ನಮ್ಮ ಗತ ವೈಭವದ ನೆನಪುಗಳೇ ಹಾಗೆ...ಮಳೆ ನಿಂತರು ಮಳೆಯ ಹನಿ ನಿಲ್ಲದಂತೆ ಸದಾ ನಮ್ಮ ಮನಸ್ಸನ್ನು ಒದ್ದೆ ಯಾಗಿಸುವ ನೆನಪುಗಳ ಹಾಗೆ...
ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಗೆ ಸಾರ್ವಜನಿಕ ಸಂಪರ್ಕಾಧಿಕರಿಯಾಗಿ ಸೇರಿಕೊಂಡ ದಿನಗಳ ಮಾತುಗಳಿವು...ಬಹುಶಃ ನನ್ನ ಸ್ನೇಹಿತರ ವಲಯದಲ್ಲಿಯೇ ನನ್ನಷ್ಟು ಹಂಪಿಯನ್ನು ನೋಡಿದವರಿಲ್ಲ...ನಾನಲ್ಲಿದ್ದ ಮೂರೂವರೆ ವರ್ಷಗಳ ಅವಧಿಯಲ್ಲಿ ಏನಿಲ್ಲವೆಂದರೂ ಕನಿಷ್ಠ ಪಕ್ಷ ೨೦೦ ಬಾರಿ ಅಲ್ಲಿಗೆ ಹೋಗಿ ಬಂದಿದ್ದೇನೆ..ಅಲ್ಲಿನ ಪ್ರತಿಯೊಂದು ಕಲ್ಲು ಬಂಡೆಗಳ ಜೊತೆ ಮಾತನಾಡಲು ಪ್ರಯತ್ನಿಸಿದ್ದೇನೆ...ಪ್ರತಿ ಬಾರಿ ಹೋದಾಗಲೂ ಅವು ತಮ್ಮ ಬೇರೆ ಬೇರೆ ಕಥೆಗಳನ್ನು ಹೇಳಿದಂತೆ ಭಾಸವಾಗುತ್ತದೆ...ವಿಜಯನಗರ ಸಾಮ್ರಾಜ್ಯದ ಸಿಹಿ - ಕಹಿ ಅನುಭವಗಳ ಗೊಂಚಲನ್ನು ನಮ್ಮ ಮುಂದೆ ಬಿಚ್ಚಿಡುತ್ತಿರುವಂತೆ ಭಾಸವಾಗುತ್ತದೆ...ಕೆಲಬಾರಿ ಕಲ್ಲುಗಳ ಯಶೋಗಾಥೆ ಅದ್ಭುತ ಎನಿಸಿದರೆ ಮತ್ತೆ ಕೆಲವೊಮ್ಮೆ ಅವುಗಳ ಬಗ್ಗೆ ಮರುಕ ಹುಟ್ಟಿಸುತ್ತದೆ...
ಪುರಂಧರ ಮಂಟಪ ನನಗೆ ಬಹಳ ಇಷ್ಟವಾದ ಸ್ಥಳ...ಯಾರ ಹಂಗು ಇಲ್ಲದೆ..ಪ್ರಶಾಂತವಾಗಿ ಹರಿಯುತ್ತಿರುವ ತುಂಗಭದ್ರೆ..ಅದರ ದಡದಲ್ಲಿ ಅತ್ಯದ್ಭುತವಾಗಿ ನಿರ್ಮಿಸಲ್ಪಟ್ಟಿರುವ ಪುರಂಧರ ಮಂಟಪ ರಣ ರಣ ಬಿಸಿಲಿನ ಬೇಗೆಯ ಮಧ್ಯೆಯೂ ಸಹ ತಂಪಾದ ಸ್ಥಳವೆಂದರೆ ಹಂಪಿಯಲ್ಲಿ ಬಹುಶಃ ಇದೊಂದೆ ಇರಬೇಕು...ಗಂಟೆಗಟ್ಟಲೆ ಅಲ್ಲಿ ಕುಳಿತರು ನೀರಿನ ಜುಳು-ಜುಳು ನಾದವನ್ನು ಹೊರತು ಪಡಿಸಿದರೆ ನಿಮಗೆ ಅಲ್ಲಿ ಬೇರೇನೂ ಕೇಳ ಸಿಗದು...ಅಲ್ಲೊಂದು ಇಲ್ಲೊಂದು ಪಕ್ಷಿಗಳ ಕಲರವ..ವಿದೇಶಿಯರ ಸರಸ ಸಲ್ಲಾಪ ಇವುಗಳ ಮಧ್ಯೆ ಇಡೀ ಜಗತ್ತನ್ನು ಮರೆತು ಹಾಯಾಗಿ ಇಲ್ಲಿ ಇದ್ದು ಬಿಡಬಹುದು...ಆದರೆ ನೀವು ನಿಸರ್ಗದ ಭಾವನೆಗಳಿಗೆ ಕಿವಿಗೊಡಬೇಕು...
೧೯೯೫ ರ ದಿನಗಳವು....ಪ್ರತಿ ವರ್ಷ ನಡೆಯುವ ಹಂಪಿ ಉತ್ಸವದಂತೆ ಆ ವರ್ಷ ಕೂಡ ಆ ಹಂಪಿ ಉತ್ಸವದಲ್ಲಿ ಭಾಗವಹಿಸಲು ಧಾರವಾಡದ ತಂಡದೊಂದಿಗೆ ಜೀವದ ಗೆಳೆಯ ಮಧು ದೇಸಾಯಿಯೊಂದಿಗೆ ಅಲ್ಲಿಗೆ ತೆರಳಿದ್ದೆ...ಕೃಷ್ಣಪಾರಿಜಾತ ನಾಟಕಕ್ಕೆ ಬೆಳಕು ವಿನ್ಯಾಸ ಮಾಡುವ ಜವಾಬ್ದಾರಿ ನನ್ನ ಹೆಗಲ ಮೇಲೆ ಹಾಕಿದ್ದ ಗೆಳೆಯ ಬಸವಲಿಂಗಯ್ಯ ಹಿರೇಮಠ...ಆ ನಾಟಕದ ವಿಡಿಯೋ ಚಿತ್ರೀಕರಣದ ಜವಾಬ್ದಾರಿ ಮಧು ವಹಿಸಿಕೊಂಡಿದ್ದ...ಆಗ ನಾನಿನ್ನು ಜಿಂದಾಲ್ ಕಂಪನಿಯನ್ನು ಸೇರಿಕೊಂಡಿರಲಿಲ್ಲ....ನನ್ನ ಆರ್ಥಿಕ ಪರಿಸ್ಥಿತಿಯು ಸಹ ಅಷ್ಟು ಸರಿಯಾಗಿರಲಿಲ್ಲ...ನನ್ನ ಎಲ್ಲ ಕರ್ಚು ವೆಚ್ಚಗಳನ್ನು ಯಥಾವತ್ತಾಗಿ ಮಧು ನಿರ್ವಹಿಸಿದ್ದ...
ನಾಟಕ ಶುರುವಾಗಲು ಇನ್ನು ೫ ಗಂಟೆ ಬಾಕಿ ಇತ್ತು..ಸಂಜೆಯ ೪ ಗಂಟೆಯ ಸಮಯ.....ಬಿಸಿಲಿನ ಧಗೆ ಇನ್ನು ಹಾಗೆ ಇತ್ತು...ನಾನು ಮಧು ಇಬ್ಬರು ಸೇರಿಕೊಂಡು ಹಂಪಿಯ ವಿರುಪಾಕ್ಷ ದೇವಸ್ತಾನದ ಹಿಂದಿರುವ ತುಂಗಾ ನದಿ ದಾಟಿ ಎತ್ತರದ ಬೆಟ್ಟದ ಮೇಲಿದ್ದ ರಿಸಾರ್ಟ್ ಒಂದಕ್ಕೆ ಬಂದು ತಲುಪಿದೆವು...ನದಿಯನ್ನು ದಾಟಲು ಬಳಸಿದ ತೆಪ್ಪ...ಅದರಲ್ಲಿ ನಮ್ಮ ಹಾಗು ವಿದೇಶಿಯರ ಮಧ್ಯೆ ನಡೆದ ಹಾಸ್ಯ ಚಟಾಕಿಗಳು..ಎಲ್ಲ ಆ ಕ್ಷಣಕ್ಕೆ ಬಹಳ ಖುಶಿಕೊಡುವ ಸಂಗತಿಗಳಾಗಿದ್ದವು... ಆಗ ನನ್ನ ಇಂಗ್ಲೀಷ್ ಸಹ ತುಂಬ ದುಬಾರಿ...ಮಧುನ ಇಂಗ್ಲೀಷ್ ಅದ್ಭುತ ವಾಗಿತ್ತು...ನಾನು ಮಾತನಾಡುವುದನ್ನು ಕೇಳಿ ಅವನು ತನ್ನಲ್ಲಿಯೇ ಮುಸಿ-ಮುಸಿ ನಗುತ್ತ ಆನಂದಿಸುತ್ತಿದ್ದ...
ರಿಸಾರ್ಟ್ ತಲುಪಿ ಇಬ್ಬರು ಒಂದೊಂದು ಬೀಯರ್ ತರಿಸಿಕೊಂಡು ಅಲ್ಲಿನ ಪ್ರಕೃತಿಯ ಸೊಬಗನ್ನು ಆನಂದಿಸುತಿದ್ದಂತೆಯೇ ನಮ್ಮ ಮಾತು ನಮ್ಮ ಮುಂದಿನ ನಾಟಕದ ತಯಾರಿಯ ಕಡೆಗೆ ಹೊರಳಿತು..ಆಗ ತಾನೆ ನಾನು ಬಾದಲ್ ಸರ್ಕಾರ್ ರಚಿಸಿದ "ಸ್ಪಾರ್ಟಕಸ" ನಾಟಕವನ್ನು ಯಶಸ್ವಿಯಾಗಿ ನಿರ್ದೇಶಿಸಿ ಅದರ ಮುಂದಿನ ಮರುಪ್ರದರ್ಷನಗಳಿಗೆ ಅಣಿಯಾಗುತ್ತಿದ್ದೆ..."ಧನ್ಯಾ ನೀ ಯಾಕ ಆ ನಾಟಕಾನ್ನ ಈ ಲೋಟಸ್ ಮಹಲ್ನ್ಯಾಗ ಮಡಸ್ಬಾರ್ದು...ಈ ನಾಟಕಕ್ಕ ಅದು ಹೇಳಿ ಮಾಡಿಸಿದ ಜಾಗ..ಮತ್ತ ನಿನ್ನ ಪರಿಶ್ರಮಕ್ಕ ಒಂದು ಚೊಲೋ ಹೆಸರು ಬರ್ತದ" ಎಂದ...ಅಂದಿನಿಂದ ಇಂದಿನವರೆಗೆ ಅದು ಕೇವಲ ಕನಸಾಗಿ ಮಾತ್ರ ಉಳಿದಿದೆ...
ಕನಸು ಕಾಣುವುದರಲ್ಲಿ ನಾನು ಮತ್ತು ಮಧು ನಿಸ್ಸೀಮರು...ಅದಕ್ಕೇನು ಟ್ಯಾಕ್ಸ್ ಕೊಡಬೇಕಾಗಿಲ್ಲಲೇ ಧನ್ಯಾ ಎನ್ನುತ್ತಿದ್ದ...ನಾನು ಹೌದು ಎನ್ನುತ್ತಾ ಮತ್ತೆ ಮುಂದಿನ ಕನಸು ಕಾಣುವುದರಲ್ಲಿ ಮಗ್ನನಾಗುತ್ತಿದ್ದೆ...
ಮುಂದೆ ನಾನು ೨೦೦೦ ನೆ ಇಸವಿಯಲ್ಲಿ ಬೆಂಗಳೂರಿಗೆ ಕಾಯಂ ಆಗಿ ಬಂದು ನೆಲೆಸಿದೆ ಆದರೆ ನನ್ನ ಮತ್ತು ಮಧುನ ಗೆಳೆತನ ಅಷ್ಟೆ ಗಟ್ಟಿಯಾಗುತ್ತ ಸಾಗಿತು...೨೦೦೪ ರಲ್ಲಿ ನಾನು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದಾಗ ಮೊದಲು ವಿಷಯ ತಿಳಿಸಿದ್ದು ಮಧುಗೆ...ಅವನು ಪಟ್ಟ ಆನಂದಕ್ಕೆ ಪಾರವೇ ಇರಲಿಲ್ಲ....ನನ್ನ ಹೊಸಮನೆಯ ಗೃಹ ಪ್ರವೇಶಕ್ಕೆ ತಪ್ಪದೆ ಬಂದ....ನನ್ನ ಅವನು ಇಬ್ಬರು ಸೇರಿ ಹಂಪಿಯಲ್ಲಿ ಕಳೆದ ದಿನಗಳ ನೆನಪನ್ನೇ ತನ್ನ ಕಲೆಯ ಮೂಲಕ ನನಗೆ ಕಾಣಿಕೆಯಾಗಿ ನೀಡಿದ...ಅದು ನನ್ನ ಮನೆಗೆ ಬರುವ ಪ್ರತಿಯೊಬ್ಬರಿಗೂ ಸ್ವಾಗತ ಕೋರುವ ರೀತಿಯಲ್ಲಿ ಮೊದಲು ಕಾಣುವ ಕಲಾಕೃತಿ....
ಬರಹ ಚೆನ್ನಾಗಿದೆ
ReplyDelete