ್ಯಾಗಕ್ಕೆ ಒಂದು ನ್ಯಾಯ ಸಿಕ್ಕಂತಾಗಿ ಅಷ್ಟೆ ಸಂಭ್ರಮ ಪಟ್ಟಿದ್ದಾರೆ....


ಅದೇ ರೀತಿ ಅನೇಕ ಕಲಾವಿದರು ಈ ತಂಡದ ಮುನ್ನಡೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಅವರಿನ್ನು ತಂಡದಲ್ಲಿ ಅಷ್ಟೆ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ..


ಹತ್ತು ವರ್ಷದ ಹಿಂದೆ ಕನ್ನಡ ಕಲಾ ಸಂಘ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಮತ್ತೊಂದು ಮಾಮೂಲಿ ತಂಡವಾಗಿತ್ತು...ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಇದರ ಸಾಧನೆಯನ್ನು ನೋಡಿದವರಿಗೆ ಕನಿಷ್ಠ ಮಟ್ಟದ ಅಸುಯೇಯಾದರು ಆಗಲೇ ಬೇಕು..ತಮ್ಮದೇ ಆದ ಒಂದು ಸುಸಜ್ಜಿತವಾದ ಗ್ರಂಥಾಲಯ, ರಂಗಮಂದಿರ, ನಾಟಕಕ್ಕೆ ಬೇಕಾಗುವ ಎಲ್ಲ ರೀತಿಯ ಪರಿಕರಗಳು, ಬೆಳಕಿನ ವ್ಯವಸ್ಥೆ, ಧ್ವನಿ ವರ್ಧಕ ವ್ಯವಸ್ಥೆ ಎಲ್ಲವನ್ನು ತಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡಿದ್ದಾರೆ....ಅಕಾಡಮಿಯ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿಗೆ ಬಂದಿದ್ದಾರೆ..ಇವರಿಂದ ಸಾಕಷ್ಟು ಆದರಾತಿಥ್ಯ ಸ್ವೀಕರಿಸಿ....ಬೆಟ್ಟದಂತಹ ಆಶ್ವಾಸನೆಗಳನ್ನು ನೀಡಿ ಹೋಗಿದ್ದಾರೆ...ಆದರೆ ಅವರು ಏನು ಮಾಡಿಲ್ಲ...."ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲಾರದು" ಎಂಬ ಮಾತಿನಂತೆ ತಂಡ ಕಳೆದ ೩೦ ವರ್ಷಗಳಿಂದ ಬಿ.ಚಿ ಜನ್ಮ ದಿನಾಚರಣೆಯನ್ನು, ಕಳೆದ ಹತ್ತು ವರ್ಷಗಳಿಂದ ಕೈಲಾಸಂ ದಿನಾಚರಣೆಯನ್ನು, ಪ್ರತಿವರ್ಷ ಮಕ್ಕಳಿಗಾಗಿ ಚಿನಾರ ಎಂಬ ನಾಟಕ ಸ್ಪರ್ಧೆಯನ್ನು ಮತ್ತು ವರ್ಷಕ್ಕೊಂದು ಪೂರ್ಣಪ್ರಮಾಣದ ನಾಟಕವನ್ನು ತಪ್ಪದೆ ಮಾಡುತ್ತಾ ಬಂದಿದೆ...


ಇದರ ಹಿಂದಿನ ಪ್ರೇರಕ ಶಕ್ತಿಗಳು ಅನೇಕ...ಯಾರ ಹೆಸರನ್ನು ಬಿಡುವಂತಿಲ್ಲ...ಆದರೆ ಕೆಲವನ್ನಿಲ್ಲಿ ನೆನಪಿಸಿ ಕೊಳ್ಳಲೆ ಬೇಕು...ರಾಮಪುರ ಬದರಿ ನಾರಾಯಣ, ರಾ.ಸಿ. ಕುಲಕರ್ಣಿ, ಸದಾನಂದ್, ಮುಂತಾದವರು ತಮ್ಮ ಜೀವವನ್ನೇ ತೆಯ್ದಿದ್ದಾರೆ....


ಇಂತಹ ಹೋರಾಟದ ಸಾಗರಕೆ ಸಾವಿರಾರು ನದಿಗಳು ಬಂದು ಸೇರಿವೆ...ಅವುಗಳಲ್ಲಿ ಕೆಲವರನ್ನು ಭೇಟಿಯಾಗಲು ಈ ಕೆಳಗಿರುವ ಲಿಂಕ್ ಕ್ಲಿಕ್ಕಿಸಿ....



Sunday, August 2, 2009

ಹಳ್ಳಕ ಬಿದ್ರೆ ಆಳಿಗೊಂದ್ ಕಲ್ಲು...


ಗೆಳೆಯ ಯಶವಂತ ನಿರ್ದೇಶನದ "ಸಹಿ ರೀ ಸಹಿ" ನಾಟಕದಲ್ಲಿ ಒಂದು ಪಾತ್ರ ಬರುತ್ತದೆ..ಅದರ ಹೆಸರು ಗಲಗಲಿ ಎಂದು...ಅವನು ಮೂಲತಃ ಇನ್ಸುರನ್ಸ್ ಮಾರಾಟ ಮಾಡಿ ತನ್ನ ಉಪಜೀವನವನ್ನು ನಡೆಸುವವನು...ಆ ಪಾತ್ರದಲ್ಲಿ ಯಶವಂತ ಬಹಳ ಚನ್ನಾಗಿ ಅಭಿನಯಿಸುತ್ತಾನೆ... ಒಂದು ದೃಶ್ಯದಲ್ಲಿ ಅವನು ಮದನ್ ಸುಖಾತ್ಮೆಯ ಪಾತ್ರದ ಅನುಕರಣೆ ಮಾಡಬೇಕಾಗಿರುತ್ತದೆ....ಅದಕ್ಕಾಗಿ ಅವನ ಇಡೀ ಜನ್ಮ ವೃತ್ತಾಂತವನ್ನು ತಿಳಿದುಕೊಳ್ಳುವ ಕರ್ಮಕ್ಕೆ ಈ ಗಲಗಲಿ ಬಲಿಯಾಗಬೇಕಾಗುತ್ತದೆ...ಸುಖಾತ್ಮೆಯ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ಅವನಿಗೆ ಮೈಸೂರು ಬಳಿ ದೊಡ್ಡದಾದ ಪಿತ್ರಾರ್ಜಿತ ಆಸ್ತಿ ಇರುತ್ತದೆ..ದೊಡ್ಡ ಕುಟುಂಬ ಅದು...ಸುಖಾತ್ಮೆಯ ಹಂಡತಿ ಗಲಗಲಿಗೆ ಇದನ್ನೆಲ್ಲಾ ಹೇಳುತ್ತಾ ಹೋದಂತೆ ಗಲಗಲಿಯ ಕುತೂಹಲಕ್ಕೆ ಪಾರವೇ ಇರುವುದಿಲ್ಲ...ತಕ್ಷಣವೇ ಅವನ ಬಾಯಿಂದ ಒಂದು ಪ್ರಶ್ನೆ ಬರುತ್ತದೆ....."ಆ ಮನ್ಯಾಗ ಇಷ್ಟೆಲ್ಲಾ ಜನ ಇರತಾರಂತ ಹೇಳತೀರಿ..ಹಂಗಾರ ಅವರೆಲ್ಲ ಪಾಲಿಸಿ ಮಾಡಸ್ಯಾರೆನು?"....ಇಡೀ ಪ್ರೇಕ್ಷಕ ಸಮೂಹ ಹೊಟ್ಟೆ ಹುಣ್ಣಾಗುವಷ್ಟು ನಗುತ್ತದೆ...ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗಲಗಲಿ ಎನ್ನುವ ಪಾತ್ರಧಾರಿಗೆ ತನ್ನ ಕೆಲಸದ ಬಗ್ಗೆ ಇರುವ ಕಾರ್ಯನಿಷ್ಥೆ ಮತ್ತು ಆ ಕ್ಷಣದ ಸಮಯ ಪ್ರಜ್ಞೆ...

ಬಿಡಿ ಇದು ನಾಟಕದಲ್ಲಿ ಬರುವ ಪಾತ್ರದ ಬಗ್ಗೆ ಆಯ್ತು..ಇಂತಹುದೇ ಒಂದು ಪಾತ್ರ ನಿಜಜೀವನದಲ್ಲಿ ನಿಮಗೆ ಎದುರಾದರೆ ನಿಮ್ಮ ಪ್ರತಿಕ್ರೀಯೆ ಹೇಗಿರುತ್ತದೆ? ನೀವು ಹೊಸಪೇಟೆಗೆ ಬಂದರೆ ಸಾಕು ನಿಮಗೆ ಇಂತಹ ಒಂದು ಕ್ಯಾರೆಕ್ಟರ್ ಪರಿಚಯವಾಗುತ್ತದೆ...ಓರಿಯಂಟಲ್ ಇಸ್ನುರನ್ಸ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಚ್. ರಾಜಗೋಪಾಲ್ ಎಂಬ ವ್ಯಕ್ತಿಯೇ ಈ ಕ್ಯಾರೆಕ್ಟರ್....ರಂಗಭೂಮಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ನನ್ನ ನಿರ್ದೇಶನದ ದಫನ ನಾಟಕದಲ್ಲಿ ನಾನೇ ವಿಶೇಷವಾಗಿ ಸೃಷ್ಟಿಸಿದ ದೋಳಕನ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಅದ್ಭುತವಾಗಿ ಅಭಿನಯಿಸಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದುಕೊಂಡವರು...ಅವರು ನಾಟಕದಲ್ಲಿ ಭಾಗವಹಿಸಿರಲಿ ಬಿಡಲಿ....ಅವರಿಗೆ ಅಲ್ಲಿ ಪಾತ್ರವಿರಲಿ ಬಿಡಲಿ..ಸುಮ್ಮನೆ ಅಲ್ಲಿ ಅಂದರೆ ನಾಟಕದ ತಾಲೀಮು ನಡೆಯುವಲ್ಲಿ ತಪ್ಪದೆ ಹಾಜರಾಗುತ್ತಾರೆ ಮತ್ತು ಇತರೆ ಪಾತ್ರಧಾರಿಗಳ ಮೇಲೆ ನಿರರ್ಗಳವಾಗಿ ತಮ್ಮ "ವರ್ಕ್" ಶುರುವಿಟ್ಟುಕೊಳ್ಳುತ್ತಾರೆ...

ಚಂದ್ರು ಇವರನ್ನು ಅತ್ಯಂತ ಪ್ರೀತಿಯಿಂದ ಮತ್ತು ಶೃದ್ಧೆಯಿಂದ ಅಣ್ಣ ಅಂತಲೇ ಕರೆಯುವುದು...ಮತ್ತು ಚಂದ್ರು ಹೇಳುವುದನ್ನೆಲ್ಲ ಇವರು ನಂಬುತ್ತಾರೆ...ರಾತ್ರಿ ೧೨ ಗಂಟೆಯನಂತರ ಇವರಿಗೆ ಫೋನಾಯಿಸಿ "ನಮ್ಮ ಎಮ್ಮೆ ಸತ್ತಿದೆ..ಅದರ ಇನ್ಸುರನ್ಸ್ ಕ್ಲೆಂ ಮಾಡುವುದಿತ್ತು..ಬೇಗನೆ ಬನ್ನಿ" ಎಂದು ಪೀಡಿಸುವುದರಿಂದ ಹಿಡಿದು...ನನ್ನ ಹೀರೋ ಹೊಂಡಾ ಕಳೆದು ಹೋಗಿದೆ...ನನಗೆ ಅರ್ಜೆಂಟಾಗಿ ಅದರ ಇನ್ಸುರನ್ಸ್ ಹಣ ಬೇಕು..ವ್ಯವಸ್ಥೆ ಮಾಡಿ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಅವರಿಗೆ ಫೋನ್ ಮಾಡಿ ಕಾಡುವುದು...ಯಾವನೇ ಆದರು ಒಂದು ಸಲ ಬೇಡ ಎರಡು ಸಲ ಪರಿಪಾಟಲು ಬೀಳಬಹುದು...ಆದರೆ ಪದೇ ಪದೇ ಬೀಳುವ ಈ ಆಸಾಮಿಯ ಕೆಲವು ವಿಶೇಷ ಪ್ರಸಂಗಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲೇ ಬೇಕು...

೧೯೯೯ ರಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ದಫನ ನಾಟಕ ಭಾಗವಹಿಸಿತ್ತು...ಅದರಲ್ಲಿ ರಾಜಗೋಪಾಲ್ ಅವರಿಗೆ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು...ಅವರಿಗೋ ತಡೆಯಲಾರದಷ್ಟು ಆನಂದ....ಅದನ್ನು ಯಾರೊಂದಿಗೆ ಹೇಗೆ ಹಂಚಿಕೊಂಡರು ಅವರಿಗೆ ಸಮಾಧಾನವಿಲ್ಲ...ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ...ಇವರಿಗಾಗಲೇ ಪ್ರಶಸ್ತಿ ಬಂದಾಗಿತ್ತು...ಎಲ್ಲರು ಇವರನ್ನು ಅಭಿನಂದಿಸುತ್ತಿದ್ದರೆ...ಇವರ ಹಿಂದಿನ ಸೀಟಿನಲ್ಲಿ ಕುಳಿತ ಆಸಾಮಿಯೊಬ್ಬ ಜುಬ್ಬಾ, ಪೈಜಾಮ ಹಾಕಿಕೊಂಡು ಮೇಲ್ಗಡೆ ಒಂದು ಜಾಕೀಟನ್ನು ಸಹ ಹಾಕಿದ್ದ... ಅವನು ಇವರೊಂದಿಗೆ ಮಾತಿಗಿಳಿದ..ಇವರನ್ನು ಹೊಗಳಿದ..ತಬ್ಬಿಕೊಂಡ...ಅಭಿನಂದಿಸಿದ..ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು...ಆ ವ್ಯಕ್ತಿಯನ್ನು ನೋಡಿದ ತಕ್ಷಣ ಇವರಿಗೆ ಇವರ್ಯಾರೋ ಪತ್ರಕರ್ತರಿರಬೇಕು...ಇವರನ್ನು ಸರಿಯಾಗಿ ನೋಡಿಕೊಂಡರೆ ನಾಳೆಯದಿನ ಪತ್ರಿಕೆಯಲ್ಲಿ ತಮ ಬಗ್ಗೆ ಉತ್ತಮ ಲೇಖನ ಬರಬಹುದು...ಎಂದೆಲ್ಲ ಕನಸುಕಂಡ ರಾಜಗೋಪಾಲ್, ಆತನನ್ನು ಕರೆದುಕೊಂಡು ತಿಂಡಿ ತಿನಿಸಿದ್ದಾಯಿತು.ಚಹಾ ಕುಡಿಸಿದ್ದಾಯಿತು...ಅಷ್ಟೇ ಅಲ್ಲ ರಾತ್ರಿ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಅವನಿಗೆ ತೀರ್ಥ ಪ್ರಸಾದವನ್ನು ಮಾಡಿಸಿದ್ದು ಆಯಿತು...ಕೊನೆಗೆ ಗೊತ್ತಾದ ವಿಷಯವೆಂದರೆ ಆ ವ್ಯಕಿತ್ ಗದಗ್ ಊರಿನವನು...ಅವನ ತಂಡ ಸಹ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಬರಬೇಕಾಗಿತ್ತು...ಆದರೆ ಅನಿವಾರ್ಯ ಕಾರಣದಿಂದ ಅವರು ಬಂದಿರಲಿಲ್ಲ...ಇವನೊಬ್ಬನೇ ಬಂದಿದ್ದಾನೆ..ರಾತ್ರಿ ಅವ್ನಿಗೆ ಮಲಗಲು ಒಂದು ನೆಲೆ ಬೇಕಾಗಿದೆ ಅದಕ್ಕಾಗಿ ಅವನು ರಾಜಗೋಪಾಲ್ ಅವರನ್ನು ಬೆನ್ನು ಬಿದ್ದಿದ್ದಾನೆ...ಇದನ್ನು ನೆನಸಿಕೊಂಡು ನಾವೆಲ್ಲಾ ಈಗಲೂ ಎಂಜಾಯ್ ಮಾಡುತ್ತವೆ...

ನಮ್ಮ ಹೊಸಪೇಟೆಯ ತಂಡದಲ್ಲಿ ತಾಯಪ ಕಲಾಲ್ ಎಂಬ ಇನ್ನೊಬ್ಬ ಕಲಾವಿದರಿದ್ದಾರೆ....ಅವರು ನಾಟಕ ಮಾಡುತ್ತಿದ್ದಾರೆ ಎನ್ನುವುದೇ ಹೊಸಪೇಟೆಯಲ್ಲಿ ಒಂದು ಸುದ್ದಿಯಾಗಿರುತ್ತದೆ..ಆದರೆ ಈ ಮನುಷ್ಯ ನಾಟಕದ ಹೆಸರಿನಲ್ಲಿ ತಮ್ಮ ಉಳಿದೆಲ್ಲ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ....ಅವರಿಗೆ ಈಗ ೪೫ + ವಯಸ್ಸು..ಮದುವೆಯಾಗಿಲ್ಲ...ಅವರದು ಜಾಯಿಂಟ್ ಫ್ಯಾಮಿಲಿ....ಅವರ ಅಣ್ಣನ ಮಕ್ಕಳನ್ನು ನಾಟಕದ ತಾಲೀಮಿಗೆ ಕರೆದು ಕೊಂದು ಬಂದಿರುತ್ತಾರೆ...ನಾವೆಲ್ಲಾ ಸೇರಿ ರಾಜಗೋಪಾಲ್ ಅವರನ್ನು ಎಷ್ಟರ ಮಟ್ಟಿಗೆ ನಂಬಿಸಿಬಿತ್ತಿದ್ದೆವೆಂದರೆ ..ತಾಯಪ್ಪ ಕಲಾಲನಿಗೆ ಮದುವೆ ಆಗಿದೆ ೮ ಮಕ್ಕಳಿವೆ ಅದರಲ್ಲಿ ೭ ಹೆಣ್ಣು ಮತ್ತು ಒಂದು ಗಂಡು ಎಂದೆಲ್ಲ ಹೇಳಿದ್ದೇವೆ...ಅದನ್ನವರು ಅಷ್ಟೇ ಭಕ್ತಿಯಿಂದ ನಂಬಿದ್ದಾರೆ...ಇಂದಿಗೂ ಕೂಡ....ನೀವು ಅವರಿಗೆ ಹೋಗಿ ಸತ್ಯ ಸಂಗತಿಯನ್ನು ಹೇಳಿದರು ಸಹ ಅವರ ಅದನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ....


ಗಿರೀಶ್ ದೇಸಾಯಿ ಎಂಬ ಇನ್ನೊಬ್ಬ ಗೆಳೆಯರು ನಮ್ಮ ಹೊಸಪೇಟೆಯ ತಂಡದಲ್ಲಿದ್ದಾರೆ..ಅವರು ವಿಶೇಷವಾಗಿ ನಾಟಕದ ಸಂಗೀತ ವಿಭಾಗದಲ್ಲಿ ಕಾರ್ಯ್ನಿರ್ವಹಿಸುವವರು..ಚಂದ್ರುನ ಬಾಲ್ಯ ಸ್ನೇಹಿತ...ಅವರು ಸಂಡೂರಿನ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ...ಒಂದು ದಿನ ಅವರು ಕೆಲಸ ಮುಗಿಸಿಕೊಂಡು ಹೊಸಪೇಟೆಗೆ ಬರುವಾಗ ಅವರಿದ್ದ ಬಸ್ ಅಪಘಾತಕ್ಕೀಡಾಗಿ ಅವರ ಬೆನ್ನಿಗೆ ತೀರ ನೋವಾಗಿದೆ...ಆಪತ್ರೆಗೆ ಸೇರಿಸಿ, ಅಲ್ಲಿ ಚಿಕಿತ್ಸೆ ಕೊಡಿಸಲಾಯ್ತು...ನಂತರ ಅವರಿಗಾದ ಬೆನ್ನಿನ ಗಾಯ ಸ್ವಲ್ಪ ಗಂಭೀರ ಪ್ರಮಾನದ್ದೆಂದು ತಿಳಿದು ಬಂತು...ಎಲ್ಲಾ ಗೆಳೆಯರು ಅವರನ್ನು ನೋಡಿಕೊಂಡು ಬಂದು, ಮಾತನಾಡಿಸಿ...ಬೇಗ ಗುಣಮುಖವಾಗಲೆಂದು ಹಾರೈಸಿ ಹೋದರೆ..ರಾಜಗೋಪಾಲ್ ಬಂದವರೇ..."ಗಿರಿ ನಿನ್ನ ಇನ್ಸುರನ್ಸ್ ಪಾಲಿಸಿ ಎಲ್ಲಿದೆ..ಅದನ್ನ ಈಗ ನಾವು ಕ್ಲೇಮ್ ಮಾಡಬಹುದು...ಲಗು ತಾ..." ಗಿರಿಯ ಆರೋಗ್ಯ ಹೇಗಿದೆ..ಅವನಿಗೆನಾಗಿದೆ...ಯಾವ ಪರಿಸ್ಥಿತಿಯಲ್ಲಿ ಅವನಿದ್ದಾನೆ...ಉಹಂ ಯಾವುದನ್ನು ಲೆಕ್ಕಿಸಿಲ್ಲ...ತಾವು ...ತಮ್ಮ ಕೆಲಸ ಮತ್ತು ಅದರಿಂದ ಇತರರಿಗೆ ಆಗುವ ಪ್ರಯೋಜನ ಇವಿಷ್ಟರಬಗ್ಗೆ ಮಾತ್ರ ಯೋಚನೆ.... ಇಂತಹ ವಿಚಿತ್ರ ಕ್ಯಾರೆಕ್ಟರ್ ಅದು....

ನಮ್ಮ ಪರಿಚಯವಾಗಿ ೧೦ ವರ್ಷಗಳೇ ಕಳೆದಿವೆ.,...ಈಗಲೂ ಸಹ ನಾನು ನಾನಾ ಫೋನ್ನಿಂದ ಅವರಿಗೆ ಫೋನ್ ಮಾಡಿದರೆ, ಬೇರೆ ಧನಿಯಲ್ಲಿ ಮಾತನಾಡಿದರೆ ಅವರಿಗೆ ಗುರುತು ಹಿಡಿಯಲು ಆಗುವುದಿಲ್ಲ...ಬಕರಾ ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತದೆ...ನಾವು ಬೀಳುವುದನ್ನು ಅಷ್ಟೇ ಭಕ್ತಿಯಿಂದ ಆನಂದಿಸುತ್ತಿರುತ್ತೇವೆ....