Friday, December 31, 2010

ಎತ್ತಣ ಮಾಮರ..ಎತ್ತಣ ಕೋಗಿಲೆ.....

ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕದಲ್ಲಿ ನಾನು ಬಹುವಾಗಿ ಮಾತನಾಡಿದ್ದು ಮನುಷ್ಯ ಸಂಬಂಧಗಳ ಕುರಿತು. ಈ ಸಂಬಂಧಗಳೇ ಹಾಗೆ..ನಮ್ಮೀ ನಿವಾಸದಲ್ಲೇ ಅಡಗಿವೆ..ಬರುವಾಗ ಬೆತ್ತಲೆ..ಹೋಗುವಾಗ ಬೆತ್ತಲೆ..ಬಂದು ಹೋಗುವ ನಡುವೆ ಬರೀ ಕತ್ತಲೆ....ಹೀಗೆ ಸಂಬಂಧಗಳ ಜಾಡು ಪಸರಿಸುತ್ತಲೇ ಹೋಗುತ್ತದೆ. ನಾವು ಈ ಭುವಿಯ ಮೇಲೆ ಕಣ್ತೆರೆದಾಗ ನಾವು ಅಳುತ್ತಿರುತ್ತೇವೆ..ಆದರೆ ನಮ್ಮನ್ನ ಹೆತ್ತ ಆ ಮಹಾತಾಯಿ ಹಸನ್ಮುಖಿಯಾಗಿರುತ್ತಾಳೆ. ತನ್ನ ಕರುಳ ಬಳ್ಳಿಯ ಮತ್ತೊಂದು ಸಂಬಂಧವನ್ನು ವ್ಯಾವಹಾರಿಕ ಲೋಕಕ್ಕೆ ಪರಿಚಯಿಸಿದ ಸಂಭ್ರಮ ಅಲ್ಲಿರುತ್ತದೆ..ಅಲ್ಲಿಂದ ವಿಭಿನ್ನ ರೀತಿಯ ಸಂಬಂಧಗಳು ಹೆಣೆದುಕೊಳ್ಳಲಾರಂಭಿಸುತ್ತವೆ.

ಬದುಕು ಮುಂದೆ ಸಾಗಿದಂತೆಲ್ಲ ನಮ್ಮ ಆಸೆ, ಆಶಯಗಳು ಹೊಸದಿಕ್ಕಿನತ್ತ ಮುಖ ಮಾಡುತ್ತವೆ. ಅನೇಕ ಗೆಳೆಯರ, ಗೆಳತಿಯರ ಸೇರ್ಪಡೆಯಾಗುತ್ತದೆ. ಪರಿಚಯವೇ ಇಲ್ಲದ ಒಂದು ಜೀವ ನಮ್ಮ ಬಾಳ ಬದುಕಿನ ಸಂಗಾತಿಯಾಗುತ್ತದೆ. ಅಲ್ಲಿಂದ ಮತ್ತೊಂದು ಅಧ್ಯಾಯಕ್ಕೆ ನಮ್ಮ ಜೀವನ ತೆರೆದುಕೊಳ್ಳುತ್ತದೆ. ಇದು ಒಂದು ಜೀವನ ಚಕ್ರ. ಬಹುತೇಕವಾಗಿ ಎಲ್ಲರ ಜೀವನದಲ್ಲಿ ಘಟಿಸುವ ಘಟನೆಗಳೇ ಇವು.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ..ನಮ್ಮ ಜೀವನ ಸಂಗಾತಿಗಿಂತಲೂ ನಮಗೆ ತುಂಬಾ ಇಂಟ್ರೆಸ್ಟಿಂಗ್ ಆಗಿ ಕಾಣುವ ಕ್ಯಾರೆಕ್ಟರ್ ಅಂದರೆ ಅವರ ಅಪ್ಪ. ಒಂದು ಸಣ್ಣ ಕಾರಣ ಸಿಕ್ಕರೆ ಸಾಕು, ನಾವು ಅದರ ಎಳೆಯನ್ನ ಹಿಡಿದುಕೊಂಡು ಅವಳ ಅಪ್ಪನನ್ನ ಗೇಲಿ ಮಾಡಲು ಆರಂಭಿಸಿಬಿಡುತ್ತೇವೆ. ಅದು ಖಂಡಿತವಾಗಿಯೂ ಯಾವುದೇ ದ್ವೇಷದಿಂದ ಕೂಡಿದ ಗೇಲಿಯಾಗಿರುವುದಿಲ್ಲ. ಅಲ್ಲಿ ಸಲುಗೆ ಇರುತ್ತದೆ, ಗೌರವವಿರುತ್ತದೆ. ಅದಕ್ಕೆ ಪೂರಕ ಎನ್ನುವಂತೆ ಅವರು ಸಹ ಕೆಲವು ಎಡವಟ್ಟುಗಳನ್ನ ಮಾಡಿ ನಮ್ಮ ಅಪಹಾಸ್ಯಕ್ಕೆ ಮೆಲಿಂದ ಮೇಲೆ ಗುರಿಯಾಗುತ್ತಿರುತ್ತಾರೆ. ನನ್ನ ಜೀವನದಲ್ಲಿಯೂ ಸಹ ಇಂತಹ ಅನೇಕ ಕುತೂಹಲಕಾರಿಯಾದ ಘಟನೆಗಳು ನಡೆದಿವೆ. ಅವುಗಳನ್ನು ನನ್ನ ಬ್ಲಾಗುಗಳಲ್ಲು ದಾಖಲಿಸುತ್ತಿದ್ದೇನೆ. ಅವುಗಳಿಗೆ ನೀವು ಕತೆಗಳೆನ್ನಬಹುದು, ಲಲಿತ ಪ್ರಬಂಧಗಳೆನ್ನಬಹುದು ಅಥವಾ ದಾರಿಯಲ್ಲಿ ಕಂಡ ಮುಖಗಳೆನ್ನಬಹುದು...ಅದು ನಿಮ್ಮ ಆಯ್ಕೆಗೆ ಬಿಟ್ಟಿದ್ದು...ಓದಿ...ನಿಮ್ಮ ಅಭಿಪ್ರಾಯ ತಿಳಿಸಿ...


Saturday, December 25, 2010

ಬೇಲಿ ಮತ್ತು ಹೊಲ




ಬೇಲಿ ಮತ್ತು ಹೊಲ ನಾಟಕದ ರಂಗಸಜ್ಜಿಕೆ ಕಾರ್ಯದಲ್ಲಿ ನಿರತರಾಗಿರುವ ಕಲಾವಿದರು

Saturday, December 11, 2010

ಹೀಗೊಂದು ಸಂವಾದ !!!!

ನೆನ್ನೆಯ ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಇನ್ನೊಬ್ಬರೊಂದಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತದ್ದ. ಅದೂ ಸ್ಪೀಕರ್ ಫೋನ್ ಆನ್ ಮಾಡಿ !!! ಅವರಿಬ್ಬರ ನಡುವೆ ನಡೆದ ಸಂಭಾಷಣೆ ತುಂಬಾ ಖುಷಿ ಕೊಟ್ಟಿತು.
ಇವನು: ಈರೇಷಿ ಎಲ್ಲದೀ?
ಈರೇಷಿ: ನಾನೆಲ್ಲೋಗ್ಲಣ್ಣ..ಇಲ್ಲೆ ಬೆಂಗಳೂರಿನ್ಯಾಗದೀನಿ..ದುಡಕಂಬ್ ತಿನ್ನೋ ಜೀವ..ನೀನೆಲ್ಲದೀ?
ಇವನು: ನಾನು ಬೆಂಗಳೂರಿಗೆ ಬಂದಿದ್ದೆ..ಈಗ ಮತ್ತ ಹೊಸಪೇಟಿಗೆ ಹೊಂಟೀನಿ...
ಈರೇಷಿ: ಏ..ಅದೇನಣ್ಣ ಹೀಂಗ..ಬಂದು ಒಂದು ಫೋನ್ ಹಾಕಬಾರ್ದೇನ್? ಹೆಂಗ ಬಂದಿ..ಬಸ್ಸಾ, ಟ್ರೇನಾ?
ಇವನು: ಐ..ಅದು ಬಿಡು ಈರೇಷಿ..ಆಲ್ ಆಫ್ ಎ ಸಡನ್..(ಇನ್ನೇನೋ ಹೇಳುವವನಿದ್ದ..ಅಷ್ಟರಲ್ಲಿ)
ಇರೇಷಿ: ಏ ಅದ್ಯಾವುದಣ್ಣ...ಆಲ್ ಆಫ್ ಎ ಸಡನ್.....ಹೊಸ ಬಸ್ಸಾ?????

Friday, December 10, 2010

ಹೊಸ ನಾಟಕದ ತಯಾರಿಯಲ್ಲಿ ಕನ್ನಡ ಕಲಾ ಸಂಘ...




ನಿಮಗೆಲ್ಲ ತಿಳಿಸಿದಂತೆ ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘ ತನ್ನ ಹೊಸ ನಾಟಕ ತಯಾರಿಯಲ್ಲಿ ತೊಡಗಿದೆ. ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಕಿರು ಕಾದಂಬರಿ "ಬೇಲಿ ಮತ್ತು ಹೊಲ" ನಾಟಕವನ್ನು ಕೈಗೆತ್ತಿಕೊಂಡಿದೆ. ನಾಟಕದ ವಿನ್ಯಾಸದ ಕೆಲವು ಚಿತ್ರಗಳು ಇಲ್ಲಿವೆ...

Sunday, December 5, 2010

ಬೇಲಿ ಮತ್ತು ಹೊಲ.....


ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ, ನಮ್ಮ ನಡುವಿನ ಅನನ್ಯ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ಕಿರುಕಾದಂಬರಿ ಬೇಲಿ ಮತ್ತು ಹೊಲ. ಇದರ ಹೆಸರೇ ಸೂಚಿಸುವಂತೆ "ಬೇಲಿ" ಆಳುವ ವ್ಯವಸ್ಥೆಯನ್ನು ಮತ್ತು "ಹೊಲ" ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸುತ್ತದೆ.

ಕಾನೂನಿನಡಿ ನುಸುಳುವ ಹಾಗೂ ಭ್ರಷ್ಟತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು ಹೇಗೆ ಆಳುವ ಪ್ರಕ್ರಿಯೆಯಲ್ಲಿ ಅಂತರ್ಗತನಾಗುತ್ತಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಹಾಗೂ ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪೋತುರಾಜು, ದಲ್ಲಾಳಿ ವ್ಯವಸ್ಥಯ ಹರಿಕಾರನಾಗಿ ವಿಠ್ಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ಕಹಳೆ ಪಾಟೀಲ್, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಸಾಮಾನ್ಯ ಪ್ರಜೆಯ ಪ್ರತಿನಿಧಿಯಾಗಿ ಚಂಬಸ್ವ, ಮಲ್ಲಕ್ಕ, ಬಡಕೊಟ್ರಯ್ಯ ಹಾಗೂ ಹಳ್ಳಿಗರು ಪ್ರತಿನಿಧಿಸುತ್ತಾರೆ.

ಇಡೀ ಕಥಾವಸ್ತುವಿನ ಅಂತರಾಳ ಪ್ರಜಾಸಮೂಹ ಅಥವಾ ಒಬ್ಬ ಸಾಮಾನ್ಯನಿಗೆ ಅನ್ಯಾಯ, ಶೋಷಣೆ, ಹಿಂಸೆಗೆ ಗುರಿಯಾದಾಗ ಪ್ರಸ್ತುತ ಸುದ್ದಿಮಾಧ್ಯಮಗಳು ಅದನ್ನು ತಿದ್ದುವ ಕಾಯಕದಲ್ಲಿ ಮಾಡುವ ಸದ್ದಾಗಲೀ, ಪ್ರಬುದ್ಧರು ನಡೆಸುವ ಪ್ರತಿಭಟನೆ, ಮುಷ್ಕರ, ಚಳುವಳಿಗಳಾಗಲೀ ಬರಬರುತ್ತಾ ತೀರಾ ಮಾಮೂಲಿಯೂ, ಯಾಂತ್ರಿಕವೂ ಆಗಿ ನಮ್ಮನ್ನಾಳುವ ಪ್ರಭುಗಳನ್ನು ತಿದ್ದುವ, ಶಿಕ್ಷಿಸುವ ಪರಿಣಾಮದ ತೀವ್ರತೆ ಕಳೆದುಕೊಳ್ಳುತ್ತಿವೆ ಎನ್ನುವುದು ನಮ್ಮ ಮುಂದಿರುವ ದುರಂತ..

ಇಂತಹ ಸಂದರ್ಭದಲ್ಲಿ ನ್ಯಾಯದಾನದ ಪ್ರಕ್ರಿಯೆ ಜನಸಾಮಾನ್ಯನ ಹಿತಕಾಪಾಡುವ ದಿಶೆಯಲ್ಲಿ ಇರುವ ವ್ಯಕ್ತಿಗತ ದೋಷಗಳು ಮತ್ತು ವ್ಯವಸ್ಥೆಯ ದೋಷಗಳನ್ನು ನಿವಾರಿಸುವ ಪರಿಣಾಮಕಾರಿ ಮಾರ್ಗವನ್ನು ನಾವೆಲ್ಲ ಇಂದು ಹುಡುಕಲೇಬೇಕಾಗಿದೆ.. ಒಟ್ಟಿನಲ್ಲಿ "ಬೇಲಿ" ಇದ್ದಾಗ ಪ್ರಜಾಸಮೂಹವೆಂಬ "ಹೊಲ" ದಲ್ಲಿ ಬೆಳೆದಿರುವ ಬೆಳೆಯನ್ನು ಪ್ರಾಮಾಣಿಕವಾಗಿ ರಕ್ಷಿಸಿಕೊಳ್ಳುವ ಪ್ರಜಾತಂತ್ರದ ಅರ್ಥವನ್ನೂ, ಕಾನೂನು ವ್ಯವಸ್ಥೆಯ ಅಸ್ತಿತ್ವವನ್ನೂ ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ಸಮಾಜ ನಿರಂಕುಶವಾಗಿ ಅರಾಜಕತೆಯತ್ತ ಸಾಗುತ್ತದೆ ಎಂಬುದು ಒಟ್ಟೂ ಕಾದಂಬರಿಯ ಒಳದನಿ.

ಈ ಕಾದಂಬರಿಯನ್ನು ಶ್ರೀ. ಜಿ.ಎಚ್. ರಾಘವೇಂದ್ರ ಅವರು ತಮ್ಮ ಎಂದಿನ ಹರಿತ ವಿಡಂಬನೆಗಳ ಮೂಲಕ ರಂಗಕ್ಕೆ ಅಳವಡಿಸಿದ್ದಾರೆ. ಇಂದಿನ ಪ್ರಸ್ತುತ ರಾಜಕೀಯ ಸನ್ನಿವೇಷಗಳಿಗೆ ಸಮೀಕರಿಸಿ, ವಿನ್ಯಾಸಗೊಳಿಸಿ ಅದನ್ನು ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘಕ್ಕೆ ನಿರ್ದೇಶಿಸುತ್ತಿದ್ದೇನೆ. ದಯವಿಟ್ಟು ಬನ್ನಿ...ನಾಟಕ ನೋಡಿ...