ಅದೇಕೋ ಗೊತ್ತಿಲ್ಲ....ನಾನು ಗೂಗಲ್ ಚಾಟ್‍ನಲ್ಲಿ ಬಂದಾಗ ಮಣಿ ಬಂದು ಹೆಲ್ಲೋ ಸಾರ್ ಎಂದು ಮಾತನಾಡಲು ಶುರುವಿಟ್ಟುಕೊಂಡರೆ ನನಗಂತೂ ಇಲ್ಲ ಎನ್ನಲು ಸಾಧ್ಯವೇ ಇಲ್ಲ...ಬೇರೆ ಯಾವುದೇ ಟೈಮ್‍ಪಾಸ್ ಗೆಳೆಯರಾದರೆ ಅವರನ್ನು ನಾನು ಸಾಗಹಾಕಬಹುದು..ಆದರೆ ಮಣಿಯ ದೈತ್ಯ ಬರವಣಿಗೆ ಹಾಗೂ ಆತನ ಹುಚ್ಚು ಪ್ರೀತಿಗೆ ಕೆಲವೊಂದು ಬಾರಿ ನನ್ನಲ್ಲಿ ಮಾತೇ ಹೊರಡುವುದಿಲ್ಲ....
ನನ್ನ ಬಹುತೇಕ ಗೆಳೆಯರ ಬಳಗಕ್ಕೆ ಮಣಿಯ ಪರಿಚಯವಿದೆ. ನನಗೆ ಈತನ ಬಗ್ಗೆ ಹೆಚ್ಚು ಹೆಚ್ಚು ಸುದ್ದಿಗಳು ಗೊತ್ತಾಗಿದ್ದು ಮತ್ತು ಇವನ ಒಡನಾಟಕ್ಕೆ ಕಾರಣವಾದದ್ದು ಒಂದು ರೀತಿಯಲ್ಲಿ ಜಿ.ಎಚ್. ಯಾರಿಗೋ ತಮಾಷೆ ಮಾಡಲು ಹೋಗಿ ಒಂದಿಲ್ಲೊಂದು ಅವಘಡಗಳಲ್ಲಿ ಬೀಳುವುದು..ಮತ್ತು ತನ್ನ ಅವಘಡಗಳನ್ನು ತಾನೇ ಬೇರೆಯವರ ಮುಂದೆ ಹೇಳಿಕೊಂಡು ಗೇಲಿಗೊಳಗಾವುವುದು...ಇವೆಲ್ಲವುಗಳನ್ನು ಜಿ.ಎಚ್ ನಮ್ಮ ಮುಂದೆ ರಸವತ್ತಾಗಿ ವರ್ಣನೆ ಮಾಡುತ್ತಿದ್ದರು. ಆ ಹಟಕ್ಕಾಗಿಯಾದರೂ ನಾನು ಮಣಿಯನ್ನು ಪರಿಚಯ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದೆ ಮತ್ತು ಮುಂದೆ ಅಂತಹ ಒಂದು ಸಂದರ್ಭ ಒದಗಿ ಬಂದಾಗ ಮಣಿಯನ್ನು ಪರಿಚಯ ಮಾಡಿಕೊಂಡೆ...ಜಿ.ಎಚ್ ಅವರ ಸಾಂಗತ್ಯದಿಂದ ನಾವು ಬಹಳ ಬೇಗ ತೀರ ಹತ್ತಿರದವರಾಗಿ ಬಿಟ್ಟೆವು....ಸಾಹಿತ್ಯದ ಕುರಿತು, ಬರವಣಿಗೆಯ ಕುರಿತು, ನಮ್ಮ ಗೆಳೆಯರ ಕುರಿತು ಹೀಗೆ ನಮ್ಮ ಚರ್ಚೆಗಳು ಆರಂಭವಾದವು...ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹ ಚರ್ಚಿಸುವಷ್ಟು ನಾವು ಹತ್ತಿರದವರಾದೆವು...ಅದೊಂದು ತರಹದ ವಿಚಿತ್ರ ಹುಚ್ಚು ಪ್ರೀತಿಯೆಂದೆ ಹೇಳಬೇಕು...ರಾತ್ರಿ ೧೨ ಆಗಿದ್ದರೂ ಯಾವುದೇ ಆತಂಕವಿಲ್ಲದೇ ನನ್ನ ಮೊಬೈಲಿಗೆ ಸಂದೇಶ ರವಾನಿಸಿ ನನ್ನನ್ನು ಡಿಸ್ಟರ್ಬ್ ಮಾಡಬಲ್ಲ ಏಕೈಕ ವ್ಯಕ್ತಿ ಈ ಮಣಿ...ಅವನ ಬರವಣಿಗೆಯಂತೂ....ಅಬ್ಬ...ಈಗ ಅವನು ಬರೆದ "ಅಮ್ಮ ಹೇಳಿದ...." ಪುಸ್ತಕ ಪುಸ್ತಕದ ಅಂಗಡಿಗಳಲ್ಲಿ ಒಳ್ಳೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳಂತೆ ಖರ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ...ಹಿಂದೊಮ್ಮೆ ಮಣಿನೇ ಹೇಳಿದ್ದ..ಪತ್ರಕರ್ತರ ಜೀವನದಲ್ಲಿಯೂ ಸಹ ಹೀಗೆ ಉತ್ತಮ ಮೊತ್ತದ ಹಣವನ್ನು ನೋಡಬಹುದೆಂದು ನಾನು ನನ್ನ ಈ ಪುಸ್ತಕ ಮಾರಾಟವಾಗುತ್ತಿರುವ ಸಂದರ್ಭದಲ್ಲಿ ಕಾಣುತ್ತಿದ್ದೇನೆ ಸಾರ್ ಎಂದು...
ಅವನ ಹಾಡು ಹುಟ್ಟಿದ ಸಮಯ ಅಂಕಣವಂತೂ ತುಂಬಾ ಜನಪ್ರೀಯತೆಯನ್ನು ಗಳಿಸಿದೆ. ಆ ಅಂಕಣದಲ್ಲಿ ಅವನು ಇಟಗಿ ಈರಣ್ಣ ಅವರು ಬರೆದ "ಚಂದಕಿಂತ ಚಂದ ನೀನೆ ಸುಂದರ..." ಹಾಡಿನ ಕುರಿತು ಬರೆಯಲು ತನ್ನ ಆಸೆ ವ್ಯಕ್ತ ಪಡಿಸಿ, ಆ ಹಾಡು ಹುಟ್ಟಿದ ಸಮಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡಲು ನನಗೆ ಬರೊಬ್ಬರಿ ಮೂರು ತಿಂಗಳುಗಳ ಕಾಲು ದುಂಬಾಲು ಬಿದ್ದ. ಆಗ ನನ್ನ ಪರಿಸ್ಥಿತಿ ಹೇಗಾಗಿತ್ತೆಂದರೆ ಅಕ್ಷರ ಶಹ: ನಾನು ಮಣಿಯನ್ನು ತಪ್ಪಿಸಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.......ಒಂದು ದಿನ ಇಟಗಿ ಈರಣ್ಣ ಸಿಕ್ಕರು, ಅವರಿಂದ ಮಾಹಿತಿ ಕಲೆಹಾಕಿ ಅದನ್ನು ಮಣಿಗೆ ತಲುಪಿಸಿದಾಗ ಅವನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ..ಮಾರನೇ ದಿನವೇ ಅದು ಅವನ ಅಂಕಣದಲ್ಲಿ ಪ್ರತ್ಯಕ್ಷವಾಯಿತು...ಆ ವಿಷಯವನ್ನು ಅವನಿಗೆ ನಾನೇ ತಂದು ಕೊಟ್ಟಿದ್ದೆಂಬ ಶರಾ ಬೇರೆ ಇತ್ತು...ನನಗೆ ಹಾಗೂ ಇಟಗಿ ಈರಣ್ಣ ಅವರಿಗೆ ಬಿಡುವಿಲ್ಲದಷ್ಟು ಫೋನ್ ಕರೆಗಳು...
ಅಂದು ಇಟಗಿ ಈರಣ್ಣ ನನಗೆ ನೇರವಾಗಿ ಫೋನಾಯಿಸಿ.."ಧನಂಜಯ ಅವರ ನಿಮ್ಮ ಲೇಖನ ಎಷ್ಟು ಚೆಂದಾಗಿ ಬಂದೈತಂದರ..ನನ್ನ ಇಪ್ಪತ್ತು ವರ್ಷದ ಹಿಂದಿನ ಗೆಳೆಯರು, ಗೆಳತ್ಯಾರು ಎಲ್ಲರು ನನ್ನನ್ನ ನೆನಪಿಸಿಕೊಂಡು ಫೋನ್ ಮಾಡಾಕತ್ಯಾರ..." ಇದನ್ನು ಮಣಿಗೆ ತಿಳಿಸಿದಾಗ ತಕ್ಷಣಕ್ಕೆ "ಸಾರ್ ನಾನು ಪೆನ್ನು ಹಿಡಿದದ್ದು ಸಾರ್ಥಕ ಆಯ್ತು ಇವತ್ತಿಗೆ" ಎಂದು ಬಿಟ್ಟ...ತುಂಬ ಭಾವುಕ ಜೀವಿ ಅದು...
ಅಂದ ಹಾಗೆ ಅವನ ಹಾಡು ಹುಟ್ಟಿದ ಸಮಯ ಪುಸ್ತಕದ ಬಿಡುಗಡೆ ಜನೆವರಿ ಹತ್ತರಂದು ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದಾನೆ ಮಣಿ..ಪುಸ್ತಕ ಬಿಡುಗಡೆಯ ನೆಪದಲ್ಲಿ ಹಳೆಯ ಹಾಡುಗಳನ್ನು ಕೇಳೋಣ ಬನ್ನಿ ಎಂದು ಎಲ್ಲರನ್ನು ದುಂಬಾಲು ಬೀಳುತ್ತಿದ್ದಾನೆ...ನೀವು ಸಹ...ದಯವಿಟ್ಟು ಅಂದು ಬಿಡುವು ಮಾಡಿಕೊಳ್ಳಿ...ಹಳೆಯ ಹಾಡುಗಳನ್ನು ಕೇಳೋಣ...ಬನ್ನಿ ಪ್ಲೀಸ್....
No comments:
Post a Comment