Sunday, June 28, 2009

ದೇವಮಾನವರಲ್ಲಿ ಸ್ವಾತಂತ್ರ್ಯ ದೇವಿಯ ಕನಸು ಕಂಡ ಶಬ್ದಗಾರುಡಿಗ....
ನಾನು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಗಿನ ಮಾತುಗಳಿವು...೧೯೮೦ ರ ಜೂನ್ ತಿಂಗಳು..ಆಗ ತಾನೆ ಶಾಲೆ ಆರಂಭವಾಗಿತ್ತು..ಅದೇನೋ ಒಂದು ತರಹದ ಹಬ್ಬದ ವಾತವರಣ...ಭಾರತದ ಕೈಗಾರಿಕಾ ಕ್ರಾಂತಿಯ ಹರಿಕಾರ ಲಕ್ಷಣರಾವ್ ಕಿರ್ಲೋಸ್ಕರ್ ಅವರ ಜನ್ಮ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು ನಮ್ಮ ಶಾಲೆಯಲ್ಲಿ...


ನಮಗೆ ಲೋಕುರ್ ಮೇಡಂ ಕ್ಲಾಸ್ ಟೀಚರ್ ಆಗಿದ್ದರು...ಒಂದು ದಿನ ಬಂದವರೇ ನನ್ನ ಕೈಯ್ಲಿ ಒಂದು ಪುಸ್ತಕವನ್ನು ನೀಡಿ "ನಾಳೆ ಇದನ್ನ ಓದಿಕೊಂಡು ಬಾ...ಭಾಷಣ ಸ್ಪರ್ಧಾ ಅದ ಅದರೊಳಗ ನೀ ಮಾತನಾಡಬೇಕು" ಎಂದರು...ಬಹುಶಃ ನಾನು ನಮ್ಮ ಕ್ಲಾಸಿಗೆ ಮಾನಿಟರ್ ಆಗಿದ್ದರಿಂದ ಈ ಜವಾಬ್ದಾರಿ ನನಗೆ ನೀಡಿದ್ದರೋ ಏನೋ ಗೊತ್ತಿಲ್ಲ... ಮನೆಗೆ ತೆರಳಿ, ಪುಸ್ತಕ ಓದಿ, ಅದನ್ನು ಸಾಧ್ಯವಾದಷ್ಟು ಕಂಠ ಪಾಠ ಮಾಡಿ..ಮಾರನೆ ದಿನ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಷಣ ಮಾಡಿದ್ದು ಆಯ್ತು..ನಮಗೆಲ್ಲ ಒಂದು ಪೆಪ್ಪರ್ ಮಿಂಟ್ ಕೊಟ್ಟಿದ್ದರು ಆಗ...


ಖುಷಿಯಿಂದ ಅದನ್ನು ತಿನ್ನುತ್ತಾ ಕ್ಲಾಸಿಗೆ ಬಂದು ಮತ್ತೆ ನಂ ಆಟ ಪಾಠ ಎಂದು ನಾವು...ಮಾರನೆಯ ದಿನ ಲೋಕುರ್ ಮೇಡಂ ಕ್ಲಾಸಿಗೆ ಬಂದವರೇ ನನ್ನನ್ನು ತಬ್ಬಿಕೊಂಡು ಭಾಷಣ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂದಿರುವುದಾಗಿ ಹೇಳಿದರು...ಅದೆಂದರೆ ಏನು ಎಂದು ತಿಳಿಯುವ ವಯಸ್ಸು ನಮ್ಮ ದಾಗಿರಲಿಲ್ಲ ಮತ್ತು ಕುತೂಹಲ ಸಹ ನಮ್ಮಲ್ಲಿ ಇರಲಿಲ್ಲ...


ಇದನ್ನೆಲ್ಲಾ ಯಾಕೆ ನಾನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದರೆ...ಪ್ರಸ್ತುತ ಸ್ಪರ್ಧೆಯಲ್ಲಿ ನಮಗೆ ಬಹುಮಾನ ನೀಡಿ ನಮ್ಮ ಬೆನ್ನು ಸವರಿದವರು ದ.ರಾ. ಬೇಂದ್ರೆ...ಮುಂದೆ ೧೯೮೧ ರಲ್ಲಿ ಅವರು ನಿಧನರಾದಾಗ ನಮಗೆ ಶಾಲೆಗೆ ರಜೆ ನೀಡಿದ್ದರು...ನಾವು ರಜೆಯನ್ನು ಆನಂದಿಸಿದ್ದೆವೆಯೇ ಹೊರತು ದ.ರಾ.ಬೇಂದ್ರೆ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರಲಿಲ್ಲ...


ಈ ಘಟನೆ ನೆನಪಾದಾಗ ಏನೋ ಒಂದು ತರಹದ ಕಸಿವಿಸಿ ಯಾಗುತ್ತದೆ...ಅವರ ಮೂಡಲ ಮನೆಯ ಮುತ್ತಿನ ನೀರಿನ ಎರಕವ ಕಂಡಾಗ ಆ ಶಬ್ದ ಗಾರುಡಿಗನ ನೆನಪು ಕಾಡುತ್ತದೆ...ನಾಕು ತಂತಿಯ ಆವು ಈವಿನ ಹಾಡನ್ನು ಓದಿದಾಗ ಅವರಲ್ಲಿ ಅಡಗಿರುವ ಸಂಖ್ಯಾಶಾಸ್ತ್ರ ಪಂಡಿತನ ಪರಿಚಯವಾಗುತ್ತದೆ...ಅವರ ದೇವ ಮಾನವರೆಲ್ಲ ಕಂದ ಕನಸೇ ಬಾರೆ ಎಂದು ಹಾಡುತ್ತಾ ಕುಳಿತಾದ, ನಮ್ಮ ನರಸತ್ತ ನಾಯಕರಿಗೆ ಅವತಾರ ಪುರುಷನ ಆಗಮನದ ಸೂಚನೆಯನ್ನು ಕೊಡುವ ಒಬ್ಬ ನಾಯಕನನ್ನು ಕಂಡ ಅನುಭವ...


ಇಂದು ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ..ಅಂತಹ ಮಹಾನ್ ಕವಿಯ ಕೈಗಳು ನನ್ನ ಬೆನ್ನ ಮೇಲೆ ಹರಿದಾಡಿವೆ..ಧಾರವಾದದಲ್ಲಿದ್ದು ನಿಜಕ್ಕೂ ಧನ್ಯನಾದೆ ಎಂದೆನಿಸುತ್ತಿದೆ....

No comments:

Post a Comment