Friday, July 31, 2009

ಬರಿಯಾಕಂತನ ಬದಕೇನಿ ಇನ್ನೂ ನಾನು....




"ನಿನ್ನ ಮುಂಗುರುಳು ನೋಡು
ಹ್ಯಾಂಗ ಬಾಗಿ ಬಾಗಿ ನಿನ್ನ
ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು...
ನೀ ಅವಕ್ಕ ಭಾಳ ಸಲಗೀ ಕೊಟ್ಟೀ
ಅಂತ ಕಾಣಸ್ತೈತಿ..
ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು..."

ಕನ್ನಡದಲ್ಲಿ ಯಾವ ಕಾಲಕ್ಕೂ ಚಾಲ್ತಿಯಲ್ಲಿರುವ ಅತ್ಯಂತ ಪ್ರಸಿದ್ಧ ಶಾಯಿರಿ ಇದು...ಇದರಲ್ಲಿ ಶೃಂಗಾರ, ಲಾಲಿತ್ಯ, ಸೊಗಸು, ಪ್ರೀತಿ ಎಲ್ಲವು ಇದೆ...ಆದರೆ ಯಾವ ಹಂತದಲ್ಲಿಯೂ ಅದು ನಿಮಗೆ ಅಶ್ಲೀಲ ಎಂದೆನಿಸುವುದಿಲ್ಲ....ಅದು ಬಿಡಿ...ಸ್ಪರ್ಶ ಚಿತ್ರದ ಈ ಹಾಡನ್ನೇ ಗಮನಿಸಿ...

"ಚಂದಕಿಂತ ಚಂದ ನೀನೆ ಸುಂದರ...
ನಿನ್ನ ನೋಡ ಬಂದ ಬಾನ ಚಂದಿರ..."

ಶಬ್ದಗಳ ಜೊತೆ...ಭಾಷೆಯ ಜೊತೆ ಅತ್ಯಂತ ಸರಳವಾಗಿ ಆಟವಾಡುವುದೆಂದರೆ ಇದು...ನಾನೀಗ ಇದನ್ನೆಲ್ಲಾ ಏಕೆ ಪ್ರಸ್ತಾಪಿಸಲು ಕಾರಣ ಇಷ್ಟೇ...ಅದೇಕೋ ಗೊತ್ತಿಲ್ಲ ಹಿರಿಯ ಮಾರ್ಗದರ್ಶಕರಾದ ಶ್ರೀ. ಇಟಗಿ ಈರಣ್ಣ ಇಂದು ಬೆಳಿಗ್ಗೆಯಿಂದ ತಮ್ಮ ಶಾಯಿರಿ ಗಜಲ್ ಗಳ ಮೂಲಕ ಬಹಳ ಕಾಡುತ್ತಿದ್ದಾರೆ..ಹೀಗಾಗಿ ಅವರ ಜೊತೆಗೆ ಕಳೆದ ಕೆಲವು ಮಧುರ ನೆನಪುಗಳನ್ನು..ಮಧುರ ಪಿಸುಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಆಸೆ...

೧೯೯೮ ರಲ್ಲಿ ನಾನು ನಿರ್ದೇಶಿಸಿದ ದಫನ ನಾಟಕ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ನಂತರ ಅದರ ಸಂತೋಷವನ್ನು ಆಚರಿಸಲು ಎಲ್ಲ ಗೆಳೆಯರು ಸೇರಿ ಹೊಸಪೇಟೆಯ ಹತ್ತಿರದ ಗುಂಡ್ಲುಪೇಟೆ ಪ್ರವಾಸಿಧಾಮಕ್ಕೆ ಹೋಗಿದ್ದೆವು...ಅದೇನೋ ಗೊತ್ತಿಲ್ಲ..ಬಹುಶಃ ನನ್ನ ಬಹುತೇಕ ಯೋಜನೆಗಳು, ಸಂಗೀತ ಸಂಯೋಜನೆ, ನಾಟಕದ ಪರಿಕಲ್ಪನೆ ಮುಂತಾದವುಗಳು ಕೈಗುಡಿದ್ದು "ಗುಂಡು" ಬಿದ್ದ ನಂತರವೇ...ಅಂದು ಕೂಡ ಹೀಗೆಯೇ ಆಯಿತು...ನನ್ನ ಬಹುದಿನದ ಕನಸಿನ ನಾಟಕವಾದ "ರಾವಿ ನದಿಯ ದಂಡೆಯ ಮೇಲೆ" ನಾಟಕವನ್ನು ನಾನು ಮಾಡಿಸುವ ಕನಸು ಕಾಣುತ್ತಿದ್ದೆ...ಅದನ್ನು ತಮ್ಮ ತಂಡಕ್ಕೆ ಮಾಡಿಸಬೇಕೆಂದು ಕನ್ನಡ ಕಲಾ ಸಂಘದ ಗೆಳೆಯರು ಬಯಸುತ್ತಿದರು....ಇವೆಲ್ಲ ಅಂತೆ ಕಂತೆಗಳ ಸುತ್ತ ಮುತ್ತ ನಡೆದಿತ್ತು...ಏಕೆಂದರೆ ಯಾರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಸರಿ ಇಟಗಿ ಈರಣ್ಣ ಅವರನ್ನು ಕೇಳಬೇಕೆಂದು ನಿರ್ಧರಿಸಿ ಅವರಿಗೆ ಗೆಳೆಯರು ಕೂಡಲೇ ಫೋನಾಯಿಸಿದರೆ...ಅವರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಕೊನೆಗೆ ನಾನೇ ದಾರಿ ತೋರಿಸಿಕೊಟ್ಟೆ ...ಮೈಸೂರಿನಲ್ಲಿ ನನ್ನ ಗೆಳೆಯರೋಬ್ಬರನ್ನು ಸಂಪರ್ಕಿಸಲು ತಿಳಿಸಿ ಅವರು ಅದರ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ...ಇದೆಲ್ಲ ಮಾತು ನಡೆಯುತ್ತಿರುವಾಗ ಎಲ್ಲರ ಗ್ಲಾಸುಗಳು ಬಹುತೇಕ ಮೂರನೆ ಬಾರಿ ತುಂಬಿದ್ದವು...ಗೆಳೆಯ ಬದರಿ ನಾರಾಯಣ "ಸರ್ ಇನ್ನ ನಾಕು ದಿನದಾಗ ಆ ಸ್ಕ್ರಿಪ್ಟ್ ನಿಮ್ಮ ಕೈಯಾಗ ಇರತದ....ನೀವು ನಾಟಕದ ತಯಾರಿ ಶುರು ಮಾಡ್ರಿ.." ಎಂದರು...ನಾನು ನಿಷೆದಾಗಿನ ಮಾತು ಕಿಷೆದಾಗ ಎನ್ನುವಂತೆ ತಲೆಯಲ್ಲಾಡಿಸಿ ನನ್ನ ಖಾಲಿಯಾದ ಗ್ಲಾಸಿಗೆ ಮತ್ತೆ ವಿಸ್ಕಿ ತುಂಬಿಸಿಕೊಂಡೆ...

ಮಾತಿಗೆ ಸರಿಯಾಗಿ ಮುಂದೆ ನಾಲ್ಕನೆ ದಿನಕ್ಕೆ ಬದರಿ ರಾವಿ ನದಿಯ ದಂಡೆಯ ಮೇಲೆ ನಾಟಕದ ಪ್ರತಿಯೊಂದಿಗೆ ನನ್ನ ಮುಂದಿದ್ದರು..ನಾಟಕದ ತಯಾರಿ ಶುರುವಾಯ್ತು...ಇಟಗಿ ಈರಣ್ಣ ಅವರು ನಾಟಕ ತಯಾರಿಯ ಆರಂಭದಿಂದಲೂ ನನ್ನ ಜೊತೆಗಿದ್ದರು...ಅವಶ್ಯಕತೆ ಇದ್ದಲ್ಲೆಲ್ಲ ಅನುವಾದದ ಕೆಲಸವನ್ನು ತಕ್ಷಣದಲ್ಲಿಯೇ ಮಾಡಿಕೊಡುತ್ತಿದ್ದರು...೧೯೯೯ ಆಗಸ್ಟ್ ೨ ರಿಂದ ಶುರುವಾದ ನಾಟಕದ ತಯಾರಿ ಬರೋಬ್ಬರಿ ಅಕ್ತುಬರ್ ೨, ಗಾಂಧೀ ಜಯಂತಿಯಂದು ಮೊದಲ ಪ್ರದರ್ಶನ ನೀಡುವುದರೊಂದಿಗೆ ಮುಗಿಯಿತು..ಹೊಸಪೇಟೆಯ ಜನ ಪ್ರದರ್ಶನಕ್ಕೆ ತೋರಿದ ಪ್ರತಿಕ್ರೀಯೆ ಅದ್ಭುತ....ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ...ಇದು ಹೊಸಪೇಟೆಯ ಮಟ್ಟಿಗೆ ದಾಖಲೆ....

ಅದರಲ್ಲಿ ಒಂದು ದೃಶ್ಯ ಬರುತ್ತದೆ...ರತನ್ ತಾಯಿ ತನ್ನಿಂದ ಬೇರೆ ಯಾರಿಗೂ ತೊಂದರೆ ಯಾಗದಿರಲೆಂದು ಯಾರಿಗೂ ಹೇಳದೆ ಕೇಳದೆ ಲಾಹೋರ್ ಬಿಟ್ಟು ಹೊರಟುಬಿಡುತ್ತಾಳೆ....ಈ ವಿಷಯ ಸಿಕಂದರ್ ಮಿರ್ಜಾ ಕುಟುಂಬಕ್ಕೆ ತಿಳಿದು...ಅವಳನ್ನು ಹುಡುಕಿಸಿ ತಂದು..ಅವಳಿಂದ ಭಾಷೆಯನ್ನೂ ಪಡೆಯುತ್ತಾರೆ....ಈ ದೃಶ್ಯವನ್ನು ನಾನು ಸಂಯೋಜಿಸುವಾಗ ಹಾಗೂ ಅದರ ತಾಲೀಮನ್ನು ಮಾಡುವ ಪ್ರತಿದಿನ ನಮಗೆಲ್ಲ ತಿಳಿಯದಂತೆ ಇಟಗಿ ಈರಣ್ಣ ಅವರು ಕನ್ನೀರಿತ್ತಿದ್ದರು.. ..ಅಂತಹ ಭಾವುಕ ಜೀವಿ ಅವರು....

ಇದರಲ್ಲಿ ಇನ್ನೊದು ಪ್ರಮುಖ ಪಾತ್ರ ಬರುತ್ತದೆ...ನಾಸಿರ್ ಕಾಜ್ಮಿ ಎಂದು..ಅವನೊಬ್ಬ ಕವಿ...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸಹ ತನ ಅಧ್ಯಯನ..ಕವನಗಳ ಮೂಲಕ ಸದಾ ಎಲ್ಲರೊಂದಿಗೆ ಬೆರೆಯುವ ಜೀವಿ ಮತ್ತು ಯಾವಾಗಲು ಸಮಾಜದ ಒಳಿತಿಗಾಗಿ ಚಿಂತಿಸುವವ...ಯಾರಿಗಾದರು ಸವಾಲಾಗಿ ನಿಲ್ಲಬಲ್ಲಂತಹ ಪಾತ್ರವದು...ಈ ಪಾತ್ರವನ್ನು ಅಭಿನಯಿಸಲು ನಾನು ಚಂದ್ರಶೇಖರ್ ಅವರಿಗೆ ಹೇಳಿದ್ದೆ..ಇದು ಅವರ ಮೊದಲ ಅಭಿನಯದ ನಾಟಕ...ತಂಡದಲ್ಲಿ ಅವರು ಹಿಮ್ಮೇಳ ಗಾಯಕರಾಗಿ ಸೇರಿಕೊಂಡವರು...ಅವರು ನಾಟಕದುದ್ದಕ್ಕೂ ಶಾಯರಿ, ಗಝಲ್ ಗಳನ್ನೂ ಹೇಳಬೇಕಾಗಿರುವುದರಿಂದ ಈ ಪಾತ್ರಕ್ಕೆ ಅವರೇ ಸರಿ ಎಂದು ಅವರಿಗೆ ಈ ಜವಾಬ್ದಾರಿಯನು ವಹಿಸಿದ್ದೆ..ಅವರಿಗೆ ಶಾಯರಿ, ಗಝಲ್ ಗಳನು ಕಲಿಸುವ ಜವಾಬ್ದಾರಿಯನ್ನು ಸ್ವತಃ ಇಟಗಿ ಈರಣ್ಣ ಅವರು ವಹಿಸಿಕೊಂಡಿದ್ದರು...ಒಂದು ದಿನ ಮದ್ಯಾಹ್ನ ನೇರವಾಗಿ ಚಂದ್ರು ಅವರ ಆಫೀಸಿಗೆ ಹೋಗಿ ಅವರನ್ನು ಕರೆದುಕೊಂಡು ಹೊಸಮೆತೆಯ ನೈವೆದ್ಯಂ ಹೋಟೆಲ ನಲ್ಲಿ ಸತತವಾಗಿ ಮೂರು ಗಂಟೆಗಳ ಕಾಲ ಅವರಿಗೆ ಶಾಯರಿ, ಗಝಲ್ ಹೇಳುವ ರೀತಿಯ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ...ಒಂದು ಸಲವಂತೂ ಇಷ್ಟೆಲ್ಲಾ ಹೇಳಿದ ಮೇಲೆಯೂ ಚಂದ್ರು ಸರಿಯಾಗಿ ಹೆಲಿಲ್ಲವೆಂದು ಅವರ ಕಪಾಳ ಮೋಕ್ಷಕ್ಕೂ ಇಟಗಿ ಈರಣ್ಣ ಅವರು ಮುಂದಾಗಿದ್ದರು....

ಇದರಲ್ಲಿ ಬರುವ ಶಾಯರಿ, ಗಝಲ್ ಗಳನ್ನೂ ಅದೆಷ್ಟು ಪರಿಣಾಮಕಾರಿಯಾಗಿ ಅನುವಾದಿಸಿ ಕೊಟ್ಟಿದರೆಂದರೆ...ಅವುಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...ಓದಿಕೊಳ್ಳಿ...

೧. "ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು
ಸಂತಸದ ಹಬ್ಬವಿದು, ತಾನಿಂತು ಉಕ್ಕಿ, ಭೋರ್ಗರೆವ ಕಡಲಾಯಿತು

ಒಂದೆಡೆಗೆ ತೂಗಿ ತೊನೆಯುತ್ತಾ ಬಂತು ಋತು ವಸಂತದ ಉಲ್ಲಾಸ
ಒಂದೆಡೆಗೆ ಕಂಡ ಕನಸುಗಳ ಗೂಡಿಗೆ ಉರಿವ ಕೊಳ್ಲಿಗಳ ಇಡಲಾಯಿತು

'ಶೀಲ-ದೀಪ' ವ ಹೊತ್ತ ಹಣತೆಗಳ ಕಥೆಯನೆಂತು ಬಣ್ಣಿಸಲಿ ನಾನು?
ನಡುಬೀದಿಯಲ್ಲೇ ಎನ್ನೆಯನು ಚೆಲ್ಲಿ, ಕುಡಿಚಿವುಟಿ ಹೊಸಕಿ ಬಿಡಲಾಯಿತು

ಸಣ್ಣ ಮಕ್ಕಳ ಕಣ್ಣುಗಳು ನೋಡಲಾಗದೆ ನಾಚಿ ಮುಚ್ಚಿಕೊಂಡವು ಗೆಳೆಯ
ಅವರ ಆನಂದಗಳ 'ಹಗಲು ದರೋಡೆಯೇ ನಡೆದು ಕೊಳ್ಲಿಗಳ ರಾಶಿ ಇಡಲಾಯಿತು

ಇಂದಿನ ಈ ಸಮಯದೊಂದಿಗೆ, ಈ ನನ್ನ ಹೆಸರನು ಹೇ ನಾಸಿರ್
ಕಸ ಕಡ್ಡಿ ಕೊಳೆ ಮಾಡಿ, ಕೆಸರಲ್ಲಿ ಹೊಸಕಿ, ಕಾಲುವೆಗೆ ತಳ್ಳಿ ಬಿಡಲಾಯಿತು..."

೨. ನಂಬಿಕಿ ಅಂದ್ರ ಏನದು? ಯಾರ ಮನಸ್ಸಿಗೂ ನವ್ವಾಗಬಾರದು
ನಮಗ ಚೊಲೋ ಆಗಬೇಕು ಅಂದ್ರ, ಯಾರಿಗೂ ಕೆಡಕು ಆಗಬಾರದು..

೩. ಯಾ ಮಂದಿ ಹತ್ರ ನಂಬಿಕೀ ಗಂಧ ಅನ್ನುದ ಇಲ್ಲ
ಆ ಮಂದಿಗೂ ನಮಗೂ ಯಾ ಸಂಬಂಧಾನು ಇಲ್ಲ..

೪. ದುಡಿದದ್ದಕ್ಕ ದುಃಖಾನ ಯಾರಿಗೆ ಕೂಲಿ ಆಗಿ ಸಿಗತೈತಿ
ತಡಿಯುದಿಲ್ಲ ಆ ಗ್ವಾಡಿ, ಭಾಳ ಜಲ್ದೀನೇ ಬೀಳತೈತಿ...


ಈ ಮೇಲೆ ನಮೂದಿಸಿದ ಎಲ್ಲಾ ಶಾಯಿರಿಗಳಲ್ಲಿ ನಮ್ಮ ಇಡೀ ಜೀವನವೇ ಅಡಗಿದೆ...ಅಲ್ಲಿ ಆದರ್ಶವಿದೆ, ತತ್ವವಿದೆ...ಬದುಕಿನ ಸತ್ವ ಸಹ ಅಲ್ಲಿ ಅಡಗಿದೆ....ಅದಕ್ಕೆಂದೇ ಇಟಗಿ ಈರಣ್ಣ ಅವರನ್ನು ನಾನು ಯಾವಾಗಲು ಅವರ ಮತ್ತೊಂದು ಮಹತ್ತರವಾದ ಶಾಯಿರಿ ಮೂಲಕ ನೋಡ ಬಯಸುವುದು...

ಬರಿಯಾಕಂತನ ಬದಕೆನಿ ಇನ್ನು ನಾನು..

ಇಲ್ಲಂದ್ರ ಸಾವು ಅನ್ನೋದು ತಿರಾ ಅಷ್ಟ ಕೆಟ್ಟ ಐತೇನು??

Saturday, July 25, 2009

ಗಿನ್ನಿಸ್ ದಾಖಲೆ ಪೋರನ ತುಂಟಾಟಗಳು....



೧೯೮೩-೮೪ ರ ಮಾತುಗಳಿವು...ನಾನಾಗ ೮ ನೆ ವರ್ಗದಲ್ಲಿ ಓದುತ್ತಿದ್ದೆ..ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ನನ್ನ ಶಾಲಾದಿನಗಳನ್ನು ಕಳೆದೆ...ಆ ದಿನಗಳಲ್ಲಿ ನಾವು ಧಾರವಾಡದ ಹೊಸಯೇಲ್ಲಾಪುರ್ ಏರಿಯಾದಲ್ಲಿ ವಾಸವಾಗಿದ್ದೆವು...ಹೊಸಯೇಲ್ಲಾಪುರದ ವೆಂಕಟೇಶ್ವರ ದೇವಸ್ತಾನದ ಎದುರಿನ ಒಂದು ಮನೆಯಲ್ಲಿ ನಾವು ಬಾಡಿಗೆಗಿದ್ದೆವು... ಆ ವೆಂಕಟೇಶ್ವರ ದೇವಸ್ತಾನದ ಪಕ್ಕದಲ್ಲಿಯೇ ಮಾಧವ ಗುಡಿ ಅವರ ಮನೆ...ನಮ್ಮ ಮನೆಯಿಂದ ಅವರ ಮನೆಗೆ ನಡೆದು ಕೊಂಡು ಹೋದರೆ ೧೦ ಸೆಕೆಂಡುಗಳ ಅಂತರ... ಅವರ ಮನೆಯಲ್ಲಿ ಯಾವಾಗಲು ಸಂಗೀತದ ವಾತಾವರಣ ಇರುತ್ತಿತ್ತಾದ್ದರಿಂದ ನಾನು ಮೇಲಿಂದ ಮೇಲೆ ಅವರ ಮನೆಗೆ ಹೋಗಿ ಅವರ ರಿಯಾಜ್ ಗಳನ್ನು ಕೇಳುತ್ತಾ ಕುಳಿತುಬಿಡುತ್ತಿದ್ದೆ..


ಶ್ರೀ. ಮಾಧವ ಗುಡಿ ಅವರ ಮಗ ಪ್ರಸನ್ನ ಗುಡಿ ಆಗ ಬಹುಶಃ ೪-೫ ವರ್ಷದವನಿರಬೇಕು....ಇಂದು ಅವನು ಗಿನ್ನಿಸ್ ದಾಖಲೆ ಮಾಡಿದ್ದಾನೆಂದರೆ ಅದನ್ನು ನಂಬಲು ಸಾಧ್ಯವೇ ಇಲ್ಲ...ಅವನಿಗೆ ಸಂಗೀತ ಒಲಿಯುತ್ತದೆ ಎಂಬ ವಿಷಯವೇ ಒಂದು ಹಂತದಲ್ಲಿ ಅಪಥ್ಯವಾಗುತ್ತದೆ...ಅಂತಹ ತುಂಟ ಅವನು...ಕಿಲಾಡಿತನ , ಕಿಡಿಗೆಡಿತನಕ್ಕೆ ಇನ್ನೊಂದು ಹೆಸರೇ ಪ್ರಸನ್ನ..ಅವನನ್ನು ನಾವೆಲ್ಲ ಪ್ರೀತಿಯಿಂದ "ಪರಶ್ಯಾ" ಎಂದು ಕರೆಯುತ್ತಿದ್ದೆವು...
ಧಾರವಾಡದ ಹೊಸಯೇಲಾಪುರದಲ್ಲಿ ನಿಮಗೆ ಅನೇಕ ಪುರಾತನ ಕೆರೆ ಬಾವಿಗಳು ಸಿಗುತ್ತವೆ....ಅಂತಹುದರಲ್ಲಿ "ನುಚ್ಚಂಬಲಿ ಬಾವಿ" ಎನ್ನುವುದೊಂದಿದೆ... ದಿನಾಲು ಬೆಳಿಗ್ಗೆ ನಾವಲ್ಲಿಗೆ ಈಜಲು ಹೋಗುತ್ತಿದ್ದೆವು...ಈ ಪ್ರಸನ್ನ ಆಗ ಪ್ರಾಯಶಃ ೪-೫ ವರ್ಷ ವಯಸಿನವನಾಗಿರಬೇಕು...ಬೆಳಿಗ್ಗೆ ನಮಗಿಂತಲೂ ಮುಂಚೆ ಆ ಬಾವಿಗೆ ಹೋಗಿ...ಮೇಲಿನಿಂದ ನೀರಿನಲ್ಲಿ ಜಿಗಿದು...ನನ್ನನ್ನು ಉಳಸ್ರಿ..ಅಂತ ಬೊಬ್ಬೆ ಹಾಕಿ...ದೊಡ್ಡ ರಂಪ ಮಾಡಿಬಿಟ್ಟಿದ್ದ... ತಿಳಿದದ್ದೇ ತಡ ಮಾಧವ ಗುಡಿ ಅವರು ಬಾವಿಯ ವರೆಗೆ ಬಂದು ಪರಶ್ಯಾನನ್ನು ರಸ್ತೆ ಗುಂಟ ಹೊಡೆಯುತ ಮನೆಗೆ ಕರೆದುಕೊಂಡು ಹೋಗಿದ್ದರು....

ಮತ್ತೊಂದು ಸಾರಿ ಹೀಗೆಯೇ ಆಗಿತ್ತು....ಅವರ ಮನೆಯ ಪಕ್ಕದಲ್ಲಿ ಒಂದು ಬೀದಿ ನಾಯಿ ಮಲಗಿತ್ತು...ಮದ್ಯಾನ್ಹದ ಸಮಯ...ಪರಶ್ಯಾ ಮನೆಯಲ್ಲಿ ಹೊಟ್ಟೆತುಂಬ ಊಟ ಮಾಡಿ ಹೊರಗೆ ಬಂದು ನೋಡಿದ್ದಾನೆ... ಅಲ್ಲಿ ನಾಯಿ ಮಲಗಿದೆ..ತಕ್ಷಣ ಮನೆಯ ಒಳಕ್ಕೆ ಹೊಕ್ಕು ಒಂದು ರೊಟ್ತಿಯನು ತಂದು ಅದರ ಮುಂದೆ ಹಾಕಿದ್ದಾನೆ....ನಾಯಿ ಗಾಢವಾದ ನಿದ್ರೆಯಲ್ಲಿದೆ...ರೊಟ್ಟಿಯ ಹತ್ತಿರ ಅದು ನೋಡಿಲ್ಲ...ಪರಶ್ಯಾನಿಗೆ ಸಿಟ್ಟು ಬಂದಿದೆ...ಮಲಗಿದ ನಾಯಿಯ ಬಾಯಿಯನ್ನು ತೆರೆದು ಅದರ ಬಾಯಲ್ಲಿ ರೊಟ್ಟಿಯನ್ನು ಇಡುವ ಪ್ರಯತ್ನ ಮಾಡಿದ್ದಾನೆ...ಸಿಟ್ಟಿಗೆದ್ದ ನಾಯಿ ಇವನನ್ನು ಕಂಡ ಕಂಡಲ್ಲಿ ಕಚ್ಚಿದೆ...ಇವನ ಪರಿಸ್ಥಿತಿ ಹೇಳತೀರದು...ತಕ್ಷಣ ಅವನಿಗೆ ಚಿಕಿತ್ಸೆ ಕೊಡಿಸಲೆಂದು ನಾವೆಲ್ಲ ಅವರ ತಂದೆಗೆ ಈ ವಿಷಯ ತಿಳಿಸಿದರೆ..ಅವರು ಬಂದವರೇ ತತ್ಕ್ಷಣಕ್ಕೆ ಏನನ್ನು ಯೋಚಿಸದೆ ಪರಶ್ಯಾನನ್ನು ಮನಸ್ಸಿಗೆ ಬಂದಂತೆ ಥಳಸಿದ್ದಾರೆ....ನಂತರ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಹೊಕ್ಕಳಿನ ಸುತ್ತ ೧೨ ಇಂಜಕ್ಷನ್ ಕೊಡಿಸಿದ್ದಾಯಿತು ....

ಹೀಗೆ ಅನೇಕ ತರಹದ ತುಂಟಾಟ...ತರಲೆ ಕೆಲಸಗಳಿಗೆ ಹೆಸರುವಾಸಿಯಾಗಿದ್ದ ಪ್ರಸನ್ನನಿಗೆ ಸಂಗೀತ ಒಲಿದಿದೆ ಎಂದು ನಂಬಲು ನನಗೆ ಸಾಧ್ಯವೇ ಆಗಲಿಲ್ಲ....ಅವನು ಗಿನ್ನಿಸ್ ದಾಖಲೆಗಾಗಿ ಹಾಡುವ ದಿನ ನಾನು ಧಾರವಾಡದಲ್ಲಿದ್ದೆ...ರಾತ್ರಿ ಎರಡು ಗಂಟೆಯ ತನಕ ಕುಳಿತು ಅವನ ಹಾಡುಗಳನ್ನು ಕೇಳಿದೆ...ನಿಜಕ್ಕೂ ಅದ್ಭುತವಾಗಿ ಹಾಡಬಲ್ಲ ಗಾಯಕ ಆತ...ಪರಿಶ್ರಮ ಪಟ್ಟರೆ ಇನ್ನು ಮೇಲಕ್ಕೆ ಏರುವ ಸಾಮರ್ಥ್ಯವಿರುವ ಪ್ರತಿಭಾವಂತ...ಅವನ ನಮ್ಮ ಸಂಪರ್ಕ ತಪ್ಪಿ ಈಗ ಏನಿಲ್ಲವೆಂದರೂ ೨೦ ವರ್ಷಗಳೇ ಕಳೆದಿವೆ... ಹಳೆಯ ನೆನಪುಗಳೇ ಹಾಗೆ...ಮಾಯವಾಗುವ ಗಾಯಕ್ಕೆ ಮತ್ತೆ ತುರಿಕೆ ಬಿಟ್ಟಂತೆ..... All the best Prasanna...Keep up the good work....

Tuesday, July 21, 2009

ಮೂರ್ಖತನದ ಪರಮಾವಧಿ.....








ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಪ್ರತಿವರ್ಷ ನಡೆಯುವ ಸವಾಯಿ ಗಂಧರ್ವರ ಪುಣ್ಯತಿಥಿ ಹಾಗೂ ಅದರ ಅಂಗವಾಗಿ ನಡೆಯುವ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ...ಈಗ ಐದು ವರ್ಷಗಳ ಹಿಂದೆ ಧಾರವಾಡದಲ್ಲಿ ನಮ ಗೆಳೆಯರೆಲ್ಲ ಸೇರಿ ಕುಂದಗೋಳದ ಈ ಕಾರ್ಯಕ್ರಮಕ್ಕೆ ಹೋಗುವುದೆಂದು ನಿರ್ಧರಿಸಿ, ಅದಕ್ಕೆ ಹೊರಡಲನುವಾದಾಗ ಧಾರವಾಡದ ನಮ್ಮ ಪತ್ರಕರ್ತ ಮಿತ್ರನೊಬ್ಬ ತಾನು ಸಹ ಅದಕ್ಕೆ ಬರುವೆನೆಂದು ಹೇಳಿದ....ನಾವು ಸರಿಎಂದು ಅವನನ್ನು ಕರೆದುಕೊಂಡು ೫-೬ ಜನರ ಗುಂಪು ಕುಂದಗೊಳದತ್ತ ಪ್ರಯಾಣ ಬೆಳೆಸಿದೆವು...ಮುಂಬೈ, ಪುನಾ ಮುಂತಾದ ಕಡೆಗಳಿಂದ ಖ್ಯಾತ ಸಂಗೀತಗಾರರು ಆ ವರ್ಷ ಅಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದರು..ಅಲ್ಲದೆ ಗಂಗಜ್ಜಿ ಸಹ ಅಲ್ಲಿ ಬಂದು ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದರು... ಅವರ ದೇಹಸ್ಥಿತಿ ಈಗ ಮೊದಲಿನಂತಿಲ್ಲ..ಅವರ ಹಾಡನ್ನು ಮುಂದೆ ನಮಗೆ ವೇದಿಕೆಯ ಮೇಲೆ ಕೇಳಲು ಸಿಗುತ್ತದೆಯೋ ಇಲ್ಲವೊ ತಿಳಿಯದು...ಈಗಲೇ ಹೋಗಿಬರುವುದು ಉತ್ತಮ ಎಂದು ನಾವೆಲ್ಲಾ ಅಲ್ಲಿಗೆ ತೆರಳಿದ್ದೆವು...

ನಮ್ಮೊಂದಿಗೆ ಬಂದ ಆ ಪತ್ರಕರ್ತ ಮಿತ್ರ ತೀರಾ ಬಾಯಿ ಬಡುಕ...ತನಗೇನು ಗೊತ್ತಿಲ್ಲದಿದ್ದರೂ ಎಲ್ಲಾ ತಿಳಿದಿದೆ ಎಂದು ಭಾವಿಸಿರುವ ಕುಪಮಂಡುಕ...ಆ ದಿನವು ಹೀಗೆಯೇ ಆಯಿತು....ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು...ನಾವು ಮಧ್ಯದ ಬಿಡುವಿನಲ್ಲಿ ಚಹಾ ಕುಡಿಯಲೆಂದು ಹೋದರೆ ಬಂದಾಗ ಅಲ್ಲಿ ಗಂಗಜ್ಜಿ ಎಲ್ಲರೊಂದಿಗೆ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಹಾಜರಾಗುತ ತರಾತುರಿಯಲ್ಲಿದ್ದೆವು...ನಾನು ಹೋಗಿ ಅವರಿಗೆ ನಮಸ್ಕರಿಸಿದೆ...ಅವರು ನಮಗೆ ತೀರಾ ಪರಿಚಯದವರು..ನಮ್ಮ ಅಜ್ಜ ಗುರುರಾವ್ ದೇಶಪಾಂಡೆ ಹಾಗೂ ಚಿದಂಬರ್ ದೇಶಪಾಂಡೆ ಉತ್ತಮ ಹಿಂದುಸ್ತಾನಿ ಸಂಗೀತಗಾರರಾಗಿದ್ದವರು...ಗಂಗಜ್ಜಿ ಹಾಗೂ ನಮ್ಮ ಅಜ್ಜ ಏಕ ವಚನದಲ್ಲಿ ಮಾತನಾಡುವಷ್ಟು ಸಲುಗೆ ಇತ್ತು...ನಾನು ನಮಸ್ಕರಿಸಿದ ಕೂಡಲೇ ಅತ್ಯಂತ ಪ್ರೀತಿಯಿಂದ ನನ್ನ ತಲೆ ನೇವರಿಸಿ..ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು..ಸಂಗೀತ ಕಾರ್ಯಕ್ರಮ ಹೇಗೆ ನಡೆಯುತ್ತಿದೆ, ಯಾವ ಸಂಗೀತಗಾರರು ತಮ್ಮ ಕಾರ್ಯಕ್ರಮ ನೀಡಿದರು ಮುಂತಾದವುಗಳನ್ನು ಮಾತನಾಡುತ್ತಿದ್ದಂತೆಯೇ...ನಮ್ಮ ಪತ್ರಕರ್ತ ಮಿತ್ರ ಮಧ್ಯದಲ್ಲಿ ತನ್ನ ಬಾಯಿಯನ್ನು ತೂರಿಸಿ.."ಎ ಬಿಡ್ರಿ ನಾವಿಲ್ಲೇ ಕ್ಲಾಸಿಕಲ್ ಮ್ಯುಸಿಕ್ ಕೆಳಬೇಕಂತ ಬಂದ್ರ ಅವರ್ಯಾರೋ ಮುಂಬೈನವರು ಆವಾಗ್ನಿಂದ ಹಿಂದುಸ್ತಾನಿ ಸಂಗೀತ ಹಾಡಾಕತ್ತಾರ" ಎಂದು ಬಿಡಬೇಕೇ? ನನಗೆ ಮೈ ಪರಚಿ ಕೊಳ್ಳುವುದೊಂದೇ ದಾರಿ...ಏನು ಮಾತನಾಡ ಬೇಕೆಂದು ತೋಚದೆ ಬೆಪ್ಪನಂತೆ ನಿಂತಾಗ ಗಂಗಜ್ಜಿ ಎಂದಿನಂತೆ ನಗುತ್ತ ಸಭಾಂಗಣವನ್ನು ಪ್ರವೇಶಿಸಿದರು.....

Friday, July 17, 2009

ಜನ ಮರುಳೋ ಜಾತ್ರೆ ಮರುಳೋ....









ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮದವರಿಂದ ನಡೆದ ಅನೇಕ ಅಕ್ರಮಗಳ ಬಗ್ಗೆ ವರದಿಯಾಯ್ತು..ಅದರಲ್ಲೂ ಆಂದ್ರಪ್ರದೇಶದಲ್ಲಿ ಪತ್ರಿಕೆಯವರಿಂದ ನಡೆದ ಹಗಲು ದರೋಡೆ ಎಂದರ್ಥದಲ್ಲಿ ಕೆಲವು ವರದಿಗಳು ಪ್ರಕಟಗೊಂಡವು ....ಹಾಗಾದರೆ ಕರ್ನಾಟಕದಲ್ಲಿ ಪತ್ರಿಕೆಗಳು/ಪತ್ರಿಕೋದ್ಯಮಿಗಳು/ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಅಷ್ಟೊಂದು ಜತನದಿಂದ ಪಾಲಿಸಿಕೊಂಡು ಬಂದವೆ? ಇಲ್ಲಿ ಯಾವ ರೀತಿಯ ಅಕ್ರಮಗಳು ನಡೆಯಲೇ ಇಲ್ಲವೇ? ಅಥವಾ ನಡೆದರೂ ಅವು ಬೆಳಕಿಗೆ ಬಾರದೆ ಹೋದವೇ?

ಖಂಡಿತವಾಗಿಯೂ ಕರ್ನಾಟಕದಲ್ಲಿಯೂ ಸಹ ಆಂಧ್ರಪ್ರದೇಶದಲ್ಲಿ ನಡೆದಷ್ಟೇ ವ್ಯಾಪಕವಾದ ಅಕ್ರಮಗಳು ಮಾಧ್ಯಮದವರಿಂದ ನಡೆದಿವೆ..ಆದರೆ ವಿಪರ್ಯಾಸವೆಂದರೆ ಅವ್ಯಾವ ಸಂಗತಿಗಳು ಸಹ ಬೆಳಕಿಗೆ ಬಾರದೆ ಹೋದವು...

ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಮಾರ್ಗರೆಟ್ ಆಳ್ವಾ ಅವರಿಗೆ ಮಾಧ್ಯಮ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದೆ. ಆ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳು ನನ್ನ ಕಣ್ಣ ಮುಂದೆಯೇ ನಡೆದು ಹೋದವು...ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಹೇಳುವದಾದರೆ ಕೇವಲ ಎರಡು ಕನ್ನಡ ಪತ್ರಿಕೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಪತ್ರಿಕೆಗಳು ಇಂತಹ ಅಕ್ರಮಗಳಲ್ಲಿ ಭಾಗಿಯಾದವು...ಅದರ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...

೧. ನಾನು ಶ್ರೀಮತಿ ಮಾರ್ಗರೆಟ್ ಆಳ್ವಾ ಅವರೊಂದಿಗೆ ಕಾರವಾರದಲ್ಲಿದ್ದೆ. ಚುನಾವಣಾ ಪ್ರಚಾರದ ಭರಾಟೆ ಜೋರಾಗಿತ್ತು...ಅಂದು ಮಧ್ಯಾನ್ಹ ೪ ಗಂಟೆಯ ಸಮಯ. ಅಂದು ಬೆಳಿಗ್ಗೆ ಬೆಳಗಾವಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಭಾಷಣ ಮಾಡಲು ಕಾಂಗ್ರೆಸ್ ಮುಖಂಡ ಶ್ರೀ. ಅನಿಲ್ ಲಾಡ್ ಬೆಳಗಾವಿಗೆ ಬಂದು ಸಾರ್ವಜನಿಕ ಸಭೆಯನುದ್ದೇಶಿಸಿ ಭಾಷಣ ಮಾಡಿ ಅದರಲ್ಲಿ ಎಂ.ಇ.ಎಸ್ ಕಾರ್ಯಕರ್ತರಿಗೆ ಇರುಸು-ಮುರುಸಾಗುವ ರೀತಿಯಲಿ ಏನೋ ಮಾತನಾಡಿದ್ದಾರೆ...ಹಿಂದಿನ ದಿನವೇ ಆ ಮುಖಂಡರು ತಮ್ಮ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವುದಾಗಿ ಘೋಷಿಸಿದ್ದರು...ಅನಿಲ್ ಲಾಡ್ ಅವರ ಮಾತು ಆ ಪಕ್ಷದ ಮುಖಂಡರಿಗೆ ಕಸಿವಿಸಿ ಉಂಟುಮಾದಲಿತ್ತು..ಅದನ್ನು ಪತ್ರಿಕೆಯವರು ಸಹ ವರದಿ ಮಾಡಲು ಮುಂದಾಗಿದ್ದರು....ಬೆಳಗಾವಿಯಿಂದ ನನ್ನ ಸ್ನೇಹಿತನೊಬ್ಬ ನನಗೆ ಫೋನಾಯಿಸಿ ನಾಳೆಯ ಪತ್ರಿಕೆಯಲಿ ಈ ವಿಷಯ ಮುಖಪುಟದಲ್ಲಿ ಬರಲಿದ್ದು ನಿಮ್ಮ ಅಭ್ಯರ್ಥಿಗೆ ತೊಂದರೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದ...ಆ ಸುದ್ದಿಯನ್ನು ತಪ್ಪಿಸುವ ಅಥವಾ ಬರದಂತೆ ನೋಡಿಕೊಳ್ಳುವ ಅಥವಾ ಹೆಚ್ಚು ಮುಜುಗರವಾದಂತೆ ಸುದ್ದಿಯನು ಪ್ರಕಟವಾಗಲು ನಾವು ಯಾರನ್ನು ಕಾಣಬೇಕೆಂದು ನನ್ನ ಗೆಳೆಯನನ್ನು ಕೇಳಿದಾಗ ಅವನು ಒಬ್ಬ ಪತ್ರಕರ್ತರ ಹೆಸರನ್ನು ಹೇಳಿದ...ನನ್ನು ತಕ್ಷಣ ಕಾರವಾರದಿಂದ ಬೆಳಗಾವಿಗೆ ಧಾವಿಸಿದೆ..ಬೆಳಗಾವಿಯಲ್ಲಿ ಪಕ್ಷದ ಕೆಲವರಿಗೆ "ಆ ಪತ್ರಿಕೆಗೆ" ಬರಲು ತಿಳಿಸಿದ್ದೆ...ಆ ಸುದ್ದಿ ಬರದಂತೆ ಮಾಡಲು ನಾನು ತೆಗೆದುಕೊಂಡ ಸಮಯ ಕೇವಲ ೧೦ ನಿಮಿಷ..ಮತ್ತು ಖರ್ಚಾದ ಹಣ ಮೂರು ಲಕ್ಷ ರೂಪಾಯಿಗಳು....ಆ ಸುದ್ದಿಯ ವಿಷಯವನ್ನು ನಾನು ಸಂಬಧಿಸಿದ ಪತ್ರಕರ್ತರ ಜೊತೆ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಅವರು ನೇರವಾಗಿ ವ್ಯವಹಾರಕ್ಕಿಳಿದಿದ್ದರು...ನನ್ನನ್ನು ನೇರವಾಗಿ ಕೇಳಿಯೇ ಬಿಟ್ಟರು...ಇಷ್ಟು ಹಣ ಕೊಡಿ ಅಂದರೆ ಸುದ್ದಿ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು.....ಇದು ಆಂಗ್ಲ ಪತ್ರಿಕೆಯೊಂದಿಗೆ ನಡೆದ ಘಟನೆ....

೨. ಮತ್ತೊಂದು ದಿನ ನಾನು ಅಂಕೊಲಾದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದಾಗ ಒಬ್ಬ ಕನ್ನಡ ಪತ್ರಿಕೆಯ ಪತ್ರಕರ್ತರು ನನಗೆ ಫೋನಾಯಿಸಿ... ಅಲ್ಲಿನ ಬೇರೆ ಬೇರೆ ಪಕ್ಷಗಳ ಬೆಳವಣಿಗೆ ಕುರಿತು ಸುದ್ದಿ ರವಾನಿಸಿದರು..ಅನೇಕ ಜನ ಪತ್ರಕರ್ತ ಮಿತ್ರರು ಆಗಾಗ ಹೀಗೆ ಫೋನು ಮಾಡಿ ಈ ರೀತಿಯ ಸುದ್ದಿಗಳನ್ನು ನನಗೆ ಕೊಡುತಿದ್ದರಿಂದ ನನಗೆ ಇದು ಅಂತಹ ವಿಶೇಷವೇನು ಅನಿಸಲಿಲ್ಲ...ಆದರೆ ಈ ಪತ್ರಕರ್ತ ಮಹಾಶಯ ತನ್ನ ಮಾತಿನ ಕೊನೆಯಲ್ಲಿ ಒಂದು ಪ್ರಸ್ತಾಪವನ್ನು ನನ್ನ ಮುಂದಿಟ್ಟ...."ಸರ್ ನಮ್ಮ ಆಫೀಸಿನವರು ನನಗ ಖಾನಾಪುರ ಮತ್ತ ಕಿತ್ತೂರ ಕ್ಷೇತ್ರದ ಸಮೀಕ್ಷಾ ಮಾಡಲಿಕ್ಕೆ ಹೇಳ್ಯಾರ" ಎಂದ. ನಾನು ಅದಕ್ಕೆ "ಮಾಡ್ರಿ..ಒಳ್ಳೇದು" ಎಂದೇ..ಅದಕ್ಕವನು "ಸರ್ ಮ್ಯಾಡಂ ಗ ಹೇಳಿ ನನಗ ಒಂದು ಟ್ಯಾಕ್ಸಿ ಕೊಡಸ್ರಿ...ಅಂದ್ರ ನಾನು ಈ ಸಮೀಕ್ಷಾ ಲಗುಣ ಮುಗಸಬಹುದು" ಎಂದ. ನನಗಿದು ವಿಚಿತ್ರವಾಗಿ ಕಂಡಿತು..ಅವನ ಪತ್ರಿಕೆಯಿಂದ ಅವನಿಗೆ ಸಮೀಕ್ಷೆ ಮಾಡಲು ಆದೇಶ ಬಂದಿದೆ... ಅದಕ್ಕೆ ನಾವು ಅಂದರೆ ಪಕ್ಷದ ವತಿಯಿಂದ ಕಾರನ್ನು ಏಕೆ ಕೊಡಬೇಕು ಅಂದುಕೊಳ್ಳುತ್ತಿದ್ದಂತೆಯೇ ಅವನು "ಸರ್ ಟ್ಯಾಕ್ಸಿ ಕೊದಸಿದ್ರಿ ಅಂದ್ರ ನಾನು ನಿಮ್ಮ ಪಕ್ಷದ ಪರವಾಗಿ ಸಮೀಕ್ಷಾ ಬರೀತೀನಿ" ಅಂದು ಬಿಡಬೇಕೇ? ನನಗೆ ತುಂಬ ಹೇಸಿಗೆ ಅನಿಸಿತು..ಟ್ಯಾಕ್ಸಿ ಕೊಡಲು ಸಾಧ್ಯವಿಲ್ಲ ಎಂದು ನಾನಾ ಫೋನನ್ನು ಇತ್ತು ಬಿಟ್ಟೆ...ಮುಂದೆ ಅವನು ಸಮೀಕ್ಷೆ ಮಾಡಿದನೋ ಇಲ್ಲವೊ..ಮಾಡಿದ್ದರೂ ಅದರಲ್ಲಿ ಏನು ಬರೆದಿದ್ದಾನೆ ಎಂದು ಓದುವ ಗೋಜಿಗೂ ಸಹ ಹೋಗಲಿಲ್ಲ.

೩. ಎಪ್ರಿಲ್ ೨೧ ಬಹಿರಂಗ ಚುನಾವಣಾ ಪ್ರಚಾರಕ್ಕೆ ಕೊನೆಯ ದಿನ. ಅಂದು ಕಾರವಾರಕ್ಕೆ ಮಾರ್ಗರೆಟ್ ಆಳ್ವಾ ಅವರ ಪರ ಪ್ರಚಾರ ಮಾಡಲು ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಬರುವವರಿದ್ದರು...ಕಾರವಾರದಲ್ಲಿ ಅದಕ್ಕೆ ಎಲ್ಲಾ ತಯಾರಿಯನ್ನು ಮಾಡಲಾಗಿತ್ತು... ಅಂದು ನಾನು ಬೆಳಿಗ್ಗೆ ಸುಮಾರು ೧೦ ಗಂಟೆಗೆ ನಾನು ಕುಮುತಾದಲ್ಲಿದ್ದೆ...ಅಲ್ಲಿಂದ ನಾನು ಮತ್ತು ಮ್ಯಾಗಿ ಮೇಡಂ ಕಾರವಾರಕ್ಕೆ ಹೊರಡುವ ತಯಾರಿಯಲ್ಲಿದ್ದೆವು...ಮಂಗಳೂರಿನಿಂದ ಇಂಗ್ಲೀಶ್ ಚಾನೆಲ್ ಒಂದರ ಪ್ರತಿನಿಧಿ ನನಗೆ ಫೋನ್ ಮಾಡಿ ಸಲ್ಮಾನ್ ಖಾನ್ ಕಾರ್ಯಕ್ರಮದ ವಿವರಣೆ ಕೇಳಿದರು..ಎಲ್ಲಾ ವಿವರಣೆ ಕೊಟ್ಟ ನಂತರ ಅವರು ಈ ಕಾರ್ಯಕ್ರಮಕ್ಕೆ ಬರಲು ಮಂದಳುರಿನಿಂದ ಕಾರವಾರಕ್ಕೆ ಒಂದು ಟ್ಯಾಕ್ಸಿ ವ್ಯವಸ್ಥೆ ಮಾಡಲು ಆದೇಶಿಸಿದರು..ನಾನು ಅದು ಸಾಧ್ಯವಿಲ್ಲ ಎಂದಾಗ ಅವರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ..."ನೀವು ಯಾವ ಮಾಧ್ಯಮದವರೊಂದಿಗೆ ಮಾತನಾಡುತ್ತಿದೀರಿ ಗೊತ್ತಾ? ನೀವು ನಮಗೆ ಟ್ಯಾಕ್ಸಿ ವ್ಯವಸ್ಥೆ ಮಾಡದಿದ್ದರೆ ನಿಮ್ಮ ಅಭ್ಯರ್ಥಿಯ ವಿರುದ್ಧ ಸುದ್ದಿಯನ್ನು ಮಾಡಲಾಗುವುದು ಅದು...ಇದು" ಎಂದೆಲ್ಲ ಕೂಗಾಡಲು ಆರಂಭಿಸಿದರು... ನಾನು ಅವರಿಗೆ ಅಷ್ಟೇ ಸೌಮ್ಯವಾಗಿ "ನಾವು ನಿಮಗೆ ಇನ್ವಿಟೇಶನ್ ಕಳಿಸಿರುವುದು ನಿಮ್ಮ ಅವಗಾಹನೆಗೆ...ಬರಲೇ ಬೇಕು ಎಂದಲ್ಲ..ಬರುವುದಾದರೆ ನಿಮ ಖರ್ಚಿನಲ್ಲಿ ಬನ್ನಿ ಖಂಡಿತವಾಗಿ ನಿಮಗೆ ಸ್ವಾಗತವಿದೆ...ಅಷ್ಟಕ್ಕೂ ನೀವು ನಮ್ಮ ಅಭ್ಯರ್ಥಿಯ ವಿರುದ್ಧ ಸುದ್ದಿಯನು ಮಾಡುವುದಾದರೆ ನಿಮ್ಮನ್ನು ತಡೆಯುವ ಶಕ್ತಿ ನನಗಿಲ್ಲ..ದಯವಿಟ್ಟು ಮುಂದುವರೆಯಿರಿ" ಎಂದು ಹೇಳಿ ಮಾತು ಮುಗಿಸಿದೆ...ಮುಂದೆ ಆ ಮನುಷ್ಯ ಕಾರ್ಯಕ್ರಮಕ್ಕೆ ಬಂದು...ನನ್ನನ್ನು ಭೇಟಿ ಮಾಡಿ...ಚಹಾ ಕುಡಿದು ಹೋದರು...

ಹೀಗೆ ಅನೇಕ ಘಟನೆಗಳು ನಾನಾ ಕಣ್ಣ ಮುಂದೆಯೇ ನಡೆದಿದೆ....ಇವು ಯಾವವು ಜಾಹಿರಾತಿಗೆ ಸಂಬಂಧಪತ್ತವಲ್ಲ....ಸಂಪಾದಕೀಯದಲ್ಲೇ ನಡೆಯುವ ಘಟನೆಗಳು...ನೀವು ಅವರಿಗೆ ಬೇಕಾದ ಹಣವನ್ನು ಸಂದಾಯ ಮಾಡಿದರೆ...ಸುದ್ದಿಯ ಪ್ರತಿಯನ್ನು ನಿಮ್ಮ ಅನುಮೊದನೆಗು ಕಳಿಸಿಕೊಡುತ್ತಾರೆ....ನನ್ನ ಹತ್ತಿರ ಅಂತಹ ಪ್ರತಿಗಳು ಸಾಕಷ್ಟಿವೆ...

ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಿಯು ಪತ್ರಿಕಾ ಧರ್ಮ/ನಿಯತ್ತು ಎನ್ನುವುದಿದೆಯೇ? ಹಾಗಾದರೆ ನಾವೆಲ್ಲಾ ಪತ್ರಿಕೆಗಳನ್ನು ಓದುವುದೇಕೆ?

Sunday, July 12, 2009

ಹುಚ್ಚರ ಸಂತೆಯಲ್ಲಿ ವಿವೇಕದ ಅಳು.....


ಭಾರತ ಪಾಕಿಸ್ಥಾನ ವಿಭಜನೆಯ ನಂತರ ಅನೇಕ ಕಥೆಗಾರರು ಹುಟ್ಟಿಕೊಂಡರು.....ಅನೇಕ ಕಥೆಗಳು ಹುಟ್ಟಿಕೊಂಡವು..... ಅಂತಹ ಅನೇಕ ಕಥೆಗಳನ್ನು ನಾನು ಓದಿದ್ದೇನೆ ಮತ್ತು ಅವುಗಳಲ್ಲಿ ನನಗೆ ಅತ್ಯಂತ ತಲೆ ಕೆಡಿಸಿದ ಕಥೆಗಾರನೆಂದರೆ ಸಾದತ್ ಹಸನ್ ಮಂಟು.... ಅಂದಿನ ಸಾಮಾಜಿಕ ಜೀವನ ಅದರ ಮೇಲೆ ಆಗುವ ಪರಿಣಾಮಗಳು ಮುಂತಾದವುಗಳು ಇವರ ಕಥೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿವೆ ಎಂದರೆ ಪ್ರತಿಯೊಂದು ಓದಿಗೂ ಸಹ ಹೊಸ ಪರಿಕಲ್ಪನೆ ಮೂಡಿಬರುತ್ತದೆ...ಹೊಸ ದೃಷ್ಟಿಕೋನ ಸಿಗುತ್ತದೆ...


ಹೀಗೆ ಎರಡು ವರ್ಷದ ಹಿಂದೆ "ವಿಜಯ ಕರ್ನಾಟಕ" ಪತ್ರಿಕೆಯನ್ನು ಓದುತ್ತಿದ್ದಾಗ ಅದರಲ್ಲಿ ಪುಸ್ತಕ ವಿಮರ್ಶಾ ವಿಭಾಗದಲ್ಲಿ ಸಾದತ್ ಹಸನ್ ಮಂಟು ಅವರ ಕಥಾ ಸಂಕಲನವನ್ನು ಕುರಿತು ಬರೆಯಲಾಗಿತ್ತು ಮತ್ತು ಅದರ ಹೆಸರು "ಸದ್ಯಕಿದು ಹುಚ್ಚರ ಸಂತಿ" ಎಂದು...ಅವರ ಅನೇಕ ಕಥೆಗಳನ್ನು ಕನ್ನಡಕ್ಕೆ ತರುವ ಸ್ತುತ್ಯಾರ್ಹ ಕೆಲಸವನ್ನು ಮಾಡಿದವರು ಸಾಹಿತಿ ಹಸನ್ ನಯೀಮ್ ಸುರಕೊಡ್ ಅವರು...ಅದರ ಪ್ರಕಾಶನದ ಹೊಣೆಯನ್ನು ಹೊತ್ತವರು ಬಳ್ಳಾರಿಯ ಲೋಹಿಯಾ ಪ್ರಕಾಶನದವರು...ತಕ್ಷಣ ಬೆಂಗಳೂರಿನ ಎಲ್ಲ ಪುಸ್ತಕದ ಮಳಿಗೆಗಳಿಗೆ ಭೇಟಿ ನೀಡದರು ಈ ಪುಸ್ತಕ ಸಿಗಲಿಲ್ಲ...


ಹೊಸಪೇಟೆಯ ಗೆಳೆಯ ರಾಜು ಕುಲಕರ್ಣಿಗೆ ತಕ್ಷಣ ಫೋನಾಯಿಸಿ ಈ ಪುಸ್ತಕ ನನಗೆ ಯಾವುದೇ ಪರಿಸ್ಥಿತಿಯಲ್ಲಿ ಬೇಕೆ ಬೇಕು ಎಂದು ಹೇಳಿದೆ...ಮುಂದೆ ೩ ದಿನದಲ್ಲಿ ಆ ಪುಸ್ತಕದ ಎರಡು ಪ್ರತಿಗಳು ನನ್ನ ಮುಂದಿದ್ದವು...ಒಂದೇ ಗುಟುಕಿಗೆ ಇಡೀ ಪುಸ್ತಕವನ್ನು ಅನಾಮತ್ತಾಗಿ ಓದಿಮುಗಿಸಿದಾಗ ರಾತ್ರಿ ೩ ಗಂಟೆಯ ಸಮಯ..ಆಗಲೇ ನಿರ್ಧರಿಸಿಯಾಗಿತ್ತು..ಆ ವರ್ಷದ ಮುಂಬೈ ನಾಟಕೋತ್ಸವಕ್ಕೆ ಈ ಕಥೆಗಳನ್ನು ಆಧರಿಸಿದ ನಾಟಕವನ್ನೇ ಕೈಗೆತ್ತಿಕೊಳುವುದು ಎಂದು..


ಅಂತೆಯೇ ನಾಟಕದ ಹಸ್ತಪ್ರತಿಯು ಸಹ ಸಿದ್ಧವಾಯ್ತು...ಅದರ ಮುಖ್ಯ ಪಾತ್ರಧಾರಿಯ ಅಭಿನಯದ ಜವಾಬ್ದಾರಿಯನ್ನು ಚಂದ್ರಶೇಖರ್ ಅವರಿಗೆ ವಹಿಸಿದ್ದೆ...ಎಂತಹ ಪಾತ್ರವನ್ನಾದರು ಅತ್ಯಂತ ಶೃದ್ಧೆಯಿಂದ, ತನ್ಮಯತೆಯಿಂದ ಅಭಿನಯಿಸಬಲ್ಲರು ಎಂಬ ನಂಬಿಕೆಯೇ ಇದಕ್ಕೆ ಕಾರಣವಿರಬಹುದು....


ನಾಟಕದ ತಯಾರಿ ಆರಂಭವಾಯ್ತು..ಕೇವಲ ಒಂದೇ ದಿನದಲ್ಲಿ ಇಡೀ ನಾಟಕದ ಹಂದರ ಸಿದ್ಧವಾಗಿ ಹೋಯ್ತು....ಮುಂದೊಂದು ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಂದಾಗ ಎಲ್ಲ ಕಲಾವಿದರಿಗೆ ನಾಟಕದ ತಯಾರಿ ಇಡೀ ದಿನ ಇರುವುದಾಗಿಯೂ ಎಲ್ಲರು ಇಡೀ ದಿನ ಇದಕ್ಕಾಗಿಯೇ ಬಿಡುವು ಮಾಡಿಕೊಳ್ಳತಕ್ಕದ್ದು ಎಂದು ತಾಕೀತು ಮಾಡಿದ್ದೆ....


ಅಂದಿನ ನಾಟಕದ ತಾಲಿಮಿಗೆ ಚಂದ್ರಶೇಖರ್ ತಮ್ಮ ಮಗ ವಿವೇಕನನ್ನು ಕರೆದು ತಂದಿದ್ದರು..ಅವನಿಗೆ ಆಗ ಕೇವಲ ೪ ವರ್ಷ ವಯಸ್ಸು....ನಾಟಕದ ತಾಲೀಮು ಶುರು ಆಯ್ತು.....ಅದರಲ್ಲಿ ಒಂದು ದೃಶ್ಯ ಬರುತ್ತದೆ...ಸಿರಾಜುದ್ದೀನನ ಮಗಳನ್ನು ಕೆಲವು ಯುವಕರು ನಂಬಿಸಿ, ಅಪಹರಿಸಿ ಅವಳ ಮೇಲೆ ಅತ್ಯಾಚಾರವೆಸಗಿರುತ್ತಾರೆ...ಅವಳು ಜೀವನದಲ್ಲಿ ಎಷ್ಟೊಂದು ಮೆಕ್ಯಾನಿಕಲ್ ಆಗಿರುತ್ತಾಳೆಂದರೆ ಅವಳ ಹತ್ತಿರ ಯಾರೇ ಬಂದರು ಸಹ ಅವರು ತನ್ನನ್ನು ಅನುಭವಿಸಲು ಬಂದವರೇ ಎಂದು ತಿಳಿದು ಆ ಕ್ರೀಯೆಗೆ ಸಜ್ಜಾಗಿಬಿಡುತ್ತಾಳೆ.... ಒಂದು ದಿನ ಅ ಯುವಕರ ಗುಂಪೊಂದು ತಂದು ಅವಳು ಸತ್ತಿದಾಳೆಂದು ತಿರ್ಮಾನಿಸಿ ಅವಳನ್ನು ಶವಾಗಾರಕ್ಕೆ ತಂದು ಹಾಕಿ ಹೋಗುತ್ತಾರೆ...ಅಲ್ಲಿ ತನ್ನ ಮಗಳನ್ನು ಹುಡುಕುತ್ತ ಬಂದ ಸಿರಾಜುದ್ದೀನನಿಗೆ ತನ್ನ ಮಗಳು ಈ ಸ್ಥಿತಿಯಲ್ಲಿ ಇರುವುದು ನೋಡಿ ಅಳಲು ಆರಂಭಿಸುತ್ತಾನೆ...ಚಂದ್ರಶೇಖರ್ ಅವರ ಅಭಿನಯ ಅದ್ಭುತವಾಗಿತ್ತು..ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅಭಿನಯಿಸಿದ ರೀತಿ ನಿಜಕ್ಕೂ ಅದ್ಭುತ...ಈ ಎಲ್ಲ ತಾಲೀಮನ್ನು ವಿವೇಕ ತದೇಕ ಚಿತ್ತದಿಂದ ನೋಡುತ್ತಾ ಕುಳಿತಿದ್ದ....ಅವನು ಎಲ್ಲವನ್ನು ಸುಮ್ಮನೆ ನೋಡುತ್ತಿದ್ದಾನೆ....ಅಳುತ್ತಿದಾನೆ...ಮಾತಿಲ್ಲ....ಧ್ವನಿಯನ್ನು ಬಿಡುತ್ತಿಲ್ಲ...ಕಣ್ಣಲ್ಲಿ ನೀರು ಮಾತ್ರ ಬರುತ್ತಿದೆ....ನಾಲ್ಕು ವರ್ಷದ ಮಗುವಿಗೆ ಈ ನಾಟಕ ಅಷ್ಟೊಂದು ಮನಸ್ಸಿಗೆ ನಾತಿತಾ...ಅಥವಾ ಅವರ ಅಪ್ಪ ಆ ಪಾತ್ರದಲ್ಲಿ ಅಭಿನಯಿಸಿ, ಅಳುತ್ತಿರುವುದರಿಂದ ಅವನು ಅಳುತ್ತಿದ್ದಾನಾ...ಗೊತ್ತಿಲ್ಲ....ನಾಟಕದ ಯಶಸ್ಸು ಅಡಗಿರುವುದೇ ಇಲ್ಲಿ....


ಅಂತೆಯೇ ನಾನು ನಾಟಕದುದ್ದಕ್ಕೂ ಜಗಜಿತ್ ಸಿಂಗ್ ಅವರು ಹಾಡಿರುವ ಗಜಲ್ "ಜಾತೆ ಜಾತೆ ವೋ ಮುಜ್ಹೆ ಅಚ್ಚಿ ಕಹಾನಿ ದೇ ಗಯೀ.." ಬಳಸಿದ್ದು....


Saturday, July 11, 2009

ಶತಕದ ಸಂಭ್ರಮ....

ಗೆಳೆಯರೇ..

ನಿಮ್ಮ ಪ್ರೀತಿ, ಅಭಿಮಾನ ಯಾವತ್ತು ಹೀಗೆಯೇ ಇರಲಿ...ನಾನು ಈ ಬ್ಲಾಗನ್ನು ಆರಂಭಿಸಿ ಕೇವಲ ಎರಡು ತಿಂಗಳಿನಲ್ಲಿ ಇದರ ವೀಕ್ಷಕರ ಸಂಖ್ಯೆ ಶತಕದ ಗೆರೆ ದಾಟಿದೆ...ನಂಬಲು ಸಾಧ್ಯವಾಗುತ್ತಿಲ್ಲ ಆದರು ಸಹ ಬ್ಲಾಗ್ ನ ಬಳಕೆದಾರರ ಅಂಕೆ ಸಂಖ್ಯೆಗಳು ಅದನ್ನು ದೃಡಪಡಿಸಿವೆ...

ಹೀಗೆಯೇ ನಿಮ್ಮ ಅನಿಸಿಕೆಗಳನ್ನೂ ವ್ಯಕ್ತಪಡಿಸುತ್ತಿರಿ....ನಾನು ನನ್ನ ಬರವಣಿಗೆಯನ್ನು ಹೀಗೆಯೇ ಮುಂದುವರಿಸುತ್ತೇನೆ...

ಮತ್ತೊಮ್ಮೆ ತಮ್ಮಲ್ಲಿ ಪ್ರೀತಿ ವಿಶ್ವಾಸದೊಂದಿಗೆ...

ನಿಮ್ಮವ...

ಧನಂಜಯ ಕುಲಕರ್ಣಿ

ಹಕ್ಕಿ ಹಾರುತಿದೆ ನೋಡಿದಿರಾ....


"ಇರುಳಿರುಳಳಿದು ದಿನದಿನ ಬೆಳಗೆ..ಸುತ್ತಮುತ್ತಲು ಮೇಲಕೆ ಕೆಳಗೆ...ಗಾವುದ ಗಾವುದ ಗಾವುದ ಮುಂದೆ...ಎವೆತೆರದಿಕ್ಕುವ ಹೊತ್ತಿನ ಒಳಗೆ...ಹಕ್ಕಿ ಹಾರುತಿದೆ ನೋಡಿದಿರಾ????" ದ.ರಾ. ಬೇಂದ್ರೆ ಅವರು ಬರೆದ ಈ ಕವನದ ಸಾಲುಗಳು ನನ್ನನ್ನು ಬಹುವಾಗಿ ಕಾಡಿವೆ....ಪ್ರತಿ ಹಕ್ಕಿ ಹಾರುವಾಗ ಈ ಕವನವನ್ನು ನಾನು ಗುನುಗುನಿಸುತಿರುತ್ತೇನೆ...ಆಹಾ..ಎಂಥ ಅದ್ಭುತ ಕಲ್ಪನೆ....


ನಮ್ಮ ಬದುಕಿನ ಜಂಜಾಟಗಳಲ್ಲಿ ನಾವು ನಮ್ಮ ಬಹುತೇಕ ಸಮಯವನ್ನು ಮೆಕ್ಯಾನಿಕಲ್ ಆಗಿ ಕಳೆದುಬಿಡುತ್ತೇವೆ.... ನಾವು , ನಮ್ಮ ಸಂಸಾರ, ಹೆಂಡತಿ ಮಕ್ಕಳು ಹೀಗೆ ಹತ್ತು ಹಲವಾರು ಗೊಂದಲಗಳಲ್ಲಿ ಸಿಲುಕಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ...


ಹೀಗೆ ಒಂದು ದಿನ ನಾನು ನನ್ನ ಮನೆಯ ಬಾಲ್ಕನಿಯ ಗಾರ್ಡನ್ ನಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದಾಗ ಗೆಜ್ಜೆಯ ಸಪ್ಪಳ ಕೆಳಿಬಂದಂತಾಗಿ ಆ ಸದ್ದು ಬಂದ ಕೆಡೆ ಹುಡುಕಾಡ ತೊಡಗಿದೆ.... ನನ್ನ ಬಾಳ ಸಂಗಾತಿ ಮೃಣಾಲಿನಿ ಸಹ ಆ ಸದ್ದಿಗೆ ಹೊರಗೆ ಬಂದು ಅಚ್ಚರಿಯಿಂದ ನನ್ನ ಮುಖ ನೋಡಿದಳು..ಕೊನೆಗೆ ಒಂದು ಮೂಲೆಯಲ್ಲಿ ಕುಳಿತ ಲವ್ ಬರ್ಡ್ ಅಪರೂಪದ ಅತಿಥಿಯಾಗಿ ನಮ್ಮ ಮನೆಯ ಆವರಣವನ್ನು ಹೊಕ್ಕಿತ್ತು..ನೋಡ ನೋಡುತ್ತಿದ್ದಂತೆಯೇ ಅತ್ತಿಂದಿತ್ತ ಹಾರಾಡ ತೊಡಗಿತು.ನಾನು ತಕ್ಷಣ ನನ್ನ ಕ್ಯಾಮರ ತೆಗೆದುಕೊಂಡು ಅದರ ಚಿತ್ರಗಳನ್ನು ಕ್ಲಿಕ್ಕಿಸ ತೊಡಗಿದೆ....ಒಂದು, ಎರಡು, ಮೂರೂ ಹೀಗೆ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದರು ಸಹ ಅದು ಮತ್ತೆ ಮತ್ತೆ ನನ್ನತ್ತ ನೋಡಿ ವಿಭಿನ್ನ ರೀತಿಯಲ್ಲಿ ಪೋಸುಗಳನ್ನು ನೀಡತೊಡಗಿತು.... ಬಿಟ್ಟು ಬಿಡದೆ ಸತತ ಅರ್ಧ ಗಂಟೆಯ ವರೆಗೆ ಅದರ ಸುಮಾರು ಚಿತ್ರಗಳನ್ನು ತೆಗೆದೆ....ಇನ್ನು ಸಾಕು ಎಂಬಂತೆ ಅದು ಮೈ ಕೊಡವಿಕೊಂಡು ಪುರ್ರನೆ ಹಾರಿ ಹೋಯಿತು...


ಒಂದು ಕ್ಷಣದ ನಿರಾಸೆ ಮುಖದಲ್ಲಿ ಆವರಿಸಿತು...ಆದರೆ ಅದನ್ನು ಸ್ವತಂತ್ರವಾಗಿ ಹಾರಾಡಲು ಬಿಟ್ಟ ಖುಷಿ ಇನ್ನೊಂದು ಕಡೆ ಇತ್ತು.... ಎಲ್ಲರಿಗು ಸ್ವತಂತ್ರವಾಗಿ ಜೀವಿಸುವ ಹಕ್ಕು ಇರುವಾಗ ಅದನ್ನು ಬಂಧಿಸಿಡುವ ಹಕ್ಕು ನಮಗೆ ಕೊಟ್ಟವರಾರು? ಇದು ನಿಸರ್ಗದ ನಿಯಮ ಮತ್ತು ನಾವು ನಮ್ಮ ಸಂಸ್ಕೃತಿ, ಇತಿಹಾಸದಿಂದ ಕಲಿತ ಪಾಠಗಳು...


ಅದಕ್ಕೆ ಇರಬೇಕು ಮಹಾಚೈತ್ರ ನಾಟಕದಲ್ಲಿ ಬಸವಣ್ಣನವರು ಬಿಜ್ಜಳ ಮಹಾರಾಜನಿಗೆ ಹೇಳುವ ಒಂದು ಮಾತು ಯಾವ ಕಾಲಕ್ಕೂ ಪ್ರಸ್ತುತ ಎನಿಸುತ್ತದೆ...


"ಇತಿಹಾಸವನ್ನು ಮರತವರು ಇತಿಹಾಸವನ್ನು ಸೃಷ್ಟಿಸಲಾರರು..."

Thursday, July 9, 2009

ಅಲ್ಲಿ ಎಲ್ಲವೂ ಇತ್ತು ಆದರೆ.....

ನಾವು ಧಾರವಾಡದಲ್ಲಿ ಕಲಿಯುತ್ತಿದ್ದಾಗ ಅಧ್ಯಯನದ ಜೊತೆ ಜೊತೆಗೆ ನಾಟಕದ ಗುಂಗು ಸಹ ಜೋರಾಗಿತ್ತು...ನಮ್ಮ ಗೆಳೆಯರ ಗುಂಪು ನಾಟಕದ ವಿಷಯ ಬಂದರೆ ಹೊಟ್ಟೆ ಬಟ್ಟೆಗೆ ಲೆಕ್ಕಿಸದೆ ಗಂಟೆಗಟ್ಟಲೆ ಆ ಕೆಲಸದಲ್ಲಿ ತೊಡಗಿಕೊಂಡು ಬಿಡುತ್ತಿದ್ದೆವು...ಎಷ್ಟೋ ಸಲ ಊಟಕ್ಕೆ ಏನು ಇಲ್ಲದಿದ್ದಾಗ ದಿಲಾವರನ ರೂಮಿನಲ್ಲಿ ಒಬ್ಬರಿಗೆ ಆಗುವ ಊಟವನ್ನು ೫ ಜನ ಹಂಚಿಕೊಂಡು ತಿಂದಿದ್ದೇವೆ...ಅದು ಇಲ್ಲವೆನ್ದಾದಾಗ ನಮ್ಮ ಜೇಬಿನಲ್ಲಿರುವ ಹಣವನ್ನೆಲ್ಲ ಕೂಡಿಸಿ ಬಸ್ ಸ್ಟ್ಯಾಂಡ್ ನಲ್ಲಿರುವ ಚಹದಂಗಡಿಯಲ್ಲಿ ಚುರುಮುರಿ ತಿಂದು, ನೀರು ಕುಡಿದು ದಿನಗಳನ್ನು ಕಳೆದಿದ್ದೇವೆ... ನನಗೆ ವೈಯಕ್ತಿಕವಾಗಿ ಹೇಳುವದಾದರೆ ಎಲ್ಲವನ್ನು ನೋಡಿದ್ದೇನೆ...ಕೆಂಪು ಬಸ್ಸಿನಲ್ಲಿ ಓಡಾಡಿದ್ದೇನೆ...ವಿಮಾನದಲ್ಲಿ ಹಾರಾಡಿದ್ದೇನೆ...ರಸ್ತೆ ಬದಿಯ ತಿಂಡಿ ತಿಂದು ಜೀವನ ನಡೆಸಿದ್ದೇನೆ....ಐಶಾರಾಮಿ ಹೋಟೆಲ್ ಗಳಲ್ಲಿ ಪಂಚ ಪಕ್ವಾನ್ನಗಳನ್ನು ತಿಂದಿದ್ದೇನೆ...ಬದುಕು ಏನೆಂದು ಸರಿಯಾಗಿ ಅರ್ಥವಾಗಿದೆ...ಅಂತೆಯೇ ಅನ್ನದ ಬೆಲೆ ಸಹ ತಿಳಿದಿದೆ...
ಇದನ್ನೆಲ್ಲಾ ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೆನೆಂದರೆ...ನಾನು ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳಬಯಸಿದ್ದರಿಂದ...
ಜಿಂದಾಲ್ ಕಾರ್ಖಾನೆಯಲ್ಲಿ ಬಿಸಿ ಉಕ್ಕು ದ್ರವವನ್ನು ತಯಾರಿಸುವ ಘಟಕವೊಂದಿದೆ...ಅದಕ್ಕೆ ಕೊರೆಕ್ಸ್ ಘಟಕವೆಂದು ಕರೆಯುತ್ತಾರೆ... ಅದು ಒಂದು ದಿನ ಏಕಾ ಏಕಿಯಾಗಿ ಕೆಲಸ ಮಾಡದೆ ಸ್ಥಬ್ದಗೊಂಡಿತು... ಎಲ್ಲ ಬಂದು ನೋಡಿದಾಗ ಅದರಲ್ಲಿ ಯಾವುದೋ ದೊಡ್ಡ ತೊಂದರೆ ಇರುವುದಾಗಿ ತಿಳಿದುಬಂದಿತು ಮತ್ತು ಅದು ಪುನಃ ಕಾರ್ಯ ನಿರ್ವಹಿಸುವನ್ತಾಗಳು ಸುಮಾರು ೮ ರಿಂದ ೧೦ ತಿಂಗಳು ಬೇಕು ಎಂದು ಅಂದಾಜಿಸಲಾಯಿತು.....ಅಲ್ಲಿನ ಎಲ್ಲ ಕೆಲಸಗಾರರು ಹಗಲು ರಾತ್ರಿ ಎನ್ನದೆ ದುಡಿಯಹತ್ತಿದರು...ನಮಗೂ ಸಹ ಬಿಡುವಿಲ್ಲದ ಕೆಲಸ...ಅಲ್ಲಿ ಕೆಲಸ ಮಾಡುವ ಜನರಿಗೆ ಬೇಕು ಬೇಡಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿತ್ತು...ಬೆಳಿಗ್ಗೆ ಸರಿಯಾಗಿ ೬ ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ ೧೨ ರ ನಂತರ ನಮ್ಮ ಗೂಡಿಗೆ ಸೇರಿಕೊಳ್ಳುವುದು...ಇದು ದಿನ ನಿತ್ಯದ ಕಾಯಕವಾಗಿತ್ತು...ನಾನು ಅಲ್ಲಿಯೇ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರಿಂದ ನನಗೆ ಅಷ್ಟೇನೂ ತೊಂದರೆ ಅನಿಸಿದ್ದಿಲ್ಲ...
ಒಂದು ದಿನ ನಾನು ಕೆಲಸ ಮುಗಿಸಿಕೊಂಡು ನನ್ನ ರೂಮಿಗೆ ಬಂದಾಗ ರಾತ್ರಿ ೧ ಗಂಟೆಯ ಸಮಯ..ಹೊಟ್ಟೆ ಚುರುಗುಟ್ಟುತ್ತಿತ್ತು...ಅಡುಗೆ ಮಾಡಿ ತಿನ್ನಬೇಕು...ಸರಿ ನನ್ನ ಬಟ್ಟೆ ಬದಲಿಸಿ...ತಯಾರಾಗಿ ಬಂದು ಅನ್ನಕ್ಕೆ ಇಡಬೇಕೆಂದು ನೋಡಿದರೆ ಅಕ್ಕಿ ಡಬ್ಬಿ ಖಾಲಿ!!!! ಎಲ್ಲ ಡಬ್ಬಗಳನ್ನು ತಡಕಾಡಿದರೆ ಯಾವ ಡಬ್ಬದಲ್ಲಿ ಸಹ ಏನು ಸಿಗಲಿಲ್ಲ...ಹೊಟ್ಟೆ ಚುರುಗುಟ್ಟುತ್ತಿದೆ...ಕನಿಷ್ಠ ಪಕ್ಷ ತಿನ್ನಲು ಬ್ರೆಡ್ ಕೂಡ ಇಲ್ಲ ಅಲ್ಲಿ...ಕಂಗಾಲಾಗಿ ಹೋದೆ....ರಾತ್ರಿ ಆ ಹೊತ್ತಿನಲ್ಲಿ ಯಾವ ಅಂಗಡಿಯು ತೆರೆದಿರುವುದಿಲ್ಲ...ಏನು ಮಾಡಬೇಕೆಂದು ತೋಚದೆ ಫ್ರಿಜ್ ಬಾಗಿಲನ್ನು ತೆರೆದಾಗ ಅಲ್ಲಿ ಸಾಸ್ ಇರುವ ಬಾಟಲ್ ಸಿಕ್ಕಿತು....ಅದನ್ನೇ ಕೈಯಲಿ ಹಾಕಿಕೊಂಡು ತುಸು ನೆಕ್ಕಿ, ನೀರು ಕುಡಿದು ಮಲಗಬೇಕಾಯ್ತು...
ಕೈಯಲ್ಲಿ ಒಂದು ಪೈಸೆ ಬಿಡಿಗಾಸು ಇಲ್ಲದಾಗ ಎಲ್ಲ ಗೆಳೆಯರು ಸೇರಿ ಕಳೆದ ದಿನಗಳೆಲ್ಲಿ? ಆದರೆ ಎಲ್ಲವೂ ಇದ್ದು ಏನು ತಿನ್ನಲು ಸಾಧ್ಯವಾಗದ ಈ ದಿನವೆಲ್ಲಿ?
ಬದುಕು ಮಾಯೆಯ ಆಟ.....

ಬ್ಲಾಗ್ ನಲ್ಲಿ ಬರೆದದ್ದಕ್ಕೆ ಮಾನ ಹಾನಿ ಖಟ್ಲೆ!!!!

ನನ್ನ ಬ್ಲಾಗನ್ನು ಅನೇಕ ಜನ ಓದುತ್ತಿದ್ದಾರೆ ಮತ್ತು ನನಗೆ ಫೋನಾಯ್ಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ...ಸರ್ ತುಂಬಾ ಚೆನ್ನಾಗಿವೆ ನಿಮ್ಮ ಅನುಭವಗಳು ಮತ್ತೆ ಮತ್ತೆ ಬರೆಯಿರಿ ಎಂಬ ಮಾತುಗಳನ್ನು ಹೇಳುತ್ತಿರುತ್ತಾರೆ...


ಅದೇ ರೀತಿ ನನ್ನ ಸ್ನೇಹಿತನೊಬ್ಬನಿಗೆ ನನ್ನ ಬ್ಲಾಗನ್ನು ನೋಡಿ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಹೇಳಿದೆ..ಮತ್ತು ಅದರಲ್ಲಿ ಕೆಲವು ಕಡೆ ಅವನ ಹೆಸರನ್ನು ಬಳಸಿರುವುದಾಗಿಯೂ ಹೇಳಿದೆ...ಅದಕ್ಕವನು ಥಟ್ಟನೆ "ಇದರಿಂದ ನನಗ..ನನ್ನ ಕೆಲಸಕ್ಕ ಏನು ತ್ರಾಸ್ ಆಗುದಿಲ್ಲ ಹೌದಲ್ಲೋ" ಎಂದ....ತುಸು ಕಾಲ ನಕ್ಕು "ಏನೂ ಆಗುದಿಲ್ಲ...ಸುಮನ ಓದಿ ನಿನ್ನ ಅಭಿಪ್ರಾಯ ತಿಳಿಸು ಅಂದೆ...


ಕೆಲ ದಿನಗಳ ನಂತರ ಅವನನ್ನು ಮತ್ತೆ ಸಂಪರ್ಕಿಸಿ.. "ನನ್ನ ಬ್ಲಾಗ್ ಓದಿದ್ಯಾ?" ಅಂದೆ..ಅದಕ್ಕವನು "ಇಲ್ಲ ಬ್ಯುಸಿ ಆಗೆನಿ...ಓದ್ತೀನಿ" ಅಂದ...ನಾನು ಅವನಿಗೆ ಬ್ಲಾಗ್ನಲ್ಲಿ ಬರೆದ ಕೆಲವು ವಿಷಯಗಳನ್ನು ಹೇಳಿದೆ...ಅದಕ್ಕವನು ತಕ್ಷಣ "ಹಿಂಗ ಬಂಡುನ ಮ್ಯಾಲ ಹಿಂಗೆಲ್ಲ ಬರದ್ರ ಅವ ನಿನ್ನ ಮ್ಯಾಲೆ ಮಾನ ಹಾನಿ ಖಟ್ಲೆ ಹಾಕತಾನ... ಸ್ವಲ್ಪ ಹುಷಾರಾಗಿರು ಎಂದ" ನನಗೆ ನಗು ತಡೆಯಲಾಗಲಿಲ್ಲ..ತಕ್ಷಣ ಬಂಡುಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದಾಗ ಇಬ್ಬರು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು....


ನಂತರ ಮತ್ತೆ ಆ ಗೆಳೆಯ ನನ್ನೊಂದಿಗೆ ಚರ್ಚಿಸುತ್ತ..."ನೀ ನಿನ್ನ ಬ್ಲಾಗನ್ನು ಬಾರೆ ಬಂಡುನ್ನ ಗೇಲಿ ಮಾಡಲಿಕ್ಕೆ ಬಳಸಿಕೊಂಡಿ...ಅದನ್ನ ಬಿಟ್ಟು ಬ್ಯಾರೆ ಏನಾರ ಬರೀ ಎಂದ..." ಬಹುಶಃ ಅವನು ನನ್ನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿ ಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು...ಬಂಡುನ ಪ್ರಸಂಗಗಳನ್ನು ಬರೆಯುವಾಗ ನಾನು ಮೊದಲೇ ಸ್ಪಷ್ಟವಾಗಿ ತಿಳಿಸಿದ್ದೆ...ಬಂಡು ಎಂದಿಗೂ ನಗೆಪಾಟಲಿನ ವ್ಯಕ್ತಿಯಾಗಿ ನಮಗೆ ಕಂಡಿಲ್ಲ...ಬಹುಶಃ ನಮ್ಮ ಗೆಳೆತನದ ಸಲುಗೆ, ಪ್ರೀತಿ ವಿಶ್ವಾಸಗಳೇ ಅವನೊಂದಿಗೆ ಈ ರೀತಿಯ ಸಲುಗೆಗೆ ಕಾರಣ ಎಂದು....


ನಮ್ಮ ನೆನಪುಗಳನ್ನು ನಾವಲ್ಲದೆ ಮತ್ಯಾರು ಬಿಚ್ಚಿಡಲು ಸಾಧ್ಯ?...


ಅದಕ್ಕೆ ಇರಬೇಕು ಜಯಂತ್ ಕಾಯ್ಕಿಣಿ ಬರೆದದ್ದು.."ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ...ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ...."

Monday, July 6, 2009

ನಮ್ಮ ಸುತ್ತಲಿನ ಸಂಬಂಧಗಳನ್ನು ಸ್ವಲ್ಪ ಕಿವಿಗೊಟ್ಟು ಕೇಳು.......

ನಾನು ಟಿ.ಬಿ.ಡ್ಯಾಮ್ ನ ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದು ಎಷ್ಟು ಆಕಸ್ಮಿಕವೋ ಅದು ಅಷ್ಟೆ ನಿಜ ಕೂಡ...ಕೇವಲ ಐದು ದಿನದಲ್ಲಿ ದಫನ ನಾಟಕವನ್ನು ನಿರ್ದೇಶಿಸಿ, ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಅದನ್ನು ರಾಷ್ಟ್ರಮಟ್ಟದಲ್ಲಿ ಜಯಭೇರಿ ಬಾರಿಸಿದ್ದು ಈಗ ಇತಿಹಾಸ....ಅದರ ಯಶಸ್ಸಿನ ಬೆನ್ನಲ್ಲಿಯೇ ನನ್ನ ಬಹುದಿನದ ಆಸೆ ಹಾಗೂ ಕನ್ನಡ ಕಲಾ ಸಂಘದ ಗೆಳೆಯರ ಒತ್ತಾಸೆಗೆ ರಾವೀ ನದಿಯ ದಂಡೆಯ ಮೇಲೆ ನಾಟಕವನ್ನು ಕೈಗೆತ್ತಿಕೊಂಡೆ....


೧೯೯೯ರ ಆಗಸ್ಟ್ ೧ ಕ್ಕೆ ಆರಂಭವಾದ ರಂಗತಾಲೀಮು ಅಕ್ಟೋಬರ್ ೨ ರಂದು ಗಾಂಧೀ ಜಯಂತಿಯಂದು ಪ್ರದರ್ಶನ ಕಾಣುವುದರೊಂದಿಗೆ ಮುಕ್ತಾಯಗೊಂಡಿತು...ಆಗ ನಾನು ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ...ನಾಟಕದ ಹುಚ್ಚು ಬೇರೆ....ಸರಿ ಪ್ರತಿದಿನ ಬರೋಬ್ಬರಿ ೬೪ ಕಿಲೋ ಮೀಟರ್ ಓಡಾಟ ಮಾಡಬೇಕಾಗಿತ್ತು ಈ ನಾಟಕವನ್ನು ತಯಾರಿಗೊಳಿಸಲು...ಏಕೆಂದರೆ ನಾನು ತೋರಣಗಲ್ಲಿನಲ್ಲಿಯೇ ಕಂಪನಿಯ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿದ್ದೆ ಮತ್ತು ಬೆಳಿಗ್ಗೆ ಸರಿಯಾಗಿ ೭ ಗಂಟೆಗೆ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ಇತ್ತು...


ಸರಿ ಸಂಜೆ ೬ ಗಂಟೆಗೆ ಕೆಲಸ ಮುಗಿಸಿಕೊಂಡು ಕಂಪನಿ ಬಸ್ ನಲ್ಲಿ ಹೊಸಪೇಟೆಗೆ ಬಂದು, ೭.೩೦ ಕ್ಕೆ ರಂಗ ತಾಲೀಮನ್ನು ಆರಂಭಿಸಿ, ರಾತ್ರಿ ೧೦ಕ್ಕೆ ಅದನ್ನು ಮುಗಿಸಿ, ೧೦.೩೦ಕ್ಕೆ ಬಳ್ಳಾರಿಯ ಕಡೆಗೆ ಹೊರಡುವ ಕೊನೆಯ ಬಸ್ಸನ್ನು ಹಿಡಿದುಕೊಂಡು ನನ್ನ ಗೂಡನ್ನು ಸೇರಿ ಕೊಳ್ಳಬೇಕಾಗಿತ್ತು...


ಬರೋಬ್ಬರಿ ಎರಡು ತಿಂಗಳಿನ ಕಾಲ ನಡೆದ ರಾವೀ ನದಿಯ ದಂಡೆಯ ಮೇಲೆ ನಾಟಕದ ತಯಾರಿ ನನಗೆ ವೈಯಕ್ತಿಕವಾಗಿ ಅನೇಕ ಹೊಸ ಪಾಠಗಳನ್ನು ಕಲಿಸಿತು...ಹೊಸ ಹೊಸ ನಟರು ಬಂದರು..ನಾಟಕ ಪೂರ್ತಿ ಗೊಳ್ಳುತ್ತಿದ್ದ ಸಂದರ್ಭದಲ್ಲಿ ಅನೇಕರು ಬಿಟ್ಟು ಹೋದರು...೩೫ ಜನರ ಭರ್ತಿ ತಂಡ ಇದಾಗಿತ್ತು... ಎರಡು ಗಂಟೆ ಹತ್ತು ನಿಮಿಷದ ನಾಟಕ...ಮಧ್ಯದಲ್ಲಿ ಯಾವುದೇ ವಿರಾಮವಿಲ್ಲ...ಹಾಡು - ಕುಣಿತ ಯಾವುದು ಇಲ್ಲ..ಸಂಪೂರ್ಣ ರಿಯಲಿಸ್ಟಿಕ್ ಆಗಿರುವ ನಾಟಕ...ಒಬ್ಬ ಪ್ರೇಕ್ಷಕನು ಎದ್ದು ಹೋಗಲಾರದಂತೆ ಹಿಡಿದಿಡುವ ಯಶಸ್ವಿ ನಾಟಕಗಳಲ್ಲಿ ಒಂದು...ಇದನ್ನು ಅಷ್ಟೆ ಶೃದ್ಧೆಯಿಂದ ಇಟಗಿ ಈರಣ್ಣ ಅವರು ನನಗೆ ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದರು..ಅವರು ಬರೆದ ಶಾಯರಿಗಳು, ಗಜಲಗಳು...ಆಹಾ...ನಾಟಕ ನಿರ್ದೇಶಿಸಿ ಹತ್ತು ವರ್ಷಗಳ ನಂತರವೂ ಅದರ ಒಂದು ಗಜಲ್ ಇಂದಿಗೂ ನನ್ನನ್ನು ಬಿಟ್ಟು ಬಿಡದೆ ಕಾಡುತ್ತಿದೆ....


"ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು...ಸಂತಸದ ಹಬ್ಬವಿದು ತಾನಿಂತು ಉಕ್ಕಿ ಭೋರ್ಗರೆವ ಕಡಲಾಯಿತು..." ಎಂತಹ ಅದ್ಭುತ ಕಲ್ಪನೆಯಿದು....ಅದನ್ನು ನಾಸಿರ್ ಕಾಜ್ಮಿ ಪಾತ್ರದಲ್ಲಿ ಚಂದ್ರಶೇಖರ್ ಕೂಡ ಅಷ್ಟೆ ಅದ್ಭುತವಾಗಿ ಹೇಳಿದ್ದರು....


ಹೀಗೆ ಒಂದು ದಿನ ನಾಟಕದ ತಾಲೀಮು ಮುಗಿಸಿಕೊಂಡು ನಾನು ತೋರನಗಲ್ಲಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ೧೧ ಗಂಟೆ ಆಗಿ ಹೋಗಿತ್ತು.... ನಾಟಕದ ಪ್ರದರ್ಶನಕ್ಕೆ ಇನ್ನು ಕೇವಲ ೪-೫ ದಿನ ಬಾಕಿ ಇತ್ತು...ಇನ್ನು ಅನೇಕ ಕೆಲಸಗಳು ಆಗುವುದು ಬಾಕಿ ಇತ್ತಾದ್ದರಿಂದ ಹೊರಡುವುದು ಸ್ವಲ್ಪ ತಡವಾಗಿತ್ತು....ಬಸ್ ನಿಲ್ದಾಣಕ್ಕೆ ಬಂದಾಗ ಬಸ್ ಆಗಲೇ ಹೊರತಾಗಿತ್ತು...ಅಲ್ಲಿಯೇ ಖಾಸಗಿ ಟೆಂಪೋ ಒಂದು ಬಳ್ಳಾರಿಗೆ ಹೊರಡಲು ತಯಾರಾಗಿ ನಿಂತಿತ್ತು....ನಾನು ಸರಿ ಎಂದು ಅದರಲ್ಲಿ ಹತ್ತಿ ಕುಳಿತೆ....ಅದು ಪುರ್ತಿಯಾಗದ ಹೊರತು ಅದು ಬಿಡುವುದಿಲ್ಲ ಎಂದು ಗೊತ್ತಿತ್ತು...ಸರಿ ಯಾವಾಗಲಾದರು ಬಿಡು ಎಂದು ನಾನು ಒಂದು ಸೀಟಿನಲ್ಲಿ ಹೋಗಿ ಕುಳಿತುಕೊಂಡು ಅಲ್ಲಿಯೇ ನಿದ್ದೆ ಹೋದೆ....


ಸುಮಾರು ಒಂದು ಗಂಟೆಯ ನಂತರ ಕ್ಲೀನರ್ ಬಂದು ಎಬ್ಬಿಸಿದ..ನನ್ನು ತೋರಣಗಲ್ ಬಂತೆಂದು ಇಳಿದೆ..ಅವನಿಗೆ ಹಣ ನೀಡಲು ಹೋದಾಗ ಅವನು "ಸರ ಇದು ಹೊಸಪೇಟೆ..ಬಳ್ಳಾರಿಗೆ ಹೋಗಲ್ಲ..ಜನ ಯಾರು ಬರಾಕಿಲ್ಲ...ನಿಮ್ಮನ್ನ ಒಬ್ಬರ್ಣ ಕರ್ಕೊಂಡು ಹೋಗಲ್ಲ..." ಎಂದು ಬಿಟ್ಟ..ಸಮಯ ನೋಡಿಕೊಂಡೆ ...ಬರೋಬ್ಬರಿ ಮಧ್ಯರಾತ್ರಿ ಒಂದು ಗಂಟೆ...ನನ್ನ ಯಾವ ಕಲಾವಿದ ಗೆಳೆಯರಿಗೆ ತೊಂದರೆ ಕೊಡುವ ಮನಸ್ಸಾಗಲಿಲ್ಲ....ಏನು ಮಾಡಬೇಕೆಂದು ತೋಚದೆ...ನಿಲ್ದಾಣದ ಒಳಕ್ಕೆ ಹೋದೆ...ಬಳ್ಳಾರಿಗೆ ಹೊರಡುವ ಬಸ್ಸು ಬೆಳಿಗ್ಗೆ ಆರು ಗಂಟೆಗೆ ಬರುತ್ತದೆ ಎಂದು ತಿಳಿಯಿತು...ಹೆಚ್ಚಿಗೆ ಯೋಚನೆ ಮಾಡಲಿಲ್ಲ....ಅಲ್ಲಿಯೇ ಕಂಟ್ರೋಲ್ ರೂಮಿನ ಎದುರು ಒಂದು ಖಾಲಿ ಬೆಂಚ್ ಇತ್ತು ..ಅದರ ಮೇಲೆ ಸುಖವಾಗಿ ನಿದ್ರಿಸಿದೆ...ಬೆಳಿಗ್ಗೆ ಆರು ಗಂಟೆಗೆ ಎದ್ದು...ನನ್ನ ಪಾಡಿಗೆ ನಾನು ತೋರನಗಲ್ಲಿಗೆ ಹೊರಟೆ....


ಇದನ್ನೆಲ್ಲಾ ನೆನಪಿಸಿಕೊಂಡಾಗ....ರಾವೀ ನದಿಯ ದಂಡೆಯ ಮೇಲೆ ನಾಟಕದ ಇನ್ನೊಂದು ಗಜಲ್ ನೆನಪಾಗುತ್ತದೆ...." ನಮ್ಮ ಸುತ್ತಲಿನ ಸಂಬಂಧಗಳನ್ನು ಸ್ವಲ್ಪ ಕಿವಿಗೊಟ್ಟು ಕೇಳು...ಏಕೆ ತುಂಬಿದೆ ಗದ್ದಲವು ಇಲ್ಲಿ...."

Sunday, July 5, 2009

ರಹಿಮತ ಖಾನ್ ಸಂಗೀತ ಸಮಾರೋಹದಲ್ಲಿ ಹೀಗೊಂದು ಘಟನೆ....

ಧಾರವಾಡದಲ್ಲಿ ರಹಿಮತ್ ಖಾನ್ ಸಂಗೀತ ಸಮಾರೋಹ ಎಂದರೆ ಅದೊಂದು ರೀತಿಯ ಹಬ್ಬ... ಡಾ. ಮಲ್ಲಿಕಾರ್ಜುನ್ ಮನ್ಸೂರ್ ಕಲಾಭವನದಲ್ಲಿ ನಡೆಯುವ ಅಹೋರಾತ್ರಿ ಸಂಗೀತ ಸಮಾರೋಹದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ತಮ್ಮ ಕಾರ್ಯಕ್ರಮವನ್ನು ನೀಡುತ್ತಾರೆ..ಅದನ್ನು ನಾವೆಲ್ಲ ಒಂದು ಪರಂಪರೆಯಂತೆ ನೋಡುತ್ತಾ ಬಂದಿದ್ದೇವೆ...

ಅಂದು ಆ ಕಾರ್ಯಕ್ರಮವನ್ನು ನೋಡಲು ನಾನು, ರವಿ, ದಿಲಾವರ್, ನರಸಿಂಹ ಹಾಗೂ ಇನ್ನಿತರ ಗೆಳೆಯರು ತಯಾರಾಗಿ ಬಂದಿದ್ದೆವು. ನಾವೆಲ್ಲ ಆ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗುತ್ತಿರುವುದು ಬಂಡುಗೆ ತಿಳಿದು, ಅವನೂ ಸಹ ಅದಕ್ಕೆ ಬರುತ್ತೇನೆಂದು, ನಾವು ಅವನಿಗಾಗಿ ಕಾಯ ಬೇಕೆಂದು ತಾಕಿತು ಮಾಡಿದ್ದ. ನಾವೆಲ್ಲ ಸರಿಎಂದು ನಮ್ಮ ತೀರ್ಥ ಪ್ರಾಸಾದಗಳನ್ನು ಮುಗಿಸಿಕೊಂಡು ಕಲಾಭವನದ ಮೈದಾನದಲ್ಲಿ ಇವನಿಗಾಗಿ ಕಾಯುತ್ತ ನಿಂತಿದ್ದೆವು. ಸಂಘದ ಪಕ್ಕದಲ್ಲಿರುವ ಕರುಣಾಕರನ ಪಾನ್ ಶಾಪ್ನಲ್ಲಿ ಬಂಡು ಬಂದರೆ ನಾವು ಇರುವ ಸ್ಥಳವನ್ನು ಅವನಿಗೆ ಹೇಳುವಂತೆ ತಿಳಿಸಿ ಬಂದಿದ್ದೆವು. ಮುಂದೆ ೧೦ ನಿಮಿಷದಲ್ಲಿ ಬಂಡು ಅಲ್ಲಿಗೆ ಬಂದ...ನಮ್ಮನ್ನು ಕಂಡವನೇ "ಬರ್ರಲೇ ಊಟ ಮಾಡ್ಕೊಂಡು ಬರೋಣು" ಎಂದ..ನಾವೆಲ್ಲ ನಮ್ಮ ಊಟ ಆಗಿರುವುದಾಗಿ ತಿಳಿಸಿದಾಗ..ಸರಿ ತಾನು ಊಟ ಮಾಡಿಕೊಂಡು ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟ ಮತ್ತು ತಾನು ತಿರುಗಿ ಬರುವುದಾಗಿಯೂ , ಎಲ್ಲರು ಸೇರಿ ಒಳಗೆ ಹೋಗೋಣ ಎಂದು ತಾಕೀತು ಮಾಡಿದ್ದ... ನಾವು ಸರಿ ಎಂದು ಅವನಿಗಾಗಿ ಕಾಯುತ್ತ ಅಲ್ಲಿಯೇ ನಿಂತೆವು....

ಅವನು ಹೋಗಿ ೫-೧೦ ನಿಮಿಷದಲ್ಲಿ ಕರುಣಾಕರನ ಶಾಪ್ನಲ್ಲಿ ಯಾರೋ ಒಬ್ಬ ಮುದುಕರು ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂತು...ಗಮನಿಸಿ ನೋಡಿದಾಗ ಅವರು ಬಂಡುನ ತಂದೆಯವರಾಗಿದ್ದರು ಮತ್ತು ಕರುಣಾಕರ ಅವರಿಗೆ ನಮ್ಮ ಹತ್ತಿರ ಹೋಗುವಂತೆ ಕೈಮಾಡಿ ತೋರಿಸುತ್ತಿದ್ದ...ನಾನು ತಕ್ಷಣ ನರಸಿಂಹನಿಗೆ ಅಲರ್ಟ್ ಮಾಡಿದೆ.....ಸ್ವಲ್ಪ ಸೀರಿಯಸ್ ಆಗಿರುವಂತೆ ಅವನಿಗೆ ಹೇಳಿದೆ...ಅವನು ಅದನ್ನು ತನ್ನ ಚೇಷ್ಟೆಯ ವಸ್ತುವನ್ನಾಗಿಸಿಕೊಂಡ....ಅವರು ನೇರವಾಗಿ ನಮ್ಮ ಕಡೆ ಬಂದವರೇ.."ಇಲ್ಲಿ ಯಾರರ ಬಂಡುನ್ನ ನೋಡೀರೇನು?" ಎಂದರು... ನರಸಿಂಹ ತಕ್ಷಣ "ಇಲ್ಲೇ ಎಲ್ಲ್ಯರ ಶೆರೆ ಕುಡಿಲಿಕ್ಕೆ ಹೋಗಿರಬೇಕು ನೋಡ್ರಿ..." ಎಂದುಬಿಟ್ಟ.. ಪಾಪ ಮುದುಕ ಏನು ಮಾಡ ಬೇಕು ಎಂದು ತೋಚದೆ ನಮ್ಮನ್ನು ನೋಡುತ್ತಾ ಅಲ್ಲಿಂದ ಕಾಲ್ಕಿತ್ತರು...

ಮುಂದೆ ಸರಿಯಾಗಿ ೧೦ ನಿಮಿಷದಲ್ಲಿ ಬಂಡು ಆ ವ್ರುದ್ಧರೊಂದಿಗೆ ಅಲ್ಲಿಗೆ ಹಾಜರಾದ...ಬಂದವನೇ ನೇರವಾಗಿ..."ಇಲ್ಲೇ ಈಗ ಹತ್ತು ನಿಮಿಷದ ಕೆಳಗ ಯಾರರ ನನ್ನನ್ನ ಕೇಳಿಕೊಂಡು ಬಂದಿದ್ದರೇನು" ಎಂದ...

ನರಸಿಂಹ ಅದಕ್ಕೆ.." ಹೌದು ಒಬ್ಬ ಯಾರೋ ಮುದುಕ ಮನುಷಾ ಬಂದಿದ್ದರು" ಎಂದ...

ಬಂಡು: ಅವರಿಗೆ ನೀವು ಏನಂತ ಹೇಳಿ ಕಳಸಿದ್ರಿ?

ನರಸಿಂಹ: ಈ ಇಲ್ಲೇ ಎಲ್ಲ್ಯರ ಶೆರೆ ಕುಡಿಲಿಕ್ಕೆ ಹೋಗಿರಬೇಕು ನೋಡ್ರಿ ಅಂದ್ವಿ....

ಬಂಡು ಮೈ ಕೈ ಹರಿದುಕೊಳ್ಳುವುದೊಂದೇ ಬಾಕಿ...ಲೇ ನಿಮ್ಮೌರ್...ಅಂವ ನಮ್ಮಪ್ಪರ್ಲೆ... ಗೊಳಾಡಲು ಆರಂಭಿಸಿದ........

Friday, July 3, 2009

ನಮ್ಮ ಜನಕ್ಕೆ ಸಂ.ಕ ಎಂದರೆ ಬೈಬಲ್ ಇದ್ದಂತೆ....

ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದು ೧೯೯೪ ರ ಡಿಸೆಂಬರ್ ೩೧ ರಂದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖಾಂತರ... ನಾನು ಇನ್ನೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದೆ...ಸಂ.ಕ ದವರು ತಾವಾಗಿಯೇ ಕರೆದು ಕೆಲಸ ಕೊಟ್ಟಿದ್ದರು...
ಆಗ ನನಗೆ ಜಿ. ಎಚ್. ರಾಘವೇಂದ್ರ, ಗುರುರಾಜ್ ಜೋಷಿ, ಲಕ್ಷಣ್ ಜೋಷಿ, ಏನ್.ವಿ. ಜೋಷಿ ಮುಂತಾದ ಹಿರಿಯ ಪತ್ರಕರ್ತರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಎಲ್ಲರು ನನ್ನನ್ನು ಎಂದಿಗೂ ಹೊಸಬ ಎಂದು ಕಾಣಲಿಲ್ಲ...ತಮ್ಮ ಸರಿಸಮನಾಗಿ ಕಂಡು ಕೆಲಸ ಕಲಿಸಿದರು... ಜಿ.ಎಚ್ ಅವರೊಂದಿಗೆ ಕೆಲಸ ಮಾಡುವುದೇ ಒಂದು ಸಂತಸದ ಸಂಗತಿ...ಎಲ್ಲರೊಂದಿಗೆ ಬೆರೆತು, ಹಾಸ್ಯದಿಂದ ಇಡೀ ಕಛೇರಿಯನ್ನು ತೇಲಿಸಿ, ತುಂಬ ಲವಲವಿಕೆಯನ್ನು ತುಂಬಿಸುತ್ತಿದ್ದರು...
ಆಗ ನಮ್ಮಲ್ಲಿಗೆ ಬರುತ್ತಿದ್ದ ಬಿಡಿವರದಿಗಾರರನ್ನು ನಾವು ತುಂಬ ಕಾಡಿಸುತ್ತಿದ್ದೆವು...ಚೇಷ್ಟೆ ಮಾಡುತ್ತಿದ್ದೆವು...ಅವರಿಗೆ ನಾವೇನಾದರೂ ಮರ್ಯಾದೆ ಕೊಡದೆ ಹೋದರೆ...ಶ್ಯಾಮರಾಯರಿಂದ ನಮಗೆ ಮೆಮೋ ಗ್ಯಾರಂಟಿ...ಅಂತಹ ಪರಿಸ್ಥಿತಿ ಅಲ್ಲಿತ್ತಾಗ...
ನಾನು ಸಂ.ಕ ಸೇರಿದ ದಿನದಂದೇ ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರನಾಗಿ ಸೇರಿದ್ದ...ಅವನು ಕೆಲಸಕ್ಕೆ ರಜಾ ಹಾಕಿ ಪರೀಕ್ಷೆ ಬರೆಯಲೆಂದು ಧಾರವಾಡಕ್ಕೆ ಬಂದಿದ್ದ...ನನ್ನಲ್ಲಿ ಸ್ವಲ್ಪ ಕೆಲಸವಿತ್ತಾದ್ದರಿಂದ ನಮ್ಮ ಆಫೀಸಿಗೆ ಬರುತ್ತೇನೆಂದು ಹೇಳಿದ್ದ....ನಾನು ಸರಿ ಎಂದಿದ್ದೆ.... ಅಂದು ಅವನು ಬಂದ ಸಮಯದಲ್ಲಿ ಒಬ್ಬ ಬಿಡಿವರದಿಗಾರ ಬಂದು ನನ್ನ ಹಾಗು ಜಿ.ಎಚ್. ಅವರ ತಲೆ ತಿನುತ್ತಿದ್ದ...ನಾವು ಅವನನ್ನು ಹೊತ್ತು ಹಾಕಲು ಎಷ್ಟೇ ಪ್ರಯತ್ನಿಸಿದರೂ ಅವನೇನು ಅಲ್ಲಿಂದ ಹೊರಡುವ ಲಕ್ಷಣಗಳು ಕಾಣಿಸಲಿಲ್ಲ...ಆ ಬಿಡಿವರದಿಗಾರನಿಗೆ ನನ್ನ ಗೆಳೆಯನ ಪರಿಚಯ ಮಾಡಿಸಿ, ಇವರು ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಎನ್ನುವ ದೊಡ್ಡ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾರೆ ಎಂದದ್ದೇ ತಡ...ಆತ ತಕ್ಷಣ ನನ್ನನ್ನು ತಡವಿ ನನ್ನ ಗೆಳೆಯನಿಗೆ.."ಅದ್ಯಾವ ಪೆಪರ್ರೀ...ಈ ಸಾಹೇಬರಿಗೆ ಹೇಳ್ರಿ ನಿಮಗ ಸಂಯುಕ್ತ ಕರ್ನಾಟಕದಾಗ ಕೆಲಸ ಕೊಡಸ್ತಾರ ...ಇದರಂಥಾ ಪೇಪರ್ ಬ್ಯಾರೆ ಯಾವುದೈತರಿ" ಎಂದ...ಅಲ್ಲಿಯೇ ಕುಳಿತಿದ್ದ ಜಿ.ಎಚ್. ತಕ್ಷಣ "ಗೋವಿಂದಾ...ಗೋವಿಂದಾ...." ಎಂದು ಎದ್ದು ಬೀಡಿ ಸೇದಲು ಹೊರಕ್ಕೆ ನಡೆದರು!!!!

ಧಾರವಾಡೆಂಬ ಊರೂ...ಬಂಡು ಕುಲಕರ್ಣಿ ಎಂಬ ವ್ಯಕ್ತಿಯೂ.....

  • ಬಂಡು ಕುಲಕರ್ಣಿ ಬಗ್ಗೆ ಬರೆಯುತ್ತಾ ಹೋದಂತೆ ಅದೊಂದು ದೊಡ್ಡ ಇತಿಹಾಸವೇ ಆದೀತು...ಅವನು ನಗೆಪಾಟಲಿನ ವ್ಯಕ್ತಿ ಖಂಡಿತಾ ಆಗಿರಲಿಲ್ಲ...ಬಹುಶಃ ನಮ್ಮಲ್ಲಿದ್ದ ಸ್ನೇಹದ ಸಲುಗೆ ಹಾಗು ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣವಿರಬಹುದು...ಅವನೊಬ್ಬ ಇಂಟರೆಸ್ಟಿಂಗ್ ವ್ಯಕ್ತಿಯಂತು ಖಂಡಿತ ಸತ್ಯ....ಅವನೊಂದಿಗೆ ಕಳೆದ ಕೆಲವು ಘಟನೆಗಳ ಝಲಕುಗಳನ್ನಿಲ್ಲಿ ತೆರೆದಿಡುತ್ತಿರುವೆ....

    ೧೯೯೫ ರ ದಿನಗಳು...ಧಾರವಾಡಕ್ಕೆ ಆಗ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ "ಕೆಂಪು ಸೂರ್ಯ" ಎಂಬ ತಗಡು ಸಿನೆಮಾ ಒಂದು ಬಂದಿತ್ತು...ಧಾರವಾಡದ ಬಸ್ ಸ್ಟ್ಯಾಂಡ್ ನಲ್ಲಿ ಅದರ ಪೋಸ್ಟರ್ ಅಂಟಿಸಿದ್ದರು...ನಾವು ಬಂಡುನನ್ನು ಎಷ್ಟರ ಮಟ್ಟಿಗೆ ನಂಬಿಸಿದ್ದೆವೆಂದರೆ
    ಇದೊಂದು ಅದ್ಭುತ ಚಿತ್ರ..ಇದು ಆಸ್ಕರ್ ಪ್ರಶಸ್ತಿಗೆ ನೇಮಕ ಗೊಂಡಿದೆ...ನಾವೆಲ್ಲಾ ನೋಡಿಕೊಂಡು ಬಂದಿದ್ದೇವೆ..ಎಂದೆಲ್ಲ ಹೇಳಿದೆವು...ಮತ್ತು ಅದನ್ನು ಅವನು ನೋಡಿಬರುವಂತೆ ಪ್ರೆರೆಪಿಸಿದೆವು...ಮಾರನೆ ದಿನ ನಾವು ಎಂದಿನಂತೆ ಸಂಘದ ಎದುರು ಬಂದು ನಿಂತಾಗ ಇನ್ನೂ ಬಂಡು ಬಂದಿರಲಿಲ್ಲ...ಅವನು ಬರುತ್ತಿದ್ದಂತೆಯೇ ನಾವೆಲ್ಲಾ ಅವನನ್ನು ಕೆಣಕಲು ಆರಂಭಿಸಿದೆವು....ಬಹಳ ಸಿಟ್ಟಿನಲ್ಲಿದ್ದ...ಹಾಗೆಯೇ ಮಾತನಾಡುತ್ತಾ ನಾವು ಬಸ್ ಸ್ಟ್ಯಾಂಡ್ ಹತ್ತಿರ ಬಂದಾಗ ರಾತ್ರಿ ಸುಮಾರು ೮.೩೦....ಅವನನ್ನು ಎಷ್ಟರ ಮಟ್ಟಿಗೆ ನಾವು ರೆಗಿಸಿದ್ದೆವೆಂದರೆ...ಬಸ್ ಸ್ಟ್ಯಾಂಡ್ನಲ್ಲಿ ಅವನು ತನ ಚಪ್ಪಲಿಯನ್ನು ತೆಗೆದುಕೊಂಡು ತಾನೇ ಕೆನ್ನೆಗೆ ಹೊಡೆದುಕೊಂಡಿದ್ದ....ಅಷ್ಟರಲ್ಲಿ ದಿಲಾವರ್ ಅವನನ್ನು ಇನ್ನೂ ರೇಗಿಸಿ..."ಎ ಇದನ್ನ ಯಾರೂ ನೋಡಿಲ್ಲ..ಹಿಂಗ ಮರ್ಯಾಗ್ ಹೊಡಕೊಂಡ್ರ ಯಾರು ನೋಡ್ತಾರ? ಸ್ವಲ್ಪ ಎಲ್ಲರಿಗೂ ಗೊತ್ತಾಗೋ ಹಂಗ ಹೊಡಕೋರಿ..." ತಕ್ಷಣ ಬಂಡು ಒಂದು ಎತ್ತರವಾದ ಸ್ಥಳದಲ್ಲಿ ನಿಂತು ಎಲ್ಲರ ಗಮನ ಅವನತ್ತ ಬರುವಂತೆ....ತನ್ನ ಚಪ್ಪಲಿಯಿಂದ ತಾನೆ ತನ್ನ ಕೆನ್ನೆಗೆ ಹೊಡೆದುಕೊಂಡಿದ್ದ......
  • ಅವನಿಗೆ ಬಲಭಾಗದ ಹುಬ್ಬಿನ ಪಕ್ಕದಲ್ಲಿ ಒಂದು ನರೋಲಿಯಾಗಿತ್ತು...ಒಂದು ದಿನ ಅದನ್ನು ತೆಗೆಸಿಕೊಂಡು ಸಂಘದ ಹತ್ತಿರ ಬಂಡು ಗೆಳೆಯ ಗಿರೀಶನನ್ನು ಕೇಳಿದ.."ಗಿರ್ಯಾ ಹೆಂಗ್ ಕಾನಸ್ತೆನಲೇ?" ಅದಕ್ಕೆ ಗಿರೀಶ್ "ನನಗೇನೂ ಫರಕ ಕಾಣಸ್ವಲ್ತು" ಎಂದ...ತಕ್ಷಣವೇ ಬಂಡು.."ಎ ನೋಡಲೇ ನಾನು ನರೋಲಿ ತಗಸೆನಿ" ಎಂದ...ಗಿರೀಶನಿಗೆ ಅಷ್ಟೇ ಸಾಕಾಗಿತ್ತು...ತಕ್ಷಣವೇ ಎಲ್ಲರಿಗು ವಿಷಯ ರವಾನೆಯಾಗಿತ್ತು...ಎಲ್ಲರೂ ಬಂದು, ಬಂಡುನನ್ನು "ಎನಲೇ ಬಂಡ್ಯಾ ತೆಗಸಿದ್ಯನ್ತಲಾ" ಎಂದು ಕೇಳ ತೊಡಗಿದರು...ಇಡೀ ಧಾರವಾಡದ ತುಂಬ ಸುದ್ದಿ ಬಿತ್ತರವಾಗಿತ್ತು....ಬಂಡುಗೆ ಎಷ್ಟು ಸಿಟ್ಟು ಬಂದಿತ್ತೆಂದರೆ....ತನ್ನ ಕೂದಲು ಹರಿದುಕೊಳ್ಳುವುದೊಂದೇ ಬಾಕಿ.....
  • ಡಿಸೆಂಬರ್ ತಿಂಗಳಿನಲ್ಲಿ ಬಹುತೇಕವಾಗಿ ಜನ ಮಾಲೆಯನ್ನು ಹಾಕಿ ಕೊಂಡು ಅಯ್ಯಪ್ಪನ ಭಕ್ತರಾಗುತ್ತಾರೆ...ಬಹಳ ಕಟ್ಟು-ನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ...ಎಲ್ಲಾ ಚಟಗಳನ್ನು ಬಿಡುವುದು ಅದರಲ್ಲಿ ಮುಖ್ಯವಾದುದು....ಹೀಗಿರುವಾಗ ಒಂದು ದಿನ ನರಸಿಂಹ ಅವನ ಬಗ್ಗೆ ಸುದ್ದಿಯನ್ನು ಹಬ್ಬಿಸಿ ಬಿಟ್ಟ..."ಬಂಡ್ಯಾ ಅಯ್ಯಪ್ಪನ ಮಾಲಿ ಹಾಕ್ಯಾನ..ಜನೆವರಿ ೧೪ ನೆ ತಾರೀಖಿಗೆ ಶಬರಿ ಮಲೈ ಹೋಗ್ತಾನ" ಅಂತ...ಈ ಸುದ್ದಿಯನ್ನು ನಾನು ಮಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಕುಲಕರ್ಣಿಗೆ ಈ ವಿಷಯವನ್ನು ತಿಳಿಸಿದೆ...ಮಹೇಶ್ ಹಾಗು ಬಂಡು ತುಂಬಾ ಆತ್ಮೀಯರು...ಮತ್ತು ನಾವು ಬಂದುನನ್ನು ಕಾಡಿಸುವುದು ಮಹೇಶನಿಗೆ ತಿಳಿದಿತ್ತು....ಅವನು ಸಹ ಇದರ ಸದುಪಯೋಗ ಪಡೆದುಕೊಂಡು..ಅವನಿಗೆ ಸಂಕ್ರಾಂತಿ ನೆಪದಲ್ಲಿ ಒಂದು ಪತ್ರವನ್ನು ಬರೆದೆ ಬಿಟ್ಟ... "ಬಂಡು ಸಂಕ್ರಾಂತಿ ಹಬ್ಬದ ಶುಭಾಶಯಗಳು...ನೀನು ಅಯ್ಯಪ್ಪ ಸ್ವಾಮಿಯ ಭಕ್ತನಾಗಿರುವುದು ಹಾಗು ಮಾಲೆಯನ್ನು ಹಾಕಿರುವುದು ತುಂಬಾ ಸಂತಸದ ವಿಷಯ..ನೀನು ಶಬರಿ ಮಲೈಗೆ ಹೋಗುತ್ತಿರುವ ವಿಷಯ ತಿಳಿದು ಸಂತೋಷವಾಯ್ತು ... ದಯವಿಟ್ಟು ನಮಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸು..ನಮಗೂ ಪ್ರಸಾದ ತೆಗೆದುಕೊಂಡು ಬಾ"....ಪತ್ರ ಬಂದ ದಿನ ಅವನ ಅವತಾರ ಹೇಳತೀರದು.... ನಾ ಈ ನನ್ನ ಮಕ್ಕಳಿಗೆ ಏನರ ಅನ್ಯಾಯ ಮಾಡೆನಿ...ನನ್ನ ಬಗ್ಗೆ ಯಾಕ ಹಿಂದ ಅಪಪ್ರಚಾರ ಮಾಡ್ತಾರ? ಎಲ್ಲರ ಮುಂದೆ ತನ್ನ ಗೋಳು ತೋಡಿಕೊಳ್ಳುತ್ತಿದ್ದ....

  • ಧಾರವಾಡ ಸಾಹಿತಿ, ಕಲಾವಿದರ ತವರೂರು...ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು ನಾಡಿಗೆ ನೀಡಿದ ಹೆಮ್ಮೆ ಈ ನಗರಕ್ಕಿದೆ..ಅಂತೆಯೇ ಕೆಲವು ಸ್ಯಾಂಪಲ್ಗಳು ಇಲ್ಲಿ ದೊರೆಯುತ್ತವೆ....ಉದಾಹರಣೆಗೆ ಮಲ್ಲಿಕಾರ್ಜುನ ಹಳೆಮನಿ...ಈತ ಒಬ್ಬ ವಿಚಿತ್ರ ಆಸಾಮಿ...ಕನ್ನಡ ಮಾತನಾಡಿದರೆ ಅದು ಅರೇಬಿಕ್ ಮಾತಾಡಿದಂತೆ ಅನಿಸುತ್ತದೆ....ರಾಜಕೀಯದ ಹುಚ್ಚು ಬೇರೆ...ರಾಜಕೀಯ ಭಾಷಣ ಮಾಡಲು ಈತನಿಗೆ ಎಲ್ಲಿಲ್ಲದ ಹುರುಪು...ಧಾರವಾಡದಲ್ಲಿ ಯಾವುದೇ ರೀತಿಯ ಚಳುವಳಿಗಳಾಗಲಿ...ಹೋರಾಟಗಲಾಗಲಿ ಈತ ಮುಂದೆ ಇರಲೇಬೇಕು....ಆದರೆ ಈತ ಮಾತನಾಡುವುದು ಆ ದೇವರಿಗೆ ಮಾತ್ರ ಅರ್ಥವಾಗಬೇಕು...ಇಂತಹ ವ್ಯಕ್ತಿಯನ್ನು ನರಸಿಂಹ ಒಂದು ದಿನ ರಾತ್ರಿ ಗಂಟೆಯ ನಂತರ ಬಂಡುನ್ ರೂಮಿಗೆ ಕರೆದುಕೊಂಡು ಹೋಗಿದ್ದಾನೆ....ಮಲ್ಲಿಕಾರ್ಜುನನಿಗೆ ತಂಬಾಕು ತಿನ್ನುವ ಚಟ ..ರಾತ್ರಿ ೧೨ ಗಂಟೆಗೆ ಯಾವ ಅಂಗಡಿಗಳು ತೆರೆದಿದ್ದಿಲ್ಲ...ತಕ್ಷಣ ನೆನಪಾಗಿದ್ದು ಬಂಡುನ ರುಂ..ಸರಿ ಅಲ್ಲಿಗೆ ಹೋಗಿದ್ದಾರೆ..ಮಲ್ಲು ಅವನೊಂದಿಗೆ ತನ್ನ ಕನ್ನಡ-ಅರೇಬಿಕ್ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ್ದಾನೆ...ಉಹುಂ... ಬಂಡುಗೆ ಏನು ಅರ್ಥವಾಗಿಲ್ಲ...ಮತ್ತೆ ಮತ್ತೆ ಮಲ್ಲುನನ್ನು ಕೇಳಿದ್ದಾನೆ...ಅವನ ಹಾಸಿಗೆ, ಪುಸ್ತಕಗಳ ಮಗ್ಗುಲು...ದಿಂಬು ಏಲ್ಲವನ್ನು ಕಿತ್ತು ಹಾಕಿದ್ದಾನೆ ಮಲ್ಲು ಆದರೆ ಅವನು ಮಾತನಾಡುತ್ತಿರುವುದು ಮಾತ್ರ ಬಂಡುಗೆ ಅರ್ಥವಾಗಿಲ್ಲ..ಕೊನೆಗೆ ಮಲ್ಲು ಸಿಟ್ಟಿಗೆದ್ದು...ಏನ್ರೋ ಪಿ.ಎಚ್.ಡಿ ಮಾಡ್ತೀರಿ..ತಂಬಾಕ್ ಇಡಾಕ ಬರುದುಲ್ಲ... ಈ ಮಾತು ಮಾತ್ರ ಬಂಡುಗೆ ಅರ್ಥವಾಗಿದೆ....ಹತಾಶನಾಗಿ ಏನು ತೋಚದೆ ಅಳಲು ಶುರು ಮಾಡಿದ!....

Thursday, July 2, 2009

ಬಂಡು ನಾ ಪಂಕಜಾ ಮಾತಾಡೋದು....











ಧಾರವಾಡದಲ್ಲಿದ್ದ ನಮ್ಮ ದಿನಗಳು ನಿಜಕ್ಕೂ ಬಹಳ ಖುಷಿ ನೀಡಿದ ದಿನಗಳು... ಅಲ್ಲಿನ ಗೆಳೆಯರು, ಪರಿಸರ, ನಾವು ಬೆಳೆದ ರೀತಿ..ಎಲ್ಲವು ಕೂಡ ಬಹುಕಾಲ ನೆನಪಿನಲ್ಲಿ ಉಳಿಯುವಂತಹವುಗಳು....

ನರಸಿಂಹ ರಾವ್ ಅತ್ಯಂತ ಉತ್ಸಾಹಿ, ಬಹು ಕೀಟಲೆಯ ಮನುಷ್ಯ...ಎಲ್ಲರನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಈತ ನಿಸ್ಸೀಮ...ಹೆಣ್ಣು ಧನಿಯಲ್ಲಿ ಮಾತನಾಡ ತೊಡಗಿದನೆಂದರೆ ಯಾರಾದರು ಸಹ ಮರುಳಾಗಲೇ ಬೇಕು... ಹೀಗೆ ನಾವು ಗೋಳು ಹೊಯ್ಸಿಕೊಳ್ಳಲು ನಮಗೆ ಮೇಲಿಂದ ಮೇಲೆ ಸಿಗುವ ಆಸಾಮಿ ಎಂದರೆ ಬಂಡು ಕುಲಕರ್ಣಿ.... ಅವನನ್ನು ನಾವು ಅನೇಕ ಬಾರಿ ರಾತ್ರಿ ೧೨ ಗಂಟೆಯ ನಂತರ ಅವನ ರೂಮಿಗೆ ಹೋಗಿ, ಬಾಗಿಲು ಬಡಿದು, ಖ್ಯಾತ ಸಾಹಿತಿಗಳ ಹೆಸರನ್ನು ಹೇಳಿ, ಬಾಗಿಲು ತೆರೆಯಿಸಿ...ಕಾಡುತ್ತಿದ್ದೆವು...ಒಂದು ಸಲವಂತೂ ಗೆಳೆಯ ಗಿರೀಶ್ ಜೋಷಿ ಅವನ ರೋಮಿಗೆ ರಾತ್ರಿ ೧೨ ಗಂಟೆಗೆ ಕಂಠ ಪೂರ್ತಿ ಕುಡಿದು ಹೋಗಿ...ರೂಮಿನಲ್ಲಿ ವಾಂತಿ ಮಾಡಿಕೊಂಡು ಬಂದಿದ್ದ... ಅದನ್ನು ಸ್ವಚ್ಚಗೊಳಿಸಲು ಅವನಿಗೆ ಬರೋಬ್ಬರಿ ೨ ದಿನ ಬೇಕಾಗಿತ್ತು....

ಹೀಗಿರುವಾಗ ಒಂದು ದಿನ ನರಸಿಂಹನಿಗೆ ಅದೇನೋ ಒಂದು ವಿಚಿತ್ರ ಯೋಚನೆ ತಲೆಯಲ್ಲಿ ಬಂತು ಅದನ್ನು ತಕ್ಷಣವೇ ಕಾರ್ಯ ರೂಪಕ್ಕೆ ಇಳಿಸಿಯು ಬಿಟ್ಟ...

ಧಾರವಾಡದಲ್ಲಿ ಆಗ (೧೯೯೫ ರಲ್ಲಿ) "ನಗರ ನೂಪುರ" ಎಂಬ ಹೊಸ ಪತ್ರಿಕೆ ಆರಂಭವಾಗಿತ್ತು...ಬಂಡು ಆಗತಾನೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಈ ಪತ್ರಿಕೆಯನ್ನು ಸೇರಿಕೊಂಡಿದ್ದ...ನರಸಿಂಹ ಬಂದವನೇ ತನ್ನ ಯೋಜನೆಯನ್ನು ಹೇಳಿದಾಗ ನಾವೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು...ಅದರ ವಿವರ ಇಷ್ಟೇ ಪ್ರತಿದಿನ ನರಸಿಂಹ ಬಮ್ದುನಿಗೆ ಹುಡುಗಿಯ ಹೆಸರಿನಲ್ಲಿ ಫೋನ್ ಮಾಡಿ ಅವನನ್ನು ಗೋಳುಹೊಯ್ದುಕೊಳ್ಳುವುದು...ಅದನ್ನು ನಾವು ಎಂಜಾಯ್ ಮಾಡುವುದು...ಅಂತೆಯೇ ನರಸಿಂಹನ ಕೆಲಸ ಆರಂಭವಾಯಿತು...."ಬಂಡು ನಾ ಪಂಕಜಾ ಅಂತ ಮೈಸೂರಿನಿಂದ ಬಂದೇನಿ...ನಿಮ್ಮ ಬಗ್ಗೆ ನಾನು ಮೈಸೂರಿನ ರಂಗಾಯಣದಾಗ ಭಾಳ ಕೇಳೀನಿ..ಪತ್ರಿಕೆ ಯೊಳಗೂ ನಿಮ್ಮ ಲೇಖನಾ ಭಾಳ ಓದೀನಿ...ನಾನು ಈಗ ಧಾರವಾದಕ್ಕ ಬಂದೀನಿ...ನಿಮ್ಮನ್ನ ಕಾಣ ಬೇಕಾಗಿತ್ತು..." ಬಂಡು ಫುಲ್ ಭಾವುಕನಾಗಿಹೋದ... ನರಸಿಂಹ ಫೋನ್ ಮಾಡಿ ತನ್ನ ಪಾಡಿಗೆ ತನ್ನ ಮನೆಗೆ ಹೊರಟು ಬಿಡುತ್ತಿದ್ದ...ಮುಂದೆ ನಮ್ಮ ಕಾರ್ಯಾಚರಣೆ ಆರಂಭವಾಗುತ್ತಿತ್ತು...ನಾನು, ರವಿ, ದಿಲಾವರ್, ಸುರೇಶ ಕುಲಕರ್ಣಿ ಮುಂತಾದವರಿಗೆ ಬಂಡು ಅಕ್ಷರ ಷಹ ಆಹಾರವಾಗುತ್ತಿದ್ದ...ಮೊದಲಿನ ಕೆಲವುದಿನಗಳವರೆಗೆ ಈ ವಿಷಯವನ್ನು ನಮ್ಮ ಮುಂದೆ ಪ್ರಸ್ತಾಪಿಸುತ್ತಲೇ ಇರಲಿಲ್ಲ....ನಾವು ಅವನು ಹೇಳುವವರೆಗೆ ಅದರ ಉಸಾಬರಿಗೆ ಹೋಗಬಾರದೆಂದು ನಿರ್ಧರಿಸಿದ್ದೆವು...

ಹೀಗೆ ಇರುವಾಗ ಒಂದು ದಿನ ಅವನಾಗಿಯೇ ಬಂದು "ರವ್ಯಾ..ಧನ್ಯಾ ನಿಮ್ಮ ಹತ್ರ ಒಂದು ಇಂಪಾರ್ಟೆಂಟ್ ವಿಷ್ಯ ಮಾತಾಡಬೇಕು..ಬರ್ರಿ ಹೋಗೋಣು..." ಎಂದ. ನಮಗೆ ಗೊತ್ತಾಗಿ ಹೋಗಿತ್ತು...ಕುರಿ ಬಂದು ಹಳ್ಳಕ್ಕೆ ಬಿದ್ದಿದೆ ಎಂದು...ಜೊತೆಯಲ್ಲಿ ದಿಲಾವರ್ ಹಾಗು ಸುರೇಶ ಕುಲಕರ್ಣಿ ಇಬ್ಬರು ಬಂದರು...ನಮ್ಮ ಕುಡಿತ ಹಾಗು ಮಾತು ಆರಂಭವಾಯಿತು...ಬಂಡು ಎಂದು ಯಾವ ಕಾರಣಕ್ಕೂ ತನ್ನ ಜೇಬಿನಿಂದ ಹಣ ಬಿಚ್ಚಿದವನಲ್ಲ...ಆದರೆ ಅಂದು ಅವನಾಗಿಯೇ ನಮ್ಮನ್ನು ಕರೆದಿದ್ದರಿಂದ "ನೋಡ್ರಲೇ ನನ್ನ ಹತ್ರ ಬರೇ ನೂರು ರುಪಾಯಿ ಆದವು..ಅಷ್ಟ " ಎಂದ..ನಾವು "ಆತು ಬಂಡು ಅಸ್ಥರಾಗ ಮುಗಸೋನು ಎಂದು ಕಚೇರಿ ಆರಂಭವಾಯ್ತು... ಎಲ್ಲರು ಒಂದೊಂದು ಪೆಗ್ಗು ತೆಗೆದುಕೊಂಡು ಅವನನ್ನು ಮಾತಿಗೆ ಎಲೆಯುತ್ತಿದ್ದಂತೆಯೇ..ಅವನಾಗಿಯೇ ತನ್ನ "ಪ್ರೇಮ ಕಥೆಯನ್ನು" ಆರಂಭಿಸಿದ...

ಧನ್ಯಾ, ರವ್ಯಾ..ನನಗ ಯಾರೋ ಪಂಕಜಾ ಅನ್ನೋ ಹುಡುಗಿ ಫೋನ್ ಮಡ್ಲಿಕತ್ತಾಳ...ಮೈಸುರಿನ್ಯಾಕಂತ...ರಂಗಾಯನದಾಗ ನನ್ನ ಬಗ್ಗೆ ಕೆಲ್ಯಾಳಂತ...ನನ್ನ ಲೇಖನಾನು ಓದ್ಯಾಳಂತ...ಅವನ ಮಾತು ಕೇಳುತ್ತಿದಂತೆಯೇ ಒಂದು ಮೂಲೆಯಲಿ ಕುಳಿತಿದ್ದ ದಿಲಾವರ್ ಹಾಗು ಸುರೇಶ ಕುಲಕರ್ಣಿ ತಮ್ಮಲ್ಲಿಯೇ ಮುಸಿ ಮುಸಿ ನಗುತ್ತದ್ದರು...ನಾವು "ಪಂಕಜಾ" ಳ ಬಗ್ಗೆ ಹೆಚ್ಚಿಗೆ ಹೇಳು ಎಂದು ಬಂಡುನನ್ನು ಹುರಿದುಂಬಿಸುತ್ತಿದ್ದೆವು ...ಅವನು ಮತ್ತೆ ಮತ್ತೆ ಅದನ್ನೇ ಕನವರಿಸುತ್ತಿದ್ದ...ನಮ್ಮ ಖಾಲಿಯಾದ ಗ್ಲಾಸುಗಳಿಗೆ ರಂ ಬಂದು ಬೀಳುತ್ತಿತ್ತು...ಬರೀ ನೂರು ರುಪಾಯಿ ಇದೆ ಎಂದು ಹೇಳುತ್ತಿದ್ದ ಬಂಡು ತನ್ನ ಟೇಬಲ್ಲಿಗೆ ಬಂದ ೪೦೦ ರುಪಾಯಿ ಬಿಲ್ಲನ್ನು ಕೊಟ್ಟು ಹೊರಡುತ್ತಿದ್ದ...

ಈ ಪಂಕಜಾ ಕಥೆ ಒಂದೆರಡು ದಿನದಲ್ಲಿ ಮುಗಿಯಲಿಲ....ನಮಗೆ ಮೋಜು ಮಾದಬೇಕೆನಿಸಿದಾಗೆಲ್ಲ ನಾವು ಹುಬ್ಬಳ್ಳಿಯ ನವನಗರದಿಂದ ನರಸಿಂಹನನ್ನು ಕರೆಸಿಕೊಂಡು ಪಂಕಜಾ ಹೆಸರಿನಲ್ಲಿ ಫೋನ್ ಮಾಡಿಸುವುದು, ನಂತರ ನರಸಿಂಹನನ್ನು ತನ್ನ ಮನೆಗೆ ಕಳುಹಿಸಿ ನಾವು ಬಂಡುನೊಂದಿಗೆ ತೀರ್ಥ ಪ್ರಸಾದದಲ್ಲಿ ಮುಳುಗಿರುತ್ತಿದ್ದೆವು...ಒಂದು ದಿನವಂತೂ ಬಂಡು ಪೂರ್ತಿ ಟೈಟ್ ಆಗಿ "ಐ ಅಂ ಇನ್ ಲವ್ ವಿಥ್ ಪಂಕಜಾ" ಎಂದು ಧಾರವಾಡದ ಎಮ್ಮಿಕೆರಿಯಲಿ ರಾತ್ರಿ ೧೧ ಗಂಟೆಗೆ ರಂಪ ಮಾಡಿದ್ದ...

ಈ ಕಥೆ ಸತತವಾಗಿ ಮೂರೂ ತಿಂಗಳವರೆಗೆ ನಡೆಯಿತು...ಒಂದು ದಿನ ನರಸಿಂಹ ಪಂಕಜಾ ಹೆಸರಿನಲ್ಲಿ ಫೋನ್ ಮಾಡಿ "ಬಂಡು ನಾನು ನಿಮ್ಮನ್ನ ಭೇಟಿ ಆಗಬೇಕಂತ ಮಾಡೀನಿ..ಆದ್ರ ನಿಮ್ಮ ಜೊತಿ ಆ ಗಡ್ಡ ಬಿಟ್ಟೌರು ಇಬ್ಬರು ಇರತಾರ..ಅವರು ನನ್ನನ್ನ ಹ್ಯಾಂಗೋ ನೋಡತಾರ..ಅವರಂದ್ರ ನನಗ ಆಗಿ ಬರಂಗಿಲ್ಲ...ಎಂದಾಗ ಬಂಡುಗೆ ನನ್ನ ಹಾಗು ಸುರೇಶ ಕುಲಕರ್ಣಿ ಮೇಲೆ ಸಂಶಯ ಏಕೆಂದರೆ ನಾವಿಬ್ಬರು ಆಗ ಗಡ್ಡ ಬಿಡುತ್ತಿದ್ದೆವು...ಬಂಡು ಅವನ "ಪಂಕಜಾ" ಳಿಗೆ ಪ್ರಾಮಿಸ್ ಮಾಡಿದ...ನಾನು ಅವರಿಬ್ಬರ ಜೊತಿ ಗೆಳೆತನ ಬಿಡತೀನಿ...ಎಲ್ಲಿ ಭೇಟಿ ಆಗೋನು? ಅದಕ್ಕವಳು..."ನಾಳೆ ಸಂಜೀ ಮುಂದ ವಿದ್ಯಾವರ್ಧಕ ಸಂಘದ ಮುಂದ ಕರೆಕ್ಟಾಗಿ ೭ ಗಂತೆಕ ನಾನು ನೀಲಿ ಬಣ್ಣದ ಸೆಲ್ವಾರ್ ಕಮೀಜ್ ಹಾಕ್ಕೊಂಡು ಬಿಳಿ ಬಣ್ಣದ ಸ್ಕೂಟಿ ಜೊತಿ ನಿಂತಿರತೀನಿ ... ನೀನು ಅದನ್ನ ನೋಡಿದ ಕೂಡಲೇ ನನ್ನನ್ನ ಫಾಲೋ ಮಾಡು ಮುಂದ ಎಲ್ಲರ ಹೋಗಿ ಭೇಟಿ ಆಗೋನು" ಬಂಡು ಈಗ ವಿಶ್ವದ ಅತ್ಯಂತ ತುತ್ತ ತುದಿಯಲ್ಲಿ...ರಾತ್ರಿ ಮತ್ತೆ ನಮ್ಮನ್ನು ಕರೆದುಕೊಂಡು ಹೋಗಿ ಗುಂಡು ಹಾಕಿಸಿದ..ಆದರೆ "ಪಂಕಜಾ" ಳನ್ನು ಭೇಟಿ ಆಗುವ ವಿಷಯವನ್ನು ಮಾತ್ರ ಪ್ರಸ್ತಾಪಿಸಲಿಲ್ಲ...ನಾವು ಕೇಳಲಿಲ್ಲ.....

ಮಾರನೆ ದಿನ ನಾವು ಎಂದಿನಂತೆ ಸಂಘದ ಹತ್ತಿರ ಬಂಡು ಸೇರಿದೆವು..ನಮ್ಮ ಜೊತೆ ನರಸಿಂಹನು ಇದ್ದ ಎಲ್ಲರು ಒಳಗೊಳಗೇ ನಗುತ್ತಿದ್ದೆವು...ಬಂಡು ಬಂಡು ನಮ್ಮಿಂದ ತುಸು ದೂರದಲ್ಲಿ ನಿಂತಿದ್ದ..ನಮ್ಮ ಹತ್ತಿರ ಬರಲು ಆಟ ಸಿದ್ಧನಿರಲಿಲ್ಲ...ಮಾತನಾಡಿಸಿದರೆ ಸಿಟ್ಟಿಗೆಲ ತೊಡಗಿದ... ಅದೇನು ಕಾಕತಾಳೀಯವೋ ಏನೋ ಗೊತ್ತಿಲ ಅದೇ ಸಮಯಕೆ ಸರಿಯಾಗಿ ವಿದ್ಯಾವರ್ಧಕ ಸಂಘದ ಎದುರು ನೀಲಿ ಬಣ್ಣದ ಸೆಲ್ವಾರ್ ಕಮೀಜ್ ಹಾಕಿಕೊಂಡು ಬಿಳಿ ಬಣ್ಣದ ಸ್ಕೂಟಿ ಯೊಂದಿಗ್ಗೆ ಒಬ್ಬ ಯುವತಿ ಅಲ್ಲಿ ಪ್ರತ್ಯಕ್ಷವಾಗಿ ಬಿಟ್ಟಳು..ಬಂಡುಗೆ ಸ್ವರ್ಗಕ್ಕೆ ಮೂರೇ ಗೇಣು...ನಮಗೆ ಇದು ವಿಚಿತ್ರ ಆದರು ಸತ್ಯವಾಗಿ ಕಂಡಿತು....ಅವಳು ಆಟ ಇತ್ತ ನೋಡಿ..ತನ್ನ ಗಾಡಿಯನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಕಾಲ್ಕಿತ್ತಳು...ಬಂಡು ಕೂಡ ತನ್ನ ೧೮ ನೆ ಶತಮಾನದ ಟಿವಿಎಸ್ ಗಾಡಿಯನ್ನು ತೆಗೆದುಕೊಂಡು ಅವಳ ಹಿಂದೆ ಹೊರಟೇಬಿಟ್ಟ....

ಏನಾಗುತ್ತದೆ ಎಂಬ ಕುತೂಹಲ ನಮಗೆಲ್ಲ...ಅದಕ್ಕಾಗಿ ಮಾರನೆದಿನದ ವರೆಗೆ ಕಾಯಲೇ ಬೇಕು....ಸರಿ ಮಾರನೆದಿನ ಮತ್ತೆ ನಾವು ಸಂಘದ ಹತ್ತಿರ ಬಂದು ಸೇರಿದೆವು...ಬಂಡು ಮಾತ್ರ ತನ್ನ ಗಾಡಿ ಬಿಟ್ಟು ಬರಿಗಾಲಿನಲ್ಲಿ ಬಂದಿದ್ದ..ಏಕೆಂದು ಕೇಳಿದಾಗ ಆ ಹುಡುಗಿ ತನ್ನ ಪಾಡಿಗೆ ತಾನು ಸ್ಕೂಟಿಯಲ್ಲಿ ಜೋರಾಗಿ ಸಂದಿಗೊಂದಿಗಳಲ್ಲಿ ನುಗ್ಗಿ ಇವನ ಕೈಗೆ ಸಿಗದಂತೆ ಹೊರತುಹೊಗಿದ್ದಾಳೆ..ಇವನದು ಮೊದಲೇ ಹಳೆಯ ಶತಮಾನದ ಗಾಡಿ...ಮಾರ್ಗ ಮಧ್ಯದಲಿ ಅದರಲ್ಲಿನ ಪೆಟ್ರೋಲ್ ತೀರಿ...ಅಲ್ಲೇ ನಿಂತಿದೆ..ಅಲ್ಲಿಂದ ಬಂಡು ಸುಮಾರು ನಾಲ್ಕು ಕಿಲೋ ಮೀಟರ್ ದೂರ ಗಾಡಿ ತಳ್ಳಿಕೊಂಡು ತನ್ನ ರೂಮಿಗೆ ಬಂದು ಸೇರಿದ್ದಾನೆ...ಮಾರನೆ ದಿನ ಬೆಳಿಗ್ಗೆ ಎದ್ದವನೇ ಯಾರಿಗೂ ಹೇಳದೆ ಕೇಳದೆ ಅದನ್ನು ೧೫೦೦ ರುಪಾಯಿಗೆ ಮಾರಾಟ ಮಾಡಿದ್ದಾನೆ....ನಮಗೆ ನಗಲು ಮತ್ತೆ ಇನ್ನೊಂದು ಕಾರಣ ಸಿಕ್ಕಿತು...ಹೊಟ್ಟೆ ತುಂಬ ನಕ್ಕಿದ್ದೆ ನಕ್ಕಿದ್ದು...

ಕ್ರಮೇಣ ಈ ಪಂಕಜಾಲ ವಿಷಯ ಧಾರವಾಡದಲ್ಲಿ ಬಹುತೇಕ ಎಲ್ಲರಿಗು ತಿಳಿದಿತ್ತು...ಕೊನೆಗೊಂದು ದಿನ ನಮ್ಮ ಗೆಳೆಯರ ವಲಯದಲಿಯೇ ಒಬ್ಬರು ಬಂದುನಿಗೆ ಈ ಕೆಲಸವನ್ನು ಮಾಡುತ್ತಿರುವವರು ನಾವೇ ಎಂದು ತಿಳಿಸಿದರು.....ಬಂದು ಫುಲ್ ಕಂಗಾಲಾಗಿದ್ದ...ಏನು ಮಾಡಬೇಕೆಂದು ತಿಳಿಯದಂತಾದ.....

ಇಂದು ಬಂಡು ಆಕಸ್ಮಿಕವಾಗಿ ನನ್ನ ಬ್ಲಾಗ್ ನೋಡಿ ಫೋನಾಯಿಸಿದ...ನನ್ನ ಬ್ಲಾಗ್ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತ ಪಡಿಸಿದ...ನಾನು ಈ ವಿಷಯವನ್ನು ಬರೆಯುವುದಾಗಿ ಹೇಳಿದಾಗ...ಇದನ್ನು ನೆನೆಸಿಕೊಂಡು ಇಬ್ಬರು ಹೊಟ್ಟೆ ತುಂಬ ನಕ್ಕೆವು.....ಅದಕ್ಕೆ ಇರಬೇಕು ಚಂಪಾ ಬರೆದದ್ದು.."ಪ್ರೀತಿ ಇಲ್ಲದೆ ನಾನು ಏನನ್ನು ಮಾಡುವುದಿಲ್ಲ...ದ್ವೇಷವನ್ನು ಕೂಡ..."