Thursday, August 19, 2010

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ....
















ಮಾನ್ಯ ಮುಖ್ಯ ಮಂತ್ರಿಗಳೇ,

ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು "ಮೌನಂ ಸಮ್ಮತಿ ಲಕ್ಷಣಂ" ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ.

ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ.

ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು. ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ. ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ "ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ". ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ.

ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ. ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ. ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ "ದೊಂಬರಾಟ" ವನ್ನು ನೋಡುತ್ತಿರುವುದು? ಬಳ್ಳಾರಿ - ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ?

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ?

ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.

ಇಂತಿ ನಿಮ್ಮವ
ಧನಂಜಯ ಕುಲಕರ್ಣಿ

Wednesday, August 4, 2010

ಕೈಲಾಸಂ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆಯ ಕೆಲವು ಚಿತ್ರಗಳು





















ಹೊಸಪೇಟೆಯಲ್ಲಿ
ಜುಲೈ ೩೧ ಹಾಗೂ ಆಗಷ್ಟ್ ೧ ರಂದು ನಡೆದ ಮುಂಗಾರು ರಂಗ ಸಮ್ಮಿಲನ ಹಾಗೂ ಕೈಲಾಸಂ ದಿನಾಚರಣೆಯ ಕೆಲವು ಚಿತ್ರಗಳು. ಆಗಷ್ಟ್ ರಂದು ಖ್ಯಾತ ರಂಗಭೂಮಿ ಕಲಾವಿದೆ ಡಿ. ಹನುಮಕ್ಕ ಅವರಿಗೆ ಕೈಲಾಸಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂದಿನ ದಿನವೇ ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕವನ್ನು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರು ಬಿಡುಗಡೆ ಗೊಳಿಸಿದರು. ಸಾವಿರ ಶಾಯಿರಿಗಳ ಸರದಾರ ಇಟಗಿ ಈರಣ್ಣ ಸಹ ಉಪಸ್ಥಿತರಿದ್ದರು.

Tuesday, July 27, 2010

ಸಂತ್ಯಾಗ ನಿಂತ 'ಧನ್ಯಾ'....

ಆತ್ಮೀಯರೇ,

ಈ ಮೊದಲು ನಿಮಗೆ ತಿಳಿಸಿದಂತೆ ನನ್ನ ಬ್ಲಾಗ್ ಪುಸ್ತಕದ ಬಿಡುಗಡೆ ಇದೇ ದಿನಾಂಕ ೨೯ ರಂದು ಆಗಬೇಕಿತ್ತು. ಕಾಲಲ್ಲಿ ನಾಯಿ ಗೆರೆಯನ್ನಿಟ್ಟುಕೊಂಡಂತೆ ತಿರುಗಾಡುತ್ತಿರುವ ನಾನು ಅನಿವಾರ್ಯ ಕಾರಣಗಳಿಂದ ಇದನ್ನು ಎರಡು ದಿನಗಳ ಮಟ್ಟಿಗೆ ಮುಂದೂಡುತ್ತಿದ್ದೇನೆ..ದಯವಿಟ್ಟು ಕ್ಷಮಿಸಿ...ಆಗಷ್ಟ್ ೧ ರಂದು ಹೊಸಪೇಟೆಯ ಪಂಪ ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಪುಸ್ತಕ ಬಿಡುಗಡೆಯಾಗಲಿದೆ. ಅಂದು ನಮ್ಮೊಂದಿಗೆ ನಾಡಿನ ಹೆಸರಾಂತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ. ಕುಂ.ವೀ ಇರುತ್ತಾರೆ. ಸಾವಿರ ಶಾಯಿರಿಗಳ ಸರದಾರ ಶ್ರೀ. ಇಟಗಿ ಈರಣ್ಣ ಅವರು ಪ್ರಾಧ್ಯಾಪಕ ವೃತ್ತಿಯಿಂದ ಅಂದು ನಿವೃತ್ತಗೊಳ್ಳಲಿರುವುದರಿಂದ ಅವರಿಗೆ ಈ ಪುಸ್ತಕ ಅರ್ಪಿತವಾಗಲಿದೆ. ಗೆಳೆಯ ಮಣಿಕಾಂತ್ ಸಹ ಅಂದು ನಮ್ಮೊಡನಿದ್ದಾರೆ.... ಅಂದಿನ ದಿನವೇ ಪುಸ್ತಕ ಬಿಡುಗಡೆಯ ನಂತರ ನಾನು ವಿನ್ಯಾಸಗೊಳಿಸಿ, ನಿರ್ದೇಶನ ಮಾಡಿದ ಚಂದ್ರಶೇಖರ್ ಕಂಬಾರ್ ಅವರ "ಜೋಕುಮಾರ ಸ್ವಾಮಿ" ನಾಟಕವನ್ನು ಕನ್ನಡ ಕಲಾ ಸಂಘದ ಗೆಳೆಯರು ಅಭಿನಯಿಸಲಿದ್ದಾರೆ. ಇಂತಹ ಅಪರೂಪದ ಬಣ್ಣದ ಸಂಜೆಯ ಸವಿಯನ್ನು ಅನುಭವಿಸಲು ನೀವಿಲ್ಲದಿದ್ದರೆ ನನಗೆ ಏನೊ ಕಳೆದುಕೊಂಡ ಅನುಭವ...ದಯವಿಟ್ಟು ಬನ್ನಿ...

ಅಂದ ಹಾಗೆ ನನ್ನ ಪುಸ್ತಕಕ್ಕೆ ಹಿರಿಯ ಪತ್ರಕರ್ತ ಗೆಳೆಯರಾದ ಶ್ರೀ. ಜೆ.ಎನ್. ಮೋಹನ್ ಅವರು ಮುನ್ನುಡಿಯನ್ನು ಬರೆದಿದ್ದಾರೆ...ಓದಿ.....

'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ, ಅದಕ್ಕೆ ಇನ್ನಷ್ಟು ಭಯ ಹುಟ್ಟಿಸುವ ಗಂಭೀರತೆ ನೀಡಲೆಂದೇ ಇರುವ ಬುಲ್ಗಾನಿನ್ ಗಡ್ಡ, ಅದಕ್ಕೆ ನನ್ನ ಪಾಲೂ ಇರಲಿ ಎಂದು ಹೇಳುವ ಕನ್ನಡಕ, ಅದಕ್ಕೆಲ್ಲ 'ಅಹುದಹುದು' ಎಂಬ ಮುದ್ರೆ ಒತ್ತುವ ಅವರ ಹೈಟು ಮಾತ್ರ ನೋಡಿ ಗೊತ್ತಿದ್ದ ಧನಂಜಯ ಕುಲಕರ್ಣಿಯವರನ್ನು ಒಂದೇ ಏಟಿಗೆ 'ಧನ್ಯಾ' ಆಗಿ ಮಾಡಿ ಬಿಟ್ಟಿತಲ್ಲ ಅದೇ 'ನೆನಪುಗಳ ರಾವೀ ನದಿಯ ದಂಡೆ' ಯ ಸಕ್ಸಸ್.

ಪ್ರೊ ಜಿ ಎಸ್ ಸಿದ್ಧಲಿಂಗಯ್ಯ ಹೇಳುತ್ತಿದ್ದ ಒಂದು ಮಾತು ನನಗೆ ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಹಸು ಕರುವಿಗೆ ಜನ್ಮ ಕೊಟ್ಟ ತಕ್ಷಣ ಅದನ್ನು ತನ್ನದಾಗಿಸಿಕೊಳ್ಳುವುದಿಲ್ಲವಂತೆ. ಆದರೆ ಕರುವಿನ ಮೈ ಮೇಲಿರುವ ಲೋಳೆಯನ್ನು ನೆಕ್ಕಿ ಸ್ವಚ್ಚ ಮಾಡುತ್ತಾ ಮಾಡುತ್ತಾ ಅದನ್ನು ಬಿಟ್ಟಿರಲಾರದಷ್ಟು ನಂಟು ಬೆಳಸಿಕೊಳ್ಳುತ್ತದೆ ಅಂದಿದ್ದರು. exactly, 'ನೆನಪುಗಳ ರಾವೀ ನದಿಯ ದಂಡೆ' ಯ ಒಂದೊಂದೇ ಪುಟ ಮುಗಚುತ್ತಾ, ಮುಗುಚುತ್ತಾ ಹೋದಂತೆ ಒಂದು ರೀತಿಯ ನಂಟು ಬೆಳೆದುಬಿಡುತ್ತದೆ. ಧನಂಜಯ ಕುಲಕರ್ಣಿ 'ಧನ್ಯಾ..' ಆಗಿ ಬದಲಾಗಿಬಿಡುತ್ತಾರೆ.

ಧನಂಜಯ ನನಗೆ ನಿಜಕ್ಕೂ ಗೊತ್ತಿದ್ದದ್ದು ಅವರ ಪಿ ಆರ್ ಓ ಪೋಷಾಕಿನಲ್ಲಿ. ಆದರೆ ಅವರಿಗೆ ಆ ಪೋಷಾಕು ನಾಟಕದ ಪಾತ್ರವೊಂದಕ್ಕೆ ಬಳಸುವ ಪೋಷಾಕಿನಂತೆ ಮಾತ್ರ ಎಂದು ಗೊತ್ತಾದದ್ದು ನಾನೂ ಈ 'ರಾವೀ ನದಿಯ ದಂಡೆ'ಯಲ್ಲಿ ನಿಂತಾಗ. ಧನಂಜಯ ಹೇಳಿ ಕೇಳಿ ನಾಟಕವೆಂಬ ಗುಂಗೀ ಹುಳುವಿನ ಬೆನ್ನತ್ತಿದಾತ. ಹಾಗಾಗಿಯೇ ಇಂದು ಇಲ್ಲಿ, ನಾಳೆ ಅಲ್ಲಿ, ಇಂದು ಈ ಬಣ್ಣ, ನಾಳೆ ಯಾವ ಬಣ್ಣವಾದರೂ ಸೈ, ಇಂದು ಈ ಪೋಷಾಕು, ನಾಳೆ ಇನ್ನೇನೋ.. ಎನ್ನುವಂತೆ ಆ ಗುಂಗೀ ಹುಳದ ಬೆನ್ನತ್ತಿ ನಡೆದಿದ್ದಾರೆ. ಆ ಬೆನ್ನತ್ತಿ ನಡೆದವನ ಒಳಗೆ ಒಬ್ಬ ಪತ್ರಕರ್ತನಿದ್ದಾನೆ, ರಂಗಕರ್ಮಿಯಿದ್ದಾನೆ, ಅಸಡ್ದಾಳ ತುಂಟನೊಬ್ಬನಿದ್ದಾನೆ, ಕಾಡುವ ಕಾಲೇಜು ಹುಡುಗನಿದ್ದಾನೆ..ಹಾಗೇ ಕಾಳಜಿ ಮಾಡುವ ಧನಂಜಯನೂ ಇದ್ದಾನೆ.

ಧನಂಜಯರಿಗೆ ಮತ್ತೆ ಮತ್ತೆ ನೆನಪುಗಳ ಲೋಕಕ್ಕೆ ಜಿಗಿಯುವ ಹುಚ್ಚಿದೆ. ಬೆಳಕನ್ನು ಕಂಡ ತಕ್ಷಣ ತಾನೇ ಹಾರಿ ಹೋಗಿ ಡಿಕ್ಕಿ ಹೊಡೆದು ರೆಕ್ಕೆ ಸುಟ್ಟುಕೊಳ್ಳುವ ಪತಂಗದಂತೆ.. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವನ್ನು ಹಚ್ಚಿಕೊಂಡು ಇವರೇ ಹಳೆಯ ನೆನಪುಗಳ ಬೆನ್ನಟ್ಟಿ ಹೋಗುತ್ತಾರೆ. ಇವರು ನೆನಪುಗಳ ಬೆನ್ನತ್ತುವ ತೀವ್ರತೆ ಕಂಡು ಅಚ್ಚರಿಯಿಂದ ನಿಂತಿದ್ದೇನೆ. ಧನಂಜಯ ತಾವೇ ಬಣ್ಣಿಸಿಕೊಳ್ಳುವಂತೆ ಒಬ್ಬ 'ಮಧುಗಿರಿ ಪಟ್ಟಣಕೆ ಹೋದ ಸಿದ್ಧಯ್ಯನೆಂಬ ಅಗಸ'. ಸಿದ್ಧಲಿಂಗಯ್ಯ ಅವರ 'ಕತ್ತೆ ಮತ್ತು ಧರ್ಮ' ಕವಿತೆಯಲ್ಲಿ ಸಿದ್ಧಯ್ಯ ಮತ್ತು ಅವನ ಕತ್ತೆಯ ಕಥೆ ಬರುತ್ತದೆ. ಕತ್ತೆಯನ್ನು ಮಣ್ಣು ಮಾಡಿದ ಜಾಗದಲ್ಲಿ ದೇಗುಲವೇ ಎದ್ದು ನಿಲ್ಲುವುದನ್ನು ಕಂಡ ಸಿದ್ಧಯ್ಯ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಾನೆ. ಹಾಗೆ ಧನಂಜಯ ಮತ್ತೆ ಮತ್ತೆ ತಮ್ಮ ಹಳೆಯ ನೆನಪುಗಳಿಗೆ ಮಾತ್ರವಲ್ಲ, ತಮ್ಮ ಹಳೆಯ ನೆನಪುಗಳ ಜಾಗಕ್ಕೂ ಹೋಗಿ ನಿಲ್ಲುತ್ತಾರೆ. ಹಿಂದೆ ತಾನೊಮ್ಮೆ ರಾತ್ರಿ ಮಲಗಬೇಕಾಗಿ ಬಂದ ಹೊಸಪೇಟೆ ಬಸ್ ನಿಲ್ದಾಣದ ಸೀಟು, ಹದಿನಾರು ವರ್ಷಗಳ ನಂತರ ಸಿಕ್ಕ ಗೆಳೆಯ ಪ್ರಮೋದ ತುರುವಿಹಾಳ, ಶಾಲೆಯಲ್ಲಿ ಟೀಚರ್ ಆಗಿದ್ದ ಲೋಕುರ್ ಮೇಡಂ, ದ ರಾ ಬೇಂದ್ರೆ ಕೈನಿಂದ ಪಡೆದ ಆ ಬಹುಮಾನ, ಬೆಂಗಳೂರಿನ ಮೈದಾನದಲ್ಲಿ ಹಾರಿಸಿದ ಗಾಳಿಪಟ, ವಿಮಾನ ನಿಲ್ದಾಣದಲ್ಲಿ ಕಂಡ ಗುಬ್ಬಚ್ಚಿ, ಹಂಪಿಯ ಲೋಟಸ್ ಮಹಲ್, ಅದೇ ಮಧು ದೇಸಾಯಿ ಕನಸುಗಳು, ನರಸಿಂಹನ ತರಲೆ, ಬಂಡು ಕುಲಕರ್ಣಿಯ ಅಮಾಯಕತೆ, ಅದೇ ರವಿ ಕುಲಕರ್ಣಿ, ದಿಲಾವರ್, ಸುರೇಶ. ತಾವೇ ಹುಟ್ಟುಹಾಕಿದ ಕಾಲ್ಪನಿಕ ಪಂಕಜಾ, ಶಾಯರಿಗಳ ತೇಲಿ ಬಿಡುವ ಇಟಗಿ ಈರಣ್ಣ, ತಮ್ಮನೆಂದು ತಬ್ಬಿಕೊಂಡ ಜಿ ಎಚ್ ರಾಘವೇಂದ್ರ, ಆ 'ಹಲ್ಲಾ ಬೋಲ್', ಆ ಸಫ್ದರ್ ಹಶ್ಮಿ, ಹೀಗೆ ಧನಂಜಯರ ನೆನಪಿನ ಬುತ್ತಿ ದ್ರೌಪದಿಯ ಕೈನಲ್ಲಿದ್ದ ಅಕ್ಷಯ ಪಾತ್ರೆಯಂತೆ. ಎಷ್ಟು ಮಂದಿ ಎಷ್ಟು ದಿನ ತಿಂದು ಮುಗಿಸಿದರೂ ಬೆಳೆಯುತ್ತಲೇ ಹೋಗುವ ಭಂಡಾರ.

ಯಾಕೋ ಧನಂಜಯರ ಈ ನೆನಪುಗಳ ಲೋಕ ಹೊಕ್ಕಾಗ ನನಗೂ, ನನ್ನ ಮಾತಂತಿರಲಿ ಎಲ್ಲರಿಗೂ ತಮ್ಮ ತಮ್ಮ ನೆನಪುಗಳು ಲೋಕ ಹರಡಿಕೊಳ್ಳುತ್ತಾ ಹೋಗುತ್ತದೆ. ಅಷ್ಟರ ಮಟ್ಟಿಗೆ 'ನೆನಪುಗಳ ರಾವೀ ನದಿಯ ದಂಡೆ' ನೆನಪುಗಳ ಲೋಕಕ್ಕೊಂದು ರಹದಾರಿ. ನೆನಪುಗಳ ಲೋಕ ಹೊಕ್ಕಲು ಪಾಸ್ ಪೋರ್ಟ್, ವೀಸಾ ಯಾಕೆ ಬೇಕು, ಈ ರಾವೀ ನದಿಯ ದಂಡೆಯೊಂದೇ ಸಾಕು..ಯಾಕೋ ಮತ್ತೆ ಮತ್ತೆ ಈ ನೆನಪುಗಳ ಮಾಲೆ ಓದುವಾಗ ಕಂಬಾರರ ಹಾಗೆ ' ನಾ ಕುಣೀಬೇಕ, ಮೈ ಮಣೀಬೇಕ, ಕಾಲ್ ದಣೀಬೇಕ ತಾಯಿ..' ಹಾಡು ನೆನಪಾಗುತ್ತದೆ. ಅಂತಹ ಹಾಡಿನ ಹರಯಕ್ಕೆ ಮರಳುವ ಮನಸ್ಸಾಗುತ್ತಿದೆ.

ಧನಂಜಯ ಅವರದ್ದು ನೆನಪುಗಳ ಲೋಕದಲ್ಲಿ ಕರಗಿ ಹೋಗುವ, ಹಳಹಳಿಕೆಯಲ್ಲಿ ಮುಗಿದು ಹೋಗುವ ಮನಸ್ಸಲ್ಲ ಎಂಬುದನ್ನು ಇಲ್ಲಿನ ಇತರ ಲೇಖನಗಳೂ ತೋರಿಸುತ್ತಿವೆ. ಪತ್ರಿಕೋದ್ಯಮ ಹಾಗೂ ರಂಗಭೂಮಿಯ ಬಗ್ಗೆ ಧನ್ಯಾ 'ಖಡಕ್' ಬರಹಗಳನ್ನು ನೀಡಿದ್ದಾರೆ. ಇವರ ಆಲೋಚನೆಯ ದಾರಿಗೆ ಅಡ್ಡ ಸಿಕ್ಕವರನ್ನು ನೇರಾನೇರ ಎದುರಿಸಿಯೇ ನಿಲ್ಲುತ್ತಾರೆ. ಸರಿ ಅಲ್ಲದ ದಾರಿಗೆ ಹೊರಳಿದವರನ್ನೂ ಮುಲಾಜಿಲ್ಲದೆ ನಿಲೆ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಈ ಎರಡೂ ರಂಗದ ಬಗ್ಗೆ ಬರೆದಿರುವ ಲೇಖನಗಳು ಸಾಕ್ಷಿ. ಧನಂಜಯ ತಮ್ಮ ರಂಗಭೂಮಿ ಬರವಣಿಗೆಯಲ್ಲಿ ಎತ್ತಿರುವ ಪ್ರಶ್ನೆಗಳ ಬಗ್ಗೆ ನನ್ನ ತಕರಾರು ಸಾಕಷ್ಟಿದೆ. ರಂಗಾಯಣ, ಮಲೆಗಳಲ್ಲಿ ಮದುಮಗಳು, ಲಿಂಗದೇವರು ಹಳೆಮನೆ ಗೆ ಸಂಬಂಧಿಸಿದಂತೆ ಇವರ ಪ್ರಶ್ನೆಗಳು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಧನಂಜಯರ ಬರಹಗಳು ನನಗೆ ಯಾಕೆ ಇಷ್ಟ ಎಂದರೆ ಅವರು ಬೆಣ್ಣೆ ಮಾತನಾಡುತ್ತಾ ಅಸಹನೆಯನ್ನು ಬಗಲಲ್ಲಿಟ್ಟುಕೊಳ್ಳುವವರಲ್ಲ. ಅದೇ ಧಾರವಾಡದ ಖಡಕ್ ರೊಟ್ಟಿಯಂತೆ ಹಿಂಗ್ಯಾಕಲೇ ಮಗನಾ.. ಅಂತ ಕೇಳಬಲ್ಲವರು.

ಧನಂಜಯ ಹಾಗೂ ನಾನೂ ರಂಗಭೂಮಿ ಬಗ್ಗೆ ಅವರು 'ವಿಜಯ ಕರ್ನಾಟಕ'ದಲ್ಲಿ ಎತ್ತಿದ, ಈ ಪುಸ್ತಕದಲ್ಲಿರುವ ಲೇಖನಗಳ ಬಗ್ಗೆ ಎದುರಾಬದುರಾ ಕುಳಿತು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಧನಂಜಯ ನಾನೂ ಇಬ್ಬರೂ ರಂಗಭೂಮಿಯ ರುಚಿ ಉಂಡಿದ್ದೇವೆ. ನಾನು ವಿಮರ್ಶೆ ಬರೆಯುತ್ತಾ ರಂಗಭೂಮಿ ಜೊತೆ ಒಂದಿಷ್ಟು ನಂಟು ಇಟ್ಟುಕೊಂಡಿದ್ದರೆ ಧನಂಜಯರದ್ದು ಸ್ಟ್ರೈಟ್ ಎಂಟ್ರಿ. ಮುಂಬೈನ ಪ್ರತಿಷ್ಠಿತ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಬಾರಿಸಿದ ಕೀರ್ತಿ ಧನಂಜಯರದ್ದು. ಮತ್ತು ಆ ಹ್ಯಾಟ್ರಿಕ್ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ. ಹೀಗಿರುವಾಗ ಧನಂಜಯ ಅವರು ರಂಗಭೂಮಿಯ ಬಗ್ಗೆ ಎತ್ತುವ ಪ್ರಶ್ನೆಯನ್ನು ಒಂದೇ ಏಟಿಗೆ ಜಾತಿಗನ್ನಡಿಯಲ್ಲಿ ನೋಡಿ ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಧನಂಜಯ 25 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ ಕಾರಣ ಅವರ ಆಕ್ಷೇಪ, ಆಕ್ರೋಶ, ಅಸಹನೆ ಎಲ್ಲವೂ ಚರ್ಚೆಗೆ ತೆರೆದಿಟ್ಟ ಬಾಗಿಲು.

'ಮಲೆಗಳಲ್ಲ್ಲಿ ಮದುಮಗಳು' ನಾಟಕವನ್ನು ಬಸವಲಿಂಗಯ್ಯ ಕೈಗೆತ್ತಿಕೊಂಡಾಗ ಇಷ್ಟು ಹಣವನ್ನು ಕರ್ನಾಟಕದ ಎಷ್ಟೋ ಭಾಗಕ್ಕೆ ಹಂಚಿ ಸಾಕಷ್ಟು ಹೊಸ ನಾಟಕಗಳು ಬರುವಂತೆ ಮಾಡಬಹುದಿತ್ತಲ್ಲಾ ಅಂತ ಧನಂಜಯರಿಗೆ ಅನಿಸುತ್ತದೆ, ಲಿಂಗದೇವರು ಹಳೆಮನೆ ಅವರನ್ನು ರಂಗಾಯಣದ ನಿರ್ದೇಶಕರಾಗಿ ನೇಮಕ ಮಾಡಿದಾಗ ನಾಟಕ ಬರೆದವರು, ಸಂಶೋಧನೆ ಮಾಡಿದವರು ಈ ಸ್ಥಾನಕ್ಕೆ ಯಾಕೆ ಅನಿಸುತ್ತದೆ. ರಂಗಾಯಣ ಏಕೆ ಮೈಸೂರಿನಲ್ಲಿ ಮಾತ್ರ ಕುಳಿತಿರಬೇಕು ಅನಿಸುತ್ತದೆ. ಹೀಗೆಲ್ಲಾ ಅನಿಸುವ ಅವರ ಪ್ರಶ್ನೆಗಳನ್ನು ಸುಲಭವಾಗಿ ಅಪಾರ್ಥ ಮಾಡಿಕೊಳ್ಳಬಹುದು. ಹಾಗೆ ಅಪಾರ್ಥ ಮಾಡಿಕೊಂಡ ರಂಗಕರ್ಮಿಗಳೂ ಇದ್ದಾರೆ. ಆದರೆ ಈಗ ಅವರ ಒಟ್ಟೂ ಲೇಖನಗಳನ್ನು ನಾನು ಓದುವಾಗ, ಅವರೊಡನೆ ಕೂತು ಮಾತನಾಡುವಾಗ ಅವರ ಎಲ್ಲಾ ನಕಾರ ಪ್ರಶ್ನೆಗಳ ಆಳದಲ್ಲಿರುವುದು ಅವರ ಧಾರವಾಡ ಪ್ರೀತಿಯೇ ಎನಿಸುತ್ತದೆ. ಉತ್ತರ ಕರ್ನಾಟಕದಲ್ಲಿ ರಂಗಾಯಣ ಆಗಬೇಕು, ಅದು ಸಕ್ರಿಯವಾಗಿ ಕೆಲಸ ಮಾಡಬೇಕು, ಒಂದು ಯೋಜನೆ ಹಿಡಿದು ಉತ್ತರ ಕರ್ನಾಟಕದ ರಂಗ ಕರ್ಮಿಗಳು ಧನ ಸಹಾಯ ಕೇಳಿದರೆ ತಿರಸ್ಕರಿಸುವ, ಘನ ಮೌನ ತಾಳುವ ಸರ್ಕಾರ ದೊಡ್ಡ ಮೊತ್ತದ ಹಣ ಒಂದೇ ನಾಟಕಕ್ಕೆ ಕೊಡುವುದು ಹೇಗೆ ಎನಿಸುತ್ತದೆ. ಈ ಎಲ್ಲಾ ಪ್ರಶ್ನೆಗಳೂ ಸಹಾ ಉತ್ತರವನ್ನು ಬಯಸುತ್ತದೆ ಮತ್ತು ಚರ್ಚೆಯನ್ನು ಅಪೇಕ್ಷಿಸುತ್ತದೆ.

ಗುಲ್ಬರ್ಗದಲ್ಲಿ ಮೂರು ವರ್ಷ ಜನರೊಡನೆ ಒಡನಾಡಬೇಕಾಗಿ ಬಂದ ನನಗೆ ಅದುವರೆಗೂ ಬಾಲಿಶ ಅನಿಸುತ್ತಿದ್ದ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಬೇಡಿಕೆ ಎಷ್ಟು ಒಡಲ ದಳ್ಳುರಿಯನ್ನು ಹೊಂದಿದೆ ಅನಿಸಿದೆ. ತೆಲಂಗಾಣ ಹೋರಾಟದ ಹಿನ್ನೆಲೆಯಲ್ಲೂ ಈ ತರಹದ ನಿರ್ಲಕ್ಷದ ನೋವು ಅಡಗಿದೆ. ಹಾಗಾಗಿಯೇ ನಾನು ಧನಂಜಯ ಕುಲಕರ್ಣಿ ಎತ್ತಿರುವ ಪ್ರಶ್ನೆಗಳನ್ನು ಅವರ ಕಣ್ಣಿನಿಂದ ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ವಾಗ್ವಾದಗಳು ಬೆಳೆದು ಅದು ಕುಲಕರ್ಣಿ ಅವರ ಚಿಂತನೆಯನ್ನು ಪ್ರಬುದ್ಧವಾಗಿಸಿದರೆ, ಮಾಗಿಸಿದರೆ ಇನ್ನೂ ಸಂತೋಷವೇ..

ಧನಂಜಯ ಕುಲಕರ್ಣಿ ಇದೇ ರೀತಿ ಮತ್ತೆ ಚರ್ಚೆ ಎತ್ತುವುದು ಪತ್ರಿಕೋದ್ಯಮದ ಬಗ್ಗೆ. ಮಾರ್ಗರೆಟ್ ಆಳ್ವಾ ಚುನಾವಣಾ ಪ್ರಚಾರದಲ್ಲಿ ದೊಡ್ಡ ದುಡ್ಡು ಮಾಡಿದ ಪತ್ರಕರ್ತರಿಂದ ಹಿಡಿದು, ಚುನಾವಣಾ ಸಮೀಕ್ಷೆಗಾಗಿ ಹಣ ಕೇಳುವ, ಬಿಟ್ಟಿ ಕಾರಿಗೆ ಹಾತೊರೆಯುವವರನ್ನೆಲ್ಲಾ ಬಯಲಿಗಿಡುತ್ತಾ ಹೋಗುತ್ತಾರೆ. ಆದರೆ ಸಮೀಕ್ಷೆಗೆ ಬಿಟ್ಟಿ ಕಾರು ಕೇಳಿದಾಗ ಖಡಕ್ ಆಗಿ ವರ್ತಿಸುವ ಇದೇ ಧನಂಜಯ ಕುಲಕರ್ಣಿ ಬೆಳಗಾವಿಯಲ್ಲಿ ಚುನಾವಣಾ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಾಗಿ ಬಂದಾಗ ತಾವೇ ಮುಂದಾಗಿ ಪತ್ರಕರ್ತರ ಕೈ ಬೆಚ್ಚಗೆ ಮಾಡುತ್ತಾರೆ. ಇವೂ ಚರ್ಚೆಯನ್ನು ಅಪೇಕ್ಷಿಸುತ್ತಿದೆ.

ರಾವೀ ನದಿಯ ದಂಡೆಯಲ್ಲಿ, ಧಫನ್, ಸ್ಪಾರ್ಟಕಸ್, ರಾಕ್ಷಸ, ನಾಯೀಕಥೆ, ಜೋಕುಮಾರಸ್ವಾಮಿ ನಾಟಕ ಆಡಿಸಿದ, ಕೃಷ್ಣ ಪಾರಿಜಾತಕ್ಕೆ ಬೆಳಕು ಹಂಚಿದ, ಬೇಲಿ ಮತ್ತು ಹೊಲ, ಒಂದು ಬೀದಿಯ ಕಥೆಯಲ್ಲಿ ಅಭಿನಯಿಸಿದ ಧನಂಜಯ ಕುಲಕರ್ಣಿಗೆ ಸಂತೆ ಸೇರಿಸಿಕೊಳ್ಳದೆ ಬದುಕಲು ಸಾಧ್ಯವೇ ಇಲ್ಲ. ಆ ಅರ್ಥದಲ್ಲಿ ಇವರೂ 'ಸಂತ್ಯಾಗ ನಿಂತ ಕಬೀರ'
-ಜಿ ಎನ್ ಮೋಹನ್

Wednesday, June 2, 2010

ಅಲ್ಲಿ ನೀವು ಇರಲೇ ಬೇಕು...


ನನ್ನ ಅನೇಕ ಗೆಳೆಯರು ಮೇಲಿಂದ ಮೇಲೆ ನನಗೆ ಹೇಳುತ್ತಿದ್ದರು. ನನ್ನ ಬ್ಲಾಗ್ ನಲ್ಲಿರುವ ಲೇಖನಗಳು ಒಂದೇ ಗುಟುಕಿನಲ್ಲಿ ಓದಲು ದೊರೆಯುವಂತೆ ಮಾಡು, ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿ ಪ್ರಯತ್ನಿಸು ಎಂದು ಪ್ರೀತಿಯಿಂದ ಗದರಿಸುತ್ತಿದ್ದರು. ಒಂದು ದಿನ ನಾನು ಹಾಗೇ ಸುಮ್ಮನೇ ಕುಳಿತು ಯೋಚಿಸುತ್ತಿರುವಾಗ ಇದನ್ನು ನಾನು ಯಾಕೆ ಮಾಡಬಾರದು ಎಂದೆನಿಸಿತು. ಅದರ ಫಲವೇ ಈಗ ನನ್ನ ಬ್ಲಾಗ್ ನಲ್ಲಿರುವ ಕೆಲವು ಲೇಖನಗಳು ಪುಸ್ತಕದಲ್ಲಿ ಕಾಣಿಸಿಕೊಳ್ಳಲಿವೆ.

ಬಿಡುಗಡೆಯ ದಿನಾಂಕ ಸಹ ನಿಗದಿಯಾಗಿದೆ...ಜುಲೈ ೨೯ ಟಿ.ಪಿ.ಕೈಲಾಸಂ ಅವರ ಜನ್ಮ ದಿನಾಚರಣೆ. ಹೊಸಪೇಟೆಯ ನನ್ನ ತಂಡ ಕನ್ನಡ ಕಲಾ ಸಂಘ ಇದನ್ನು ಪ್ರತಿ ವರ್ಷ ಅತ್ಯಂತ ವಿಶೇಷವಾಗಿ ಆಚರಿಸುತ್ತದೆ. ಅಂದಿನ ದಿನವೇ ಪುಸ್ತಕವನ್ನು ಬಿಡುಗಡೆ ಮಾಡುವುದೆಂದು ನಿರ್ಧರಿಸಿಯಾಗಿದೆ. ಹಿರಿಯ ಗೆಳೆಯರಾದ ಜಿ.ಎನ್. ಮೋಹನ್ ಅವರು ಇದಕ್ಕೆ ಮುನ್ನುಡಿ ಬರೆದುಕೊಡಲಿದ್ದಾರೆ. ನನ್ನ ಅಪರೂಪದ ಗೆಳೆಯ ಮಣಿಕಾಂತ್ ಅದಕ್ಕೆ ಹಿನ್ನುಡಿ ಬರೆಯಲಿದ್ದಾರೆ. ಅಂತೆಯೇ ನನ್ನ ಅನುಗಾಲದ ರಂಗಸಂಗಾತಿಗಳಾದ ದಿಲಾವರ್, ರವಿ ಕುಲಕರ್ಣಿ, ಯಶವಂತ್ ಸರದೇಶಪಾಂಡೆ, ಜಗುಚಂದ್ರ, ಡಾ. ಆಶ್ವಥ್ ಕುಮಾರ್ ಇವರು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳಲಿದ್ದಾರೆ.

ಒಟ್ಟಾರೆ ಪುಸ್ತಕವನ್ನು ವಿಭಿನ್ನವಾಗಿ ನಿಮ್ಮ ಮುಂದೆ ಇಡಬಯಸಿದ್ದೇನೆ...ಪುಸ್ತಕ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಲಿದೆ....ನೀವೆಲ್ಲ ನನಗೆ ಗದರಿದಂತೆ ನಾನೂ ಸಹ ಈಗ ಗದರುತ್ತಿದ್ದೇನೆ....ಪುಸ್ತಕವನ್ನು ಬಿಡುಗಡೆ ಮಾಡಲು ಬನ್ನಿ...ಜುಲೈ ೨೯ ರ ಸಂಜೆ ೬ ಗಂಟೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಿಮ್ಮನ್ನೆಲ್ಲ ನಾನು ಎದುರು ನೋಡುತ್ತಿರುತ್ತೇನೆ....


Friday, May 21, 2010

ತಪ್ಪು ಗ್ರಹಿಕೆ ಮತ್ತು ಅದಕ್ಕೆ ಸ್ಪಷ್ಟನೆ........

ಕಳೆದ ವಾರ ಪ್ರಜಾವಾಣಿಯ ವಾಚಕರ ವಾಣಿ ಅಂಕಣದಲ್ಲಿ "ರಂಗಾಯಣದಲ್ಲಿ ದೊಂಬರಾಟ" ಎಂಬ ಪತ್ರವನ್ನು ಬರೆದಿದ್ದೆ. ಅದಕ್ಕೆ ಇಂದು ಬೆಂಗಳೂರಿನಿಂದ ಜಿ.ಎನ್. ನಿಶಾಂತ್ ಅವರು ಪ್ರತಿಕ್ರೀಯಿಸಿ "ಕುವೆಂಪು ಬಗ್ಗೆ ಅಸಹನೆ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವೊಂದು ಸಲ ಪತ್ರದ ಒಳ ನೋಟ ಏನಿದೆ ಮತ್ತು ಅದರ ಹಿಂದಿನ ಕಾಳಜಿ ಎಂತಹುದು ಎಂದು ಅರ್ಥೈಸಿ ಕೊಳ್ಳದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ.

ನಾನು ನನ್ನ ಪತ್ರದಲ್ಲಿ ಎಲ್ಲಿಯೂ ಕುವೆಂಪು ಅವರ ಬಗ್ಗೆ ಅಸಹನೆಯನ್ನು ವ್ಯಕ್ತ ಪಡಿಸಿಲ್ಲ ಮತ್ತು ಆ ಯೋಗ್ಯತೆಯೂ ನನಗಿಲ್ಲ. ಸಿ.ಬಸವಲಿಂಗಯ್ಯ ಅವರ ಪ್ರತಿಭೆಯ ಬಗ್ಗೆ ಆಗಲೀ ಅವರ ಕೆಲಸದ ಬಗ್ಗೆಯಾಗಲೀ ಯಾರು ಕೂಡ ಅಪಸ್ವರ ಎತ್ತುವ ಹಾಗೆ ಇಲ್ಲ. ನಾನೂ ಸಹ ಬಸೂ ಅವರ ಹತ್ತಿರ ಕೆಲಸಮಾಡಿದ್ದೇನೆ, ಮತ್ತು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರಲು ಅವರು ನನಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವೇ ಕಾರಣ.

ರಂಗಾಯಣದ ಕುರಿತು ನಾನು ಮಾತನಾದುತ್ತಿರುವುದು ಇದೇ ಮೊದಲ ಸಲವೇನಲ್ಲ. ರಂಗಾಯಣದ ಬಗ್ಗೆ ಅಪಾರ ಪ್ರೀತಿ ವಿಶ್ವಾಸಗಳಿರುವುದರಿಂದಲೇ ಅದರ ಬಗ್ಗೆ ನಾನು ಕಾಳಜಿ ಪೂರ್ವಕವಾಗಿ ಲೇಖನಗಳನ್ನು ಬರೆದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿ, ನಾನು ರಂಗಾಯಣದ ವಿರೋಧಿ ಎಂಬರ್ಥದಲ್ಲಿ ಪ್ರತಿಕ್ರೀಯೆಗಳು ಬರಲಾರಂಭಿಸಿರುವುದು ದುರಂತ.

ನಾನಿಲ್ಲಿ ಪ್ರಶ್ನಿಸುತ್ತಿರುವುದು ವ್ಯವಸ್ಥೆಯನ್ನು ಹಾಗೂ ಸರಕಾರದ ಮಲತಾಯಿ ಧೋರಣೆಯನ್ನು. ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆಯೇ ಎಂಬ ನನ್ನ ಪ್ರಶ್ನೆಗೆ ನಿಶಾಂತ್ ಅವರು ಹಾಗಿದ್ದರೆ ಎಲ್ಲರೂ ಸೇರಿ ಪ್ರತಿಭಟಿಸೋಣ ಎಂದಿದ್ದಾರೆ. ಹಾಗಿದ್ದರೆ ಇಷ್ಟು ದಿನಗಳ ವರೆಗೆ ಈ ವಿಷಯ ನಿಮಗೆ ತಿಳಿದಿರಲಿಲ್ಲವೇ? ಧಾರವಾಡದಲ್ಲಿ ರಂಗಾಯಣ ಘಟಕ ಆರಂಭವಾದಾಗಿನಿಂದ ಅದು ಗೊಂದಲದ ಗೂಡಾಗಿಯೇ ಪರಿಣಮಿಸಿದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದು, ಅದು ಧಾರವಾಡದಲ್ಲಿಯೂ ಸಹ ಮುಂದುವರೆದು ರಂಗಭೂಮಿಯ ಎಲ್ಲ ರೀತಿಯ ಕೆಲಸಗಳಿಗೆ ಮೈಸೂರಿನಿಂದ ಜನರನ್ನು ಕರೆಯಿಸಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಕಡೆಗಣಿಸಿದ್ದೇಕೆ? ಹೋಗಲಿ ಇದುವರೆಗೆ ಧಾರವಾಡದ ರಂಗಾಯಣ ಸಾಧಿಸಿದ್ದಾದರೂ ಏನು? ಸರಕಾರದ ಎಲ್ಲ ಹಿರಿಯ ಅಧಿಕಾರಿಗಳು ರಜಾದಿನದ ಸವಿಯನ್ನು ಸವಿಯುವ ಹಾಗೆ ಬಂದು ಭರಪೂರ ಆಶ್ವಾಸನೆಗಳನ್ನು ಕೊಟ್ಟು ಮತ್ತೆ ರಾಜಧಾನಿಯ ಕಡೆಗೆ ತಮ್ಮ ಗಾಡಿಯನ್ನು ಬಿಡುತ್ತಾರೆ. ರಾಜಧಾನಿ ತಲುಪಿದ ನಂತರ ಅವರಿಗೆ ಇದಾವುದೂ ನೆನಪಿರುವುದಿಲ್ಲ.

ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಸರಕಾರ ಯಥೇಚ್ಛವಾಗಿ ರಂಗಚಟುವಟಿಕೆಗೆ ಹಣ ನೀಡುವುದಾದರೆ, ಉತ್ತರ ಕರ್ನಾಟಕದ ರಂಗಚಟುವಟಿಕೆಗೂ ಸಹ ಯಾಕೆ ನೀಡಬಾರದು? ನಾವು ಅನೇಕ ಸಲ ರಂಗಚಟುವಟಿಕೆಗಳಿಗಾಗಿ ಸರಕಾರಕ್ಕೆ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅವರಿಂದ ಇಂತಹ ಮನವಿಗಳಿಗೆ ಯಾವುದೇ ಉತ್ತರವಿರುವುದಿಲ್ಲ. ಇದ್ದರೂ ಸಹ ಅದು ನಕಾರಾತ್ಮಕವಾಗಿರುತ್ತದೆ. ಬಹುಶಃ ನಮ್ಮ ಜನರಿಗೆ ಇಲ್ಲಿನ ಜನರ ತರಹ ಲಾಬಿ ಮಾಡಲು ಬರುವುದಿಲ್ಲ ಎನಿಸುತ್ತದೆ. ಅಥವಾ ಅಂತಹ ಲಾಬಿಗೆ ನಾವು ಯೋಗ್ಯರಲ್ಲ ಎಂದು ಸುಮ್ಮನಾಗುತ್ತಾರೆ.


Tuesday, May 11, 2010

ರಂಗಾಯಣದಲ್ಲಿ ಮತ್ತೊಂದು ದೊಂಬರಾಟ...

ರಂಗಾಯಣ ಮತ್ತೆ ಈಗ ಸುದ್ದಿಯಲ್ಲಿದೆ. ನಮ್ಮ ನಾಡಿನ ಖ್ಯಾತ ರಂಗ ನಿರ್ದೇಶಕರಾದ ಶ್ರೀ. ಬಸವಲಿಂಗಯ್ಯ ಅವರು ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ರಂಗಕ್ಕೆ ತಂದು, ಅದನ್ನು ಬರೊಬ್ಬರಿ ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರ ಎದುರು ಬಿಡಿಸಿಟ್ಟಿದ್ದರಿಂದ ರಂಗಾಯಣ ಮತ್ತೆ ಸುದ್ದಿ ಮಾಡುತ್ತಿದೆ. ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಎಲ್ಲ ರಂಗಕರ್ಮಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಆದರೆ ಅದರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನೂ ಸಹ ಎತ್ತುತ್ತಿದ್ದೇನೆ. ನನಗೆ ಗೊತ್ತು ಇವುಗಳಿಗೆ ನನಗೆ ಉತ್ತರ ದೊರೆಯುವುದಿಲ್ಲ ಎಂದು. ಆದರೂ ರಂಗಭೂಮಿಯ ಒಬ್ಬ ಕಾರ್ಯಕರ್ತನಾಗಿ ಇವುಗಳನ್ನು ಎತ್ತುವ ಅನಿವಾರ್ಯತೆ ಇದೆ ಎಂದು ಭಾವಿಸಿ, ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಈ ಹಿಂದೆ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದಂತೆ ಈ ನಾಟಕವನ್ನು ಮೈಸೂರಿಗೆ ಸೀಮಿತಗೊಳಿಸಿ, ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳಿಗೇನು ಬರ ಬಿದ್ದಿತ್ತೇ? ಇಂತಹ ಪ್ರಯತ್ನ, ಪ್ರಯೋಗಗಳನ್ನು ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ನಡೆಸಿದ್ದರೆ ಅಲ್ಲಿನ ರಂಗಚಟುವಟಿಕೆಗಳಿಗೆ ಜೀವ ತುಂಬಿದಂತಾಗುತ್ತಿತ್ತಲ್ಲವೇ? ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೊಳಗಾಗಿರುವ ಉತ್ತರ ಕರ್ನಾಟಕ, ಸಾಂಸ್ಕೃತಿಕವಾಗಿಯೂ ನಿರ್ಲಕ್ಷಕ್ಕೊಳಗಾಗುತ್ತಿರುವುದಕ್ಕೆ ಇದೊಂದು ಜೀವಂತ ಸಾಕ್ಷಿ.

ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಇಂತಹ ಅದ್ದೂರಿ ನಾಟಕದ ತಯಾರಿ ಎಷ್ಟರ ಮಟ್ಟಿಗೆ ಸೂಕ್ತ? ಯಾವ ಉದ್ದೇಶಕ್ಕಾಗಿ ಈ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು? ಹಿಂದೆ ಪತ್ರಿಕೆಯಲ್ಲಿ ಸಂದರ್ಶನವೊಂದರಲ್ಲಿ ಬಸವಲಿಂಗಯ್ಯನವರು ಉಲ್ಲೇಖಿಸಿದಂತೆ ಈ ನಾಟಕ ನೋಡಿದ ಪ್ರತಿಯೊಬ್ಬರು ಮತ್ತೆ ಮತ್ತೆ ಕಾದಂಬರಿಯನ್ನು ಓದುವಂತೆ ಮಾಡುವುದೆ ಇದರ ಹಿಂದಿನ ಉದ್ದೇಶ. ಇದು ನಿಜವೇ ಆಗಿದ್ದರೆ ಅದು ಒಬ್ಬ ನಿಜವಾದ ರಂಗಕರ್ಮಿಯ ಕಾಳಜಿ ಅಲ್ಲವೇ ಅಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ವ್ಯರ್ಥ. ಇದರಲ್ಲಿರುವ ಸಾಮಾಜಿಕ ಕಳಕಳಿಯಾದರೂ ಏನು?

ಉತ್ತರ ಕರ್ನಾಟಕದ ಜನರ ಒತ್ತಾಸೆಯಂತೆ ಧಾರವಾಡದಲ್ಲಿ ರಂಗಾಯಣದ ಘಟಕವನ್ನು ತೆರೆಯಲಾಯಿತು. ಆದರೆ ಅದು ಏನನ್ನೂ ಸಾಧಿಸಲಿಲ್ಲ. ಅಲ್ಲಿಗೆ ಬಂದ ನಿರ್ದೇಶಕರೆಲ್ಲರೂ ಕೇವಲ ರಾಜಕೀಯ ಮಾಡುತ್ತ ಕಾಲಹರಣ ಮಾಡಿದರೇ ಹೊರತು, ಒಂದೇ ಒಂದು ಮಹಾತ್ವಾಕಾಂಕ್ಷೆಯ ಪ್ರಯೋಗವಾಗಲೀ ನಡೆಯಲಿಲ್ಲ. ಬದಲಾಗಿ ಧಾರವಾಡದಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲ ಎಂದು ಹಾರಿಕೆಯ, ಧಿಮಾಕಿನ ಮಾತುಗಳನ್ನಾಡುತ್ತ ಮತ್ತೆ ಮೈಸೂರಿನ ಕಡೆಗೆ ಹೊರಟುಹೊದರು.

ಬಸವಲಿಂಗಯ್ಯ ನಮ್ಮ ನಾಡು ಕಂಡ ಒಬ್ಬ ಉತ್ತಮ ರಂಗಕರ್ಮಿ, ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಇಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಭಿನ್ನವಾದ ರಂಗಚಳುವಳಿಯನ್ನು ರೂಪಿಸಿದ್ದರೆ ಅದಕ್ಕೊಂದು ಹೊಸ ಅರ್ಥ ಬರುತ್ತಿತ್ತು ಮತ್ತು ಕನ್ನಡ ರಂಗಭೂಮಿಗೆ ಒಮ್ದು ಹೊಸ ದಿಕ್ಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು. ನಮ್ಮ ರಂಗಭೂಮಿ ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ನಿಜ ಆದರೆ ಆರ್ಥಿಕವಾಗಿ ನಾವು ತುಂಬಾ ಬಡವರು. ಸಾರ್ವಜನಿಕರ ಹಣ ಈ ರೀತಿಯಾಗಿ ಅನವಶ್ಯಕವಾಗಿ ಪೋಲಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ.

ಅದೇ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಿ, ಅಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದರೆ, ಸ್ಥಳೀಯ ತಂಡಗಳಿಗೆ ಹೆಚ್ಚಿನ ಸ್ಪೂರ್ತಿ ನೀಡಿದಂತಾಗುತ್ತಿತ್ತು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗುತ್ತಿತ್ತು. ಸರಕಾರ ಏಕೆ ಈ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ? ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆ ಎಂಬ ನೀತಿಯೇನಾದರೂ ಇದೆಯೇ? ಅಥವಾ ಇದರ ಹಿಂದೆ ಬೇರೆ ಬೇರೆ ಒತ್ತಾಸೆಗಳಿರುವ ಪ್ರಬಲ ಲಾಬಿಯೊಂದು ಕಾರ್ಯನಿರ್ವಹಿಸುತ್ತಿದೆಯೇ? ಸಂಬಂಧಪಟ್ಟವರು ಉತ್ತರಿಸಿಯಾರೇ??

Saturday, May 8, 2010

ಇಂಗ್ಲೀಷ್ ಕವಿಗಳ ನೆನೆದದ್ದು ಹೀಗೆ....



ಈ ಹಿಂದೆ ನಾನು ಇಲ್ಲಿ ಬರೆದಿದ್ದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು ಸಂತಾನೋತ್ಪತ್ತಿ ಕ್ರೀಯೆಯಲ್ಲಿ ತುಂಬಾ ಬ್ಯೂಸಿ ಆಗಿವೆ ಅಂತ...ಅದರ ಫಲಿತಾಂಶವೇ ಈಗ ಮುರು ಪುಟ್ಟ ಪುಟ್ಟ ಪ್ರೇಮ ಪಕ್ಷಿಗಳ ಕಲರವ ಮನೆಯ ತುಂಬೆಲ್ಲ ಹಬ್ಬಿದೆ. ನಿನ್ನೆ ಆಕಸ್ಮಾತ್ ಆಗಿ ಒಂದು ಪುಟ್ಟ ಪಕ್ಷಿ ಗಡಿಗೆಯಿಂದ ತನ್ನ ಮುಖ ಹೊರಕ್ಕೆ ಮಾಡಿ ತಾಯಿಯನ್ನು ಪೀಡಿಸಿ ಗುಟುಕು ತೆಗೆದುಕೊಳ್ಳಲು ಹೋಗಿ ಪಂಜರದಲ್ಲಿ ಬಿದ್ದು ಬಿಟ್ಟಿದೆ. ತುಂಬ ಗಲಾಟೆ ಮಾಡುತ್ತಿತ್ತು. ಸರಿಯಾಗಿ ನಡೆದಾಡಲೂ ಬಾರದೆ, ಹಾರಲೂ ಬಾರದೇ ತುಂಬ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಆಫೀಸಿನಿಂದ ಬಂದವನೇ ಅದರ ಆವಾಂತರ ನೊಡಲಾರದೇ ಅದನ್ನು ಮತ್ತೆ ಅದರ ಗುಡಿಗೆ ಸೇರಿಸಲು ಹೋದಾಗ ದೊಡ್ಡದೊಂದು ಪಕ್ಷಿ ಪಂಜರದಿಂದ ಹೊರಕ್ಕೆ ಹಾರಿ ಮನೆಯ ತುಂಬೆಲ್ಲ ದೊಡ್ಡ ಗಲಾಟೆಯನ್ನೇ ಎಬ್ಬಿಸಿಬಿಟ್ಟಿತು. ಅದನ್ನು ರಮಿಸಿ, ಕರೆದು ಮತ್ತೆ ಅದನ್ನು ಪಂಜರದೊಳಕ್ಕೆ ಸೇರಿಸುವ ಹೊತ್ತಿಗೆ ನನ್ನ ಹೆಂಡತಿಗೆ ಹೋದ ಉಸಿರು ಮತ್ತೆ ವಾಪಸು ಬಂದತಾಗಿತ್ತು...ಈಗ ಮತ್ತೆ ಅವುಗಳ ಬದುಕು ಎಂದಿನಂತೆ ಸಾಗುತ್ತಿದೆ...ಅವುಗಳ ಸಂಸಾರ ದೊಡ್ಡದಾಗಿದೆ...ಅವುಗಳಿಗೊಂದು ಪುಟ್ಟ ಕಾಂಗ್ರ್ಯಾಟ್ಸ್!!!

ಇವಲ್ಲದೇ ನಾನು ನಾಲ್ಕು "ಪಿಂಚರ್ಸ್" ಸಾಕಿದ್ದೆ. ಪಿಂಚರ್ಸ್ ಗುಬ್ಬಚ್ಚಿಗಳಿಗಿಂತಲೂ ಅತ್ಯಂತ ಚಿಕ್ಕದಾದ, ತುಂಬ ಚುರುಕಾದ, ಪುಕ್ಕಲು ಪಕ್ಶಿಗಳು. ಕೇಸರಿ ಬಣ್ಣದ ಚುಂಚು ಹೊಂದಿರುವ ಇವು ಪ್ರೇಮ ಪಕ್ಷಿಗಳಿಗಿಂತಲೂ ಹೆಚ್ಚು ನೀರನ್ನು ಕುಡಿಯುತ್ತವೆ. ಯಾರೇ ಆಗಲಿ ನೋಡಿದ ಮೊದಲ ನೋಟಕ್ಕೆ ಮರುಳಾಗುವ ಆಕೃತಿ ಇವುಗಳದ್ದು.

ಅದೊಂದು ದಿನ ನಾನು ಹೀಗೆಯೇ ಗೆಳೆಯ ಮಣಿ ಜೊತೆ ಮಾತನಾಡುತ್ತಿದ್ದಾಗ ನಮ್ಮ ಮನೆಯಲ್ಲಿರುವ ಪಿಂಚರ್ಸ್ ಪಕ್ಷಿಗಳ ಬಗ್ಗೆ ಹೇಳಿದೆ. ಅವನ ಮಗಳು ನೀಲಿಗೆ ಪಕ್ಷಿಗಳೆಂದರೆ ಪಂಚಪ್ರಾಣ ಎಂದ. ಸರಿ ಬಂದು ಪಿಂಚರ್ಸ್ ತೆಗೆದುಕೊಂಡು ಹೋಗು ಎಂದೆ. ಆದರೆ ಒಂದು ಕರಾರು. ಒಬ್ಬನೇ ಬಂದರೆ ಕೊಡಲ್ಲ. ಜೊತೆಯಲ್ಲಿ ನೀಲಿ ಸಹ ಬರಲೇ ಬೇಕು ಅಂತ ಹೇಳಿದೆ. ಸರಿ ಇಬ್ಬರೂ ಸೇರಿ ಬಂದರು. ಮನೆಗೆ ಬಂದದ್ದೇ ತಡ ನೀಲಿ ನೇರವಾಗಿ ಪಿಂಚರ್ಸ್ ಇರುವ ಪಂಜರದ ಮುಂದೆ ಪ್ರತಿಷ್ಠಾಪನೆಗೊಂಡಳು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅವರಿಬ್ಬರನ್ನೂ ಪಕ್ಷಿಗಳ ಸಮೇತ ನನ್ನ ಕಾರಿನಲ್ಲಿ ಅವರ ಮನೆಯ ತನಕ ಬಿಟ್ಟು ಬಂದೆ.


ನಂತರದ ಕಥೆ ತುಂಬಾ ಕುತೂಹಲಕಾರಿಯಾಗಿತ್ತು. ಮಣಿಯ ಹೆಂಡತಿ ಪುಟ್ಟಿ ಹಾಗೂ ನೀಲಿ ಖಾಯಂ ಆಗಿ ಅವುಗಳ ಮುಂದೆ ಪ್ರತಿಷ್ಠಾಪನೆಗೊಳ್ಳತೊಡಗಿದರು. ನೀಲಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲ ಸಂಬಂಧಿಕರು, ಗೆಳೆಯ ಗೆಳತಿಯರಿಗೆ ತಮ್ಮ ಮನೆಗೆ ಆಗಮಿಸಿದ ನೂತನ ಅತಿಥಿಗಳ ಸುದ್ದಿ ಕೊಡುವುದೇ ಅವಳ ಪ್ರಥಮ ಆದ್ಯತೆಯಾಯ್ತು. ಹುಬ್ಬಳ್ಳಿಯಿಂದ ಜಿ.ಎಚ್ ಅವರ ಮಗ ಸಂದೇಶ್ ಫೋನಾಯಿಸಿ "ಪಕ್ಷಿ ನೋಡಲಿಕ್ಕೆ ಬೆಂಗಳೂರಿಗೆ ಬರಬೇಕಾ ಅಂಕಲ್" ಅಂತ ಕೇಳಿದ....


ಇದಕ್ಕೂ ಮುಂದು ವರೆದು ತಾಯಿ ಮಗಳಿಬ್ಬರೂ ಆ ನಾಲ್ಕು ಪಿಂಚರ್ಸ್ ಗಳಿಗೆ ನಾಮಕರಣ ಮಾಡಲು ಮುಂದಾದರು. ಅವುಗಳಿಗೆ ಸೂಕ್ತ ಹೆಸರನ್ನು ಹುಡುಕಲು ಶುರುಮಾಡಿದರು. ಪುಟ್ಟಿ ತನ್ನ ಬಿ.ಎ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ತಕ್ಷಣವೇ ಅವಳ ತಲೆಯಲ್ಲಿ ಹೊಳೆದ ಹೆಸರುಗಳು "ಶೆಕ್ಸ್ ಪೀಯರ್, ಎಮಿಲಿಯಾ, ಗ್ರೇಸಿ, ಮಿಲ್ಟನ್" ಎಂದು ಇಂಗ್ಲೀಷಿನ ಖ್ಯಾತ ಕವಿಗಳ ಹೆಸರುಗಳನ್ನಿಡಲಾಯಿತು. ಮಣಿ ಮಾರನೇ ದಿನ ಚಾಟ್ ನಲ್ಲಿ ಸಿಕ್ಕ ತಕ್ಷಣ ಈ ವಿಷಯವನ್ನು ತಿಳಿಸಿದ. ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ. ನಾನು ಮಣಿಗೆ ಹೇಳಿದೆ "ಅವು ನಮ್ಮ ಪಕ್ಷಿ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ...ನೀವ್ಯಾರು ಕೇಳೋದಿಕ್ಕೆ" ಅಂತ..ಅವನು ಅದಕ್ಕೆ ಆಯ್ತು ಸಾರ್ ಎಂದು ತಲೆ ದೂಗಿದ.

ಇಂದು ಮತ್ತೆ ಚಾಟ್ ನಲ್ಲಿ ಸಿಕ್ಕಾಗ ಮಣಿ ಹೇಳುತ್ತಿದ್ದ..."ಖ್ಯಾತ ಇಂಗ್ಲೀಷ್ ಕವಿಗಳ ಜೊತೆ ನಮ್ಮ ಬದುಕು ಸಾಗಿದೆ ಸಾರ್" ಎಂದು. ನಾನವನಿಗೆ ಹೇಳಿದೆ. "ಆ ಮಹಾಕವಿಗಳ ಬದುಕಿನ ಜೊತೆ ನಿಮ್ಮ ಬದುಕು ಬಂಗಾರವಾಗಲಿ ಎಂದು"...ತುಂಬ ಭಾವುಕನಾದ ಮಣಿ...

ಬದುಕಿನ ಬವಣೆಗಳೆಲ್ಲ ಮಾಯವಾಗಿ ಅಲ್ಲಿ ಬರೀ ಬೆಳದಿಂಗಳೇ ತುಂಬಿರಲಿ....ಎನ್ನುತ್ತಾ ನನ್ನ ಮಾತಿಗೆ ಪೂರ್ಣ ವಿರಾಮಹಾಕಿದೆ......