(ಪ್ರಸ್ತುತ ಲೇಖನವು ದಿನಾಂಕ ೦೯-೧೧-೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿ ವಾಚಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ದಾಖಲಿಸಿ.)
ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.
ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು...... ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.
ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.
ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.
ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.
ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು...ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.
ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.
ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.
ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.
ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.
ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.