Saturday, September 5, 2009

ಶಾಂತಿ, ಪ್ರೇಮ ಸಂದೇಶವ ಹೊತ್ತು ತರುವ ದೂತನ ಸಂಸಾರ ಪಯಣದ ಸುತ್ತ......




ನಾನು ಇತ್ತೀಚಿಗೆ ಬರೆದಿದ್ದೆ..ನನ್ನ ಮನೆಯ ಬಾಲ್ಕನಿಯಲ್ಲಿ ನಾನೇ ನಿರ್ಮಿಸಿಕೊಂಡ ಕೈತೋಟದಲ್ಲಿ ಪಾರಿವಾಳ ದಂಪತಿ ಸಂಸಾರ ಹೂಡಿವೆ ಎಂದು...ಮರಿಗಳು ದೊಡ್ಡದಾಗುತ್ತಿವೆ...ಮೊದ ಮೊದಲು ನಮಗೆ ಹೆದರುತ್ತಿದ ಆ ಪುಟ್ಟ ಮರಿಗಳು ಈಗ ನಮ್ಮನ್ನೇ ಹೆದರಿಸುತ್ತಿವೆ...ಅದ್ಭುತ ಲೋಕ ಅದರದ್ದು....ಕಣ್ಣು ಬಿಟ್ಟು ತೆರೆಯುವುದರೊಳಗೆ ದೊಡ್ಡದಾಗಿ ಬಿಟ್ಟಿವೆ...ಅವುಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದಂತೆಯೇ ಅವುಗಳ ಜೀವನ ಚಕ್ರ ಹೇಗಿರ ಬಹುದೆಂಬ ಸಹಜವಾದ ಕುತೂಹಲ ನನ್ನಲ್ಲಿ ಮನೆಮಾಡಿತು...ಸರಿ ಅದರ ಕುರಿತು ಅಧ್ಯಯನದಲ್ಲಿ ತೊಡಗಿಯೇ ಬಿಟ್ಟೆ....




ಪಾರಿವಾಳ ಸಾಮಾನ್ಯವಾಗಿ ಗರ್ಭಧರಿಸಿದ ೩೦ ರಿಂದ ೩೫ ದಿನಗಳಲ್ಲಿ ಮೊಟ್ಟೆ ಇಡುತ್ತದೆ...ಮೊದಲು ಒಂದೆ ಮೊಟ್ಟೆ ಇಡುತ್ತದೆ..ಮುಂದೆ ಎರಡು ದಿನಗಳಲ್ಲಿ ಮತ್ತೊಂದು ಮೊಟ್ಟೆ ಇಡುತ್ತದೆ...ಮೊಟ್ಟೆ ಇಡುವ ಸಂದರ್ಭದಲ್ಲಿ ಮಾತ್ರ ಇದು ಗೂಡು ಕಟ್ಟುವ ಕಾರ್ಯದಲ್ಲಿ ತೊಡಗುತ್ತದೆ...ಇದನ್ನು ಗೂಡು ಎನ್ನಲು ಸಾಧ್ಯವಿಲ್ಲ..ಇದನ್ನು ನಾವು ಮನೆ ಅಂತಲೇ ಕರೆಯಬೇಕು...ಹಾಳು ಬಿದ್ದ ಮನೆಯ ಸಂದಿ-ಗೊಂದಿಗಳು ಪಾರಿವಾಳಗಳಿಗೆ ತಮ್ಮ ಸಂತಾನಾಭಿವೃದ್ಧಿಯ ತಾಣಗಳಾಗುತ್ತವೆ...




ಸಾಮಾನ್ಯವಾಗಿ ಮೊಟ್ಟೆ ಇಟ್ಟ ೧೫ ರಿಂದ ೧೭ ದಿನಗಳ ವರೆಗೆ ಗಂಡು ಹಾಗೂ ಹೆಣ್ಣು ಪಾರಿವಾಳಗಳು ಸರತಿಯ ಮೇಲೆ ಕಾವು ಕೊಡುತ್ತವೆ...ರಾತಿಯೆಲ್ಲ ಹೆಣ್ಣು ಪಾರಿವಾಳ ಮೊಟ್ಟೆಗೆ ಕಾವು ಕೊಟ್ಟರೆ..ಬೆಳಗಿನ ಜಾವ ಗಂಡು ಪಾರಿವಾಳ ಆ ಕಾಯಕವನ್ನು ಮುಂದುವರೆಸುತ್ತದೆ...ಮರಿಗಳಾದ ಮೇಲೆ ಹೆಣ್ಣು ಪಾರಿವಾಳಕ್ಕಿಂತ ಗಂಡು ಪಾರಿವಾಲವೇ ಜವಾಬ್ದಾರಿಯುತವಾಗಿರುತ್ತದೆ...ಅದೇ ಮರಿಗಳಿಗೆ ಆಹಾರ ಪೂರೈಕೆ ಮಾಡುತ್ತದೆ..ಮೊದಲಿನ ಒಂದು ವಾರ ಅಥವಾ ಹತ್ತು ದಿನಗಳವರೆಗೆ ಪಾರಿವಾಳ ದಂಪತಿ ತಮ್ಮ ಮರಿಗಳಿಗೆ ಕಾಳಿನ ಹಾಲು ಅಥವಾ ತಾವು ತಿಂದ ಕಾಳುಗಳಿಂದ ಉತ್ಪನ್ನವಾದ ಗಿಣ್ಣದಂತಹ ಪದಾರ್ಥವನ್ನು ತಿನ್ನಿಸುತ್ತವೆ...ನಂತರ ಕ್ರಮೇಣ ನುರಿಸಿದ ಕಾಳು ಕಡಿಗಳನ್ನು ಗುಟುಕು ಕೊಡಲು ಆರಂಭಿಸುತ್ತವೆ...




ಸಾಮಾನ್ಯವಾಗಿ ಮರಿಗಳು ದೊಡ್ಡವಾಗಿ ಹಾರಲು ಒಂದು ತಿಂಗಳಾದರೂ ಬೇಕು...ಹಾರಲು ಆರಂಭಿಸಿದ ಮೇಲೂ ಸಹ ಸ್ವಲ್ಪ ಪಾರಿವಾಳ ದಂಪತಿ ಅವುಗಳಿಗೆ ಗುಟುಕು ಕೊಡುತ್ತವೆ...




ಅದ್ಭುತ ಜಗತ್ತಲ್ಲವೇ ಪಾರಿವಾಳಗಳದ್ದು....




ಅವುಗಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ನಾನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ...ಅವುಗಳನ್ನು ನೋಡಲು ದಯವಿಟ್ಟು ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ....








ನಿಮ್ಮ ಅಭಿಪ್ರಾಯವನ್ನು ಮರೆಯದೆ ದಾಖಲಿಸಿ....




Thursday, September 3, 2009

ಈ ನೆನಪುಗಳೇ ಹಾಗೆ....ನಮ್ಮೀ ನಿವಾಸದಲ್ಲೇ ಅಡಗಿವೆ....

ಇಟಗಿ ಈರಣ್ಣ ಅವರ "ಚಂದಕಿಂತ ಚಂದ..." ಹಾಡು ಹುಟ್ಟಿದ ಕುರಿತು ಮಣಿಕಾಂತ್ ವಿಜಯಕರ್ನಾಟಕದಲ್ಲಿ ಬರೆದ ಮೇಲೆ ನನ್ನ ಫೋನು ಒಂದು ಕ್ಷಣವೂ ಸುಮ್ಮನಿಲ್ಲ..ಪ್ರತಿ ಕ್ಷಣಕ್ಕೆ ಸುಮ್ಮನೆ ತಕರಾರು ಮಾಡುತ್ತಿದೆ...ಪುಟ್ಟ ಮಕ್ಕಳು ರಚ್ಚೆ ಹಿಡಿಯುವ ಹಾಗೆ...ಅದು ಕೂಗುವ ಕ್ಷಣಕ್ಕೆ ಎತ್ತಿಕೊಂಡು...ಮಾತನಾಡಿ...ಕೆಳಕ್ಕಿಡುವ ಮರುಕ್ಷಣವೇ ಮತ್ತೆ ಕೂಗಲು ಆರಂಭಿಸಿ ಬಿಟ್ಟಿದೆ... ಎದುರು ಮಾತನಾಡುವಂತಿಲ್ಲ..ಏಕೆಂದರೆ ಅತ್ತ ಕಡೆಯಿಂದ ಬರುತ್ತಿರುವ ಫೋನುಗಳೆಲ್ಲವೂ ಅಕ್ಕರೆಯಿಂದ ತಮ್ಮ ಅಭಿಮಾನವನ್ನು ಹೇಳುವ ಕರೆಗಳೇ...
ಇದೆಲ್ಲದರ ನಡುವೆ ಇಟಗಿ ಈರಣ್ಣ ಸಹ ಬೆಳಿಗ್ಗೆ ಫೋನಾಯಿಸಿ...ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು..."ಹತ್ತು ವರ್ಷಗಳ ನಂತರ ನನ್ನನ್ನು ಈ ರೀತಿಯಲ್ಲಿ ನೆನಪಿಸಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್...ನಾನು ಕ್ಲಾಸನ್ನು ಸಹ ನಡೆಸಲು ಸಾಧ್ಯವಾಗದಷ್ಟು ನನ್ನ ಮೊಬೈಲ್ ರಿಂಗಣಿಸುತ್ತಿದೆ... ಮೈಸೂರಿನಿಂದ ರಮೇಶ್, ಶಿವಾಜಿರಾವ್ ಜಾಧವ್..ಮುಂತಾದವರೆಲ್ಲ ಕರೆಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ..ತುಂಬ ಚನ್ನಾಗಿ ಬರೆದಿದ್ದೀರಿ...ಅಂದ ಹಾಗೆ ರಮೇಶ್ ಮೈಸೂರಿನಲ್ಲಿ ಮತ್ತೆ ರಾವಿ ನದಿಯ ದಂಡೆಯ ಮೇಲೆ ಮಾಡಿಸುವ ತಯಾರಿಯಲ್ಲಿದ್ದಾರೆ..ಭಾಳ ಖುಷಿ ಆತು" ಎಂದು ಫೋನಿಟ್ಟರು...
ರಾವಿ ನದಿಯ ಹೆಸರನ್ನು ಕೇಳಿದ ತಕ್ಷಣ ನಾನು ಮೈ ಕೊಡವಿಕೊಂಡು ಮೇಲೆದ್ದೆ...ಅದನ್ನು ಈಗ ಮತ್ತೆ ಮಾಡಿಸಲು ಸಾಧ್ಯವಿದೆಯೇ? ಮಾಡಿಸಿದರೆ ಯಾವ ತಂಡಕ್ಕೆ ಮಾಡಿಸುವುದು ಮುಂತಾದವುಗಳನ್ನು ಚಿಂತಿಸುತ್ತಿರುವಾಗ...ನೆನಪಾಗಿದ್ದು..."ಈ ನೆನಪುಗಳೇ ಹಾಗೆ...ನಮ್ಮೀ ನಿವಾಸದಲ್ಲೇ ಅಡಗಿವೆ...."

Wednesday, September 2, 2009

ಹಾಡು ಹುಟ್ಟಿದ ಸಮಯ....

ಮೂರು ವಾರಗಳ ಸತತ ಪ್ರಯತ್ನದ ಫಲವಾಗಿ ಇಟಗಿ ಈರಣ್ಣ ನೆನ್ನೆ ರಾತ್ರಿ ಮಾತಿಗೆ ಸಿಕ್ಕರು....ಮನೆಯಲ್ಲಿ ತಾಯಿ, ಮಡದಿ ಹುಷಾರಿಲ್ಲದೆ ಅವರ ಆರೈಕೆಯಲ್ಲಿ ದಿನದ ಬಹುಕಾಲವನ್ನು ಕಳೆದರೆ ಇನ್ನು ಉಳಿದ ಸಮಯ ಕಾಲೇಜಿನಲ್ಲಿ ಉಪನ್ಯಾಸ ನೀಡುವುದರಲ್ಲಿ ಹೋಗಿಬಿಡುತ್ತದೆ.."ನನ್ನ ಬದುಕನ್ನೋದು ಅರವೀನ ನೀರಿನ್ಯಾಗ ಹಾಕಿ ಹಿಂಡಿ ತಗಧಂಗ ಆಗೈತಿ ಧನಂಜಯ ಅವರ..." ಎಂದೇ ಮಾತಿಗೆ ಶುರುವಿಟ್ಟುಕೊಂಡ ಈರಣ್ಣ ಬದುಕನ್ನ ವಿಭಿನ್ನವಾಗಿ ನೋಡಬಯಸಿದವರು...ಬಾಲ್ಯದಲ್ಲಿಯೇ ಅನಿವಾರ್ಯ ಕಾರಣಗಳಿಂದ ಮುಂಬೈಗೆ ಬಂದುತಲುಪಿ ಅಲ್ಲಿನ ರೈಲು ನಿಲ್ದಾಣಗಳಲ್ಲಿ ಅಕ್ಷರಶಃ ಷೂ ಪಾಲಿಶ್ ಮಾಡಿ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹಿಂದಿ, ಉರ್ದು, ಮರಾಥಿ, ಬಂಗಾಳಿ, ಕನ್ನಡ, ಇಂಗ್ಲೀಶ್, ಭೋಜಪುರಿ, ಬಿಹಾರಿ, ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದರು...ಮುಂದೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಾಗ ಅವರ ಬದುಕಿನ ದಿಕ್ಕು ಬದಲಾಯಿತು...ಸಾಹಿತಿಗಳ ತವರೂರು ಧಾರವಾಡದಲ್ಲಿ ಅವರಿಗೆ ಅನೇಕ ಹಿರಿಯ ಸಾಹಿತಿಗಳ ಸಂಪರ್ಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಯಿತು... ಇವರು ಬರೆದ ಶಾಯರಿಗಳು ಇಂದಿಗೂ ಕೂಡ ಜನಪದ ಸಾಹಿತ್ಯದಂತೆ ಜನರ ಬಾಯಲ್ಲಿ ಹರಿದಾಡುತ್ತಿವೆ...ಅನೇಕ ಜನ ಅವುಗಳನ್ನು ತಾವೇ ರಚಿಸಿದ್ದು ಎಂದು ಅನೇಕ ಕವಿಗೊಶ್ಥಿಗಳಲ್ಲಿ ವಾಚನ ಮಾಡಿದ್ದು ಉಂಟು...
ಪತ್ರಕರ್ತ ಗೆಳೆಯ ಮಣಿಕಾಂತನ ಒತ್ತಾಸೆಗೆ ಬಿದ್ದು ಅವರನ್ನು "ಚಂದಕ್ಕಿಂತ ಚಂದ ನೀನೆ ಸುಂದರ.." ಹಾಡು ಬರೆದ ಬಗೆ, ಅದರ ಹಿಂದಿನ ಉದ್ದೇಶ, ಮುಂತಾದವುಗಳನ್ನು ಕುರಿತು ಮಾತಿಗೆ ಎಳೆದಾಗ ನಿಜಕ್ಕೂ ಅಚ್ಚರಿಯಾಗುವಂತಹ ಕೆಲವು ಸಂಗತಿಗಳನ್ನು ಅವರು ಬಿಚ್ಚಿಟ್ಟರು....
"ನಾನು ಸ್ಪರ್ಶ ಚಿತ್ರದ ಹಾಡಿಗೆ ಸಾಹಿತ್ಯ ಬರದದ್ದು ಎಷ್ಟು ಖರೆನೋ ಅಷ್ಟ ಅದು ಆಕಸ್ಮಿಕನೂ ಹೌದು...ನಾನು ಪಿಕ್ಚರ್ ನೋಡುದು ಬಿಟ್ಟು ೨೫ ವರ್ಷ ಆತು..ಇನ್ನ ಫಿಲ್ಮ ಗೆ ಹಾಡನ್ನ ಬರಿಯೋದು ದೂರದ ಮಾತು...ಸುನೀಲ್ ಕುಮಾರ್ ದೇಸಾಯಿ ಅವರು ಶಾಯರಿಗಳನ್ನ ಇಟಗೊಂಡು ಒಂದು ಫಿಲಂ ಮಾಡಬೇಕಂತ ನಿರ್ಧಾರ ಮಾಡಿ ಕನ್ನಡದೊಳಗ ಅಷ್ಟು ಚಂದಾಗಿ ಶಾಯರಿ ಬರಿಯೋರು ಯಾರದಾರ ಅಂತ ಹುಡಕಾಕ ಶುರು ಮಾಡಿದ್ರು...ಆಗ ಯಾರೋ ಪುಣ್ಯಾತ್ಮರು ನನ್ನ ಹೆಸರನ್ನು ಅವರಿಗೆ ಹೇಳಿದ್ರಂತ..ಆಗ ನನ್ನನ್ನ ಹುಡುಕೋ ಕೆಲಸ ಶುರು ಮಾಡಿದ್ರು ದೇಸಾಯರು..ಯುನಿವರ್ಸಿಟಿ, ಬಳ್ಳಾರಿ, ಹೊಸಪೇಟೆ, ವಿಜಯನಗರ ಕಾಲೇಜು..ಹೀಂಗ ಎಲ್ಲಾ ಕಡೆ ಹುಡುಕಿದ ಮ್ಯಾಲ ನನ್ನ ಪತ್ತಾ ಅವ್ರಿಗೆ ಸಿಕ್ತು...ಇದೆಲ್ಲ ಆಗಿದ್ದು ೧೯೯೯ರಾಗ ಆಗಿನ್ನ ಈಗಿನಗತೇ ಮೊಬೈಲ್ ಫೋನಿನ ಹಾವಳಿ ಇರಲಿಲ್ಲ..ಹಿಂಗಾಗಿ ಮನಿ ಅಡ್ರೆಸ್ ಹುಡಕಿಕೊಂಡ ಬರಬೇಕು ಇಲ್ಲಂದ್ರ ಲ್ಯಾಂಡ್ ಲೈನ್ಗೆ ಫೋನ್ ಮಾಡಿ ಕೆಲಸ ಮಾಡ್ಕೋಬೇಕು...ಇಂಥ ಪರಿಸ್ಥಿತಿಯೋಳಗ ಅಂತು ದೇಸಾಯರು ನನ್ನನ್ನ ಹಿಡದ ಬಿಟ್ರು..ಮತ್ತ ತಮ್ಮ ಸಿನೆಮಾಕ್ಕ ಶಾಯರಿ ಬರಿಯಾಕ್ಕಂತ ನನ್ನನ್ನ ಒಪ್ಪಿಸಿದರು....ಹೀಂಗ ನಾನು ಗಾಂಧೀ ನಗರದ ಕೆಡೆ ಬಸ್ ಹತ್ತಿದೆ.... ಸಿನೆಮಾದ ಕೆಲಸ ಶುರು ಆತು...ದೇಸಾಯರು ಎಲ್ಲಿ ಬೇಕಂತಾರ ಅಲ್ಲಿ ಶಾಯರಿ ಬರದು ಕೊಡ್ತಿದ್ದೆ...ಟೈಮು ಸಿಕ್ಕಾಗ ನಾನು ಅವರು ಅದು-ಇದು ಅಂತ ಹರಟಿ ಹೊಡೀತಾ ಕುಡತಿದ್ವಿ... ನನ್ನನ್ನ ಬೆಂಗಳುರಿನ್ಯಾಗ ಸುದೀಪ್ ಅವರು ತಮ್ಮ ಮನೀ ಬಾಜುಕಿನ ಮನಿಯೊಳಗ ಇಳಕೊಳ್ಳಲಿಕ್ಕೆ ವ್ಯವಸ್ಥಾ ಮಾಡಿದ್ರು...ಅದೊಂದ ದಿನ ನಾನು ದೇಸಾಯರು ಹಂಗ ಮಾತಾಡಕೊಂತ ಕುಂತಾಗ ಈ ಸಿನೀಮಾಕ್ಕ ನೀವೊಂದು ಹಾಡನ್ನ ಯಾಕ ಬರೀಬಾರ್ದು? ಅಂದು ಬಿಟ್ರು ದೇಸಾಯರು...
ನಾನು ಸಹ ಒಪ್ಪಿಕೊಂಡು ಹಾಡು ಹೇಗಿರಬೇಕು ಎಂದು ಚರ್ಚೆಗೆ ಕೂತೆವು....ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಹಾಡಿನಲ್ಲಿರಬೇಕು ಎಂದು ನಿರ್ದೇಶಕರು ಹೇಳಿದ ಮೇಲೆ ಅದರ ಕಾಯ್ರಕ್ಕೆ ಅಣಿಯಾಗಬೇಕಾಯ್ತು.... ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಹಾಡಿನಲ್ಲಿರಬೇಕೆಂದ ಮೇಲೆ ಅದು ಗಜಲ್ ರೂಪದಲ್ಲಿದ್ದರೆ ಒಳ್ಳೆಯದು ಎಂದು ನಿರ್ಧಾರಕ್ಕೆ ಬಂದೆವು..ಅಲ್ಲದೆ ಆ ಹಾಡನ್ನು ಹಾಡಲು ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಬರುತ್ತಿರುವ ವಿಷಯ ತಿಳಿದ ಮೇಲೆ ಅವರ ಧ್ವನಿ, ಅವರ ಸ್ವಭಾವಕ್ಕೆ ಹೊಂದಿಕೆಯಾಗಬಲ್ಲ ಗಜಲ್ ರೂಪದ ಹಾಡನ್ನು ಬರೆಯುವುದಾಗಿ ನಿರ್ಧರಿಸಿದೆ...ಎಷ್ಟು ತಲೆ ಕೆಡಿಸಿಕೊಂಡರು ಹಾಡು ಹುಟ್ಟುತ್ತಲೇ ಇಲ್ಲ...ಅದೊಂದು ದಿನ ರಾತ್ರಿ ಬೆಂಗಳೂರಿನಲ್ಲಿ ಮನೆಯ ಮಹಡಿಯ ಮೇಲೆ ಬಂದು ಈ ಹಾಡಿನ ಬಗ್ಗೆ ಚಿಂತಿಸುತ್ತಿರುವಾಗ ಪ್ರಶಾಂತವಾದ ವಾತಾವರಣದಲ್ಲಿ ಪಕ್ಕದ ಮನೆಯ ಹೆಣ್ಣು ಮಗಳು ತನ್ನ ಮುದ್ದಾದ ಮಗುವನ್ನ ಎತ್ತಿಕೊಂಡು ಅದನ್ನು ಸಮಾಧಾನ ಮಾಡುತ್ತ ಆಗಸದಲ್ಲಿನ ಚಂದ್ರನನ್ನು ತೋರಿಸಿ..ಅದರ ವರ್ಣನೆಯಲ್ಲಿ ತೊಡಗಿದಳು....ಇದೆ ತರಹದ ಸಂದರ್ಭ ನನ್ನ ಹಿರಿಯ ಮಗ ಸಣ್ಣವನಿದ್ದಾಗ ನನ್ನ ಹೆಂಡತಿ ಅವನನ್ನು ಸಮಾಧಾನ ಪಡಿಸುತ್ತಿದ್ದಳು...ಆಗ ರಾತ್ರಿ ಚಂದ್ರನ ಬೆಳಕು ಹಂಚಿನ ಮನೆಯ ಕಿಂಡಿಯ ಮೂಲಕ ನನ್ನ ಮಗನ ಮುಖದ ಮೇಲೆ ಬಿದ್ದಾಗ ಅವಳ ಆಶ್ಚರ್ಯ ಭರಿತವಾದ ಉದ್ಘಾರ ನೆನಪಿಗೆ ಬಂತು....ಆ ಕ್ಷಣದಲ್ಲಿ ನಾನು ನಿರ್ಧರಿಸಿ ಬಿಟ್ಟೆ ನನಗೆ ಬೇಕಾದ ಹಾಡು ಸಿಕ್ಕಿತು ಅಂತ.... ಅಂತಹ ಪ್ರಶಾಂತವಾದ ರಾತ್ರಿಯ ಚಂದ್ರನ ಬೆಳಕಿನಲ್ಲಿ ನಡೆದ ಘಟನಾವಳಿಗಳ ಸಾಕ್ಷಿಯಾಗಿ ನಿಂತ ಮೊದಲ ಸಾಲೇ "ಚಂದಕಿಂತ ಚಂದ ನೀನೆ ಸುಂದರ...ನಿನ್ನ ನೋಡ ಬಂದ ಬಾನ ಚಂದಿರ...."
ನೀವು ಈ ಹಾಡನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ.....ಈ ಹಾಡಿನಲ್ಲಿ ಮುಗ್ಧತೆಗೆ, ಪ್ರಶಾಂತತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ....ಮತ್ತು ಈ ಹಾಡನ್ನು ಯಾವುದೇ ಹುಡುಗಿಯನ್ನು ಅಥವಾ ಪ್ರೇಯಸಿಯನ್ನು ಗಮನದಲ್ಲಿರಿಸಿಕೊಂಡು ಬರೆದದ್ದಲ್ಲ...ಇದು ಮಗುವಿನ ಮೇಲೆ ಬರೆದ ಹಾಡು...ಈ ಹಾಡಿನಲ್ಲಿನ ಒಂದು ಸಾಲು ಮಾತ್ರ ಪ್ರಿಯತಮೆಯನ್ನು ಕುರಿತಾಗಿದೆ....ಅದು ಚಂದುಳ್ಳಿ ಚಲುವೆ - ಚಂದ + ಉಳ್ಳ = ಚಂದುಳ್ಳ ....ಈ ಸಾಲನ್ನು ಹೊರಗಿಟ್ಟು ಹಾಡನ್ನು ಗಮನಿಸಿದರೆ ಇದನ್ನು ಪೂರ್ತಿಯಾಗಿ ಮಗುವನ್ನು ಗಮನದಲ್ಲಿಟ್ಟು ಬರದಂತಹ ಹಾಡು...ಉದಾಹರಣೆಗೆ ಹೇಳಬೇಕೆಂದರೆ ಈ ಹಾಡಿನಲ್ಲಿ ಬಳಸಿದ "ಹೂನಗೆ" ಎಂಬ ಪದ....ಇದು ಕೇವಲ ಮಗುವಿಗೆ ಅನ್ವಯವಾಗಲು ಸಾಧ್ಯ..ಏಕೆಂದರೆ ಹೂನಗೆ ಕೇವಲ ಮಗುವಿಗಿರುತ್ತದೆ....ಮತ್ತೊಂದು ಕಡೆ ಬಳಸಿದ "ಪ್ರೇಮದ ಅರ್ಥವ ಹುಡುಕುತ ನಿಂತೆನು.....ನಿನ್ನಿ ಸ್ಪರ್ಶದಿ ಅರ್ಥವ ಕಂಡೆನು...." ಇದನ್ನು ಕೂಡ ಸೂಕ್ಷ್ಮವಾಗಿ ಗಮನಿಸಿದಾಗ ಮಗುವಿನ ಸ್ಪರ್ಶದಿಂದ ಪ್ರೇಮದ ಅರ್ಥವನ್ನು ಕಂಡ ಧನ್ಯತಾ ಭಾವ ಕಾಣಬಹುದಾಗಿದೆ...ಆದರೆ ಕವಿಯ ಆಶಯಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಇದನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಗೂ ಕ್ಯಾಮರಾಮ್ಯಾನ್ ವೇಣು ಇದನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ... "ನಾನು ಧಾರವಾಡದಲ್ಲಿದ್ದ ನಾಲ್ಕು ವರ್ಷಗಳ ಕಾಲ ಬೇಂದ್ರೆ ಅಜ್ಜನ ಒಡನಾಟ ಈ ಹಾಡಿನಲ್ಲಿ ಬಹಳಷ್ಟು ಕೆಲಸ ಮಾಡಿದೆ...ಶಬ್ದ ಗಾರುಡಿಗ ಎಂದೇ ಹೆಸರಾದ ಬೇಂದ್ರೆ, ತಮ್ಮ ಹಾಡುಗಳಲ್ಲಿ ಶಬ್ದಗಳ ಜೊತೆಗೆ ಬಹಳ ಅದ್ಭುತವಾಗಿ ಆಟವಾಡುತ್ತಿದ್ದರು....ಅವರೊಂದಿಗಿನ ಒಡನಾಟ ನನಗು ಸಹ ಈ ಹಾಡಿನಲ್ಲಿ ಶಬ್ದಗಳ ಜೊತೆ ಆಟವಾಡಿಸಿದೆ....ಈ ಹಾಡನ್ನು ನಾನೇ ಬರೆದರು ಇದರಲ್ಲಿ ಶೇಖಡಾ ೫೦ ರಷ್ಟು ಕೆಲಸ ಮಾಡಿದ್ದು ಬೇಂದ್ರೆ ಅವರ ಪ್ರಭಾವ...
ಸ್ಪರ್ಶ ಚಿತ್ರಕ್ಕೆ ಹಾಡನ್ನು ಬರೆಯುತ್ತಿದ್ದೇನೆ ಎಂದು ನನ್ನ ಮಕ್ಕಳಿಗೆ ನಾನು ತಿಳಿಸಿದಾಗ ಅವರು ಹೇಳಿದ್ದು ಒಂದೇ ಮಾತು..ಅಪ್ಪ ದಯಮಾಡಿ ಶುದ್ಧ ಕನ್ನಡದಾಗ ಹಾಡು ಬರೀ...ಯಾಕಂದ್ರ ಎಲ್ಲಾರು ಕನ್ನಡ ಅಂತ ಹೇಳಕೊಂತ ಬ್ಯಾರೆ ಭಾಷಾದಾಗ ಹಾಡು ಬರಿಯಾಕತ್ತಾರ...ನನಗೆ ಆ ಕ್ಷಣದಲ್ಲಿ ಇದು ನಿಜ ಎನಿಸಿತು...ಅಂತೆಯೇ ನಾನು ಈ ಹಾಡಿನಲ್ಲಿ ಕೇವಲ ಐದು ಪದಗಳನ್ನು ಮಾತ್ರ ಸಂಸ್ಕೃತ ಶಬ್ದ ಬಳಸಿ ಬರೆದಿದ್ದೇನೆ...ಅವು ಸುಂದರ, ಪ್ರೇಮ, ಅರ್ಥ, ಸ್ಪರ್ಶ, ಹೃದಯ..ಇವುಗಳಿಗೆ ಪರ್ಯಾಯವಾಗಿ ಬೇರೆ ಯಾವುದೇ ಕನ್ನಡ ಪದಗಳಿಲ್ಲದ ಕಾರಣ ಮೂಲ ಸಂಸ್ಕೃತ ಪದಗಳನ್ನೇ ಬಳಸಬೇಕಾಯಿತು...." ಈ ಹಾಡಿಗೆ ಹಂಸಲೇಖಾ ಅವರು ಮೊದಲೆ ಸಂಗೀತ ಸಂಯೋಜನೆ ಮಾಡಿದ್ದರು....ಆ ರಾಗಕ್ಕೆ ನಾನು ಹಾಡನ್ನು ಬರೆಯಬೇಕಾಗಿತ್ತು....ಪಂಕಜ್ ಉದಾಸ್ ಅವರು ಬರುವ ದಿನ ನಿಗದಿಯಾಗಿ ಹೋಗಿತ್ತು ಮತ್ತು ಅವರು ಬಂದಾಗ ಈ ಹಾಡಿನ ಧ್ವನಿ ಮುದ್ರಣ ಕಾರ್ಯವು ಮುಗಿಸಲೇ ಬೇಕಿತ್ತು...
ಈ ಹಾಡನ್ನು ಬರೆದ ದಿನ ೮-೮-೯೯ ಮತ್ತು ಈ ಹಾಡಿನ ಧ್ವನಿ ಮುದ್ರಣ ನಡೆದದ್ದು ೯-೮-೯೯....ಪಂಕಜ್ ಉದಾಸ್ ಅವರಂತಹ ಮಹಾನ್ ಗಾಯಕರಿಗೆ ಕನ್ನಡದ ಈ ಹಾಡಿನ ಅರ್ಥವನ್ನು ಹೇಳಿಕೊಡುವುದು...ಅದರ ಉಚ್ಚಾರಣೆಯನ್ನು ಹೇಳಿಕೊಡುವುದು ಎಲ್ಲವು ರೋಮಾಂಚನದ ಕ್ಷಣಗಳು...ನಾನು ನನ್ನ ವೃತ್ತಿಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಪಾಠ ಮಾಡುವುದು ಬೇರೆ ಆದರೆ ಪಂಕಜ್ ಉದಾಸ್ ಅವರಂಥ ಮಹಾನ್ ಗಾಯಕರಿಗೆ ಹೇಳುವುದು ಬೇರೆ...ಅವರಿಗೆ ಹೇಳಿಕೊಡುತ್ತಿದ್ದಾಗ ನಾನು ಅನೇಕ ಬಾರಿ ಪುಳಕಿತನಾಗಿದ್ದೇನೆ..ಅವರ ಮುಗ್ಧತೆಯನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೇನೆ....ಅವರಿಗೆ ಈ ಹಾಡನ್ನು ಹೇಳಿ ಕೊಡುವಾಗ ಒಂದು ಕಡೆ "ಎಲ್ಲೆಲ್ಲೂ ನೀನೆ" ಎಂಬ ಪದ ಪ್ರಯೋಗ ಬರುತ್ತದೆ....ಪಾಪ ಅವರಿಗೆ ಎಷ್ಟು ಸಲ ಹೇಳಿದರು ಸರಿಯಾಗಿ ಹೇಳಲು ಬರುತ್ತಿರಲಿಲ್ಲ..ಆದರು ಸಹ ಬೇಜಾರಿಲ್ಲದೆ ಪ್ರಯತ್ನವನ್ನು ಮುಂದುವರೆಸಿದ್ದರು...ನಾನು ಅವರಿಗೆ ಇಂಗ್ಲೀಶ್ ನ LLU ಅಕ್ಷರಗಳನ್ನು ವೇಗವಾಗಿ ಹೇಳುವಂತೆ ತಿಳಿಸಿದೆ..ಹೇಳುತ್ತಾ ಹೇಳುತ್ತಾ ತಾನೆ ತಾನಾಗಿ ಪದ ಪ್ರಯೋಗ ಸುಲಭವಾಗಿ ಬಂತು.... ಮುಂದೆ ಈ ಹಾಡಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಸಹ ಬಂತು...ಪ್ರಶಸ್ತಿ ಬಂದ ತಕ್ಷಣ ಈರಣ್ಣ ಅವರು ಮೊದಲು ಹುಡುಕಿದ್ದು ಕ್ಯಾಮರಾಮನ್ ವೇಣು ಅವರನ್ನು...ಅದ್ಭುತವಾಗಿ ಈ ಹಾಡನ್ನು ಚಿತ್ರೆಕರಿಸಿದ ವೇಣು ಅವರಿಗೆ ಈ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ಅವರು ತಮ್ಮ ಅಳಲನ್ನು ಸುನೀಲ್ ಕುಮಾರ್ ದೇಸಾಯಿ ಅವರ ಹತ್ತಿರ ತೋಡಿಕೊಂಡಾಗ..ದೇಸಾಯಿ ಅವರು...ನಿಮ್ಮ ಶ್ರಮಕ್ಕೆ ನಿಮಗೆ ಪ್ರಶಸ್ತಿ ಬಂದಿರುವುದು ಸೂಕ್ತವಾಗಿದೆ...ಅದು ನಿಮಗೆ ಸಲ್ಲಬೇಕು ಎಂದು ಹೇಳಿದರು...ಮಗುವಿನ ಮುಗ್ಧತೆ ಕೇವಲ ಈರಣ್ಣ ಅವರ ಹಾಡಿನಲ್ಲಿಲ್ಲ..ಸ್ವತಃ ಅವರಲ್ಲಿಯೇ ಇದೆ....