Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ: ಫೇಸ್‌ಬುಕ್‌ನಲ್ಲೊಂದು ಗುಂಪು

ಸಂಪಾದಕೀಯ ಬ್ಲಾಗ್ ಪ್ರಕಟಿಸಿದ ಲೇಖನವನ್ನು ಇಲ್ಲಿ ಮರು ಪ್ರಕಟಿಸುತ್ತಿರುವೆ...


ಕಪಟ ಜ್ಯೋತಿಷಿಗಳ ವಿರುದ್ಧ ನಾವು ನೀವೆಲ್ಲ ಸೇರಿ ಹೂಡಿರುವ ಸಮರಕ್ಕೆ ಸಾವಿರಾರು ಮಂದಿ ಸ್ಪಂದಿಸುತ್ತಿದ್ದಾರೆ. ಬೃಹತ್ ಬ್ರಹ್ಮಾಂಡ ವಿರುದ್ಧದ ಆಂದೋಲನದ ನೀಲನಕ್ಷೆ ಎಂಬ ಪೋಸ್ಟ್‌ನ ಲಿಂಕ್ ಅನ್ನು ಎರಡು ದಿನಗಳ ಅವಧಿಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದವರ ಸಂಖ್ಯೆ ೬೦೦ಕ್ಕೂ ಹೆಚ್ಚು.ದಟ್ಸ್ ಕನ್ನಡ, ವಿಶ್ವ ಕನ್ನಡಿಗ ವೆಬ್ ಸೈಟುಗಳು ಈ ಆಂದೋಲನದ ಕುರಿತು ಸುದ್ದಿಯನ್ನು ಮಾಡಿವೆ. ನಿಲುಮೆ ಸೇರಿದಂತೆ ಹಲವು ಬ್ಲಾಗ್‌ಗಳಲ್ಲಿ ಈ ಕುರಿತು ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ.

ಈಗಾಗಲೇ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಒಂದಷ್ಟು ಗೆಳೆಯ-ಗೆಳತಿಯರನ್ನು ಈ ಗುಂಪಿಗೆ ಈಗಾಗಲೇ ಸೇರಿಸಿದ್ದೇವೆ. ಫೇಸ್‌ಬುಕ್ ಬಳಸುವ ಎಲ್ಲ ಓದುಗರೂ ಈ ಕೆಳಗಿನ ಲಿಂಕ್ ಬಳಸಿ, ಈ ಗುಂಪನ್ನು ಸೇರಿಕೊಳ್ಳಬೇಕೆಂದು ವಿನಂತಿಸುತ್ತೇವೆ. ಹಾಗೆಯೇ ಇದು ಓಪನ್ ಗುಂಪು ಆಗಿರುವುದರಿಂದ ಸಾಧ್ಯವಾದಷ್ಟು ಸ್ನೇಹಿತರನ್ನು ಸೇರಿಸಬೇಕೆಂದು ಮನವಿ ಮಾಡುತ್ತೇವೆ. ಈ ಗುಂಪನ್ನು ಸೇರಲು ಇಲ್ಲಿ ಕ್ಲಿಕ್ಕಿಸಿ.ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ.

ಮೌಢ್ಯವನ್ನು ಹೇರುವ ಕಪಟ ಜ್ಯೋತಿಷಿಗಳ ಕುರಿತು ಈ ಹಿಂದೆ ಬ್ಲಾಗರ್‌ಗಳು ಬರೆದ ಲೇಖನಗಳ ಲಿಂಕ್‌ಗಳನ್ನು ಈ ಗುಂಪಿನಲ್ಲಿ ಒದಗಿಸಬೇಕೆಂದು ಕೋರುತ್ತೇವೆ.

ಜನವಿರೋಧಿಯಾಗಿರುವ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಜೀ ಟಿವಿಯ ಮುಖ್ಯಸ್ಥರಿಗೆ ಒಂದು ಆಗ್ರಹ ಪತ್ರವನ್ನು ಬರೆದಿದ್ದೇವೆ. ಅದನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ. ಸಾಧ್ಯವಾಗುವುದಾದರೆ ಈ ಆಂದೋಲನವನ್ನು ಬೆಂಬಲಿಸುವ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಈ ಬಹಿರಂಗ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇವೆ. ಇದೇ ಮಾದರಿಯ ಪತ್ರಗಳನ್ನು ಎಲ್ಲರೂ ಬರೆದು ಜೀ ಟಿವಿಯ ಮೇಲ್ ಐಡಿಗೆ ಕಳುಹಿಸೋಣ. ಒಂದು ವೇಳೆ ಕಾಲಾವಕಾಶವಾಗದೇ ಹೋದರೆ ಸಂಪಾದಕೀಯದ ಪತ್ರವನ್ನೇ ಫಾರ್ವರ್ಡ್ ಮಾಡಿದರೂ ಆಗುತ್ತದೆ. ಕನಿಷ್ಠ ಒಂದು ಸಾವಿರ ಪತ್ರಗಳನ್ನಾದರೂ ಬರೆದರೆ ಜೀ ಟಿವಿಯವರು ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಮರುಚಿಂತನೆ ನಡೆಸಬಹುದೇನೋ? ಈ ಪತ್ರ ಚಳವಳಿಯಿಂದಲೇ ಕಾರ್ಯಕ್ರಮ ನಿಂತರೆ ಒಳ್ಳೆಯದು, ಇಲ್ಲವಾದಲ್ಲಿ ಇನ್ನಷ್ಟು ಪ್ರಜಾಸತ್ತಾತ್ಮಕವಾದ ಹೋರಾಟಗಳಿಗೆ ನಾವು ಅಣಿಯಾಗಬೇಕಾಗುತ್ತದೆ.

ಟಿವಿಗಳಲ್ಲಿ ಜ್ಯೋತಿಷಿಗಳು ನಡೆಸುತ್ತಿರುವ ಅವಾಂತರಗಳ ಕುರಿತು, ಮಾಧ್ಯಮಗಳು ಮೌಢ್ಯವನ್ನು ಹರಡುತ್ತಿರುವ ಕುರಿತು ಸಾಕಷ್ಟು ಸಂಘಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ವಿವರಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಈ ಸಂಬಂಧ ಒಂದಷ್ಟು ವಿಚಾರ ಸಂಕಿರಣಗಳು, ಪ್ರತಿಭಟನೆಗಳು ಆರಂಭವಾಗಬೇಕಿದೆ. ಆ ಕುರಿತ ಬೆಳವಣಿಗೆಗಳ ಬಗ್ಗೆ ನಿಮಗೆ ಆಗಾಗ ಮಾಹಿತಿ ನೀಡುತ್ತಿರುತ್ತೇವೆ.

ಮೌಢ್ಯ ಕಂದಾಚಾರಗಳಿಲ್ಲದ ಒಂದು ಸ್ವಸ್ಥ ಸಮಾಜ ಮತ್ತು ಅನೈತಿಕ ಮಾರ್ಗದ ಟಿಆರ್‌ಪಿ ಈ ಎರಡರ ನಡುವೆ ಒಂದನ್ನು ಜೀ ಟಿವಿಯವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅವರ ಆಯ್ಕೆ ಟಿಆರ್‌ಪಿ ಆಗದಿರಲಿ ಎಂದು ಆಶಿಸೋಣ.

Saturday, January 8, 2011

ಹೀಗೊಂದು ಹೊಸ ಪ್ರಯತ್ನ...




ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ, ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಪ್ರದರ್ಶಿಸುತ್ತಿದೆ. ಇದನ್ನ ರಂಗರೂಪಕ್ಕಿಳಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ಪತ್ರಕರ್ತ, ನಾಟಕಕಾರ ಜಿ.ಎಚ್. ರಾಘವೇಂದ್ರ ಅವರು.

ನಾವೆಲ್ಲ ಕನ್ನಡ ಕಲಾ ಸಂಘದ ಕಲಾವಿದರು ಇದಕ್ಕಿಂತಲೂ ಸ್ವಲ್ಪ ಮುಂದುವರಿದು ಬೇಲಿ ಮತ್ತು ಹೊಲ ಕಾದಂಬರಿ ಹಾಗೂ ನಾಟಕ ಎರಡನ್ನೂ ಒಂದೇ ಗುಟುಕಿನಲ್ಲಿ ನಮ್ಮೆಲ್ಲ ರಂಗಾಸಕ್ತರಿಗೆ ಮತ್ತು ಓದುಗರಿಗೆ ಕೊಡುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಕುಂ.ವೀ ಅವರು ಈ ಪ್ರಯತ್ನವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಸಾಗಿದಲ್ಲಿ, ಇನ್ನು ಕೆಲವೇ ದಿನಗಳಲ್ಲಿ "ಬೇಲಿ ಮತ್ತು ಹೊಲ" ಕಾದಂಬರಿ ಹಾಗೂ ನಾಟಕ ಎರಡೂ ನಿಮ್ಮ ಕೈಸೇರಲಿದೆ.....

Saturday, January 1, 2011

ಯಾರಿಗೂ ಮುಖ ತೊರಿಸದೇ ಊರು ಬಿಟ್ಟಿದ್ದಾಯ್ತು...

ನನ್ನ ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿ ಮಹಾರಾಷ್ಟ್ರದ ಗಡಿಂಗ್ಲಜ್ ಎಂಬ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿದ್ದೆ. ನನ್ನ ಮಾವನವರು ಆರ್.ಎಮ್.ಎಸ್ (ರೈಲ್ವೆ ಮೇಲ್ ಸರ್ವಿಸ್) ನಲ್ಲಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ತೀರ ಅವಸರ ಪ್ರವೃತ್ತಿಯ ಮನುಷ್ಯ ಅವರು. ನನ್ನ ಸ್ನೇಹಿತರೆಲ್ಲ ಸೇರಿ ನನ್ನ ಕೆಲಸದ ಸ್ಪೀಡ್ ನೋಡಿ ನನಗೆ ಅವಸರ ಎನ್ನುವ ಹೆಸರನ್ನಿಟ್ಟಿದ್ದರು. ಆದರೆ ಇವರು ನನಗಿಂತಲೂ ಅವಸರ...

ನಾನು ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಅಲ್ಲಿನ ಗೆಸ್ಟ್ ಹೌಸ್ ನಲ್ಲಿರುತ್ತಿದ್ದೆ. ತದನಂತರ ನನ್ನ ರಂಗಚಟುವಟಿಕೆಗಳ ಕಾರಣದಿಂದ ಹೊಸಪೇಟೆಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರಿಸಿದೆ. ಬೆಳಿಗ್ಗೆ ೬.೩೦ ಕ್ಕೆ ಮನೆ ಬಿಟ್ಟು ಕೆಲಸಕ್ಕೆ ಹೋದರೆ, ಬರುವುದು ಸಾಯಂಕಾಲ ೭ ಗಂಟೆಗೆ. ಬಂದವನೇ ನೇರವಾಗಿ ನಾಟಕದ ತಾಲೀಮು, ಚರ್ಚೆ ಹೀಗೆ ಹಲವು ಕಾರಣಗಳಿಂದ ನಮ್ಮ ತಂಡವನ್ನು ಸೇರಿಕೊಂಡು ಬಿಟ್ಟಿರುತ್ತಿದ್ದೆ. ಹೀಗಾಗಿ ನಾನಿರುವ ಮನೆಯ ಆಜೂ ಬಾಜೂ ಯಾರಿದ್ದಾರೆ, ಅವರೇನು ಮಾಡುತ್ತಿದ್ದಾರೆ...ಊಹುಂ..ನನಗೆ ಅದ್ಯಾವುದರ ಮಾಹಿತಿಯೇ ಇರಲಿಲ್ಲ..ನಾನೂ ಸಹ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಮನೆಯ ಎಡಕ್ಕೆ ಹಾಗೂ ಬಲಕ್ಕೆ ಯಾರಿರುತ್ತಾರೆ ಎಂಬುದೂ ಸಹ ನನಗೆ ಗೊತ್ತಿರಲಿಲ್ಲ.

ಹೀಗಿಂತಿರ್ಪ ನನ್ನ ಮಾವನವರು ಕೆಲವುದಿನಗಳ ಮಟ್ಟಿಗೆ ಹೊಸಪೇಟೆಗೆ ಬರುವುದಾಗಿ ತಿಳಿಸಿದರು. ಸರಿ ನನ್ನ ಹೆಂಡತಿ, ಅತ್ತೆ, ಮಾವ ಹಾಗೂ ನನ್ನ ಮಗ (ಆಗಿನ್ನೂ ಅದು ೫ ತಿಂಗಳ ಕೂಸು) ಹೊಸಪೇಟೆಗೆ ಬಂದೇ ಬಿಟ್ಟರು. ನಾನು ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೆನಾದ್ದರಿಂದ, ಯಾವುದೇ ರೀತಿಯ ಕೊರತೆ ಇರಲಿಲ್ಲ. ಅವರಿಗೆ ಬೇಕಾಗುವ ಎಲ್ಲ ದಿನಸಿ ಪದಾರ್ಥ, ತರಕಾರಿ, ಹಾಲು-ಹಣ್ಣಿನ ವ್ಯವಸ್ಥೆಯನ್ನು ಸರಿಯಾಗಿಯೇ ಮಾಡಿಟ್ಟಿದ್ದೆ. ನಾನು ಎಂದಿನಂತೆ ಬೆಳಿಗ್ಗೆ ೬.೩೦ ಕ್ಕೆ ಕೆಲಸಕ್ಕೆ ಹೊರಟೆ. ಅಂದು ಸಂಜೆ ಸ್ವಲ್ಪ ಬೇಗನೇ ಮನೆಗೆ ಬಂದೆ. ಮನೆಯ ಹೊರಗಡೆ ೧೦ ರಿಂದ ೧೨ ಜೊತೆ ಚಪ್ಪಲಿಗಳು..ನನ್ನ ಮನೆಯಿಂದ ಜೋರಾಗಿ ಮಾತುಗಳು ಕೇಳಿಬರುತ್ತಿವೆ. ನನಗೆ ಆಶ್ಚರ್ಯವಾಯಿತು. ನಾನು ಹೊಸಪೇಟೆಗೆ ಬಂದು ೩ ವರ್ಷಗಳ ಅವಧಿಯಲ್ಲಿ ನನ್ನ ಮನೆಗೆ ಎಂದೂ ಇಷ್ಟು ಜನ ಒಂದೇ ಬಾರಿಗೆ ಬಂದವರಲ್ಲ. ಬಂದರೂ ಅವರು ನಾನಿದ್ದಾಗಲೇ ಬರಬೇಕು, ಅದೂ ನಮ್ಮ ತಂಡದ ಕಲಾವಿದರು. ಅವರನ್ನು ಬಿಟ್ಟರೆ ನಾನು ಇಲ್ಲಿ ಯಾರಿಗೂ ಪರಿಚಯವಿರಲಿಲ್ಲ. ಸಂಶಯಗೊಳ್ಳುತ್ತಲೇ ಮನೆಯಲ್ಲಿ ಕಾಲಿರಿಸಿದೆ. ನನ್ನ ಮಾವನವರು ಆ ಮನೆಗೆ ನಾನೇ ಅಪರಿಚಿತ ಎನ್ನುವಂತೆ ಬರಮಾಡಿಕೊಂಡರು. ಅಲ್ಲಿ ಸೇರಿದ್ದ ಎಲ್ಲರಿಗೂ ನನ್ನ ಪರಿಚಯವನ್ನೂ ಮಾಡಿಸಿದ್ದಾಯ್ತು. ನಂತರ ನನಗೆ ತಿಳಿದಿದ್ದು, ಅಲ್ಲಿ ಸೇರಿದ್ದವರೆಲ್ಲ ನನ್ನ ಮಾವನವರ ಗೆಳೆಯರು. ಎಲ್ಲರಿಗೂ ಅಲ್ಪೋಪಹಾರ, ಚಹ ಎಲ್ಲವೂ ನೀಡಿದ್ದಾಯಿತು...ಎಲ್ಲರೂ ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನ ಕೊಡುವವರೆ..ನನಗೋ ಎನೋ ಒಂದು ಮುಜುಗರ.....ಎಲ್ಲರೂ ಹೊರಟು ಹೋದ ಮೇಲೆ ಎನೊ ಒಂದು ದೊಡ್ಡ ಬಿರುಗಾಳಿ ಬೀಸಿ ಹೋದ ಅನುಭವ.

ನಂತರದ ದಿನಗಳಲ್ಲಿ ಇವರೆಲ್ಲರಿಂದ ತಪ್ಪಿಸಿ ಒಡಾಡುವುದೇ ನನಗೊಮ್ದು ಸವಾಲಾಯಿತು. ಎಲ್ಲಿ ಭೇಟಿಯಾದರೂ "ಯಾಕ ಮನೀಗೆ ಬಂದೇ ಇಲ್ಲ", "ನಿಮ್ಮ ಕೆಲಸ ಏನು", "ನೀವು ಖರೇವಂದ್ರೂ ಜಿಂದಲ್ ಕಂಪನಿಯೊಲಗ ಕೆಲಸ ಮಾಡ್ತೀರಾ" ಮುಂತಾದ ಅಸಂಬದ್ಧ ಪ್ರಶ್ನೆಗಳು ನನ್ನನ್ನು ಮುಜುಗರಕ್ಕೊಳಪಡಿಸಿದ್ದವು. ಮುಂದೆ ಕೆಲವು ದಿನಗಳ ನಂತರ ನಾನು ಜಿಂದಲ್ ಕೆಲಸ ಬಿಟ್ಟು ಬೆಂಗಳೂರಿಗೆ ಹೊರದಬೇಕಾಯ್ತು. ನಮ್ಮ ಮಾವನವರು ಅಷ್ಟೇ ಜತನದಿಂದ ನಾನು ಬೆಂಗಳೂರಿಗೆ ಹೊರಡುತ್ತಿರುವ ವಿಷಯವನ್ನು ತಮ್ಮ ಎಲ್ಲ ಗೆಳೆಯರ ಬಳಗಕ್ಕೆ ರವಾನಿಸಿಬಿಟ್ಟಿದ್ದರು. ಕೇವಲ ರಸ್ತೆ ಭೇಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಮತ್ತು ಅವರ ಮಾತು ಕತೆ ಮನೆಗೋ ಬಂತು. ಅವರನ್ನು ತಪ್ಪಿಸಲು ನಾನು ಮನೆಯನ್ನು ಖಾಯಂ ಆಗಿ ಬೀಗ ಹಾಕತೊಡಗಿದೆ. ಕೊನೆಗೆ ಬೆಂಗಳೂರಿಗೆ ಹೊರಡುವ ದಿನ ಯಾರಿಗೂ ಹೇಳದೇ ಕೇಳದೇ, ಯಾರಿಗೂ ಮುಖವನ್ನು ಸಹ ತೋರಿಸದೇ ಹೊಸಪೇಟೆಯನ್ನು ತೊರೆಯಬೇಕಾಯ್ತು....

ಥಾರ್ ಮರಭೂಮಿಯಲ್ಲಿ ಒಯ್ದು ನನ್ನ ಮಾವನವರನ್ನು ಬಿಟ್ಟರೂ ಸಹ ಅಲ್ಲಿಯೂ ಯಾರಾದರೂ ಪರಿಚಯದವರನ್ನು ಹೆಕ್ಕಿ ತರುವ ಜಾಯಮಾನದವರು ಇವರು......

.....ಮೈಮ್ಯಾಲೆಲ್ಲ ಕೂದ್ಲ ಅವ.....

ಅದು ೧೯೯೭ ರ ಆಗಷ್ಟ್ ತಿಂಗಳು..ನನ್ನ ಗೆಳೆಯನ ಮದುವೆ ನಿಶ್ಚಿತಾರ್ಥಕ್ಕೆಂದು ಬೆಳಗಾವಿಗೆ ಹೋಗಿದ್ದೆ. ಆವ ನಾನಿನ್ನೂ ಬ್ಯಾಚುಲರ್. ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಆ ನಿಶ್ಚಿತಾರ್ಥಕ್ಕೆ ನಮ್ಮ ತಂದೆ ತಾಯಿ ಸಹ ಬಂದಿದ್ದರು. ನನ್ನ ಅನೇಕ ಬಂಧು ಬಳಗದವರನ್ನು ತುಂಬಾ ದಿನಗಳ ನಂತರ ಭೇಟಿಯಾಗುವ ಅವಕಾಶ ದೊರೆತಿತ್ತು. ಎಲ್ಲ ಉಭಯ ಕುಶಲೋಪರಿ, ಸಾಂಪ್ರತಗಳ ನಂತರ ಸಹಜವಾಗಿ ಮನೆಯ ಹಿರಿಯರೆಲ್ಲ ಸೇರಿ (ಪೂರ್ವ ಯೋಜಿತ ಕೃತ್ಯದಂತೆ) ನನ್ನ ಮದುವೆಯ ವಿಚಾರವನ್ನು ತೆಗೆದರು. ನಾನು ಎಷ್ಟೇ ಅಲ್ಲಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೂ ಅವರು ಮತ್ತೆ ಮತ್ತೆ ನನ್ನನ್ನು ಹಿಡಿದುತಂದು ತಮ್ಮ ಒಂದಂಶದ ಅಜೆಂಡಾಕ್ಕೆ ನನ್ನನ್ನು ಬಲಿಯಾಗಿರಿಸುತ್ತಿದ್ದರು.

ಹಳ್ಳಕ್ಕೆ ಬಿದ್ರೆ ಆಳಿಗೊಂದ್ ಕಲ್ಲು ಎನ್ನುವಂತೆ ಆ ನಿಶ್ಚಿತಾರ್ಥ ಕಾರ್ಯದಲ್ಲಿ ಒಂದು ಹಣ್ಣು ಹಣ್ಣು ಮುದುಕ ತನ್ನದೇನೂ ಕಡಿಮೆ ಇಲ್ಲವೆಂಬಂತೆ ನನ್ನ ತಂದೆ ತಾಯಿಯವರ ಮುಂದೆ ತನ್ನ ವಾದವನ್ನು ಮಂಡಿಸಿದ.."ನೋಡ್ರಿ..ನಮ್ಮ ಗುರುತಿನ ಪೈಕಿ ಒಂದು ಹುಡುಗಿ ಅದ..ಬ್ಯಾಂಕ್‍ನ್ಯಾಗ ಕೆಲಸ ಮಾಡತಾಳ...ಒಬ್ಬಾಕಿ ಮಗಳು (ಅವಳಿಗೆ ಇಬ್ಬರು ಅಣ್ಣಂದಿರಿರುವುದನ್ನು ಆಮೆಲೆ ತಿಳಿಸಿದ)..ನೋಡೊದ್ರಾಗ ಏನು ತಪ್ಪಿಲ್ಲ..ಅಮ್ಯಾಲೆ ಬ್ಯಾಡಂದ್ರ ಬ್ಯಾರೆ ವಿಚಾರ ಮಾಡೋಣು" ಎಂದ....ಸಾಕು..ಇಷ್ಟು ಸಾಕಾಯ್ತು ಇವರಿಗೆ... ಹುಡುಗಿಯನ್ನು ನೊಡುವ ದಿನಾಂಕವನ್ನು ಸಹ ಗೊತ್ತು ಪಡಿಸಿಯೇ ಬಿಟ್ಟರು...

ಹುಡುಗಿಯನ್ನು ನೋಡುವುದು ಬೆಳಗಾವಿಯ ನನ್ನ ಚಿಕ್ಕಮ್ಮನ ಮನೆಯಲ್ಲಿ ಎಂದು ನಿರ್ಧರಿಸಲಾಗಿತ್ತು. ಅಂದಿನ ದಿನ ಬೆಳಿಗ್ಗೆ ನಾನು ೯ ಗಂಟೆಯ ಹೊತ್ತಿಗೆ ಅಲ್ಲಿಗೆ ಬರುವುದು, ಅದರ ಪ್ರಕಾರ ೧೦ ಗಮ್ಟೆಯ ಹೊತ್ತಿಗೆ ಹುಡುಗಿಯನ್ನು ಅಲ್ಲಿಗೆ ತಂದು ತೊರಿಸುವುದು ಎಂದು ಮಾತಾಗಿತ್ತು. ಸರಿ ಬೆಳಿಗ್ಗೆ ಸುಮಾರು ೮.೩೦ ರ ಹೊತ್ತಿಗೆ ನಾನು ಬೆಳಗಾವಿಯ ನನ್ನ ಚಿಕ್ಕಮ್ಮನ ಮನೆಗೆ ಬಂದೆ...ನಾನು ಅಲ್ಲಿಗೆ ಬರುವ ಹೊತ್ತಿಗಾಗಲೇ ಒಬ್ಬ ಹಿರಿಯರು ಆಗಲೇ ಅಲ್ಲಿಗೆ ಬಂದು ಪ್ರತಿಷ್ಠಾಪಿತರಾಗಿದ್ದರು...ಅವರು ನಾನು ನೋಡಲಿರುವ ಹುಡುಗಿಯ ತಂದೆ ಅಂತ ತಾವೇ ಪರಿಚಯಿಸಿಕೊಂಡರು....ನಾನು ಹುಡುಗಿಯನ್ನು ನೋಡಲಿದ್ದೇನೆಯೊ ಅಥವಾ ಹುಡುಗಿಯೇ ನನ್ನನ್ನು ನೋಡಲು ಬರಲಿದ್ದಾಳೋ ಎಂಬ ಗೊಂದಲದಲ್ಲಿ ನಾನಿದ್ದೆ...ಅಂತೂ ಹುಡುಗಿಯ ದರ್ಶನದ ಮೊದಲೇ ಅವರ ಅಪ್ಪನ ದರ್ಶನ ನನಗಾಗಿತ್ತು.

ನಾನು ಹುಡುಗಿಯನ್ನು ನೋಡಿದ್ದಾಯಿತು..ಅವಳೂ ನನ್ನನ್ನ ನೋಡಿದ್ದಾಯಿತು..ಮುಂದೆ ಅವಳೊಡನೆ ನನ್ನ ಮದುವೆಯೂ ಆಯಿತು...ಮದುವೆಯ ನಂತರ ನಾನು ಮತ್ತು ನನ್ನ ಹೆಂಡತಿ ಹೀಗೆಯೇ ಮಾತನಾಡುತ್ತ... ಅವಳ ಅಪ್ಪ ನನ್ನನ್ನ ನೋಡಲು ಮೊದಲು ಬಂದದ್ಯಾಕೆ ಎನ್ನುವುದರ ಹಿಂದೆ ಒಂದು ಕುತೂಹಲಕರ ಸಂಗತಿ ಅಡಗಿತ್ತು...

ಹಿಂದೆ ಒಂದು ಸಲ ನನ್ನ ಹೆಂಡತಿಯನ್ನು ನೋಡಲು ಒಬ್ಬ ಗಂಡು ಬಂದಿದ್ದನಂತೆ..ಅವನಿಗೆ ತಲೆಯ ಮೇಲೆ ಹುಡುಕಿದರೂ ಒಂದು ಕೂದಲು ಇರಲಿಲ್ಲವಂತೆ..ಹೀಗಾಗಿ ಸಹಜವಾಗಿ ಅವನು ರಿಜೆಕ್ಟ್ ಆಗಿದ್ದ..ಅಂದಿನಿಂದ ಅವಳನ್ನು ಯಾವುದೇ ಹುಡುಗನ ಮುಂದೆ ತೋರಿಸುವ ಶಾಸ್ತ್ರ ಮಾಡಿಸುವ ಮೊದಲು ನನ್ನ ಮಾವನೇ ಮೊದಲು ಹುಡುಗನನ್ನು ನೋಡಿಕೊಂಡು ಬರುವುದಂತೆ...ನನ್ನನ್ನು ನೋಡಿಕೊಂಡು ಮನೆಗೆ ಹೋದ ನನ್ನ ಮಾವನವರನ್ನು ಎಲ್ಲರೂ ಕೇಳಿದ ಮೊದಲ ಪ್ರಶ್ನೆ.."ಹುಡುಗನ ತಲ್ಯಾಗ ಕೂದ್ಲ ಅವನೋ ಇಲ್ಲೋ" ಅದಕ್ಕೆ ನನ್ನ ಮಾವನವರು "ತಲಿಮ್ಯಾಲೇನು..ಇಡೀ ಮೈಮ್ಯಾಲೆಲ್ಲ ಕೂದ್ಲ ಅವ..ನಡೀರಿ ನೋಡಿ ಬರೋಣು"....ಇಲ್ಲಿಂದ ಆರಂಭವಾಗುತ್ತದೆ ನಮ್ಮ ಮಾವನವರ ಪುರಾಣ.....


Friday, December 31, 2010

ಎತ್ತಣ ಮಾಮರ..ಎತ್ತಣ ಕೋಗಿಲೆ.....

ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕದಲ್ಲಿ ನಾನು ಬಹುವಾಗಿ ಮಾತನಾಡಿದ್ದು ಮನುಷ್ಯ ಸಂಬಂಧಗಳ ಕುರಿತು. ಈ ಸಂಬಂಧಗಳೇ ಹಾಗೆ..ನಮ್ಮೀ ನಿವಾಸದಲ್ಲೇ ಅಡಗಿವೆ..ಬರುವಾಗ ಬೆತ್ತಲೆ..ಹೋಗುವಾಗ ಬೆತ್ತಲೆ..ಬಂದು ಹೋಗುವ ನಡುವೆ ಬರೀ ಕತ್ತಲೆ....ಹೀಗೆ ಸಂಬಂಧಗಳ ಜಾಡು ಪಸರಿಸುತ್ತಲೇ ಹೋಗುತ್ತದೆ. ನಾವು ಈ ಭುವಿಯ ಮೇಲೆ ಕಣ್ತೆರೆದಾಗ ನಾವು ಅಳುತ್ತಿರುತ್ತೇವೆ..ಆದರೆ ನಮ್ಮನ್ನ ಹೆತ್ತ ಆ ಮಹಾತಾಯಿ ಹಸನ್ಮುಖಿಯಾಗಿರುತ್ತಾಳೆ. ತನ್ನ ಕರುಳ ಬಳ್ಳಿಯ ಮತ್ತೊಂದು ಸಂಬಂಧವನ್ನು ವ್ಯಾವಹಾರಿಕ ಲೋಕಕ್ಕೆ ಪರಿಚಯಿಸಿದ ಸಂಭ್ರಮ ಅಲ್ಲಿರುತ್ತದೆ..ಅಲ್ಲಿಂದ ವಿಭಿನ್ನ ರೀತಿಯ ಸಂಬಂಧಗಳು ಹೆಣೆದುಕೊಳ್ಳಲಾರಂಭಿಸುತ್ತವೆ.

ಬದುಕು ಮುಂದೆ ಸಾಗಿದಂತೆಲ್ಲ ನಮ್ಮ ಆಸೆ, ಆಶಯಗಳು ಹೊಸದಿಕ್ಕಿನತ್ತ ಮುಖ ಮಾಡುತ್ತವೆ. ಅನೇಕ ಗೆಳೆಯರ, ಗೆಳತಿಯರ ಸೇರ್ಪಡೆಯಾಗುತ್ತದೆ. ಪರಿಚಯವೇ ಇಲ್ಲದ ಒಂದು ಜೀವ ನಮ್ಮ ಬಾಳ ಬದುಕಿನ ಸಂಗಾತಿಯಾಗುತ್ತದೆ. ಅಲ್ಲಿಂದ ಮತ್ತೊಂದು ಅಧ್ಯಾಯಕ್ಕೆ ನಮ್ಮ ಜೀವನ ತೆರೆದುಕೊಳ್ಳುತ್ತದೆ. ಇದು ಒಂದು ಜೀವನ ಚಕ್ರ. ಬಹುತೇಕವಾಗಿ ಎಲ್ಲರ ಜೀವನದಲ್ಲಿ ಘಟಿಸುವ ಘಟನೆಗಳೇ ಇವು.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ..ನಮ್ಮ ಜೀವನ ಸಂಗಾತಿಗಿಂತಲೂ ನಮಗೆ ತುಂಬಾ ಇಂಟ್ರೆಸ್ಟಿಂಗ್ ಆಗಿ ಕಾಣುವ ಕ್ಯಾರೆಕ್ಟರ್ ಅಂದರೆ ಅವರ ಅಪ್ಪ. ಒಂದು ಸಣ್ಣ ಕಾರಣ ಸಿಕ್ಕರೆ ಸಾಕು, ನಾವು ಅದರ ಎಳೆಯನ್ನ ಹಿಡಿದುಕೊಂಡು ಅವಳ ಅಪ್ಪನನ್ನ ಗೇಲಿ ಮಾಡಲು ಆರಂಭಿಸಿಬಿಡುತ್ತೇವೆ. ಅದು ಖಂಡಿತವಾಗಿಯೂ ಯಾವುದೇ ದ್ವೇಷದಿಂದ ಕೂಡಿದ ಗೇಲಿಯಾಗಿರುವುದಿಲ್ಲ. ಅಲ್ಲಿ ಸಲುಗೆ ಇರುತ್ತದೆ, ಗೌರವವಿರುತ್ತದೆ. ಅದಕ್ಕೆ ಪೂರಕ ಎನ್ನುವಂತೆ ಅವರು ಸಹ ಕೆಲವು ಎಡವಟ್ಟುಗಳನ್ನ ಮಾಡಿ ನಮ್ಮ ಅಪಹಾಸ್ಯಕ್ಕೆ ಮೆಲಿಂದ ಮೇಲೆ ಗುರಿಯಾಗುತ್ತಿರುತ್ತಾರೆ. ನನ್ನ ಜೀವನದಲ್ಲಿಯೂ ಸಹ ಇಂತಹ ಅನೇಕ ಕುತೂಹಲಕಾರಿಯಾದ ಘಟನೆಗಳು ನಡೆದಿವೆ. ಅವುಗಳನ್ನು ನನ್ನ ಬ್ಲಾಗುಗಳಲ್ಲು ದಾಖಲಿಸುತ್ತಿದ್ದೇನೆ. ಅವುಗಳಿಗೆ ನೀವು ಕತೆಗಳೆನ್ನಬಹುದು, ಲಲಿತ ಪ್ರಬಂಧಗಳೆನ್ನಬಹುದು ಅಥವಾ ದಾರಿಯಲ್ಲಿ ಕಂಡ ಮುಖಗಳೆನ್ನಬಹುದು...ಅದು ನಿಮ್ಮ ಆಯ್ಕೆಗೆ ಬಿಟ್ಟಿದ್ದು...ಓದಿ...ನಿಮ್ಮ ಅಭಿಪ್ರಾಯ ತಿಳಿಸಿ...


Saturday, December 25, 2010

ಬೇಲಿ ಮತ್ತು ಹೊಲ




ಬೇಲಿ ಮತ್ತು ಹೊಲ ನಾಟಕದ ರಂಗಸಜ್ಜಿಕೆ ಕಾರ್ಯದಲ್ಲಿ ನಿರತರಾಗಿರುವ ಕಲಾವಿದರು