Thursday, July 9, 2009

ಅಲ್ಲಿ ಎಲ್ಲವೂ ಇತ್ತು ಆದರೆ.....

ನಾವು ಧಾರವಾಡದಲ್ಲಿ ಕಲಿಯುತ್ತಿದ್ದಾಗ ಅಧ್ಯಯನದ ಜೊತೆ ಜೊತೆಗೆ ನಾಟಕದ ಗುಂಗು ಸಹ ಜೋರಾಗಿತ್ತು...ನಮ್ಮ ಗೆಳೆಯರ ಗುಂಪು ನಾಟಕದ ವಿಷಯ ಬಂದರೆ ಹೊಟ್ಟೆ ಬಟ್ಟೆಗೆ ಲೆಕ್ಕಿಸದೆ ಗಂಟೆಗಟ್ಟಲೆ ಆ ಕೆಲಸದಲ್ಲಿ ತೊಡಗಿಕೊಂಡು ಬಿಡುತ್ತಿದ್ದೆವು...ಎಷ್ಟೋ ಸಲ ಊಟಕ್ಕೆ ಏನು ಇಲ್ಲದಿದ್ದಾಗ ದಿಲಾವರನ ರೂಮಿನಲ್ಲಿ ಒಬ್ಬರಿಗೆ ಆಗುವ ಊಟವನ್ನು ೫ ಜನ ಹಂಚಿಕೊಂಡು ತಿಂದಿದ್ದೇವೆ...ಅದು ಇಲ್ಲವೆನ್ದಾದಾಗ ನಮ್ಮ ಜೇಬಿನಲ್ಲಿರುವ ಹಣವನ್ನೆಲ್ಲ ಕೂಡಿಸಿ ಬಸ್ ಸ್ಟ್ಯಾಂಡ್ ನಲ್ಲಿರುವ ಚಹದಂಗಡಿಯಲ್ಲಿ ಚುರುಮುರಿ ತಿಂದು, ನೀರು ಕುಡಿದು ದಿನಗಳನ್ನು ಕಳೆದಿದ್ದೇವೆ... ನನಗೆ ವೈಯಕ್ತಿಕವಾಗಿ ಹೇಳುವದಾದರೆ ಎಲ್ಲವನ್ನು ನೋಡಿದ್ದೇನೆ...ಕೆಂಪು ಬಸ್ಸಿನಲ್ಲಿ ಓಡಾಡಿದ್ದೇನೆ...ವಿಮಾನದಲ್ಲಿ ಹಾರಾಡಿದ್ದೇನೆ...ರಸ್ತೆ ಬದಿಯ ತಿಂಡಿ ತಿಂದು ಜೀವನ ನಡೆಸಿದ್ದೇನೆ....ಐಶಾರಾಮಿ ಹೋಟೆಲ್ ಗಳಲ್ಲಿ ಪಂಚ ಪಕ್ವಾನ್ನಗಳನ್ನು ತಿಂದಿದ್ದೇನೆ...ಬದುಕು ಏನೆಂದು ಸರಿಯಾಗಿ ಅರ್ಥವಾಗಿದೆ...ಅಂತೆಯೇ ಅನ್ನದ ಬೆಲೆ ಸಹ ತಿಳಿದಿದೆ...
ಇದನ್ನೆಲ್ಲಾ ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೆನೆಂದರೆ...ನಾನು ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳಬಯಸಿದ್ದರಿಂದ...
ಜಿಂದಾಲ್ ಕಾರ್ಖಾನೆಯಲ್ಲಿ ಬಿಸಿ ಉಕ್ಕು ದ್ರವವನ್ನು ತಯಾರಿಸುವ ಘಟಕವೊಂದಿದೆ...ಅದಕ್ಕೆ ಕೊರೆಕ್ಸ್ ಘಟಕವೆಂದು ಕರೆಯುತ್ತಾರೆ... ಅದು ಒಂದು ದಿನ ಏಕಾ ಏಕಿಯಾಗಿ ಕೆಲಸ ಮಾಡದೆ ಸ್ಥಬ್ದಗೊಂಡಿತು... ಎಲ್ಲ ಬಂದು ನೋಡಿದಾಗ ಅದರಲ್ಲಿ ಯಾವುದೋ ದೊಡ್ಡ ತೊಂದರೆ ಇರುವುದಾಗಿ ತಿಳಿದುಬಂದಿತು ಮತ್ತು ಅದು ಪುನಃ ಕಾರ್ಯ ನಿರ್ವಹಿಸುವನ್ತಾಗಳು ಸುಮಾರು ೮ ರಿಂದ ೧೦ ತಿಂಗಳು ಬೇಕು ಎಂದು ಅಂದಾಜಿಸಲಾಯಿತು.....ಅಲ್ಲಿನ ಎಲ್ಲ ಕೆಲಸಗಾರರು ಹಗಲು ರಾತ್ರಿ ಎನ್ನದೆ ದುಡಿಯಹತ್ತಿದರು...ನಮಗೂ ಸಹ ಬಿಡುವಿಲ್ಲದ ಕೆಲಸ...ಅಲ್ಲಿ ಕೆಲಸ ಮಾಡುವ ಜನರಿಗೆ ಬೇಕು ಬೇಡಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿತ್ತು...ಬೆಳಿಗ್ಗೆ ಸರಿಯಾಗಿ ೬ ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ ೧೨ ರ ನಂತರ ನಮ್ಮ ಗೂಡಿಗೆ ಸೇರಿಕೊಳ್ಳುವುದು...ಇದು ದಿನ ನಿತ್ಯದ ಕಾಯಕವಾಗಿತ್ತು...ನಾನು ಅಲ್ಲಿಯೇ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರಿಂದ ನನಗೆ ಅಷ್ಟೇನೂ ತೊಂದರೆ ಅನಿಸಿದ್ದಿಲ್ಲ...
ಒಂದು ದಿನ ನಾನು ಕೆಲಸ ಮುಗಿಸಿಕೊಂಡು ನನ್ನ ರೂಮಿಗೆ ಬಂದಾಗ ರಾತ್ರಿ ೧ ಗಂಟೆಯ ಸಮಯ..ಹೊಟ್ಟೆ ಚುರುಗುಟ್ಟುತ್ತಿತ್ತು...ಅಡುಗೆ ಮಾಡಿ ತಿನ್ನಬೇಕು...ಸರಿ ನನ್ನ ಬಟ್ಟೆ ಬದಲಿಸಿ...ತಯಾರಾಗಿ ಬಂದು ಅನ್ನಕ್ಕೆ ಇಡಬೇಕೆಂದು ನೋಡಿದರೆ ಅಕ್ಕಿ ಡಬ್ಬಿ ಖಾಲಿ!!!! ಎಲ್ಲ ಡಬ್ಬಗಳನ್ನು ತಡಕಾಡಿದರೆ ಯಾವ ಡಬ್ಬದಲ್ಲಿ ಸಹ ಏನು ಸಿಗಲಿಲ್ಲ...ಹೊಟ್ಟೆ ಚುರುಗುಟ್ಟುತ್ತಿದೆ...ಕನಿಷ್ಠ ಪಕ್ಷ ತಿನ್ನಲು ಬ್ರೆಡ್ ಕೂಡ ಇಲ್ಲ ಅಲ್ಲಿ...ಕಂಗಾಲಾಗಿ ಹೋದೆ....ರಾತ್ರಿ ಆ ಹೊತ್ತಿನಲ್ಲಿ ಯಾವ ಅಂಗಡಿಯು ತೆರೆದಿರುವುದಿಲ್ಲ...ಏನು ಮಾಡಬೇಕೆಂದು ತೋಚದೆ ಫ್ರಿಜ್ ಬಾಗಿಲನ್ನು ತೆರೆದಾಗ ಅಲ್ಲಿ ಸಾಸ್ ಇರುವ ಬಾಟಲ್ ಸಿಕ್ಕಿತು....ಅದನ್ನೇ ಕೈಯಲಿ ಹಾಕಿಕೊಂಡು ತುಸು ನೆಕ್ಕಿ, ನೀರು ಕುಡಿದು ಮಲಗಬೇಕಾಯ್ತು...
ಕೈಯಲ್ಲಿ ಒಂದು ಪೈಸೆ ಬಿಡಿಗಾಸು ಇಲ್ಲದಾಗ ಎಲ್ಲ ಗೆಳೆಯರು ಸೇರಿ ಕಳೆದ ದಿನಗಳೆಲ್ಲಿ? ಆದರೆ ಎಲ್ಲವೂ ಇದ್ದು ಏನು ತಿನ್ನಲು ಸಾಧ್ಯವಾಗದ ಈ ದಿನವೆಲ್ಲಿ?
ಬದುಕು ಮಾಯೆಯ ಆಟ.....

1 comment: