Friday, May 21, 2010

ತಪ್ಪು ಗ್ರಹಿಕೆ ಮತ್ತು ಅದಕ್ಕೆ ಸ್ಪಷ್ಟನೆ........

ಕಳೆದ ವಾರ ಪ್ರಜಾವಾಣಿಯ ವಾಚಕರ ವಾಣಿ ಅಂಕಣದಲ್ಲಿ "ರಂಗಾಯಣದಲ್ಲಿ ದೊಂಬರಾಟ" ಎಂಬ ಪತ್ರವನ್ನು ಬರೆದಿದ್ದೆ. ಅದಕ್ಕೆ ಇಂದು ಬೆಂಗಳೂರಿನಿಂದ ಜಿ.ಎನ್. ನಿಶಾಂತ್ ಅವರು ಪ್ರತಿಕ್ರೀಯಿಸಿ "ಕುವೆಂಪು ಬಗ್ಗೆ ಅಸಹನೆ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವೊಂದು ಸಲ ಪತ್ರದ ಒಳ ನೋಟ ಏನಿದೆ ಮತ್ತು ಅದರ ಹಿಂದಿನ ಕಾಳಜಿ ಎಂತಹುದು ಎಂದು ಅರ್ಥೈಸಿ ಕೊಳ್ಳದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ.

ನಾನು ನನ್ನ ಪತ್ರದಲ್ಲಿ ಎಲ್ಲಿಯೂ ಕುವೆಂಪು ಅವರ ಬಗ್ಗೆ ಅಸಹನೆಯನ್ನು ವ್ಯಕ್ತ ಪಡಿಸಿಲ್ಲ ಮತ್ತು ಆ ಯೋಗ್ಯತೆಯೂ ನನಗಿಲ್ಲ. ಸಿ.ಬಸವಲಿಂಗಯ್ಯ ಅವರ ಪ್ರತಿಭೆಯ ಬಗ್ಗೆ ಆಗಲೀ ಅವರ ಕೆಲಸದ ಬಗ್ಗೆಯಾಗಲೀ ಯಾರು ಕೂಡ ಅಪಸ್ವರ ಎತ್ತುವ ಹಾಗೆ ಇಲ್ಲ. ನಾನೂ ಸಹ ಬಸೂ ಅವರ ಹತ್ತಿರ ಕೆಲಸಮಾಡಿದ್ದೇನೆ, ಮತ್ತು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರಲು ಅವರು ನನಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವೇ ಕಾರಣ.

ರಂಗಾಯಣದ ಕುರಿತು ನಾನು ಮಾತನಾದುತ್ತಿರುವುದು ಇದೇ ಮೊದಲ ಸಲವೇನಲ್ಲ. ರಂಗಾಯಣದ ಬಗ್ಗೆ ಅಪಾರ ಪ್ರೀತಿ ವಿಶ್ವಾಸಗಳಿರುವುದರಿಂದಲೇ ಅದರ ಬಗ್ಗೆ ನಾನು ಕಾಳಜಿ ಪೂರ್ವಕವಾಗಿ ಲೇಖನಗಳನ್ನು ಬರೆದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿ, ನಾನು ರಂಗಾಯಣದ ವಿರೋಧಿ ಎಂಬರ್ಥದಲ್ಲಿ ಪ್ರತಿಕ್ರೀಯೆಗಳು ಬರಲಾರಂಭಿಸಿರುವುದು ದುರಂತ.

ನಾನಿಲ್ಲಿ ಪ್ರಶ್ನಿಸುತ್ತಿರುವುದು ವ್ಯವಸ್ಥೆಯನ್ನು ಹಾಗೂ ಸರಕಾರದ ಮಲತಾಯಿ ಧೋರಣೆಯನ್ನು. ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆಯೇ ಎಂಬ ನನ್ನ ಪ್ರಶ್ನೆಗೆ ನಿಶಾಂತ್ ಅವರು ಹಾಗಿದ್ದರೆ ಎಲ್ಲರೂ ಸೇರಿ ಪ್ರತಿಭಟಿಸೋಣ ಎಂದಿದ್ದಾರೆ. ಹಾಗಿದ್ದರೆ ಇಷ್ಟು ದಿನಗಳ ವರೆಗೆ ಈ ವಿಷಯ ನಿಮಗೆ ತಿಳಿದಿರಲಿಲ್ಲವೇ? ಧಾರವಾಡದಲ್ಲಿ ರಂಗಾಯಣ ಘಟಕ ಆರಂಭವಾದಾಗಿನಿಂದ ಅದು ಗೊಂದಲದ ಗೂಡಾಗಿಯೇ ಪರಿಣಮಿಸಿದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದು, ಅದು ಧಾರವಾಡದಲ್ಲಿಯೂ ಸಹ ಮುಂದುವರೆದು ರಂಗಭೂಮಿಯ ಎಲ್ಲ ರೀತಿಯ ಕೆಲಸಗಳಿಗೆ ಮೈಸೂರಿನಿಂದ ಜನರನ್ನು ಕರೆಯಿಸಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಕಡೆಗಣಿಸಿದ್ದೇಕೆ? ಹೋಗಲಿ ಇದುವರೆಗೆ ಧಾರವಾಡದ ರಂಗಾಯಣ ಸಾಧಿಸಿದ್ದಾದರೂ ಏನು? ಸರಕಾರದ ಎಲ್ಲ ಹಿರಿಯ ಅಧಿಕಾರಿಗಳು ರಜಾದಿನದ ಸವಿಯನ್ನು ಸವಿಯುವ ಹಾಗೆ ಬಂದು ಭರಪೂರ ಆಶ್ವಾಸನೆಗಳನ್ನು ಕೊಟ್ಟು ಮತ್ತೆ ರಾಜಧಾನಿಯ ಕಡೆಗೆ ತಮ್ಮ ಗಾಡಿಯನ್ನು ಬಿಡುತ್ತಾರೆ. ರಾಜಧಾನಿ ತಲುಪಿದ ನಂತರ ಅವರಿಗೆ ಇದಾವುದೂ ನೆನಪಿರುವುದಿಲ್ಲ.

ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಸರಕಾರ ಯಥೇಚ್ಛವಾಗಿ ರಂಗಚಟುವಟಿಕೆಗೆ ಹಣ ನೀಡುವುದಾದರೆ, ಉತ್ತರ ಕರ್ನಾಟಕದ ರಂಗಚಟುವಟಿಕೆಗೂ ಸಹ ಯಾಕೆ ನೀಡಬಾರದು? ನಾವು ಅನೇಕ ಸಲ ರಂಗಚಟುವಟಿಕೆಗಳಿಗಾಗಿ ಸರಕಾರಕ್ಕೆ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅವರಿಂದ ಇಂತಹ ಮನವಿಗಳಿಗೆ ಯಾವುದೇ ಉತ್ತರವಿರುವುದಿಲ್ಲ. ಇದ್ದರೂ ಸಹ ಅದು ನಕಾರಾತ್ಮಕವಾಗಿರುತ್ತದೆ. ಬಹುಶಃ ನಮ್ಮ ಜನರಿಗೆ ಇಲ್ಲಿನ ಜನರ ತರಹ ಲಾಬಿ ಮಾಡಲು ಬರುವುದಿಲ್ಲ ಎನಿಸುತ್ತದೆ. ಅಥವಾ ಅಂತಹ ಲಾಬಿಗೆ ನಾವು ಯೋಗ್ಯರಲ್ಲ ಎಂದು ಸುಮ್ಮನಾಗುತ್ತಾರೆ.


1 comment:

  1. ತಮ್ಮ ಲೇಖನದ ಮೊದಲ ಕೆಲವು ಸಾಲುಗಳು ಕುವೆ೦ಪುರವರ ಮಲೆಗಳಲ್ಲಿ ಮದುಮಗಳು ಕೃತಿಯ ನಾಟಕ ಮಾಡುವಲ್ಲಿನ ಹಣದ ಪೋಲು ಎ೦ಬ೦ತಿರುವದು ತಮ್ಮನ್ನು ಕುವೆ೦ಪು ಕೃತಿಗೆ ವಿರೋಧಿ ಎ೦ಬ ಕಲ್ಪನೆ ನನಗೂ ಮೊದಲು ಅನಿಸಿದರೂ ಕೊನೆಗೆ ತಮ್ಮ ಕಳಕಳಿ ಏನು ಎ೦ದು ಅರ್ಥವಾಗಿತ್ತು. ಈ ಲೇಖನದ ಮೂಲಕ ತಮ್ಮ ನಿಲುವು ಹಾಗೂ ಕಾಳಜಿಯೇನು ಎ೦ಬು೦ದನ್ನು ಸ್ಫಷ್ಟ ಪಡಿಸಿದ್ದು ಅಭಿಪ್ರಾಯಭೇಧ ನಿವಾರಿಸಿದ೦ತಾಗಿದೆ.

    ReplyDelete