Sunday, December 5, 2010

ಬೇಲಿ ಮತ್ತು ಹೊಲ.....


ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ, ನಮ್ಮ ನಡುವಿನ ಅನನ್ಯ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ಕಿರುಕಾದಂಬರಿ ಬೇಲಿ ಮತ್ತು ಹೊಲ. ಇದರ ಹೆಸರೇ ಸೂಚಿಸುವಂತೆ "ಬೇಲಿ" ಆಳುವ ವ್ಯವಸ್ಥೆಯನ್ನು ಮತ್ತು "ಹೊಲ" ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸುತ್ತದೆ.

ಕಾನೂನಿನಡಿ ನುಸುಳುವ ಹಾಗೂ ಭ್ರಷ್ಟತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು ಹೇಗೆ ಆಳುವ ಪ್ರಕ್ರಿಯೆಯಲ್ಲಿ ಅಂತರ್ಗತನಾಗುತ್ತಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಹಾಗೂ ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪೋತುರಾಜು, ದಲ್ಲಾಳಿ ವ್ಯವಸ್ಥಯ ಹರಿಕಾರನಾಗಿ ವಿಠ್ಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ಕಹಳೆ ಪಾಟೀಲ್, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಸಾಮಾನ್ಯ ಪ್ರಜೆಯ ಪ್ರತಿನಿಧಿಯಾಗಿ ಚಂಬಸ್ವ, ಮಲ್ಲಕ್ಕ, ಬಡಕೊಟ್ರಯ್ಯ ಹಾಗೂ ಹಳ್ಳಿಗರು ಪ್ರತಿನಿಧಿಸುತ್ತಾರೆ.

ಇಡೀ ಕಥಾವಸ್ತುವಿನ ಅಂತರಾಳ ಪ್ರಜಾಸಮೂಹ ಅಥವಾ ಒಬ್ಬ ಸಾಮಾನ್ಯನಿಗೆ ಅನ್ಯಾಯ, ಶೋಷಣೆ, ಹಿಂಸೆಗೆ ಗುರಿಯಾದಾಗ ಪ್ರಸ್ತುತ ಸುದ್ದಿಮಾಧ್ಯಮಗಳು ಅದನ್ನು ತಿದ್ದುವ ಕಾಯಕದಲ್ಲಿ ಮಾಡುವ ಸದ್ದಾಗಲೀ, ಪ್ರಬುದ್ಧರು ನಡೆಸುವ ಪ್ರತಿಭಟನೆ, ಮುಷ್ಕರ, ಚಳುವಳಿಗಳಾಗಲೀ ಬರಬರುತ್ತಾ ತೀರಾ ಮಾಮೂಲಿಯೂ, ಯಾಂತ್ರಿಕವೂ ಆಗಿ ನಮ್ಮನ್ನಾಳುವ ಪ್ರಭುಗಳನ್ನು ತಿದ್ದುವ, ಶಿಕ್ಷಿಸುವ ಪರಿಣಾಮದ ತೀವ್ರತೆ ಕಳೆದುಕೊಳ್ಳುತ್ತಿವೆ ಎನ್ನುವುದು ನಮ್ಮ ಮುಂದಿರುವ ದುರಂತ..

ಇಂತಹ ಸಂದರ್ಭದಲ್ಲಿ ನ್ಯಾಯದಾನದ ಪ್ರಕ್ರಿಯೆ ಜನಸಾಮಾನ್ಯನ ಹಿತಕಾಪಾಡುವ ದಿಶೆಯಲ್ಲಿ ಇರುವ ವ್ಯಕ್ತಿಗತ ದೋಷಗಳು ಮತ್ತು ವ್ಯವಸ್ಥೆಯ ದೋಷಗಳನ್ನು ನಿವಾರಿಸುವ ಪರಿಣಾಮಕಾರಿ ಮಾರ್ಗವನ್ನು ನಾವೆಲ್ಲ ಇಂದು ಹುಡುಕಲೇಬೇಕಾಗಿದೆ.. ಒಟ್ಟಿನಲ್ಲಿ "ಬೇಲಿ" ಇದ್ದಾಗ ಪ್ರಜಾಸಮೂಹವೆಂಬ "ಹೊಲ" ದಲ್ಲಿ ಬೆಳೆದಿರುವ ಬೆಳೆಯನ್ನು ಪ್ರಾಮಾಣಿಕವಾಗಿ ರಕ್ಷಿಸಿಕೊಳ್ಳುವ ಪ್ರಜಾತಂತ್ರದ ಅರ್ಥವನ್ನೂ, ಕಾನೂನು ವ್ಯವಸ್ಥೆಯ ಅಸ್ತಿತ್ವವನ್ನೂ ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ಸಮಾಜ ನಿರಂಕುಶವಾಗಿ ಅರಾಜಕತೆಯತ್ತ ಸಾಗುತ್ತದೆ ಎಂಬುದು ಒಟ್ಟೂ ಕಾದಂಬರಿಯ ಒಳದನಿ.

ಈ ಕಾದಂಬರಿಯನ್ನು ಶ್ರೀ. ಜಿ.ಎಚ್. ರಾಘವೇಂದ್ರ ಅವರು ತಮ್ಮ ಎಂದಿನ ಹರಿತ ವಿಡಂಬನೆಗಳ ಮೂಲಕ ರಂಗಕ್ಕೆ ಅಳವಡಿಸಿದ್ದಾರೆ. ಇಂದಿನ ಪ್ರಸ್ತುತ ರಾಜಕೀಯ ಸನ್ನಿವೇಷಗಳಿಗೆ ಸಮೀಕರಿಸಿ, ವಿನ್ಯಾಸಗೊಳಿಸಿ ಅದನ್ನು ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘಕ್ಕೆ ನಿರ್ದೇಶಿಸುತ್ತಿದ್ದೇನೆ. ದಯವಿಟ್ಟು ಬನ್ನಿ...ನಾಟಕ ನೋಡಿ...


Thursday, November 18, 2010

ಮರ್ಯಾದೆಯಿಂದ ಖುರ್ಚಿಬಿಡಿ....

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ಹಗರಣಗಳಿಂದ ಜನ ಸಾಮಾನ್ಯರೆಲ್ಲ ಅಸಹ್ಯ ಪಟ್ಟುಕೊಳ್ಳುತ್ತಿದ್ದರೆ, ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮುಖ್ಯಮಂತ್ರಿಗಳು, ಅವರ ಸಂಪುಟದ ಸಹೋದ್ಯೋಗಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಇಂತಹ ತಪ್ಪನ್ನು ಮಾಡಿದ್ದಾರೆ..ಇದೇನೂ ಹೊಸದಲ್ಲ" ಎಂಬಂತಹ ಭಂಡತನದ ಹೇಳಿಕೆಗಳನ್ನು ಕೊಡುತ್ತ ಸಾಗಿರುವುದು ನಿಜಕ್ಕೂ ಹೇಸಿಗೆಯ ವಿಷಯ. ನಮಗೆಲ್ಲ ಗೊತ್ತಿದೆ ಹಿಂದಿನ ಸರ್ಕಾರಗಳ್ಯಾವವೂ ಸಂಪನ್ನವಾಗಿರಲಿಲ್ಲ ಎಂದು. ಒಂದು ಮಾದರಿ ಸರಕಾರ, ಉತ್ತಮ ಆಡಳಿತ ನಮಗೆ ದೊರೆಯಬಹುದೆಂಬ ಭರವಸೆಯ ಮೇರೆಗೆ ಬಿಜೆಪಿ ಪಕ್ಷವನ್ನು ಗದ್ದುಗೆಗೆ ಏರಿಸಿದ ಮತದಾರ ಇಂದು ಭ್ರಮನಿರಸನನಾಗಿರುವುದೂ ಸಹ ಅಷ್ಟೇ ಸತ್ಯ. ಇವೆಲ್ಲದಕ್ಕೆ ಕಳಶವಿಟ್ಟಂತೆ ನಗರಕ್ಕೆ ಆಗಮಿಸಿದ ಗುಜರಾತ್ ಮುಖ್ಯಮಂತ್ರಿ "ರಾಜೀವ್ ಗಾಂಧಿ ಬೃಷ್ಟಾಚಾರವನ್ನು ನಿಯಂತ್ರಿಸಲಿಲ್ಲ" ಎಂಬಂತಹ ಔಟ್ ಡೇಟೆಡ್ ಹೇಳಿಕೆಗಳನ್ನ ನೀಡಿ ತಮ್ಮ ಭಂಡತನವನ್ನು ಸಹ ಮೆರೆದರು. ಹೌದು ಹಿಂದಿನವರೆಲ್ಲರೂ ದುಷ್ಟರು, ಭೃಷ್ಟರು, ಲಂಚಕೋರರು. ನೀವು ಸಹ ಅದನ್ನೇ ಮಾಡುವುದಾದರೆ ನೀವೇಕೆ ಮಂತ್ರಿಗಿರಿಯ ಖುರ್ಚಿಯಮೇಲೆ ಕುಳಿತುಕೊಳ್ಳಬೇಕು. ಮರ್ಯಾದೆಯಿಂದ ಇಳಿದು ಹೋಗಿ. ಯಾರಿಗೆ ಯಾರೂ ಅನಿವಾರ್ಯವಲ್ಲ. ನೀವು ರಾಜ್ಯಭಾರ ಮಾಡದೇ ಹೋದರೂ ನಾವು ಇಲ್ಲಿ ಬದುಕುತ್ತೇವೆ..ಜೀವನ ನಡೆಸುತ್ತೇವೆ.

Friday, October 15, 2010

ಗಾಂಧೀ ಕ್ಲಾಸು ವಿಮಾನ ಏರಿದ್ದು...





ವಾಗಿಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ತೊಡಕುಗಳು, ಸಾಹಸಗಾಥೆಗಳು, ಅಲ್ಲಿನ ಜನರೊಂದಿಗಿನ ಒಡನಾಟ, ಮಲ್ಲೇಪುರಂ ಮಳೆಗಾಲದ ಹೊತ್ತಿನಲ್ಲಿ ತಮ್ಮ ಚಪ್ಪಲಿಯನ್ನು ಕಳೆದುಕೊಂಡು, ಇದ್ದೊಂದೇ ಚಪ್ಪಲಿಯನ್ನು ಶುಭ್ರವಾಗಿ ತೊಳೆದುಕೊಂಡು ಕುಂವೀ ಮನೆಗೆ ಬಂದು, ಅಲ್ಲಿರುವ ಚೋಳುಗಳ ಪರಿವಾರದ ಪರಿಚಯ ಮಾಡಿಕೊಂಡದ್ದು..ಹೀಗೆ ಮುಂತಾದ ರೋಚಕ ಅನುಭವಗಳನ್ನು ಓದುತ್ತ ಹೋದಂತೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತಿದ್ದವು..

ಬೆಳಗಿನ ಜಾವ ಆರು ಗಂಟೆಗೆ ಹೈದರಾಬಾದ್‍ಗೆ ಹೊರಡುವ ವಿಮಾನದಲ್ಲಿ ಕುಳಿತುಕೊಂಡು "ಗಾಂಧಿ ಕ್ಲಾಸು" ಓದುತ್ತಿರುವಾಗಿನ ಅನುಭವಗಳಿವು. ನಾಗರೀಕರಣದ ಗಂಧಗಾಳಿ ಗೊತ್ತಿಲ್ಲದ, ಮಾನವ ಸಂಬಂಧಗಳ ಅರ್ಥವಿಲ್ಲದ ಊರಿಗೆ ಚುನಾವಣಾ ಕೆಲಸಕ್ಕೆಂದು, ಅದೂ ಪಂಚಾಯ್ತಿ ಚುನಾವಣಾ ಕೆಲಸಕ್ಕೆಂದು ಹೋಗಿ, ಅಲ್ಲಿ ಪ್ರತಿಮನೆಯಲ್ಲಿ ತರಕಾರಿಗಳನ್ನಿಡುವ ರೀತಿಯಲ್ಲಿ ನಾಡಬಾಂಬ್ ಗಳನ್ನಿಟ್ಟುಕೊಂಡು, ಅದನ್ನೇ ಬದುಕು ಅಂತ ಅಪ್ಪಿಕೊಂಡು ಬದುಕುತ್ತಿರುವ ಜನರಮಧ್ಯೆ ಬದುಕಿ, ರಕ್ತಪಾತಗಳನ್ನು ಕಣ್ಣಾರೆಕಂಡು ಅದನ್ನು ಯಥಾವತ್ತಾಗಿ ವಿವರಿಸುವ ಕುಂವೀ..."ಹೀಗೂ ಉಂಟೇ" ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ....

ಇದೆಲ್ಲ ಓದುತ್ತಿದ್ದಂತೆ..."ಗಾಂಧಿ ಕ್ಲಾಸು" ಕುಂವೀ ಅವರ ಆತ್ಮಕಥೆಯೆಂಬ ಕಾದಂಬರಿಯನ್ನು ಇಡಿಯಾಗಿ ರಂಗದಮೇಲೆ ತರುವ ಯೋಚನೆಗಳು ತಲೆಯಲ್ಲಿ ತಹರೆವಾರಿಯಾಗಿ ಗಿರಕಿಹೊಡೆಯ ಹತ್ತಿದವು...ಅದೇ ಗುಂಗಿನಲ್ಲಿ "ಗಾಂಧಿ ಕ್ಲಾಸು" ಪುಸ್ತಕವನ್ನು ವಿಮಾನಿನಲ್ಲಿ ನನ್ನ ಮುಂದಿನ ಸೀಟಿನ ಹಿಂದೆ ಇರುವ ಸ್ಥಳದಲ್ಲಿ ಇಟ್ಟು ಯೋಚನೆಯಲ್ಲಿ ಮುಳುಗಿದೆ..ಮುಂದೆ ಹೈದರಾಬಾದ್ ನಿಲ್ದಾಣ ಬಂತು..ನನ್ನ ಲಗೇಜು ತೆಗೆದುಕೊಂಡು ವಿಮಾನದಿಂದ ಇಳಿದು ಹೊರನಡೆದೆ...ನಿಲಾಣದಿಂದ ಹೊರಬಂದ ನಂತರ "ಗಾಂಧಿ ಕ್ಲಾಸು" ವಿಮಾನು ಏರಿ ಅಲ್ಲಿಯೇ ಪವಡಿಸುತ್ತಿರುವುದು ಗಮನಕ್ಕೆ ಬಂತು..ತುಂಬ ಚಡಪಡಿಸಿದೆ...ಕೂಡಲೇ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಅಳಲನ್ನು ತೋಡಿಕೊಂಡು, ಪುಸ್ತಕವನ್ನು ಹಿಂತಿರುಗಿಸಲು ವಿನಂತಿಸಿದೆ...ಕೂಡಲೇ ಕಾರ್ಯತತ್ಪರರಾದ ಅಧಿಕಾರಿಗಳು ೨-೩ ಕಡೆ ಫೋನಾಯಿಸಿ, ಅರ್ಧಗಂಟೆಯ ನಂತರ ಅದನ್ನು ನನ್ನ ಕೈಗಿತ್ತು, ಒಂದು ಬಿಳಿ ಕಾಗದದ ಮೇಲೆ ನನ್ನಿಂದ ಪ್ರಾಮಿಸರಿ ನೋಟ್ ಬರೆಸಿಕೊಂಡರು.....

ಹೀಗೆ ಗಾಂಧಿ ಕ್ಲಾಸು ವಿಮಾನ ಏರಿದಂತೆಯೇ ರಂಗದ ಮೇಲೆಯೂ ಏರಲಿದೆ ಇಷ್ಟರಲ್ಲಿಯೇ !!!!!

Saturday, September 18, 2010

ಎನ್ನ ಕಾಯವ....



ಮಾನವತೆಯ ಹಿಮಾಲಯ ಪರ್ವತ ಅಸ್ತಂಗತವಾಗಿದೆ. ೯೭ ವರ್ಷಗಳ ಸಾರ್ಥಕ ಜೀವನಗಳನ್ನು ನಡೆಸಿ, ತಮ್ಮ ಅಂಧತೆಯ ಮೂಲಕ ಕಣ್ಣಿದ್ದವರಿಗೆ ಬಾಳಿನ ದಾರಿದೀಪವಾಗಿ ಬಾಳಿದ ಪುಟ್ಟಜ್ಜಯ್ಯ ತಮ್ಮ ಇಹಲೋಕದ ಎಲ್ಲ ವ್ಯವಹಾರಗಳನ್ನು ಮುಗಿಸಿ ಸಾಗಿಬಾರದ ದಾರಿಗೆ ನಡೆದು ಬಿಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಾಗರವೇ ಅವರ ಮಾನವೀಯತೆಗೆ, ಸರಳತೆಗೆ ಸಾಕ್ಷಿಯಾಯಿತು.

ತಮ್ಮ ಜೀವನದುದ್ದಕ್ಕೂ ಸಂಗೀತದ ವಿವಿಧ ಮಜಲುಗಳಲ್ಲಿ ಅಗಾಧ ಪರಿಶ್ರಮ ಮತ್ತು ಶೃದ್ಧೆಗಳಿಂದ ಮೇರುಶಿಖರಕ್ಕೇರಿದ, ಮತ್ತು ಸಾವಿರಾರು ಜನರಿಗೆ ದಾರಿದೀಪವಾಗಿ, ಮಾರ್ಗದರ್ಶಕರಾಗಿ ಬದುಕಿ ಬಾಳಿದ ಹಿರಿಯ ಚೇತನಕ್ಕೆ ಅವರ ಅಂತಿಮ ಯಾತ್ರೆಗೆ ಲಕ್ಷಾಂತರ ಜನ ತೋರಿದ ಗಾನ ನಮನ ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ.

ಒಂದು ಕಡೆಯಿಂದ ಅವರ ಅಪಾರ ಸಂಖ್ಯೆಯ ಶಿಷ್ಯ ವೃಂದ, ಭಕ್ತರು, ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ಧಾವಿಸಿ ಬರುತ್ತಿದ್ದಂತೆಯೇ, ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಮಂತ್ರಿ ಮಹೋದಯರು ತಮ್ಮ ಕೆಂಪು ಗೂಟದ ಕಾರುಗಳಲ್ಲಿ ಬಂದು ತಮ್ಮ "ಕರ್ತವ್ಯ" ವನ್ನು ಪೂರೈಸುತ್ತಿದ್ದರು. ಕೆಲವೊಂದು ಬಾರಿ ಅದೇಕೋ ಏನೊ ಈ ರಾಜಕೀಯ ಮಂದಿ ತಮ್ಮ ಬುದ್ಧಿಗೆ ಹೆಚ್ಚಿನ ಕೆಲಸವನ್ನು ಕೊಡುವುದೇ ಇಲ್ಲ. ಕೇವಲ ಸ್ವಾರ್ಥಕ್ಕಾಗಿ ಎಲ್ಲವನ್ನು ನೋಡುವ ಮನೋಭಾವ ಹೊಂದಿದವರಂತೆ ಕಂಡುಬಿಡುತ್ತಾರೆ. ಅದನ್ನು ನಮ್ಮ ನಡುವೆ ನಡೆಯುತ್ತಿರುವ ದುರಂತ ಎನ್ನಬೇಕೋ, ಪ್ರಮಾದ ಎನ್ನಬೇಕೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಅಚಾತುರ್ಯ ಎನ್ನಬೇಕೊ ಅರ್ಥವಾಗುತ್ತಿಲ್ಲ.

ನೆನ್ನೆ ಕೂಡ ಪುಟ್ಟಜ್ಜಯ್ಯನವರ ಅಂತ್ಯಕ್ರೀಯೆಯ ಸಂದರ್ಭದಲ್ಲಿ ನಡೆದದ್ದೂ ಅದೇ. ಶುಕ್ರವಾರ ಮಧ್ಯಾಹ್ನ ೧೨.೨೦ ಕ್ಕೆ ಹಿರಿಯ ಚೇತನ ಇಹಲೋಕದೊಂದಿಗೆ ತನ್ನ ಕೊಂಡಿಯನ್ನು ಕಳಚಿಕೊಂಡಿತು. ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಈ ಸುದ್ದಿ ಬಿತ್ತರವಾಗತೊಡಗಿತು. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳದ್ದು, ಗೃಹ ಮಂತ್ರಿಗಳದ್ದು, ರಾಜ್ಯದ ಹಿರಿಯ ಅಧಿಕಾರಿಗಳದ್ದು ಘನ ಮೌನ. ಕಳೆದ ಒಂದು ವಾರದಿಂದ ಅವರ ಆರೋಗ್ಯ ತೀರ ಬಿಗಡಾಯಿಸಿ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಪುಣ್ಯಾಶ್ರಮಕ್ಕೆ ಅವರನ್ನು ಕರೆತರುವ ವರೆಗೂ ನಮ್ಮ ಮುಖ್ಯ ಮಂತ್ರಿಗಳು ಸೌಜನ್ಯಕ್ಕಾಗಿಯಾದರೂ ಅವರನ್ನು ಕಂಡು, ಅವರ ಆರೋಗ್ಯ ವಿಚಾರಣೆ ಮಾಡುವ ಚಿಂತೆಯನ್ನು ಸಹ ಮಾಡಲಿಲ್ಲ. ಬದಲಿಗೆ ಅವರಿಗೆ ಮತ್ತು ಅವರು ಕೆಲವು ಸಹೋದ್ಯೋಗಿಗಳಿಗೆ ಪೂರ್ವ ನಿಗದಿತವಾದ ಚೀನಾ ಪ್ರವಾಸ ಅತ್ಯಂತ ಪ್ರಮುಖವಾಗಿ ಬಿಟ್ಟಿತು. ಅದು ಹೋಗಲಿ. ಶುಕ್ರವಾರ ಮಧ್ಯಾಹ್ನ ಶ್ರೀಗಳ ನಿಧನದ ವಾರ್ತೆ ತಿಳಿಯುತ್ತಿದ್ದರೂ, ಶನಿವಾರ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಹುಬ್ಬಳ್ಳಿಗೆ ಬಂದು ಸರಕಾರಿ ರಜೆ ಘೊಷಿಸುವ ಅಗತ್ಯವೇನಿತ್ತು? ಸಾಲದ್ದಕ್ಕೆ ಪುಟ್ಟಜ್ಜಯ್ಯನವರ ಸ್ಮಾರಕಕ್ಕೆ ಸರಕಾರದಿಂದ ಐದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿ ತಮ್ಮ ಹೆಗಲ ಮೇಲಿನ ಜವಾಬ್ದಾರಿಯನ್ನು ತೊಳೆದುಕೊಂಡಂತೆ ಮುಖ್ಯಮಂತ್ರಿಗಳು ಮಾತನಾಡಿದರು. ಸಾಲದ್ದಕ್ಕೆ ಶ್ರೀಗಳಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಕೊಡುವ ಯೋಚನೆ ಸರ್ಕಾರಕ್ಕೆ ಇತ್ತು ಎಂಬತಹ ಬೇಜವಾಬ್ದಾರಿಯ ಹೇಳಿಕೆಗಳು.

ಈ ಎಲ್ಲ ಘೋಷಣೆಗಳು, ಪರಾಕುಗಳು ಮುಗಿಯುತ್ತಿದ್ದಂತೆಯೇ, ಒಂದಿಬ್ಬರು ಮಂತ್ರಿಗಳನ್ನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಬಿಟ್ಟು, ತಮ್ಮ ಉಳಿದೆಲ್ಲ ಮಂತ್ರಿ ಮಹೋದಯರೊಂದಿಗೆ ರಾಜಧಾನಿಗೆ ದೌಡಾಯಿಸಿದರು. ಅಲ್ಲಿ ಅವರು ನಡೆಸಿದ ಅತ್ಯಂತ ತುರ್ತು ಕಾರ್ಯವೆಂದರೆ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆ, ಲಾಬಿ ಇತ್ಯಾದಿ ಇತ್ಯಾದಿ. ಸಂಪುಟ ವಿಸ್ತರಣೆ ಕುರಿತಾದ ಚರ್ಚೆ, ಲಾಬಿಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರೆ ಯಾವ ಸೀಮೆ ಹಾಳಾಗುತ್ತಿತ್ತು? ತಮ್ಮ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯನ್ನು ಮೆರೆದು, ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ತಮ್ಮ ಮೇಧಾವಿತನವನ್ನು ಪ್ರದರ್ಶಿಸಬೇಕಿದ್ದ ಮುಖ್ಯಮಂತ್ರಿಗಳು ಎಂದಿನಂತೆ ಮತ್ತೆ ಹಾದಿ ತಪ್ಪಿದರು.

ನಾರ್ಮನ್ ಕಸಿನ್ಸ್ ಹೇಳಿರುವಂತೆ "ಸಾವು ಬದುಕಿನ ದೊಡ್ಡ ನಷ್ಟವೇನೂ ಅಲ್ಲ. ನಾವು ಬದುಕಿದ್ದಾಗ ನಮ್ಮೊಳಗೆ ಏನೇನು ಸಾಯುತ್ತದೆಂಬುದೇ ದೊಡ್ಡ ನಷ್ಟ". ಮುಖ್ಯಮಂತ್ರಿಗಳೇ ಬಹುಶಃ ಈ ಮಾತು ನಿಮಗೆ ಹಾಗೂ ನಿಮ್ಮ ಸಂಪುಟದ ಪರಿವಾರಕ್ಕೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ...

Friday, September 17, 2010

ಹೊಸ ನಾಟಕ ಚಿಂಗಿಯ ಗುಂಗಿನಲ್ಲಿ....

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನತೆ ಎಮ್ಬುದು ನಿಜಕ್ಕೂ ಇದೆಯಾ? ಹಾಗಾದರೆ ಎಲ್ಲಿದೆ? ಜಾತಿಗಳ ಮಧ್ಯೆ ವೈಷಮ್ಯ, ಲಿಂಗ ಬೇಧಗಳು ಮುಂತಾದವುಗಳ ಮಧ್ಯೆ ನರಳುತ್ತಿರುವ ಅಮಾಯಕರು ಕೇವಲ ರಾಜಕೀಯ ದಾಳಗಳಾಗುತ್ತಿಲ್ಲ, ಬದಲಿಗೆ ನಮ್ಮ ಸುತ್ತಮುತ್ತಲಿನವರ ವಕ್ರ ದೃಷ್ಟಿಗೆ ಬಿದ್ದು, ಅಸಹಾಯಕತೆಯಿಂದ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ಮುಗ್ಧ ಬುದ್ಧಿಮಾಂಧ್ಯ ಹೆಣ್ಣು ಮಗು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ, ಏನೂ ಅರಿಯದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಪರಿಸ್ಥಿತಿ ಹೇಗಿರುತ್ತದೆ? ಅದನ್ನು ಸಮಾಜ ಹೇಗೆ ಸ್ವೀಕರಿಸೀತು......

ಈ ಎಲ್ಲಾ ಪ್ರಶ್ನೆಗಳಿಗೆ ಮುನಿರಾಬಾದಿನ ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರು ತಮ್ಮ ಹೊಸ ನಾಟಕದಲ್ಲಿ ಉತ್ತರಿಸಿದ್ದಾರೆ. ಇದು ನಾನು ಕೈಗೆತ್ತಿಕೊಳ್ಳುತ್ತಿರುವ ಮುಂದಿನ ನಾಟಕ. ತುಂಬ ವಿಭಿನ್ನ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಾಳೆಯಿಂದ ಈ ನಾಟಕದ ಆರಂಭಿಕ ಹಂತದ ತಯಾರಿ ಹೊಸಪೇಟೆಯಲ್ಲಿ ಶುರು. ಪ್ರದರ್ಶನದ ದಿನಾಂಕವನ್ನು ಸಹ ನಿಮಗೆ ಇಷ್ಟರಲ್ಲಿಯೇ ತಿಳಿಸುತ್ತೇನೆ...ಬನ್ನಿ ನಾಟಕ ನೋಡಿ...

Saturday, September 4, 2010

ನನ್ನ ಕೆಲಸಕ್ಕೆ ಅವರು ಅರ್ಜಿ ಬರೆಯದೇ ಹೋಗಿದ್ದರೆ...

ನಮ್ಮ ಬದುಕನ್ನ ಹಸನಗೊಳಿಸಿ, ನಮ್ಮ ಬದುಕಿಗೆ ಹೊಸ ಭಾಷ್ಯ ಬರೆದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ನಾನು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಸೇರಿದಾಗಿನ ಮಾತುಗಳಿವು...ಈ ಮೊದಲು ತಿಳಿಸಿದಂತೆ ನಾನು ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಬಂದಿದ್ದಲ್ಲ...ಅದನ್ನು ಕಲಿಯಲೇ ಬೇಕು ಮತ್ತು ಅದರಲ್ಲಿ ನನ್ನ ಭವಿಷ್ಯವನ್ನು ಕಂಡು ಕೊಳ್ಳಬೇಕೆಂದು ಬಂದವನು...

ಮೊದಲಿನಿಂದಲು ಪತ್ರಿಕೆಗಳಿಗೆ ಬರೆಯುವ ಉತ್ಸಾಹ, ಆಸಕ್ತಿ ನನಗೆ ಇದ್ದುದರಿಂದ ಕ.ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯ ಅದೇನೋ ನನ್ನ ಮೇಲೆ ವಿಶೇಷ ವಾತ್ಸಲ್ಯ...ಅದೊಂದು ದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.ಬಾಲು ಸರ್ ಎಂದಿನಂತೆ ತಮ್ಮ ತರಗತಿಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರಿಗು ಅರ್ಜಿ ಹಾಕಲು ಹೇಳಿದರು. ನನ್ನನ್ನು ತಮ್ಮ ಚೇಂಬರಿಗೆ ಕರೆಯಿಸಿ ಅರ್ಜಿ ಹಾಕುವಂತೆ ತಾಕೀತು ಮಾಡಿದರು...ನಾನು ಹುಂ ಎಂದು ಸುಮ್ಮನಾದೆ...ಅದರ ಕಡೆ ಹೆಚ್ಚು ಗಮನ ಹರಿಸದೆ ಎಂದಿನಂತೆ ನನ್ನ ನಾಟಕ, ಓದು ಮುಂತಾದವುಗಳ ಕಡೆ ಗಮನ ಹರಿಸಿ ಅದನ್ನು ಮರೆತು ಬಿಟ್ಟೆ...

ಅರ್ಜಿಹಾಕಲು ಇನ್ನು ಎರಡು ದಿನ ಬಾಕಿ ಇರುವಾಗ ಬಾಲು ಸರ್ ತಮ್ಮ ಚೇಂಬರಿಗೆ ನನ್ನನ್ನು ಮತ್ತೆ ಕರೆಯಿಸಿ ತಮ್ಮ ಎಂದಿನ ಶೈಲಿಯಲ್ಲಿ "ಏನಯ್ಯಾ ಅಪ್ಲಿಕೇಶನ್ ಹಾಕಿದ್ಯಾ" ಎಂದರು. ನಾನು ಇಲ್ಲ ಸರ್..ನನ್ನ ಓದು ಮುಗಿದ ನಂತರ ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂದಾಗ ಅವರ ಸಿಟ್ಟು ನೆತ್ತಿಗೇರಿತ್ತು...ತಾವೇ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನನ್ನ ಪರವಾಗಿ ಅರ್ಜಿ ಬರೆದು ನನಗೆ ಕೆಳಗೆ ಸಹಿ ಮಾಡಲು ಹೇಳಿ ಕಛೇರಿಯ ಸಹಾಯಕನನ್ನು ಕರೆದು ಅದನ್ನು ಪೋಸ್ಟ್ ಮಾಡಲು ಹೇಳಿದರು..

ನಂತರ ಸಂ.ಕ ದಿಂದ ನನಗೆ ಲಿಖಿತ ಪರೀಕ್ಷೆಗೆ ಪತ್ರ ಬಂದಿತು...ನಾನು ಹಾಜರಾಗಲಿಲ್ಲ...ಸಂದರ್ಶನಕ್ಕೆ ಕರೆ ಬಂದಿತು...ಅದಕ್ಕೂ ಹೋಗಲಿಲ್ಲ..ಕೊನೆಗೆ ನನಗೆ ಕೆಲಸಕ್ಕೆ ಹಾಜರಾಗಲು ಕರೆ ಬಂದಿತು ಮತ್ತು ೧೯೯೪ ಡಿಸೆಂಬರ್ ೩೧ ರಂದು ಕೊನೆಯ ದಿನ ಎಂದು ನಿಗದಿ ಪಡಿಸಿ ಪತ್ರವನ್ನು ಕಳಿಸಿದರು...ಇದರಿಂದ ಬಾಲು ಸರ್ ತುಂಬ ಖುಷಿ ಪಟ್ಟಿದ್ದರು...

ಇಷ್ಟಾದರೂ ನಾನು ಕೆಲಸಕ್ಕೆ ಸೇರಬೇಕೆ ಬೇಡವೇ ಎಂದು ವಿಚಾರಮಾಡುತ್ತಿರುವಾಗ ನನ್ನನ್ನು ಮತ್ತೆ ತಮ್ಮ ಚೇಂಬರಿಗೆ ಕರೆಯಿಸಿ ಬೈದು ಕೆಲಸಕ್ಕೆ ಸೇರುವಂತೆ ಮಾಡಿದರು...

ಅಂದು ಬಹುಶಃ ಅವರು ನನ್ನನ್ನು ಈ ಪರಿ ವತ್ತಾಯಿಸದೆ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ? ನನ್ನ ಜೀವನಕ್ಕೆ ಒಂದು ಹೊಸ ಭಾಷ್ಯ ಬರೆದ ಬಾಲು ಸರ್ ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ... ಹಿ ಇಸ್ ಎ ಗ್ರೇಟ್ ಹ್ಯುಮನ್ ಬಿಯಿಂಗ್...ಹ್ಯಾಟ್ಸ್ ಆಫ್ ಸರ್...!!!