Saturday, September 18, 2010

ಎನ್ನ ಕಾಯವ....ಮಾನವತೆಯ ಹಿಮಾಲಯ ಪರ್ವತ ಅಸ್ತಂಗತವಾಗಿದೆ. ೯೭ ವರ್ಷಗಳ ಸಾರ್ಥಕ ಜೀವನಗಳನ್ನು ನಡೆಸಿ, ತಮ್ಮ ಅಂಧತೆಯ ಮೂಲಕ ಕಣ್ಣಿದ್ದವರಿಗೆ ಬಾಳಿನ ದಾರಿದೀಪವಾಗಿ ಬಾಳಿದ ಪುಟ್ಟಜ್ಜಯ್ಯ ತಮ್ಮ ಇಹಲೋಕದ ಎಲ್ಲ ವ್ಯವಹಾರಗಳನ್ನು ಮುಗಿಸಿ ಸಾಗಿಬಾರದ ದಾರಿಗೆ ನಡೆದು ಬಿಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಾಗರವೇ ಅವರ ಮಾನವೀಯತೆಗೆ, ಸರಳತೆಗೆ ಸಾಕ್ಷಿಯಾಯಿತು.

ತಮ್ಮ ಜೀವನದುದ್ದಕ್ಕೂ ಸಂಗೀತದ ವಿವಿಧ ಮಜಲುಗಳಲ್ಲಿ ಅಗಾಧ ಪರಿಶ್ರಮ ಮತ್ತು ಶೃದ್ಧೆಗಳಿಂದ ಮೇರುಶಿಖರಕ್ಕೇರಿದ, ಮತ್ತು ಸಾವಿರಾರು ಜನರಿಗೆ ದಾರಿದೀಪವಾಗಿ, ಮಾರ್ಗದರ್ಶಕರಾಗಿ ಬದುಕಿ ಬಾಳಿದ ಹಿರಿಯ ಚೇತನಕ್ಕೆ ಅವರ ಅಂತಿಮ ಯಾತ್ರೆಗೆ ಲಕ್ಷಾಂತರ ಜನ ತೋರಿದ ಗಾನ ನಮನ ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ.

ಒಂದು ಕಡೆಯಿಂದ ಅವರ ಅಪಾರ ಸಂಖ್ಯೆಯ ಶಿಷ್ಯ ವೃಂದ, ಭಕ್ತರು, ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ಧಾವಿಸಿ ಬರುತ್ತಿದ್ದಂತೆಯೇ, ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಮಂತ್ರಿ ಮಹೋದಯರು ತಮ್ಮ ಕೆಂಪು ಗೂಟದ ಕಾರುಗಳಲ್ಲಿ ಬಂದು ತಮ್ಮ "ಕರ್ತವ್ಯ" ವನ್ನು ಪೂರೈಸುತ್ತಿದ್ದರು. ಕೆಲವೊಂದು ಬಾರಿ ಅದೇಕೋ ಏನೊ ಈ ರಾಜಕೀಯ ಮಂದಿ ತಮ್ಮ ಬುದ್ಧಿಗೆ ಹೆಚ್ಚಿನ ಕೆಲಸವನ್ನು ಕೊಡುವುದೇ ಇಲ್ಲ. ಕೇವಲ ಸ್ವಾರ್ಥಕ್ಕಾಗಿ ಎಲ್ಲವನ್ನು ನೋಡುವ ಮನೋಭಾವ ಹೊಂದಿದವರಂತೆ ಕಂಡುಬಿಡುತ್ತಾರೆ. ಅದನ್ನು ನಮ್ಮ ನಡುವೆ ನಡೆಯುತ್ತಿರುವ ದುರಂತ ಎನ್ನಬೇಕೋ, ಪ್ರಮಾದ ಎನ್ನಬೇಕೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಅಚಾತುರ್ಯ ಎನ್ನಬೇಕೊ ಅರ್ಥವಾಗುತ್ತಿಲ್ಲ.

ನೆನ್ನೆ ಕೂಡ ಪುಟ್ಟಜ್ಜಯ್ಯನವರ ಅಂತ್ಯಕ್ರೀಯೆಯ ಸಂದರ್ಭದಲ್ಲಿ ನಡೆದದ್ದೂ ಅದೇ. ಶುಕ್ರವಾರ ಮಧ್ಯಾಹ್ನ ೧೨.೨೦ ಕ್ಕೆ ಹಿರಿಯ ಚೇತನ ಇಹಲೋಕದೊಂದಿಗೆ ತನ್ನ ಕೊಂಡಿಯನ್ನು ಕಳಚಿಕೊಂಡಿತು. ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಈ ಸುದ್ದಿ ಬಿತ್ತರವಾಗತೊಡಗಿತು. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳದ್ದು, ಗೃಹ ಮಂತ್ರಿಗಳದ್ದು, ರಾಜ್ಯದ ಹಿರಿಯ ಅಧಿಕಾರಿಗಳದ್ದು ಘನ ಮೌನ. ಕಳೆದ ಒಂದು ವಾರದಿಂದ ಅವರ ಆರೋಗ್ಯ ತೀರ ಬಿಗಡಾಯಿಸಿ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಪುಣ್ಯಾಶ್ರಮಕ್ಕೆ ಅವರನ್ನು ಕರೆತರುವ ವರೆಗೂ ನಮ್ಮ ಮುಖ್ಯ ಮಂತ್ರಿಗಳು ಸೌಜನ್ಯಕ್ಕಾಗಿಯಾದರೂ ಅವರನ್ನು ಕಂಡು, ಅವರ ಆರೋಗ್ಯ ವಿಚಾರಣೆ ಮಾಡುವ ಚಿಂತೆಯನ್ನು ಸಹ ಮಾಡಲಿಲ್ಲ. ಬದಲಿಗೆ ಅವರಿಗೆ ಮತ್ತು ಅವರು ಕೆಲವು ಸಹೋದ್ಯೋಗಿಗಳಿಗೆ ಪೂರ್ವ ನಿಗದಿತವಾದ ಚೀನಾ ಪ್ರವಾಸ ಅತ್ಯಂತ ಪ್ರಮುಖವಾಗಿ ಬಿಟ್ಟಿತು. ಅದು ಹೋಗಲಿ. ಶುಕ್ರವಾರ ಮಧ್ಯಾಹ್ನ ಶ್ರೀಗಳ ನಿಧನದ ವಾರ್ತೆ ತಿಳಿಯುತ್ತಿದ್ದರೂ, ಶನಿವಾರ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಹುಬ್ಬಳ್ಳಿಗೆ ಬಂದು ಸರಕಾರಿ ರಜೆ ಘೊಷಿಸುವ ಅಗತ್ಯವೇನಿತ್ತು? ಸಾಲದ್ದಕ್ಕೆ ಪುಟ್ಟಜ್ಜಯ್ಯನವರ ಸ್ಮಾರಕಕ್ಕೆ ಸರಕಾರದಿಂದ ಐದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿ ತಮ್ಮ ಹೆಗಲ ಮೇಲಿನ ಜವಾಬ್ದಾರಿಯನ್ನು ತೊಳೆದುಕೊಂಡಂತೆ ಮುಖ್ಯಮಂತ್ರಿಗಳು ಮಾತನಾಡಿದರು. ಸಾಲದ್ದಕ್ಕೆ ಶ್ರೀಗಳಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಕೊಡುವ ಯೋಚನೆ ಸರ್ಕಾರಕ್ಕೆ ಇತ್ತು ಎಂಬತಹ ಬೇಜವಾಬ್ದಾರಿಯ ಹೇಳಿಕೆಗಳು.

ಈ ಎಲ್ಲ ಘೋಷಣೆಗಳು, ಪರಾಕುಗಳು ಮುಗಿಯುತ್ತಿದ್ದಂತೆಯೇ, ಒಂದಿಬ್ಬರು ಮಂತ್ರಿಗಳನ್ನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಬಿಟ್ಟು, ತಮ್ಮ ಉಳಿದೆಲ್ಲ ಮಂತ್ರಿ ಮಹೋದಯರೊಂದಿಗೆ ರಾಜಧಾನಿಗೆ ದೌಡಾಯಿಸಿದರು. ಅಲ್ಲಿ ಅವರು ನಡೆಸಿದ ಅತ್ಯಂತ ತುರ್ತು ಕಾರ್ಯವೆಂದರೆ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆ, ಲಾಬಿ ಇತ್ಯಾದಿ ಇತ್ಯಾದಿ. ಸಂಪುಟ ವಿಸ್ತರಣೆ ಕುರಿತಾದ ಚರ್ಚೆ, ಲಾಬಿಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರೆ ಯಾವ ಸೀಮೆ ಹಾಳಾಗುತ್ತಿತ್ತು? ತಮ್ಮ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯನ್ನು ಮೆರೆದು, ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ತಮ್ಮ ಮೇಧಾವಿತನವನ್ನು ಪ್ರದರ್ಶಿಸಬೇಕಿದ್ದ ಮುಖ್ಯಮಂತ್ರಿಗಳು ಎಂದಿನಂತೆ ಮತ್ತೆ ಹಾದಿ ತಪ್ಪಿದರು.

ನಾರ್ಮನ್ ಕಸಿನ್ಸ್ ಹೇಳಿರುವಂತೆ "ಸಾವು ಬದುಕಿನ ದೊಡ್ಡ ನಷ್ಟವೇನೂ ಅಲ್ಲ. ನಾವು ಬದುಕಿದ್ದಾಗ ನಮ್ಮೊಳಗೆ ಏನೇನು ಸಾಯುತ್ತದೆಂಬುದೇ ದೊಡ್ಡ ನಷ್ಟ". ಮುಖ್ಯಮಂತ್ರಿಗಳೇ ಬಹುಶಃ ಈ ಮಾತು ನಿಮಗೆ ಹಾಗೂ ನಿಮ್ಮ ಸಂಪುಟದ ಪರಿವಾರಕ್ಕೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ...

Friday, September 17, 2010

ಹೊಸ ನಾಟಕ ಚಿಂಗಿಯ ಗುಂಗಿನಲ್ಲಿ....

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನತೆ ಎಮ್ಬುದು ನಿಜಕ್ಕೂ ಇದೆಯಾ? ಹಾಗಾದರೆ ಎಲ್ಲಿದೆ? ಜಾತಿಗಳ ಮಧ್ಯೆ ವೈಷಮ್ಯ, ಲಿಂಗ ಬೇಧಗಳು ಮುಂತಾದವುಗಳ ಮಧ್ಯೆ ನರಳುತ್ತಿರುವ ಅಮಾಯಕರು ಕೇವಲ ರಾಜಕೀಯ ದಾಳಗಳಾಗುತ್ತಿಲ್ಲ, ಬದಲಿಗೆ ನಮ್ಮ ಸುತ್ತಮುತ್ತಲಿನವರ ವಕ್ರ ದೃಷ್ಟಿಗೆ ಬಿದ್ದು, ಅಸಹಾಯಕತೆಯಿಂದ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ಮುಗ್ಧ ಬುದ್ಧಿಮಾಂಧ್ಯ ಹೆಣ್ಣು ಮಗು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ, ಏನೂ ಅರಿಯದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಪರಿಸ್ಥಿತಿ ಹೇಗಿರುತ್ತದೆ? ಅದನ್ನು ಸಮಾಜ ಹೇಗೆ ಸ್ವೀಕರಿಸೀತು......

ಈ ಎಲ್ಲಾ ಪ್ರಶ್ನೆಗಳಿಗೆ ಮುನಿರಾಬಾದಿನ ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರು ತಮ್ಮ ಹೊಸ ನಾಟಕದಲ್ಲಿ ಉತ್ತರಿಸಿದ್ದಾರೆ. ಇದು ನಾನು ಕೈಗೆತ್ತಿಕೊಳ್ಳುತ್ತಿರುವ ಮುಂದಿನ ನಾಟಕ. ತುಂಬ ವಿಭಿನ್ನ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಾಳೆಯಿಂದ ಈ ನಾಟಕದ ಆರಂಭಿಕ ಹಂತದ ತಯಾರಿ ಹೊಸಪೇಟೆಯಲ್ಲಿ ಶುರು. ಪ್ರದರ್ಶನದ ದಿನಾಂಕವನ್ನು ಸಹ ನಿಮಗೆ ಇಷ್ಟರಲ್ಲಿಯೇ ತಿಳಿಸುತ್ತೇನೆ...ಬನ್ನಿ ನಾಟಕ ನೋಡಿ...

Saturday, September 4, 2010

ನನ್ನ ಕೆಲಸಕ್ಕೆ ಅವರು ಅರ್ಜಿ ಬರೆಯದೇ ಹೋಗಿದ್ದರೆ...

ನಮ್ಮ ಬದುಕನ್ನ ಹಸನಗೊಳಿಸಿ, ನಮ್ಮ ಬದುಕಿಗೆ ಹೊಸ ಭಾಷ್ಯ ಬರೆದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ನಾನು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಸೇರಿದಾಗಿನ ಮಾತುಗಳಿವು...ಈ ಮೊದಲು ತಿಳಿಸಿದಂತೆ ನಾನು ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಬಂದಿದ್ದಲ್ಲ...ಅದನ್ನು ಕಲಿಯಲೇ ಬೇಕು ಮತ್ತು ಅದರಲ್ಲಿ ನನ್ನ ಭವಿಷ್ಯವನ್ನು ಕಂಡು ಕೊಳ್ಳಬೇಕೆಂದು ಬಂದವನು...

ಮೊದಲಿನಿಂದಲು ಪತ್ರಿಕೆಗಳಿಗೆ ಬರೆಯುವ ಉತ್ಸಾಹ, ಆಸಕ್ತಿ ನನಗೆ ಇದ್ದುದರಿಂದ ಕ.ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯ ಅದೇನೋ ನನ್ನ ಮೇಲೆ ವಿಶೇಷ ವಾತ್ಸಲ್ಯ...ಅದೊಂದು ದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.ಬಾಲು ಸರ್ ಎಂದಿನಂತೆ ತಮ್ಮ ತರಗತಿಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರಿಗು ಅರ್ಜಿ ಹಾಕಲು ಹೇಳಿದರು. ನನ್ನನ್ನು ತಮ್ಮ ಚೇಂಬರಿಗೆ ಕರೆಯಿಸಿ ಅರ್ಜಿ ಹಾಕುವಂತೆ ತಾಕೀತು ಮಾಡಿದರು...ನಾನು ಹುಂ ಎಂದು ಸುಮ್ಮನಾದೆ...ಅದರ ಕಡೆ ಹೆಚ್ಚು ಗಮನ ಹರಿಸದೆ ಎಂದಿನಂತೆ ನನ್ನ ನಾಟಕ, ಓದು ಮುಂತಾದವುಗಳ ಕಡೆ ಗಮನ ಹರಿಸಿ ಅದನ್ನು ಮರೆತು ಬಿಟ್ಟೆ...

ಅರ್ಜಿಹಾಕಲು ಇನ್ನು ಎರಡು ದಿನ ಬಾಕಿ ಇರುವಾಗ ಬಾಲು ಸರ್ ತಮ್ಮ ಚೇಂಬರಿಗೆ ನನ್ನನ್ನು ಮತ್ತೆ ಕರೆಯಿಸಿ ತಮ್ಮ ಎಂದಿನ ಶೈಲಿಯಲ್ಲಿ "ಏನಯ್ಯಾ ಅಪ್ಲಿಕೇಶನ್ ಹಾಕಿದ್ಯಾ" ಎಂದರು. ನಾನು ಇಲ್ಲ ಸರ್..ನನ್ನ ಓದು ಮುಗಿದ ನಂತರ ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂದಾಗ ಅವರ ಸಿಟ್ಟು ನೆತ್ತಿಗೇರಿತ್ತು...ತಾವೇ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನನ್ನ ಪರವಾಗಿ ಅರ್ಜಿ ಬರೆದು ನನಗೆ ಕೆಳಗೆ ಸಹಿ ಮಾಡಲು ಹೇಳಿ ಕಛೇರಿಯ ಸಹಾಯಕನನ್ನು ಕರೆದು ಅದನ್ನು ಪೋಸ್ಟ್ ಮಾಡಲು ಹೇಳಿದರು..

ನಂತರ ಸಂ.ಕ ದಿಂದ ನನಗೆ ಲಿಖಿತ ಪರೀಕ್ಷೆಗೆ ಪತ್ರ ಬಂದಿತು...ನಾನು ಹಾಜರಾಗಲಿಲ್ಲ...ಸಂದರ್ಶನಕ್ಕೆ ಕರೆ ಬಂದಿತು...ಅದಕ್ಕೂ ಹೋಗಲಿಲ್ಲ..ಕೊನೆಗೆ ನನಗೆ ಕೆಲಸಕ್ಕೆ ಹಾಜರಾಗಲು ಕರೆ ಬಂದಿತು ಮತ್ತು ೧೯೯೪ ಡಿಸೆಂಬರ್ ೩೧ ರಂದು ಕೊನೆಯ ದಿನ ಎಂದು ನಿಗದಿ ಪಡಿಸಿ ಪತ್ರವನ್ನು ಕಳಿಸಿದರು...ಇದರಿಂದ ಬಾಲು ಸರ್ ತುಂಬ ಖುಷಿ ಪಟ್ಟಿದ್ದರು...

ಇಷ್ಟಾದರೂ ನಾನು ಕೆಲಸಕ್ಕೆ ಸೇರಬೇಕೆ ಬೇಡವೇ ಎಂದು ವಿಚಾರಮಾಡುತ್ತಿರುವಾಗ ನನ್ನನ್ನು ಮತ್ತೆ ತಮ್ಮ ಚೇಂಬರಿಗೆ ಕರೆಯಿಸಿ ಬೈದು ಕೆಲಸಕ್ಕೆ ಸೇರುವಂತೆ ಮಾಡಿದರು...

ಅಂದು ಬಹುಶಃ ಅವರು ನನ್ನನ್ನು ಈ ಪರಿ ವತ್ತಾಯಿಸದೆ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ? ನನ್ನ ಜೀವನಕ್ಕೆ ಒಂದು ಹೊಸ ಭಾಷ್ಯ ಬರೆದ ಬಾಲು ಸರ್ ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ... ಹಿ ಇಸ್ ಎ ಗ್ರೇಟ್ ಹ್ಯುಮನ್ ಬಿಯಿಂಗ್...ಹ್ಯಾಟ್ಸ್ ಆಫ್ ಸರ್...!!!