Monday, December 14, 2009

ಪಾಪ ಮುಗ್ಧರು..ಬರೆಯಲಿ ಬಿಡಿ.....!!!



ಇತ್ತೀಚೆಗೆ ರಂಗಾಯಣ ಕುರಿತಾಗಿ ಸರಣಿ ಲೇಖನಗಳು ಬರಲಾರಂಭಿಸಿದ ಮೇಲೆ ಮೈಸೂರಿನಲ್ಲಿ ರಂಗ ಕಲಾವಿದರು, ಸಾಹಿತಿಗಳು, ರಂಗಾಯಣದ ಫಲಾನುಭವಿಗಳಲ್ಲಿ ರಂಗಾಯಣದ ಕಲಾವಿದರ ಬಗ್ಗೆ ಅನುಕಂಪದ ಅಲೆಗಳು ಏಳಲಾರಂಭಿಸಿವೆ.




"ರಂಗಾಯಣದ ಕಲಾವಿದರ ಬಗ್ಗೆ ಈ ರೀತಿಯಾಗಿ ಬರೆಯಬಾರದಾಗಿತ್ತು. ಅವರಿಗೆ ಸರಕಾರಿ ಗುಮಾಸ್ತರಿಗೆ ಸಿಗುವ ಸಂಬಳಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತಿದೆ. ಅವರ ಬದುಕು ತುಂಬಾ ಕಷ್ಟದಲ್ಲಿದೆ"...ಹೀಗೆ ಹತ್ತು ಹಲವು ಮಾತುಗಳು ಮೈಸೂರಿನಿಂದ ಕೇಳಿ ಬರುತ್ತಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ರಂಗಾಯಣದ ರಗಲೆಗಳ ಕುರಿತು ಸರಣಿಯಾಗಿ ಲೇಖನಗಳು ಬಂದ ನಂತರ, ಇದನ್ನು ಖಂಡಿಸಲೆಂದೇ ಮೈಸೂರಿನಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ದುರಂತವೆಂದರೆ ಇದೇ ರಂಗಕರ್ಮಿಗಳು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚೆನಡೆಸಲು ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಇದುವರೆಗೆ ಮಾಡದೇ ಇರುವುದು.



ರಂಗಾಯಣದ ಕಲಾವಿದರೊಬ್ಬರು ಇತ್ತೆಚೆಗೆ ಬೆಂಗಳೂರಿಗೆ ಬಂದು, ನನ್ನ ಕೆಲ ರಂಗ ಮಿತ್ರರೊಂದಿಗೆ ಚರ್ಚೆ ನಡೆಸಿದರೆಂಬ ಸುದ್ದಿಯೂ ಬಂತು. ಅವರ ಪ್ರಕಾರ ಪತ್ರಿಕೆಗಳಲ್ಲಿ ರಂಗಾಯಣದ ಕುರಿತು (ವಿರುದ್ಧವಾಗಿ) ಬರೆಯುತ್ತಿರುವವರೆಲ್ಲ ಪಾಪ ಮುಗ್ಧರು, ಅವರಿಗೆ ರಂಗಾಯಣ ಹೇಗೆ ಕಾರ್ಯನಿರ್ವಹಿಸುತ್ತದೆ ಎಬ ಅರಿವಿಲ್ಲ. ಆ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವಂತೆ. ಹಾಗಿದ್ದರೆ ಮೈಸೂರಿನಲ್ಲಿ ಕೆಲ ರಂಗಕರ್ಮಿಗಳು ನಡೆಸಿದ ಸಂವಾದ ಕಾರ್ಯಕ್ರಮ ಏತಕ್ಕೆ? ಇದೊಂದು ವ್ಯವಸ್ಥಿತವಾದ ಸಾಂಸ್ಕೃತಿಕ ಗುತ್ತಿಗೆದಾರರ ವ್ಯವಸ್ಥಿತ ಹುನ್ನಾರ. ಸ್ವಾಮಿ ರಂಗಚಟುವಟಿಕೆಗಳು ಕೇವಲ ರಂಗಾಯಣದಲ್ಲಿ ಮಾತ್ರ ನಡೆಯುತ್ತಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಹ ನಡೆಯುತ್ತಿವೆ. ಅವನ್ನು ನಿಮ್ಮ ತೆರೆದು ಕಣ್ಣುಗಳಿಂದ ನೋಡುವ ಮನಸ್ಸಿರಬೇಕಷ್ಟೇ.




ಒಂದು ಕಡೆಯಿಂದ ಪ್ರಗತಿಪರರು, ಜನಪರ ಹೋರಾಟಗಾರರು, ಅನ್ಯಾಯದ ವಿರುದ್ಧ ದನಿ ಎತ್ತುವವರು ಎಂದೆಲ್ಲಾ ಬೊಗಳೆ ಬಿಡುವ ದಾಸಯ್ಯಗಳೆ, ಮಠಗಳ ಬಾಗಿಲು ಬಡಿದು, ಸ್ವಾಮಿಗಳ ಕಾಲು ಹಿಡಿದು, ತಮ್ಮನ್ನು ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ದುಂಬಾಲು ಬೀಳುತ್ತಾರೆ. ಇನೊಂದೆಡೆ, ಶ್ರೀ. ಲಿಂಗದೇವರು ಹಳೆಮನೆಯವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಿಸಿದ ನಂತರ ಎದ್ದ ಅನೇಕ ವಿವಾದಗಳಿಗೆ ಪತಿಕ್ರೀಯೆಯಾಗಿ ಬೆಂಗಳೂರಿನ ಕೆಲವು ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಅವರ ಬಾಲಬಡುಕರು ಸರಕಾರದಿಂದ ಆದೇಶ ಬರುವವರೆಗೆ ಹಳೆಮನೆಯವರು ಪತ್ರಿಕೆಗಳಿಗೆ ಹೇಳಿಕೆ ನೀಡಬಾರದಿತ್ತು. ಅವರ್ಉ ತುಬಾ ಅವಸರ ಮಾಡಿದರು ಎಂದೆಲ್ಲ ಮಾತನಾಡಿಕೊಂಡು ತಿರುಗುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ ಪತ್ರಿಕೆಯವರು ಏನು ಬೇಕದರೂ ಬರೆದುಕೊಳ್ಳಿ, ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂಬ ದಾರ್ಷ್ಟ್ಯತನದ ಪರಮಾವಧಿ.



ಇನ್ನು ಇದಕ್ಕೆ ಸರಕಾರದಿಂದ ಪರಿಹಾರ ಬಯಸ ಹೋದರೆ ಅದೊಂದು ಮೂರ್ಖತನದ ಪರಮಾವಧಿಯಾದೀತು. ಗಣಿ, ಧಣಿ, ರೆಸಾರ್ಟ್ ರಾಜಕೀಯಗಳಲ್ಲಿ ಮುಳುಗಿಹೋಗಿರುವ ನಮ್ಮ ಮುಖ್ಯ ಮಂತ್ರಿ ಹಾಗೂ ಅವರ ಸಹೋದ್ಯೋಗಿಗಳಿಗೆ ಇದು ಅರ್ಥವಾಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆ. ಮತ್ತು ನಾವೆಲ್ಲ ನಮ್ಮು ಮುಂದೆ ನಡೆಯುತ್ತಿರುವ ಸಾಂಸ್ಕೃತಿಕ ಹಗಲು ದರೋಡೆಗೆ ಮೂಕ ಸಾಕ್ಷಿಗಳಾಗುತ್ತಿದೇವೆ.

Thursday, December 10, 2009

ಸಮಸ್ಯೆಗಳ ಬಗ್ಗೆ ಕಾಳಜಿ ತೋರದಿರುವವರಿಗೆ ಅಧಿಕಾರ ಬೇಕಾಗಿದೆ....

ರಂಗಾಯಣದ ಕುರಿತು ಪ್ರಸ್ತುತ ಸ್ಥಿತಿಗತಿ ಹಾಗೂ ಅದಕ್ಕೆ ನಿರ್ದೇಶಕರ ನೇಮಕ ಕುರಿತಾದ ಆಯ್ಕೆ, ನಿರ್ಧಾರ ಮುಂತಾದವುಗಳು ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ. ಇದು ಒಂದಿಲ್ಲ ಒಂದು ದಿನ ಹೀಗೆ ಬಹಿರಂಗವಾಗಿ ಚರ್ಚೆಯಾಗಲೇ ಬೇಕಿತ್ತು. ಏಕೆಂದರೆ ನಾನು ಈ ಹಿಂದೆ ಹೇಳಿದಂತೆ ರಂಗಾಯಣಕ್ಕೆ ಈಗ ಬೇಕಾಗಿರುವುದು ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆ. ತನ್ಮೂಲಕ ಕನ್ನಡ ರಂಗಭೂಮಿಗೆ ಒಂದು ಹೊಸ ದಿಕ್ಕು ಕಾಣುವಂತಾದರೆ ಅದು ಉತ್ತಮ ಬೆಳವಣಿಗೆ.

ಇತ್ತೀಚೆಗೆ ಶ್ರೀ. ಲಿಂಗದೇವರು ಹಳೆಮನೆಯವರನ್ನು ತರಾತುರಿಯಲ್ಲಿ ರಂಗಾಯಣದ ನಿರ್ದೇಶಕರೆಂದು ಸರಕಾರ ಹೆಸರಿಸಿ, ಅದನ್ನು ಪುಷ್ಠೀಕರಿಸುವಂತೆ ಕನಡ ಮತ್ತು ಸಂಸೃತಿ ಇಲಾಖೆ ಪತ್ರಿಕೆಗಳಿಗೆ ಹೇಳಿಕೆಯನ್ನು ಸಹ ನೀಡಿತ್ತು. ತದ ನಂತರ ಅವರ ಆಯ್ಕೆಯನ್ನು ಪ್ರಶ್ನಿಸಿ, ಅವರಿಗೆ ನಕ್ಸಲರ ಜೊತೆ ನಂಟಿರುವುದನ್ನು ಶಂಕಿಸಿ ಪೊಲೀಸ್ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿದ್ದರ ಕುರಿತು ವರದಿಗಳು ದಾಖಲೆ ಸಮೇತ ಪ್ರಕಟಗೊಂಡವು. ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಹಾಗೂ ಪ್ರಯೋಗಾತ್ಮಕ ಸಂಸ್ಥೆಯಾದ ರಂಗಾಯಣಕ್ಕೆ ಶ್ರೀ. ಹಳೆಮನೆಯವರ ಅನುಭವದ ಹಿನ್ನಲೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಲೇಖನ ಸಹ ಪ್ರಕಟಗೊಂಡಿತು. ಇವೆಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಎಲ್ಲರನ್ನೂ ಗೊಂದಲದಲ್ಲಿ ನೂಕುವಂತೆ ಅದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿ "ಶ್ರೀ. ಹಳೆಮನೆ ಅವರ ಆಯ್ಕೆಯ ಕುರಿತು ಅಧೀಕೃತವಾಗಿ ಆದೇಶ ಹೊರಡಿಸುವುದು, ಅವರನ್ನು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನಿರ್ದೇಶಕರೆಂದು ಅಧಿಕಾರ ಸ್ವೀಕರಿಸುವಂತೆ ಆಹ್ವಾನಿಸುವುದು ಎಲ್ಲ ಸರಕಾರದ ಕೈಯಲ್ಲಿದೆ. ಈಗ ನಾವು ಕೇವಲ ಸರಕಾರದ ನಿರ್ಧಾರವನ್ನು ಕಾಯ್ದು ನೋಡಬೇಕಷ್ಟೇ" ಎಂಬಂತಹ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡತೊಡಗಿದರು.

ಇದಕ್ಕೆ ತದ್ವಿರುದ್ಧವಾಗಿ ಕೆಲವು ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ಸರಕಾರದ ಈ ರೀತಿಯ ನಿರ್ಧಾರ ರಾಜಕೀಯ ಕುತಂತ್ರದಿಂದ ಕೂಡಿದ್ದು. ಪ್ರಗತಿಪರ ಚಿಂತಕರೆಲ್ಲ ನಕ್ಸಲರೊಂದಿಗೆ ನಂಟನ್ನು ಹೊಂದಿದವರೆಂದು ಸರಕಾರ ಯಾವತ್ತೂ ಬಿಂಬಿಸುತ್ತ ಬಂದಿದೆ. ಇದು ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮುಂತಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡತೊಡಗಿದರು. ಇದೂ ಸಹ ಒಂದು ರೀತಿಯಲ್ಲಿ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನವೇ. ಏಕೆಂದರೆ ಯಾರೂ ಸಹ ರಂಗಾಯಣದ ಮೂಲ ಸಮಸ್ಯೆಗಳ ಕುರಿತು ಮಾತನಾಡಲು ತಯಾರಿಲ್ಲ. ರಂಗಾಯಣವನ್ನು ಆಡಳಿತಾತ್ಮಕವಾಗಿ ನೋಡಿಕೊಳ್ಳಲು ಒಬ್ಬ ಶಕ್ತ ಅನುಭವಿ ನಿರ್ದೇಶಕರ ಅಗತ್ಯವಿರುವಂತೆಯೇ, ಅದನ್ನು ಕ್ರಿಯಾತ್ಮಕವಾಗಿ ಮುನ್ನಡೆಸುವ ನಾಯಕನ ಅವಶ್ಯಕತೆ ಕೂಡ ಖಂಡಿತವಾಗಿ ಇದೆ. ಇದೆಲ್ಲವನ್ನು ಬಿಟ್ಟು, ಈಗ ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂಬಂತಹ ಹೇಳಿಕೆಗಳು ಎಷ್ಟರ ಮಟ್ಟಿಗೆ ಸೂಕ್ತ?

ರಂಗಾಯಣ ಆರಂಭವಾದಾಗಿನಿಂದ ಇಂದಿನ ವರೆಗೆ ೨೧ ವರ್ಷಗಳ ಕಾಲ ಅಲ್ಲಿನ ಕಲಾವಿದರು ಯಾವುದೇ ರಾಜಕಾರಣಿಗಳಿಗೆ ಕಡಿಮೆ ಇಲ್ಲದಂತೆ ರಾಜಕೀಯ ಮಾಡುತ್ತ, ನಿರ್ದೇಶಕರ ಆಯ್ಕೆಯಲ್ಲಿ ತಮ್ಮ ಪಾತ್ರವೂ ಸಹ ಅತೀ ಮುಖ್ಯವೆಂದು ಬಿಂಬಿಸುವ ಕಾರ್ಯ, ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ಹಾಕಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕರಂತೆ ವರ್ತಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಲೋಕದ ವಿಪರ್ಯಾಸಗಳಲ್ಲೊಂದು. ನಿರ್ದೇಶಕರ ಆಯ್ಕೆ ಪ್ರಕ್ರೀಯೆಯಲ್ಲಿ ಆದ ಗೊಂದಲಗಳಿಗೆ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಅನೇಕ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರು ಹೇಗೆ ವರ್ತಿಸಬೇಕು, ಅವರು ಮಾಡಬೇಕಾದ ಕೆಲಸ ಕಾರ್ಯಗಳೇನು ಎಂಬ ಕುರಿತು ಏನಾದರೂ ಚೌಕಟ್ಟುಗಳನ್ನು ಹಾಕಿ ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುವಂತೆ ಆದೇಶಿಸಿದ್ದಾರೆಯೇ? ಅಥವಾ ಅದನ್ನು ನೇರವಾಗಿ ಸರಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆಯೇ? ಒಂದು ವೇಳೆ ಆ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದರೂ ಅದು ಕಾರ್ಯ ರೂಪಕ್ಕೆ ಯಾಕೆ ಬರುತ್ತಿಲ್ಲ ಎಂದು ಸಂಬಂಧಪಟ್ಟವರ ಕೊರಳ ಪಟ್ಟಿಹಿಡಿದು ಕೇಳಲು ಹಿಂಜರಿಕೆ ಏಕೆ? ಈ ರೀತಿಯ ಹೇಳಿಕೆಗಳನ್ನು ನೀಡಿ ತಮ್ಮ ಹೆಸರು ಚಾಲ್ತಿಯಲ್ಲಿರಬೇಕೆಂಬ ಬಯಕೆಯೇ ಅಥವಾ ಇಚ್ಛಾ ಶಕ್ತಿಯ ಕೊರತೆಯೇ?

ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮತ್ತು ಅದನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ನಮ್ಮ ಕಾಳಜಿ ಕೇವಲ ಯಾವುದೇ ವಿಚಾರ ಸಂಕಿರಣಗಳಿಗೆ, ವೇದಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ. ಈಗ ರಂಗಾಯಣದ ಪರಿಸ್ಥಿತಿಯನ್ನು ಕುರಿತು ಎಲ್ಲ ಸಾಂಸ್ಕೃತಿಕ ಕಾಳಜಿಯುಳ್ಳ ಜನ ಸಾಮಾನ್ಯರು ಬೀದಿಗಿಳಿಯುವ ಮೊದಲೇ ಅದಕ್ಕೊಂದು ಸರಿಯಾದ ಮಾರ್ಗವನ್ನು ತೋರುವ ಅನಿವಾರ್ಯತೆ ಇದೆ. ಸರಕಾರ ರಂಗಾಯಣಕ್ಕೆ ಪ್ರತಿ ವರ್ಷ ವ್ಯಯಿಸುತ್ತಿರುವ ಹಣ ಬಿಳಿ ಆನೆಯನ್ನು ಸಾಕದಂತಾಗದೇ, ಆ ಹಣದ ಸಾರ್ಥಕ ಉಪಯೋಗವಾಗಿ ಇಡೀ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ನಾಂದಿಯಾಗಲಿ.

Friday, December 4, 2009

ರಂಗಾಯಣ.....ಸಾಕುಮಾಡಿ ರಾಮಾಯಣ!

(ಪ್ರಸ್ತುತ ಲೇಖನವು ದಿನಾಂಕ ೦೯-೧೧-೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿ ವಾಚಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ದಾಖಲಿಸಿ.)

ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.

ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು...... ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.

ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.

ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.

ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.

ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು...ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.

ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.

ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.

ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.

ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.

ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.

Thursday, November 26, 2009

ಕನ್ನಡ ರಂಗಭೂಮಿಗೆ ರಂಗಾಯಣ ಅನಿವಾರ್ಯವೇ?

ಇತ್ತೀಚೆಗೆ ನಾನು ರಂಗಾಯಣದಲ್ಲಿ ನಡೆಯುತ್ತಿರುವ ರಗಳೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಈಗ ಸಧ್ಯಕ್ಕೆ ಇದನ್ನು ಬರೆಯಲು ಮುಖ್ಯವಾದ ಕಾರಣವೆಂದರೆ ಸರ್ಕಾರ ಶ್ರೀ. ಲಿಂಗದೇವರು ಹಳೆಮನೆಯವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಕಮಾಡಿ ಧಿಡೀರನೆ ಆದೇಶ ಹೊರಡಿಸಿ ತನ್ನ "ಜವಾಬ್ದಾರಿಯನ್ನು" ಕಳೆದುಕೊಂಡಂತೆ ಪತ್ರಿಕೆಗಳಿಗೆ ಹೇಳಿಕೆಯನ್ನು ನೀಡಿರುವುದು.

ಇಲ್ಲಿ ಮುಖ್ಯವಾಗಿ ಸೈದ್ಧಾಂತಿಕವಾದ ಪ್ರಶ್ನೆ ನಮ್ಮನ್ನು ಕಾಡುತ್ತಿರುವುದೇನೆಂದರೆ ಸರಕಾರ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡುತ್ತಿರುವುದಕ್ಕೆ ಅನುಸರಿಸುತ್ತಿರುವ ಮಾನದಂಡ ಯಾವುದು? ಆ ಹುದ್ದೆಯ ಹಿಂದೆ ಆಕಾಂಕ್ಷಿಗಳು ನಡೆಸುತ್ತಿರುವ ಲಾಬಿಯ ಪ್ರಭಾವವೇ? ಒಟ್ಟಿನಲ್ಲಿ ರಂಗಾಯಣಕ್ಕೆ ಒಬ್ಬ ನಿರ್ದೇಶಕರನ್ನು ನೇಮಿಸಿ ತನ್ನ ಕೈ ತೊಳೆದುಕೊಂಡರೆ ಸಾಕೆನ್ನುವ ಮನೋಭಾವವಿರಬಹುದೇ? ಸರಕಾರದ ಯಾವ ನಿಲುವುಗಳೂ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿಲ್ಲ.

ಇಲ್ಲಿ ಒಂದು ಮಾತನ್ನು ಸ್ಪಷ್ಟಪದಿಸಲು ಇಚ್ಛಿಸುತ್ತೇನೆ. ಒಬ್ಬ ಸಾಹಿತಿಯಾಗಿ, ಭಾಷಾ ವಿಜ್ಜಾನಿಯಾಗಿ, ನಾಟಕ ರಚನಾಕಾರರಾಗಿ ಶ್ರೀ. ಲಿಂಗ ದೇವರು ಹಳೆಮನೆ ಅವರನ್ನು ಖಂಡಿತವಾಗಿಯೂ ಗೌರವಿಸೋಣ. ಆದರೆ ರಂಗಾಯಣಕ್ಕೆ ಬೇಕಾಗಿರುವುದು ಇವರಂಥವರಲ್ಲ. ಸರ್ಕಾರಕ್ಕೆ ರಂಗಾಯಣದ ರೂಪರೇಷೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆಯೇ ಸರಿಯಾದ ಅರಿವಿಲ್ಲವೆಂದು ಇಲ್ಲಿ ಸ್ಪಷ್ಠವಾಗುತ್ತದೆ. ರಂಗಾಯಣ ಒಂದು ಪ್ರಾಯೋಗಿಕ ಸಂಸ್ಥೆ. ಅದನ್ನು ಮುನ್ನಡೆಸಲು ಬೇಕಾಗಿರುವವರು ರಂಗಭೂಮಿಯಲ್ಲಿ ಪ್ರಾಯೋಗಿಕ ಅನುಭವವಿರುವಂಥವರು. ಪುಸ್ತಕಗಳನ್ನು ಬರೆದು, ತುಂಬಿದ ಸಭೆಯಲ್ಲಿ ಭಾಷಣಮಾಡಿ ತಮ್ಮ ಪಾಂಡಿತ್ಯವನ್ನು ತೋರಿಸುವವರಿಗೆ ರಂಗಾಯಣದ ನಿರ್ದೇಶಕ ಹುದ್ದೆ ಅಲ್ಲ. ಒಂದು ವೇಳೆ ರಂಗಾಯಣದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳಲು ಆ ಅನುಭವವಿರುವವರೇ ಬೇಕು ಎಂದಾದರೆ, ಈಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿದೆ. ರಂಗಾಯಣದ ಆಡಳಿತಾತ್ಮಕ ವಿಷಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೋಡಿಕೊಳ್ಳಬಹುದು. ರಂಗಭೂಮಿಯ ಕುರಿತು ಅಧ್ಯಯನ ಮಾಡಿರುವವರು, ಸಂಶೋಧನೆ ಮಾಡಿರುವವರು ಕರ್ನಾಟಕದಲ್ಲಿ ಇನ್ನೂ ಅನೇಕ ಜನ ಸಿಗುತ್ತಾರೆ. ಹಾಗಾದರೆ ಅವರನ್ನೇಕೆ ಈ ಹುದ್ದೆಗೆ ಪರಿಗಣಿಸಲಿಲ್ಲ? ರಂಗಾಯಣ ಮೈಸೂರಿನಲ್ಲಿರುವ ಮಾತ್ರಕ್ಕೆ ಆ ಹುದ್ದೆಗೆ ಆ ಭಾಗದವರು ಮಾತ್ರ ಲಾಯಕ್ಕು ಎಂಬ ಸರಕಾರದ ಮನೋಭಾವವೇ?

ನಾನು ಈ ಹಿಂದೆ ಕೂಡ ಪ್ರಸ್ತಾಪಿಸಿದ್ದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಇಂದು ಸಾಂಸ್ಕೃತಿಕ ವೇದಿಕೆ. ಅಲ್ಲಿನ ಕಲಾವಿದರೂ ಸಹ ಕೇವಲ ಮೈಸೂರಿನಲ್ಲಿ ಕುಳಿತು ರಾಜಕೀಯ ಮಾಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳನ್ನು ನೋಡಲಿ. ಅಲ್ಲಿನ ರಂಗಭೂಮಿಯ ಅಭಿವೃದ್ಧಿಗೆ ದುಡಿಯಲಿ. ತನ್ಮೂಲಕ ಅವರು ಸರಕಾರದಿಂದ ಪಡೆಯುತ್ತಿರುವ ಸಂಬಳಕ್ಕೆ ಒಂದು ನ್ಯಾಯವನ್ನು ಒದಗಿಸಲಿ. ಅದು ಬಿಟ್ಟು, ಇಡೀ ವರ್ಷ ಕಚ್ಚಾಡಿ, ಕಿತ್ತಾಡಿ, ಡಿಸೆಂಬರ್ ತಿಂಗಳಹೊತ್ತಿಗೆ "ಅಯ್ಯೋ ರಂಗಾಯಣಕ್ಕೆ ನಿರ್ದೇಶಕರು ಯಾರೂ ಇಲ್ಲ. ಈ ಬಾರಿಯ ಬಹುರೂಪಿ ನಾಟಕೋತ್ಸವ ನಡೆಯುವುದು ಹೇಗೆ" ಎಂದು ಗೋಲಾಡುವುದು ಯಾವ ನ್ಯಾಯ? ರಂಗಾಯಣ ಕೇವಲ ವರ್ಷಕ್ಕೊಂದು ಬಹುರೂಪಿಯಂತಹ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸಿದರೆ ಸಾಕಾ? ಅಲ್ಲಿಗೆ ಅದರ ಕಾರ್ಯವ್ಯಾಪ್ತಿ ಮುಗಿದು ಹೋಯ್ತಾ? ಹಾಗದರೆ ಈ ಕೆಲಸವನ್ನು ಕೇವಲ ರಂಗಾಯಣವೇ ಏಕೆ ಮಾಡಬೇಕು? ಬಹುರೂಪಿಯಂತಹ ನಾಟಕೋತ್ಸವಗಳನ್ನು ಕರ್ನಾಟಕ ನಾಟಕ ಅಕಾಡಮಿಯಾಗಲಿ ಅಥವಾ ಯಾವುದೇ ಕ್ರಿಯಾಶೀಲ ರಂಗತಂಡವಾಗಲೀ ಸಂಘಟಿಸಬಹುದು.

ಶ್ರೀ. ಲಿಂಗದೇವರು ಹಳೆಮನೆಯವರು ರಂಗಭೂಮಿಯ ಕುರಿತು ಸಾಕಷ್ಟು ಓದಿಕೊಂಡವರು, ಅನೇಕ ವಿಚಾರಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದವರು ಮತ್ತು ನಾಲ್ಕಾರು ನಾಟಕಗಳನ್ನು ರಚಿಸಿದವರು. ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರೆ ಯಾವ ಅಭ್ಯಂತರವಿರಲಿಲ್ಲ. ಆದರೆ ರಂಗಾಯಣದಂತಹ ಪ್ರಾಯೋಗಿಕ ಸಂಸ್ಥೆಗೆ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿರುವುದು ಖಂಡಿತವಾಗಿಯೂ ಸ್ವಾಗಾತರ್ಹವಲ್ಲ. ರಂಗಾಯಣಕ್ಕೆ ನಿರ್ದೇಶಕರು ಬೇಕೆ ಬೇಕು ಎಂದಾದರೆ, ನಮ್ಮ ರಾಜ್ಯದಲ್ಲಿ ಕ್ರಿಯಾಶೀಲರಾಗಿರುವ ಅನೇಕ ಜನ ರಂಗ ಕರ್ಮಿಗಳಿದ್ದಾರೆ. ಅಪಾರವಾದ ಪ್ರಾಯೋಗಿಕವಾದ ಅನುಭವದ ಹಿನ್ನಲೆಗಳನ್ನು ಹೊಂದಿದವರಿದ್ದಾರೆ. ಅಂಥವರನ್ನು ಸರಕಾರ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ ರಂಗಾಯಣದಲ್ಲಿರುವ ಎಲ್ಲ ಕಲಾವಿದರನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ, ಆಯಾ ಪ್ರದೇಶಗಳ ರಂಗಭೂಮಿಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತಾಗಲಿ. ಈ ಕುರಿತು ಧಾರವಾಡದಲ್ಲಿ ದಿನಾಂಕ ೧೨-೧೧-೨೦೦೯ ರಂದು ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ಯದರ್ಶಿಗಳು ಎಲ್ಲ ಹಿರಿಯ ರಂಗಕರ್ಮಿಗಳು, ಸಾಹಿತಿಗಳ ಎದುರಿನಲ್ಲಿಯೇ ಆಶ್ವಾಸನೆ ನೀಡಿ ಆಗಿಹೋದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಭರವಸೆ ನೀಡಿದ್ದರು. ಆದರೆ, ಅಂದಿನ ದಿನ ಅಲ್ಲಿ ನಡೆದ ಎಲ್ಲ ಚರ್ಚೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿ ಹೋಯ್ತು.

ಕೊನೆಯಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಕರ್ನಾಟಕ ರಂಗಭೂಮಿಗೆ ರಂಗಾಯಣ ಅನಿವಾರ್ಯವಲ್ಲ. ಅದಿಲ್ಲದೆಯೂ ಇಲ್ಲಿ ಅನೇಕ ರಂಗ ಚಟುವಟಿಕೆಗಳು ನಡೆದಿವೆ. ರಂಗಾಯಣ ನಿಜಕ್ಕೂ ಉಳಿಯಬೇಕೆಂದರೆ ಅದಕ್ಕೆ ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದಾಗದೇ ಹೋದಲ್ಲಿ ಮತ್ತೆ ಸಾರ್ವಜನಿಕರ ಹಣ ಪೋಲಾಗುತ್ತಲೇ ಹೋಗುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯುವ ಸಾಂಸ್ಕೃತಿಕ ರಾಜಕೀಯ ಕಚ್ಚಾಟವನ್ನು ಮತ್ತೆ ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ. ಮತ್ತು ಇದು ನಮ್ಮ ಕರ್ನಾಟಕ ರಂಗಭೂಮಿಯ ವಿಪರ್ಯಾಸಗಳಲ್ಲೊಂದು.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ ೦೯-೧೧-೨೦೦೯ ರಂದು ಪ್ರಕಟವಾದ "ರಂಗಾಯಣ... ಸಾಕು ಮಾಡಿ ರಾಮಾಯಣ" ಲೇಖನದ ಮುಂದುವರಿದ ಭಾಗವೆಂದು ಪರಿಗಣಿಸಬಹುದು..

Thursday, October 22, 2009

ಕತ್ತೆ ಕಳೆದುಕೊಂಡ ಸಿದ್ದಯ್ಯನ ನೆನಪಾದದ್ದು ಹೀಗೆ....

ದಲಿತ ಕವಿ ಸಿದ್ದಲಿಂಗಯ್ಯ ಬರೆದ ಕತ್ತೆ ಮತ್ತು ಧರ್ಮ ಕವನ ಎಲ್ಲರಿಗೂ ನೆನಪಿದೆ ಎಂದು ಭಾವಿಸಿದ್ದೇನೆ...ತನ್ನ ಸತ್ತ ಕತ್ತೆಯ ಹೂತ ಜಾಗವನ್ನು ನೋಡಲು ಹೋದ ಸಿದ್ದಯ್ಯನಿಗೆ ಆಶ್ಚರ್ಯದ ಜೊತೆಗೆ ಆಘಾತವು ಆಗುತ್ತದೆ..ಅವನನ್ನು ಗೋರಿ ದೇವರ ಹತ್ತಿರ ಸಹ ಬಿಡುವುದಿಲ್ಲ...ಸತ್ತ ಕತ್ತೆಗೆ ದೊರೆಯುತ್ತಿರುವ ಮಾನ ಮರ್ಯಾದೆಯ ಜೊತೆಗೆ ತನಗೆ ಅವಮಾನವಾಗುತಿರುವುದನ್ನು ಕಂಡು ಕ್ಷಣ ಕಾಲ ಆಘಾತವಾಗುತ್ತದೆ ಸಿದ್ದಯ್ಯನಿಗೆ...
ಕೆಲ ದಿನಗಳ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ನಾನು ಹೊಸಪೇಟೆಯಲ್ಲಿ ರಾತ್ರಿ ಹೊತ್ತು ತೋರಣಗಲ್ಲಿಗೆ ಹೋಗಲು ಸಾಧ್ಯವಾಗದೇ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ವಿಷಯ ಪ್ರಸ್ತಾಪಿಸಿದ್ದೆ..ಬಹುಶಃ ನಿಮಗೆ ಅದು ನೆನಪಿರಬೇಕೆಂದು ಕೊಂಡಿದ್ದೇನೆ...ಎರಡು ದಿನಗಳ ಹಿಂದೆ ನಾನು ಹೊಸಪೇಟೆಗೆ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲಿಂದ ವಾಪಸ್ ಬೆಂಗಳೂರಿಗೆ ಬರಲು ರಾತ್ರಿ ಹೊಸಪೇಟೆ ಬಸ್ ಸ್ಟ್ಯಾಂಡಿಗೆ ಬಂದೆ..ಬಸ್ ಬರಲು ಸ್ವಲ್ಪ ತಡವಿತ್ತಾದ್ದರಿಂದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತ ಅಲ್ಲಿಯೇ ಕಾಲ ಕಳೆಯುತ್ತಾ ನಿಂತೆ..ಬಸ್ ಸ್ಟ್ಯಾಂಡ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು..ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಈಗೋ ಇನ್ನೊಂದು ಕ್ಷಣಕ್ಕೋ ಕುಸಿದು ಬೀಳುವ ಹಂತಕ್ಕೆ ಅದು ಬಂದು ತಲುಪಿತ್ತು...ನನಗೆ ತಕ್ಷಣಕ್ಕೆ ಕುತೂಹಲ ತಡೆಯಲಾಗದೆ ಹತ್ತು ವರ್ಷಗಳ ಹಿಂದೆ ನನಗೆ ಆಶ್ರಯ ಕೊಟ್ಟ ಬೆಂಚ್ ಗತಿ ಏನಾಗಿದೆ ಎಂದು ನೋಡಲು ಹೋದಾಗ ಅಲ್ಲಿ ಯಾವ ಬೆಂಚು ಸಹ ಇರಲಿಲ್ಲ!!!
ಕೇವಲ ಭಿಕ್ಷುಕರು, ಜೋಳಿಗೆ ದಾಸಯ್ಯಗಳು...ನಾಯಿ, ಹಂದಿಗಳು ಆ ಸ್ಥಳವನ್ನು ಆವರಿಸಿಕೊಂಡಿದ್ದವು...ಬಸ್ ಸ್ಟ್ಯಾಂಡ್ ನಲ್ಲಿದ್ದ ಎಲ್ಲ ಬೆಂಚ್ ಗಳನ್ನೂ ನವೀಕರಣದ ಹೆಸರಿನಲ್ಲಿ ಎತ್ತಂಗಡಿ ಮಾಡಿದ್ದರು...
ಕ್ಷಣಕಾಲ ಏನನ್ನೋ ಕಳೆದುಕೊಂಡ ಅನುಭವವಾಗಿ..ಮನಸ್ಸಿಗೆ ಕಸಿವಿಸಿಯಾಯಿತು...ತಕ್ಷಣಕ್ಕೆ -
"ಮಧುಗಿರಿ ಪಟ್ಟಣಕೆ ಸಿದ್ದಯ್ಯನೆಂಬಗಸ
ಹೆಂಡಿರು ಮಕ್ಕಳಿಲ್ಲ ಏಕಾಕಿ
ಸಿದ್ದಯ್ಯನಿಗೆ ಕತ್ತೆಯು ಅವನ ಒಡನಾಡಿ..." ಹಾಡು ನೆನಪಾಗಿ..ಬೆಂಗಳೂರು ತಲುಪುವ ತನಕ ಅದರದೇ ಗುನುಗುವಿಕೆ.....

Tuesday, October 20, 2009

ಪತ್ರಕರ್ತರ ಹಪಾಪಿ ತನ!!!

ಈ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬರೆದಿದ್ದೆ...ಅದಕ್ಕೆ ಅನೇಕ ಸ್ನೇಹಿತರ ಮಿಶ್ರ ಪ್ರತಿಕ್ರಿಯೆ ಸಹ ಬಂದಿತ್ತು..ಗೆಳೆಯ ರವಿ ಹೆಗಡೆ ಅವರು ಇಂತಹ ವಿಷಯಗಳನ್ನು ನೇರವಾಗಿ ಸಂಪಾದಕರ ಗಮನಕ್ಕೆ ತರಬೇಕಿತ್ತು ಎಂಬ ಸಲಹೆಯನ್ನು ಸಹ ನೀಡಿದ್ದರು...

ಇದೆ ತರಹದ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ...ಕೊಪ್ಪಳದಲ್ಲಿ ನನ್ನ ಸ್ನೇಹಿತನೊಬ್ಬ ಏನ್.ಜಿ.ಓ ನಡೆಸುತ್ತಿದ್ದಾನೆ..ಅವನನ್ನು ಕೇಳಿಕೊಂಡು ಒಬ್ಬ ಪತ್ರಕರ್ತ ಬಂದು ದೀಪಾವಳಿಗಾಗಿ ಒಂದು ಜಾಹಿರಾತನ್ನು ನಮ್ಮ ಪತ್ರಿಕೆಗೆ ನೀಡುವಂತೆ ದುಂಬಾಲು ಬಿದ್ದಿದ್ದಾನೆ..ನನ್ನ ಸ್ನೇಹಿತ ಅದಕ್ಕೆ ತಮ್ಮದು ಏನ್.ಜಿ.ಓ ಆಗಿರುವುದರಿಂದ ಯಾವುದೇ ರೀತಿಯ ಜಾಹಿರಾತನ್ನು ನೀಡುವಂತಿಲ್ಲ ಎಂದು ತಿಳಿಸಿ ಹೇಳಿದ್ದಾನೆ..ಆಗ ಸುಮ್ಮನಾದ ಆ ಪತ್ರಕರ್ತ ಮಹಾಶಯ ನಾಲ್ಕು ದಿನಗಳ ನಂತರ ಪುನಃ ನನ್ನ ಗೆಳೆಯನಿಗೆ ಫೋನಾಯಿಸಿ ಜಾಹಿರಾತು ನೀಡಲು ಆಗದಿದ್ದರೆ..ನಮಗೆ ಏನಾದರು ವ್ಯವಸ್ಥೆಮಾಡಿ...ನಮ್ಮನ್ನು ನೋಡಿಕೊಳ್ಳಿ ಎಂದು ಕಾದಹತ್ತಿದಾನೆ..ಏನೇ ತಿಳಿ ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿಲ್ಲ...ಕೊನೆಗೆ ನನ್ನ ಗೆಳೆಯ ಇದನ್ನು ನನ್ನ ಮುಂದೆ ತೋಡಿಕೊಂಡಾಗ ನಾನು ನೇರವಾಗಿ ಬೆಂಗಳುರಿನಲ್ಲಿ ಆ ಪತ್ರಿಕೆಯ ಕಚೇರಿಗೆ ಫೋನಾಯಿಸಿ ಸಂಪಾದಕರ ಗಮನಕ್ಕೆ ಈ ವಿಷಯವನ್ನು ತಂದಾಗ ಅವರು ನೇರವಾಗಿ "ನಮ್ಮ ಪತ್ರ ಕರ್ತರು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ..ಅವರ ಮೇಲೆ ಅಲ್ಲ ಸಲ್ಲದ ಆರೋಪ ಮಾಡಬೇಡಿ ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ" ಎಂಬ ಉಪದೇಶವನ್ನು ನೀಡಿದರು...

ಈಗ ಹೇಳಿ ಇಂತಹ ಹಪಾಪಿ ಪತ್ರಕರ್ತರಿಗೆ ಹೇಗೆ ಪಾಠ ಕಲಿಸುವುದು?

Friday, October 16, 2009

ಹೊಸ ನಾಟಕಕ್ಕೆ ಕುಂ.ವೀ ಮುನ್ನುಡಿ!



ಮೊನ್ನೆ ದಿನಾಂಕ ೭ ರಂದು ಗೆಳೆಯ ಪ್ರಮೋದ್ ಬೆಳಿಗ್ಗೆ ೭ ಗಂಟೆಗೆ ಫೋನ್ ಮಾಡಿ "ಗೆಳೆಯ..ನಾನು ಬೆಂಗಳೂರಿಗೆ ಬಂದೇನಿ...ಕುಂ.ವೀ ಬಂದಾರ..ಸ್ವಲ್ಪ ಬಂದು ಹೋಗು" ಅಂದ...ನಾನು ಬಹುವಾಗಿ ಪ್ರೀತಿಸುವ ಸಾಹಿತಿ ಕುಂ.ವೀ...ಅವರ ಹೆಸರು ಕೇಳಿದ ತಕ್ಷಣವೇ ರೋಮಾಂಚನಗೊಂಡೆ...ಅವರನ್ನು ಹತ್ತಿರದಿಂದ ಕಾಣಬೇಕು..ಮಾತನಾಡ ಬೇಕು ಎಂಬ ಬಹುದಿನದ ತುಡಿತ ಇಂದು ನೆರವೇರಲಿದೆ ಎಂದು..ಅವರನ್ನು ಭೇಟಿ ಮಾಡಲು ಹೊರಟೆ.. ಎಂದಿನಂತೆಯೇ ಬೆಂಗಳೂರು ಅಂದು ಸಹ ಇಡೀ ಜಗತ್ತಿನ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ವರ್ತಿಸುತ್ತಿತ್ತು...ತುಂಬಿದ ಬಸುರಿಯರಂತೆ ತಿರುಗುತ್ತಿದ್ದ ಬಸ್ಸುಗಳ ಮಧ್ಯೆ ನಾನು ಹಾಗೋ....ಹೀಗೋ ನನ್ನ ಕಾರನ್ನು ಓದುಸುತ್ತ ಕುಂ.ವೀ. ಇದ್ದ ಆನಂದರಾವ್ ಸರ್ಕಲ್ಲಿನ ಹತ್ತಿರವಿದ್ದ ದ್ವಾರಕಾ ಲಾಡ್ಜ್ ಗೆ ಹೊರಟೆ...

ಲಾಡ್ಜ್ ಗೆ ಬಂದಾಗ ಕುಂ.ವೀ ತಮ್ಮ ಲ್ಯಾಪ್ ಟಾಪ್ ಮುಂದೆ ಅದೇನೋ ಬರೆಯುತ್ತಾ ಕುಳಿತಿದ್ದರು...ಪ್ರಮೋದ್ ನನ್ನನ್ನು ಅವರಿಗೆ ಪರಿಚಯಿಸಿದ ತಕ್ಷಣವೇ ಎದ್ದು ನಿಂತು..ಸ್ವಾಗತಿಸಿ...ತಮ್ಮ "ಆರೋಹಣ" ಕಾದಂಬರಿಯ ನಿದುಗದೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತು ಅದಕ್ಕೆ ಬರಲೇ ಬೇಕೆಂದು ಫರ್ಮಾನು ಹೊರಡಿಸಿಬಿಟ್ಟರು...ಅವರ ಮಾತು, ನಯ-ವಿನಯ, ಸರಳತೆ ಎಲ್ಲವು ನನಗೆ ಅಚ್ಚರಿಯ ವಿಷಯವಾಗಿದ್ದವು..ಕೇವಲ ಅರ್ಧಗಂಟೆಯಲ್ಲಿ ಕುಂ.ವೀ ತುಂಬಾ ಹತ್ತಿರದವರೆನಿಸಿಬಿಟ್ಟರು...ನನ್ನನ್ನು ಅವರಿಗೆ ಪರಿಚಯಿಸುವ ಮೊದಲೆ ಪ್ರಮೋದ್ ಅವರಿಗೆ ನನ್ನ ಬೆಗ್ಗೆ ಎಲ್ಲಾ ಹೇಳಿಬಿಟ್ಟಿದ್ದ...ಹೀಗಾಗಿ ನನ್ನ ಬಗ್ಗೆ ಮೊದಲೆ ತಿಳಿದುಕೊಂಡಿದ್ದ ಕುಂ.ವೀ..ನನ್ನ ಆಸಕ್ತಿಯ ವಿಷಯಗಳ ಕುರಿತು ಮಾತನಾಡಲಾರಂಭಿಸಿದರು..ಕತೆ, ಹಾಡು, ನಾಟಕ, ಹೀಗೆ ಎಲ್ಲಾ ವಿಷಯಗಳ ಕಡೆಗೆ ನಮ್ಮ ಚರ್ಚೆ ಮುಖ ಮಾಡಿತು..

ಅವರೊಂದಿಗೆ ಮಾತನಾಡುತ್ತಾ ನಾನು ಹೊಸ ನಾಟಕ ಬರೆಯುತ್ತಿರುವುದಾಗಿ ಹೇಳಿದೆ..ಅದರ ಸಂಕ್ಷಿಪ್ತ ರೂಪವನ್ನು ಅವರಲ್ಲಿ ಹೇಳಿಕೊಂಡೆ..ತುಂಬಾ ಖುಷಿಯಿಂದ ಕುಂ.ವೀ "ಬೇಗ ಬರೀರಿ..ನಮ್ಮ ಭಳಾರೆ ಪುಸ್ತಕಂ ನಿಂದನೆ ಅದನ್ನ ಪ್ರಕಾಶಿಸೋಣ" ಎಂದು ಬಿಟ್ಟರು...ನನಗೆ ಆಕಾಶಕ್ಕೆ ಮೂರೇ ಗೇಣು..ನನ್ನ ಮೊದಲ ನಾಟಕ ಕೃತಿ ಅದೂ ಹೆಸರಾಂತ ಸಾಹಿತಿಯೊಬ್ಬರ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಸಂಭ್ರಮವನ್ನು ನೆನೆದು ಪುಳಕಿತನಾದೆ...ಅವರೊಂದಿಗೆ ಇದ್ದ ಮೂರು ದಿನವು ಆ ಹೊಸ ನಾಟಕದ ಕುರಿತ ವಿಚಾರಗಳು ತಲೆಯಲ್ಲಿ...

ಅಂದ ಹಾಗೆ ಅದರ ಕೆಲವು ಟಿಪ್ಪಣಿಗಳನ್ನು ಇನ್ನು ಮುಂದೆ ನಿಯತವಾಗಿ ಇಲ್ಲಿ ಬರೆಯುವೆ...ಪ್ರತಿಕ್ರೀಯಿಸಿ ಪ್ಲೀಸ್!!