Sunday, December 5, 2010

ಬೇಲಿ ಮತ್ತು ಹೊಲ.....


ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ, ನಮ್ಮ ನಡುವಿನ ಅನನ್ಯ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ಕಿರುಕಾದಂಬರಿ ಬೇಲಿ ಮತ್ತು ಹೊಲ. ಇದರ ಹೆಸರೇ ಸೂಚಿಸುವಂತೆ "ಬೇಲಿ" ಆಳುವ ವ್ಯವಸ್ಥೆಯನ್ನು ಮತ್ತು "ಹೊಲ" ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸುತ್ತದೆ.

ಕಾನೂನಿನಡಿ ನುಸುಳುವ ಹಾಗೂ ಭ್ರಷ್ಟತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು ಹೇಗೆ ಆಳುವ ಪ್ರಕ್ರಿಯೆಯಲ್ಲಿ ಅಂತರ್ಗತನಾಗುತ್ತಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಹಾಗೂ ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪೋತುರಾಜು, ದಲ್ಲಾಳಿ ವ್ಯವಸ್ಥಯ ಹರಿಕಾರನಾಗಿ ವಿಠ್ಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ಕಹಳೆ ಪಾಟೀಲ್, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಸಾಮಾನ್ಯ ಪ್ರಜೆಯ ಪ್ರತಿನಿಧಿಯಾಗಿ ಚಂಬಸ್ವ, ಮಲ್ಲಕ್ಕ, ಬಡಕೊಟ್ರಯ್ಯ ಹಾಗೂ ಹಳ್ಳಿಗರು ಪ್ರತಿನಿಧಿಸುತ್ತಾರೆ.

ಇಡೀ ಕಥಾವಸ್ತುವಿನ ಅಂತರಾಳ ಪ್ರಜಾಸಮೂಹ ಅಥವಾ ಒಬ್ಬ ಸಾಮಾನ್ಯನಿಗೆ ಅನ್ಯಾಯ, ಶೋಷಣೆ, ಹಿಂಸೆಗೆ ಗುರಿಯಾದಾಗ ಪ್ರಸ್ತುತ ಸುದ್ದಿಮಾಧ್ಯಮಗಳು ಅದನ್ನು ತಿದ್ದುವ ಕಾಯಕದಲ್ಲಿ ಮಾಡುವ ಸದ್ದಾಗಲೀ, ಪ್ರಬುದ್ಧರು ನಡೆಸುವ ಪ್ರತಿಭಟನೆ, ಮುಷ್ಕರ, ಚಳುವಳಿಗಳಾಗಲೀ ಬರಬರುತ್ತಾ ತೀರಾ ಮಾಮೂಲಿಯೂ, ಯಾಂತ್ರಿಕವೂ ಆಗಿ ನಮ್ಮನ್ನಾಳುವ ಪ್ರಭುಗಳನ್ನು ತಿದ್ದುವ, ಶಿಕ್ಷಿಸುವ ಪರಿಣಾಮದ ತೀವ್ರತೆ ಕಳೆದುಕೊಳ್ಳುತ್ತಿವೆ ಎನ್ನುವುದು ನಮ್ಮ ಮುಂದಿರುವ ದುರಂತ..

ಇಂತಹ ಸಂದರ್ಭದಲ್ಲಿ ನ್ಯಾಯದಾನದ ಪ್ರಕ್ರಿಯೆ ಜನಸಾಮಾನ್ಯನ ಹಿತಕಾಪಾಡುವ ದಿಶೆಯಲ್ಲಿ ಇರುವ ವ್ಯಕ್ತಿಗತ ದೋಷಗಳು ಮತ್ತು ವ್ಯವಸ್ಥೆಯ ದೋಷಗಳನ್ನು ನಿವಾರಿಸುವ ಪರಿಣಾಮಕಾರಿ ಮಾರ್ಗವನ್ನು ನಾವೆಲ್ಲ ಇಂದು ಹುಡುಕಲೇಬೇಕಾಗಿದೆ.. ಒಟ್ಟಿನಲ್ಲಿ "ಬೇಲಿ" ಇದ್ದಾಗ ಪ್ರಜಾಸಮೂಹವೆಂಬ "ಹೊಲ" ದಲ್ಲಿ ಬೆಳೆದಿರುವ ಬೆಳೆಯನ್ನು ಪ್ರಾಮಾಣಿಕವಾಗಿ ರಕ್ಷಿಸಿಕೊಳ್ಳುವ ಪ್ರಜಾತಂತ್ರದ ಅರ್ಥವನ್ನೂ, ಕಾನೂನು ವ್ಯವಸ್ಥೆಯ ಅಸ್ತಿತ್ವವನ್ನೂ ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ಸಮಾಜ ನಿರಂಕುಶವಾಗಿ ಅರಾಜಕತೆಯತ್ತ ಸಾಗುತ್ತದೆ ಎಂಬುದು ಒಟ್ಟೂ ಕಾದಂಬರಿಯ ಒಳದನಿ.

ಈ ಕಾದಂಬರಿಯನ್ನು ಶ್ರೀ. ಜಿ.ಎಚ್. ರಾಘವೇಂದ್ರ ಅವರು ತಮ್ಮ ಎಂದಿನ ಹರಿತ ವಿಡಂಬನೆಗಳ ಮೂಲಕ ರಂಗಕ್ಕೆ ಅಳವಡಿಸಿದ್ದಾರೆ. ಇಂದಿನ ಪ್ರಸ್ತುತ ರಾಜಕೀಯ ಸನ್ನಿವೇಷಗಳಿಗೆ ಸಮೀಕರಿಸಿ, ವಿನ್ಯಾಸಗೊಳಿಸಿ ಅದನ್ನು ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘಕ್ಕೆ ನಿರ್ದೇಶಿಸುತ್ತಿದ್ದೇನೆ. ದಯವಿಟ್ಟು ಬನ್ನಿ...ನಾಟಕ ನೋಡಿ...


2 comments:

  1. naanu mechchida kaadambariyallondu kumviyavara beli mattu hola. adannu naatakavannagisi parivartisida raghavendrarigu rangadalli nrdeshisuttiruva tamagu vandanegalu

    ReplyDelete
  2. ನಮ್ಮ ತಂಡಕ್ಕೆ ಬೇಲಿ ಮತ್ತು ಹೊಲ ನಾಟಕವನ್ನು ತಾವು ನಿರ್ದೇಶಿಸುತ್ತೀರಿ ಎಂದು ತಿಳಿದು ನಮಗೆಲ್ಲಾ ತುಂಬಾ ಸಂತೋಷವಾಯಿತು. ಜಿ.ಹೆಚ್ ರವರು ಅದನ್ನು ರಂಗರೂಪಕ್ಕೆ ತಂದ ಹಸ್ತಪ್ರತಿಯ ಡಿ.ಟಿ.ಪಿ. ಕೆಲಸವನ್ನು ನನಗೆ ವಹಿಸಿರುವುದು ಇನ್ನೂ ಹೆಚ್ಚು ಸಂತೋಷ ಹಾಗು ಹೆಮ್ಮೆಯೆನಿಸುತ್ತದೆ. ನಮ್ಮ ಸಂಘದ ಮೇಲೆ ತಾವು ತೋರುತ್ತಿರುವ ಅಭಿಮಾನಕ್ಕೆ ನಾವು ಚಿರಋಣಿಗಳು -: ರಾ.ಶಿ.ಕುಲಕರ್ಣಿ, ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ

    ReplyDelete