Tuesday, July 27, 2010

ಸಂತ್ಯಾಗ ನಿಂತ 'ಧನ್ಯಾ'....

ಆತ್ಮೀಯರೇ,

ಈ ಮೊದಲು ನಿಮಗೆ ತಿಳಿಸಿದಂತೆ ನನ್ನ ಬ್ಲಾಗ್ ಪುಸ್ತಕದ ಬಿಡುಗಡೆ ಇದೇ ದಿನಾಂಕ ೨೯ ರಂದು ಆಗಬೇಕಿತ್ತು. ಕಾಲಲ್ಲಿ ನಾಯಿ ಗೆರೆಯನ್ನಿಟ್ಟುಕೊಂಡಂತೆ ತಿರುಗಾಡುತ್ತಿರುವ ನಾನು ಅನಿವಾರ್ಯ ಕಾರಣಗಳಿಂದ ಇದನ್ನು ಎರಡು ದಿನಗಳ ಮಟ್ಟಿಗೆ ಮುಂದೂಡುತ್ತಿದ್ದೇನೆ..ದಯವಿಟ್ಟು ಕ್ಷಮಿಸಿ...ಆಗಷ್ಟ್ ೧ ರಂದು ಹೊಸಪೇಟೆಯ ಪಂಪ ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಪುಸ್ತಕ ಬಿಡುಗಡೆಯಾಗಲಿದೆ. ಅಂದು ನಮ್ಮೊಂದಿಗೆ ನಾಡಿನ ಹೆಸರಾಂತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ. ಕುಂ.ವೀ ಇರುತ್ತಾರೆ. ಸಾವಿರ ಶಾಯಿರಿಗಳ ಸರದಾರ ಶ್ರೀ. ಇಟಗಿ ಈರಣ್ಣ ಅವರು ಪ್ರಾಧ್ಯಾಪಕ ವೃತ್ತಿಯಿಂದ ಅಂದು ನಿವೃತ್ತಗೊಳ್ಳಲಿರುವುದರಿಂದ ಅವರಿಗೆ ಈ ಪುಸ್ತಕ ಅರ್ಪಿತವಾಗಲಿದೆ. ಗೆಳೆಯ ಮಣಿಕಾಂತ್ ಸಹ ಅಂದು ನಮ್ಮೊಡನಿದ್ದಾರೆ.... ಅಂದಿನ ದಿನವೇ ಪುಸ್ತಕ ಬಿಡುಗಡೆಯ ನಂತರ ನಾನು ವಿನ್ಯಾಸಗೊಳಿಸಿ, ನಿರ್ದೇಶನ ಮಾಡಿದ ಚಂದ್ರಶೇಖರ್ ಕಂಬಾರ್ ಅವರ "ಜೋಕುಮಾರ ಸ್ವಾಮಿ" ನಾಟಕವನ್ನು ಕನ್ನಡ ಕಲಾ ಸಂಘದ ಗೆಳೆಯರು ಅಭಿನಯಿಸಲಿದ್ದಾರೆ. ಇಂತಹ ಅಪರೂಪದ ಬಣ್ಣದ ಸಂಜೆಯ ಸವಿಯನ್ನು ಅನುಭವಿಸಲು ನೀವಿಲ್ಲದಿದ್ದರೆ ನನಗೆ ಏನೊ ಕಳೆದುಕೊಂಡ ಅನುಭವ...ದಯವಿಟ್ಟು ಬನ್ನಿ...

ಅಂದ ಹಾಗೆ ನನ್ನ ಪುಸ್ತಕಕ್ಕೆ ಹಿರಿಯ ಪತ್ರಕರ್ತ ಗೆಳೆಯರಾದ ಶ್ರೀ. ಜೆ.ಎನ್. ಮೋಹನ್ ಅವರು ಮುನ್ನುಡಿಯನ್ನು ಬರೆದಿದ್ದಾರೆ...ಓದಿ.....

'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ, ಅದಕ್ಕೆ ಇನ್ನಷ್ಟು ಭಯ ಹುಟ್ಟಿಸುವ ಗಂಭೀರತೆ ನೀಡಲೆಂದೇ ಇರುವ ಬುಲ್ಗಾನಿನ್ ಗಡ್ಡ, ಅದಕ್ಕೆ ನನ್ನ ಪಾಲೂ ಇರಲಿ ಎಂದು ಹೇಳುವ ಕನ್ನಡಕ, ಅದಕ್ಕೆಲ್ಲ 'ಅಹುದಹುದು' ಎಂಬ ಮುದ್ರೆ ಒತ್ತುವ ಅವರ ಹೈಟು ಮಾತ್ರ ನೋಡಿ ಗೊತ್ತಿದ್ದ ಧನಂಜಯ ಕುಲಕರ್ಣಿಯವರನ್ನು ಒಂದೇ ಏಟಿಗೆ 'ಧನ್ಯಾ' ಆಗಿ ಮಾಡಿ ಬಿಟ್ಟಿತಲ್ಲ ಅದೇ 'ನೆನಪುಗಳ ರಾವೀ ನದಿಯ ದಂಡೆ' ಯ ಸಕ್ಸಸ್.

ಪ್ರೊ ಜಿ ಎಸ್ ಸಿದ್ಧಲಿಂಗಯ್ಯ ಹೇಳುತ್ತಿದ್ದ ಒಂದು ಮಾತು ನನಗೆ ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಹಸು ಕರುವಿಗೆ ಜನ್ಮ ಕೊಟ್ಟ ತಕ್ಷಣ ಅದನ್ನು ತನ್ನದಾಗಿಸಿಕೊಳ್ಳುವುದಿಲ್ಲವಂತೆ. ಆದರೆ ಕರುವಿನ ಮೈ ಮೇಲಿರುವ ಲೋಳೆಯನ್ನು ನೆಕ್ಕಿ ಸ್ವಚ್ಚ ಮಾಡುತ್ತಾ ಮಾಡುತ್ತಾ ಅದನ್ನು ಬಿಟ್ಟಿರಲಾರದಷ್ಟು ನಂಟು ಬೆಳಸಿಕೊಳ್ಳುತ್ತದೆ ಅಂದಿದ್ದರು. exactly, 'ನೆನಪುಗಳ ರಾವೀ ನದಿಯ ದಂಡೆ' ಯ ಒಂದೊಂದೇ ಪುಟ ಮುಗಚುತ್ತಾ, ಮುಗುಚುತ್ತಾ ಹೋದಂತೆ ಒಂದು ರೀತಿಯ ನಂಟು ಬೆಳೆದುಬಿಡುತ್ತದೆ. ಧನಂಜಯ ಕುಲಕರ್ಣಿ 'ಧನ್ಯಾ..' ಆಗಿ ಬದಲಾಗಿಬಿಡುತ್ತಾರೆ.

ಧನಂಜಯ ನನಗೆ ನಿಜಕ್ಕೂ ಗೊತ್ತಿದ್ದದ್ದು ಅವರ ಪಿ ಆರ್ ಓ ಪೋಷಾಕಿನಲ್ಲಿ. ಆದರೆ ಅವರಿಗೆ ಆ ಪೋಷಾಕು ನಾಟಕದ ಪಾತ್ರವೊಂದಕ್ಕೆ ಬಳಸುವ ಪೋಷಾಕಿನಂತೆ ಮಾತ್ರ ಎಂದು ಗೊತ್ತಾದದ್ದು ನಾನೂ ಈ 'ರಾವೀ ನದಿಯ ದಂಡೆ'ಯಲ್ಲಿ ನಿಂತಾಗ. ಧನಂಜಯ ಹೇಳಿ ಕೇಳಿ ನಾಟಕವೆಂಬ ಗುಂಗೀ ಹುಳುವಿನ ಬೆನ್ನತ್ತಿದಾತ. ಹಾಗಾಗಿಯೇ ಇಂದು ಇಲ್ಲಿ, ನಾಳೆ ಅಲ್ಲಿ, ಇಂದು ಈ ಬಣ್ಣ, ನಾಳೆ ಯಾವ ಬಣ್ಣವಾದರೂ ಸೈ, ಇಂದು ಈ ಪೋಷಾಕು, ನಾಳೆ ಇನ್ನೇನೋ.. ಎನ್ನುವಂತೆ ಆ ಗುಂಗೀ ಹುಳದ ಬೆನ್ನತ್ತಿ ನಡೆದಿದ್ದಾರೆ. ಆ ಬೆನ್ನತ್ತಿ ನಡೆದವನ ಒಳಗೆ ಒಬ್ಬ ಪತ್ರಕರ್ತನಿದ್ದಾನೆ, ರಂಗಕರ್ಮಿಯಿದ್ದಾನೆ, ಅಸಡ್ದಾಳ ತುಂಟನೊಬ್ಬನಿದ್ದಾನೆ, ಕಾಡುವ ಕಾಲೇಜು ಹುಡುಗನಿದ್ದಾನೆ..ಹಾಗೇ ಕಾಳಜಿ ಮಾಡುವ ಧನಂಜಯನೂ ಇದ್ದಾನೆ.

ಧನಂಜಯರಿಗೆ ಮತ್ತೆ ಮತ್ತೆ ನೆನಪುಗಳ ಲೋಕಕ್ಕೆ ಜಿಗಿಯುವ ಹುಚ್ಚಿದೆ. ಬೆಳಕನ್ನು ಕಂಡ ತಕ್ಷಣ ತಾನೇ ಹಾರಿ ಹೋಗಿ ಡಿಕ್ಕಿ ಹೊಡೆದು ರೆಕ್ಕೆ ಸುಟ್ಟುಕೊಳ್ಳುವ ಪತಂಗದಂತೆ.. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವನ್ನು ಹಚ್ಚಿಕೊಂಡು ಇವರೇ ಹಳೆಯ ನೆನಪುಗಳ ಬೆನ್ನಟ್ಟಿ ಹೋಗುತ್ತಾರೆ. ಇವರು ನೆನಪುಗಳ ಬೆನ್ನತ್ತುವ ತೀವ್ರತೆ ಕಂಡು ಅಚ್ಚರಿಯಿಂದ ನಿಂತಿದ್ದೇನೆ. ಧನಂಜಯ ತಾವೇ ಬಣ್ಣಿಸಿಕೊಳ್ಳುವಂತೆ ಒಬ್ಬ 'ಮಧುಗಿರಿ ಪಟ್ಟಣಕೆ ಹೋದ ಸಿದ್ಧಯ್ಯನೆಂಬ ಅಗಸ'. ಸಿದ್ಧಲಿಂಗಯ್ಯ ಅವರ 'ಕತ್ತೆ ಮತ್ತು ಧರ್ಮ' ಕವಿತೆಯಲ್ಲಿ ಸಿದ್ಧಯ್ಯ ಮತ್ತು ಅವನ ಕತ್ತೆಯ ಕಥೆ ಬರುತ್ತದೆ. ಕತ್ತೆಯನ್ನು ಮಣ್ಣು ಮಾಡಿದ ಜಾಗದಲ್ಲಿ ದೇಗುಲವೇ ಎದ್ದು ನಿಲ್ಲುವುದನ್ನು ಕಂಡ ಸಿದ್ಧಯ್ಯ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಾನೆ. ಹಾಗೆ ಧನಂಜಯ ಮತ್ತೆ ಮತ್ತೆ ತಮ್ಮ ಹಳೆಯ ನೆನಪುಗಳಿಗೆ ಮಾತ್ರವಲ್ಲ, ತಮ್ಮ ಹಳೆಯ ನೆನಪುಗಳ ಜಾಗಕ್ಕೂ ಹೋಗಿ ನಿಲ್ಲುತ್ತಾರೆ. ಹಿಂದೆ ತಾನೊಮ್ಮೆ ರಾತ್ರಿ ಮಲಗಬೇಕಾಗಿ ಬಂದ ಹೊಸಪೇಟೆ ಬಸ್ ನಿಲ್ದಾಣದ ಸೀಟು, ಹದಿನಾರು ವರ್ಷಗಳ ನಂತರ ಸಿಕ್ಕ ಗೆಳೆಯ ಪ್ರಮೋದ ತುರುವಿಹಾಳ, ಶಾಲೆಯಲ್ಲಿ ಟೀಚರ್ ಆಗಿದ್ದ ಲೋಕುರ್ ಮೇಡಂ, ದ ರಾ ಬೇಂದ್ರೆ ಕೈನಿಂದ ಪಡೆದ ಆ ಬಹುಮಾನ, ಬೆಂಗಳೂರಿನ ಮೈದಾನದಲ್ಲಿ ಹಾರಿಸಿದ ಗಾಳಿಪಟ, ವಿಮಾನ ನಿಲ್ದಾಣದಲ್ಲಿ ಕಂಡ ಗುಬ್ಬಚ್ಚಿ, ಹಂಪಿಯ ಲೋಟಸ್ ಮಹಲ್, ಅದೇ ಮಧು ದೇಸಾಯಿ ಕನಸುಗಳು, ನರಸಿಂಹನ ತರಲೆ, ಬಂಡು ಕುಲಕರ್ಣಿಯ ಅಮಾಯಕತೆ, ಅದೇ ರವಿ ಕುಲಕರ್ಣಿ, ದಿಲಾವರ್, ಸುರೇಶ. ತಾವೇ ಹುಟ್ಟುಹಾಕಿದ ಕಾಲ್ಪನಿಕ ಪಂಕಜಾ, ಶಾಯರಿಗಳ ತೇಲಿ ಬಿಡುವ ಇಟಗಿ ಈರಣ್ಣ, ತಮ್ಮನೆಂದು ತಬ್ಬಿಕೊಂಡ ಜಿ ಎಚ್ ರಾಘವೇಂದ್ರ, ಆ 'ಹಲ್ಲಾ ಬೋಲ್', ಆ ಸಫ್ದರ್ ಹಶ್ಮಿ, ಹೀಗೆ ಧನಂಜಯರ ನೆನಪಿನ ಬುತ್ತಿ ದ್ರೌಪದಿಯ ಕೈನಲ್ಲಿದ್ದ ಅಕ್ಷಯ ಪಾತ್ರೆಯಂತೆ. ಎಷ್ಟು ಮಂದಿ ಎಷ್ಟು ದಿನ ತಿಂದು ಮುಗಿಸಿದರೂ ಬೆಳೆಯುತ್ತಲೇ ಹೋಗುವ ಭಂಡಾರ.

ಯಾಕೋ ಧನಂಜಯರ ಈ ನೆನಪುಗಳ ಲೋಕ ಹೊಕ್ಕಾಗ ನನಗೂ, ನನ್ನ ಮಾತಂತಿರಲಿ ಎಲ್ಲರಿಗೂ ತಮ್ಮ ತಮ್ಮ ನೆನಪುಗಳು ಲೋಕ ಹರಡಿಕೊಳ್ಳುತ್ತಾ ಹೋಗುತ್ತದೆ. ಅಷ್ಟರ ಮಟ್ಟಿಗೆ 'ನೆನಪುಗಳ ರಾವೀ ನದಿಯ ದಂಡೆ' ನೆನಪುಗಳ ಲೋಕಕ್ಕೊಂದು ರಹದಾರಿ. ನೆನಪುಗಳ ಲೋಕ ಹೊಕ್ಕಲು ಪಾಸ್ ಪೋರ್ಟ್, ವೀಸಾ ಯಾಕೆ ಬೇಕು, ಈ ರಾವೀ ನದಿಯ ದಂಡೆಯೊಂದೇ ಸಾಕು..ಯಾಕೋ ಮತ್ತೆ ಮತ್ತೆ ಈ ನೆನಪುಗಳ ಮಾಲೆ ಓದುವಾಗ ಕಂಬಾರರ ಹಾಗೆ ' ನಾ ಕುಣೀಬೇಕ, ಮೈ ಮಣೀಬೇಕ, ಕಾಲ್ ದಣೀಬೇಕ ತಾಯಿ..' ಹಾಡು ನೆನಪಾಗುತ್ತದೆ. ಅಂತಹ ಹಾಡಿನ ಹರಯಕ್ಕೆ ಮರಳುವ ಮನಸ್ಸಾಗುತ್ತಿದೆ.

ಧನಂಜಯ ಅವರದ್ದು ನೆನಪುಗಳ ಲೋಕದಲ್ಲಿ ಕರಗಿ ಹೋಗುವ, ಹಳಹಳಿಕೆಯಲ್ಲಿ ಮುಗಿದು ಹೋಗುವ ಮನಸ್ಸಲ್ಲ ಎಂಬುದನ್ನು ಇಲ್ಲಿನ ಇತರ ಲೇಖನಗಳೂ ತೋರಿಸುತ್ತಿವೆ. ಪತ್ರಿಕೋದ್ಯಮ ಹಾಗೂ ರಂಗಭೂಮಿಯ ಬಗ್ಗೆ ಧನ್ಯಾ 'ಖಡಕ್' ಬರಹಗಳನ್ನು ನೀಡಿದ್ದಾರೆ. ಇವರ ಆಲೋಚನೆಯ ದಾರಿಗೆ ಅಡ್ಡ ಸಿಕ್ಕವರನ್ನು ನೇರಾನೇರ ಎದುರಿಸಿಯೇ ನಿಲ್ಲುತ್ತಾರೆ. ಸರಿ ಅಲ್ಲದ ದಾರಿಗೆ ಹೊರಳಿದವರನ್ನೂ ಮುಲಾಜಿಲ್ಲದೆ ನಿಲೆ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಈ ಎರಡೂ ರಂಗದ ಬಗ್ಗೆ ಬರೆದಿರುವ ಲೇಖನಗಳು ಸಾಕ್ಷಿ. ಧನಂಜಯ ತಮ್ಮ ರಂಗಭೂಮಿ ಬರವಣಿಗೆಯಲ್ಲಿ ಎತ್ತಿರುವ ಪ್ರಶ್ನೆಗಳ ಬಗ್ಗೆ ನನ್ನ ತಕರಾರು ಸಾಕಷ್ಟಿದೆ. ರಂಗಾಯಣ, ಮಲೆಗಳಲ್ಲಿ ಮದುಮಗಳು, ಲಿಂಗದೇವರು ಹಳೆಮನೆ ಗೆ ಸಂಬಂಧಿಸಿದಂತೆ ಇವರ ಪ್ರಶ್ನೆಗಳು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಧನಂಜಯರ ಬರಹಗಳು ನನಗೆ ಯಾಕೆ ಇಷ್ಟ ಎಂದರೆ ಅವರು ಬೆಣ್ಣೆ ಮಾತನಾಡುತ್ತಾ ಅಸಹನೆಯನ್ನು ಬಗಲಲ್ಲಿಟ್ಟುಕೊಳ್ಳುವವರಲ್ಲ. ಅದೇ ಧಾರವಾಡದ ಖಡಕ್ ರೊಟ್ಟಿಯಂತೆ ಹಿಂಗ್ಯಾಕಲೇ ಮಗನಾ.. ಅಂತ ಕೇಳಬಲ್ಲವರು.

ಧನಂಜಯ ಹಾಗೂ ನಾನೂ ರಂಗಭೂಮಿ ಬಗ್ಗೆ ಅವರು 'ವಿಜಯ ಕರ್ನಾಟಕ'ದಲ್ಲಿ ಎತ್ತಿದ, ಈ ಪುಸ್ತಕದಲ್ಲಿರುವ ಲೇಖನಗಳ ಬಗ್ಗೆ ಎದುರಾಬದುರಾ ಕುಳಿತು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಧನಂಜಯ ನಾನೂ ಇಬ್ಬರೂ ರಂಗಭೂಮಿಯ ರುಚಿ ಉಂಡಿದ್ದೇವೆ. ನಾನು ವಿಮರ್ಶೆ ಬರೆಯುತ್ತಾ ರಂಗಭೂಮಿ ಜೊತೆ ಒಂದಿಷ್ಟು ನಂಟು ಇಟ್ಟುಕೊಂಡಿದ್ದರೆ ಧನಂಜಯರದ್ದು ಸ್ಟ್ರೈಟ್ ಎಂಟ್ರಿ. ಮುಂಬೈನ ಪ್ರತಿಷ್ಠಿತ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಬಾರಿಸಿದ ಕೀರ್ತಿ ಧನಂಜಯರದ್ದು. ಮತ್ತು ಆ ಹ್ಯಾಟ್ರಿಕ್ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ. ಹೀಗಿರುವಾಗ ಧನಂಜಯ ಅವರು ರಂಗಭೂಮಿಯ ಬಗ್ಗೆ ಎತ್ತುವ ಪ್ರಶ್ನೆಯನ್ನು ಒಂದೇ ಏಟಿಗೆ ಜಾತಿಗನ್ನಡಿಯಲ್ಲಿ ನೋಡಿ ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಧನಂಜಯ 25 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ ಕಾರಣ ಅವರ ಆಕ್ಷೇಪ, ಆಕ್ರೋಶ, ಅಸಹನೆ ಎಲ್ಲವೂ ಚರ್ಚೆಗೆ ತೆರೆದಿಟ್ಟ ಬಾಗಿಲು.

'ಮಲೆಗಳಲ್ಲ್ಲಿ ಮದುಮಗಳು' ನಾಟಕವನ್ನು ಬಸವಲಿಂಗಯ್ಯ ಕೈಗೆತ್ತಿಕೊಂಡಾಗ ಇಷ್ಟು ಹಣವನ್ನು ಕರ್ನಾಟಕದ ಎಷ್ಟೋ ಭಾಗಕ್ಕೆ ಹಂಚಿ ಸಾಕಷ್ಟು ಹೊಸ ನಾಟಕಗಳು ಬರುವಂತೆ ಮಾಡಬಹುದಿತ್ತಲ್ಲಾ ಅಂತ ಧನಂಜಯರಿಗೆ ಅನಿಸುತ್ತದೆ, ಲಿಂಗದೇವರು ಹಳೆಮನೆ ಅವರನ್ನು ರಂಗಾಯಣದ ನಿರ್ದೇಶಕರಾಗಿ ನೇಮಕ ಮಾಡಿದಾಗ ನಾಟಕ ಬರೆದವರು, ಸಂಶೋಧನೆ ಮಾಡಿದವರು ಈ ಸ್ಥಾನಕ್ಕೆ ಯಾಕೆ ಅನಿಸುತ್ತದೆ. ರಂಗಾಯಣ ಏಕೆ ಮೈಸೂರಿನಲ್ಲಿ ಮಾತ್ರ ಕುಳಿತಿರಬೇಕು ಅನಿಸುತ್ತದೆ. ಹೀಗೆಲ್ಲಾ ಅನಿಸುವ ಅವರ ಪ್ರಶ್ನೆಗಳನ್ನು ಸುಲಭವಾಗಿ ಅಪಾರ್ಥ ಮಾಡಿಕೊಳ್ಳಬಹುದು. ಹಾಗೆ ಅಪಾರ್ಥ ಮಾಡಿಕೊಂಡ ರಂಗಕರ್ಮಿಗಳೂ ಇದ್ದಾರೆ. ಆದರೆ ಈಗ ಅವರ ಒಟ್ಟೂ ಲೇಖನಗಳನ್ನು ನಾನು ಓದುವಾಗ, ಅವರೊಡನೆ ಕೂತು ಮಾತನಾಡುವಾಗ ಅವರ ಎಲ್ಲಾ ನಕಾರ ಪ್ರಶ್ನೆಗಳ ಆಳದಲ್ಲಿರುವುದು ಅವರ ಧಾರವಾಡ ಪ್ರೀತಿಯೇ ಎನಿಸುತ್ತದೆ. ಉತ್ತರ ಕರ್ನಾಟಕದಲ್ಲಿ ರಂಗಾಯಣ ಆಗಬೇಕು, ಅದು ಸಕ್ರಿಯವಾಗಿ ಕೆಲಸ ಮಾಡಬೇಕು, ಒಂದು ಯೋಜನೆ ಹಿಡಿದು ಉತ್ತರ ಕರ್ನಾಟಕದ ರಂಗ ಕರ್ಮಿಗಳು ಧನ ಸಹಾಯ ಕೇಳಿದರೆ ತಿರಸ್ಕರಿಸುವ, ಘನ ಮೌನ ತಾಳುವ ಸರ್ಕಾರ ದೊಡ್ಡ ಮೊತ್ತದ ಹಣ ಒಂದೇ ನಾಟಕಕ್ಕೆ ಕೊಡುವುದು ಹೇಗೆ ಎನಿಸುತ್ತದೆ. ಈ ಎಲ್ಲಾ ಪ್ರಶ್ನೆಗಳೂ ಸಹಾ ಉತ್ತರವನ್ನು ಬಯಸುತ್ತದೆ ಮತ್ತು ಚರ್ಚೆಯನ್ನು ಅಪೇಕ್ಷಿಸುತ್ತದೆ.

ಗುಲ್ಬರ್ಗದಲ್ಲಿ ಮೂರು ವರ್ಷ ಜನರೊಡನೆ ಒಡನಾಡಬೇಕಾಗಿ ಬಂದ ನನಗೆ ಅದುವರೆಗೂ ಬಾಲಿಶ ಅನಿಸುತ್ತಿದ್ದ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಬೇಡಿಕೆ ಎಷ್ಟು ಒಡಲ ದಳ್ಳುರಿಯನ್ನು ಹೊಂದಿದೆ ಅನಿಸಿದೆ. ತೆಲಂಗಾಣ ಹೋರಾಟದ ಹಿನ್ನೆಲೆಯಲ್ಲೂ ಈ ತರಹದ ನಿರ್ಲಕ್ಷದ ನೋವು ಅಡಗಿದೆ. ಹಾಗಾಗಿಯೇ ನಾನು ಧನಂಜಯ ಕುಲಕರ್ಣಿ ಎತ್ತಿರುವ ಪ್ರಶ್ನೆಗಳನ್ನು ಅವರ ಕಣ್ಣಿನಿಂದ ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ವಾಗ್ವಾದಗಳು ಬೆಳೆದು ಅದು ಕುಲಕರ್ಣಿ ಅವರ ಚಿಂತನೆಯನ್ನು ಪ್ರಬುದ್ಧವಾಗಿಸಿದರೆ, ಮಾಗಿಸಿದರೆ ಇನ್ನೂ ಸಂತೋಷವೇ..

ಧನಂಜಯ ಕುಲಕರ್ಣಿ ಇದೇ ರೀತಿ ಮತ್ತೆ ಚರ್ಚೆ ಎತ್ತುವುದು ಪತ್ರಿಕೋದ್ಯಮದ ಬಗ್ಗೆ. ಮಾರ್ಗರೆಟ್ ಆಳ್ವಾ ಚುನಾವಣಾ ಪ್ರಚಾರದಲ್ಲಿ ದೊಡ್ಡ ದುಡ್ಡು ಮಾಡಿದ ಪತ್ರಕರ್ತರಿಂದ ಹಿಡಿದು, ಚುನಾವಣಾ ಸಮೀಕ್ಷೆಗಾಗಿ ಹಣ ಕೇಳುವ, ಬಿಟ್ಟಿ ಕಾರಿಗೆ ಹಾತೊರೆಯುವವರನ್ನೆಲ್ಲಾ ಬಯಲಿಗಿಡುತ್ತಾ ಹೋಗುತ್ತಾರೆ. ಆದರೆ ಸಮೀಕ್ಷೆಗೆ ಬಿಟ್ಟಿ ಕಾರು ಕೇಳಿದಾಗ ಖಡಕ್ ಆಗಿ ವರ್ತಿಸುವ ಇದೇ ಧನಂಜಯ ಕುಲಕರ್ಣಿ ಬೆಳಗಾವಿಯಲ್ಲಿ ಚುನಾವಣಾ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಾಗಿ ಬಂದಾಗ ತಾವೇ ಮುಂದಾಗಿ ಪತ್ರಕರ್ತರ ಕೈ ಬೆಚ್ಚಗೆ ಮಾಡುತ್ತಾರೆ. ಇವೂ ಚರ್ಚೆಯನ್ನು ಅಪೇಕ್ಷಿಸುತ್ತಿದೆ.

ರಾವೀ ನದಿಯ ದಂಡೆಯಲ್ಲಿ, ಧಫನ್, ಸ್ಪಾರ್ಟಕಸ್, ರಾಕ್ಷಸ, ನಾಯೀಕಥೆ, ಜೋಕುಮಾರಸ್ವಾಮಿ ನಾಟಕ ಆಡಿಸಿದ, ಕೃಷ್ಣ ಪಾರಿಜಾತಕ್ಕೆ ಬೆಳಕು ಹಂಚಿದ, ಬೇಲಿ ಮತ್ತು ಹೊಲ, ಒಂದು ಬೀದಿಯ ಕಥೆಯಲ್ಲಿ ಅಭಿನಯಿಸಿದ ಧನಂಜಯ ಕುಲಕರ್ಣಿಗೆ ಸಂತೆ ಸೇರಿಸಿಕೊಳ್ಳದೆ ಬದುಕಲು ಸಾಧ್ಯವೇ ಇಲ್ಲ. ಆ ಅರ್ಥದಲ್ಲಿ ಇವರೂ 'ಸಂತ್ಯಾಗ ನಿಂತ ಕಬೀರ'
-ಜಿ ಎನ್ ಮೋಹನ್

1 comment: