Saturday, May 9, 2009

" ಇಲ್ಗ್ಯಾಕೋ ಬಂದೆ ಬೋ.... ಮಗನೇ " ಅಂದವಳ ಕಥೆ....

ಅವು ೧೯೮೯ ರ ದಿನಗಳು...ಇಡೀ ರಾಜ್ಯದಲ್ಲಿ ಸಾಕ್ಷರತೆ ಎನ್ನುವುದು ವಿಚಿತ್ರ ಸಾಂಕ್ರಾಮಿಕ ರೋಗದಂತೆ ಹಬ್ಬಿತ್ತು...ನನಗೆ ಮೊದಲೇ ನಾಟಕ, ಸಂಗೀತದ ಹುಚ್ಚು...ಮನೆಯಲ್ಲಿ ಅದಕ್ಕೆ ಎಲ್ಲರಿಂದಲೂ ವಿರೋಧ... ಅಷ್ಟರಲ್ಲಿಯೇ ಭಾರತ ಜ್ಞಾನ ವಿಜ್ಞಾನ ಸಮೀತಿಯವರು ರಾಜ್ಯಮಟ್ಟದ ಬೀದಿನಾಟಕದ ಕಾರ್ಯಾಗಾರವನ್ನು ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ಆಯೋಜಿಸಿದ್ದರು. ನಾಡಿನ ಹೆಸರಾಂತ ರಂಗ ತಜ್ಞರು ಪ್ರಸ್ತುತ ಶಿಬಿರದಲ್ಲಿ ತರಬೇತಿ ನೀಡುವವರಿದ್ದರು....ಇದರಲಿ ಭಾಗವಹಿಸಲು ಯಾರಿಗೂ ಕೇಳದೆ ಓಡಿ ಹೋಗಿದ್ದೆ.

ಸಿ. ಬಸವಲಿಂಗಯ್ಯ, ಜನ್ನಿ, ರಘುನಂದನ್ ಮುಂತಾದವರು ನೀಡುವ ತರಬೇತಿಯನ್ನು ತಪ್ಪಿಸಿಕೊಳ್ಳಲು ನಾನು ಸಿದ್ಧನಿರಲಿಲ್ಲ....ತಕ್ಷಣ ಮನೆಯಲ್ಲಿ ಯಾರಿಗೂ ಹೇಳದೆ ಅಲ್ಲಿಗೆ ಓಡಿಹೋದೆ...ನಿಜಕ್ಕೂ ಅದೊಂದು ಅದ್ಭುತ ಅನುಭವ....ನಾಡಿನ ಸುಮಾರು ೫೦ ಜನ ರಂಗಕರ್ಮಿಗಳು ಆ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು...ಎಲ್ಲರೂ ಒಬ್ಬರಿಗಿಂತ ಒಬ್ಬರು ದೈತ್ಯರು...ಆ ಹದಿನೈದು ದಿನಗಳು ಹೇಗೆ ಕಳೆದು ಹೋದವು ಎಂದು ಗೊತ್ತಾಗಲೇ ಇಲ್ಲ...ನಂತರ ತರಬೇತಿ ಪಡೆದ ನಾವು ಕರ್ಣಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ, ಅಲ್ಲಿ ಬೀದಿನಾಟಕ, ಹಾಡು ಮುಂತಾದವುಗಳ ಮೂಲಕ ಅನಕ್ಷರಸ್ಥರಿಗೆ ಅಕ್ಷರದ ಮಹತ್ವ ತಿಳಿಸುವುದು, ನಂತರ ಅಲ್ಲಿ ನೆರೆದ ಜನರೊಂದಿಗೆ ಸಂವಾದ ನಡೆಸಿ ಅವರು ಅಕ್ಷರ ಕಲಿಯಲು ಮನವೊಲಿಸುವುದು...ಇದು ನಮ್ಮ ಕೆಲಸವಾಗಿತ್ತು...

ಅದು ಶಿವಮೊಗ್ಗ ಜಿಲ್ಲೆಯ ಒಂದು ಹಳ್ಳಿ...ಸಂಜೆಯ ಸೂರ್ಯ ಆಗತಾನೆ ನೆಸರದ ಅಂಚಿನಲ್ಲಿ ಮಾಯವಾಗುವ ಸನ್ನಾಹದಲಿದ್ದ...ನಮ್ಮ ತಂಡ ಆ ಹಳ್ಳಿಯಲ್ಲಿ ಬಂದು ಇಳಿಯಿತು. ನಮ್ಮ ತಮಟೆಯ ಸದ್ದು...ಹಾಡುಗಳನ್ನು ಕೇಳುತ್ತಿದ್ದಂತೆಯೇ ಚಿಕ್ಕ ಚಿಕ್ಕ ಮಕ್ಕಳ ಗುಂಪು ನಮ್ಮ ಹಿಂದೆ ಕುತೂಹಲದಿಂದ ಬೆನ್ನಟ್ಟಿ ಬರುತ್ತಿದ್ದರು... ಅದು ಒಂದು ರೀತಿಯ ಸಂಭ್ರಮದ ವಾತಾವರಣ... ನಂತರ ಅರ್ಧಗಂಟೆಯಲ್ಲಿ ನಮ್ಮ ತಂಡ ಊರಿನ ಮಾರುಕಟ್ಟೆ ಪ್ರದೇಶದಲ್ಲಿ ಬಂದು ಸೇರುವ ಹೊತ್ತಿಗೆ ಅರ್ಧ ಊರೇ ಅಲ್ಲಿ ಜಮೆಯಾಗಿತ್ತು...ಕ್ರಮೇಣ ನಮ್ಮ ತಂಡದ ಮುಖ್ಯಸ್ಥ ಪ್ರಾಸ್ತಾವಿಕವಾಗಿ ಮಾತನಾಡಿದರು...ನಮ್ಮ ನಾಟಕ ಆರಂಭವಾಯಿತು...ಅದಕ್ಕೆ ದೊರೆತ ಪ್ರತಿಕ್ರಿಯೆ ಅದ್ಭುತವಾಗಿತ್ತು...ನಾಟಕ ಮುಗಿದ ನಂತರ ನಮ್ಮ ತಂಡದ ಪ್ರತಿಯೊಬ್ಬರೂ ಜನರೊಂದಿಗೆ ಸಂವಾದಕ್ಕಿಳಿದರು..ನಾನು ಸಹ ಕೆಲವರೊಂದಿಗೆ ಮಾತನಾಡುತ್ತ ಅವರ ಅಭಿಪ್ರಾಯವನ್ನು ಪಡೆಯುತ್ತಿದ್ದಂತೆಯೇ ಹತ್ತಿರದಲ್ಲಿಯೇ ಇದ್ದ ಒಂದು ಪುಟ್ಟ ಗುಡಿಸಲಿನತ್ತ ನನ್ನ ದೃಷ್ಥಿ ಬಿಟ್ಟು....

ಅ ಹೆಂಗಸಿನ ವಯಸ್ಸು ೨೦-೨೨ ರ ಆಸು ಪಾಸಿನಲ್ಲಿರಬೇಕು... ಮೊದಲ ನೋಟಕ್ಕೆ ಯಾರನ್ನಾದರು ಮರುಳು ಮಾಡುವಂತಹ ರೂಪವತಿ ಅವಳು... ನಿಧಾನವಾಗಿ ಅವಳ ಹತ್ತಿರ ಹೋಗಿ ಅವಳ ಹೆಸರನ್ನು ಕೇಳುವ ಪ್ರಯತ್ನದಲ್ಲಿರುವಾಗಲೇ "ಇಲ್ಲ್ಯಾಕೋ ಬಂದೆ ಬೋಳಿ ಮಗನೆ"...ಥಟ್ಟನೆ ಅವಳ ಬಾಯಿಂದ ಉದುರಿದ ಮಾತಿದು...ಇದರಿಂದ ಸುಧಾರಿಸಿಕೊಳ್ಳುವ ಮೊದಲೇ "ಮೊದಲು ಇಲ್ಲಿಂದ ಹೊರಟು ಹೋಗು ಸೂ....ಮಗನೆ" ಮತ್ತೊಂದು ಬಾಂಬ್ ಸಿಡಿಯಿತು. ಸಾವರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ತಕ್ಷಣ ಅಲ್ಲಿಂದ ಕಾಲ್ಕಿತ್ತೆ...ನನ್ನ ತಂಡದ ಮುಖ್ಯಸ್ಥರಿಗೆ ಈ ವಿಷಯ ತಿಳಿಸಿ ಅವರನ್ನು ನನ್ನ ಜೊತೆಗೆ ಕರದುಕೊಂಡು ಬಂದೆ....ಮೊದಲ ಮಾತಿಗೆ ನನ್ನ ತಂಡದ ನಾಯಕರಿಗೂ ಅವಳಿಂದ ಮುತ್ತುಗಳ ಸುರಿಮಳೆ....

ನಿಧಾನವಾಗಿ ಅವಳನ್ನು ನಾವಿಬ್ಬರೂ ಮಾತಿಗೆ ಎಳೆದು ವಸ್ತು ಸ್ಥಿತಿಯನ್ನು ತಿಳಿದುಕೊಳ್ಳುವ ಹೊತ್ತಿಗೆ ಸುಮಾರು ಸಮಯವನ್ನು ಅಲ್ಲಿಯೇ ಕಳೆದಿದ್ದೆವು...ಅವಳ ಗಂಡ ಕುಡುಕ...... ಕುಡಿದು ಬಂದು ಮನೆಯಲ್ಲಿ ಗಲಾಟೆ...ಊರಿನವರಿಂದ ವಿಚಿತ್ರ ಮಾತುಗಳು....ಈ ಹೆಣ್ಣುಮಗಳಿಗೆ ಓದಲು ಬರದು....ಅದಕ್ಕೂ ಜನರ ಹಿಂಸೆ ನೀಡುವ ಮಾತುಗಳು... ಈ ಹೆಣ್ಣು ಮಗಳು ಇಂತಹ ಚುಚ್ಚು ಮಾತುಗಳಿಂದ ದಿಕ್ಕು ಕಾಣದೆ ೨-೩ ಬಾರಿ ಆತ್ಮ ಹತ್ಯೆಗೂ ಪ್ರಯತ್ನ ಮಾಡಿದ್ದಾಳೆ...ಇವೆಲ್ಲವುದರ ಮಧ್ಯೆ ಅವಳು ಅಕ್ಷರ ಕಲಿತಿಲ್ಲ ಎಂದು ಹಿಯಾಳಿಸಲು ನಾವು ಬೇರೆ ಅಲ್ಲಿಗೆ ಬಂದಿದ್ದೇವೆ....ಇದು ಅವಳ ವಾದ ಮತ್ತು ಅದಕ್ಕೆಂದೇ ಅವಳು ನಮ್ಮನ್ನು ಆ ರೀತಿ ಬೈದು ಅಲ್ಲಿಂದ ಹೊರಡು ಎಂದು ಹೇಳಿದ್ದು....

ಅವಳಿಗೆ ಅಕ್ಷರ ಕಲಿಯುವುದರಿಂದ ಆಗುವ ಪ್ರಯೋಜನ, ಸಮಾಜವನ್ನು ಎದುರಿಸಲು ಅಕ್ಷರ ಹೇಗೆ ಪ್ರಬಲ ಮಾಧ್ಯಮವಾಗಬಲ್ಲದು....ಎಂದೆಲ್ಲಾ ತಿಳಿಸಿ ಹೇಳಿದ ನಂತರ ನಮ್ಮ ಮಾತಿಗೆ ಸಮ್ಮತಿ ಸೂಚಿಸಿದ ಅವಳಿಗೆ ನಮ್ಮ ವಿಳಾಸ ನೀಡಿ ಅಲ್ಲಿಂದ ಹೊರಟು ಬಂದಿದ್ದೆವು....

ಸುಮಾರು ಎರಡು ವರ್ಷಗಳ ನಂತರ...ಬಹುತೇಕ ನಾನು ಈ ಘಟನೆಯನ್ನು ಮರೆತೆ ಬಿಟ್ಟಿದ್ದೆ...ಅಷ್ಟರಲ್ಲಿ ಒಂದು ಪತ್ರ ಬಂದಿತ್ತು ..."ನಾನೀಗ ಅಕ್ಷರ ಕಲಿತಿದ್ದೇನೆ...ನಿಮ್ಮ ಉಪಕಾರಕ್ಕೆ ಧನ್ಯವಾದಗಳು" ಇದು ಪತ್ರದ ಒಕ್ಕಣಿಕೆ....

ಮುಖದ ಮೇಲೆ ಒಂದು ಸಣ್ಣ ಮುಗುಳ್ನಗೆ...ಏನೋ ಒಂದು ಧನ್ಯತಾ ಭಾವ ಸುಳಿದು ಹೋಗಿತ್ತು....








1 comment:

  1. Dear Dhananjay. Good photograph. where is it? Keep it Up. Do write more.

    ReplyDelete