Monday, February 22, 2010

ನಾನು ಇವನ್ನೆಲ್ಲ ನಂಬುವುದಿಲ್ಲ...ಆದರೆ.....

ಜನವರಿ ೨೯ ಹಾಗೂ ೩೦ ರಂದು ನಾನು ಧಾರವಾಡಕ್ಕೆ ಹೋಗಿದ್ದೆ. ನಾನು ಕಲಿತ ವಿಶ್ವವಿದ್ಯಾಲಯದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾಧ್ಯಮ ಕುರಿತ ವಿಚಾರ ಸಂಕಿರಣಕ್ಕೆ ನನ್ನನ್ನು ಉಪನಾಸಕರಲ್ಲೊಬ್ಬನೆಂದು ಆಹ್ವಾನಿಸಿದ್ದರು. ಹೀಗಾಗಿ ಮಾಧ್ಯಮ ಲೋಕದಲ್ಲಿ ನನಗಿರುವ ಅಲ್ಪ ಸ್ವಲ್ಪ ಅನುಭವಗಳನ್ನು ನನ್ನ ಕಿರಿಯ ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಲು ಹೋಗಿದ್ದೆ. ಅಂದು ನಾನ್ಉ ಎಂದಿನಂತೆ ನನ್ನ ಧಾರವಾಡದ ಎಲ್ಲ ಹಳೆಯ ಗೆಳೆಯರನ್ನು ಕಂದು ಮಾತನಾಡಿಸಿದೆ. ಅನೇಕರು ನನ್ನನ್ನು "ಏನಪಾ ಯಾವ ನಾಟಕಾ ಮಾಡಸ್ಲೀಕತ್ತೀ" ಎಂದೇ ಪ್ರಶ್ನಿಸಿದ್ದರು. ನಾನು ಚಂದ್ರಶೇಖರ್ ಕಂಬಾರರ "ಜೋಕುಮಾರಸ್ವಾಮಿ" ಎಂದಾಗ ಎಲ್ಲರಿಗೂ ಖುಷಿಯಾಗಿತ್ತು. ಜನಪದ ಪ್ರಕಾರದ ನಾಟಕ ಅದರಲ್ಲೂ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವುದರಿಂದ ಅದಕ್ಕೆ ಹೆಚ್ಚಿನ ಮೆರಗು ನೀಡಲು ನನ್ನಿಂದ ಸಾಧ್ಯ ಎಂದು ನನ್ನ ಅನೇಕ ಮಿತ್ರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಾನು ಹಿಂದೆ ಒಂದು ಸಲ ನನ್ನ ಗುರುಗಳಾದ ಶ್ರೀ. ಬಿ.ವಿ. ಕಾರಂತರ ಹತ್ತಿರ ನನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದೆ. "ಮೇಷ್ಟ್ರೇ ನಾನು ಒಂದು ನಾಟಕವನ್ನು ನಿರ್ದೇಶಿಸುತ್ತೇನೆ ಮತ್ತು ಅದಕ್ಕೆ ತಾವು ಸಂಗೀತ ನಿರ್ದೇಶನ ಮಾಡಬೇಕು" ಎಂದಿದ್ದೆ. ಅದಕ್ಕವರು ಸಂತೋಷದಿಂದ ಒಪ್ಪಿ, ನನ್ನ ಬೆನ್ನಮೇಲೆ ಕೈಯಾಡಿಸಿದ್ದರು. ಮುಂದೆ ಕಾರಂತರ ಆರೋಗ್ಯ ತೀರ ಹದಗೆಟ್ಟಿತು, ನಮ್ಮಿಂದ ತುಂಬಾ ದೂರ ಸಾಗಿ ಬಿಟ್ಟರು...ಅವರಿಂದ ನನ್ನ ನಿರ್ದೇಶನದ ನಾಟಕಕ್ಕೆ ಸಂಗೀತ ಮಾಡಿಸುವ ಕನಸು ಕನಸಾಗಿಯೇ ಉಳಿದು ಹೋಯಿತು. ಆದರೆ ಕಾರಂತರು ಈಗಾಗಲೇ ಸಂಗೀತ ಸಂಯೋಜನೆ ಮಾಡಿರುವ ನಾಟಕವನ್ನು ಏಕೆ ನಿರ್ದೇಶಿಸಬಾರದು ಎಂಬ ನನ್ನ ಆಸೆಗೆ ಒತ್ತಾಸೆಯಾಗಿ ನಿಂತವರು ರಾ.ಶಿ.ಕುಲಕರ್ಣಿ. ನಾನೂ ಸಹ ಒಪ್ಪಿ ಅವರು ಸಂಗೀತ ಸಂಯೋಜನೆ ಮಾಡಿರುವ "ಜೋಕುಮಾರಸ್ವಾಮಿ" ನಾಟಕವನ್ನು ನಿರ್ದೇಶಿಸುವ ಸಿದ್ಧತೆಯನ್ನು ನಡೆಸಿದೆ.

ಧಾರವಾಡದ ನನ್ನ ಗೆಳೆಯನೊಬ್ಬ ನಾನು ಈ ನಾಟಕವನ್ನು ಮಾಡಿಸುತ್ತಿದ್ದೇನೆಂಬ ವಿಷಯ ತಿಳಿದ ತಕ್ಷಣವೇ "ಧನ್ಯಾ...ಹುಶಾರ್...ಈ ನಾಟಕ ಭಾಳ ಡೇಂಜರ್...ಛೋಲೋತ್ನಂಗ ಪೂಜಾ ಮಾಡ್ಸಿ ಆಮ್ಯಾಲ ಈ ನಾಟಕಾ ಮಾಡಸ್ಲಿಕ್ಕೆ ಕೈಹಾಕು" ಅಂದ....ನಾನು ಸುಮ್ಮನೇ ಅವನತ್ತ ನೋಡಿ ನಕ್ಕು ಮತ್ತೆ ನನ್ನ ಕೆಲಸದ ಕಡೆಗೆ ವಾಲಿದೆ.

ಆದರೆ ಒಂದು ಮಾತನ್ನಂತೂ ಇಲ್ಲಿ ಹೇಳಲೇ ಬೇಕು...ನನ್ನ ಗೆಳೆಯ ಹೇಳಿದ ಅಂತಲೊ ಅಥವಾ ಈ ನಾಟಕಕ್ಕೆ ಆ ರೀತಿಯ ಕಳಂಕ ಅಂಟಿದೆಯೋ ಗೊತ್ತಿಲ್ಲ. ನನ್ನ ಬರೊಬ್ಬರಿ ೨೮ ವರ್ಷಗಳ ರಂಗಭೂಮಿಯ ಅನುಭವದಲ್ಲಿ ನಾನು ಈ ನಾಟಕದ ತಯಾರಿಯಲ್ಲಿ ಅನುಭವಿಸಿದ ಕಿರಿಕಿರಿ, ತೊಂದರೆ ಬೇರೆ ಯಾವ ನಾಟಕದ ತಯಾರಿ ಸಂದರ್ಭದಲ್ಲಿಯೂ ಅನುಭವಿಸಲಿಲ್ಲ. ನಮ್ಮ ತಂಡದ "ಮ್ಯಾನೇಜರ್" ಎಂದೇ ಹೆಸರಾಗಿರುವ ಹಿರಿಯರಾದ ಸದಾನಂದ ಅವರು ತಮ್ಮ ತಮ್ಮನ ಮಗಳ ಮದುವೆಗೆಂದು ಸಂಸಾರ ಸಮೇತರಾಗಿ ಊರಿಗೆ ಹೋದರು.ಅವರು ನಮ್ಮ ಇಡೀ ತಂಡದ ಯಜಮಾನರು. ಎಲ್ಲ ಬೇಕು ಬೇಡಗಳನ್ನು ಸ್ವತಃ ನಿಂತು ನೋಡಿಕೊಳ್ಳುವವರು. ಅವರ ಮಗಳು ನನ್ನ ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಳು. ನಾಟಕ ಪ್ರದರ್ಶನಕ್ಕೆ ಇನ್ನು ಕೇವಲ ೬ ದಿನ ಮಾತ್ರ ಇತ್ತು. ನನ್ನ ಒತ್ತಡ ಯಾರ ಮುಂದೆಯೂ ಹೇಳಿಕೊಳ್ಳುವಂತಿಲ್ಲ...ಫೆಬ್ರುವರಿ ೭ ರಂದು ಮದುವೆ ಮುಗಿಸಿ ಸದಾನಂದ ಅವರ ಮಗಳು ಮತ್ತೆ ೮ ನೇ ತಾರೀಖಿನಂದು ನಮ್ಮ ನಾಟಕದ ತಾಲೀಮಿಗೆ ಹಾಜರಾದಳು. ಸದಾನಂದ್ ಅವರು ೯ ನೇ ತಾರೀಖಿಗೆ ನಮ್ಮ ತಾಲೀಮಿಗೆ ಹಾಜರಾಗಬೇಕಿತ್ತು. ಅಂದು ಮುಂಜಾನೆ ಸರಿಯಾಗಿ ೧೦ ೩೦ ರ ಸಮಯ ಸದಾನಂದ್ ಅವರಿಂದ ನನಗೆ ಫೋನ್ ಕರೆ..ಅದರಲ್ಲಿ ಅವರಿಂದ ಯಾವುದೇ ಮಾತಿಲ್ಲ..ಕೇವಲ ಬಿಕ್ಕಳಿಕೆ..ಅವರ ಅಣ್ಣ ಹೃದಯಾಘಾತದಿಂದ ನಿಧನ ಹೊಂದಿದ್ದರು!...ನನ್ನಲ್ಲಿ ಆಡಲು ಯಾವ ಮಾತುಗಳು ಉಳಿದಿರಲಿಲ್ಲ....ಅವರ ಮಗಳಿಗೆ ನಾನೇ ಸಾಂತ್ವನ ಹೇಳಿ ಊರಿಗೆ ಕಳಿಸಿದೆ....ಅವಳು ಇನ್ನೂ ಅತ್ತ ಊರಿನ ಬಸ್ಸ್ ಹತ್ತಿರಲಿಲ್ಲ..ಆಗಲೇ ನನಗೆ ಪೋನಾಯಿಸಿ "ಅಂಕಲ್...ನನಗೆ ಕೊಟ್ಟಿರುವ ಪಾತ್ರವನ್ನು ನಾನೇ ಮಾಡುತ್ತೇನೆ...ನಾಳೆ ಬೆಳಿಗ್ಗೆ ನಾನು ತಿರುಗಿ ಬಂದು ಬಿಡುತ್ತೇನೆ...ಯಾವುದೇ ಕಾರಣಕ್ಕೂ ನಿಮ್ಮ ಪರಿಶ್ರಮವನ್ನು ಹಾಳು ಮಾಡಲು ಬಿಡುವುದಿಲ್ಲ...." ಅವಳು ಪಾಪ ಇನ್ನೂ ಮಾತನಾಡುತ್ತಿದ್ದಳೇನೋ....ನಾನೇ ಫೋನ್ ಕಟ್ ಮಾಡಿಬಿಟ್ಟೆ......

ಹೇಳಿದ ಮಾತಿನಂತೆ ಆ ಹುಡುಗಿ ೧೦ ನೇ ತಾರಿಖಿನ ಸಂಜೆಗೆ ಮತ್ತೆ ನನ್ನ ನಾಟಕದ ತಾಲೀಮಿಗೆ ಹಾಜರಾದಳು...ಸದಾನಂದ್ ಅವರು ಮಾಡುತ್ತಿದ್ದ ಪಾತ್ರವನ್ನು ಬೇರೆಯವರಿಗೆ ಹಂಚಿದ್ದಾಯಿತು...ಅಷ್ಟರಲ್ಲಿಯೇ ರಷ್ಮಿ (ಸದಾನಂದ್ ಅವರ ಮಗಳ ಹೆಸರು) ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆಯವರನ್ನು ತಯಾರಿಮಾಡಿದ್ದೂ ಆಯ್ತು...ನಾಟಕದ ತಯಾರಿ ನಡೆಯುತ್ತಿದಂತೆಯೆ..ನಮ್ಮ ನಟ ಮಹಾಶಯರು ತಮಗೆ ಬೇಕಾದಂತೆ ತಾಲೀಮಿಗೆ ಬರುವುದು...ಯಾವುದಕ್ಕೂ ಕ್ಯಾರೇ ಅನ್ನದ ಅವರ ನಿಲುವು.... ಅವೆಲ್ಲವುಗಳ ಮಧ್ಯೆ ಸದಾನಂದ್ ಅವರ ಅನುಪಸ್ಥಿತಿ..ನನ್ನನ್ನು ದಿಕ್ಕು ತಪ್ಪಿಸಿತ್ತು....

ಒಟ್ಟಿನಲ್ಲಿ ಮುಂಬೈನಲ್ಲಿ ಒಳ್ಳೆಯ ಪ್ರದರ್ಶನ ನೀಡಬೇಕೆಂದು ನಾವು ತಯಾರಿ ಮಾಡಿಕೊಂಡು ಮುಂಬೈ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಫೆಬ್ರುವರಿ ೧೨ ರ ಬೆಳಿಗ್ಗೆ ಸುಮಾರು ೮.೩೦ ರ ಸಮಯ ಸದಾನಂದ್ ಅವರಿಂದ ಮತ್ತೊಂದು ಫೋನ್!...ಅವರ ಅಣ್ಣನವರ ನಿಧನದ ಸುದ್ದಿ ಕೇಳಿ..ಆ ಆಘಾತವನ್ನು ತಡೆದುಕೊಳ್ಳಲಾಗದೇ, ಸದಾನಂದ್ ಅವರ ಅಕ್ಕನ ಮಗ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ....ಈ ವಿಷಯವನ್ನು ರಷ್ಮಿಗೆ ತಿಳಿಸದಂತೆ ಅವರ ನಮ್ರ ವಿನಂತಿ!....
ಈ ಎಲ್ಲ ತೊಂದರೆಗಳ ಮಧ್ಯೆ ರಷ್ಮಿಯ ಧ್ವನಿ ಬಿದ್ದು ಹೋಗಿತ್ತು..ಮಾತನಾಡಲೂ ಆಗದಷ್ಟು ತೊಂದರೆ ಅನುಭವಿಸುತ್ತಿದ್ದಳು ಹುಡುಗಿ....ಎಲ್ಲವನ್ನೂ ಹಾಗೆಯೇ ಸಹಿಸಿಕೊಂಡು ಮುಂಬೈ ತಲುಪಿ, ಅಲ್ಲಿ ಮತ್ತೆ ೨-೩ ತಾಲೀಮುಗಳನ್ನು ಮಾಡಿ, ಫೆಬ್ರುವರಿ ೧೪ ರಂದು ಪ್ರದರ್ಶನವನ್ನು ನೀಡಿ ರಂಗದಿಂದ ಕೆಳಗಿಳಿಯುತ್ತಿದ್ದಂತೆಯೇ ನನಗೆ ತುಂಬಿದ ಸಭಾಂಗಣದಿಂದ ಕೇವಲ ಪ್ರೇಕ್ಷಕರ ಕರತಾಡನ ಮಾತ್ರ ಕೇಳುತ್ತಿತ್ತು....ಒಂದು ಕ್ಷಣ ಸದಾನಂದ್, ಅವರ ಅಣ್ಣ....ಎಲ್ಲರೂ ನನ್ನ ಕಣ್ಣ ಮುಂದೆ ಬಂದು ಹೋದರು.....ಕಣ್ಣಂಚಿನಲ್ಲಿ ನೀರಿಳಿಯುತ್ತಿತ್ತು....ನಾಟಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಕ್ಕೆ ಮನದಲ್ಲಿ ಧನ್ಯತಾ ಭಾವ!...
ಅಂದ ಹಾಗೆ...ಶಂಕರ‍್ನಾಗ್ ಸಹ "ಜೋಕುಮಾರಸ್ವಾಮಿ" ನಾಟಕವನ್ನು ಚಲನಚಿತ್ರವನ್ನಾಗಿಸುವ ಕಾಯಕದಲ್ಲಿ ತೊಡಗಿದ್ದಾಗಲೇ ಭೀಕರ ಅಪಘಾತಕ್ಕೀಡಾಗಿ ದುರಂತ ಸಾವಿಗೀಡಾದರು.....

2 comments:

 1. ನಾಟಕ ಚೆನ್ನಾಗಿ ಪ್ರದರ್ಶಿತವಾಗಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಪ್ರಶಸ್ತಿಗಳ ಸರಮಾಲೆಯನ್ನೇ ಹೊ೦ದಿದ್ದಕ್ಕೆ ಮೊದಲು ತಮ್ಮನ್ನು ಮತ್ತು ತಮ್ಮ ತ೦ಡವನ್ನು ಹೃತ್ಫೂರ್ವಕವ್ವಗಿ ಅಭಿನ೦ದನೆ ಸಲ್ಲಿಸುತ್ತೆನೆ. ಕ೦ಬಾರರ "ಜೋಕುಮಾರಸ್ವಾಮಿ" ನನ್ನ ಮೆಚ್ಚಿನ ನಾಟಕ- ತಮ್ಮ ತ೦ಡದಿ೦ದ ಇದರ ಮರುಪ್ರದರ್ಶನ ಎಲ್ಲೇ ಇರಲಿ ತಿಳಿಸಿ. ಸದಾನ೦ದರ ಮತ್ತು ಅವರ ಮಗಳ ಗಟ್ಟಿತನಕ್ಕೆ ನಮಸ್ಕರಿಸುವೆ. ಆದರೆ ಅವರ ಕುಟು೦ಬದ ದುರ೦ತಕ್ಕೆ ವಿಷಾದವೆನಿಸಿತು.
  ಜೋಕುಮಾರಸ್ವಾಮಿ ನಾಟಕಕ್ಕ೦ಟಿದ ಈ ಶಾಪದ ಬಗ್ಗೆ ಕೇಳಿದ್ದೆ, ನ೦ಬಿರಲಿಲ್ಲ, ಆದರೆ ಕೆಲ ಘಟನೆಗಳು ಕಾಕತಾಳೀಯವೆನಿಸಿದರೂ ಪದೇ ಪದೇ ಪುನರಾವರ್ತನೆಯಾದಾಗ ನ೦ಬಿಕೆಯಾಗಿ ಪರಿವರ್ತಿತವಾಗಿ ಮೌಢ್ಯವೆನಿಸಬಹುದು. ನಾಗವಲ್ಲಿ ಕಥೆ, ಹ೦ಪೆ ಭೇಟಿ ಕೊದುವ ಮುಖ್ಯಮ೦ತ್ರಿಗಳು ಪದಚ್ಯುತರಾಗುವದು ಇತ್ಯಾದಿ ಇತ್ಯಾದಿ ಹಲವಾರು ಇವೆ.
  ತಮ್ಮ ಅನುಭವ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
  ಪ್ರಶಸ್ತಿಗಳ ಬಗ್ಗೆ ಬರೆಯಿರಿ.
  ಸದಾನ೦ದರಿಗೆ ಮತ್ತು ಅವರ ಮಗಳಿಗೆ ದೇವರು ಸ್ಥ್ಯೆರ್ಯವನ್ನು ನೀಡಲಿ ಎ೦ದು ಪ್ರಾರ್ಥಿಸುವೆ.

  ReplyDelete
 2. Your blog has once again made me to recollect the problems faced by us during the production and my past theatre experience. This was my fourth unforgettable bad moment in my theatre experience. The First was during 1993 while directing JAI MYLARALINGA, Second one during 1994 while staging ADIMANAVA, a play translated by me : I lost my Father and third during 2006 when rehearsaling the same ADIMANAVA I lost my beloved friend Badri and fourth offcourse JOKUMARASWAMY which you know I missed my big brother Mr Sadananda for the final show. Okay past i past. Let us hope for good and be careful in future - RASI

  ReplyDelete