Saturday, May 23, 2009

ಕಾಂಕ್ರೀಟ್ ಕಾಡಿನಲ್ಲಿ ಗುಬ್ಬಚ್ಚಿಯ ಕಲರವ...


ನನ್ನ ವಿದ್ಯಾಭ್ಯಾಸವೆಲ್ಲ ಧಾರವಾಡದಲ್ಲಿ ಆದರೂ, ನನ್ನ ಬಹುತೇಕ ರಜಾದಿನಗಳನ್ನು ನಾನು ಕಳೆದಿದ್ದು ನನ್ನ ತಾಯಿಯ ತವರು ಮನೆಯಾದ ಬೆಂಗಳೂರಿನಲ್ಲಿ...ಚಾಮರಾಜಪೇಟೆಯ ಮೂರನೆಯ ಮುಖ್ಯ ರಸ್ತೆಯಲ್ಲಿ ನನ್ನ ತಾತನ ಮನೆ...ಮನೆಯ ಹಿಂಭಾಗದಲ್ಲಿ ಮೂರು ತಿರುವುಗಳನ್ನು ದಾಟಿದರೆ ಒಂದು ಪುಟ್ಟ ಆಟದ ಮೈದಾನ ಅಲ್ಲಿಯೇ ಒಂದು ಪುಟ್ಟ ಮಸೀದಿ...ನಾನು ಗಾಳಿ ಪಟಗಳನ್ನು ಹಾರಿಸಿದ್ದು...ಸೈಕಲ್ ಓಡಿಸಲು ಕಲಿತಿದ್ದು...ಲಗೋರಿ ಆಡಿದ್ದು...ನನಗಿಂತಲು ದೊಡ್ಡವರು ಕ್ರಿಕೆಟ್ ಆಡುತ್ತಿದ್ದಾರೆ.. ಅವರು ಹೊಡೆದ ಚಂಡುಗಳನ್ನು ಹಿಡಿದು ತಂದು ಅವರಿಗೆ ಕೊಡುವುದು...ಹೀಗೆ ನನ್ನ ಬಾಲ್ಯದ ಅನೇಕ ಅವಿಸ್ಮರಣೀಯ ಕ್ಷಣಗಳು ಬೆಂಗಳೂರಿನ ಈ ಮೈದಾನದಲ್ಲಿಯೇ ಕಳೆದಿವೆ..
ಈ ಮೈದಾನದ ಒಂದು ತುದಿಗೆ ಒಂದು ಪುಟ್ಟ ಕಿರಾಣಿ ಅಂಗಡಿಯಿತ್ತು...ಅಂಗಡಿಯ ಮಾಲೀಕ ದಿನವು ತನ್ನ ಅಂಗಡಿಯ ಮುಂದೆ ಕಾಳು-ಕಡಿಗಳನ್ನು ಹಾಕಿದರೆ ಅವುಗಳನ್ನು ತಿನ್ನಲು ಗುಬ್ಬಚ್ಚಿಯ ಗುಂಪು ಬಂದು ಸೇರುತ್ತಿತ್ತು..ಅದನ್ನು ನೋಡುವುದೇ ನಮಗೆ ಒಂದು ಸಡಗರ...ಅವುಗಳ ಚಿಲಿಪಿಲಿ ನಾದ ಅಪ್ಸರೆಯ ಕಾಲಿಗೆ ಕಟ್ಟಿದ ನೂಪುರದಂತೆ ನಮಗೆ ಭಾಸವಾಗುತ್ತಿತ್ತು...ಬಹಳ ಖುಶಿ ಪಡುತ್ತಿದ್ದೆವಾಗ...
ನಂತರದ ದಿನಗಳಲ್ಲಿ ನಾನು ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ನನ್ನ ಮನೆಯ ನನ್ನ ರೂಮಿನಲ್ಲಿ ಒಂದು ಗುಬ್ಬಚ್ಚಿ ಮೊಟ್ಟೆ ಇತ್ತು ಅದನ್ನು ಪೋಷಿಸುತ್ತಿತ್ತು..ಅದನ್ನು ನೋಡುವುದೇ ಒಂದು ಸಡಗರ...ನಂತರ ಮೊತ್ತೆಯಿಮ್ದ ಮರಿಹೊರಗೆ ಬಂದಾಗ ಅದು ಆಯಾ ತಪ್ಪಿ ತನ್ನ ಗುಡಿನಿಂದ ಕೆಳಗೆ ಬಿತ್ತು... ಅದನ್ನು ಅಷ್ಟೆ ಜತನದಿಂದ ಮತ್ತೆ ಗೂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೆ...
ಮುಂದೆ ನಾನು ನೌಕರಿ ಮಾಡಲು ಬೇರೆ ಬೇರೆ ಊರುಗಳನ್ನು ತಿರುಗಾಡುತ್ತ ಹೊರಟಾಗ ಎಲ್ಲಿಯೇ ಆಗಲೀ ಗುಬ್ಬಚ್ಚಿಗಳನ್ನು ಕಂಡರೆ ಅದೇನೋ ಅವುಗಳ ಮೇಲೆ ಮಮತೆ...ಪ್ರೀತಿ. ಈಗ ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನಾನು ನನ್ನ ಸಂಸಾರ ಸಮೇತನಾಗಿ ನೆಲಸಿದಾಗ ಒಂದುಸಲ ಆ ಚಾಮರಾಜ ಪೇಟೆಯ ಮೈದಾನಕ್ಕೆ ಹೋದೆ...ಮೈದಾನ ಪೂರ್ತಿಯಾಗಿ ಬದಲಾಗಿ ಹೋಗಿತ್ತು..ಅಲ್ಲಿ ಇದ್ದ ಮಸೀದಿ ಮಾತ್ರ ಹಾಗೆಯೇ ಇತ್ತು...ಆಟವಾಡಲು ಅಲ್ಲಿ ಯಾವ ಮಕ್ಕಳು ಇರಲಿಲ್ಲ...ಗುಬ್ಬಚ್ಚಿಗಳಿಗೆ ಕಾಳುಹಾಕುವ ಅಂಗಡಿ ಮತ್ತು ಅದರ ಮಾಲೀಕ ಇಬ್ಬರು ನಾಪತ್ತೆಯಾಗಿದ್ದರು...ಹೀಗಾಗಿ ಅಲ್ಲಿ ಗುಬಚ್ಚಿಯ ಕಲರವವು ಇರಲಿಲ್ಲ...ಅಪ್ಸರೆಯ ಕಾಲಿನ ನುಪುರದ ಸದ್ದು ಕೂಡ ಮಾಯವಾಗಿತ್ತು...ಮನಸ್ಸಿಗೆ ಬಹಳ ಬೇಜಾರಾಯ್ತು..ಕಾಂಕ್ರೀಟ್ ನಗರದಲ್ಲಿ ಮಾನವ ತನ್ನ ಸಹಜತೆಯನ್ನು ಹರಾಜಿಗಿಟ್ಟಿದ್ದು ಸಾಬೀತಾಗಿತ್ತು....
ನಿನ್ನೆಯತನಕ ಅಂದರೆ ಮೇ ೨೨ ರ ತನಕ ಬೆಂಗಳೂರಿನಲ್ಲಿ ನಾನು ಗುಬ್ಬಚ್ಚಿಯನ್ನು ನೋಡಿರಲಿಲ್ಲ..ನನ್ನ ಎಲ್ಲ ಗೆಳೆಯರನ್ನು ಕೆಳುತಿದ್ದೆ..ಬೆಂಗಳೂರಿನಲ್ಲಿ ಗುಬ್ಬಚ್ಚಿಗಳೆಲ್ಲಿವೆ ಎಂದು.... ಎಲ್ಲೂ ಕಾಣ ಸಿಗಲಿಲ್ಲ... ಮಮ್ಗಳುರಿಗೆ ಹೊರಡಲು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು, ನನ್ನ ವಿಮಾನದ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ...ಅದೇ ಅಪ್ಸರೆಯ ನೂಪುರದ ಸದ್ದು ಕಿವಿಗೆ ಬಿದ್ದಂತಾಗಿ ತಲೆ ಎತ್ತಿ ನೋಡಿದಾಗ..ಎದುರುಗಿನ ಪುಟ್ಟ ಗಿಡದ ಮೇಲೆ ಎರಡು ಗುಬ್ಬಚ್ಚಿಗಳು ಚುಂಯ್ ಗುಡುತ್ತಿದ್ದವು... ಆಹಾರಕ್ಕಾಗಿ ಅತ್ತಿಂದಿತ್ತ ಹಾರಾಡುತ್ತಿದ್ದವು...ಪರಸ್ಪರ ಪ್ರೀತಿ ಮಾಡುತ್ತಿದ್ದವು...ಸುಮಾರು ಹೊತ್ತು ಅವುಗಳ ಕಲರವ ನೋಡುತ್ತಾ ನನ್ನನ್ನು ನಾನೆ ಮರೆತಿದ್ದೆ...ತಕ್ಷಣ ಮೈಕ್ನಲ್ಲಿ ಒಂದು ಹೆಣ್ಣು ಧ್ವನಿ ಕೇಳಿಬರುತ್ತಿತ್ತು..."ಮಂಗಳೂರಿಗೆ ಹೊರಡುವ ಪ್ರಯಾಣಿಕರು ತಮ್ಮ ವಿಮಾನದತ್ತ ಸಾಗಬೇಕು" ಎಂಬ ಆಕಾಶವಾಣಿ....ನಾನು ನಿಧಾನವಾಗಿ ಗುಬ್ಬಚ್ಚಿಗಳ ಕಲರವ ಕೇಳುತ್ತಾ...ನನ್ನ ವಿಮಾನದತ್ತ ಹೆಜ್ಜೆಹಾಕಿದೆ....ನಮ್ಮ ಜೀವನ ಎಷ್ಟು ಯಾಂತ್ರೀಕೃತ ಗೊಂಡಿದೆ ಅಲ್ಲವೇ?

2 comments:

  1. Akkareya Sir,
    gubbigala bagge chennagi bardiddeeri.
    bangalore li naavu fast life ge daasaraagi estondu sogasannu kaledukondevalla?
    very bad...
    irali...nimma haleya madhura nenapugalannu avagavaaga heegeee baritaa hogi...
    Manikanth.

    ReplyDelete
  2. ನಿಮ್ಮ ಮುಗ್ದತೆ ಮತ್ತು ಪರಿಸರದ ಕುರಿತು ನಿಮಗಿರುವ ಆಸ್ತೆ ಕಂಡು ಖುಷಿಯಾಯ್ತು..

    ReplyDelete