Saturday, July 11, 2009

ಹಕ್ಕಿ ಹಾರುತಿದೆ ನೋಡಿದಿರಾ....


"ಇರುಳಿರುಳಳಿದು ದಿನದಿನ ಬೆಳಗೆ..ಸುತ್ತಮುತ್ತಲು ಮೇಲಕೆ ಕೆಳಗೆ...ಗಾವುದ ಗಾವುದ ಗಾವುದ ಮುಂದೆ...ಎವೆತೆರದಿಕ್ಕುವ ಹೊತ್ತಿನ ಒಳಗೆ...ಹಕ್ಕಿ ಹಾರುತಿದೆ ನೋಡಿದಿರಾ????" ದ.ರಾ. ಬೇಂದ್ರೆ ಅವರು ಬರೆದ ಈ ಕವನದ ಸಾಲುಗಳು ನನ್ನನ್ನು ಬಹುವಾಗಿ ಕಾಡಿವೆ....ಪ್ರತಿ ಹಕ್ಕಿ ಹಾರುವಾಗ ಈ ಕವನವನ್ನು ನಾನು ಗುನುಗುನಿಸುತಿರುತ್ತೇನೆ...ಆಹಾ..ಎಂಥ ಅದ್ಭುತ ಕಲ್ಪನೆ....


ನಮ್ಮ ಬದುಕಿನ ಜಂಜಾಟಗಳಲ್ಲಿ ನಾವು ನಮ್ಮ ಬಹುತೇಕ ಸಮಯವನ್ನು ಮೆಕ್ಯಾನಿಕಲ್ ಆಗಿ ಕಳೆದುಬಿಡುತ್ತೇವೆ.... ನಾವು , ನಮ್ಮ ಸಂಸಾರ, ಹೆಂಡತಿ ಮಕ್ಕಳು ಹೀಗೆ ಹತ್ತು ಹಲವಾರು ಗೊಂದಲಗಳಲ್ಲಿ ಸಿಲುಕಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ...


ಹೀಗೆ ಒಂದು ದಿನ ನಾನು ನನ್ನ ಮನೆಯ ಬಾಲ್ಕನಿಯ ಗಾರ್ಡನ್ ನಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದಾಗ ಗೆಜ್ಜೆಯ ಸಪ್ಪಳ ಕೆಳಿಬಂದಂತಾಗಿ ಆ ಸದ್ದು ಬಂದ ಕೆಡೆ ಹುಡುಕಾಡ ತೊಡಗಿದೆ.... ನನ್ನ ಬಾಳ ಸಂಗಾತಿ ಮೃಣಾಲಿನಿ ಸಹ ಆ ಸದ್ದಿಗೆ ಹೊರಗೆ ಬಂದು ಅಚ್ಚರಿಯಿಂದ ನನ್ನ ಮುಖ ನೋಡಿದಳು..ಕೊನೆಗೆ ಒಂದು ಮೂಲೆಯಲ್ಲಿ ಕುಳಿತ ಲವ್ ಬರ್ಡ್ ಅಪರೂಪದ ಅತಿಥಿಯಾಗಿ ನಮ್ಮ ಮನೆಯ ಆವರಣವನ್ನು ಹೊಕ್ಕಿತ್ತು..ನೋಡ ನೋಡುತ್ತಿದ್ದಂತೆಯೇ ಅತ್ತಿಂದಿತ್ತ ಹಾರಾಡ ತೊಡಗಿತು.ನಾನು ತಕ್ಷಣ ನನ್ನ ಕ್ಯಾಮರ ತೆಗೆದುಕೊಂಡು ಅದರ ಚಿತ್ರಗಳನ್ನು ಕ್ಲಿಕ್ಕಿಸ ತೊಡಗಿದೆ....ಒಂದು, ಎರಡು, ಮೂರೂ ಹೀಗೆ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದರು ಸಹ ಅದು ಮತ್ತೆ ಮತ್ತೆ ನನ್ನತ್ತ ನೋಡಿ ವಿಭಿನ್ನ ರೀತಿಯಲ್ಲಿ ಪೋಸುಗಳನ್ನು ನೀಡತೊಡಗಿತು.... ಬಿಟ್ಟು ಬಿಡದೆ ಸತತ ಅರ್ಧ ಗಂಟೆಯ ವರೆಗೆ ಅದರ ಸುಮಾರು ಚಿತ್ರಗಳನ್ನು ತೆಗೆದೆ....ಇನ್ನು ಸಾಕು ಎಂಬಂತೆ ಅದು ಮೈ ಕೊಡವಿಕೊಂಡು ಪುರ್ರನೆ ಹಾರಿ ಹೋಯಿತು...


ಒಂದು ಕ್ಷಣದ ನಿರಾಸೆ ಮುಖದಲ್ಲಿ ಆವರಿಸಿತು...ಆದರೆ ಅದನ್ನು ಸ್ವತಂತ್ರವಾಗಿ ಹಾರಾಡಲು ಬಿಟ್ಟ ಖುಷಿ ಇನ್ನೊಂದು ಕಡೆ ಇತ್ತು.... ಎಲ್ಲರಿಗು ಸ್ವತಂತ್ರವಾಗಿ ಜೀವಿಸುವ ಹಕ್ಕು ಇರುವಾಗ ಅದನ್ನು ಬಂಧಿಸಿಡುವ ಹಕ್ಕು ನಮಗೆ ಕೊಟ್ಟವರಾರು? ಇದು ನಿಸರ್ಗದ ನಿಯಮ ಮತ್ತು ನಾವು ನಮ್ಮ ಸಂಸ್ಕೃತಿ, ಇತಿಹಾಸದಿಂದ ಕಲಿತ ಪಾಠಗಳು...


ಅದಕ್ಕೆ ಇರಬೇಕು ಮಹಾಚೈತ್ರ ನಾಟಕದಲ್ಲಿ ಬಸವಣ್ಣನವರು ಬಿಜ್ಜಳ ಮಹಾರಾಜನಿಗೆ ಹೇಳುವ ಒಂದು ಮಾತು ಯಾವ ಕಾಲಕ್ಕೂ ಪ್ರಸ್ತುತ ಎನಿಸುತ್ತದೆ...


"ಇತಿಹಾಸವನ್ನು ಮರತವರು ಇತಿಹಾಸವನ್ನು ಸೃಷ್ಟಿಸಲಾರರು..."

No comments:

Post a Comment