Friday, March 26, 2010

ಪ್ರೇಮ ಪಕ್ಷಿಗಳ ಸಂತಾನೋತ್ಪತ್ತಿಯ ಕ್ಷಣಗಳನ್ನರಸುತ್ತ.......



ಅಸ್ಗರ್ ವಜಾಹತ್ ಅವರು ಬರೆದಿರುವ "ರಾವೀ ನದಿಯ ದಂಡೆಯ ಮೇಲೆ" ನಾಟಕದಲ್ಲಿ ಒಂದು ಮಾತು ಬರುತ್ತದೆ....."ನಮಗೆ ಯಾರಿಗೂ ಬದುಕನ್ನು ಕೊಡುವ ಶಕ್ತಿ ಇಲ್ಲ ಎಂದ ಮೇಲೆ ಅವರ ಜೀವವನ್ನು ತೆಗೆಯುವ ಅಧಿಕಾರವನ್ನು ನಮಗೆ ಕೊಟ್ಟವರಾರು...." ನಾಟಕದ ಈ ಮಾತು ಬರುವ ದೃಶ್ಯವನ್ನು ನಾನು ಸಂಯೋಜಿಸುವಾಗ ಮತ್ತು ಅದರ ತಾಲೀಮಿನಲ್ಲಿ ತೊಡಗಿಕೊಳ್ಳುವಾಗ ಇದರ ಅನುವಾದಕರಾದ ಇಟಗಿ ಈರಣ್ಣ ಅವರು ಅನೇಕ ಬಾರಿ ಕಣ್ಣೀರಿಟ್ಟಿದಾರೆ.......ಭಾವುಕರಗಿದ್ದಾರೆ. ಭಾವನೆಗಳನ್ನು ಕೆದಕಿ ಅದರೊಂದಿಗೆ ಅದ್ಭುತವಾಗಿ ಆಟವಾಡಬಲ್ಲ ನಾಟಕವಿದು....

ಮೊನ್ನೆ ನಾನು ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿದ್ದೆ...ಈ ನಾಟಕ ಹೊಸಪೇಟೆಯಲ್ಲಿ ಪ್ರದರ್ಶನಗೊಂಡು ಹತ್ತು ವರ್ಷಗಳಾದ ನಂತರವೂ ಅಲ್ಲಿನ ರಂಗಭೂಮಿಯ ಗೆಳೆಯ ಅಬ್ದುಲ್ ಅದನ್ನು ನೆನೆಪಿಗೆ ತಂದು ಬಹಳ ಸಂತೋಷಪಟ್ಟ.....ಮಾನವ ಸಂಬಂಧಗಳ ಬಗ್ಗೆ ಬಹಳ ಹೊತ್ತು ಮಾತನಾಡಿದ...ಎಪ್ರಿಲ್ ೧೦ ರಿಂದ ರಂಗ ತರಬೇತಿ ಶಿಬಿರ ನಡೆಸುತ್ತಿರುವುದಾಗಿಯೂ, ಒಂದೆರಡು ದಿನಗಳ ಮಟ್ಟಿಗೆ ಬಂದು ಶಿಬಿರಾರ್ಥಿಗಳಿಗೆ ತಾಲೀಮನ್ನು ನಡೆಸಿಕೊಡಬೇಕೆಂದು ಕೇಳಿಕೊಂಡ.....ತುಂಬ ಸರಳವಾಗಿ ಜೀವಿಸುತ್ತಿರುವ ವ್ಯಕ್ತಿ ಮತ್ತು ನಿಜವಾದ ರಂಗ ಕಾಳಜಿಯನ್ನು ಹೊಂದಿರುವಂತಹ ಮನುಷ್ಯ ಆತ....

ರಂಗಭೂಮಿ ನಮಗೆಲ್ಲ ನಿಜವಾದ ಮನ್ವಂಥರದ ಕಾಲವನ್ನು ಸೃಷ್ಟಿಸಿಕೊಡುತ್ತದೆ ಎಂಬುದಕ್ಕೆ ಈ ಎಲ್ಲ ಸಂಬಂಧಗಳೇ ಸಾಕ್ಷಿ...ಈ ಎಲ್ಲ ಗುಂಗಿನಲ್ಲೇ ನಾನು ಬೆಂಗಳೂರಿಗೆ ವಾಪಸ್ಸಾದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು (ಲವ್ ಬರ್ಡ್ಸ್) ನನ್ನನ್ನು ಕಂಡೊಡನೇ ಅಕ್ಕರೆಯಿಂದ ಗಲಾಟೆಮಾಡ ತೊಡಗಿದವು...ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರ ಹೇಳಿಕೆಯಂತೆ ಪ್ರೇಮ ಪಕ್ಷಿಗಳ ಸಂತಾನೋತ್ಪತ್ತಿಗೆ ಅನುಕೂಲವಾಗಲೆಂದು ಕೇವಲ ಹತ್ತು ದಿನಗಳ ಹಿಂದೆ ಅವುಗಳ ಪಂಜರದಲ್ಲಿ ಮಡಿಕೆಗಳನ್ನು ಕಟ್ಟಿದ್ದೆ.....ಸ್ವಲ್ಪ ದಿನಗಳ ವರೆಗೆ ಅದರ ಹತ್ತಿರಕ್ಕೂ ಹೋಗದಿದ್ದ ಇವು, ಕ್ರಮೇಣ ಆ ಮಡಿಕೆಗಳ ಒಳ ಹೊರಗೆ ಅಡ್ಡಾಡಿ, ಇದು ತಮ್ಮವೇ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದವು...ಇಂದು ನಾನು ಸುಮ್ಮನೇ ಅವುಗಳ ಹತ್ತಿರ ನೋಡುತ್ತ ಕುಳಿತಾಗ ಒಂದು ಜೋಡಿ ಪಕ್ಷಿ ಮಿಲನ ಮಹೋತ್ಸವದಲ್ಲಿ ತೊಡಗಿದ್ದವು....ತಕ್ಷಣ ನನ್ನ ಕ್ಯಾಮೆರಾದಲ್ಲಿ ಆ ಕ್ಷಣವನ್ನು ಸೆರೆ ಹಿಡಿದೆ....ಹಿಂದೆ ಪಾರಿವಾಳಗಳ ಸಂತಾನೋತ್ಪತ್ತಿಯ ಕಾಲವನ್ನು ಕ್ಷಣ ಕ್ಷಣವೂ ಬಿಡದಂತೆ ಸೆರೆಹಿಡಿದ ನಾನು ಗ ಅಂತಹ ಮತ್ತೊಂದು ಅಪರೂಪದ ಕೆಲಸಕ್ಕೆ ಕೈಹಾಕಿದ್ದೇನೆ.....

ನಾಟಕ, ಪರಿಸರ, ಪುಸ್ತಕ ಮಾತು ನಮ್ಮ ಸಾಂಸ್ಕೃತಿಕ ಕಾಳಜಿ ಇವುಗಳಿಂದಲ್ಲವೇ ನಮ್ಮ ನಿಜವಾದ ಸಂಬಧಗಳು ಹುಟ್ಟುವುದು ಮತ್ತು ಅದಕೊಂದು ಹೊಸ ಅರ್ಥ ಕಲ್ಪಿಸಿಕೊಡಲು ಸಾಧ್ಯವಾಗುವುದು.........