Thursday, November 26, 2009

ಕನ್ನಡ ರಂಗಭೂಮಿಗೆ ರಂಗಾಯಣ ಅನಿವಾರ್ಯವೇ?

ಇತ್ತೀಚೆಗೆ ನಾನು ರಂಗಾಯಣದಲ್ಲಿ ನಡೆಯುತ್ತಿರುವ ರಗಳೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಈಗ ಸಧ್ಯಕ್ಕೆ ಇದನ್ನು ಬರೆಯಲು ಮುಖ್ಯವಾದ ಕಾರಣವೆಂದರೆ ಸರ್ಕಾರ ಶ್ರೀ. ಲಿಂಗದೇವರು ಹಳೆಮನೆಯವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಕಮಾಡಿ ಧಿಡೀರನೆ ಆದೇಶ ಹೊರಡಿಸಿ ತನ್ನ "ಜವಾಬ್ದಾರಿಯನ್ನು" ಕಳೆದುಕೊಂಡಂತೆ ಪತ್ರಿಕೆಗಳಿಗೆ ಹೇಳಿಕೆಯನ್ನು ನೀಡಿರುವುದು.

ಇಲ್ಲಿ ಮುಖ್ಯವಾಗಿ ಸೈದ್ಧಾಂತಿಕವಾದ ಪ್ರಶ್ನೆ ನಮ್ಮನ್ನು ಕಾಡುತ್ತಿರುವುದೇನೆಂದರೆ ಸರಕಾರ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡುತ್ತಿರುವುದಕ್ಕೆ ಅನುಸರಿಸುತ್ತಿರುವ ಮಾನದಂಡ ಯಾವುದು? ಆ ಹುದ್ದೆಯ ಹಿಂದೆ ಆಕಾಂಕ್ಷಿಗಳು ನಡೆಸುತ್ತಿರುವ ಲಾಬಿಯ ಪ್ರಭಾವವೇ? ಒಟ್ಟಿನಲ್ಲಿ ರಂಗಾಯಣಕ್ಕೆ ಒಬ್ಬ ನಿರ್ದೇಶಕರನ್ನು ನೇಮಿಸಿ ತನ್ನ ಕೈ ತೊಳೆದುಕೊಂಡರೆ ಸಾಕೆನ್ನುವ ಮನೋಭಾವವಿರಬಹುದೇ? ಸರಕಾರದ ಯಾವ ನಿಲುವುಗಳೂ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿಲ್ಲ.

ಇಲ್ಲಿ ಒಂದು ಮಾತನ್ನು ಸ್ಪಷ್ಟಪದಿಸಲು ಇಚ್ಛಿಸುತ್ತೇನೆ. ಒಬ್ಬ ಸಾಹಿತಿಯಾಗಿ, ಭಾಷಾ ವಿಜ್ಜಾನಿಯಾಗಿ, ನಾಟಕ ರಚನಾಕಾರರಾಗಿ ಶ್ರೀ. ಲಿಂಗ ದೇವರು ಹಳೆಮನೆ ಅವರನ್ನು ಖಂಡಿತವಾಗಿಯೂ ಗೌರವಿಸೋಣ. ಆದರೆ ರಂಗಾಯಣಕ್ಕೆ ಬೇಕಾಗಿರುವುದು ಇವರಂಥವರಲ್ಲ. ಸರ್ಕಾರಕ್ಕೆ ರಂಗಾಯಣದ ರೂಪರೇಷೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆಯೇ ಸರಿಯಾದ ಅರಿವಿಲ್ಲವೆಂದು ಇಲ್ಲಿ ಸ್ಪಷ್ಠವಾಗುತ್ತದೆ. ರಂಗಾಯಣ ಒಂದು ಪ್ರಾಯೋಗಿಕ ಸಂಸ್ಥೆ. ಅದನ್ನು ಮುನ್ನಡೆಸಲು ಬೇಕಾಗಿರುವವರು ರಂಗಭೂಮಿಯಲ್ಲಿ ಪ್ರಾಯೋಗಿಕ ಅನುಭವವಿರುವಂಥವರು. ಪುಸ್ತಕಗಳನ್ನು ಬರೆದು, ತುಂಬಿದ ಸಭೆಯಲ್ಲಿ ಭಾಷಣಮಾಡಿ ತಮ್ಮ ಪಾಂಡಿತ್ಯವನ್ನು ತೋರಿಸುವವರಿಗೆ ರಂಗಾಯಣದ ನಿರ್ದೇಶಕ ಹುದ್ದೆ ಅಲ್ಲ. ಒಂದು ವೇಳೆ ರಂಗಾಯಣದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳಲು ಆ ಅನುಭವವಿರುವವರೇ ಬೇಕು ಎಂದಾದರೆ, ಈಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿದೆ. ರಂಗಾಯಣದ ಆಡಳಿತಾತ್ಮಕ ವಿಷಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೋಡಿಕೊಳ್ಳಬಹುದು. ರಂಗಭೂಮಿಯ ಕುರಿತು ಅಧ್ಯಯನ ಮಾಡಿರುವವರು, ಸಂಶೋಧನೆ ಮಾಡಿರುವವರು ಕರ್ನಾಟಕದಲ್ಲಿ ಇನ್ನೂ ಅನೇಕ ಜನ ಸಿಗುತ್ತಾರೆ. ಹಾಗಾದರೆ ಅವರನ್ನೇಕೆ ಈ ಹುದ್ದೆಗೆ ಪರಿಗಣಿಸಲಿಲ್ಲ? ರಂಗಾಯಣ ಮೈಸೂರಿನಲ್ಲಿರುವ ಮಾತ್ರಕ್ಕೆ ಆ ಹುದ್ದೆಗೆ ಆ ಭಾಗದವರು ಮಾತ್ರ ಲಾಯಕ್ಕು ಎಂಬ ಸರಕಾರದ ಮನೋಭಾವವೇ?

ನಾನು ಈ ಹಿಂದೆ ಕೂಡ ಪ್ರಸ್ತಾಪಿಸಿದ್ದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಇಂದು ಸಾಂಸ್ಕೃತಿಕ ವೇದಿಕೆ. ಅಲ್ಲಿನ ಕಲಾವಿದರೂ ಸಹ ಕೇವಲ ಮೈಸೂರಿನಲ್ಲಿ ಕುಳಿತು ರಾಜಕೀಯ ಮಾಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳನ್ನು ನೋಡಲಿ. ಅಲ್ಲಿನ ರಂಗಭೂಮಿಯ ಅಭಿವೃದ್ಧಿಗೆ ದುಡಿಯಲಿ. ತನ್ಮೂಲಕ ಅವರು ಸರಕಾರದಿಂದ ಪಡೆಯುತ್ತಿರುವ ಸಂಬಳಕ್ಕೆ ಒಂದು ನ್ಯಾಯವನ್ನು ಒದಗಿಸಲಿ. ಅದು ಬಿಟ್ಟು, ಇಡೀ ವರ್ಷ ಕಚ್ಚಾಡಿ, ಕಿತ್ತಾಡಿ, ಡಿಸೆಂಬರ್ ತಿಂಗಳಹೊತ್ತಿಗೆ "ಅಯ್ಯೋ ರಂಗಾಯಣಕ್ಕೆ ನಿರ್ದೇಶಕರು ಯಾರೂ ಇಲ್ಲ. ಈ ಬಾರಿಯ ಬಹುರೂಪಿ ನಾಟಕೋತ್ಸವ ನಡೆಯುವುದು ಹೇಗೆ" ಎಂದು ಗೋಲಾಡುವುದು ಯಾವ ನ್ಯಾಯ? ರಂಗಾಯಣ ಕೇವಲ ವರ್ಷಕ್ಕೊಂದು ಬಹುರೂಪಿಯಂತಹ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸಿದರೆ ಸಾಕಾ? ಅಲ್ಲಿಗೆ ಅದರ ಕಾರ್ಯವ್ಯಾಪ್ತಿ ಮುಗಿದು ಹೋಯ್ತಾ? ಹಾಗದರೆ ಈ ಕೆಲಸವನ್ನು ಕೇವಲ ರಂಗಾಯಣವೇ ಏಕೆ ಮಾಡಬೇಕು? ಬಹುರೂಪಿಯಂತಹ ನಾಟಕೋತ್ಸವಗಳನ್ನು ಕರ್ನಾಟಕ ನಾಟಕ ಅಕಾಡಮಿಯಾಗಲಿ ಅಥವಾ ಯಾವುದೇ ಕ್ರಿಯಾಶೀಲ ರಂಗತಂಡವಾಗಲೀ ಸಂಘಟಿಸಬಹುದು.

ಶ್ರೀ. ಲಿಂಗದೇವರು ಹಳೆಮನೆಯವರು ರಂಗಭೂಮಿಯ ಕುರಿತು ಸಾಕಷ್ಟು ಓದಿಕೊಂಡವರು, ಅನೇಕ ವಿಚಾರಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದವರು ಮತ್ತು ನಾಲ್ಕಾರು ನಾಟಕಗಳನ್ನು ರಚಿಸಿದವರು. ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರೆ ಯಾವ ಅಭ್ಯಂತರವಿರಲಿಲ್ಲ. ಆದರೆ ರಂಗಾಯಣದಂತಹ ಪ್ರಾಯೋಗಿಕ ಸಂಸ್ಥೆಗೆ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿರುವುದು ಖಂಡಿತವಾಗಿಯೂ ಸ್ವಾಗಾತರ್ಹವಲ್ಲ. ರಂಗಾಯಣಕ್ಕೆ ನಿರ್ದೇಶಕರು ಬೇಕೆ ಬೇಕು ಎಂದಾದರೆ, ನಮ್ಮ ರಾಜ್ಯದಲ್ಲಿ ಕ್ರಿಯಾಶೀಲರಾಗಿರುವ ಅನೇಕ ಜನ ರಂಗ ಕರ್ಮಿಗಳಿದ್ದಾರೆ. ಅಪಾರವಾದ ಪ್ರಾಯೋಗಿಕವಾದ ಅನುಭವದ ಹಿನ್ನಲೆಗಳನ್ನು ಹೊಂದಿದವರಿದ್ದಾರೆ. ಅಂಥವರನ್ನು ಸರಕಾರ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ ರಂಗಾಯಣದಲ್ಲಿರುವ ಎಲ್ಲ ಕಲಾವಿದರನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ, ಆಯಾ ಪ್ರದೇಶಗಳ ರಂಗಭೂಮಿಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತಾಗಲಿ. ಈ ಕುರಿತು ಧಾರವಾಡದಲ್ಲಿ ದಿನಾಂಕ ೧೨-೧೧-೨೦೦೯ ರಂದು ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ಯದರ್ಶಿಗಳು ಎಲ್ಲ ಹಿರಿಯ ರಂಗಕರ್ಮಿಗಳು, ಸಾಹಿತಿಗಳ ಎದುರಿನಲ್ಲಿಯೇ ಆಶ್ವಾಸನೆ ನೀಡಿ ಆಗಿಹೋದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಭರವಸೆ ನೀಡಿದ್ದರು. ಆದರೆ, ಅಂದಿನ ದಿನ ಅಲ್ಲಿ ನಡೆದ ಎಲ್ಲ ಚರ್ಚೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿ ಹೋಯ್ತು.

ಕೊನೆಯಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಕರ್ನಾಟಕ ರಂಗಭೂಮಿಗೆ ರಂಗಾಯಣ ಅನಿವಾರ್ಯವಲ್ಲ. ಅದಿಲ್ಲದೆಯೂ ಇಲ್ಲಿ ಅನೇಕ ರಂಗ ಚಟುವಟಿಕೆಗಳು ನಡೆದಿವೆ. ರಂಗಾಯಣ ನಿಜಕ್ಕೂ ಉಳಿಯಬೇಕೆಂದರೆ ಅದಕ್ಕೆ ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದಾಗದೇ ಹೋದಲ್ಲಿ ಮತ್ತೆ ಸಾರ್ವಜನಿಕರ ಹಣ ಪೋಲಾಗುತ್ತಲೇ ಹೋಗುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯುವ ಸಾಂಸ್ಕೃತಿಕ ರಾಜಕೀಯ ಕಚ್ಚಾಟವನ್ನು ಮತ್ತೆ ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ. ಮತ್ತು ಇದು ನಮ್ಮ ಕರ್ನಾಟಕ ರಂಗಭೂಮಿಯ ವಿಪರ್ಯಾಸಗಳಲ್ಲೊಂದು.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ ೦೯-೧೧-೨೦೦೯ ರಂದು ಪ್ರಕಟವಾದ "ರಂಗಾಯಣ... ಸಾಕು ಮಾಡಿ ರಾಮಾಯಣ" ಲೇಖನದ ಮುಂದುವರಿದ ಭಾಗವೆಂದು ಪರಿಗಣಿಸಬಹುದು..