Monday, May 2, 2011

ಯಾರ್ಯಾರೋ ಬಂದವರಾ......


"ಒಳಾಕ ಬರ್ರಿ..ಯಾರದು ಬಂದದ್ದು..." ಎಂದು ಇಳಿ ವಯಸ್ಸಿನ ಮುದುಕ ತನ್ನ ಹಣೆಗೆ ಕೈ ಹಚ್ಚಿ ಸುಡು ಬಿಸಿಲಿನಲ್ಲಿ ನಮ್ಮ ಕಡೆ ನೋಡಿದಾಗ, ನಮಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಇದು ಅದೇ ಮನೆನಾ? ಅವನು ನಮಗೆ ಹೇಳಿದ್ದು ಅವರ ಅಪ್ಪ ತನ್ನ ತಾಯಿಯನ್ನು ಇಟ್ಟುಕೊಂಡಿದ್ದರು....ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದವರು....ಅವರ ಅಕ್ರಮ ಸಂಬಂಧಕ್ಕೆ ನಾನು ಹುಟ್ಟಿದ್ದು....ಬದುಕು ನಿಜಕ್ಕೂ ಕಷ್ಟದ ದಾರಿಯಾದಾಗ ನಮ್ಮ ದೂರದ ಸಂಬಂಧಿಯೊಬ್ಬರು ನನ್ನ ಕೈಹಿಡಿದು ಓದಿಸುತ್ತಿದ್ದಾರೆ..ಮುಂತಾದ ವಿಷಯಗಳೆಲ್ಲ ನಮ್ಮ ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದವು...

ನಿಧಾನಕ್ಕೆ ಹೆಜ್ಜೆ ಹಾಕುತ್ತ ಬಂದ ಆ ವೃದ್ಧ ಜೀವ ನಮ್ಮನ್ನು ಮಾತನಾಡಿಸುತ್ತಲೇ, ನಮ್ಮನ್ನು ಅಲ್ಲಿ ಕೂರಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಪಕ್ಕದಲ್ಲಿ ಕಟ್ಟಿದ್ದ ಮೇಕೆ ಮರಿಯೊಂದು ಮ್ಯಾ...ಎಂದು ಕೂಗುತ್ತಿತ್ತು..ಅದರ ಮುಂದೆ ಒಂದೆರಡು ಒಣ ಸೊಪ್ಪನ್ನು ಬಿಟ್ಟರೆ ಬೇರೇನೂ ಇರಲಿಲ್ಲ ತಿನ್ನಲು...ಒಂದೆರಡು ಚಿಕ್ಕ ಚಿಕ್ಕ ಮಕ್ಕಳು ಸರಿಯಾಗಿ ಚಡ್ಡಿಯನ್ನು ಸಹ ಹಾಕದೇ, ಮೂಗಿನಲ್ಲಿ ಫೇವಿಕಾಲ್ ಸುರಿಸುತ್ತ ಅತ್ತಿಂದಿತ್ತ - ಇತ್ತಿಂದತ್ತ ಓಡಾಡುತ್ತಿದ್ದವು...ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸಹ ಆ ಮುದುಕ ನಮ್ಮನ್ನು ಮರ್ಯಾದೆಯಿಂದ ನೋಡಿಕೊಳ್ಳಲು ಪಡುತ್ತಿದ ಪ್ರಯತ್ನ ಮಾತ್ರ ನಮ್ಮನ್ನು ಮುಜುಗರಕ್ಕೀಡುಮಾಡಿತ್ತು....ಸರಿ ನಾವೇ ಸುಧಾರಿಸಿಕೊಂಡು ಪಕ್ಕದಲ್ಲಿ ಇರಿಸಲಾಗಿದ್ದ ಮೂರುಕಾಲಿನ ಹೊರಸಿನ ಮೇಲೆ ಕೂತು ಆಗಸವನ್ನು ದಿಟ್ಟಿಸತೊಡಗಿದೆವು....

"ನಮ್ಮ ರಾಜನ್ ಗೆಳ್ಯಾರಾ ನೀವೆಲ್ಲ..ಹೆಂಗದಾನ ಅಂವಾ..." ಎಂದು ಕಂಕುಳಲ್ಲಿ ಸುಮಾರು ೫ ವರ್ಷದ ಮಗುವನ್ನು ಎತ್ತಿಕೊಂಡು ನಮ್ಮ ಕಡೆಗೆ ಬಂದ ಹೆಂಗಸಿನ ಮೈಮೇಲೆ ಮರ್ಯಾದೆ ಮುಚ್ಚಿಕೊಳ್ಳಲು ಬೇಕಾಗುವಷ್ಟು ಬಟ್ಟೆಗಳಿದ್ದವು..."ಇದು ನನ್ನ ಹಿರೇ ಮಗಳ ಕೂಸು...ಇದನ್ನ ನಮ್ಮ ಹತ್ಯಾಕ ಬಿಟ್ಟು ಕೂಲಿ ಮಾಡಾಕ ಹೋಗ್ಯಾಳಕಿ..." ಎಂದು ಇನ್ನೇನೋ ಮಾತುಗಳನ್ನು ಮುಂದುವರಿಸುತ್ತಿದ್ದಂತೆಯೇ ಅಲ್ಲಿನ ಪರಿಸ್ಥಿತಿಯ ನಿಜ ಸ್ವರೂಪ ನಮ್ಮ ಕಣ್ಣಮುಂದೆ ಬಂದಾಗಿತ್ತು.

ಹಾಗಾದರೆ ಅವನು ಹೇಳಿದ್ದ ಅವನ ಅಮ್ಮ ಯಾರು? ನಿಧಾನವಾಗಿ ನಮ್ಮ ಮಾತುಗಳು ಆ ವೃದ್ಧರನ್ನು ಆವರಿಸಿಕೊಂಡವು. ಕೂಲಿನಾಲಿ ಮಾಡಿಕೊಂಡು ಬದುಕುತ್ತಿದ್ದ ಮುದಿ ಜೀವಗಳಿಗೆ ಆಸರೆಯಾಗಿದ್ದವನೆಂದರೆ ಈ ಏಕೈಕ ಸುಪುತ್ರ. ತಾವು ಒಂದೊಪ್ಪತ್ತು ಗಂಜಿ ಊಟಮಾಡಿಯಾದರೂ ತಮ್ಮ ಮಗ ದೂರದೂರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲಿ ಅಂತ ದಿನವೂ ಅವನಿಗೆ ತಪ್ಪದೇ ಸರ್ಕಾರಿ ಕೆಂಪು ಬಸ್ಸುಗಳ ಮೂಲಕ ಊಟವನ್ನು ಕಳಿಸಿಕೊಡುತ್ತಿದ್ದರು...ನಾವೆಷ್ಟು ಬಾರಿ ಅದು ನಮ್ಮದೇ ಊಟ ಎಂಬಂತೆ ಹಂಚಿಕೊಂಡು ತಿಂದಿಲ್ಲ? ನನ್ನನ್ನ "ಬೇರೆ ಯಾರೋ" ಓದಿಸುತ್ತಿದ್ದಾರೆ ಎಂದು ಇವನು ಹೇಳಿದ್ದರಲ್ಲಿ ಯಾವ ಪುರುಷಾರ್ಥ ಇದ್ದೀತು?

ಆ ದಿನ ನನಗಿನ್ನೂ ನೆನಪಿದೆ....ನಾವೆಲ್ಲ ಗೆಳೆಯರು ಸೇರಿ ಹರಟೆ ಹೊಡೆಯುತ್ತ ಬಸ್ ಸ್ಟ್ಯಾಂಡಿನಲ್ಲಿ ತಿರುಗಾಡುತ್ತಿದ್ದಾಗ ಈ ಹುಡುಗ ನಮ್ಮ ಕಣ್ಣಿಗೆ ಬಿದ್ದಿದ್ದ. ಖಾಲಿ ಕಾಗದಗಳ ಮೆಲೆ ಏನನ್ನೋ ಗೀಚುತ್ತ ಕುಳಿತಿದ್ದ. ಕುತೂಹಲ ತಡೆಯಲಾರದೇ ಅವನ ಪಕ್ಕದಲ್ಲಿ ಹೋಗಿ ನಿಂತು ಅವನು ಬರೆಯುತ್ತಿರುವುದನ್ನು ಗಮನಿಸತೊಡಗಿದೆ. ಆತನೊಬ್ಬ ಅದ್ಭುತ ಕಲಾವಿದ. ಅಲ್ಲಿ ಓಡಾಡುತ್ತಿದ್ದವರ ಚಿತ್ರಗಳನ್ನು ತನ್ನ ಕೈಯಲ್ಲಿರುವ ಕಾಗದಗಳ ಮೇಲೆ ಗೀಚುತ್ತ ಹೊರಟಿದ್ದ. ನನ್ನ ಕಡೆ ನೊಡಿದವನೇ ಮುಗುಳ್ನಕ್ಕ. ಪರಿಚಯವಾಗಲು ಬಹಳ ಹೊತ್ತು ಬೇಕಾಗಲೇ ಇಲ್ಲ. ಹೀಗೆ ಪರಿಚಯ ಸ್ನೇಹವಾಯ್ತು..ಮುಂದೆ ನಾವೆಲ್ಲ ಗೆಳೆಯರು ಸೇರಿ ಒಂದೇ ತಟ್ಟೆಯಲ್ಲಿ ಉಣ್ಣುವಷ್ಟು ಹತ್ತಿರದವರಾಗಿಬೆಟ್ಟೆವು.

ದಿನ ಕಳೆದಂತೆ ಇವನು ತನ್ನ ಕತೆಯನ್ನು ಹೇಳತೊಡಗಿದ...ಅವನ ತಂದೆ ಇವಳ ತಾಯಿಯನ್ನು ಇಟ್ಟುಕೊಂಡಿದ್ದನಂತೆ....ಆತನಿನ್ನೂ ಕೆಲಸದಲ್ಲಿರುವಾಗಲೇ ಅಕಾಲ ಮರಣಕ್ಕೀಡಾಗಿ, ಈತ ಮತ್ತು ಇವನ ತಾಯಿ ಬೀದಿಗೆ ಬರಬೇಕಾಯ್ತಂತೆ...ಇದೇ ಚಿಂತೆಯಲ್ಲಿ ಇವನ ತಾಯಿಯೂ ಸಹ ಒಂದು ದಿನ ತೀರಿ ಹೋದರಂತೆ...ಹೀಗಾಗಿ ಇವನನ್ನು ತಬ್ಬಲಿಯನ್ನಾಗಲು ಬಿಡದೇ ಬೇರೊಬ್ಬರು ಸಾಕುತ್ತಿದ್ದಾರೆ..ಹೀಗೆ ಮುಂದುವರೆಯುತ್ತಿತ್ತು ಇವನ ಕತೆ. ನಾವು ಇವನ ಪರಿಸ್ಥಿತಿಯ ಬಗ್ಗೆ ಕನಿಕರ ಪಟ್ಟುಕೊಳ್ಳುತ್ತಾ, ಇವನಿಗೆ ನಮ್ಮಿಂದ ಸಾಧ್ಯವಾದಷ್ಟೂ ಸಹಾಯ ಮಾಡುವುದರ ಜೊತೆಗೆ ಇವನಲ್ಲಿರುವ ಪ್ರತಿಭೆಯನ್ನು ಪೋಷಿಸಲು ಸಾಕಷ್ಟು ವೇದಿಕೆಯನ್ನು ಸಹ ಕಲ್ಪಿಸಿ, ಅವನನ್ನು ಬೆಳೆಸಿದೆವು. ಅವನ ಪರಿಸ್ಥಿತಿಯ ಬಗ್ಗೆ ನಾವೆಲ್ಲರೂ ತುಂಬ ಮರುಕ ಪಟ್ಟೆವು. ಅವನು ತಾನು ಪರದೇಸಿ ಅನ್ನುವ ಯಾವುದೇ ಭಾವನೆ ಬರಕೂಡದೆಂದು ವಿಶೇಷ ಮುತುವರ್ಜಿವಹಿಸತೊಡಗಿದೆವು..

ಅವನಲ್ಲಿ ಕ್ರಮೇಣ ಆತ್ಮವಿಶ್ವಾಸ ಬರತೊಡಗಿತು...ಜನರೊಂದಿಗೆ ಹೆಚ್ಚು ಹೆಚ್ಚು ಬೆರಯತೊಡಗಿದ...ಇಂತಹ ಸಮಯದಲ್ಲಿ ಅವನಿಗೆ ಒಂದು ಹುಡಗಿಯ ಪರಿಚಯವಾಯ್ತು..ಮುಂದಿನ ಒಂದು ವಾರದಲ್ಲಿ ಇವರಿಬ್ಬರ ಮದುವೆಯೂ ಆಯ್ತು!! ಗೆಳೆಯರೆಲ್ಲರೂ ನಿಂತು ಅವನ ಮದುವೆ ಮಾಡಿದ್ದಾಯ್ತು..ನಮ್ಮೆಲ್ಲರ ಸಂಭ್ರಮಕ್ಕೆ ಪಾರವೇ ಇರಲಿಲ್ಲ...

ಅವನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತ, ದಂಪತಿಯನ್ನು ಮಧುಚಂದ್ರಕ್ಕೆ ಕಳುಹಿಸಿದ್ದೂ ಆಯ್ತು...ಅಷ್ಟರಲ್ಲಿಯೇ ಅವನ ತಂದೆ ತಾಯಿಯ ಕುರಿತು ನಮಗೆ ಸುಳಿವುಗಳು ಸಿಗತೊಡಗಿದ್ದವು....ಅದನ್ನು ಹುಡುಕಿಕೊಂಡು ಹೋದಾಗ ಬದುಕನ್ನು ನಿಜವಾಗಿಯೂ ಪ್ರೀತಿಸುತ್ತಿರುವ, ತಮ್ಮ ಮಗನಿಗೆ ಯಾವುದೂ ಕಡಿಮೆಯಾಗಬಾರದೆಂದು ತಾವು ಒಂದೊಪ್ಪತ್ತು ಉಂಡು, ಮಗನಿಗೆ ಪ್ರತಿದಿನ ತಪ್ಪದೇ ಊಟ ಕಳಿಸಿಕೊಡುತ್ತಿರುವ, ನಮಗೆ ಚಹ ಮಾಡಿಕೊಡಲು ಚಹದ ಪುಡಿಯನ್ನು ತರಿಸಲು ತಮ್ಮ ಬಕ್ಕಣದಿಂದ ಚಿಲ್ಲರೆ ಹುಡುಕುತ್ತಿದ್ದ ಈ ವೃದ್ಧ ಜೀವಗಳು ನಮ್ಮ ಕಣ್ಣಿಗೆ ಬಿದ್ದದ್ದು...

ಈ ಬದುಕಿನ ಚಕ್ರದಲ್ಲಿ ಯಾರ್ಯಾರು ಬಂದರು..ಎಲ್ಲಿಗೆ ತಮ್ಮ ಪಯಣವನ್ನು ಬೆಳೆಸಿದರು...ವಿಚಿತ್ರವಾಗಿ ನಮ್ಮ ಮುಂದೆ ಪ್ರಶ್ನೆಗಳಾಗಿ ಕಾಡತೊಡಗಿದವು....

No comments:

Post a Comment