Sunday, August 2, 2009

ಹಳ್ಳಕ ಬಿದ್ರೆ ಆಳಿಗೊಂದ್ ಕಲ್ಲು...


ಗೆಳೆಯ ಯಶವಂತ ನಿರ್ದೇಶನದ "ಸಹಿ ರೀ ಸಹಿ" ನಾಟಕದಲ್ಲಿ ಒಂದು ಪಾತ್ರ ಬರುತ್ತದೆ..ಅದರ ಹೆಸರು ಗಲಗಲಿ ಎಂದು...ಅವನು ಮೂಲತಃ ಇನ್ಸುರನ್ಸ್ ಮಾರಾಟ ಮಾಡಿ ತನ್ನ ಉಪಜೀವನವನ್ನು ನಡೆಸುವವನು...ಆ ಪಾತ್ರದಲ್ಲಿ ಯಶವಂತ ಬಹಳ ಚನ್ನಾಗಿ ಅಭಿನಯಿಸುತ್ತಾನೆ... ಒಂದು ದೃಶ್ಯದಲ್ಲಿ ಅವನು ಮದನ್ ಸುಖಾತ್ಮೆಯ ಪಾತ್ರದ ಅನುಕರಣೆ ಮಾಡಬೇಕಾಗಿರುತ್ತದೆ....ಅದಕ್ಕಾಗಿ ಅವನ ಇಡೀ ಜನ್ಮ ವೃತ್ತಾಂತವನ್ನು ತಿಳಿದುಕೊಳ್ಳುವ ಕರ್ಮಕ್ಕೆ ಈ ಗಲಗಲಿ ಬಲಿಯಾಗಬೇಕಾಗುತ್ತದೆ...ಸುಖಾತ್ಮೆಯ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ಅವನಿಗೆ ಮೈಸೂರು ಬಳಿ ದೊಡ್ಡದಾದ ಪಿತ್ರಾರ್ಜಿತ ಆಸ್ತಿ ಇರುತ್ತದೆ..ದೊಡ್ಡ ಕುಟುಂಬ ಅದು...ಸುಖಾತ್ಮೆಯ ಹಂಡತಿ ಗಲಗಲಿಗೆ ಇದನ್ನೆಲ್ಲಾ ಹೇಳುತ್ತಾ ಹೋದಂತೆ ಗಲಗಲಿಯ ಕುತೂಹಲಕ್ಕೆ ಪಾರವೇ ಇರುವುದಿಲ್ಲ...ತಕ್ಷಣವೇ ಅವನ ಬಾಯಿಂದ ಒಂದು ಪ್ರಶ್ನೆ ಬರುತ್ತದೆ....."ಆ ಮನ್ಯಾಗ ಇಷ್ಟೆಲ್ಲಾ ಜನ ಇರತಾರಂತ ಹೇಳತೀರಿ..ಹಂಗಾರ ಅವರೆಲ್ಲ ಪಾಲಿಸಿ ಮಾಡಸ್ಯಾರೆನು?"....ಇಡೀ ಪ್ರೇಕ್ಷಕ ಸಮೂಹ ಹೊಟ್ಟೆ ಹುಣ್ಣಾಗುವಷ್ಟು ನಗುತ್ತದೆ...ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗಲಗಲಿ ಎನ್ನುವ ಪಾತ್ರಧಾರಿಗೆ ತನ್ನ ಕೆಲಸದ ಬಗ್ಗೆ ಇರುವ ಕಾರ್ಯನಿಷ್ಥೆ ಮತ್ತು ಆ ಕ್ಷಣದ ಸಮಯ ಪ್ರಜ್ಞೆ...

ಬಿಡಿ ಇದು ನಾಟಕದಲ್ಲಿ ಬರುವ ಪಾತ್ರದ ಬಗ್ಗೆ ಆಯ್ತು..ಇಂತಹುದೇ ಒಂದು ಪಾತ್ರ ನಿಜಜೀವನದಲ್ಲಿ ನಿಮಗೆ ಎದುರಾದರೆ ನಿಮ್ಮ ಪ್ರತಿಕ್ರೀಯೆ ಹೇಗಿರುತ್ತದೆ? ನೀವು ಹೊಸಪೇಟೆಗೆ ಬಂದರೆ ಸಾಕು ನಿಮಗೆ ಇಂತಹ ಒಂದು ಕ್ಯಾರೆಕ್ಟರ್ ಪರಿಚಯವಾಗುತ್ತದೆ...ಓರಿಯಂಟಲ್ ಇಸ್ನುರನ್ಸ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಚ್. ರಾಜಗೋಪಾಲ್ ಎಂಬ ವ್ಯಕ್ತಿಯೇ ಈ ಕ್ಯಾರೆಕ್ಟರ್....ರಂಗಭೂಮಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ನನ್ನ ನಿರ್ದೇಶನದ ದಫನ ನಾಟಕದಲ್ಲಿ ನಾನೇ ವಿಶೇಷವಾಗಿ ಸೃಷ್ಟಿಸಿದ ದೋಳಕನ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಅದ್ಭುತವಾಗಿ ಅಭಿನಯಿಸಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದುಕೊಂಡವರು...ಅವರು ನಾಟಕದಲ್ಲಿ ಭಾಗವಹಿಸಿರಲಿ ಬಿಡಲಿ....ಅವರಿಗೆ ಅಲ್ಲಿ ಪಾತ್ರವಿರಲಿ ಬಿಡಲಿ..ಸುಮ್ಮನೆ ಅಲ್ಲಿ ಅಂದರೆ ನಾಟಕದ ತಾಲೀಮು ನಡೆಯುವಲ್ಲಿ ತಪ್ಪದೆ ಹಾಜರಾಗುತ್ತಾರೆ ಮತ್ತು ಇತರೆ ಪಾತ್ರಧಾರಿಗಳ ಮೇಲೆ ನಿರರ್ಗಳವಾಗಿ ತಮ್ಮ "ವರ್ಕ್" ಶುರುವಿಟ್ಟುಕೊಳ್ಳುತ್ತಾರೆ...

ಚಂದ್ರು ಇವರನ್ನು ಅತ್ಯಂತ ಪ್ರೀತಿಯಿಂದ ಮತ್ತು ಶೃದ್ಧೆಯಿಂದ ಅಣ್ಣ ಅಂತಲೇ ಕರೆಯುವುದು...ಮತ್ತು ಚಂದ್ರು ಹೇಳುವುದನ್ನೆಲ್ಲ ಇವರು ನಂಬುತ್ತಾರೆ...ರಾತ್ರಿ ೧೨ ಗಂಟೆಯನಂತರ ಇವರಿಗೆ ಫೋನಾಯಿಸಿ "ನಮ್ಮ ಎಮ್ಮೆ ಸತ್ತಿದೆ..ಅದರ ಇನ್ಸುರನ್ಸ್ ಕ್ಲೆಂ ಮಾಡುವುದಿತ್ತು..ಬೇಗನೆ ಬನ್ನಿ" ಎಂದು ಪೀಡಿಸುವುದರಿಂದ ಹಿಡಿದು...ನನ್ನ ಹೀರೋ ಹೊಂಡಾ ಕಳೆದು ಹೋಗಿದೆ...ನನಗೆ ಅರ್ಜೆಂಟಾಗಿ ಅದರ ಇನ್ಸುರನ್ಸ್ ಹಣ ಬೇಕು..ವ್ಯವಸ್ಥೆ ಮಾಡಿ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಅವರಿಗೆ ಫೋನ್ ಮಾಡಿ ಕಾಡುವುದು...ಯಾವನೇ ಆದರು ಒಂದು ಸಲ ಬೇಡ ಎರಡು ಸಲ ಪರಿಪಾಟಲು ಬೀಳಬಹುದು...ಆದರೆ ಪದೇ ಪದೇ ಬೀಳುವ ಈ ಆಸಾಮಿಯ ಕೆಲವು ವಿಶೇಷ ಪ್ರಸಂಗಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲೇ ಬೇಕು...

೧೯೯೯ ರಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ದಫನ ನಾಟಕ ಭಾಗವಹಿಸಿತ್ತು...ಅದರಲ್ಲಿ ರಾಜಗೋಪಾಲ್ ಅವರಿಗೆ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು...ಅವರಿಗೋ ತಡೆಯಲಾರದಷ್ಟು ಆನಂದ....ಅದನ್ನು ಯಾರೊಂದಿಗೆ ಹೇಗೆ ಹಂಚಿಕೊಂಡರು ಅವರಿಗೆ ಸಮಾಧಾನವಿಲ್ಲ...ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ...ಇವರಿಗಾಗಲೇ ಪ್ರಶಸ್ತಿ ಬಂದಾಗಿತ್ತು...ಎಲ್ಲರು ಇವರನ್ನು ಅಭಿನಂದಿಸುತ್ತಿದ್ದರೆ...ಇವರ ಹಿಂದಿನ ಸೀಟಿನಲ್ಲಿ ಕುಳಿತ ಆಸಾಮಿಯೊಬ್ಬ ಜುಬ್ಬಾ, ಪೈಜಾಮ ಹಾಕಿಕೊಂಡು ಮೇಲ್ಗಡೆ ಒಂದು ಜಾಕೀಟನ್ನು ಸಹ ಹಾಕಿದ್ದ... ಅವನು ಇವರೊಂದಿಗೆ ಮಾತಿಗಿಳಿದ..ಇವರನ್ನು ಹೊಗಳಿದ..ತಬ್ಬಿಕೊಂಡ...ಅಭಿನಂದಿಸಿದ..ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು...ಆ ವ್ಯಕ್ತಿಯನ್ನು ನೋಡಿದ ತಕ್ಷಣ ಇವರಿಗೆ ಇವರ್ಯಾರೋ ಪತ್ರಕರ್ತರಿರಬೇಕು...ಇವರನ್ನು ಸರಿಯಾಗಿ ನೋಡಿಕೊಂಡರೆ ನಾಳೆಯದಿನ ಪತ್ರಿಕೆಯಲ್ಲಿ ತಮ ಬಗ್ಗೆ ಉತ್ತಮ ಲೇಖನ ಬರಬಹುದು...ಎಂದೆಲ್ಲ ಕನಸುಕಂಡ ರಾಜಗೋಪಾಲ್, ಆತನನ್ನು ಕರೆದುಕೊಂಡು ತಿಂಡಿ ತಿನಿಸಿದ್ದಾಯಿತು.ಚಹಾ ಕುಡಿಸಿದ್ದಾಯಿತು...ಅಷ್ಟೇ ಅಲ್ಲ ರಾತ್ರಿ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಅವನಿಗೆ ತೀರ್ಥ ಪ್ರಸಾದವನ್ನು ಮಾಡಿಸಿದ್ದು ಆಯಿತು...ಕೊನೆಗೆ ಗೊತ್ತಾದ ವಿಷಯವೆಂದರೆ ಆ ವ್ಯಕಿತ್ ಗದಗ್ ಊರಿನವನು...ಅವನ ತಂಡ ಸಹ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಬರಬೇಕಾಗಿತ್ತು...ಆದರೆ ಅನಿವಾರ್ಯ ಕಾರಣದಿಂದ ಅವರು ಬಂದಿರಲಿಲ್ಲ...ಇವನೊಬ್ಬನೇ ಬಂದಿದ್ದಾನೆ..ರಾತ್ರಿ ಅವ್ನಿಗೆ ಮಲಗಲು ಒಂದು ನೆಲೆ ಬೇಕಾಗಿದೆ ಅದಕ್ಕಾಗಿ ಅವನು ರಾಜಗೋಪಾಲ್ ಅವರನ್ನು ಬೆನ್ನು ಬಿದ್ದಿದ್ದಾನೆ...ಇದನ್ನು ನೆನಸಿಕೊಂಡು ನಾವೆಲ್ಲಾ ಈಗಲೂ ಎಂಜಾಯ್ ಮಾಡುತ್ತವೆ...

ನಮ್ಮ ಹೊಸಪೇಟೆಯ ತಂಡದಲ್ಲಿ ತಾಯಪ ಕಲಾಲ್ ಎಂಬ ಇನ್ನೊಬ್ಬ ಕಲಾವಿದರಿದ್ದಾರೆ....ಅವರು ನಾಟಕ ಮಾಡುತ್ತಿದ್ದಾರೆ ಎನ್ನುವುದೇ ಹೊಸಪೇಟೆಯಲ್ಲಿ ಒಂದು ಸುದ್ದಿಯಾಗಿರುತ್ತದೆ..ಆದರೆ ಈ ಮನುಷ್ಯ ನಾಟಕದ ಹೆಸರಿನಲ್ಲಿ ತಮ್ಮ ಉಳಿದೆಲ್ಲ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ....ಅವರಿಗೆ ಈಗ ೪೫ + ವಯಸ್ಸು..ಮದುವೆಯಾಗಿಲ್ಲ...ಅವರದು ಜಾಯಿಂಟ್ ಫ್ಯಾಮಿಲಿ....ಅವರ ಅಣ್ಣನ ಮಕ್ಕಳನ್ನು ನಾಟಕದ ತಾಲೀಮಿಗೆ ಕರೆದು ಕೊಂದು ಬಂದಿರುತ್ತಾರೆ...ನಾವೆಲ್ಲಾ ಸೇರಿ ರಾಜಗೋಪಾಲ್ ಅವರನ್ನು ಎಷ್ಟರ ಮಟ್ಟಿಗೆ ನಂಬಿಸಿಬಿತ್ತಿದ್ದೆವೆಂದರೆ ..ತಾಯಪ್ಪ ಕಲಾಲನಿಗೆ ಮದುವೆ ಆಗಿದೆ ೮ ಮಕ್ಕಳಿವೆ ಅದರಲ್ಲಿ ೭ ಹೆಣ್ಣು ಮತ್ತು ಒಂದು ಗಂಡು ಎಂದೆಲ್ಲ ಹೇಳಿದ್ದೇವೆ...ಅದನ್ನವರು ಅಷ್ಟೇ ಭಕ್ತಿಯಿಂದ ನಂಬಿದ್ದಾರೆ...ಇಂದಿಗೂ ಕೂಡ....ನೀವು ಅವರಿಗೆ ಹೋಗಿ ಸತ್ಯ ಸಂಗತಿಯನ್ನು ಹೇಳಿದರು ಸಹ ಅವರ ಅದನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ....


ಗಿರೀಶ್ ದೇಸಾಯಿ ಎಂಬ ಇನ್ನೊಬ್ಬ ಗೆಳೆಯರು ನಮ್ಮ ಹೊಸಪೇಟೆಯ ತಂಡದಲ್ಲಿದ್ದಾರೆ..ಅವರು ವಿಶೇಷವಾಗಿ ನಾಟಕದ ಸಂಗೀತ ವಿಭಾಗದಲ್ಲಿ ಕಾರ್ಯ್ನಿರ್ವಹಿಸುವವರು..ಚಂದ್ರುನ ಬಾಲ್ಯ ಸ್ನೇಹಿತ...ಅವರು ಸಂಡೂರಿನ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ...ಒಂದು ದಿನ ಅವರು ಕೆಲಸ ಮುಗಿಸಿಕೊಂಡು ಹೊಸಪೇಟೆಗೆ ಬರುವಾಗ ಅವರಿದ್ದ ಬಸ್ ಅಪಘಾತಕ್ಕೀಡಾಗಿ ಅವರ ಬೆನ್ನಿಗೆ ತೀರ ನೋವಾಗಿದೆ...ಆಪತ್ರೆಗೆ ಸೇರಿಸಿ, ಅಲ್ಲಿ ಚಿಕಿತ್ಸೆ ಕೊಡಿಸಲಾಯ್ತು...ನಂತರ ಅವರಿಗಾದ ಬೆನ್ನಿನ ಗಾಯ ಸ್ವಲ್ಪ ಗಂಭೀರ ಪ್ರಮಾನದ್ದೆಂದು ತಿಳಿದು ಬಂತು...ಎಲ್ಲಾ ಗೆಳೆಯರು ಅವರನ್ನು ನೋಡಿಕೊಂಡು ಬಂದು, ಮಾತನಾಡಿಸಿ...ಬೇಗ ಗುಣಮುಖವಾಗಲೆಂದು ಹಾರೈಸಿ ಹೋದರೆ..ರಾಜಗೋಪಾಲ್ ಬಂದವರೇ..."ಗಿರಿ ನಿನ್ನ ಇನ್ಸುರನ್ಸ್ ಪಾಲಿಸಿ ಎಲ್ಲಿದೆ..ಅದನ್ನ ಈಗ ನಾವು ಕ್ಲೇಮ್ ಮಾಡಬಹುದು...ಲಗು ತಾ..." ಗಿರಿಯ ಆರೋಗ್ಯ ಹೇಗಿದೆ..ಅವನಿಗೆನಾಗಿದೆ...ಯಾವ ಪರಿಸ್ಥಿತಿಯಲ್ಲಿ ಅವನಿದ್ದಾನೆ...ಉಹಂ ಯಾವುದನ್ನು ಲೆಕ್ಕಿಸಿಲ್ಲ...ತಾವು ...ತಮ್ಮ ಕೆಲಸ ಮತ್ತು ಅದರಿಂದ ಇತರರಿಗೆ ಆಗುವ ಪ್ರಯೋಜನ ಇವಿಷ್ಟರಬಗ್ಗೆ ಮಾತ್ರ ಯೋಚನೆ.... ಇಂತಹ ವಿಚಿತ್ರ ಕ್ಯಾರೆಕ್ಟರ್ ಅದು....

ನಮ್ಮ ಪರಿಚಯವಾಗಿ ೧೦ ವರ್ಷಗಳೇ ಕಳೆದಿವೆ.,...ಈಗಲೂ ಸಹ ನಾನು ನಾನಾ ಫೋನ್ನಿಂದ ಅವರಿಗೆ ಫೋನ್ ಮಾಡಿದರೆ, ಬೇರೆ ಧನಿಯಲ್ಲಿ ಮಾತನಾಡಿದರೆ ಅವರಿಗೆ ಗುರುತು ಹಿಡಿಯಲು ಆಗುವುದಿಲ್ಲ...ಬಕರಾ ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತದೆ...ನಾವು ಬೀಳುವುದನ್ನು ಅಷ್ಟೇ ಭಕ್ತಿಯಿಂದ ಆನಂದಿಸುತ್ತಿರುತ್ತೇವೆ....

1 comment:

  1. baraha tumbaaa ista aaytu.
    neevu ullekhisiruva jana bangalore ge bandre,plz omme bheti maadisi.or neevu hosapet ge hodaaga nannannoooo karkondu hogi.
    Manikanth.

    ReplyDelete