Wednesday, December 30, 2009

ಒಂದೆಡೆ ಯಜಮಾನನ ಅಗಲಿಕೆಯ ನೋವು...ಇನ್ನೊಂದೆಡೆ ಹೇಸಿಗೆ ತರಿಸುವಷ್ಟು ರಾಜಕೀಯ...











ಮನೆಯ ಯಜಮಾನನ ನಿರ್ಗಮನವಾಗಿದೆ...ಅಲ್ಲಿ ಈಗ ಕೇವಲ ನೀರವ ಮೌನ ಮಾತ್ರ....ಬಿಕ್ಕಳಿಕೆಗಳಿಗೂ ಹೊಸ ಅರ್ಥಗಳು ಹುಟ್ಟಲಾರಂಭಿಸಿವೆ....ಹುಟ್ಟು ಸಾವುಗಳನ್ನು ನಾನು ಮೊದಲಿನಿಂದಲೂ ಸಮಾನವಾಗಿ ಸ್ವೀಕರಿಸುತ್ತ ಬಂದವ...ನನ್ನ ಪ್ರಾಣ ಸ್ನೇಹಿತನ ತಂದೆಯವರು ನನ್ನ ತೊಡೆಯ ಮೇಲೆ ತಮ್ಮ ಪ್ರಾಣವನ್ನು ಬಿಟ್ಟಾಗ ಸಾವನ್ನು ಕಣ್ಣಾರೆ ಕಂಡವ ನಾನು..ಆಗ ನನಗೆ ೨೩ ವರ್ಷ ವಯಸ್ಸು....ಆಗಲೂ ಸಹ ನನಗೆ ಕಣ್ಣಿನಿಂದ ಒಂದು ಹನಿ ನೀರು ಹೊರಬರಲಿಲ್ಲ...ಬದಲಾಗಿ ಅವರ ನಿರ್ಜೀವ ದೇಹವನ್ನು ನನ್ನ ತೊಡೆಯಿಂದ ಕೆಳಗೆ ಇಳಿಸಿದವನೆ ಹೊರಗೆ ಅವರ ಅಂತಿಮ ಸಂಸ್ಕಾರದ ತಯಾರಿಗಳನ್ನು ಮಾಡುವತ್ತ ನಡೆದೆ....

ಆದರೆ ಯಾಕೋ ಗೊತ್ತಿಲ್ಲ..ಡಾ. ವಿಷ್ಣುವರ್ಧನ್ ಅವರ ಸಾವು ನನ್ನಲ್ಲಿ ಒಂದು ತರಹದ ಮೂಕವೇದನೆಯನ್ನು ಸೃಷ್ಟಿಸಿದೆ....ಟಿವಿ ಚಾನೆಲ್‍ಗಳಲ್ಲಿ ಅವರ ನಿಧನದ ಸುದ್ದಿಯನ್ನು ನೋಡುತ್ತಿದ್ದಂತೆಯೆ ಅದೆಲ್ಲಿತ್ತೋ ಗೊತ್ತಿಲ್ಲ ದುಖಃ ತನ್ನಷ್ಟಕ್ಕೆ ತಾನೇ ಉಕ್ಕಿ ಬಂತು....ಖಂಡಿತವಾಗಿಯೂ ವಿಷ್ಣು ಒಬ್ಬ ಮಾನವತಾವಾದಿ..ಎಂದಿಗೂ ಅವರು ತಾವಾಗಿಯೇ ಗೊಂದಲಗಳಲ್ಲಿ ಬೀಳಲಿಲ್ಲ...ರಾಜಕೀಯದಿಂದ ನಾನೊಂದು ತೀರ ನೀನೊಂದು ತೀರ ಎಂಬಂತೆ ಬದುಕಿದರು....ಅದೊಂದು ವಿಶಿಷ್ಟ ವ್ಯಕ್ತಿತ್ವ....ಇಂಟರೆಸ್ಟಿಂಗ್ ಕ್ಯಾರೆಕ್ಟರ್...ಮುಂದೆ ಅನಿರುದ್ಧ ಅವರ ಅಳಿಯನಾದ...ಅವನು ಧಾರವಾಡದಲ್ಲಿ ನಮ್ಮ ಗರಡಿಯಲ್ಲಿ ಪಳಗಿದವ..ನಮ್ಮೊಂದಿಗೆ ನಾಟಕ ಮಾಡಿದ ಹುಡುಗ....ರಂಗಭೂಮಿಯ ಬಗ್ಗೆ ಅವನಿಗಿರುವ ನಿಷ್ಠೆ, ಒಲವನ್ನು ಯಾರೇ ಆಗಲಿ ಮೆಚ್ಚಲೇ ಬೇಕು...ಅವನ ತಂಗಿ ಅರುಂಧತಿ ಸಹ ಅಷ್ಟೇ...

ಇಡೀ ರಾಜ್ಯ ವಿಷ್ಣು ಅವರ ಸಾವಿನ ಶೋಕಾಚರಣೆಯಲ್ಲಿ ಮುಳುಗಿತ್ತು..ರಾಜ್ಯ ಸರ್ಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಅಗಲಿದ ಜೀವಕ್ಕೆ ಶಾಂತಿ ಕೋರಿತು....ಆದರೆ...ನಮ್ಮ ನೀಚ ನಾಲಾಯಕ್ ರಾಜಕಾರಣಿಗಳು ಮಾತ್ರ ಇದೇನೂ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸಿದ್ದು, ನಮ್ಮ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿತು. ಒಂದು ಕಡೆ ವಿಷ್ಣುವರ್ಧನ್ ಅವರ ಸಾವಿಗೆ ಸಂತಾಪ ಸೂಚಿಸುವ ಸಲುವಾಗಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ, ವಿಧಾನ ಸಭೆಯಲ್ಲಿ ಇದನ್ನಾವುದನ್ನು ಲೆಕ್ಕಿಸದೇ ವಿಧಾನ ಸಭಾಧ್ಯಕ್ಷರ ಆಯ್ಕೆಯ ಪ್ರಕ್ರೀಯೆಯಲ್ಲಿ ತೊಡಗಿಕೊಂಡಿತು. ಇದು ನಮ್ಮ ನಾಡಿನ ಹಿರಿಯ ಕಲಾವಿದರಿಗೆ ಕೊಡುವ ಗೌರವವೇ? ಇಷ್ಟಕ್ಕೆ ಸುಮ್ಮನಾಗದ ನಮ್ಮ ಪ್ರತಿಪಕ್ಷದ ನಾಯಕರುಗಳು ಅಲ್ಲಿ ವರ್ತಿಸಿದ ರೀತಿ ಇನ್ನೂ ಘೋರ....

ಮುಖ್ಯ ಮಂತ್ರಿಗಳೆ ನೀವು ನಿಮ್ಮ ಖುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ಗಳಿಂದ ಜನಸಾಮಾನ್ಯರಾದ ನಮಗೆ ವಾಕರಿಕೆ ಬರುತ್ತಿದೆ....ನಿಮಗೆ ಶೇಮ್! ಶೇಮ್!! ನಾಚಿಕೆಯಾಗಬೇಕು ನಿಮ್ಮಂತಹ ಹಿರಿಯ ನಾಯಕರಿಗೆ...ವಿಧಾನ ಸಭಾಧ್ಯಕ್ಷರ ಆಯ್ಕೆ/ಚುನಾವಣೆ ಒಂದು ದಿನ ಮುಂದೂಡಿದ್ದರೆ ಇಡೀ ವಿಶ್ವ ಪ್ರಳಯ ವಾಗುತ್ತಿತ್ತೇ? ಅಥವಾ ನಿಮ್ಮ ಬೊಕ್ಕಸಕ್ಕೆ ಬಂದು ಬೀಳುವ ಮಾಮೂಲಿ ನಿಂತು ಹೋಗುತ್ತಿತ್ತೇ? ಥೂ ನಿಮ್ಮ....ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತೀರಿ..ಮತ್ತೆ ಜನರ ಮುಂದೆ ಕಣ್ಣೀರು ಹಾಕುವುದು....ಇಂತಹ ತಪುಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂಬ ಸಾರ್ವಜನಿಕ ಹೇಳಿಕೆ ನೀಡುವುದು...ಏನಾಗಿದೆ ನಿಮ್ಮ ಬುದ್ಧಿಗೆ?

ಒಂದು ಕಡೆ ರಾಜಕಾರಣಿಗಳ ಹಾರಾಟ ನಡೆಯುತ್ತಿದ್ದರೆ, ಕನ್ನಡದ ಹೆಸರಿನಲ್ಲಿ ಗೂಂಡಾ ಪ್ರವೃತ್ತಿಯಲ್ಲಿ ತೊಡಗಿಕೊಂಡವರ ಕೆಲವರ ಪುಂಡತನ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕಾರು/ಜೀಪುಗಳಲ್ಲಿ ಕನ್ನಡದ ಧ್ವಜವನ್ನು ಹಿಡಿದುಕೊಂಡು ಅಂಗಡಿ ಮುಗ್ಗಟ್ಟುಗಳನ್ನು, ಕಚೇರಿಗಳನ್ನು ಮುಚ್ಚಿಸುವ ಕಾಯಕದಲ್ಲಿ ತೊಡಗಿದ್ದರು. ಯಾರಾದರೂ ಸ್ವಲ್ಪ ವಿರೋಧ ವ್ಯಕ್ತಪಡಿಸಿದಲ್ಲಿ ಅವರ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಗೊಳಿಸಿ, ಅವರನ್ನು ಸಹ ಮನ ಬಂದಂತೆ ಥಳಿಸಿ ಅಲ್ಲಿಂದ ಕಾಲ್ಕಿತ್ತುತ್ತಿದ್ದರು. ಯಾವ ಪುರುಷಾರ್ಥಕ್ಕಾಗಿ ಈ ಎಲ್ಲ ಸಾಹಸ? ಹೀಗೆ ಒತ್ತಾಯ ಪೂರ್ವಕವಾಗಿ "ಬಂದ್" ಮಾಡಿಸಿ ಇವರುಗಳು ಏನನ್ನು ಸಾಧಿಸ ಹೊರಟಿದ್ದಾರೆ? ಬದಲಿಗೆ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಇವರು ತಮ್ಮ ಎಲ್ಲ ಶಕ್ತಿಯನ್ನು ಪ್ರದರ್ಶಿಸಿದ್ದರೆ ಅದು ನಾಡಿನ ಉಳಿದೆಲ್ಲರಿಗೆ ಮಾದರಿಯಾಗುತ್ತಿತ್ತು.

ಯಾಕೋ ಗೊತ್ತಿಲ್ಲ....ನಮ್ಮ ನಾಡಿಗೆ ಒಳ್ಳೆಯ ಗತಿ ಬರುವ ಲಕ್ಷಣಗಳಂತೂ ಸಧ್ಯಕ್ಕೆ ತೋರುತ್ತಿಲ್ಲ....

3 comments: