Thursday, December 10, 2009

ಸಮಸ್ಯೆಗಳ ಬಗ್ಗೆ ಕಾಳಜಿ ತೋರದಿರುವವರಿಗೆ ಅಧಿಕಾರ ಬೇಕಾಗಿದೆ....

ರಂಗಾಯಣದ ಕುರಿತು ಪ್ರಸ್ತುತ ಸ್ಥಿತಿಗತಿ ಹಾಗೂ ಅದಕ್ಕೆ ನಿರ್ದೇಶಕರ ನೇಮಕ ಕುರಿತಾದ ಆಯ್ಕೆ, ನಿರ್ಧಾರ ಮುಂತಾದವುಗಳು ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ. ಇದು ಒಂದಿಲ್ಲ ಒಂದು ದಿನ ಹೀಗೆ ಬಹಿರಂಗವಾಗಿ ಚರ್ಚೆಯಾಗಲೇ ಬೇಕಿತ್ತು. ಏಕೆಂದರೆ ನಾನು ಈ ಹಿಂದೆ ಹೇಳಿದಂತೆ ರಂಗಾಯಣಕ್ಕೆ ಈಗ ಬೇಕಾಗಿರುವುದು ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆ. ತನ್ಮೂಲಕ ಕನ್ನಡ ರಂಗಭೂಮಿಗೆ ಒಂದು ಹೊಸ ದಿಕ್ಕು ಕಾಣುವಂತಾದರೆ ಅದು ಉತ್ತಮ ಬೆಳವಣಿಗೆ.

ಇತ್ತೀಚೆಗೆ ಶ್ರೀ. ಲಿಂಗದೇವರು ಹಳೆಮನೆಯವರನ್ನು ತರಾತುರಿಯಲ್ಲಿ ರಂಗಾಯಣದ ನಿರ್ದೇಶಕರೆಂದು ಸರಕಾರ ಹೆಸರಿಸಿ, ಅದನ್ನು ಪುಷ್ಠೀಕರಿಸುವಂತೆ ಕನಡ ಮತ್ತು ಸಂಸೃತಿ ಇಲಾಖೆ ಪತ್ರಿಕೆಗಳಿಗೆ ಹೇಳಿಕೆಯನ್ನು ಸಹ ನೀಡಿತ್ತು. ತದ ನಂತರ ಅವರ ಆಯ್ಕೆಯನ್ನು ಪ್ರಶ್ನಿಸಿ, ಅವರಿಗೆ ನಕ್ಸಲರ ಜೊತೆ ನಂಟಿರುವುದನ್ನು ಶಂಕಿಸಿ ಪೊಲೀಸ್ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿದ್ದರ ಕುರಿತು ವರದಿಗಳು ದಾಖಲೆ ಸಮೇತ ಪ್ರಕಟಗೊಂಡವು. ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಹಾಗೂ ಪ್ರಯೋಗಾತ್ಮಕ ಸಂಸ್ಥೆಯಾದ ರಂಗಾಯಣಕ್ಕೆ ಶ್ರೀ. ಹಳೆಮನೆಯವರ ಅನುಭವದ ಹಿನ್ನಲೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಲೇಖನ ಸಹ ಪ್ರಕಟಗೊಂಡಿತು. ಇವೆಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಎಲ್ಲರನ್ನೂ ಗೊಂದಲದಲ್ಲಿ ನೂಕುವಂತೆ ಅದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿ "ಶ್ರೀ. ಹಳೆಮನೆ ಅವರ ಆಯ್ಕೆಯ ಕುರಿತು ಅಧೀಕೃತವಾಗಿ ಆದೇಶ ಹೊರಡಿಸುವುದು, ಅವರನ್ನು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನಿರ್ದೇಶಕರೆಂದು ಅಧಿಕಾರ ಸ್ವೀಕರಿಸುವಂತೆ ಆಹ್ವಾನಿಸುವುದು ಎಲ್ಲ ಸರಕಾರದ ಕೈಯಲ್ಲಿದೆ. ಈಗ ನಾವು ಕೇವಲ ಸರಕಾರದ ನಿರ್ಧಾರವನ್ನು ಕಾಯ್ದು ನೋಡಬೇಕಷ್ಟೇ" ಎಂಬಂತಹ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡತೊಡಗಿದರು.

ಇದಕ್ಕೆ ತದ್ವಿರುದ್ಧವಾಗಿ ಕೆಲವು ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ಸರಕಾರದ ಈ ರೀತಿಯ ನಿರ್ಧಾರ ರಾಜಕೀಯ ಕುತಂತ್ರದಿಂದ ಕೂಡಿದ್ದು. ಪ್ರಗತಿಪರ ಚಿಂತಕರೆಲ್ಲ ನಕ್ಸಲರೊಂದಿಗೆ ನಂಟನ್ನು ಹೊಂದಿದವರೆಂದು ಸರಕಾರ ಯಾವತ್ತೂ ಬಿಂಬಿಸುತ್ತ ಬಂದಿದೆ. ಇದು ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮುಂತಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡತೊಡಗಿದರು. ಇದೂ ಸಹ ಒಂದು ರೀತಿಯಲ್ಲಿ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನವೇ. ಏಕೆಂದರೆ ಯಾರೂ ಸಹ ರಂಗಾಯಣದ ಮೂಲ ಸಮಸ್ಯೆಗಳ ಕುರಿತು ಮಾತನಾಡಲು ತಯಾರಿಲ್ಲ. ರಂಗಾಯಣವನ್ನು ಆಡಳಿತಾತ್ಮಕವಾಗಿ ನೋಡಿಕೊಳ್ಳಲು ಒಬ್ಬ ಶಕ್ತ ಅನುಭವಿ ನಿರ್ದೇಶಕರ ಅಗತ್ಯವಿರುವಂತೆಯೇ, ಅದನ್ನು ಕ್ರಿಯಾತ್ಮಕವಾಗಿ ಮುನ್ನಡೆಸುವ ನಾಯಕನ ಅವಶ್ಯಕತೆ ಕೂಡ ಖಂಡಿತವಾಗಿ ಇದೆ. ಇದೆಲ್ಲವನ್ನು ಬಿಟ್ಟು, ಈಗ ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂಬಂತಹ ಹೇಳಿಕೆಗಳು ಎಷ್ಟರ ಮಟ್ಟಿಗೆ ಸೂಕ್ತ?

ರಂಗಾಯಣ ಆರಂಭವಾದಾಗಿನಿಂದ ಇಂದಿನ ವರೆಗೆ ೨೧ ವರ್ಷಗಳ ಕಾಲ ಅಲ್ಲಿನ ಕಲಾವಿದರು ಯಾವುದೇ ರಾಜಕಾರಣಿಗಳಿಗೆ ಕಡಿಮೆ ಇಲ್ಲದಂತೆ ರಾಜಕೀಯ ಮಾಡುತ್ತ, ನಿರ್ದೇಶಕರ ಆಯ್ಕೆಯಲ್ಲಿ ತಮ್ಮ ಪಾತ್ರವೂ ಸಹ ಅತೀ ಮುಖ್ಯವೆಂದು ಬಿಂಬಿಸುವ ಕಾರ್ಯ, ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ಹಾಕಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕರಂತೆ ವರ್ತಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಲೋಕದ ವಿಪರ್ಯಾಸಗಳಲ್ಲೊಂದು. ನಿರ್ದೇಶಕರ ಆಯ್ಕೆ ಪ್ರಕ್ರೀಯೆಯಲ್ಲಿ ಆದ ಗೊಂದಲಗಳಿಗೆ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಅನೇಕ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರು ಹೇಗೆ ವರ್ತಿಸಬೇಕು, ಅವರು ಮಾಡಬೇಕಾದ ಕೆಲಸ ಕಾರ್ಯಗಳೇನು ಎಂಬ ಕುರಿತು ಏನಾದರೂ ಚೌಕಟ್ಟುಗಳನ್ನು ಹಾಕಿ ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುವಂತೆ ಆದೇಶಿಸಿದ್ದಾರೆಯೇ? ಅಥವಾ ಅದನ್ನು ನೇರವಾಗಿ ಸರಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆಯೇ? ಒಂದು ವೇಳೆ ಆ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದರೂ ಅದು ಕಾರ್ಯ ರೂಪಕ್ಕೆ ಯಾಕೆ ಬರುತ್ತಿಲ್ಲ ಎಂದು ಸಂಬಂಧಪಟ್ಟವರ ಕೊರಳ ಪಟ್ಟಿಹಿಡಿದು ಕೇಳಲು ಹಿಂಜರಿಕೆ ಏಕೆ? ಈ ರೀತಿಯ ಹೇಳಿಕೆಗಳನ್ನು ನೀಡಿ ತಮ್ಮ ಹೆಸರು ಚಾಲ್ತಿಯಲ್ಲಿರಬೇಕೆಂಬ ಬಯಕೆಯೇ ಅಥವಾ ಇಚ್ಛಾ ಶಕ್ತಿಯ ಕೊರತೆಯೇ?

ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮತ್ತು ಅದನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ನಮ್ಮ ಕಾಳಜಿ ಕೇವಲ ಯಾವುದೇ ವಿಚಾರ ಸಂಕಿರಣಗಳಿಗೆ, ವೇದಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ. ಈಗ ರಂಗಾಯಣದ ಪರಿಸ್ಥಿತಿಯನ್ನು ಕುರಿತು ಎಲ್ಲ ಸಾಂಸ್ಕೃತಿಕ ಕಾಳಜಿಯುಳ್ಳ ಜನ ಸಾಮಾನ್ಯರು ಬೀದಿಗಿಳಿಯುವ ಮೊದಲೇ ಅದಕ್ಕೊಂದು ಸರಿಯಾದ ಮಾರ್ಗವನ್ನು ತೋರುವ ಅನಿವಾರ್ಯತೆ ಇದೆ. ಸರಕಾರ ರಂಗಾಯಣಕ್ಕೆ ಪ್ರತಿ ವರ್ಷ ವ್ಯಯಿಸುತ್ತಿರುವ ಹಣ ಬಿಳಿ ಆನೆಯನ್ನು ಸಾಕದಂತಾಗದೇ, ಆ ಹಣದ ಸಾರ್ಥಕ ಉಪಯೋಗವಾಗಿ ಇಡೀ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ನಾಂದಿಯಾಗಲಿ.

1 comment:

  1. ಎಲ್ಲ ಅಯ್ಕೆಗಳ ಹಾಗೂ ಆಯ್ಕೆಯಾಗದ ಕ್ರಿಯೆ ಹಾಗೂ ಪ್ರಕ್ರಿಯೆಯಲ್ಲಿ ಸ್ವಾರ್ಥ ರಾಜಕೀಯ ದುರುದ್ದೇಶಗಳು ಈಗೀನ ದಿನಮಾನದಲ್ಲಿ ಸಾಮಾನ್ಯ. ಒ೦ದು ಸ್ವಹಿತ ಲಾಬಿ ಎಲ್ಲದರ ಹಿ೦ದೆ ಕೆಲಸ ಮಾಡುತ್ತಾ ಒತ್ತಡ ಹೇರುತ್ತಲೇ ಇರುತ್ತದೆ. ಇ೦ತಹುದರಲ್ಲಿ ಅಪ್ಪಟ ಪ್ರತಿಭೆಗಳಾಗಲಿ ಅಥವಾ ರ೦ಗದ ಕಾಳಜಿಯ ಜನ ಗದ್ದುಗೆಗೆ ಏರುವ ಸ೦ಭವ ಕಡಿಮೆಯೇ. ತಮ್ಮ ಕಾಳಜಿ ನಿಜಕ್ಕೂ ಅರ್ಥಪೂರ್ಣ ಅದರ್‍ಏ ಕಿವುಡು ರಾಜರ ಮು೦ದೆ ಅರಣ್ಯರೋಧನವೆನಿಸುತ್ತದೆ. ರ೦ಗಭೂಮಿ ಜನ ಒಟ್ಟಾದರೇ ಪ್ರಗತಿ ಬದಲಾವಣೆ ಸಾಧ್ಯ. ಅದರೇ ಸ್ವಹಿತ ಸ್ಫರ್ಧಾಳುಗಳ ನಡುವೆ ಒಮ್ಮತ ಸಾಧ್ಯವೇ?
    ಜಯಮ್ಮನವರ ಬದಲಾವಣೇಗೆ ಕಾರಣ ಏನೇ೦ದು ತಿಳಿಯಲಿಲ್ಲ?

    ReplyDelete