Friday, February 26, 2010

ಹೀಗೊಂದು ಗಂಭೀರ ಚರ್ಚೆ...

ಗೆಳೆಯ ಮಣಿಕಾಂತ್ - ಅವಧಿ ಬ್ಲಾಗ್ ನಲ್ಲಿ ಯಡಿಯೂರಪ್ಪನವರ ಕುರಿತು, ಗಣಿ ಪರವಾನಗಿ ಕುರಿತು ಅವರ ನಿಲುವುಗಳ ಬಗ್ಗೆ ಗಂಭೀರವಾದ ಪತ್ರ ಬರೆದಿದ್ದಾರೆ.
ಮಣಿಯ ಪತ್ರ ಓದಲು ಇ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ...
ಮಣಿಯ ಪತ್ರಕ್ಕೆ ನನ್ನ ಅಭಿಪ್ರಾಯ ಹೀಗಿದೆ...
ನಮ್ಮ ನಾಡಿನ ಮುಖ್ಯ ಮಂತ್ರಿಗಳಿಗೆ ನಿಮ್ಮ ಯಾವುದೇ ಕಾಳಜಿಗಳು ಕೇಳಿಸುವುದಿಲ್ಲ. ಅವರದು ಜಾಣ ಕಿವುಡು. ತುಘಲಕ್ ದರ್ಬಾರ ನಡೆದಿದೆ ಇಲ್ಲಿ. ಒಂದು ಪ್ರದೇಶದ ಭೌಗೋಲಿಕ ಸಂಪತ್ತು ಆ ಪ್ರದೇಶದ ಸಾಂಸ್ಕೃತಿಕ ಕಾಳಜಿಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಾಡುತ್ತದೆ ಎಂಬ ಮಾತು ನಮ್ಮ ಸನ್ಮಾನ್ಯ ಮುಖ್ಯ ಮಂತ್ರಿಗಳ ಪಾಲಿಗೆ ಅರಣ್ಯರೋದನವಾಗಿದೆ. ಸ್ವಲ್ಪ ದಿನ ಕಾದು ನೋಡಿ…ಇದೇ ನಮ್ಮ ಮುಖ್ಯ ಮಂತ್ರಿಗಳು ಒಂದೋ ಇದು ಮಾಧ್ಯಮಗಳ ಸೃಷ್ಟಿ ಎಂತಲೋ ಅಥವಾ ಇಂತಹ ತಪ್ಪು ಮತ್ತೆ ಪುನರಾವರ್ತನೆ ಆಗುವುದಿಲ್ಲ ಅಂತಲೋ ಹೇಳಿಕೆಕೊಟ್ಟು ತಮ್ಮ ಹೆಗಲ ಮೇಲಿನ ಭಾರವನ್ನು ಇಳಿಸಿಕೊಳ್ಳುತ್ತಾರೆ. ನಂತರ ಗುಡಿ ಗುಂಡಾರಗಳಿಗೆ ತಿರುಗಿ ತಮ್ಮ ಹರಕೆಯನ್ನು ಸಾರ್ವಜನಿಕರ ಹಣದಲ್ಲಿ ತೀರಿಸುತ್ತಾರೆ.

ಥೂ ನಿಮ್ಮ….ನಿಮಗೇನಾದರೂ ಮಾನ, ಮರ್ಯಾದೆ, ನಾಚಿಕೆಗಳ ಅರ್ಥ ತಿಳಿದಿದ್ದರೆ ನಮ್ಮ ನಾಡನ್ನು, ನಾಡಿನ ಸಂಪತ್ತನ್ನು ರಕ್ಷಿಸುವ ಕೆಲಸ ಮೊದಲು ಮಾಡಿ. ನಂತರ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಾಯಕದಲ್ಲಿ ತೊಡಗಿ.
ನೀವೂ ಪ್ರತಿಕ್ರೀಯಿಸಿ...

Monday, February 22, 2010

ನಾನು ಇವನ್ನೆಲ್ಲ ನಂಬುವುದಿಲ್ಲ...ಆದರೆ.....

ಜನವರಿ ೨೯ ಹಾಗೂ ೩೦ ರಂದು ನಾನು ಧಾರವಾಡಕ್ಕೆ ಹೋಗಿದ್ದೆ. ನಾನು ಕಲಿತ ವಿಶ್ವವಿದ್ಯಾಲಯದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾಧ್ಯಮ ಕುರಿತ ವಿಚಾರ ಸಂಕಿರಣಕ್ಕೆ ನನ್ನನ್ನು ಉಪನಾಸಕರಲ್ಲೊಬ್ಬನೆಂದು ಆಹ್ವಾನಿಸಿದ್ದರು. ಹೀಗಾಗಿ ಮಾಧ್ಯಮ ಲೋಕದಲ್ಲಿ ನನಗಿರುವ ಅಲ್ಪ ಸ್ವಲ್ಪ ಅನುಭವಗಳನ್ನು ನನ್ನ ಕಿರಿಯ ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಲು ಹೋಗಿದ್ದೆ. ಅಂದು ನಾನ್ಉ ಎಂದಿನಂತೆ ನನ್ನ ಧಾರವಾಡದ ಎಲ್ಲ ಹಳೆಯ ಗೆಳೆಯರನ್ನು ಕಂದು ಮಾತನಾಡಿಸಿದೆ. ಅನೇಕರು ನನ್ನನ್ನು "ಏನಪಾ ಯಾವ ನಾಟಕಾ ಮಾಡಸ್ಲೀಕತ್ತೀ" ಎಂದೇ ಪ್ರಶ್ನಿಸಿದ್ದರು. ನಾನು ಚಂದ್ರಶೇಖರ್ ಕಂಬಾರರ "ಜೋಕುಮಾರಸ್ವಾಮಿ" ಎಂದಾಗ ಎಲ್ಲರಿಗೂ ಖುಷಿಯಾಗಿತ್ತು. ಜನಪದ ಪ್ರಕಾರದ ನಾಟಕ ಅದರಲ್ಲೂ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವುದರಿಂದ ಅದಕ್ಕೆ ಹೆಚ್ಚಿನ ಮೆರಗು ನೀಡಲು ನನ್ನಿಂದ ಸಾಧ್ಯ ಎಂದು ನನ್ನ ಅನೇಕ ಮಿತ್ರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಾನು ಹಿಂದೆ ಒಂದು ಸಲ ನನ್ನ ಗುರುಗಳಾದ ಶ್ರೀ. ಬಿ.ವಿ. ಕಾರಂತರ ಹತ್ತಿರ ನನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದೆ. "ಮೇಷ್ಟ್ರೇ ನಾನು ಒಂದು ನಾಟಕವನ್ನು ನಿರ್ದೇಶಿಸುತ್ತೇನೆ ಮತ್ತು ಅದಕ್ಕೆ ತಾವು ಸಂಗೀತ ನಿರ್ದೇಶನ ಮಾಡಬೇಕು" ಎಂದಿದ್ದೆ. ಅದಕ್ಕವರು ಸಂತೋಷದಿಂದ ಒಪ್ಪಿ, ನನ್ನ ಬೆನ್ನಮೇಲೆ ಕೈಯಾಡಿಸಿದ್ದರು. ಮುಂದೆ ಕಾರಂತರ ಆರೋಗ್ಯ ತೀರ ಹದಗೆಟ್ಟಿತು, ನಮ್ಮಿಂದ ತುಂಬಾ ದೂರ ಸಾಗಿ ಬಿಟ್ಟರು...ಅವರಿಂದ ನನ್ನ ನಿರ್ದೇಶನದ ನಾಟಕಕ್ಕೆ ಸಂಗೀತ ಮಾಡಿಸುವ ಕನಸು ಕನಸಾಗಿಯೇ ಉಳಿದು ಹೋಯಿತು. ಆದರೆ ಕಾರಂತರು ಈಗಾಗಲೇ ಸಂಗೀತ ಸಂಯೋಜನೆ ಮಾಡಿರುವ ನಾಟಕವನ್ನು ಏಕೆ ನಿರ್ದೇಶಿಸಬಾರದು ಎಂಬ ನನ್ನ ಆಸೆಗೆ ಒತ್ತಾಸೆಯಾಗಿ ನಿಂತವರು ರಾ.ಶಿ.ಕುಲಕರ್ಣಿ. ನಾನೂ ಸಹ ಒಪ್ಪಿ ಅವರು ಸಂಗೀತ ಸಂಯೋಜನೆ ಮಾಡಿರುವ "ಜೋಕುಮಾರಸ್ವಾಮಿ" ನಾಟಕವನ್ನು ನಿರ್ದೇಶಿಸುವ ಸಿದ್ಧತೆಯನ್ನು ನಡೆಸಿದೆ.

ಧಾರವಾಡದ ನನ್ನ ಗೆಳೆಯನೊಬ್ಬ ನಾನು ಈ ನಾಟಕವನ್ನು ಮಾಡಿಸುತ್ತಿದ್ದೇನೆಂಬ ವಿಷಯ ತಿಳಿದ ತಕ್ಷಣವೇ "ಧನ್ಯಾ...ಹುಶಾರ್...ಈ ನಾಟಕ ಭಾಳ ಡೇಂಜರ್...ಛೋಲೋತ್ನಂಗ ಪೂಜಾ ಮಾಡ್ಸಿ ಆಮ್ಯಾಲ ಈ ನಾಟಕಾ ಮಾಡಸ್ಲಿಕ್ಕೆ ಕೈಹಾಕು" ಅಂದ....ನಾನು ಸುಮ್ಮನೇ ಅವನತ್ತ ನೋಡಿ ನಕ್ಕು ಮತ್ತೆ ನನ್ನ ಕೆಲಸದ ಕಡೆಗೆ ವಾಲಿದೆ.

ಆದರೆ ಒಂದು ಮಾತನ್ನಂತೂ ಇಲ್ಲಿ ಹೇಳಲೇ ಬೇಕು...ನನ್ನ ಗೆಳೆಯ ಹೇಳಿದ ಅಂತಲೊ ಅಥವಾ ಈ ನಾಟಕಕ್ಕೆ ಆ ರೀತಿಯ ಕಳಂಕ ಅಂಟಿದೆಯೋ ಗೊತ್ತಿಲ್ಲ. ನನ್ನ ಬರೊಬ್ಬರಿ ೨೮ ವರ್ಷಗಳ ರಂಗಭೂಮಿಯ ಅನುಭವದಲ್ಲಿ ನಾನು ಈ ನಾಟಕದ ತಯಾರಿಯಲ್ಲಿ ಅನುಭವಿಸಿದ ಕಿರಿಕಿರಿ, ತೊಂದರೆ ಬೇರೆ ಯಾವ ನಾಟಕದ ತಯಾರಿ ಸಂದರ್ಭದಲ್ಲಿಯೂ ಅನುಭವಿಸಲಿಲ್ಲ. ನಮ್ಮ ತಂಡದ "ಮ್ಯಾನೇಜರ್" ಎಂದೇ ಹೆಸರಾಗಿರುವ ಹಿರಿಯರಾದ ಸದಾನಂದ ಅವರು ತಮ್ಮ ತಮ್ಮನ ಮಗಳ ಮದುವೆಗೆಂದು ಸಂಸಾರ ಸಮೇತರಾಗಿ ಊರಿಗೆ ಹೋದರು.ಅವರು ನಮ್ಮ ಇಡೀ ತಂಡದ ಯಜಮಾನರು. ಎಲ್ಲ ಬೇಕು ಬೇಡಗಳನ್ನು ಸ್ವತಃ ನಿಂತು ನೋಡಿಕೊಳ್ಳುವವರು. ಅವರ ಮಗಳು ನನ್ನ ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಳು. ನಾಟಕ ಪ್ರದರ್ಶನಕ್ಕೆ ಇನ್ನು ಕೇವಲ ೬ ದಿನ ಮಾತ್ರ ಇತ್ತು. ನನ್ನ ಒತ್ತಡ ಯಾರ ಮುಂದೆಯೂ ಹೇಳಿಕೊಳ್ಳುವಂತಿಲ್ಲ...ಫೆಬ್ರುವರಿ ೭ ರಂದು ಮದುವೆ ಮುಗಿಸಿ ಸದಾನಂದ ಅವರ ಮಗಳು ಮತ್ತೆ ೮ ನೇ ತಾರೀಖಿನಂದು ನಮ್ಮ ನಾಟಕದ ತಾಲೀಮಿಗೆ ಹಾಜರಾದಳು. ಸದಾನಂದ್ ಅವರು ೯ ನೇ ತಾರೀಖಿಗೆ ನಮ್ಮ ತಾಲೀಮಿಗೆ ಹಾಜರಾಗಬೇಕಿತ್ತು. ಅಂದು ಮುಂಜಾನೆ ಸರಿಯಾಗಿ ೧೦ ೩೦ ರ ಸಮಯ ಸದಾನಂದ್ ಅವರಿಂದ ನನಗೆ ಫೋನ್ ಕರೆ..ಅದರಲ್ಲಿ ಅವರಿಂದ ಯಾವುದೇ ಮಾತಿಲ್ಲ..ಕೇವಲ ಬಿಕ್ಕಳಿಕೆ..ಅವರ ಅಣ್ಣ ಹೃದಯಾಘಾತದಿಂದ ನಿಧನ ಹೊಂದಿದ್ದರು!...ನನ್ನಲ್ಲಿ ಆಡಲು ಯಾವ ಮಾತುಗಳು ಉಳಿದಿರಲಿಲ್ಲ....ಅವರ ಮಗಳಿಗೆ ನಾನೇ ಸಾಂತ್ವನ ಹೇಳಿ ಊರಿಗೆ ಕಳಿಸಿದೆ....ಅವಳು ಇನ್ನೂ ಅತ್ತ ಊರಿನ ಬಸ್ಸ್ ಹತ್ತಿರಲಿಲ್ಲ..ಆಗಲೇ ನನಗೆ ಪೋನಾಯಿಸಿ "ಅಂಕಲ್...ನನಗೆ ಕೊಟ್ಟಿರುವ ಪಾತ್ರವನ್ನು ನಾನೇ ಮಾಡುತ್ತೇನೆ...ನಾಳೆ ಬೆಳಿಗ್ಗೆ ನಾನು ತಿರುಗಿ ಬಂದು ಬಿಡುತ್ತೇನೆ...ಯಾವುದೇ ಕಾರಣಕ್ಕೂ ನಿಮ್ಮ ಪರಿಶ್ರಮವನ್ನು ಹಾಳು ಮಾಡಲು ಬಿಡುವುದಿಲ್ಲ...." ಅವಳು ಪಾಪ ಇನ್ನೂ ಮಾತನಾಡುತ್ತಿದ್ದಳೇನೋ....ನಾನೇ ಫೋನ್ ಕಟ್ ಮಾಡಿಬಿಟ್ಟೆ......

ಹೇಳಿದ ಮಾತಿನಂತೆ ಆ ಹುಡುಗಿ ೧೦ ನೇ ತಾರಿಖಿನ ಸಂಜೆಗೆ ಮತ್ತೆ ನನ್ನ ನಾಟಕದ ತಾಲೀಮಿಗೆ ಹಾಜರಾದಳು...ಸದಾನಂದ್ ಅವರು ಮಾಡುತ್ತಿದ್ದ ಪಾತ್ರವನ್ನು ಬೇರೆಯವರಿಗೆ ಹಂಚಿದ್ದಾಯಿತು...ಅಷ್ಟರಲ್ಲಿಯೇ ರಷ್ಮಿ (ಸದಾನಂದ್ ಅವರ ಮಗಳ ಹೆಸರು) ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆಯವರನ್ನು ತಯಾರಿಮಾಡಿದ್ದೂ ಆಯ್ತು...ನಾಟಕದ ತಯಾರಿ ನಡೆಯುತ್ತಿದಂತೆಯೆ..ನಮ್ಮ ನಟ ಮಹಾಶಯರು ತಮಗೆ ಬೇಕಾದಂತೆ ತಾಲೀಮಿಗೆ ಬರುವುದು...ಯಾವುದಕ್ಕೂ ಕ್ಯಾರೇ ಅನ್ನದ ಅವರ ನಿಲುವು.... ಅವೆಲ್ಲವುಗಳ ಮಧ್ಯೆ ಸದಾನಂದ್ ಅವರ ಅನುಪಸ್ಥಿತಿ..ನನ್ನನ್ನು ದಿಕ್ಕು ತಪ್ಪಿಸಿತ್ತು....

ಒಟ್ಟಿನಲ್ಲಿ ಮುಂಬೈನಲ್ಲಿ ಒಳ್ಳೆಯ ಪ್ರದರ್ಶನ ನೀಡಬೇಕೆಂದು ನಾವು ತಯಾರಿ ಮಾಡಿಕೊಂಡು ಮುಂಬೈ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಫೆಬ್ರುವರಿ ೧೨ ರ ಬೆಳಿಗ್ಗೆ ಸುಮಾರು ೮.೩೦ ರ ಸಮಯ ಸದಾನಂದ್ ಅವರಿಂದ ಮತ್ತೊಂದು ಫೋನ್!...ಅವರ ಅಣ್ಣನವರ ನಿಧನದ ಸುದ್ದಿ ಕೇಳಿ..ಆ ಆಘಾತವನ್ನು ತಡೆದುಕೊಳ್ಳಲಾಗದೇ, ಸದಾನಂದ್ ಅವರ ಅಕ್ಕನ ಮಗ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ....ಈ ವಿಷಯವನ್ನು ರಷ್ಮಿಗೆ ತಿಳಿಸದಂತೆ ಅವರ ನಮ್ರ ವಿನಂತಿ!....
ಈ ಎಲ್ಲ ತೊಂದರೆಗಳ ಮಧ್ಯೆ ರಷ್ಮಿಯ ಧ್ವನಿ ಬಿದ್ದು ಹೋಗಿತ್ತು..ಮಾತನಾಡಲೂ ಆಗದಷ್ಟು ತೊಂದರೆ ಅನುಭವಿಸುತ್ತಿದ್ದಳು ಹುಡುಗಿ....ಎಲ್ಲವನ್ನೂ ಹಾಗೆಯೇ ಸಹಿಸಿಕೊಂಡು ಮುಂಬೈ ತಲುಪಿ, ಅಲ್ಲಿ ಮತ್ತೆ ೨-೩ ತಾಲೀಮುಗಳನ್ನು ಮಾಡಿ, ಫೆಬ್ರುವರಿ ೧೪ ರಂದು ಪ್ರದರ್ಶನವನ್ನು ನೀಡಿ ರಂಗದಿಂದ ಕೆಳಗಿಳಿಯುತ್ತಿದ್ದಂತೆಯೇ ನನಗೆ ತುಂಬಿದ ಸಭಾಂಗಣದಿಂದ ಕೇವಲ ಪ್ರೇಕ್ಷಕರ ಕರತಾಡನ ಮಾತ್ರ ಕೇಳುತ್ತಿತ್ತು....ಒಂದು ಕ್ಷಣ ಸದಾನಂದ್, ಅವರ ಅಣ್ಣ....ಎಲ್ಲರೂ ನನ್ನ ಕಣ್ಣ ಮುಂದೆ ಬಂದು ಹೋದರು.....ಕಣ್ಣಂಚಿನಲ್ಲಿ ನೀರಿಳಿಯುತ್ತಿತ್ತು....ನಾಟಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಕ್ಕೆ ಮನದಲ್ಲಿ ಧನ್ಯತಾ ಭಾವ!...
ಅಂದ ಹಾಗೆ...ಶಂಕರ‍್ನಾಗ್ ಸಹ "ಜೋಕುಮಾರಸ್ವಾಮಿ" ನಾಟಕವನ್ನು ಚಲನಚಿತ್ರವನ್ನಾಗಿಸುವ ಕಾಯಕದಲ್ಲಿ ತೊಡಗಿದ್ದಾಗಲೇ ಭೀಕರ ಅಪಘಾತಕ್ಕೀಡಾಗಿ ದುರಂತ ಸಾವಿಗೀಡಾದರು.....