"ಪಿಯುಸಿ ಶಿಕ್ಷಣ ಮುಗಿಯಿತು..ಮುಂದೇನು ಓದುವುದು?...ಅರೇ ನನ್ನ ಡಿಗ್ರಿ ಕೂಡ ಮುಗಿಯಿತು....ನಾನು ಮುಂದೆ ಶಿಕ್ಷಣ ಮುಮ್ದುವರೆಸುವುದೇ ಅಥವಾ ಕೆಲಸಕ್ಕೆ ಸೇರುವುದೇ? ಕೆಲಸಕ್ಕೆ ಸೇರುವುದಾದರೆ ಮುಂದೆ ಯಾವ ಕ್ಷೇತ್ರ ನನ್ನ ಬದುಕಿಗೆ ಹೊಂದಬಲ್ಲದು? ನನಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಯಾರೂ ಇಲ್ಲ..." ಇದು ಇಂದಿನ ಬಹುತೇಕ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ. ಅದರಲ್ಲೂ ಗ್ರಾಮಾಂತರ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಂತಹ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದವರಂತೂ ಅವರ ಮುಂದಿರುವುದು ಎರಡೇ ದಾರಿ ಒಂದು ಎಂಜಿನೀಯರಿಂಗ್ ಶಿಕ್ಷಣಕ್ಕೆ ಸೇರಿಕೊಳ್ಳಬೇಕು ಅಥವಾ ವೈದ್ಯಕೀಯದಲ್ಲಿ ಪದವಿಯನ್ನು ಪಡೆಯಬೇಕು. ಆ ಕ್ಷಣದಲ್ಲಿ ವಾಸ್ತವ ಸಂಗತಿ ಅವರ ಅರಿವಿಗೆ ಬರುವುದೇ ಇಲ್ಲ. ಎಲ್ಲರಿಗೂ ತಮ್ಮ ಶಿಕ್ಷಣ ಮುಗಿದ ತಕ್ಷಣ ಕೈತುಮ್ಬ ಸಂಬಳವಿರುವ ಕೆಲಸ ಬೇಕು. ನೆಮ್ಮದಿಯ ಜೀವನ ನಡೆಸಬೇಕು. ಇದು ನಾವಿಂದು ಕಾಣುತ್ತಿರುವ ಸಾಮಾನ್ಯ ಸಂಗತಿ. ಬಹುತೇಕ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಮುಗಿದ ನಂತರ ಸ್ನಾತಕೋತ್ತರ ಪದವಿಗೆಂದು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಇದು ಕೇವಲ ಔಪಚಾರಿಕವಾಗಿ ಕಾಣುತ್ತದೆ. ಇನ್ನೂ ಒಂದು ಸ್ವಲ್ಪ ದಿವಸ ವಿದ್ಯಾರ್ಥಿ ಜೀವನವನ್ನು ಅನುಭವಿಸಬೇಕೆಂದು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತುವವರು, ಮುಂದೆ ಏನೂ ಸಾಧಿಸಲಾಗದೇ ಜೀವನದಲ್ಲಿ ಹತಾಶರಾಗುವುದು ಇವೆಲ್ಲ ನಾವಿಂದು ಕಾಣುವ ಸಾಮಾನ್ಯ ಸಂಗತಿಗಳು.
ಸಮೂಹ ಸಂವಹನ ಕ್ಷೇತ್ರ ಇಂದು ಹಿಂದಿಗಿಂತಲೂ ವಿಶಾಲವಾಗಿ ಹರಡಿದೆ. ಅದರಲ್ಲೂ ಜಾಹಿರಾತು ಹಾಗೂ ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿರುವ ಅವಕಾಶಗಳು ಬೇರೆ ಯಾವುದೇ ಮಾಧ್ಯಮ ಕ್ಷೇತ್ರಗಳಲ್ಲಿಲ್ಲ. ಪತ್ರಿಕೋದ್ಯಮ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳು ಅದನ್ನೊಂದು ವೃತ್ತಿಪರ ಕೋರ್ಸ್ ಎಂದು ಪರಿಗಣಿಸುವುದೇ ಇಲ್ಲ. ಮಾಧ್ಯಮ ಲೋಕ ಅವರಿಗೆ ಅತ್ಯಂತ ವರ್ಣರಂಜಿತವಾಗಿ ಕಾಣುತ್ತದೆ. ಹಗಲುಗನಸು ಕಾಣಲು ಆರಂಭಿಸುತ್ತಾರೆ. ಮುಂದೊಂದು ದಿನ ಅವರು ದೇಶದ ಪ್ರತಿಷ್ಠಿತ ದೃಶ್ಯಮಾದ್ಯಮದಲ್ಲಿ ರಾರಾಜಿಸುವ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. ಆದರೆ ಆ ಮೆಟ್ಟಿಲನ್ನು ಏರಲು ಬೇಕಾದ ಅರ್ಹತೆ ತಮ್ಮಲ್ಲಿದೆಯೇ, ಅದಕ್ಕ ತಕ್ಕ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆಯೇ ಎನ್ನುವುದರ ಕುರಿತು ಕಿಂಚಿತ್ತೂ ಕಾಳಜಿವಹಿಸುವುದಿಲ್ಲ. ಪತ್ರಿಕೋದ್ಯಮ ಶಿಕ್ಷಣಕ್ಕೆ ಸೇರಿದ ದಿನದಿಂದಲೇ ಅವರಲ್ಲಿ ಮಹತ್ತರವಾದ ಬದಲಾವಣೆಗಳು ಆರಂಭವಾಗಿಬಿಟ್ಟಿರುತ್ತವೆ. ಇತರೆ ಎಲ್ಲ ಜನಸಾಮಾನ್ಯರಿಗಿಂತ ಅವರು ತಮ್ಮನ್ನು ತಾವು ತುಂಬ ವಿಭಿನ್ನ ಎಂಬ ಮನೊಭಾವನೆ ಅವರಲ್ಲಿ ಬಂದು ಬಿಟ್ಟಿರುತ್ತದೆ. ಈ ಮನೋಭಾವನೆ ಅವರನ್ನು ಮುಂದೆ ಏನನ್ನೂ ಹೊಸತನ್ನು ಕಲಿಯಲು ಬಿಡುವುದಿಲ್ಲ. ಕಲಿಕೆ ಎನ್ನುವುದು ಅವರಲ್ಲಿ ನಿಧಾನವಾಗಿ ಕುಂಠಿತಗೊಳ್ಳತೊಡಗುತ್ತದೆ.
ಜಗತ್ತಿನ ಯಾವುದೇ ಮೂಲೆಯಲ್ಲಿ ನಾವಿಂದು ವಾಸಿಸುತ್ತಿದ್ದರೂ, ವಿಶ್ವದ ಎಲ್ಲ ಘಟನೆಗಳು ನಮ್ಮ ಬೆರಳ ತುದಿಗೆ ಬಂದು ಬೀಳುತ್ತಿವೆ. ನಾವೆಲ್ಲ ಇಂದು ಒಂದು ಪುಟ್ಟ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಜಗತ್ತು ಇಂದು ಬಹಳ ವೇಗವಾಗಿ ಓಡುತ್ತಿದೆ. ಆದರೆ ನಾವು ಅದರ ವೇಗಕ್ಕೆ ಹೊಂದಿಕೊಳ್ಳುತ್ತಿದ್ದೇವೆಯೇ? ಬಿನ್ ಲಾಡೆನ್‍ನನ್ನು ಅಟೋಟಾಬಾದ್ ನಲ್ಲಿ ಹೆಡೆಮುರಿಕಟ್ಟಿದ ಸುದ್ದಿ ನಮಗೆಲ್ಲ ಕ್ಷಣಮಾತ್ರದಲ್ಲಿ ತಿಳಿದುಹೋಯ್ತು. ಜಪಾನ್‍ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ಪರಿಣಾಮ ನಮ್ಮನ್ನೆಲ್ಲ ನಿಮಿಷಾರ್ಧದಲ್ಲಿ ಬೆಚ್ಚಿ ಬೀಳಿಸಿತು. ಇಂತಹ ಅನೇಕ ಸುದ್ದಿಗಳು ನಮ್ಮನ್ನಿಂದು ವಿಶ್ವದ ಮೂಲೆಮೂಲೆಗಳಿಂದ ಬಂದು ತಲುಪುತ್ತಿವೆ. ಇದು ಸಂವಹನ ಮಾಧ್ಯಮದಲ್ಲಿ ನಡೆಯುತ್ತಿರುವ ಕ್ರಾಂತಿ. ಆದರೆ ಇಂತಹ ಸುದ್ದಿಗಳನ್ನು ಬಿತ್ತರಿಸುತ್ತಿರುವ ಮಾಧ್ಯಮಗಳು ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತವೆ, ಅಂತಹ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಅರ್ಹತೆಗಳೇನು ಮುಂತಾದ ಮೂಲಭೂತ ಅಗತ್ಯಗಳ ಬಗ್ಗೆ ಇಂದಿನ ಯುವ ಜನಾಂಗ ಅದರಲ್ಲೂ ಆ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮೂಹ ಕೂಲಂಕುಷವಾಗಿ ಅಧ್ಯಯನ, ಸಂಶೋಧನೆಗಳನ್ನ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ. ಬೆಳಗಾಗುವಷ್ಟರಲ್ಲಿ ಮಾಧ್ಯಮ ಲೋಕದ ಹಕ್ಕಿಗಳಾಗಬೇಕು, ಜನರು ನಮ್ಮನ್ನು ವಿಶೇಷ ವ್ಯಕ್ತಿಗಳೆಂದು ಗುರುತಿಸಬೇಕು, ಸಮಾಜದಲ್ಲಿ ತಮಗೊಂದು ವಿಶೇಷ ಸ್ಥಾನಮಾನ, ಗೌರವ ದೊರೆಯಬೇಕು ಎಂಬ ಹವಣಿಕೆ ಮಾತ್ರ ಅವರದ್ದಾಗಿರುತ್ತದೆ.
ಭಾರತದ ಮಟ್ಟಿಗೆ ಹೇಳುವುದಾದರೆ ಸಾರ್ವಜನಿಕ ಸಂಪರ್ಕ ಕ್ಷೇತ್ರ ತುಂಬ ಹೊಸತೇನಲ್ಲ. ಅದು ಭಾರತಕ್ಕೆ ಪುರ್ಣ ಪ್ರಮಾಣದಲ್ಲಿ ಪರಿಚಯವಾಗಿದ್ದು ಕೇವಲ ಇಪ್ಪತ್ತು ವರ್ಷಗಳ ಹಿಂದೆ ಮಾತ್ರ. ಆದರೆ ಅದು ಇಂದು ಹರಡಿಕೊಂಡಿರುವ ಕ್ಷೇತ್ರ ಮಾತ್ರ ತುಂಬ ವಿಶಾಲವಾದದ್ದು. ಪತ್ರಿಕೋದ್ಯಮವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾರ್ವಜನಿಕ ಸಂಪರ್ಕವನ್ನೂ ಸಹ ಅಧ್ಯಯನ ಮಾಡುತ್ತಾರೆ. ಆದರೆ ವಿಪರ್ಯಾಸವೆಂದರೆ ಅವರ ಅಧ್ಯಯನ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿದೆ. ಅದನ್ನು "ಕೆರಿಯರ್" ಮಾಡಿಕೊಳ್ಳುವ ಉದ್ದೇಶದಿಂದ ಯಾರೂ ಅಧ್ಯಯನ ಮಾಡುತ್ತಿಲ್ಲ. ತಮ್ಮ ರಜಾದಿನಗಳ ಇಂಟರ್ನ್‌ಶಿಪ್‍ಗೆಂದು ಬರುವ ಬಹುತೇಕ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮ, ದೃಷ್ಯ ಮಾಧ್ಯಮದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಾರೆ. ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತರಬೇತಿಗೆಂದು ಬರುವ ವಿದ್ಯಾರ್ಥಿಗಳ ಸಂಖೆ ತೀರ ಕಡಿಮೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕೂಡ ಜವಾಬ್ದಾರಿ. ಉದ್ಯಮದಲ್ಲಿ ನಡೆಯುತ್ತಿರುವ ಆಗು-ಹೋಗುಗಳನ್ನು, ಬೆಳವಣಿಗೆಗಳನ್ನು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಹಳೆಯ ಪಠ್ಯಗಳನ್ನು ಅವಲಂಭಿಸಿ, ಅದರಲ್ಲಿರುವ ವಿಷಯಗಳನ್ನು ಮಾತ್ರ ಅವರಿಗೆ ಕಲಿಸಲಾಗುತ್ತಿದೆ. ಹೀಗಾಗಿ ನಮ್ಮ ಇಂದಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸಾರ್ವಜನಿಕ ಸಂಪರ್ಕ ಎನ್ನುವುದು ಕೇವಲ ಅಂಕ ಗಳಿಸುವ ವಿಷಯ ಮಾತ್ರವಾಗಿದೆ.
ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳ ಬಯಸುವ ವಿದ್ಯಾರ್ಥಿಗಳು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರಚಲಿತ ವಿದ್ಯಮಾನಗಳ ಕುರಿತು ಉತ್ತಮ ಜ್ಞಾನ ಹೊಂದಿರಬೇಕು. ಮಾತನಾಡುವುದು, ಬರೆಯುವುದು, ಬೇರೆಯವರೊಂದಿಗೆ ಸಂವಹಕ್ರೀಯೆ ನಡೆಸುವುದರಲ್ಲಿ ನಿಪುಣರಾಗಿರಬೇಕು. ಇಂಗ್ಲೀಷ್ ಭಾಷೆಯ ಜ್ಞಾನ ಅಗತ್ಯ. ತಮ್ಮ ಇಡೀ ವಿದ್ಯಾಭ್ಯಾಸವನ್ನು ಮಾತೃಭಾಷೆಯಲ್ಲಿ ಮುಗಿಸಿದವರು ಇದಕ್ಕೆ ಅರ್ಹರಲ್ಲ ಎಂಬುದು ಇದರ ಅರ್ಥವಲ್ಲ. ತಮ್ಮ ವಿದ್ಯಾಭ್ಯಾಸದ ಜೊತೆಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು, ಬರೆಯಲು ರೂಢಿಮಾಡಿಕೊಳ್ಳಬೇಕು. ಇವೆಲ್ಲವುಗಳ ಜೊತೆಗೆ ಜಾಗತಿಕ ವಿದ್ಯಮಾನಗಳ ಬಗ್ಗೆ ಸದಾ ತಿಳಿದುಕೊಳ್ಳುತ್ತಿರಬೇಕು.
ಬಹುತೇಕ ಜನರಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿನ ಕೆಲಸವೆಂದರೆ ಕೇವಲ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಗಳನ್ನ ಕೊಡುವ, ಪತ್ರಿಕಾ ಪ್ರಕಟನೆಗಳನ್ನು ಹಂಚಿವ ಕೆಲಸ ಎಂದು ಮಾತ್ರ. ಆದರೆ ಅದೆಲ್ಲವನ್ನೂ ಮೀರಿ ಈ ಕ್ಷೇತ್ರ ಇಂದು ಬೆಳೆದು ನಿಂತಿದೆ. ರಾಜಕಾರಣಿಗಳು, ಕಾರ್ಪೋರೇಟ್ ಸಂಸ್ಥೆಗಳು, ಸೆಲೆಬ್ರಿಟಿಗಳು ಮುಮ್ತಾದವರೆಲ್ಲರೂ ಇಂದು ಖಾಸಗಿ ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ನೆರವನ್ನು ಪಡೆಯುತ್ತಿದ್ದಾರೆ. ಆಯಾ ಚಟುವಟಿಕೆಗಳಿಗನುಗುಣವಾಗಿ ಸರಿಯಾದ ಕಾರ್ಯತಂತ್ರ ರೂಪಿಸುವ ಪಡೆಯೇ ಇಂತಹ ಸಂಸ್ಥೆಯಲ್ಲಿರುತ್ತದೆ. ಅದಕ್ಕೆ ನಿರ್ಧಿಷ್ಟವಾದ ಯೋಜನೆಗಳ ರೂಪು-ರೇಷೆಗಳನ್ನು ನಿರ್ಧರಿಸಿ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಅನೇಕ ಜನ ಖ್ಯಾತನಾಮರಿಗೆ ಮಾಧ್ಯಮಗಳ ಎದುರು ಹೇಗೆ ಮಾತನಾಡಬೇಕು, ಏನು ಹೇಳಬೇಕು ಎಂದು ತಿಳಿದಿರುವುದಿಲ್ಲ. ಅಂತಹ ವ್ಯಕ್ತಿಗಳಿಗೆ, ಕಾರ್ಪೋರೇಟ್ ಸಂಸ್ಥೆಗಳಿಗೆ ಮಾಧ್ಯಮ ತರಗತಿಗಳನ್ನೂ ಸಹ ಇಲ್ಲಿ ನಡೆಸಲಾಗುತ್ತಿದೆ. ಹೀಗೆ ಹತ್ತು ಹಲವು ಬಗೆಯಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರ ವಿಸ್ತಾರಗೊಂಡಿದೆ. ಈ ಎಲ್ಲ ಅನುಭವಗಳನ್ನು ಪುಸ್ತಕ ಓದಿ ತಿಳಿದುಕೊಳ್ಳುವುದು ಅಸಾಧ್ಯ. ಅದನ್ನು ಪ್ರಾಯೋಗಿಕವಾಗಿ ಕಲಿಯಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬಯಸುವ ಯುವ ಜನಾಂಗ ಈ ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ತರಬೇತಿಯನ್ನು ಪಡೆದುಕೊಳ್ಳುವುದು ಉತ್ತಮ.
ಈ ಮೊದಲೇ ಹೇಳಿದಂತೆ ದಿನದಿಂದ ದಿನಕ್ಕೆ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವಿಗೆ, ಶಿಕ್ಷಕರೂ ಸಹ ಕನಿಷ್ಟ ಪಕ್ಷ ವರ್ಷಕ್ಕೊಂದು ಬಾರಿ ಹದಿನೈದು ದಿನಗಳ ಮಟ್ಟಿಗೆ ಇಂತಹ ತರಬೇತಿ ಪಡೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಅಪವಾದವೆನ್ನುವಂತೆ ಅನೇಕ ಖಾಸಗಿ ಸಂಸ್ಥೆಗಳು ಪಕ್ಕಾ ವೃತ್ತಿಪರರಂತೆ ಶಿಕ್ಷಣವನ್ನು ನೀಡುತ್ತಿದ್ದು, ಅಲ್ಲಿನ ಶುಲ್ಕ ಸ್ವಲ್ಪ ದುಬಾರಿಯಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಅಲ್ಲಿನ ಶಿಕ್ಷಣ ಹುಳಿ ದ್ರಾಕ್ಷಿಯಾಗುತ್ತಿದೆ.
ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರಿಗೆ ಆರಂಭಿಕ ಹಂತದಲ್ಲಿ ೧೫ ರಿಂದ ೨೦ ಸಾವಿರದವರೆಗೂ ಸಂಬಳ ನೀಡಲಾಗುತ್ತದೆ. ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸುವಾರು ಇದಕ್ಕಿಂತಲೂ ಹೆಚ್ಚು ಪಡೆಯಬಹುದಾಗಿದೆ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದಿನಿಂದಲೇ ತಯಾರಿ ಶುರು ಮಾಡಿಕೊಳ್ಳಿರಿ.