Monday, December 14, 2009

ಪಾಪ ಮುಗ್ಧರು..ಬರೆಯಲಿ ಬಿಡಿ.....!!!ಇತ್ತೀಚೆಗೆ ರಂಗಾಯಣ ಕುರಿತಾಗಿ ಸರಣಿ ಲೇಖನಗಳು ಬರಲಾರಂಭಿಸಿದ ಮೇಲೆ ಮೈಸೂರಿನಲ್ಲಿ ರಂಗ ಕಲಾವಿದರು, ಸಾಹಿತಿಗಳು, ರಂಗಾಯಣದ ಫಲಾನುಭವಿಗಳಲ್ಲಿ ರಂಗಾಯಣದ ಕಲಾವಿದರ ಬಗ್ಗೆ ಅನುಕಂಪದ ಅಲೆಗಳು ಏಳಲಾರಂಭಿಸಿವೆ.
"ರಂಗಾಯಣದ ಕಲಾವಿದರ ಬಗ್ಗೆ ಈ ರೀತಿಯಾಗಿ ಬರೆಯಬಾರದಾಗಿತ್ತು. ಅವರಿಗೆ ಸರಕಾರಿ ಗುಮಾಸ್ತರಿಗೆ ಸಿಗುವ ಸಂಬಳಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತಿದೆ. ಅವರ ಬದುಕು ತುಂಬಾ ಕಷ್ಟದಲ್ಲಿದೆ"...ಹೀಗೆ ಹತ್ತು ಹಲವು ಮಾತುಗಳು ಮೈಸೂರಿನಿಂದ ಕೇಳಿ ಬರುತ್ತಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ರಂಗಾಯಣದ ರಗಲೆಗಳ ಕುರಿತು ಸರಣಿಯಾಗಿ ಲೇಖನಗಳು ಬಂದ ನಂತರ, ಇದನ್ನು ಖಂಡಿಸಲೆಂದೇ ಮೈಸೂರಿನಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ದುರಂತವೆಂದರೆ ಇದೇ ರಂಗಕರ್ಮಿಗಳು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚೆನಡೆಸಲು ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಇದುವರೆಗೆ ಮಾಡದೇ ಇರುವುದು.ರಂಗಾಯಣದ ಕಲಾವಿದರೊಬ್ಬರು ಇತ್ತೆಚೆಗೆ ಬೆಂಗಳೂರಿಗೆ ಬಂದು, ನನ್ನ ಕೆಲ ರಂಗ ಮಿತ್ರರೊಂದಿಗೆ ಚರ್ಚೆ ನಡೆಸಿದರೆಂಬ ಸುದ್ದಿಯೂ ಬಂತು. ಅವರ ಪ್ರಕಾರ ಪತ್ರಿಕೆಗಳಲ್ಲಿ ರಂಗಾಯಣದ ಕುರಿತು (ವಿರುದ್ಧವಾಗಿ) ಬರೆಯುತ್ತಿರುವವರೆಲ್ಲ ಪಾಪ ಮುಗ್ಧರು, ಅವರಿಗೆ ರಂಗಾಯಣ ಹೇಗೆ ಕಾರ್ಯನಿರ್ವಹಿಸುತ್ತದೆ ಎಬ ಅರಿವಿಲ್ಲ. ಆ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವಂತೆ. ಹಾಗಿದ್ದರೆ ಮೈಸೂರಿನಲ್ಲಿ ಕೆಲ ರಂಗಕರ್ಮಿಗಳು ನಡೆಸಿದ ಸಂವಾದ ಕಾರ್ಯಕ್ರಮ ಏತಕ್ಕೆ? ಇದೊಂದು ವ್ಯವಸ್ಥಿತವಾದ ಸಾಂಸ್ಕೃತಿಕ ಗುತ್ತಿಗೆದಾರರ ವ್ಯವಸ್ಥಿತ ಹುನ್ನಾರ. ಸ್ವಾಮಿ ರಂಗಚಟುವಟಿಕೆಗಳು ಕೇವಲ ರಂಗಾಯಣದಲ್ಲಿ ಮಾತ್ರ ನಡೆಯುತ್ತಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಹ ನಡೆಯುತ್ತಿವೆ. ಅವನ್ನು ನಿಮ್ಮ ತೆರೆದು ಕಣ್ಣುಗಳಿಂದ ನೋಡುವ ಮನಸ್ಸಿರಬೇಕಷ್ಟೇ.
ಒಂದು ಕಡೆಯಿಂದ ಪ್ರಗತಿಪರರು, ಜನಪರ ಹೋರಾಟಗಾರರು, ಅನ್ಯಾಯದ ವಿರುದ್ಧ ದನಿ ಎತ್ತುವವರು ಎಂದೆಲ್ಲಾ ಬೊಗಳೆ ಬಿಡುವ ದಾಸಯ್ಯಗಳೆ, ಮಠಗಳ ಬಾಗಿಲು ಬಡಿದು, ಸ್ವಾಮಿಗಳ ಕಾಲು ಹಿಡಿದು, ತಮ್ಮನ್ನು ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ದುಂಬಾಲು ಬೀಳುತ್ತಾರೆ. ಇನೊಂದೆಡೆ, ಶ್ರೀ. ಲಿಂಗದೇವರು ಹಳೆಮನೆಯವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಿಸಿದ ನಂತರ ಎದ್ದ ಅನೇಕ ವಿವಾದಗಳಿಗೆ ಪತಿಕ್ರೀಯೆಯಾಗಿ ಬೆಂಗಳೂರಿನ ಕೆಲವು ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಅವರ ಬಾಲಬಡುಕರು ಸರಕಾರದಿಂದ ಆದೇಶ ಬರುವವರೆಗೆ ಹಳೆಮನೆಯವರು ಪತ್ರಿಕೆಗಳಿಗೆ ಹೇಳಿಕೆ ನೀಡಬಾರದಿತ್ತು. ಅವರ್ಉ ತುಬಾ ಅವಸರ ಮಾಡಿದರು ಎಂದೆಲ್ಲ ಮಾತನಾಡಿಕೊಂಡು ತಿರುಗುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ ಪತ್ರಿಕೆಯವರು ಏನು ಬೇಕದರೂ ಬರೆದುಕೊಳ್ಳಿ, ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂಬ ದಾರ್ಷ್ಟ್ಯತನದ ಪರಮಾವಧಿ.ಇನ್ನು ಇದಕ್ಕೆ ಸರಕಾರದಿಂದ ಪರಿಹಾರ ಬಯಸ ಹೋದರೆ ಅದೊಂದು ಮೂರ್ಖತನದ ಪರಮಾವಧಿಯಾದೀತು. ಗಣಿ, ಧಣಿ, ರೆಸಾರ್ಟ್ ರಾಜಕೀಯಗಳಲ್ಲಿ ಮುಳುಗಿಹೋಗಿರುವ ನಮ್ಮ ಮುಖ್ಯ ಮಂತ್ರಿ ಹಾಗೂ ಅವರ ಸಹೋದ್ಯೋಗಿಗಳಿಗೆ ಇದು ಅರ್ಥವಾಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆ. ಮತ್ತು ನಾವೆಲ್ಲ ನಮ್ಮು ಮುಂದೆ ನಡೆಯುತ್ತಿರುವ ಸಾಂಸ್ಕೃತಿಕ ಹಗಲು ದರೋಡೆಗೆ ಮೂಕ ಸಾಕ್ಷಿಗಳಾಗುತ್ತಿದೇವೆ.

2 comments:

 1. ರಂಗಾಯಣದ ಬಗ್ಗೆ ಸರ್ಕಾರದ ಹಣದಿಂದ ನಡೆಯುತ್ತಿರುವ ಈ ರಂಗ ಚಟುವಟಿಕೆಯು ಇಡೀ ಕರ್ನಾಟಕದ ರಂಗ ಚಳವಳಿಗೆ ಪೂರಕವಾಗಬೇಕೆಂಬ ರಂಗಾಸಕ್ತನ ಕಳಕಳಿ ಹಾಗೂ ಈ ಕಳಕಳಿಯಿಂದ ಹುಟ್ಟುವ ಸಾತ್ವಿಕ ಸಿಟ್ಟು ನಿಮ್ಮ ಬರಹಕ್ಕೆ ಇದೆ. ಇದನ್ನು ನಾವೆಲ್ಲರೂ ಒಪ್ಪುತ್ತೇವೆ ಹಾಗೂ ಬೆಂಬಲಿಸುತ್ತೇವೆ.
  ಇದೇ ವೇಳೆ ರಂಗಾಯಣದ ನಿರ್ದೇಶಕರಾಗಿ ಲಿಂಗದೇವರು ಹಳೇಮನೆ ನೇಮಕಗೊಂಡ ನಂತರ ನಡೆಯುತ್ತಿರುವ ವಿದ್ಯಾಮಾನಗಳು ಒಂದೇ ತೆರನಾಗಿ ಇಲ್ಲ. ಒಂದು ಕಡೆ ಅವರಿಗೆ ನಕ್ಸಲ್ ಚಳವಳಿಯೊಂದಿಗೆ ಸಂಬಂಧವಿದೆ ಎಂಬ ವರದಿಯೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಯಿತು. ಅವತ್ತೇ ಅರವಿಂದ ನಾವಡ, ನೀವು ಕಾಲಂಗಳಲ್ಲಿ ರಂಗಾಯಣವನ್ನು ತಡವಿಕೊಂಡಿರಿ. ಇದಕ್ಕೂ ಮೊದಲೇ ನೀವು ಕಾಲಂನಲ್ಲಿ ರಂಗಾಯಣದ ಬಗ್ಗೆ ಬರೆದಿದ್ದೀರಿ. ರಂಗಾಯಣದ ರಗಳೆ ಹಳೇ ಮನೆಯವರು ನೇಮಕ ಪ್ರಕಟವಾದ ನಂತರವೇ ರಾಮಾಯಣವಾಗಿ ಮುಂದುವರೆಯುತ್ತದೆ. ಹಳೇಮನೆಯವರ ನೇಮಕವನ್ನು ಒಪ್ಪದ ನಿಮ್ಮ ನಿಲುವು ಸಾಂಸ್ಕೃತಿಕ ಕಾಳಜಿಯಿಂದ ಸರಿ ಇರಬಹುದು. ಇದಕ್ಕೆ ನನ್ನ ಆಕ್ಷೇಪಗಳು ಇದ್ದರೂ ವಾದಕ್ಕಾಗಿಯಾದರೂ ಇದನ್ನು ಒಪ್ಪಿಕೊಳ್ಳೋಣ.
  ಪಾಪ ಮುಗ್ಧರು..ಬರೆಯಲಿ ಬಿಡಿ....!! ಎಂಬ ನಿಮ್ಮ ಬರಹದಲ್ಲಿ ಪ್ರಗತಿಪರರು,ಜನಪರ ಹೋರಾಟಗಾರರು, ಅನ್ಯಾಯದ ವಿರುದ್ಧ ಧ್ವನಿ ತೆಗೆಯುವವರು ಎಂದೆಲ್ಲಾ ಬೊಗಳೆ ಬಿಡುವ ದಾಸಯ್ಯಗಳು ಅಧಿಕಾರಕ್ಕಾಗಿ ಮಠಗಳ ಬಾಗಿಲು ಬಡೆದು, ಸ್ವಾಮಿಗಳ ಕಾಲು ಹಿಡಿಯುತ್ತಿದ್ದಾರೆ ಎಂದು ಸಾರಸಗುಟಾಗಿ ಮೇಲೆ ಹೆಸರಿಸುವ ಎಲ್ಲರನ್ನೂ ಸ್ವಾಮಿಗಳ ಪಾದತಲಕ್ಕೆ ತಳ್ಳಿ ಬಿಟ್ಟಿದ್ದೀರಿ.
  ಪ್ರಗತಿಪರರು, ಜನವರ ಹೋರಾಟಗಾರರು ಎಲ್ಲಾ ಕಾಲದಲ್ಲೂ ವ್ಯವಸ್ಥೆ ವಿರುದ್ಧ ತಮ್ಮ ಹೋರಾಟ ಮುಂದುವರೆಸುತ್ತಾ ಬಂದಿದ್ದಾರೆ. ಕೆಲವು ಸೋಗಲಾಡಿಗಳು ಎರಡೂ ಕಡೆ ತಲೆ ತೋರಿಸಿಕೊಂಡು ಓಡಾಡುತ್ತಿರಬಹುದು. ಇದನ್ನು ಜನರಲೈಜ್ ಮಾಡುವುದು ಸರಿಯಲ್ಲ ಎಂದು ನನ್ನ ಸ್ಪಷ್ಟ ಅಭಿಪ್ರಾಯ.
  ಸಂಘ ಪರಿವಾದ ಪುಂಗಿಗಳ ಇಂತಹ ಕೆಲಸ ಮಾಡುತ್ತಿವೆ. ಅದಕ್ಕೆ ಸೂಕ್ಷ್ಮಮತಿ ರಂಗತಜ್ಞರು ಯಾಕೇ ಒಳಗಾಗಬೇಕು. ಪ್ರಗತಿಪರ, ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಿ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದ ಎಲ್ಲರನ್ನೂ ನಕ್ಸಲ್ ಎಂಬ ಹಣೆ ಪಟ್ಟಿಯನ್ನು ಕಟ್ಟುವ ಕೆಲಸವೊಂದು ಸದ್ದಿಲ್ಲದೇ ಸಂಘಪರಿವಾರದ ಖಾಕಿ ಧರಿಸಿದ ಅಧಿಕಾರಿವರ್ಗ ನಡೆಸುತ್ತಾ ಬಂದಿದೆ. ಸರ್ಕಾರ ಇದಕ್ಕೆ ಪೂರಕವಾಗಿಯೇ ಇದೆ. ಈ ದೇಶದ ಖನಿಜ ಸಂಪತ್ತುನ್ನು ಲೂಟಿ ಹೊಡೆದು ಪ್ರಜಾಪ್ರಭುತ್ವವನ್ನೇ ಸ್ಪಾನ್ಸರ್‍ ಮಾಡುತಿರುವ ಗಣಿ ಧಣಿಗಳು ದೇಶಭಕ್ತರು. ಕಾಡು ಮೇಡುಗಳಲ್ಲಿ ಅಲೆದು ಅದಿವಾಸಿಗಳ ಬಗ್ಗೆ ಹೋರಾಟ ನಡೆಸುವವರು ದೇಶದ್ರೋಹಿಗಳು. ಇದರರ್ಥ ನಕ್ಸಲ್ ರನ್ನು ಬೆಂಬಲಿಸುತ್ತಿದ್ದೇನೆಂದು ಅರ್ಥವಲ್ಲ. ಅವರು ಮುಖ್ಯವಾಹಿನಿಗೆ ಬಂದು ಇಲ್ಲಿಯೇ ಹೋರಾಟ ನಡೆಸಬೇಕು..ಇರಬೇಕು...ಇದ್ದು ಜಯಸಬೇಕು..ಎಂಬ ದಾಸರ ಹಾಡಿನಂತೆ. ಎಂದು ಆಗ್ರಹಿಸುವವರಲ್ಲಿ ನಾನು ಒಬ್ಬ.
  ಪ್ರಗತಿಪರರು ಅವರ ಬಗ್ಗೆ ಸಹನಾಭೂತಿಯಿಂದ ಮಾತನಾಡುವುದೇ ಅಪರಾಧವಾಗಿ ಹೋಗಿದೆ ಈ ದೇಶದಲ್ಲಿ, ದೇಶವನ್ನೇ ದುರ್ಬರ ಸ್ಥಿತಿಗೆ ತಳ್ಳಿ, ಮಧ್ಯಯುಗಕ್ಕೆ ಎಳೆದುಕೊಂಡು ಹೋಗಿ, ಪಾಳೇಗಾರಿ ಮೌಲ್ಯಗಳನ್ನು ಬಿತ್ತುವ ಸಂಘ-ಪರಿವಾರದವರ ಬಗ್ಗೆ ಸಹನಾಭೂತಿ ವ್ಯಕ್ತ ಪಡೆಸುವವರು ದೇಶ ಪ್ರೇಮಿಗಳು.
  ಇಂತಹ ವಿಷಮ ಸ್ಥಿತಿಯಲ್ಲಿ ನಾವು ತೀರಾ ಎಚ್ಚರದಿಂದ ಇರಬೇಕಾಗುತ್ತದೆ.
  ಷೇಕ್ಸ್ಫಿಯರ್‍ ನ ಕಿಂಗಲಿಯರ್‍ ನಾಟಕದಲ್ಲಿ ಬರುವ ಒಂದು ಮಾತು 'ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ತವರು ಮನೆಯಾಗಿರುವ ಈ ನಾಡೇ ನನಗಿನ್ನು ಮಾದರಿ' ಅಂತಹ ಸ್ಥಿತಿಯಲ್ಲಿ ನಾವಿದ್ದೇವೆ.
  - ಪರಶುರಾಮ ಕಲಾಳ್

  ReplyDelete
 2. ಗೆಳೆಯ ಕಲಾಲ್ ಅವರಿಗೆ..

  ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು. ಒಂದು ವಿಷಯವನ್ನು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ. ಲಿಂಗದೇವರು ಹಳೆಮನೆಯವರು ನನಗೆ ಕಳೆದ ೨೦ ವರ್ಷಗಳಿಂದ ಪರಿಚಿತರು. ಇಬ್ಬರೂ ಸಹ ಸಮುದಾಯದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದವರು. ಹೀಗಾಗಿ ಅವರ ಹಿನ್ನಲೆಯನ್ನು ಸರಿಯಾಗಿ ಅರ್ಥಮಾಡಿಕೊಂಡೆ ನಾನು ಇದನ್ನು ಬರೆದಿದ್ದೇನೆ. ಅವರ ಹಿನ್ನಲೆಯನ್ನು ನಾನು ಅರಿತಿರುವುದರಿಂದ, ಅವರಿಗೆ ನಕ್ಸಲ್ ನಂಟು ಮುಂತಾದ ಬೊಗಳೆಗಳನ್ನು ನಾನು ಸಹ ಬೆಂಬಲಿಸುವುದಿಲ್ಲ. ನಾನಿಲ್ಲಿ ನೇರವಾಗಿ ಹೇಳ ಬಯಸುವುದೇನೆಂದರೆ, ಪ್ರಗತಿ ಪರರ ಸೋಗಿನಲ್ಲಿ ಜೋಳಿಗೆ ದಾಸಯ್ಯಗಳಾಗುವುದು ಸರಿಯೇ? ಪಾಪ ಮುಗ್ಧರು..ಬರೆಯಲಿ ಬಿಡಿ ಎಂಬ ಶೀರ್ಷಿಕೆಯಡಿಯಲ್ಲಿ ಬರೆದದ್ದು, ಯಾವುದೇ ಪ್ರಗತಿ ಪರರನ್ನು ಅಥವಾ ಹೋರಾಟಗರರನ್ನು ಉದ್ದೇಶಿಸಿ ಖಂಡಿತಾ ಬರೆದದ್ದಲ್ಲ. ಈ ಮಾತನ್ನು ರಂಗಾಯಣದ "ಕಲಾವಿದರು"(?) ಆಡಿದ್ದರಿಂದ, ಅರವನ್ನುದ್ದೇಶಿಸಿ ಬರೆದದ್ದು.

  ಇವೆಲ್ಲ ಬರವಣಿಗೆಯ ಮೂಲ ಆಶಯ ರಂಗಾಯಣ ಸರಿಯಾದ ದಿಕ್ಕಿನಲ್ಲಿ ಸಾಗಿ, ನಮ್ಮ ರಂಗಭೂಮಿಗೊಂದು ಹೊಸ ಕಾಯಕಲ್ಪ ಸಿಗಲೆಂಬ ಉದ್ದೇಶ ಮಾತ್ರ.

  ReplyDelete