Saturday, May 23, 2009

ಬಿಟ್ಟೆನೆಂದರು ನೀ ಬಿಡದೀ ಮಾಯೆ!!!


ನಮ್ಮ ಗತ ವೈಭವದ ನೆನಪುಗಳೇ ಹಾಗೆ...ಮಳೆ ನಿಂತರು ಮಳೆಯ ಹನಿ ನಿಲ್ಲದಂತೆ ಸದಾ ನಮ್ಮ ಮನಸ್ಸನ್ನು ಒದ್ದೆ ಯಾಗಿಸುವ ನೆನಪುಗಳ ಹಾಗೆ...


ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಗೆ ಸಾರ್ವಜನಿಕ ಸಂಪರ್ಕಾಧಿಕರಿಯಾಗಿ ಸೇರಿಕೊಂಡ ದಿನಗಳ ಮಾತುಗಳಿವು...ಬಹುಶಃ ನನ್ನ ಸ್ನೇಹಿತರ ವಲಯದಲ್ಲಿಯೇ ನನ್ನಷ್ಟು ಹಂಪಿಯನ್ನು ನೋಡಿದವರಿಲ್ಲ...ನಾನಲ್ಲಿದ್ದ ಮೂರೂವರೆ ವರ್ಷಗಳ ಅವಧಿಯಲ್ಲಿ ಏನಿಲ್ಲವೆಂದರೂ ಕನಿಷ್ಠ ಪಕ್ಷ ೨೦೦ ಬಾರಿ ಅಲ್ಲಿಗೆ ಹೋಗಿ ಬಂದಿದ್ದೇನೆ..ಅಲ್ಲಿನ ಪ್ರತಿಯೊಂದು ಕಲ್ಲು ಬಂಡೆಗಳ ಜೊತೆ ಮಾತನಾಡಲು ಪ್ರಯತ್ನಿಸಿದ್ದೇನೆ...ಪ್ರತಿ ಬಾರಿ ಹೋದಾಗಲೂ ಅವು ತಮ್ಮ ಬೇರೆ ಬೇರೆ ಕಥೆಗಳನ್ನು ಹೇಳಿದಂತೆ ಭಾಸವಾಗುತ್ತದೆ...ವಿಜಯನಗರ ಸಾಮ್ರಾಜ್ಯದ ಸಿಹಿ - ಕಹಿ ಅನುಭವಗಳ ಗೊಂಚಲನ್ನು ನಮ್ಮ ಮುಂದೆ ಬಿಚ್ಚಿಡುತ್ತಿರುವಂತೆ ಭಾಸವಾಗುತ್ತದೆ...ಕೆಲಬಾರಿ ಕಲ್ಲುಗಳ ಯಶೋಗಾಥೆ ಅದ್ಭುತ ಎನಿಸಿದರೆ ಮತ್ತೆ ಕೆಲವೊಮ್ಮೆ ಅವುಗಳ ಬಗ್ಗೆ ಮರುಕ ಹುಟ್ಟಿಸುತ್ತದೆ...


ಪುರಂಧರ ಮಂಟಪ ನನಗೆ ಬಹಳ ಇಷ್ಟವಾದ ಸ್ಥಳ...ಯಾರ ಹಂಗು ಇಲ್ಲದೆ..ಪ್ರಶಾಂತವಾಗಿ ಹರಿಯುತ್ತಿರುವ ತುಂಗಭದ್ರೆ..ಅದರ ದಡದಲ್ಲಿ ಅತ್ಯದ್ಭುತವಾಗಿ ನಿರ್ಮಿಸಲ್ಪಟ್ಟಿರುವ ಪುರಂಧರ ಮಂಟಪ ರಣ ರಣ ಬಿಸಿಲಿನ ಬೇಗೆಯ ಮಧ್ಯೆಯೂ ಸಹ ತಂಪಾದ ಸ್ಥಳವೆಂದರೆ ಹಂಪಿಯಲ್ಲಿ ಬಹುಶಃ ಇದೊಂದೆ ಇರಬೇಕು...ಗಂಟೆಗಟ್ಟಲೆ ಅಲ್ಲಿ ಕುಳಿತರು ನೀರಿನ ಜುಳು-ಜುಳು ನಾದವನ್ನು ಹೊರತು ಪಡಿಸಿದರೆ ನಿಮಗೆ ಅಲ್ಲಿ ಬೇರೇನೂ ಕೇಳ ಸಿಗದು...ಅಲ್ಲೊಂದು ಇಲ್ಲೊಂದು ಪಕ್ಷಿಗಳ ಕಲರವ..ವಿದೇಶಿಯರ ಸರಸ ಸಲ್ಲಾಪ ಇವುಗಳ ಮಧ್ಯೆ ಇಡೀ ಜಗತ್ತನ್ನು ಮರೆತು ಹಾಯಾಗಿ ಇಲ್ಲಿ ಇದ್ದು ಬಿಡಬಹುದು...ಆದರೆ ನೀವು ನಿಸರ್ಗದ ಭಾವನೆಗಳಿಗೆ ಕಿವಿಗೊಡಬೇಕು...


೧೯೯೫ ರ ದಿನಗಳವು....ಪ್ರತಿ ವರ್ಷ ನಡೆಯುವ ಹಂಪಿ ಉತ್ಸವದಂತೆ ಆ ವರ್ಷ ಕೂಡ ಆ ಹಂಪಿ ಉತ್ಸವದಲ್ಲಿ ಭಾಗವಹಿಸಲು ಧಾರವಾಡದ ತಂಡದೊಂದಿಗೆ ಜೀವದ ಗೆಳೆಯ ಮಧು ದೇಸಾಯಿಯೊಂದಿಗೆ ಅಲ್ಲಿಗೆ ತೆರಳಿದ್ದೆ...ಕೃಷ್ಣಪಾರಿಜಾತ ನಾಟಕಕ್ಕೆ ಬೆಳಕು ವಿನ್ಯಾಸ ಮಾಡುವ ಜವಾಬ್ದಾರಿ ನನ್ನ ಹೆಗಲ ಮೇಲೆ ಹಾಕಿದ್ದ ಗೆಳೆಯ ಬಸವಲಿಂಗಯ್ಯ ಹಿರೇಮಠ...ಆ ನಾಟಕದ ವಿಡಿಯೋ ಚಿತ್ರೀಕರಣದ ಜವಾಬ್ದಾರಿ ಮಧು ವಹಿಸಿಕೊಂಡಿದ್ದ...ಆಗ ನಾನಿನ್ನು ಜಿಂದಾಲ್ ಕಂಪನಿಯನ್ನು ಸೇರಿಕೊಂಡಿರಲಿಲ್ಲ....ನನ್ನ ಆರ್ಥಿಕ ಪರಿಸ್ಥಿತಿಯು ಸಹ ಅಷ್ಟು ಸರಿಯಾಗಿರಲಿಲ್ಲ...ನನ್ನ ಎಲ್ಲ ಕರ್ಚು ವೆಚ್ಚಗಳನ್ನು ಯಥಾವತ್ತಾಗಿ ಮಧು ನಿರ್ವಹಿಸಿದ್ದ...


ನಾಟಕ ಶುರುವಾಗಲು ಇನ್ನು ೫ ಗಂಟೆ ಬಾಕಿ ಇತ್ತು..ಸಂಜೆಯ ೪ ಗಂಟೆಯ ಸಮಯ.....ಬಿಸಿಲಿನ ಧಗೆ ಇನ್ನು ಹಾಗೆ ಇತ್ತು...ನಾನು ಮಧು ಇಬ್ಬರು ಸೇರಿಕೊಂಡು ಹಂಪಿಯ ವಿರುಪಾಕ್ಷ ದೇವಸ್ತಾನದ ಹಿಂದಿರುವ ತುಂಗಾ ನದಿ ದಾಟಿ ಎತ್ತರದ ಬೆಟ್ಟದ ಮೇಲಿದ್ದ ರಿಸಾರ್ಟ್ ಒಂದಕ್ಕೆ ಬಂದು ತಲುಪಿದೆವು...ನದಿಯನ್ನು ದಾಟಲು ಬಳಸಿದ ತೆಪ್ಪ...ಅದರಲ್ಲಿ ನಮ್ಮ ಹಾಗು ವಿದೇಶಿಯರ ಮಧ್ಯೆ ನಡೆದ ಹಾಸ್ಯ ಚಟಾಕಿಗಳು..ಎಲ್ಲ ಆ ಕ್ಷಣಕ್ಕೆ ಬಹಳ ಖುಶಿಕೊಡುವ ಸಂಗತಿಗಳಾಗಿದ್ದವು... ಆಗ ನನ್ನ ಇಂಗ್ಲೀಷ್ ಸಹ ತುಂಬ ದುಬಾರಿ...ಮಧುನ ಇಂಗ್ಲೀಷ್ ಅದ್ಭುತ ವಾಗಿತ್ತು...ನಾನು ಮಾತನಾಡುವುದನ್ನು ಕೇಳಿ ಅವನು ತನ್ನಲ್ಲಿಯೇ ಮುಸಿ-ಮುಸಿ ನಗುತ್ತ ಆನಂದಿಸುತ್ತಿದ್ದ...


ರಿಸಾರ್ಟ್ ತಲುಪಿ ಇಬ್ಬರು ಒಂದೊಂದು ಬೀಯರ್ ತರಿಸಿಕೊಂಡು ಅಲ್ಲಿನ ಪ್ರಕೃತಿಯ ಸೊಬಗನ್ನು ಆನಂದಿಸುತಿದ್ದಂತೆಯೇ ನಮ್ಮ ಮಾತು ನಮ್ಮ ಮುಂದಿನ ನಾಟಕದ ತಯಾರಿಯ ಕಡೆಗೆ ಹೊರಳಿತು..ಆಗ ತಾನೆ ನಾನು ಬಾದಲ್ ಸರ್ಕಾರ್ ರಚಿಸಿದ "ಸ್ಪಾರ್ಟಕಸ" ನಾಟಕವನ್ನು ಯಶಸ್ವಿಯಾಗಿ ನಿರ್ದೇಶಿಸಿ ಅದರ ಮುಂದಿನ ಮರುಪ್ರದರ್ಷನಗಳಿಗೆ ಅಣಿಯಾಗುತ್ತಿದ್ದೆ..."ಧನ್ಯಾ ನೀ ಯಾಕ ಆ ನಾಟಕಾನ್ನ ಈ ಲೋಟಸ್ ಮಹಲ್ನ್ಯಾಗ ಮಡಸ್ಬಾರ್ದು...ಈ ನಾಟಕಕ್ಕ ಅದು ಹೇಳಿ ಮಾಡಿಸಿದ ಜಾಗ..ಮತ್ತ ನಿನ್ನ ಪರಿಶ್ರಮಕ್ಕ ಒಂದು ಚೊಲೋ ಹೆಸರು ಬರ್ತದ" ಎಂದ...ಅಂದಿನಿಂದ ಇಂದಿನವರೆಗೆ ಅದು ಕೇವಲ ಕನಸಾಗಿ ಮಾತ್ರ ಉಳಿದಿದೆ...


ಕನಸು ಕಾಣುವುದರಲ್ಲಿ ನಾನು ಮತ್ತು ಮಧು ನಿಸ್ಸೀಮರು...ಅದಕ್ಕೇನು ಟ್ಯಾಕ್ಸ್ ಕೊಡಬೇಕಾಗಿಲ್ಲಲೇ ಧನ್ಯಾ ಎನ್ನುತ್ತಿದ್ದ...ನಾನು ಹೌದು ಎನ್ನುತ್ತಾ ಮತ್ತೆ ಮುಂದಿನ ಕನಸು ಕಾಣುವುದರಲ್ಲಿ ಮಗ್ನನಾಗುತ್ತಿದ್ದೆ...


ಮುಂದೆ ನಾನು ೨೦೦೦ ನೆ ಇಸವಿಯಲ್ಲಿ ಬೆಂಗಳೂರಿಗೆ ಕಾಯಂ ಆಗಿ ಬಂದು ನೆಲೆಸಿದೆ ಆದರೆ ನನ್ನ ಮತ್ತು ಮಧುನ ಗೆಳೆತನ ಅಷ್ಟೆ ಗಟ್ಟಿಯಾಗುತ್ತ ಸಾಗಿತು...೨೦೦೪ ರಲ್ಲಿ ನಾನು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದಾಗ ಮೊದಲು ವಿಷಯ ತಿಳಿಸಿದ್ದು ಮಧುಗೆ...ಅವನು ಪಟ್ಟ ಆನಂದಕ್ಕೆ ಪಾರವೇ ಇರಲಿಲ್ಲ....ನನ್ನ ಹೊಸಮನೆಯ ಗೃಹ ಪ್ರವೇಶಕ್ಕೆ ತಪ್ಪದೆ ಬಂದ....ನನ್ನ ಅವನು ಇಬ್ಬರು ಸೇರಿ ಹಂಪಿಯಲ್ಲಿ ಕಳೆದ ದಿನಗಳ ನೆನಪನ್ನೇ ತನ್ನ ಕಲೆಯ ಮೂಲಕ ನನಗೆ ಕಾಣಿಕೆಯಾಗಿ ನೀಡಿದ...ಅದು ನನ್ನ ಮನೆಗೆ ಬರುವ ಪ್ರತಿಯೊಬ್ಬರಿಗೂ ಸ್ವಾಗತ ಕೋರುವ ರೀತಿಯಲ್ಲಿ ಮೊದಲು ಕಾಣುವ ಕಲಾಕೃತಿ....

ಫೋಟೋ ಎಂಬ ಮಾಯದ ಜಿಂಕೆಯ ಬೆನ್ನೇರಿ...


ಮಾರ್ಗರೆಟ್ ಆಳ್ವಾ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮಾಧ್ಯಮ ಸಲಹೆಗಾರನಾಗಿ ಕೆಲಸ ಮಾಡಿದ ವಿಷಯ ಬಹುತೇಕ ಸ್ನೇಹಿತರಿಗೆ ತಿಳಿದ ವಿಷಯ...
ಗೋಕರ್ಣದ ಬಳಿಯ ಒಂದು ತಾಲೂಕು ಪಂಚಾಯತ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆಂದು ತೆರಳಿದಾಗ ಎಂದಿನಂತೆ ಜನಸಮೂಹ ಅಲ್ಲಿ ನೆರೆದಿತ್ತು.ಕೆಲವರು ಹಾರ ತುರಾಯಿಗಳನ್ನು ತಂದು ಮ್ಯಾಗಿ ಮೇಡಂ ಅವರನ್ನು ಸ್ವಾಗತಿಸಲು ಮುಂದಾದರೆ....ಇನ್ನು ಕೆಲವರು ಅವರ ಪರವಾಗಿ...ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗುವುದರಲ್ಲಿ ನಿರತರಾಗಿದ್ದರು...ಸಿಡಿಮದ್ದುಗಳು ಸಿಡಿಯುತ್ತಿದ್ದವು...ಕಾರ್ಯಕರ್ತರಲ್ಲಿ ಹುಮ್ಮಸ್ಸು ನೂರ್ಮಡಿಯಾಗಿತ್ತು...
ಮ್ಯಾಗಿ ಮೇಡಂ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ...ಎಲ್ಲಿಂದಲೋ ಒಂದು ಕೀರಲು ಧ್ವನಿ ಕೇಳಿ ಬಂತು.ನಾನು ನನ್ನ ಕ್ಯಾಮರಾ ಹೊತ್ತು ಧ್ವನಿ ಬಂದ ಕಡೆ ತಿರುಗಿ ನೋಡಿದಾಗ..ಒಬ್ಬ ಭ್ಕ್ಶುಕನಂತೆ ಕಾಣುವ ವ್ಯಕ್ತಿ ತನ್ನ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಿಡಿದು ಜೈ ಕಾರ ಹಾಕುತ್ತಿದರೆ..ಅಲ್ಲಿ ನೆರೆದ ಯುವಕರ ಗುಂಪು ಆತನನ್ನು ಕಂಡು ಮಜಾ ಉಡಾಯಿಸುತ್ತಿದ್ದರು......ಕುತೂಹಲದಿಂದ ನಾನು ನನ್ನ ಕ್ಯಾಮರಾ ತೆಗೆದುಕೊಂಡು ಆ ವ್ಯಕ್ತಿಯ ಹತ್ತಿರ ಹೋಗುತ್ತಿದ್ದಂತೆಯೇ, ಆತ ನನ್ನನ್ನು ಕಂಡು ಇನ್ನೂ ಹೆಚ್ಚು ಹುರುಪಿನಿಂದ ಘೋಷಣೆಗಳನ್ನು ಕೂಗತೊಡಗಿದ ಮತ್ತು ನನ್ನನ್ನು ಕಂಡು "ಏಯ್ ಹಿಡಿಯೋ ನನ್ನ ಪೋಟೋ ಹಿಡಿ....ಪೆಪರ್ನ್ಯಾಗಾರ ಬರಲಿ" ಎನ್ನುತ್ತಿದ್ದ...ಒಂದು..ಎರಡು..ಮೂರೂ..ಹೀಗೆ ಸುಮಾರು ಹದಿನೈದು ಕ್ಲಿಕ್ಕಿಸಿದರು ಆತನಿಗೆ ಸಮಾಧಾನವಿಲ್ಲ...ಮತ್ತೆ ಮತ್ತೆ ತೆಗೆಯುವಂತೆ ನನ್ನ ದುಂಬಾಲು ಬಿದ್ದ...
ಈಗ ಹೇಳಿ ಪೋಟೋ ಹುಚ್ಚು ರಾಜಕಾರಣಿಗಳಿಗೆ ಹೆಚ್ಚೋ ಅಥವಾ ಈ ರೀತಿಯ ಅಮಾಯಕರಿಗೋ?

ಕಾಂಕ್ರೀಟ್ ಕಾಡಿನಲ್ಲಿ ಗುಬ್ಬಚ್ಚಿಯ ಕಲರವ...


ನನ್ನ ವಿದ್ಯಾಭ್ಯಾಸವೆಲ್ಲ ಧಾರವಾಡದಲ್ಲಿ ಆದರೂ, ನನ್ನ ಬಹುತೇಕ ರಜಾದಿನಗಳನ್ನು ನಾನು ಕಳೆದಿದ್ದು ನನ್ನ ತಾಯಿಯ ತವರು ಮನೆಯಾದ ಬೆಂಗಳೂರಿನಲ್ಲಿ...ಚಾಮರಾಜಪೇಟೆಯ ಮೂರನೆಯ ಮುಖ್ಯ ರಸ್ತೆಯಲ್ಲಿ ನನ್ನ ತಾತನ ಮನೆ...ಮನೆಯ ಹಿಂಭಾಗದಲ್ಲಿ ಮೂರು ತಿರುವುಗಳನ್ನು ದಾಟಿದರೆ ಒಂದು ಪುಟ್ಟ ಆಟದ ಮೈದಾನ ಅಲ್ಲಿಯೇ ಒಂದು ಪುಟ್ಟ ಮಸೀದಿ...ನಾನು ಗಾಳಿ ಪಟಗಳನ್ನು ಹಾರಿಸಿದ್ದು...ಸೈಕಲ್ ಓಡಿಸಲು ಕಲಿತಿದ್ದು...ಲಗೋರಿ ಆಡಿದ್ದು...ನನಗಿಂತಲು ದೊಡ್ಡವರು ಕ್ರಿಕೆಟ್ ಆಡುತ್ತಿದ್ದಾರೆ.. ಅವರು ಹೊಡೆದ ಚಂಡುಗಳನ್ನು ಹಿಡಿದು ತಂದು ಅವರಿಗೆ ಕೊಡುವುದು...ಹೀಗೆ ನನ್ನ ಬಾಲ್ಯದ ಅನೇಕ ಅವಿಸ್ಮರಣೀಯ ಕ್ಷಣಗಳು ಬೆಂಗಳೂರಿನ ಈ ಮೈದಾನದಲ್ಲಿಯೇ ಕಳೆದಿವೆ..
ಈ ಮೈದಾನದ ಒಂದು ತುದಿಗೆ ಒಂದು ಪುಟ್ಟ ಕಿರಾಣಿ ಅಂಗಡಿಯಿತ್ತು...ಅಂಗಡಿಯ ಮಾಲೀಕ ದಿನವು ತನ್ನ ಅಂಗಡಿಯ ಮುಂದೆ ಕಾಳು-ಕಡಿಗಳನ್ನು ಹಾಕಿದರೆ ಅವುಗಳನ್ನು ತಿನ್ನಲು ಗುಬ್ಬಚ್ಚಿಯ ಗುಂಪು ಬಂದು ಸೇರುತ್ತಿತ್ತು..ಅದನ್ನು ನೋಡುವುದೇ ನಮಗೆ ಒಂದು ಸಡಗರ...ಅವುಗಳ ಚಿಲಿಪಿಲಿ ನಾದ ಅಪ್ಸರೆಯ ಕಾಲಿಗೆ ಕಟ್ಟಿದ ನೂಪುರದಂತೆ ನಮಗೆ ಭಾಸವಾಗುತ್ತಿತ್ತು...ಬಹಳ ಖುಶಿ ಪಡುತ್ತಿದ್ದೆವಾಗ...
ನಂತರದ ದಿನಗಳಲ್ಲಿ ನಾನು ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ನನ್ನ ಮನೆಯ ನನ್ನ ರೂಮಿನಲ್ಲಿ ಒಂದು ಗುಬ್ಬಚ್ಚಿ ಮೊಟ್ಟೆ ಇತ್ತು ಅದನ್ನು ಪೋಷಿಸುತ್ತಿತ್ತು..ಅದನ್ನು ನೋಡುವುದೇ ಒಂದು ಸಡಗರ...ನಂತರ ಮೊತ್ತೆಯಿಮ್ದ ಮರಿಹೊರಗೆ ಬಂದಾಗ ಅದು ಆಯಾ ತಪ್ಪಿ ತನ್ನ ಗುಡಿನಿಂದ ಕೆಳಗೆ ಬಿತ್ತು... ಅದನ್ನು ಅಷ್ಟೆ ಜತನದಿಂದ ಮತ್ತೆ ಗೂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೆ...
ಮುಂದೆ ನಾನು ನೌಕರಿ ಮಾಡಲು ಬೇರೆ ಬೇರೆ ಊರುಗಳನ್ನು ತಿರುಗಾಡುತ್ತ ಹೊರಟಾಗ ಎಲ್ಲಿಯೇ ಆಗಲೀ ಗುಬ್ಬಚ್ಚಿಗಳನ್ನು ಕಂಡರೆ ಅದೇನೋ ಅವುಗಳ ಮೇಲೆ ಮಮತೆ...ಪ್ರೀತಿ. ಈಗ ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನಾನು ನನ್ನ ಸಂಸಾರ ಸಮೇತನಾಗಿ ನೆಲಸಿದಾಗ ಒಂದುಸಲ ಆ ಚಾಮರಾಜ ಪೇಟೆಯ ಮೈದಾನಕ್ಕೆ ಹೋದೆ...ಮೈದಾನ ಪೂರ್ತಿಯಾಗಿ ಬದಲಾಗಿ ಹೋಗಿತ್ತು..ಅಲ್ಲಿ ಇದ್ದ ಮಸೀದಿ ಮಾತ್ರ ಹಾಗೆಯೇ ಇತ್ತು...ಆಟವಾಡಲು ಅಲ್ಲಿ ಯಾವ ಮಕ್ಕಳು ಇರಲಿಲ್ಲ...ಗುಬ್ಬಚ್ಚಿಗಳಿಗೆ ಕಾಳುಹಾಕುವ ಅಂಗಡಿ ಮತ್ತು ಅದರ ಮಾಲೀಕ ಇಬ್ಬರು ನಾಪತ್ತೆಯಾಗಿದ್ದರು...ಹೀಗಾಗಿ ಅಲ್ಲಿ ಗುಬಚ್ಚಿಯ ಕಲರವವು ಇರಲಿಲ್ಲ...ಅಪ್ಸರೆಯ ಕಾಲಿನ ನುಪುರದ ಸದ್ದು ಕೂಡ ಮಾಯವಾಗಿತ್ತು...ಮನಸ್ಸಿಗೆ ಬಹಳ ಬೇಜಾರಾಯ್ತು..ಕಾಂಕ್ರೀಟ್ ನಗರದಲ್ಲಿ ಮಾನವ ತನ್ನ ಸಹಜತೆಯನ್ನು ಹರಾಜಿಗಿಟ್ಟಿದ್ದು ಸಾಬೀತಾಗಿತ್ತು....
ನಿನ್ನೆಯತನಕ ಅಂದರೆ ಮೇ ೨೨ ರ ತನಕ ಬೆಂಗಳೂರಿನಲ್ಲಿ ನಾನು ಗುಬ್ಬಚ್ಚಿಯನ್ನು ನೋಡಿರಲಿಲ್ಲ..ನನ್ನ ಎಲ್ಲ ಗೆಳೆಯರನ್ನು ಕೆಳುತಿದ್ದೆ..ಬೆಂಗಳೂರಿನಲ್ಲಿ ಗುಬ್ಬಚ್ಚಿಗಳೆಲ್ಲಿವೆ ಎಂದು.... ಎಲ್ಲೂ ಕಾಣ ಸಿಗಲಿಲ್ಲ... ಮಮ್ಗಳುರಿಗೆ ಹೊರಡಲು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು, ನನ್ನ ವಿಮಾನದ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ...ಅದೇ ಅಪ್ಸರೆಯ ನೂಪುರದ ಸದ್ದು ಕಿವಿಗೆ ಬಿದ್ದಂತಾಗಿ ತಲೆ ಎತ್ತಿ ನೋಡಿದಾಗ..ಎದುರುಗಿನ ಪುಟ್ಟ ಗಿಡದ ಮೇಲೆ ಎರಡು ಗುಬ್ಬಚ್ಚಿಗಳು ಚುಂಯ್ ಗುಡುತ್ತಿದ್ದವು... ಆಹಾರಕ್ಕಾಗಿ ಅತ್ತಿಂದಿತ್ತ ಹಾರಾಡುತ್ತಿದ್ದವು...ಪರಸ್ಪರ ಪ್ರೀತಿ ಮಾಡುತ್ತಿದ್ದವು...ಸುಮಾರು ಹೊತ್ತು ಅವುಗಳ ಕಲರವ ನೋಡುತ್ತಾ ನನ್ನನ್ನು ನಾನೆ ಮರೆತಿದ್ದೆ...ತಕ್ಷಣ ಮೈಕ್ನಲ್ಲಿ ಒಂದು ಹೆಣ್ಣು ಧ್ವನಿ ಕೇಳಿಬರುತ್ತಿತ್ತು..."ಮಂಗಳೂರಿಗೆ ಹೊರಡುವ ಪ್ರಯಾಣಿಕರು ತಮ್ಮ ವಿಮಾನದತ್ತ ಸಾಗಬೇಕು" ಎಂಬ ಆಕಾಶವಾಣಿ....ನಾನು ನಿಧಾನವಾಗಿ ಗುಬ್ಬಚ್ಚಿಗಳ ಕಲರವ ಕೇಳುತ್ತಾ...ನನ್ನ ವಿಮಾನದತ್ತ ಹೆಜ್ಜೆಹಾಕಿದೆ....ನಮ್ಮ ಜೀವನ ಎಷ್ಟು ಯಾಂತ್ರೀಕೃತ ಗೊಂಡಿದೆ ಅಲ್ಲವೇ?

Saturday, May 9, 2009

" ಇಲ್ಗ್ಯಾಕೋ ಬಂದೆ ಬೋ.... ಮಗನೇ " ಅಂದವಳ ಕಥೆ....

ಅವು ೧೯೮೯ ರ ದಿನಗಳು...ಇಡೀ ರಾಜ್ಯದಲ್ಲಿ ಸಾಕ್ಷರತೆ ಎನ್ನುವುದು ವಿಚಿತ್ರ ಸಾಂಕ್ರಾಮಿಕ ರೋಗದಂತೆ ಹಬ್ಬಿತ್ತು...ನನಗೆ ಮೊದಲೇ ನಾಟಕ, ಸಂಗೀತದ ಹುಚ್ಚು...ಮನೆಯಲ್ಲಿ ಅದಕ್ಕೆ ಎಲ್ಲರಿಂದಲೂ ವಿರೋಧ... ಅಷ್ಟರಲ್ಲಿಯೇ ಭಾರತ ಜ್ಞಾನ ವಿಜ್ಞಾನ ಸಮೀತಿಯವರು ರಾಜ್ಯಮಟ್ಟದ ಬೀದಿನಾಟಕದ ಕಾರ್ಯಾಗಾರವನ್ನು ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ಆಯೋಜಿಸಿದ್ದರು. ನಾಡಿನ ಹೆಸರಾಂತ ರಂಗ ತಜ್ಞರು ಪ್ರಸ್ತುತ ಶಿಬಿರದಲ್ಲಿ ತರಬೇತಿ ನೀಡುವವರಿದ್ದರು....ಇದರಲಿ ಭಾಗವಹಿಸಲು ಯಾರಿಗೂ ಕೇಳದೆ ಓಡಿ ಹೋಗಿದ್ದೆ.

ಸಿ. ಬಸವಲಿಂಗಯ್ಯ, ಜನ್ನಿ, ರಘುನಂದನ್ ಮುಂತಾದವರು ನೀಡುವ ತರಬೇತಿಯನ್ನು ತಪ್ಪಿಸಿಕೊಳ್ಳಲು ನಾನು ಸಿದ್ಧನಿರಲಿಲ್ಲ....ತಕ್ಷಣ ಮನೆಯಲ್ಲಿ ಯಾರಿಗೂ ಹೇಳದೆ ಅಲ್ಲಿಗೆ ಓಡಿಹೋದೆ...ನಿಜಕ್ಕೂ ಅದೊಂದು ಅದ್ಭುತ ಅನುಭವ....ನಾಡಿನ ಸುಮಾರು ೫೦ ಜನ ರಂಗಕರ್ಮಿಗಳು ಆ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು...ಎಲ್ಲರೂ ಒಬ್ಬರಿಗಿಂತ ಒಬ್ಬರು ದೈತ್ಯರು...ಆ ಹದಿನೈದು ದಿನಗಳು ಹೇಗೆ ಕಳೆದು ಹೋದವು ಎಂದು ಗೊತ್ತಾಗಲೇ ಇಲ್ಲ...ನಂತರ ತರಬೇತಿ ಪಡೆದ ನಾವು ಕರ್ಣಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ, ಅಲ್ಲಿ ಬೀದಿನಾಟಕ, ಹಾಡು ಮುಂತಾದವುಗಳ ಮೂಲಕ ಅನಕ್ಷರಸ್ಥರಿಗೆ ಅಕ್ಷರದ ಮಹತ್ವ ತಿಳಿಸುವುದು, ನಂತರ ಅಲ್ಲಿ ನೆರೆದ ಜನರೊಂದಿಗೆ ಸಂವಾದ ನಡೆಸಿ ಅವರು ಅಕ್ಷರ ಕಲಿಯಲು ಮನವೊಲಿಸುವುದು...ಇದು ನಮ್ಮ ಕೆಲಸವಾಗಿತ್ತು...

ಅದು ಶಿವಮೊಗ್ಗ ಜಿಲ್ಲೆಯ ಒಂದು ಹಳ್ಳಿ...ಸಂಜೆಯ ಸೂರ್ಯ ಆಗತಾನೆ ನೆಸರದ ಅಂಚಿನಲ್ಲಿ ಮಾಯವಾಗುವ ಸನ್ನಾಹದಲಿದ್ದ...ನಮ್ಮ ತಂಡ ಆ ಹಳ್ಳಿಯಲ್ಲಿ ಬಂದು ಇಳಿಯಿತು. ನಮ್ಮ ತಮಟೆಯ ಸದ್ದು...ಹಾಡುಗಳನ್ನು ಕೇಳುತ್ತಿದ್ದಂತೆಯೇ ಚಿಕ್ಕ ಚಿಕ್ಕ ಮಕ್ಕಳ ಗುಂಪು ನಮ್ಮ ಹಿಂದೆ ಕುತೂಹಲದಿಂದ ಬೆನ್ನಟ್ಟಿ ಬರುತ್ತಿದ್ದರು... ಅದು ಒಂದು ರೀತಿಯ ಸಂಭ್ರಮದ ವಾತಾವರಣ... ನಂತರ ಅರ್ಧಗಂಟೆಯಲ್ಲಿ ನಮ್ಮ ತಂಡ ಊರಿನ ಮಾರುಕಟ್ಟೆ ಪ್ರದೇಶದಲ್ಲಿ ಬಂದು ಸೇರುವ ಹೊತ್ತಿಗೆ ಅರ್ಧ ಊರೇ ಅಲ್ಲಿ ಜಮೆಯಾಗಿತ್ತು...ಕ್ರಮೇಣ ನಮ್ಮ ತಂಡದ ಮುಖ್ಯಸ್ಥ ಪ್ರಾಸ್ತಾವಿಕವಾಗಿ ಮಾತನಾಡಿದರು...ನಮ್ಮ ನಾಟಕ ಆರಂಭವಾಯಿತು...ಅದಕ್ಕೆ ದೊರೆತ ಪ್ರತಿಕ್ರಿಯೆ ಅದ್ಭುತವಾಗಿತ್ತು...ನಾಟಕ ಮುಗಿದ ನಂತರ ನಮ್ಮ ತಂಡದ ಪ್ರತಿಯೊಬ್ಬರೂ ಜನರೊಂದಿಗೆ ಸಂವಾದಕ್ಕಿಳಿದರು..ನಾನು ಸಹ ಕೆಲವರೊಂದಿಗೆ ಮಾತನಾಡುತ್ತ ಅವರ ಅಭಿಪ್ರಾಯವನ್ನು ಪಡೆಯುತ್ತಿದ್ದಂತೆಯೇ ಹತ್ತಿರದಲ್ಲಿಯೇ ಇದ್ದ ಒಂದು ಪುಟ್ಟ ಗುಡಿಸಲಿನತ್ತ ನನ್ನ ದೃಷ್ಥಿ ಬಿಟ್ಟು....

ಅ ಹೆಂಗಸಿನ ವಯಸ್ಸು ೨೦-೨೨ ರ ಆಸು ಪಾಸಿನಲ್ಲಿರಬೇಕು... ಮೊದಲ ನೋಟಕ್ಕೆ ಯಾರನ್ನಾದರು ಮರುಳು ಮಾಡುವಂತಹ ರೂಪವತಿ ಅವಳು... ನಿಧಾನವಾಗಿ ಅವಳ ಹತ್ತಿರ ಹೋಗಿ ಅವಳ ಹೆಸರನ್ನು ಕೇಳುವ ಪ್ರಯತ್ನದಲ್ಲಿರುವಾಗಲೇ "ಇಲ್ಲ್ಯಾಕೋ ಬಂದೆ ಬೋಳಿ ಮಗನೆ"...ಥಟ್ಟನೆ ಅವಳ ಬಾಯಿಂದ ಉದುರಿದ ಮಾತಿದು...ಇದರಿಂದ ಸುಧಾರಿಸಿಕೊಳ್ಳುವ ಮೊದಲೇ "ಮೊದಲು ಇಲ್ಲಿಂದ ಹೊರಟು ಹೋಗು ಸೂ....ಮಗನೆ" ಮತ್ತೊಂದು ಬಾಂಬ್ ಸಿಡಿಯಿತು. ಸಾವರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ತಕ್ಷಣ ಅಲ್ಲಿಂದ ಕಾಲ್ಕಿತ್ತೆ...ನನ್ನ ತಂಡದ ಮುಖ್ಯಸ್ಥರಿಗೆ ಈ ವಿಷಯ ತಿಳಿಸಿ ಅವರನ್ನು ನನ್ನ ಜೊತೆಗೆ ಕರದುಕೊಂಡು ಬಂದೆ....ಮೊದಲ ಮಾತಿಗೆ ನನ್ನ ತಂಡದ ನಾಯಕರಿಗೂ ಅವಳಿಂದ ಮುತ್ತುಗಳ ಸುರಿಮಳೆ....

ನಿಧಾನವಾಗಿ ಅವಳನ್ನು ನಾವಿಬ್ಬರೂ ಮಾತಿಗೆ ಎಳೆದು ವಸ್ತು ಸ್ಥಿತಿಯನ್ನು ತಿಳಿದುಕೊಳ್ಳುವ ಹೊತ್ತಿಗೆ ಸುಮಾರು ಸಮಯವನ್ನು ಅಲ್ಲಿಯೇ ಕಳೆದಿದ್ದೆವು...ಅವಳ ಗಂಡ ಕುಡುಕ...... ಕುಡಿದು ಬಂದು ಮನೆಯಲ್ಲಿ ಗಲಾಟೆ...ಊರಿನವರಿಂದ ವಿಚಿತ್ರ ಮಾತುಗಳು....ಈ ಹೆಣ್ಣುಮಗಳಿಗೆ ಓದಲು ಬರದು....ಅದಕ್ಕೂ ಜನರ ಹಿಂಸೆ ನೀಡುವ ಮಾತುಗಳು... ಈ ಹೆಣ್ಣು ಮಗಳು ಇಂತಹ ಚುಚ್ಚು ಮಾತುಗಳಿಂದ ದಿಕ್ಕು ಕಾಣದೆ ೨-೩ ಬಾರಿ ಆತ್ಮ ಹತ್ಯೆಗೂ ಪ್ರಯತ್ನ ಮಾಡಿದ್ದಾಳೆ...ಇವೆಲ್ಲವುದರ ಮಧ್ಯೆ ಅವಳು ಅಕ್ಷರ ಕಲಿತಿಲ್ಲ ಎಂದು ಹಿಯಾಳಿಸಲು ನಾವು ಬೇರೆ ಅಲ್ಲಿಗೆ ಬಂದಿದ್ದೇವೆ....ಇದು ಅವಳ ವಾದ ಮತ್ತು ಅದಕ್ಕೆಂದೇ ಅವಳು ನಮ್ಮನ್ನು ಆ ರೀತಿ ಬೈದು ಅಲ್ಲಿಂದ ಹೊರಡು ಎಂದು ಹೇಳಿದ್ದು....

ಅವಳಿಗೆ ಅಕ್ಷರ ಕಲಿಯುವುದರಿಂದ ಆಗುವ ಪ್ರಯೋಜನ, ಸಮಾಜವನ್ನು ಎದುರಿಸಲು ಅಕ್ಷರ ಹೇಗೆ ಪ್ರಬಲ ಮಾಧ್ಯಮವಾಗಬಲ್ಲದು....ಎಂದೆಲ್ಲಾ ತಿಳಿಸಿ ಹೇಳಿದ ನಂತರ ನಮ್ಮ ಮಾತಿಗೆ ಸಮ್ಮತಿ ಸೂಚಿಸಿದ ಅವಳಿಗೆ ನಮ್ಮ ವಿಳಾಸ ನೀಡಿ ಅಲ್ಲಿಂದ ಹೊರಟು ಬಂದಿದ್ದೆವು....

ಸುಮಾರು ಎರಡು ವರ್ಷಗಳ ನಂತರ...ಬಹುತೇಕ ನಾನು ಈ ಘಟನೆಯನ್ನು ಮರೆತೆ ಬಿಟ್ಟಿದ್ದೆ...ಅಷ್ಟರಲ್ಲಿ ಒಂದು ಪತ್ರ ಬಂದಿತ್ತು ..."ನಾನೀಗ ಅಕ್ಷರ ಕಲಿತಿದ್ದೇನೆ...ನಿಮ್ಮ ಉಪಕಾರಕ್ಕೆ ಧನ್ಯವಾದಗಳು" ಇದು ಪತ್ರದ ಒಕ್ಕಣಿಕೆ....

ಮುಖದ ಮೇಲೆ ಒಂದು ಸಣ್ಣ ಮುಗುಳ್ನಗೆ...ಏನೋ ಒಂದು ಧನ್ಯತಾ ಭಾವ ಸುಳಿದು ಹೋಗಿತ್ತು....
Thursday, May 7, 2009

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...ನನ್ನನ್ನು ಬಹುವಾಗಿ ಕಾಡಿದ ಸಾಲುಗಳಿವು....ಬಹುಶಃ ನಾನು ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿರದೆ ಹೋಗಿದ್ದರೆ, ಸಾಹಿತ್ಯ, ಸಂಗೀತ, ನಾಟಕದ ಗೀಳು ನನ್ನನ್ನು ಆವರಿಸಿಕೊಳ್ಳದೆ, ನಾನು ಕೂಡ ಹತ್ತರಲ್ಲಿ ಹನ್ನೊಂದನೆಯವನಾಗಿ ಹೊಟ್ಟೆ ಪಾಡಿಗಾಗಿ ಯಾವುದಾದರೊಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕರ್ಮಕ್ಕೆ ಶರಣಾಗ ಬೇಕಾಗಿತ್ತು.....

ಧಾರವಾಡದ ಜೆ.ಎಸ.ಎಸ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತರ ನನ್ನ ತಲೆಯಲ್ಲಿದ್ದುದು ಎರಡೇ ವಿಚಾರಗಳು...ಒಂದು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡುವುದು ಅಥವಾ ಪತ್ರಿಕೋದ್ಯಮದಲ್ಲಿ ಮುಂದುವರೆಯುವುದು... ಕೆಲವು ತಾಂತ್ರಿಕ ಕಾರಣಗಳಿಂದ ನನ್ನ ಪ್ರಯಾಣ ದೆಹಲಿಯತ್ತ ತಿರುಗಲಿಲ್ಲ...ಬದಲಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡುವತ್ತ ಹೊರಟಿತು. ಮುಂದೆ ಬಹುಶಃ ನಾನು ಹಿಂದೆ ತಿರುಗಿ ನೋಡಿದ ದಿನಗಳಿಲ್ಲ...ನನ್ನ ಗುರಿ...ನಾನು ಏನು ಮಾಡಬೇಕೆನ್ನುವುದರ ಬಗ್ಗೆ ನನ್ನ ನಿಲುವು ಸ್ಪಷ್ಠವಾಗಿತ್ತು. ಸಂಕಷ್ಥದ ಪರಿಸ್ಥಿತಿಯಲ್ಲಿ ಅಣ್ಣ ಕೈಹಿಡಿದು ಓದಿಸಿದ... ಪುಸ್ತಕ, ಓದು, ಹೊಸ ವಿಚಾರಗಳತ್ತ ನನ್ನನ್ನು ನಾನು ತೆರೆದುಕೊಂಡಿದ್ದು, ನನ್ನ ೧೮ ನೆ ವಯಸ್ಸಿನಲ್ಲಿ ಧಾರವಾಡದ ೯೬೫ ಹಳ್ಳಿಗಳನ್ನು ತಿರುಗಾಡಿ, ಬೀದಿ ನಾಟಕಗಳನ್ನು ಮಾಡಿ, ಹಾಡು ಹೇಳಿ...ಸಾಕ್ಷರತಾ ಅಂದೋಲನದಲ್ಲಿ ಪಾಲ್ಗೊಂಡು ಅನೇಕರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ...

ಎಲ್ಲರ ಬದುಕಿನಲ್ಲಿ ಆಗಿರುವಂತೆ ನನ್ನ ಬದುಕಿನಲ್ಲಿ ಸಹ ಕೆಲವು ಘಟನೆಗಳು ನಡೆದಿವೆ...ಅವು ನಿಮಗೆ ತೀರ ಸಿನಿಮೀಯವಾಗಿ ಕಂಡರೆ ಆಶ್ಚರ್ಯವೇನಿಲ್ಲ...ಆ ಎಲ್ಲ ಘಟನೆಗಳಿಗೆ ನನ್ನೊಂದಿಗೆ ಇದ್ದ ಅನೇಕ ಸಂಗಾತಿಗಳೇ ಸಾಕ್ಷಿ..ಅವುಗಳಲ್ಲಿನ ಕೆಲವು ಸಂಗತಿಗಳನ್ನು ತಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವನ್ನು ಮಾಡುತ್ತಿರುವೆ...ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತ...