Friday, July 3, 2009

ಧಾರವಾಡೆಂಬ ಊರೂ...ಬಂಡು ಕುಲಕರ್ಣಿ ಎಂಬ ವ್ಯಕ್ತಿಯೂ.....

  • ಬಂಡು ಕುಲಕರ್ಣಿ ಬಗ್ಗೆ ಬರೆಯುತ್ತಾ ಹೋದಂತೆ ಅದೊಂದು ದೊಡ್ಡ ಇತಿಹಾಸವೇ ಆದೀತು...ಅವನು ನಗೆಪಾಟಲಿನ ವ್ಯಕ್ತಿ ಖಂಡಿತಾ ಆಗಿರಲಿಲ್ಲ...ಬಹುಶಃ ನಮ್ಮಲ್ಲಿದ್ದ ಸ್ನೇಹದ ಸಲುಗೆ ಹಾಗು ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣವಿರಬಹುದು...ಅವನೊಬ್ಬ ಇಂಟರೆಸ್ಟಿಂಗ್ ವ್ಯಕ್ತಿಯಂತು ಖಂಡಿತ ಸತ್ಯ....ಅವನೊಂದಿಗೆ ಕಳೆದ ಕೆಲವು ಘಟನೆಗಳ ಝಲಕುಗಳನ್ನಿಲ್ಲಿ ತೆರೆದಿಡುತ್ತಿರುವೆ....

    ೧೯೯೫ ರ ದಿನಗಳು...ಧಾರವಾಡಕ್ಕೆ ಆಗ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ "ಕೆಂಪು ಸೂರ್ಯ" ಎಂಬ ತಗಡು ಸಿನೆಮಾ ಒಂದು ಬಂದಿತ್ತು...ಧಾರವಾಡದ ಬಸ್ ಸ್ಟ್ಯಾಂಡ್ ನಲ್ಲಿ ಅದರ ಪೋಸ್ಟರ್ ಅಂಟಿಸಿದ್ದರು...ನಾವು ಬಂಡುನನ್ನು ಎಷ್ಟರ ಮಟ್ಟಿಗೆ ನಂಬಿಸಿದ್ದೆವೆಂದರೆ
    ಇದೊಂದು ಅದ್ಭುತ ಚಿತ್ರ..ಇದು ಆಸ್ಕರ್ ಪ್ರಶಸ್ತಿಗೆ ನೇಮಕ ಗೊಂಡಿದೆ...ನಾವೆಲ್ಲಾ ನೋಡಿಕೊಂಡು ಬಂದಿದ್ದೇವೆ..ಎಂದೆಲ್ಲ ಹೇಳಿದೆವು...ಮತ್ತು ಅದನ್ನು ಅವನು ನೋಡಿಬರುವಂತೆ ಪ್ರೆರೆಪಿಸಿದೆವು...ಮಾರನೆ ದಿನ ನಾವು ಎಂದಿನಂತೆ ಸಂಘದ ಎದುರು ಬಂದು ನಿಂತಾಗ ಇನ್ನೂ ಬಂಡು ಬಂದಿರಲಿಲ್ಲ...ಅವನು ಬರುತ್ತಿದ್ದಂತೆಯೇ ನಾವೆಲ್ಲಾ ಅವನನ್ನು ಕೆಣಕಲು ಆರಂಭಿಸಿದೆವು....ಬಹಳ ಸಿಟ್ಟಿನಲ್ಲಿದ್ದ...ಹಾಗೆಯೇ ಮಾತನಾಡುತ್ತಾ ನಾವು ಬಸ್ ಸ್ಟ್ಯಾಂಡ್ ಹತ್ತಿರ ಬಂದಾಗ ರಾತ್ರಿ ಸುಮಾರು ೮.೩೦....ಅವನನ್ನು ಎಷ್ಟರ ಮಟ್ಟಿಗೆ ನಾವು ರೆಗಿಸಿದ್ದೆವೆಂದರೆ...ಬಸ್ ಸ್ಟ್ಯಾಂಡ್ನಲ್ಲಿ ಅವನು ತನ ಚಪ್ಪಲಿಯನ್ನು ತೆಗೆದುಕೊಂಡು ತಾನೇ ಕೆನ್ನೆಗೆ ಹೊಡೆದುಕೊಂಡಿದ್ದ....ಅಷ್ಟರಲ್ಲಿ ದಿಲಾವರ್ ಅವನನ್ನು ಇನ್ನೂ ರೇಗಿಸಿ..."ಎ ಇದನ್ನ ಯಾರೂ ನೋಡಿಲ್ಲ..ಹಿಂಗ ಮರ್ಯಾಗ್ ಹೊಡಕೊಂಡ್ರ ಯಾರು ನೋಡ್ತಾರ? ಸ್ವಲ್ಪ ಎಲ್ಲರಿಗೂ ಗೊತ್ತಾಗೋ ಹಂಗ ಹೊಡಕೋರಿ..." ತಕ್ಷಣ ಬಂಡು ಒಂದು ಎತ್ತರವಾದ ಸ್ಥಳದಲ್ಲಿ ನಿಂತು ಎಲ್ಲರ ಗಮನ ಅವನತ್ತ ಬರುವಂತೆ....ತನ್ನ ಚಪ್ಪಲಿಯಿಂದ ತಾನೆ ತನ್ನ ಕೆನ್ನೆಗೆ ಹೊಡೆದುಕೊಂಡಿದ್ದ......
  • ಅವನಿಗೆ ಬಲಭಾಗದ ಹುಬ್ಬಿನ ಪಕ್ಕದಲ್ಲಿ ಒಂದು ನರೋಲಿಯಾಗಿತ್ತು...ಒಂದು ದಿನ ಅದನ್ನು ತೆಗೆಸಿಕೊಂಡು ಸಂಘದ ಹತ್ತಿರ ಬಂಡು ಗೆಳೆಯ ಗಿರೀಶನನ್ನು ಕೇಳಿದ.."ಗಿರ್ಯಾ ಹೆಂಗ್ ಕಾನಸ್ತೆನಲೇ?" ಅದಕ್ಕೆ ಗಿರೀಶ್ "ನನಗೇನೂ ಫರಕ ಕಾಣಸ್ವಲ್ತು" ಎಂದ...ತಕ್ಷಣವೇ ಬಂಡು.."ಎ ನೋಡಲೇ ನಾನು ನರೋಲಿ ತಗಸೆನಿ" ಎಂದ...ಗಿರೀಶನಿಗೆ ಅಷ್ಟೇ ಸಾಕಾಗಿತ್ತು...ತಕ್ಷಣವೇ ಎಲ್ಲರಿಗು ವಿಷಯ ರವಾನೆಯಾಗಿತ್ತು...ಎಲ್ಲರೂ ಬಂದು, ಬಂಡುನನ್ನು "ಎನಲೇ ಬಂಡ್ಯಾ ತೆಗಸಿದ್ಯನ್ತಲಾ" ಎಂದು ಕೇಳ ತೊಡಗಿದರು...ಇಡೀ ಧಾರವಾಡದ ತುಂಬ ಸುದ್ದಿ ಬಿತ್ತರವಾಗಿತ್ತು....ಬಂಡುಗೆ ಎಷ್ಟು ಸಿಟ್ಟು ಬಂದಿತ್ತೆಂದರೆ....ತನ್ನ ಕೂದಲು ಹರಿದುಕೊಳ್ಳುವುದೊಂದೇ ಬಾಕಿ.....
  • ಡಿಸೆಂಬರ್ ತಿಂಗಳಿನಲ್ಲಿ ಬಹುತೇಕವಾಗಿ ಜನ ಮಾಲೆಯನ್ನು ಹಾಕಿ ಕೊಂಡು ಅಯ್ಯಪ್ಪನ ಭಕ್ತರಾಗುತ್ತಾರೆ...ಬಹಳ ಕಟ್ಟು-ನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ...ಎಲ್ಲಾ ಚಟಗಳನ್ನು ಬಿಡುವುದು ಅದರಲ್ಲಿ ಮುಖ್ಯವಾದುದು....ಹೀಗಿರುವಾಗ ಒಂದು ದಿನ ನರಸಿಂಹ ಅವನ ಬಗ್ಗೆ ಸುದ್ದಿಯನ್ನು ಹಬ್ಬಿಸಿ ಬಿಟ್ಟ..."ಬಂಡ್ಯಾ ಅಯ್ಯಪ್ಪನ ಮಾಲಿ ಹಾಕ್ಯಾನ..ಜನೆವರಿ ೧೪ ನೆ ತಾರೀಖಿಗೆ ಶಬರಿ ಮಲೈ ಹೋಗ್ತಾನ" ಅಂತ...ಈ ಸುದ್ದಿಯನ್ನು ನಾನು ಮಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಕುಲಕರ್ಣಿಗೆ ಈ ವಿಷಯವನ್ನು ತಿಳಿಸಿದೆ...ಮಹೇಶ್ ಹಾಗು ಬಂಡು ತುಂಬಾ ಆತ್ಮೀಯರು...ಮತ್ತು ನಾವು ಬಂದುನನ್ನು ಕಾಡಿಸುವುದು ಮಹೇಶನಿಗೆ ತಿಳಿದಿತ್ತು....ಅವನು ಸಹ ಇದರ ಸದುಪಯೋಗ ಪಡೆದುಕೊಂಡು..ಅವನಿಗೆ ಸಂಕ್ರಾಂತಿ ನೆಪದಲ್ಲಿ ಒಂದು ಪತ್ರವನ್ನು ಬರೆದೆ ಬಿಟ್ಟ... "ಬಂಡು ಸಂಕ್ರಾಂತಿ ಹಬ್ಬದ ಶುಭಾಶಯಗಳು...ನೀನು ಅಯ್ಯಪ್ಪ ಸ್ವಾಮಿಯ ಭಕ್ತನಾಗಿರುವುದು ಹಾಗು ಮಾಲೆಯನ್ನು ಹಾಕಿರುವುದು ತುಂಬಾ ಸಂತಸದ ವಿಷಯ..ನೀನು ಶಬರಿ ಮಲೈಗೆ ಹೋಗುತ್ತಿರುವ ವಿಷಯ ತಿಳಿದು ಸಂತೋಷವಾಯ್ತು ... ದಯವಿಟ್ಟು ನಮಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸು..ನಮಗೂ ಪ್ರಸಾದ ತೆಗೆದುಕೊಂಡು ಬಾ"....ಪತ್ರ ಬಂದ ದಿನ ಅವನ ಅವತಾರ ಹೇಳತೀರದು.... ನಾ ಈ ನನ್ನ ಮಕ್ಕಳಿಗೆ ಏನರ ಅನ್ಯಾಯ ಮಾಡೆನಿ...ನನ್ನ ಬಗ್ಗೆ ಯಾಕ ಹಿಂದ ಅಪಪ್ರಚಾರ ಮಾಡ್ತಾರ? ಎಲ್ಲರ ಮುಂದೆ ತನ್ನ ಗೋಳು ತೋಡಿಕೊಳ್ಳುತ್ತಿದ್ದ....

  • ಧಾರವಾಡ ಸಾಹಿತಿ, ಕಲಾವಿದರ ತವರೂರು...ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು ನಾಡಿಗೆ ನೀಡಿದ ಹೆಮ್ಮೆ ಈ ನಗರಕ್ಕಿದೆ..ಅಂತೆಯೇ ಕೆಲವು ಸ್ಯಾಂಪಲ್ಗಳು ಇಲ್ಲಿ ದೊರೆಯುತ್ತವೆ....ಉದಾಹರಣೆಗೆ ಮಲ್ಲಿಕಾರ್ಜುನ ಹಳೆಮನಿ...ಈತ ಒಬ್ಬ ವಿಚಿತ್ರ ಆಸಾಮಿ...ಕನ್ನಡ ಮಾತನಾಡಿದರೆ ಅದು ಅರೇಬಿಕ್ ಮಾತಾಡಿದಂತೆ ಅನಿಸುತ್ತದೆ....ರಾಜಕೀಯದ ಹುಚ್ಚು ಬೇರೆ...ರಾಜಕೀಯ ಭಾಷಣ ಮಾಡಲು ಈತನಿಗೆ ಎಲ್ಲಿಲ್ಲದ ಹುರುಪು...ಧಾರವಾಡದಲ್ಲಿ ಯಾವುದೇ ರೀತಿಯ ಚಳುವಳಿಗಳಾಗಲಿ...ಹೋರಾಟಗಲಾಗಲಿ ಈತ ಮುಂದೆ ಇರಲೇಬೇಕು....ಆದರೆ ಈತ ಮಾತನಾಡುವುದು ಆ ದೇವರಿಗೆ ಮಾತ್ರ ಅರ್ಥವಾಗಬೇಕು...ಇಂತಹ ವ್ಯಕ್ತಿಯನ್ನು ನರಸಿಂಹ ಒಂದು ದಿನ ರಾತ್ರಿ ಗಂಟೆಯ ನಂತರ ಬಂಡುನ್ ರೂಮಿಗೆ ಕರೆದುಕೊಂಡು ಹೋಗಿದ್ದಾನೆ....ಮಲ್ಲಿಕಾರ್ಜುನನಿಗೆ ತಂಬಾಕು ತಿನ್ನುವ ಚಟ ..ರಾತ್ರಿ ೧೨ ಗಂಟೆಗೆ ಯಾವ ಅಂಗಡಿಗಳು ತೆರೆದಿದ್ದಿಲ್ಲ...ತಕ್ಷಣ ನೆನಪಾಗಿದ್ದು ಬಂಡುನ ರುಂ..ಸರಿ ಅಲ್ಲಿಗೆ ಹೋಗಿದ್ದಾರೆ..ಮಲ್ಲು ಅವನೊಂದಿಗೆ ತನ್ನ ಕನ್ನಡ-ಅರೇಬಿಕ್ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ್ದಾನೆ...ಉಹುಂ... ಬಂಡುಗೆ ಏನು ಅರ್ಥವಾಗಿಲ್ಲ...ಮತ್ತೆ ಮತ್ತೆ ಮಲ್ಲುನನ್ನು ಕೇಳಿದ್ದಾನೆ...ಅವನ ಹಾಸಿಗೆ, ಪುಸ್ತಕಗಳ ಮಗ್ಗುಲು...ದಿಂಬು ಏಲ್ಲವನ್ನು ಕಿತ್ತು ಹಾಕಿದ್ದಾನೆ ಮಲ್ಲು ಆದರೆ ಅವನು ಮಾತನಾಡುತ್ತಿರುವುದು ಮಾತ್ರ ಬಂಡುಗೆ ಅರ್ಥವಾಗಿಲ್ಲ..ಕೊನೆಗೆ ಮಲ್ಲು ಸಿಟ್ಟಿಗೆದ್ದು...ಏನ್ರೋ ಪಿ.ಎಚ್.ಡಿ ಮಾಡ್ತೀರಿ..ತಂಬಾಕ್ ಇಡಾಕ ಬರುದುಲ್ಲ... ಈ ಮಾತು ಮಾತ್ರ ಬಂಡುಗೆ ಅರ್ಥವಾಗಿದೆ....ಹತಾಶನಾಗಿ ಏನು ತೋಚದೆ ಅಳಲು ಶುರು ಮಾಡಿದ!....

2 comments: