Saturday, September 18, 2010

ಎನ್ನ ಕಾಯವ....



ಮಾನವತೆಯ ಹಿಮಾಲಯ ಪರ್ವತ ಅಸ್ತಂಗತವಾಗಿದೆ. ೯೭ ವರ್ಷಗಳ ಸಾರ್ಥಕ ಜೀವನಗಳನ್ನು ನಡೆಸಿ, ತಮ್ಮ ಅಂಧತೆಯ ಮೂಲಕ ಕಣ್ಣಿದ್ದವರಿಗೆ ಬಾಳಿನ ದಾರಿದೀಪವಾಗಿ ಬಾಳಿದ ಪುಟ್ಟಜ್ಜಯ್ಯ ತಮ್ಮ ಇಹಲೋಕದ ಎಲ್ಲ ವ್ಯವಹಾರಗಳನ್ನು ಮುಗಿಸಿ ಸಾಗಿಬಾರದ ದಾರಿಗೆ ನಡೆದು ಬಿಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಾಗರವೇ ಅವರ ಮಾನವೀಯತೆಗೆ, ಸರಳತೆಗೆ ಸಾಕ್ಷಿಯಾಯಿತು.

ತಮ್ಮ ಜೀವನದುದ್ದಕ್ಕೂ ಸಂಗೀತದ ವಿವಿಧ ಮಜಲುಗಳಲ್ಲಿ ಅಗಾಧ ಪರಿಶ್ರಮ ಮತ್ತು ಶೃದ್ಧೆಗಳಿಂದ ಮೇರುಶಿಖರಕ್ಕೇರಿದ, ಮತ್ತು ಸಾವಿರಾರು ಜನರಿಗೆ ದಾರಿದೀಪವಾಗಿ, ಮಾರ್ಗದರ್ಶಕರಾಗಿ ಬದುಕಿ ಬಾಳಿದ ಹಿರಿಯ ಚೇತನಕ್ಕೆ ಅವರ ಅಂತಿಮ ಯಾತ್ರೆಗೆ ಲಕ್ಷಾಂತರ ಜನ ತೋರಿದ ಗಾನ ನಮನ ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ.

ಒಂದು ಕಡೆಯಿಂದ ಅವರ ಅಪಾರ ಸಂಖ್ಯೆಯ ಶಿಷ್ಯ ವೃಂದ, ಭಕ್ತರು, ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ಧಾವಿಸಿ ಬರುತ್ತಿದ್ದಂತೆಯೇ, ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಮಂತ್ರಿ ಮಹೋದಯರು ತಮ್ಮ ಕೆಂಪು ಗೂಟದ ಕಾರುಗಳಲ್ಲಿ ಬಂದು ತಮ್ಮ "ಕರ್ತವ್ಯ" ವನ್ನು ಪೂರೈಸುತ್ತಿದ್ದರು. ಕೆಲವೊಂದು ಬಾರಿ ಅದೇಕೋ ಏನೊ ಈ ರಾಜಕೀಯ ಮಂದಿ ತಮ್ಮ ಬುದ್ಧಿಗೆ ಹೆಚ್ಚಿನ ಕೆಲಸವನ್ನು ಕೊಡುವುದೇ ಇಲ್ಲ. ಕೇವಲ ಸ್ವಾರ್ಥಕ್ಕಾಗಿ ಎಲ್ಲವನ್ನು ನೋಡುವ ಮನೋಭಾವ ಹೊಂದಿದವರಂತೆ ಕಂಡುಬಿಡುತ್ತಾರೆ. ಅದನ್ನು ನಮ್ಮ ನಡುವೆ ನಡೆಯುತ್ತಿರುವ ದುರಂತ ಎನ್ನಬೇಕೋ, ಪ್ರಮಾದ ಎನ್ನಬೇಕೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಅಚಾತುರ್ಯ ಎನ್ನಬೇಕೊ ಅರ್ಥವಾಗುತ್ತಿಲ್ಲ.

ನೆನ್ನೆ ಕೂಡ ಪುಟ್ಟಜ್ಜಯ್ಯನವರ ಅಂತ್ಯಕ್ರೀಯೆಯ ಸಂದರ್ಭದಲ್ಲಿ ನಡೆದದ್ದೂ ಅದೇ. ಶುಕ್ರವಾರ ಮಧ್ಯಾಹ್ನ ೧೨.೨೦ ಕ್ಕೆ ಹಿರಿಯ ಚೇತನ ಇಹಲೋಕದೊಂದಿಗೆ ತನ್ನ ಕೊಂಡಿಯನ್ನು ಕಳಚಿಕೊಂಡಿತು. ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಈ ಸುದ್ದಿ ಬಿತ್ತರವಾಗತೊಡಗಿತು. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳದ್ದು, ಗೃಹ ಮಂತ್ರಿಗಳದ್ದು, ರಾಜ್ಯದ ಹಿರಿಯ ಅಧಿಕಾರಿಗಳದ್ದು ಘನ ಮೌನ. ಕಳೆದ ಒಂದು ವಾರದಿಂದ ಅವರ ಆರೋಗ್ಯ ತೀರ ಬಿಗಡಾಯಿಸಿ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಪುಣ್ಯಾಶ್ರಮಕ್ಕೆ ಅವರನ್ನು ಕರೆತರುವ ವರೆಗೂ ನಮ್ಮ ಮುಖ್ಯ ಮಂತ್ರಿಗಳು ಸೌಜನ್ಯಕ್ಕಾಗಿಯಾದರೂ ಅವರನ್ನು ಕಂಡು, ಅವರ ಆರೋಗ್ಯ ವಿಚಾರಣೆ ಮಾಡುವ ಚಿಂತೆಯನ್ನು ಸಹ ಮಾಡಲಿಲ್ಲ. ಬದಲಿಗೆ ಅವರಿಗೆ ಮತ್ತು ಅವರು ಕೆಲವು ಸಹೋದ್ಯೋಗಿಗಳಿಗೆ ಪೂರ್ವ ನಿಗದಿತವಾದ ಚೀನಾ ಪ್ರವಾಸ ಅತ್ಯಂತ ಪ್ರಮುಖವಾಗಿ ಬಿಟ್ಟಿತು. ಅದು ಹೋಗಲಿ. ಶುಕ್ರವಾರ ಮಧ್ಯಾಹ್ನ ಶ್ರೀಗಳ ನಿಧನದ ವಾರ್ತೆ ತಿಳಿಯುತ್ತಿದ್ದರೂ, ಶನಿವಾರ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಹುಬ್ಬಳ್ಳಿಗೆ ಬಂದು ಸರಕಾರಿ ರಜೆ ಘೊಷಿಸುವ ಅಗತ್ಯವೇನಿತ್ತು? ಸಾಲದ್ದಕ್ಕೆ ಪುಟ್ಟಜ್ಜಯ್ಯನವರ ಸ್ಮಾರಕಕ್ಕೆ ಸರಕಾರದಿಂದ ಐದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿ ತಮ್ಮ ಹೆಗಲ ಮೇಲಿನ ಜವಾಬ್ದಾರಿಯನ್ನು ತೊಳೆದುಕೊಂಡಂತೆ ಮುಖ್ಯಮಂತ್ರಿಗಳು ಮಾತನಾಡಿದರು. ಸಾಲದ್ದಕ್ಕೆ ಶ್ರೀಗಳಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಕೊಡುವ ಯೋಚನೆ ಸರ್ಕಾರಕ್ಕೆ ಇತ್ತು ಎಂಬತಹ ಬೇಜವಾಬ್ದಾರಿಯ ಹೇಳಿಕೆಗಳು.

ಈ ಎಲ್ಲ ಘೋಷಣೆಗಳು, ಪರಾಕುಗಳು ಮುಗಿಯುತ್ತಿದ್ದಂತೆಯೇ, ಒಂದಿಬ್ಬರು ಮಂತ್ರಿಗಳನ್ನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಬಿಟ್ಟು, ತಮ್ಮ ಉಳಿದೆಲ್ಲ ಮಂತ್ರಿ ಮಹೋದಯರೊಂದಿಗೆ ರಾಜಧಾನಿಗೆ ದೌಡಾಯಿಸಿದರು. ಅಲ್ಲಿ ಅವರು ನಡೆಸಿದ ಅತ್ಯಂತ ತುರ್ತು ಕಾರ್ಯವೆಂದರೆ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆ, ಲಾಬಿ ಇತ್ಯಾದಿ ಇತ್ಯಾದಿ. ಸಂಪುಟ ವಿಸ್ತರಣೆ ಕುರಿತಾದ ಚರ್ಚೆ, ಲಾಬಿಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರೆ ಯಾವ ಸೀಮೆ ಹಾಳಾಗುತ್ತಿತ್ತು? ತಮ್ಮ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯನ್ನು ಮೆರೆದು, ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ತಮ್ಮ ಮೇಧಾವಿತನವನ್ನು ಪ್ರದರ್ಶಿಸಬೇಕಿದ್ದ ಮುಖ್ಯಮಂತ್ರಿಗಳು ಎಂದಿನಂತೆ ಮತ್ತೆ ಹಾದಿ ತಪ್ಪಿದರು.

ನಾರ್ಮನ್ ಕಸಿನ್ಸ್ ಹೇಳಿರುವಂತೆ "ಸಾವು ಬದುಕಿನ ದೊಡ್ಡ ನಷ್ಟವೇನೂ ಅಲ್ಲ. ನಾವು ಬದುಕಿದ್ದಾಗ ನಮ್ಮೊಳಗೆ ಏನೇನು ಸಾಯುತ್ತದೆಂಬುದೇ ದೊಡ್ಡ ನಷ್ಟ". ಮುಖ್ಯಮಂತ್ರಿಗಳೇ ಬಹುಶಃ ಈ ಮಾತು ನಿಮಗೆ ಹಾಗೂ ನಿಮ್ಮ ಸಂಪುಟದ ಪರಿವಾರಕ್ಕೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ...

1 comment:

  1. tamma anisike nannadu. avara aatmakke shanti sigali. divya chetana maali udisali endu praartisona.

    ReplyDelete