ಸಂಪಾದಕೀಯ ಬ್ಲಾಗ್ ಪ್ರಕಟಿಸಿದ ಲೇಖನವನ್ನು ಇಲ್ಲಿ ಮರು ಪ್ರಕಟಿಸುತ್ತಿರುವೆ...
ಕಪಟ ಜ್ಯೋತಿಷಿಗಳ ವಿರುದ್ಧ ನಾವು ನೀವೆಲ್ಲ ಸೇರಿ ಹೂಡಿರುವ ಸಮರಕ್ಕೆ ಸಾವಿರಾರು ಮಂದಿ ಸ್ಪಂದಿಸುತ್ತಿದ್ದಾರೆ. ಬೃಹತ್ ಬ್ರಹ್ಮಾಂಡ ವಿರುದ್ಧದ ಆಂದೋಲನದ ನೀಲನಕ್ಷೆ ಎಂಬ ಪೋಸ್ಟ್‌ನ ಲಿಂಕ್ ಅನ್ನು ಎರಡು ದಿನಗಳ ಅವಧಿಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದವರ ಸಂಖ್ಯೆ ೬೦೦ಕ್ಕೂ ಹೆಚ್ಚು.ದಟ್ಸ್ ಕನ್ನಡ, ವಿಶ್ವ ಕನ್ನಡಿಗ ವೆಬ್ ಸೈಟುಗಳು ಈ ಆಂದೋಲನದ ಕುರಿತು ಸುದ್ದಿಯನ್ನು ಮಾಡಿವೆ. ನಿಲುಮೆ ಸೇರಿದಂತೆ ಹಲವು ಬ್ಲಾಗ್‌ಗಳಲ್ಲಿ ಈ ಕುರಿತು ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ.
ಈಗಾಗಲೇ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಒಂದಷ್ಟು ಗೆಳೆಯ-ಗೆಳತಿಯರನ್ನು ಈ ಗುಂಪಿಗೆ ಈಗಾಗಲೇ ಸೇರಿಸಿದ್ದೇವೆ. ಫೇಸ್‌ಬುಕ್ ಬಳಸುವ ಎಲ್ಲ ಓದುಗರೂ ಈ ಕೆಳಗಿನ ಲಿಂಕ್ ಬಳಸಿ, ಈ ಗುಂಪನ್ನು ಸೇರಿಕೊಳ್ಳಬೇಕೆಂದು ವಿನಂತಿಸುತ್ತೇವೆ. ಹಾಗೆಯೇ ಇದು ಓಪನ್ ಗುಂಪು ಆಗಿರುವುದರಿಂದ ಸಾಧ್ಯವಾದಷ್ಟು ಸ್ನೇಹಿತರನ್ನು ಸೇರಿಸಬೇಕೆಂದು ಮನವಿ ಮಾಡುತ್ತೇವೆ. ಈ ಗುಂಪನ್ನು ಸೇರಲು ಇಲ್ಲಿ ಕ್ಲಿಕ್ಕಿಸಿ.ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ.
ಮೌಢ್ಯವನ್ನು ಹೇರುವ ಕಪಟ ಜ್ಯೋತಿಷಿಗಳ ಕುರಿತು ಈ ಹಿಂದೆ ಬ್ಲಾಗರ್‌ಗಳು ಬರೆದ ಲೇಖನಗಳ ಲಿಂಕ್‌ಗಳನ್ನು ಈ ಗುಂಪಿನಲ್ಲಿ ಒದಗಿಸಬೇಕೆಂದು ಕೋರುತ್ತೇವೆ.
ಜನವಿರೋಧಿಯಾಗಿರುವ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಜೀ ಟಿವಿಯ ಮುಖ್ಯಸ್ಥರಿಗೆ ಒಂದು ಆಗ್ರಹ ಪತ್ರವನ್ನು ಬರೆದಿದ್ದೇವೆ. ಅದನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ. ಸಾಧ್ಯವಾಗುವುದಾದರೆ ಈ ಆಂದೋಲನವನ್ನು ಬೆಂಬಲಿಸುವ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಈ ಬಹಿರಂಗ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇವೆ. ಇದೇ ಮಾದರಿಯ ಪತ್ರಗಳನ್ನು ಎಲ್ಲರೂ ಬರೆದು ಜೀ ಟಿವಿಯ ಮೇಲ್ ಐಡಿಗೆ ಕಳುಹಿಸೋಣ. ಒಂದು ವೇಳೆ ಕಾಲಾವಕಾಶವಾಗದೇ ಹೋದರೆ ಸಂಪಾದಕೀಯದ ಪತ್ರವನ್ನೇ ಫಾರ್ವರ್ಡ್ ಮಾಡಿದರೂ ಆಗುತ್ತದೆ. ಕನಿಷ್ಠ ಒಂದು ಸಾವಿರ ಪತ್ರಗಳನ್ನಾದರೂ ಬರೆದರೆ ಜೀ ಟಿವಿಯವರು ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಮರುಚಿಂತನೆ ನಡೆಸಬಹುದೇನೋ? ಈ ಪತ್ರ ಚಳವಳಿಯಿಂದಲೇ ಕಾರ್ಯಕ್ರಮ ನಿಂತರೆ ಒಳ್ಳೆಯದು, ಇಲ್ಲವಾದಲ್ಲಿ ಇನ್ನಷ್ಟು ಪ್ರಜಾಸತ್ತಾತ್ಮಕವಾದ ಹೋರಾಟಗಳಿಗೆ ನಾವು ಅಣಿಯಾಗಬೇಕಾಗುತ್ತದೆ.
ಟಿವಿಗಳಲ್ಲಿ ಜ್ಯೋತಿಷಿಗಳು ನಡೆಸುತ್ತಿರುವ ಅವಾಂತರಗಳ ಕುರಿತು, ಮಾಧ್ಯಮಗಳು ಮೌಢ್ಯವನ್ನು ಹರಡುತ್ತಿರುವ ಕುರಿತು ಸಾಕಷ್ಟು ಸಂಘಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ವಿವರಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಈ ಸಂಬಂಧ ಒಂದಷ್ಟು ವಿಚಾರ ಸಂಕಿರಣಗಳು, ಪ್ರತಿಭಟನೆಗಳು ಆರಂಭವಾಗಬೇಕಿದೆ. ಆ ಕುರಿತ ಬೆಳವಣಿಗೆಗಳ ಬಗ್ಗೆ ನಿಮಗೆ ಆಗಾಗ ಮಾಹಿತಿ ನೀಡುತ್ತಿರುತ್ತೇವೆ.
ಮೌಢ್ಯ ಕಂದಾಚಾರಗಳಿಲ್ಲದ ಒಂದು ಸ್ವಸ್ಥ ಸಮಾಜ ಮತ್ತು ಅನೈತಿಕ ಮಾರ್ಗದ ಟಿಆರ್‌ಪಿ ಈ ಎರಡರ ನಡುವೆ ಒಂದನ್ನು ಜೀ ಟಿವಿಯವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅವರ ಆಯ್ಕೆ ಟಿಆರ್‌ಪಿ ಆಗದಿರಲಿ ಎಂದು ಆಶಿಸೋಣ.
No comments:
Post a Comment