Monday, July 6, 2009

ನಮ್ಮ ಸುತ್ತಲಿನ ಸಂಬಂಧಗಳನ್ನು ಸ್ವಲ್ಪ ಕಿವಿಗೊಟ್ಟು ಕೇಳು.......

ನಾನು ಟಿ.ಬಿ.ಡ್ಯಾಮ್ ನ ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದು ಎಷ್ಟು ಆಕಸ್ಮಿಕವೋ ಅದು ಅಷ್ಟೆ ನಿಜ ಕೂಡ...ಕೇವಲ ಐದು ದಿನದಲ್ಲಿ ದಫನ ನಾಟಕವನ್ನು ನಿರ್ದೇಶಿಸಿ, ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಅದನ್ನು ರಾಷ್ಟ್ರಮಟ್ಟದಲ್ಲಿ ಜಯಭೇರಿ ಬಾರಿಸಿದ್ದು ಈಗ ಇತಿಹಾಸ....ಅದರ ಯಶಸ್ಸಿನ ಬೆನ್ನಲ್ಲಿಯೇ ನನ್ನ ಬಹುದಿನದ ಆಸೆ ಹಾಗೂ ಕನ್ನಡ ಕಲಾ ಸಂಘದ ಗೆಳೆಯರ ಒತ್ತಾಸೆಗೆ ರಾವೀ ನದಿಯ ದಂಡೆಯ ಮೇಲೆ ನಾಟಕವನ್ನು ಕೈಗೆತ್ತಿಕೊಂಡೆ....


೧೯೯೯ರ ಆಗಸ್ಟ್ ೧ ಕ್ಕೆ ಆರಂಭವಾದ ರಂಗತಾಲೀಮು ಅಕ್ಟೋಬರ್ ೨ ರಂದು ಗಾಂಧೀ ಜಯಂತಿಯಂದು ಪ್ರದರ್ಶನ ಕಾಣುವುದರೊಂದಿಗೆ ಮುಕ್ತಾಯಗೊಂಡಿತು...ಆಗ ನಾನು ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ...ನಾಟಕದ ಹುಚ್ಚು ಬೇರೆ....ಸರಿ ಪ್ರತಿದಿನ ಬರೋಬ್ಬರಿ ೬೪ ಕಿಲೋ ಮೀಟರ್ ಓಡಾಟ ಮಾಡಬೇಕಾಗಿತ್ತು ಈ ನಾಟಕವನ್ನು ತಯಾರಿಗೊಳಿಸಲು...ಏಕೆಂದರೆ ನಾನು ತೋರಣಗಲ್ಲಿನಲ್ಲಿಯೇ ಕಂಪನಿಯ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿದ್ದೆ ಮತ್ತು ಬೆಳಿಗ್ಗೆ ಸರಿಯಾಗಿ ೭ ಗಂಟೆಗೆ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ಇತ್ತು...


ಸರಿ ಸಂಜೆ ೬ ಗಂಟೆಗೆ ಕೆಲಸ ಮುಗಿಸಿಕೊಂಡು ಕಂಪನಿ ಬಸ್ ನಲ್ಲಿ ಹೊಸಪೇಟೆಗೆ ಬಂದು, ೭.೩೦ ಕ್ಕೆ ರಂಗ ತಾಲೀಮನ್ನು ಆರಂಭಿಸಿ, ರಾತ್ರಿ ೧೦ಕ್ಕೆ ಅದನ್ನು ಮುಗಿಸಿ, ೧೦.೩೦ಕ್ಕೆ ಬಳ್ಳಾರಿಯ ಕಡೆಗೆ ಹೊರಡುವ ಕೊನೆಯ ಬಸ್ಸನ್ನು ಹಿಡಿದುಕೊಂಡು ನನ್ನ ಗೂಡನ್ನು ಸೇರಿ ಕೊಳ್ಳಬೇಕಾಗಿತ್ತು...


ಬರೋಬ್ಬರಿ ಎರಡು ತಿಂಗಳಿನ ಕಾಲ ನಡೆದ ರಾವೀ ನದಿಯ ದಂಡೆಯ ಮೇಲೆ ನಾಟಕದ ತಯಾರಿ ನನಗೆ ವೈಯಕ್ತಿಕವಾಗಿ ಅನೇಕ ಹೊಸ ಪಾಠಗಳನ್ನು ಕಲಿಸಿತು...ಹೊಸ ಹೊಸ ನಟರು ಬಂದರು..ನಾಟಕ ಪೂರ್ತಿ ಗೊಳ್ಳುತ್ತಿದ್ದ ಸಂದರ್ಭದಲ್ಲಿ ಅನೇಕರು ಬಿಟ್ಟು ಹೋದರು...೩೫ ಜನರ ಭರ್ತಿ ತಂಡ ಇದಾಗಿತ್ತು... ಎರಡು ಗಂಟೆ ಹತ್ತು ನಿಮಿಷದ ನಾಟಕ...ಮಧ್ಯದಲ್ಲಿ ಯಾವುದೇ ವಿರಾಮವಿಲ್ಲ...ಹಾಡು - ಕುಣಿತ ಯಾವುದು ಇಲ್ಲ..ಸಂಪೂರ್ಣ ರಿಯಲಿಸ್ಟಿಕ್ ಆಗಿರುವ ನಾಟಕ...ಒಬ್ಬ ಪ್ರೇಕ್ಷಕನು ಎದ್ದು ಹೋಗಲಾರದಂತೆ ಹಿಡಿದಿಡುವ ಯಶಸ್ವಿ ನಾಟಕಗಳಲ್ಲಿ ಒಂದು...ಇದನ್ನು ಅಷ್ಟೆ ಶೃದ್ಧೆಯಿಂದ ಇಟಗಿ ಈರಣ್ಣ ಅವರು ನನಗೆ ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದರು..ಅವರು ಬರೆದ ಶಾಯರಿಗಳು, ಗಜಲಗಳು...ಆಹಾ...ನಾಟಕ ನಿರ್ದೇಶಿಸಿ ಹತ್ತು ವರ್ಷಗಳ ನಂತರವೂ ಅದರ ಒಂದು ಗಜಲ್ ಇಂದಿಗೂ ನನ್ನನ್ನು ಬಿಟ್ಟು ಬಿಡದೆ ಕಾಡುತ್ತಿದೆ....


"ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು...ಸಂತಸದ ಹಬ್ಬವಿದು ತಾನಿಂತು ಉಕ್ಕಿ ಭೋರ್ಗರೆವ ಕಡಲಾಯಿತು..." ಎಂತಹ ಅದ್ಭುತ ಕಲ್ಪನೆಯಿದು....ಅದನ್ನು ನಾಸಿರ್ ಕಾಜ್ಮಿ ಪಾತ್ರದಲ್ಲಿ ಚಂದ್ರಶೇಖರ್ ಕೂಡ ಅಷ್ಟೆ ಅದ್ಭುತವಾಗಿ ಹೇಳಿದ್ದರು....


ಹೀಗೆ ಒಂದು ದಿನ ನಾಟಕದ ತಾಲೀಮು ಮುಗಿಸಿಕೊಂಡು ನಾನು ತೋರನಗಲ್ಲಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ೧೧ ಗಂಟೆ ಆಗಿ ಹೋಗಿತ್ತು.... ನಾಟಕದ ಪ್ರದರ್ಶನಕ್ಕೆ ಇನ್ನು ಕೇವಲ ೪-೫ ದಿನ ಬಾಕಿ ಇತ್ತು...ಇನ್ನು ಅನೇಕ ಕೆಲಸಗಳು ಆಗುವುದು ಬಾಕಿ ಇತ್ತಾದ್ದರಿಂದ ಹೊರಡುವುದು ಸ್ವಲ್ಪ ತಡವಾಗಿತ್ತು....ಬಸ್ ನಿಲ್ದಾಣಕ್ಕೆ ಬಂದಾಗ ಬಸ್ ಆಗಲೇ ಹೊರತಾಗಿತ್ತು...ಅಲ್ಲಿಯೇ ಖಾಸಗಿ ಟೆಂಪೋ ಒಂದು ಬಳ್ಳಾರಿಗೆ ಹೊರಡಲು ತಯಾರಾಗಿ ನಿಂತಿತ್ತು....ನಾನು ಸರಿ ಎಂದು ಅದರಲ್ಲಿ ಹತ್ತಿ ಕುಳಿತೆ....ಅದು ಪುರ್ತಿಯಾಗದ ಹೊರತು ಅದು ಬಿಡುವುದಿಲ್ಲ ಎಂದು ಗೊತ್ತಿತ್ತು...ಸರಿ ಯಾವಾಗಲಾದರು ಬಿಡು ಎಂದು ನಾನು ಒಂದು ಸೀಟಿನಲ್ಲಿ ಹೋಗಿ ಕುಳಿತುಕೊಂಡು ಅಲ್ಲಿಯೇ ನಿದ್ದೆ ಹೋದೆ....


ಸುಮಾರು ಒಂದು ಗಂಟೆಯ ನಂತರ ಕ್ಲೀನರ್ ಬಂದು ಎಬ್ಬಿಸಿದ..ನನ್ನು ತೋರಣಗಲ್ ಬಂತೆಂದು ಇಳಿದೆ..ಅವನಿಗೆ ಹಣ ನೀಡಲು ಹೋದಾಗ ಅವನು "ಸರ ಇದು ಹೊಸಪೇಟೆ..ಬಳ್ಳಾರಿಗೆ ಹೋಗಲ್ಲ..ಜನ ಯಾರು ಬರಾಕಿಲ್ಲ...ನಿಮ್ಮನ್ನ ಒಬ್ಬರ್ಣ ಕರ್ಕೊಂಡು ಹೋಗಲ್ಲ..." ಎಂದು ಬಿಟ್ಟ..ಸಮಯ ನೋಡಿಕೊಂಡೆ ...ಬರೋಬ್ಬರಿ ಮಧ್ಯರಾತ್ರಿ ಒಂದು ಗಂಟೆ...ನನ್ನ ಯಾವ ಕಲಾವಿದ ಗೆಳೆಯರಿಗೆ ತೊಂದರೆ ಕೊಡುವ ಮನಸ್ಸಾಗಲಿಲ್ಲ....ಏನು ಮಾಡಬೇಕೆಂದು ತೋಚದೆ...ನಿಲ್ದಾಣದ ಒಳಕ್ಕೆ ಹೋದೆ...ಬಳ್ಳಾರಿಗೆ ಹೊರಡುವ ಬಸ್ಸು ಬೆಳಿಗ್ಗೆ ಆರು ಗಂಟೆಗೆ ಬರುತ್ತದೆ ಎಂದು ತಿಳಿಯಿತು...ಹೆಚ್ಚಿಗೆ ಯೋಚನೆ ಮಾಡಲಿಲ್ಲ....ಅಲ್ಲಿಯೇ ಕಂಟ್ರೋಲ್ ರೂಮಿನ ಎದುರು ಒಂದು ಖಾಲಿ ಬೆಂಚ್ ಇತ್ತು ..ಅದರ ಮೇಲೆ ಸುಖವಾಗಿ ನಿದ್ರಿಸಿದೆ...ಬೆಳಿಗ್ಗೆ ಆರು ಗಂಟೆಗೆ ಎದ್ದು...ನನ್ನ ಪಾಡಿಗೆ ನಾನು ತೋರನಗಲ್ಲಿಗೆ ಹೊರಟೆ....


ಇದನ್ನೆಲ್ಲಾ ನೆನಪಿಸಿಕೊಂಡಾಗ....ರಾವೀ ನದಿಯ ದಂಡೆಯ ಮೇಲೆ ನಾಟಕದ ಇನ್ನೊಂದು ಗಜಲ್ ನೆನಪಾಗುತ್ತದೆ...." ನಮ್ಮ ಸುತ್ತಲಿನ ಸಂಬಂಧಗಳನ್ನು ಸ್ವಲ್ಪ ಕಿವಿಗೊಟ್ಟು ಕೇಳು...ಏಕೆ ತುಂಬಿದೆ ಗದ್ದಲವು ಇಲ್ಲಿ...."

1 comment: