Monday, June 29, 2009

ರಂಗದ ಮೇಲೆ ಬಂದನೆಂದರೆ ಈತ ದೈತ್ಯ!!!


೧೯೯೨ ರಲ್ಲಿ ಧಾರವಾಡದ ಅಭಿನಯ ಭಾರತಿ ತಂಡಕ್ಕೆ ಗೆಳೆಯ ಪ್ರಮೋದ್ ಶಿಗ್ಗಾಂವ್ ಚಂದ್ರಶೇಖರ್ ಕಂಬಾರರ ಸಾಂಬಶಿವ ಪ್ರಹಸನ ಎಂಬ ನಾಟಕವನ್ನು ನಿರ್ದೇಶಿಸುತ್ತಿದ್ದರು....ಅದಕ್ಕೆ ಸಂಗೀತ ನಿರ್ದೇಶಿಸುವ ಜವಾಬ್ದಾರಿಯನ್ನು ನನ್ನ ತಲೆಯ ಮೇಲೆ ಹೊರಿಸಿದ್ದರು...

ನಾನು ಬಹಳ ಆಸ್ಥೆವಹಿಸಿ, ಖುಷಿಯಿಂದ ಸಂಗೀತ ಸಂಯೋಜಿಸಿದ ನಾಟಕ ಅದು...ತುಂಬಾ ಖುಷಿ ಕೊಟ್ಟ ನಾಟಕ ಅದಾಗಿತ್ತು...ಆಗ ನಾವು ನಾಟಕ ಮಾಡುವ ಸಮಯದಲ್ಲಿ ಅನೇಕ ನಿರ್ದೇಶಕರು ನಟನೆಯ ವಿಷಯ ಬಂದರೆ ನಟರಾಜ್ ಎಣಗಿಯನ್ನು ಉದಾಹರಿಸುತ್ತಿದ್ದರು... ನಟರಾಜನನ್ನು ಮುಖತಃ ಭೇಟಿಯಾಗಿರಲಿಲ್ಲ...ಅವರ ಕೆಲವು ನಾಟಕಗಳನ್ನು ನೋಡಿದ್ದೆವಷ್ಥೆ..."ಸಾಂಬಶಿವ ಪ್ರಹಸನ" ನಾಟಕದ ಪ್ರದರ್ಶನಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಾಗ ಪ್ರಮೋದ್ ನಮಗೆ ನಾಳೆ ಒಬ್ಬ ಮುಖ್ಯ ವ್ಯಕ್ತಿ ನಾಟಕ ವೀಕ್ಷಿಸಲು ಬರಲಿದ್ದಾರೆ....ಎಲ್ಲರು ಸರಿಯಾದ ಸಮಯಕ್ಕೆ ತಾಲೀಮಿಗೆ ಆಗಮಿಸಿ ಉತ್ತಮ ರೀತಿಯಲ್ಲಿ ರಂತ್ರು ನೀದಬೇಕೆಮ್ದು ತಾಕೀತು ಮಾಡಿದ್ದ...
ಎಂದಿನಂತೆ ಮಾರನೆಯ ದಿನ ನಾಟಕದ ಆರಂಭಕ್ಕೆ ಮೊದಲೇ ಗೆಳೆಯ ಬಂಡು ಕುಲಕರ್ಣಿ ಹಾಗು ಅವನ ಜೊತೆ ಮತ್ತೊಬ್ಬರು ಆಗಮಿಸಿದ್ದರು...ನಾಟಕ ಶುರುವಾಯ್ತು....ಯಾವುದೇ ತೊಂದರೆ ಇಲ್ಲದೆ ನಾಟಕದ ರಂತ್ರು ಮುಗಿಯಿತು...ಎಲ್ಲ ನಟರು ಸರ್ಕಲ್ ನಲ್ಲಿ ಬಂದು ಕುಳಿತಾಗ ಪ್ರಮೋದ್ ಇನ್ನೊಬ್ಬನ ಪರಿಚಯವನ್ನು ಮಾಡಿದರು ಮತ್ತು ಅವರೇ ನಟರಾಜ್ ಏಣಗಿ...
ನಾವು ನಾಟಕದಲ್ಲಿ ಗಮನಿಸದ ಕೆಲವು ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಿ ಅದರ ಬಗ್ಗೆ ಬಹಳ ಅರ್ಥಪೂರ್ಣವಾಗಿ ಮಾತನಾಡಿದರು...ಅಂದಿನಿಂದ ನನ್ನ ಮತ್ತು ನಟರಾಜ್ ಎಣಗಿಯ ಒಡನಾಟ ಶುರುವಾಯ್ತು...
ಅವರೊಬ್ಬ ಅದ್ಭುತ ನಟ...ರಂಗದ ಮೇಲೆ ಬಂದನೆಂದರೆ ಎಂತಹ ಸಮುಹವನ್ನಾದರು ತನ್ನ ತೆಕ್ಕೆಗೆ ಎಲೆದುಕೊಂಡುಬಿಡಬಲ್ಲ ದೈತ್ಯ... ಅದೊಂದು ವಿಶೇಷ ಕಲೆ ಅವನಿಗೆ ಲಭಿಸಿತ್ತು...ರಂಗದ ಮೇಲೆ ಅವನಿಗಿರುವ ಸಮಯದ ಕಾಳಜಿಯನ್ನು ಯಾರಾದರು ಮೆಚ್ಚಲೇ ಬೇಕು...
೧೯೯೫ ರಲ್ಲಿ ಕ.ವಿ.ವಿ ಯುವಜನೋತ್ಸವದಲ್ಲಿ ಬುರ್ಜ್ವಾ ಜಂಟಲ್ ಮ್ಯಾನ್ ಎಂಬ ನಾಟಕದ ಪ್ರದರ್ಶನ ಅದೂ ಗಾಂಧೀ ಭವನದಲ್ಲಿ...ಮೊದಲೇ ಅದೂ ಒಂದು ಗೋಡೌನ್ ತರಹ ಇತ್ತು...ಇನ್ನು ಅಲ್ಲಿ ನಾಟಕ ಮಾಡಿದವರ ಪಾಡು ದೇವರಿಗೆ ಪ್ರೀತಿ ಎಂದು ನಾವು ಅಂದು ಕೊಳ್ಳುತ್ತಿದ್ದಂತೆಯೇ ನಾಟಕ ಆರಂಭವಾಯಿತು...ಮೊದಲೇ ಹುಡುಗರ ಗುಂಪು...ಎಲ್ಲರ ಕೇಕೆ..ಶಿಳ್ಳೆಗಳು ಮುಗಿಲು ಮುಟ್ಟ ತೊಡಗಿತು... ತಕ್ಷಣ ನಟರಾಜ್ ರಂಗವನ್ನು ಪ್ರವೇಶಿಸಿದರು..."ನಾವು ಮಾತಾಡಿದ್ದು ನಿಮಗ ಕೆಳಸ ಬೇಕು ಅಂದ್ರ ಸ್ವಲ್ಪ ಸುಮ್ಮನ ......." ಎನ್ನುತ್ತಿದ್ದಂತೆಯೇ ಇಡೀ ಸಭಾಂಗಣ ಸ್ಥಬ್ಧವಾಯ್ತು...ಮುಂದೆ ನಾಟಕ ಮುಗಿಯುವ ವರೆಗೆ ಯಾರು ಸಹ ತಮ್ಮ ಉಸಿರನ್ನು ಹೊರಕ್ಕೆ ಬಿಡುವ ಪ್ರಯತ್ನವನ್ನು ಮಾಡಲಿಲ್ಲ.... ಅಂತಹ ಅದ್ಭುತ ನಟ ನಟರಾಜ್...
ಮುಂದೆ ಅವರೇ ನಿರ್ದೇಶಿಸಿದ ನಟ ಸಾಮ್ರಾಟ ನಾಟಕ ನೋಡಿದಾಗ ಸಹ ವಿಭಿನ್ನ ರೀತಿಯ ಅನುಭವ ವಾಯ್ತು...ಅದರಲ್ಲಿ ಒಂದು ಮಾತು ಬರುತ್ತದೆ...ಅದೂ ತನ್ನ ಹೆಂಡತಿಗೆ ಹೇಳುವ ಮಾತು..ತಮ ಉರು ಬಿಟ್ಟು ಮಗನ ಹತ್ತಿರ ಇರಲು ಬರುವ ಸಂನಿವೆಶ್..ಊರಿಗೆ ಬಂದಾಗ ಮಗನ ಮನೆಯ ಬಾಗಿಲಿಗೆ ಕೀಲಿ ಜಡಿದಿರುತ್ತದೆ...ಅದನ್ನು ನೋಡಿ ಅವರು ಹೇಳುತ್ತಾರೆ..... "ನಾವು ನಮ್ಮ ಮಗನಿಗೆ ತಾರ್ ಕಲಿಸೆವೇನೋ ಖರೆ ಅದೂ ಅವರ ಮನಿಗೆ ಮುಟ್ಟಿರತದ ಆದ್ರ ಅವರ ಮನಸ್ಸಿಗೆ ಅದೂ ಮುಟ್ಟಿರ ಬೇಕಲ್ಲ..." ಯಾವನ ಕಣ್ಣಲ್ಲಿ ಆದರೂ ನೀರು ಬರಬೇಕು.... ಅಂತಹ ಅದ್ಭುತ ನಟನೆ ಅವರದು...
ಅವರ ನಟನೆಯನ್ನು ಸವಿಯ ಬೇಕಾದರೆ ಅವರು ಇತ್ತೀಚೆಗೆ ಅಭಿನಯಿಸಿದ "ನಾ ತುಕಾರಾಂ ಅಲ್ಲ" ನಾಟಕವನ್ನು ನೋಡಿ....

Sunday, June 28, 2009

ದೇವಮಾನವರಲ್ಲಿ ಸ್ವಾತಂತ್ರ್ಯ ದೇವಿಯ ಕನಸು ಕಂಡ ಶಬ್ದಗಾರುಡಿಗ....
ನಾನು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಗಿನ ಮಾತುಗಳಿವು...೧೯೮೦ ರ ಜೂನ್ ತಿಂಗಳು..ಆಗ ತಾನೆ ಶಾಲೆ ಆರಂಭವಾಗಿತ್ತು..ಅದೇನೋ ಒಂದು ತರಹದ ಹಬ್ಬದ ವಾತವರಣ...ಭಾರತದ ಕೈಗಾರಿಕಾ ಕ್ರಾಂತಿಯ ಹರಿಕಾರ ಲಕ್ಷಣರಾವ್ ಕಿರ್ಲೋಸ್ಕರ್ ಅವರ ಜನ್ಮ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು ನಮ್ಮ ಶಾಲೆಯಲ್ಲಿ...


ನಮಗೆ ಲೋಕುರ್ ಮೇಡಂ ಕ್ಲಾಸ್ ಟೀಚರ್ ಆಗಿದ್ದರು...ಒಂದು ದಿನ ಬಂದವರೇ ನನ್ನ ಕೈಯ್ಲಿ ಒಂದು ಪುಸ್ತಕವನ್ನು ನೀಡಿ "ನಾಳೆ ಇದನ್ನ ಓದಿಕೊಂಡು ಬಾ...ಭಾಷಣ ಸ್ಪರ್ಧಾ ಅದ ಅದರೊಳಗ ನೀ ಮಾತನಾಡಬೇಕು" ಎಂದರು...ಬಹುಶಃ ನಾನು ನಮ್ಮ ಕ್ಲಾಸಿಗೆ ಮಾನಿಟರ್ ಆಗಿದ್ದರಿಂದ ಈ ಜವಾಬ್ದಾರಿ ನನಗೆ ನೀಡಿದ್ದರೋ ಏನೋ ಗೊತ್ತಿಲ್ಲ... ಮನೆಗೆ ತೆರಳಿ, ಪುಸ್ತಕ ಓದಿ, ಅದನ್ನು ಸಾಧ್ಯವಾದಷ್ಟು ಕಂಠ ಪಾಠ ಮಾಡಿ..ಮಾರನೆ ದಿನ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಷಣ ಮಾಡಿದ್ದು ಆಯ್ತು..ನಮಗೆಲ್ಲ ಒಂದು ಪೆಪ್ಪರ್ ಮಿಂಟ್ ಕೊಟ್ಟಿದ್ದರು ಆಗ...


ಖುಷಿಯಿಂದ ಅದನ್ನು ತಿನ್ನುತ್ತಾ ಕ್ಲಾಸಿಗೆ ಬಂದು ಮತ್ತೆ ನಂ ಆಟ ಪಾಠ ಎಂದು ನಾವು...ಮಾರನೆಯ ದಿನ ಲೋಕುರ್ ಮೇಡಂ ಕ್ಲಾಸಿಗೆ ಬಂದವರೇ ನನ್ನನ್ನು ತಬ್ಬಿಕೊಂಡು ಭಾಷಣ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂದಿರುವುದಾಗಿ ಹೇಳಿದರು...ಅದೆಂದರೆ ಏನು ಎಂದು ತಿಳಿಯುವ ವಯಸ್ಸು ನಮ್ಮ ದಾಗಿರಲಿಲ್ಲ ಮತ್ತು ಕುತೂಹಲ ಸಹ ನಮ್ಮಲ್ಲಿ ಇರಲಿಲ್ಲ...


ಇದನ್ನೆಲ್ಲಾ ಯಾಕೆ ನಾನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದರೆ...ಪ್ರಸ್ತುತ ಸ್ಪರ್ಧೆಯಲ್ಲಿ ನಮಗೆ ಬಹುಮಾನ ನೀಡಿ ನಮ್ಮ ಬೆನ್ನು ಸವರಿದವರು ದ.ರಾ. ಬೇಂದ್ರೆ...ಮುಂದೆ ೧೯೮೧ ರಲ್ಲಿ ಅವರು ನಿಧನರಾದಾಗ ನಮಗೆ ಶಾಲೆಗೆ ರಜೆ ನೀಡಿದ್ದರು...ನಾವು ರಜೆಯನ್ನು ಆನಂದಿಸಿದ್ದೆವೆಯೇ ಹೊರತು ದ.ರಾ.ಬೇಂದ್ರೆ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರಲಿಲ್ಲ...


ಈ ಘಟನೆ ನೆನಪಾದಾಗ ಏನೋ ಒಂದು ತರಹದ ಕಸಿವಿಸಿ ಯಾಗುತ್ತದೆ...ಅವರ ಮೂಡಲ ಮನೆಯ ಮುತ್ತಿನ ನೀರಿನ ಎರಕವ ಕಂಡಾಗ ಆ ಶಬ್ದ ಗಾರುಡಿಗನ ನೆನಪು ಕಾಡುತ್ತದೆ...ನಾಕು ತಂತಿಯ ಆವು ಈವಿನ ಹಾಡನ್ನು ಓದಿದಾಗ ಅವರಲ್ಲಿ ಅಡಗಿರುವ ಸಂಖ್ಯಾಶಾಸ್ತ್ರ ಪಂಡಿತನ ಪರಿಚಯವಾಗುತ್ತದೆ...ಅವರ ದೇವ ಮಾನವರೆಲ್ಲ ಕಂದ ಕನಸೇ ಬಾರೆ ಎಂದು ಹಾಡುತ್ತಾ ಕುಳಿತಾದ, ನಮ್ಮ ನರಸತ್ತ ನಾಯಕರಿಗೆ ಅವತಾರ ಪುರುಷನ ಆಗಮನದ ಸೂಚನೆಯನ್ನು ಕೊಡುವ ಒಬ್ಬ ನಾಯಕನನ್ನು ಕಂಡ ಅನುಭವ...


ಇಂದು ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ..ಅಂತಹ ಮಹಾನ್ ಕವಿಯ ಕೈಗಳು ನನ್ನ ಬೆನ್ನ ಮೇಲೆ ಹರಿದಾಡಿವೆ..ಧಾರವಾದದಲ್ಲಿದ್ದು ನಿಜಕ್ಕೂ ಧನ್ಯನಾದೆ ಎಂದೆನಿಸುತ್ತಿದೆ....

Friday, June 26, 2009

ಕವಿಗೋಷ್ಟಿಗೂ ಎಂಟ್ರಿ ಫೀ...."ಪೆ ಅಂಡ್ ಲಿಸನ್"ಧಾರವಾಡದಲ್ಲಿ ನಮ್ಮ ಗೆಳೆಯರ ಗುಂಪು ಆಗಾಗ ಮಾತನಾಡಿಕೊಳ್ಳುತ್ತಿದ್ದ ಒಂದು ಆರೋಗ್ಯಕರ ಜೋಕ್ ಇದು...ಯಾರಾದರು ಕವನ ವಾಚನ ಮಾಡಲು ಇಚ್ಚಿಸಿದರೆ ಅದನ್ನು ನಾವು ಲಾಠೀ ಚಾರ್ಜ್ ಎನ್ನುತ್ತಿದ್ದೆವು ಮತ್ತು ಕಥೆ ಓದಲು ಇಚ್ಚಿಸಿದರೆ ಅದನ್ನು ಗೋಲಿ ಬಾರ್ ಎಂದು ಹೇಳುತ್ತಾ ನಗುತ್ತಿದ್ದೆವು...ಏಕೆಂದರೆ ಧಾರವಾಡದ ವಾತಾವರಣವೇ ಅಂಥದ್ದೋ ಏನೋ ಗೊತ್ತಿಲ್ಲ...ಯಾವನಾದರೂ ಎರಡು ಕವಿಗೋಷ್ಠಿಗೆ ಹಾಜರಾದನೆಂದರೆ ಸಾಕು ಮುಂದಿನ ಕವಿಗೋಷ್ಠಿಗೆ ಅವನ ಕವನ ವಾಚನ ಇರಲೇಬೇಕು...ಅಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು..

ಇಂಥದ್ದರಲ್ಲಿ ಅದೊಂದುದಿನ ಒಂದು ವಿಚಿತ್ರ ಕರಪತ್ರ ನಮ್ಮ ಕೈಸೇರಿತು...ಧಾರವಾಡದ ಖ್ಯಾತ (?) ವಕೀಲರಾದ ಶ್ರೀ. ವೆಂಕಟೇಶ್ ಕುಲಕರ್ಣಿ ಅದನ್ನು ಮುದ್ರಿಸಿದ್ದರು ಮತ್ತು ಅದರ ಒಕ್ಕಣಿಕೆ ಈ ರೀತಿಯಾಗಿತ್ತು... "ರೊಕ್ಕ ಕೊಟ್ಟು ಕವನ ಕೇಳ್ರಿ...ಬ್ಯಾಸರಾ ಆದ್ರ ನಿಮ್ಮ ರೊಕ್ಕ ವಾಪಸ್ ತಗೊಳ್ರಿ..." ಮತ್ತು ಅದರ ಪ್ರವೇಶ ದರ ಕೂಡ ಕೇವಲ ಒಂದು ರುಪಾಯಿ ಮಾತ್ರ...

ಈ ರೀತಿಯ ವಿಚಿತ್ರ ಸರ್ಕಸಗಳನ್ನು ಮಾಡುವುದರಲ್ಲಿ ವೆಂಕು ನಿಸ್ಸೀಮರು ಮತ್ತು ಪ್ರಸ್ತುತ ಕವಿಗೋಷ್ಠಿಗೆ ಚಂಪಾ ಅಧ್ಯಕ್ಷತೆ...ಚಂಪಾ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದಾರೆಂದರೆ ಅದರಲ್ಲಿ ಯಾವುದೇ ಮೋಸವಿರುವುದಿಲ್ಲ ಎಂಬ ಖಾತ್ರಿ ನಮಗೆಲ್ಲ ಇರುತ್ತಿತ್ತು...ಅದರಂತೆಯೇ ಅಂದು ನಡೆದ ಈ "ಪೆ ಅಂಡ್ ಲಿಸನ್" ಕವಿಗೋಷ್ಠಿಗೆ ಜನ ಕಿಕ್ಕಿರಿದು ತುಂಬಿದ್ದರು...ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕವಿಗೊಷ್ಟ್ಹಿಯನ್ನು ಕೇಳಲು ಪಕ್ಕದ ಹುಬ್ಬಳ್ಳಿ, ಹಾವೇರಿ, ರಾನೆಬೇನ್ನುರು, ಬೆಳಗಾವಿ ಮುಂತಾದ ಕಡೆಗಳಿಂದ ಜನ ಬಂದಿದ್ದರು...ಕವಿಗೋಷ್ಥಿ ಹೌಸ್ ಫುಲ್!!!! ಮತ್ತು ಇದರಿಂದ ಸಂಗ್ರಹವಾದ ಹಣ ೨೫೦೦ ರೂಪಾಯಿಗಳು....ವೆಂಕು ಅಂದು ಎಲ್ಲರಿಗು ಚಹಾ ಕುಡಿಸಿದರು....ಎಲ್ಲರು ಬಹಳ ಸಂಭ್ರಮಿಸಿದೆವು... ಮೂರುಗಂಟೆಗಳ ಕಾಲ ನಡೆದ ಕವಿಗೊಷ್ಥಿಯಲ್ಲಿ ಭರ್ಜರಿ ಮಲೆನಾಡು ಮಳೆಯ ದರ್ಶನವಾಗಿತ್ತು...ಎಲ್ಲರ ಮನಸ್ಸು ಒದ್ದೆಯಾಗಿ ನೆನಪುಗಳು ಮಾಸದಂತೆ ಕವನಗಳು ತಮ್ಮ ತೇವವನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದವು...

ಇಂತಹ ಅನೇಕ ಹೊಸತನಗಳು ಧಾರವಾಡದಲ್ಲಿ ನಡೆಯುತ್ತವೆ ಆದರೆ ವಿಪರ್ಯಾಸವೆಂದರೆ ಅವು ಯಾವವು ಸಹ ಬೆಳಕಿಗೆ ಬರುವುದಿಲ್ಲ...ರಾಜಧಾನಿಯಲ್ಲಿ ಒಂದು ಸಣ್ಣ ಸೊಳ್ಳೆ ಸತ್ತರು ಸಹ ಅದು ಸುದ್ದಿಯಾಗುತ್ತದೆ...ಅದನ್ನೇ ನಾವು ಲಾಬಿ ಎಂದು ಕರೆಯುವುದು...ನಮ್ಮ ಭಾಗದ ಜನರಿಗೆ ಅದು ಅರ್ಥವಾಗದೆ ಇರುವುದು ದುರಂತ...

Sunday, June 14, 2009

"ಇತಿ ನಿನ್ನ ಅಮೃತಾ" ಜೊತೆಗೆ ಎರಡು ಮಾತು...


"ಜತೆಗಿರುವನು ಚಂದಿರ" ನಾಟಕದ ಯಶಸ್ಸು, ನನ್ನ ಮುಂದಿನ ನಾಟಕದ ತಯಾರಿಗೆ ಬುನಾದಿಯಾಗಿದೆ... ಹಿರಿಯರಾದ ಜಯಂತ್ ಕಾಯ್ಕಿಣಿ ಬರೆದಿರುವ (ಅನುವಾದಿಸಿರುವ) "ಇತಿ ನಿನ್ನ ಅಮೃತಾ" ಇಷ್ಟರಲ್ಲಿಯೇ ಕೈಗೆತ್ತಿಕೊಳ್ಳಲಿದ್ದೇನೆ....ಗೆಳೆಯ ಕಿರಣ್ ಗೋಡ್ಖಿಂಡಿ ಅದಕ್ಕೆ ಸಂಗೀತ ನೀಡಲು ಒಪ್ಪಿದ್ದಾರೆ...ಅದನ್ನು ಓದುತ್ತ ಹೋದಂತೆ ಅದರ ಪೀಠಿಕೆ ಸಿಧ್ಧವಾಗಿದ್ದು ಹೀಗೆ....

ಅದೊಂದು ವಿಚಿತ್ರ ಕುತೂಹಲ...ಯಾರಿಗಾದರು ಬಂದ ಪತ್ರವನ್ನು ಕದ್ದು ಓದುವ....ಕೊನೆ ಪಕ್ಷ ಕದ್ದು ನೋಡುವ...ಯಾರಿಂದ ಬಂದಿದೆ...ಏನು ಬರೆದಿದ್ದಾರೆ...ಮುಂತಾದವುಗಳನ್ನು ತಿಳಿದುಕೊಳ್ಳುವ ಕನಿಷ್ಥಮಟ್ಟದ ಕುತೂಹಲ ಎಲ್ಲರಲ್ಲಿಯೂ ಇದ್ದೆ ಇರುತ್ತದೆ...ತೋರಿಕೆಗಾಗಿ ನಾವು ತೀರ ಸಭ್ಯರಂತೆ... ಪ್ರಾಮಾಣಿಕರಂತೆ ವ್ಯವಹರಿಸಲು ಪ್ರಯತ್ನಿಸಿದರೂ, ನಾವು ಬೆತ್ತಲೆಯಾಗುತ್ತ ಹೋದಂತೆ ನಮ್ಮ ಬೇರೊಂದು ಸಾಮ್ರಾಜ್ಯ ತೆರೆದುಕೊಲ್ಲುವುದಂತು ನಿಜ...

ಅದರಲ್ಲೂ ಒಬ್ಬ ಹುಡುಗ-ಹುಡುಗಿ ವಿನಿಮಯಿಸಿಕೊಂಡ ಪತ್ರಗಳು ಅನೇಕ ಕಥೆಗಳನ್ನು ಬಿಚ್ಚಿಡುತ್ತವೆ... ಅವು ಕೇವಲ ಪ್ರೇಮ ಪತ್ರಗಳೇ ಆಗಿರಬೇಕಾ...ಗೆಳೆತನದಲ್ಲಿ ಒಂದು ಹೆಣ್ಣು - ಗಂಡು ಪತ್ರ ವಿನಿಮಯ ಮಾಡಿಕೊಳ್ಳಲೆಬಾರದಾ...ಗೆಳೆತನ ನಿಧಾನವಾಗಿ ಪ್ರೇಮಕ್ಕೆ ತಿರುಗಿ ಅಲ್ಲಿಯೂ ಸಹ ಪತ್ರಗಳ ವಿನಿಮಯ ಶುರುವಾದರೆ ನಮ್ಮ ಸಮಾಜಕ್ಕೆ ಇರುವ ಕುತೂಹಲ ಎಂತಹದು? ನಮ್ಮ ಮಡಿವಂತಿಕೆ ಸಮಾಜ ಅದನ್ನು ಹೇಗೆ ಸ್ವೀಕರಿಸೀತು... ಮುಂತಾದ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವಾಗಲೇ...ನನ್ನ ಕಣ್ಣ ಮುಂದೆ "ಇತಿ ನಿನ್ನ ಅಮೃತಾ" ಹಾಯ್ದು ಹೋದದ್ದು ಮತ್ತು ಅದಕ್ಕೊಂದು ಮೂರ್ತ ರೂಪ ಕೊಟ್ಟು ಅದನ್ನು ನಿಮ್ಮ ಮುಂದೆ ಬಿಚ್ಚಿಡಲು ಸಾಧ್ಯವಾದದ್ದು.... ಇನ್ನು ಮುಂದೆ ನೀವುಂಟು.....ನಿಮ್ಮ ಅಮೃತಾ ಉಂಟು....

ನನ್ನ ಕೆಲಸಕ್ಕೆ ಅವರು ಅರ್ಜಿ ಬರೆಯದೇ ಹೋಗಿದ್ದರೆ...

ನಾನು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಸೇರಿದಾಗಿನ ಮಾತುಗಳಿವು...ಈ ಮೊದಲು ತಿಳಿಸಿದಂತೆ ನಾನು ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಬಂದಿದ್ದಲ್ಲ...ಅದನ್ನು ಕಲಿಯಲೇ ಬೇಕು ಮತ್ತು ಅದರಲ್ಲಿ ನನ್ನ ಭವಿಷ್ಯವನ್ನು ಕಂಡು ಕೊಳ್ಳಬೇಕೆಂದು ಬಂದವನು...

ಮೊದಲಿನಿಂದಲು ಪತ್ರಿಕೆಗಳಿಗೆ ಬರೆಯುವ ಉತ್ಸಾಹ, ಆಸಕ್ತಿ ನನಗೆ ಇದ್ದುದರಿಂದ ಕ.ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯ ಅದೇನೋ ನನ್ನ ಮೇಲೆ ವಿಶೇಷ ವಾತ್ಸಲ್ಯ...ಅದೊಂದು ದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.ಬಾಲು ಸರ್ ಎಂದಿನಂತೆ ತಮ್ಮ ತರಗತಿಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರಿಗು ಅರ್ಜಿ ಹಾಕಲು ಹೇಳಿದರು. ನನ್ನನ್ನು ತಮ್ಮ ಚೇಂಬರಿಗೆ ಕರೆಯಿಸಿ ಅರ್ಜಿ ಹಾಕುವಂತೆ ತಾಕೀತು ಮಾಡಿದರು...ನಾನು ಹುಂ ಎಂದು ಸುಮ್ಮನಾದೆ...ಅದರ ಕಡೆ ಹೆಚ್ಚು ಗಮನ ಹರಿಸದೆ ಎಂದಿನಂತೆ ನನ್ನ ನಾಟಕ, ಓದು ಮುಂತಾದವುಗಳ ಕಡೆ ಗಮನ ಹರಿಸಿ ಅದನ್ನು ಮರೆತು ಬಿಟ್ಟೆ...

ಅರ್ಜಿಹಾಕಲು ಇನ್ನು ಎರಡು ದಿನ ಬಾಕಿ ಇರುವಾಗ ಬಾಲು ಸರ್ ತಮ್ಮ ಚೇಂಬರಿಗೆ ನನ್ನನ್ನು ಮತ್ತೆ ಕರೆಯಿಸಿ ತಮ್ಮ ಎಂದಿನ ಶೈಲಿಯಲ್ಲಿ "ಏನಯ್ಯಾ ಅಪ್ಲಿಕೇಶನ್ ಹಾಕಿದ್ಯಾ" ಎಂದರು. ನಾನು ಇಲ್ಲ ಸರ್..ನನ್ನ ಓದು ಮುಗಿದ ನಂತರ ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂದಾಗ ಅವರ ಸಿಟ್ಟು ನೆತ್ತಿಗೇರಿತ್ತು...ತಾವೇ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನನ್ನ ಪರವಾಗಿ ಅರ್ಜಿ ಬರೆದು ನನಗೆ ಕೆಳಗೆ ಸಹಿ ಮಾಡಲು ಹೇಳಿ ಕಛೇರಿಯ ಸಹಾಯಕನನ್ನು ಕರೆದು ಅದನ್ನು ಪೋಸ್ಟ್ ಮಾಡಲು ಹೇಳಿದರು..

ನಂತರ ಸಂ.ಕ ದಿಂದ ನನಗೆ ಲಿಖಿತ ಪರೀಕ್ಷೆಗೆ ಪತ್ರ ಬಂದಿತು...ನಾನು ಹಾಜರಾಗಲಿಲ್ಲ...ಸಂದರ್ಶನಕ್ಕೆ ಕರೆ ಬಂದಿತು...ಅದಕ್ಕೂ ಹೋಗಲಿಲ್ಲ..ಕೊನೆಗೆ ನನಗೆ ಕೆಲಸಕ್ಕೆ ಹಾಜರಾಗಲು ಕರೆ ಬಂದಿತು ಮತ್ತು ೧೯೯೪ ಡಿಸೆಂಬರ್ ೩೧ ರಂದು ಕೊನೆಯ ದಿನ ಎಂದು ನಿಗದಿ ಪಡಿಸಿ ಪತ್ರವನ್ನು ಕಳಿಸಿದರು...ಇದರಿಂದ ಬಾಲು ಸರ್ ತುಂಬ ಖುಷಿ ಪಟ್ಟಿದ್ದರು...

ಇಷ್ಟಾದರೂ ನಾನು ಕೆಲಸಕ್ಕೆ ಸೇರಬೇಕೆ ಬೇಡವೇ ಎಂದು ವಿಚಾರಮಾಡುತ್ತಿರುವಾಗ ನನ್ನನ್ನು ಮತ್ತೆ ತಮ್ಮ ಚೇಂಬರಿಗೆ ಕರೆಯಿಸಿ ಬೈದು ಕೆಲಸಕ್ಕೆ ಸೇರುವಂತೆ ಮಾಡಿದರು...

ಅಂದು ಬಹುಶಃ ಅವರು ನನ್ನನ್ನು ಈ ಪರಿ ವತ್ತಾಯಿಸದೆ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ? ನನ್ನ ಜೀವನಕ್ಕೆ ಒಂದು ಹೊಸ ಭಾಷ್ಯ ಬರೆದ ಬಾಲು ಸರ್ ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ... ಹಿ ಇಸ್ ಎ ಗ್ರೇಟ್ ಹ್ಯುಮನ್ ಬಿಯಿಂಗ್...ಹ್ಯಾಟ್ಸ್ ಆಫ್ ಸರ್...!!!

Sunday, June 7, 2009

ಹದಿನಾರು ವರ್ಷಗಳ ನಂತರ ಸಿಕ್ಕ ಅಪರೂಪದ ಸಂಗಾತಿ..

"ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಎಂಬ ಮಾತು ನಿನ್ನ ಪಾಲಿಗೆ ಸುಳಾಯ್ತಲ್ಲೇ ಸೋಮಾಲಿಯ...." ನಾನು ಮೇಲಿಂದ ಮೇಲೆ ಮೆಲಕು ಹಾಕುವ ಕವನಗಳ ಸಾಲುಗಳಿವು...

ನಮ್ಮ ಕಾಲೇಜಿನ ದಿನಗಳಲ್ಲಿ ನಾವು ನಾಟಕ, ಪ್ರಗತಿಪರ ಚಿಂತನೆ, ಚರ್ಚೆ ಮುಂತಾದ ವಿಷಯಗಳ ಕುರಿತು ಆಲೋಚಿಸುತ್ತಿರುವಾಗ ಧಾರವಾಡದ ನಮ್ಮ ಗುಂಪಿಗೆ ಬಂದು ಸೇರಿದ ಗೆಳೆಯ ಪ್ರಮೋದ್ ತುರ್ವಿಹಾಳ ಬರೆದ ಕವನದ ಸಾಲುಗಳಿವು... ಈ ಕವನವನ್ನು ತಂದು ನಮ್ಮ ಮುಂದೆ ಅವನು ಓದುತಿದ್ದರೆ ನಾವೆಲ್ಲ ಗೆಳೆಯರು ಕುತೂಹಲ ಭರಿತರಾಗಿ ಅದನ್ನ ಆಲಿಸುತ್ತಿದ್ದೆವು...

ಪ್ರಮೊದನಿಗು ಸಹ ಆಗ ನಮ್ಮಷ್ಟೇ ವಯಸ್ಸು....ಸಮಾನ ಮನಸ್ಕರು ಒಂದೆಡೆ ಸೇರಲು ಈ ರೀತಿಯ ಕವನಗಳು ಸಾಕು ಎಂಬುದನ್ನು ಅವನು ಸಾಬೀತು ಪಡಿಸಿದ್ದ.....ನಿಧಾನವಾಗಿ ಅವನ ಪರಿಚಯವಾಗುತ್ತ ಹೋದಂತೆ...ಅವನ ಜೀವನ ಸಹ ಪರಿಚಯವಾಗುತ್ತ ಹೋಯಿತು... ಅವನೊಂದು ರೀತಿಯ ಭಗ್ನ ಪ್ರೇಮಿ...ಆದರೆ ತನ್ನ ಜೀವನವನ್ನು ಅದರಿಂದ ಹಾಳುಮಾಡಿ ಕೊಲ್ಲದೆ..ಆಳವಾದ ಅಧ್ಯಯನಕ್ಕೆ ಇಳಿದ....ಬುಧ್ಧ ಬಸವ ಮಾರ್ಕ್ಸ್, ಲೆನಿನ್...ಮುಂತಾದವರನ್ನು ಓದಿದ ಅವುಗಳ ಬಗ್ಗೆ ಮಾತನಾಡತೊಡಗಿದ... ಸಮಯ ಸಿಕ್ಕರೆ ಸಾಕು ನಮ್ಮನ್ನು ಹುಡುಕಿಕೊಂಡು ಬಂದು ಮತ್ತೆ ಹೊಸ ವಿಚಾರಗಳ ಕುರಿತು ಮಾತುಗಳ ಸಂಭ್ರಮ...

ನಮ್ಮ ಬಹುತೇಕ ನಾಟಕಗಳಲ್ಲಿ ಆತ ನಟನಾಗಿ, ಸಂಘತಕನಾಗಿ ಭಾಗವಹಿಸಿದ..ನಾವು ತಿನುತ್ತಿದ್ದ ಚುರುಮುರಿ...ಗಿರ್ಮಿತ್... ಅವನು ತಿನುತ್ತಿದ್ದ...ಮುಂದೆ ನಾವು ನಮ್ಮ ವಿದ್ಯಾಭ್ಯಾಸವನ್ನು ಮುಗಿಸಿ..ಕೆಲಸ ಆರಿಸಿಕೊಂಡು ಬೇರೆ ಬೇರೆ ಊರುಗಳಿಗೆ ವಲಸೆ ಬಂದಾಗ ಅವನ ಸಂಪರ್ಕ ತಪ್ಪಿ ಹೋಯಿತು...

ಸುಮಾರು ಹದಿನಾರು ವರ್ಷಗಳ ನಂತರ ಮೊನ್ನೆ ದಿನಾಂಕ ೫-೦೬-೨೦೦೯ ರಂದು ಧಾರವಾಡದಲ್ಲಿ ಮತ್ತೆ ಸಿಕ್ಕ.... ತುಂಬ ಬದಲಾಗಿದ್ದ... ವಿಚಾರಗಳಲ್ಲಿ ಅಲ್ಲ...ತನ್ನ ರೂಪದಲ್ಲಿ.. ಸ್ವಲ್ಪ ದಪ್ಪಗಾಗಿದ್ದ.... ಮತ್ತೆ ನಮ ಮಾತುಗಳು ಹದಿನಾರು ವರ್ಷಗಳ ಹಿಂದಕ್ಕೆ ತಿರುಗಿತು...ಸರಿಯಾಗಿ ರಾತ್ರಿ ೮ ಗಂಟೆಗೆ ಆರಂಭವಾದ ಮಾತುಗಳು ಮುಗಿದಾಗ ಬೆಳಗಿನ ಜಾವ ೩ ಗಂಟೆ...ಅಬ್ಬ ಅದ್ಭುತ ಮಾತುಗಳು...ಮತ್ತೆ ಹೊಸ ಹೊಸ ವಿಚಾರಗಳು...ನಿಜಕ್ಕೂ ಬಹಳ ಖುಷಿ ಕೊಟ್ಟ ಘಳಿಗೆ ಅದು...

ಅವನೇ ಆ ದಿನಗಳಲ್ಲಿ ಬರೆದ ಒಂದು ಚಿಕ ಹನಿಗವನ ವನ್ನು ಅವನ ಮುಂದೆ ನಾನು ಹೇಳಿದಾಗ ಅವನ ಕಣ್ಣಂಚಿನಲ್ಲಿ ಹನಿ ನೀರು ಬಂದಿದ್ದನ್ನು ಗಮನಿಸಿ ನಾನೂ ಸಹ ಸ್ವಲ್ಪ ಭಾವುಕನಾದೆ....

"ತಳವಿಲ್ಲದ ಪಾತ್ರೆ ಎಂದು ತಿಳಿದಿದ್ದರೆ ನಿನ್ನ ಪ್ರೀತಿ
ಸುರಿಯುತ್ತಿದ್ದೇನೆ ಅದಕ್ಕೆ ಪ್ರೇಮ ಪಾಕ?"

Thursday, June 4, 2009

ಮಾತನಾಡುವ ಹೂಗಳು.......ಅಲ್ಲಿ ಹೂಗಳು ಮಾತನಾಡುತ್ತವೆ....
ಕಿವಿಗೆ ಇಂಪಾಗುವ ಹಾಗೆ
ಕಣ್ಣಿಗೆ ತಂಪಾಗುವ ಹಾಗೆ.....
ನಿಂತ ನೀರಲ್ಲಿ ಎಸೆದ
ಕಲ್ಲಿನಂತೆ...
ಎದ್ದ ಅಲೆಗಳ ಕಲರವಕ್ಕೆ
ದನಿಗೂಡುವ ಕಂಪನಕ್ಕೆ
ನಿಶಃಬ್ದದ ಪ್ರಶಾಂತತೆಗೆ
ಮೂಕಸಾಕ್ಷಿಯಾಗಿ
ಕಾಂಕ್ರೀಟು ನಾಡುಗಳ
ಕಬಂಧ ಬಾಹು ಬಂಧನದಲ್ಲಿ
ನಲುಗುವ ಮುನ್ನ
ಅವುಗಳ ಮಾತಿಗೆ ದನಿಗೂಡಿಸಬೇಕಿದೆ.....
ಏಕೆಂದರೆ ಹೂಗಳು
ಮಾತನಾಡುತಿವೆ.....