Saturday, August 22, 2009

ಪಾರಿವಾಳದ ಆಟ ಛಂದ....


ಕನ್ನಡದ ಕಬೀರರೆಂದೆ ಖ್ಯಾತರಾಗಿರುವ ಶರೀಫರ "ಪಾರಿವಾಳದ ಆಟ ಛಂದ...ಅದ ನೋಡುತ ಕುಂತರೆ ಮನಸಿಗಾನಂದ......" ಈ ಹಾಡನ್ನು ಕೇಳುತ್ತಿದ್ದರೆ ನಿಜಕ್ಕೂ ಮನಸಿಗಾನಂದವಾಗುತ್ತದೆ...ಹಿರಿಯ ಗಾಯಕ ಸಿ.ಅಶ್ವಥ್ ಇದನ್ನು ಬಹಳ ಸೊಗಸಾಗಿ ಸಂಯೋಜಿಸಿದ್ದಾರೆ...ಈಗ ನಾನು ಶರೀಫರು, ಪಾರಿವಾಳ ಮತ್ತು ಅಶ್ವಥ್ ಅವರ ನೆನಪನ್ನು ತೆಗೆಯಲು ಕಾರಣವಿಷ್ಟೇ...ನನ್ನ ಮನೆಯ ಬಾಲ್ಕನಿಯಲ್ಲಿ ನಾನೇ ನಿರ್ಮಿಸಿಕೊಂಡ ಒಂದು ಪುಟ್ಟ ಕೈತೋಟದಲ್ಲಿ ಪಾರಿವಾಳ ದಂಪತಿ ಈಗ ೨೦-೨೫ ದಿನಗಳ ಹಿಂದೆ ತಮ್ಮ ಸಂಸಾರ ಹೂಡಲು ಆರಂಭಿಸಿವೆ...ಬೆಳಗಾಗೆದ್ದು ನೋಡಿದರೆ ಒಂದು ಖಾಲಿ ಹೂವಿನ ಕುಂಡದಲ್ಲಿ ಒಂದು ಪುಟ್ಟ ಮೊಟ್ಟೆ ಕಾಣಿಸಿತು.ಮಾರನೆ ದಿನ ಮತ್ತೊಂದು ಮೊಟ್ಟೆ...ಸುತ್ತ ಸಿಗುವ ಒಣ ಹುಲ್ಲು ಗರಿಕೆ, ಒಣಗಿದ ಎಲೆಗಳನ್ನು ತಂದು ಸಂಸಾರವನ್ನು ಹೂಡುವ ತಯಾರಿ ನಡೆಸಿಯೇ ಬಿಟ್ಟವು ಆ ಪಾರಿವಾಳ ದಂಪತಿ...ಬಹಳ ಜತನದಿಂದ ಮೊಟ್ಟೆಯನ್ನು ನೋಡಿಕೊಳ್ಳ ತೊಡಗಿದವು...


ಮೊದ ಮೊದಲು ನನ್ನನ್ನ ಹಾಗು ನನ್ನ ಮಗ ಸುಮೇಧನನ್ನು ನೋಡಿದರೆ ಪುರ್ರನೆ ಹಾರಿ ಹೋಗುತ್ತಿದ್ದ ಪಾರಿವಾಳಗಳು ಕ್ರಮೇಣ ನಮಗೆ ಈಲಾದವು...ಬರೋಬ್ಬರಿ ಮೊಟ್ಟೆ ಇಟ್ಟ ಹದಿನೆಂಟನೇ ದಿನಕ್ಕೆ ನಾನು ಬೆಳಿಗ್ಗೆ ಎದ್ದು ಗಿಡಗಳಿಗೆ ನೀರುಣಿಸಲು ಬಾಲ್ಕನಿಗೆ ಬಂದಾಗ ಮೊಟ್ಟೆಯೊಡೆದು ಎರಡು ಪುಟ್ಟ ಪಾರಿವಾಳಗಳು ಜಗತ್ತಿಗೆ ಕಣ್ಣು ಬಿಡುತ್ತಿದ್ದವು... ನನ್ನ ಮಗನಿಗೆ ಅವುಗಳ ಮೇಲಿನ ಕಾಳಜಿ ಇನ್ನೂ ಹೆಚ್ಚಾಯಿತು... ಮೊಟ್ಟೆ ಇಟ್ಟಾಗಿನಿಂದ ಹಿಡಿದು ಪ್ರತಿದಿನ ಅವುಗಳ ವಿವಿಧ ಭಂಗಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದೇನೆ....ನಿಜಕ್ಕೂ ಇದೊಂದು ಅದ್ಭುತ ಅನುಭವ...ಹುಟ್ಟಿದ ದಿನವೇ ತೆಗೆದ ಈ ಫೋಟೋ ನನಗೆ ಮತ್ತೆ ಮತ್ತೆ ಗೆಳೆಯ ಪ್ರಮೋದನ ಕವನದ ಸಾಲುಗಳನ್ನು ನೆನಪಿಗೆ ತರುತ್ತಿವೆ...


ಮಗಿವಿನ
ಭಾಷೆ
ತಾಯಿಗೆ ಮಾತ್ರ
ಅರ್ಥವಾಗುತ್ತೆ
ಯಾಕಂದರೆ
ತಾಯಿ-ಮಗುವಿನ
ಭಾಷೆ
ಪ್ರೀತಿಯಾಗಿರುತ್ತದೆ....


No comments:

Post a Comment