Sunday, July 5, 2009

ರಹಿಮತ ಖಾನ್ ಸಂಗೀತ ಸಮಾರೋಹದಲ್ಲಿ ಹೀಗೊಂದು ಘಟನೆ....

ಧಾರವಾಡದಲ್ಲಿ ರಹಿಮತ್ ಖಾನ್ ಸಂಗೀತ ಸಮಾರೋಹ ಎಂದರೆ ಅದೊಂದು ರೀತಿಯ ಹಬ್ಬ... ಡಾ. ಮಲ್ಲಿಕಾರ್ಜುನ್ ಮನ್ಸೂರ್ ಕಲಾಭವನದಲ್ಲಿ ನಡೆಯುವ ಅಹೋರಾತ್ರಿ ಸಂಗೀತ ಸಮಾರೋಹದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ತಮ್ಮ ಕಾರ್ಯಕ್ರಮವನ್ನು ನೀಡುತ್ತಾರೆ..ಅದನ್ನು ನಾವೆಲ್ಲ ಒಂದು ಪರಂಪರೆಯಂತೆ ನೋಡುತ್ತಾ ಬಂದಿದ್ದೇವೆ...

ಅಂದು ಆ ಕಾರ್ಯಕ್ರಮವನ್ನು ನೋಡಲು ನಾನು, ರವಿ, ದಿಲಾವರ್, ನರಸಿಂಹ ಹಾಗೂ ಇನ್ನಿತರ ಗೆಳೆಯರು ತಯಾರಾಗಿ ಬಂದಿದ್ದೆವು. ನಾವೆಲ್ಲ ಆ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗುತ್ತಿರುವುದು ಬಂಡುಗೆ ತಿಳಿದು, ಅವನೂ ಸಹ ಅದಕ್ಕೆ ಬರುತ್ತೇನೆಂದು, ನಾವು ಅವನಿಗಾಗಿ ಕಾಯ ಬೇಕೆಂದು ತಾಕಿತು ಮಾಡಿದ್ದ. ನಾವೆಲ್ಲ ಸರಿಎಂದು ನಮ್ಮ ತೀರ್ಥ ಪ್ರಾಸಾದಗಳನ್ನು ಮುಗಿಸಿಕೊಂಡು ಕಲಾಭವನದ ಮೈದಾನದಲ್ಲಿ ಇವನಿಗಾಗಿ ಕಾಯುತ್ತ ನಿಂತಿದ್ದೆವು. ಸಂಘದ ಪಕ್ಕದಲ್ಲಿರುವ ಕರುಣಾಕರನ ಪಾನ್ ಶಾಪ್ನಲ್ಲಿ ಬಂಡು ಬಂದರೆ ನಾವು ಇರುವ ಸ್ಥಳವನ್ನು ಅವನಿಗೆ ಹೇಳುವಂತೆ ತಿಳಿಸಿ ಬಂದಿದ್ದೆವು. ಮುಂದೆ ೧೦ ನಿಮಿಷದಲ್ಲಿ ಬಂಡು ಅಲ್ಲಿಗೆ ಬಂದ...ನಮ್ಮನ್ನು ಕಂಡವನೇ "ಬರ್ರಲೇ ಊಟ ಮಾಡ್ಕೊಂಡು ಬರೋಣು" ಎಂದ..ನಾವೆಲ್ಲ ನಮ್ಮ ಊಟ ಆಗಿರುವುದಾಗಿ ತಿಳಿಸಿದಾಗ..ಸರಿ ತಾನು ಊಟ ಮಾಡಿಕೊಂಡು ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟ ಮತ್ತು ತಾನು ತಿರುಗಿ ಬರುವುದಾಗಿಯೂ , ಎಲ್ಲರು ಸೇರಿ ಒಳಗೆ ಹೋಗೋಣ ಎಂದು ತಾಕೀತು ಮಾಡಿದ್ದ... ನಾವು ಸರಿ ಎಂದು ಅವನಿಗಾಗಿ ಕಾಯುತ್ತ ಅಲ್ಲಿಯೇ ನಿಂತೆವು....

ಅವನು ಹೋಗಿ ೫-೧೦ ನಿಮಿಷದಲ್ಲಿ ಕರುಣಾಕರನ ಶಾಪ್ನಲ್ಲಿ ಯಾರೋ ಒಬ್ಬ ಮುದುಕರು ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂತು...ಗಮನಿಸಿ ನೋಡಿದಾಗ ಅವರು ಬಂಡುನ ತಂದೆಯವರಾಗಿದ್ದರು ಮತ್ತು ಕರುಣಾಕರ ಅವರಿಗೆ ನಮ್ಮ ಹತ್ತಿರ ಹೋಗುವಂತೆ ಕೈಮಾಡಿ ತೋರಿಸುತ್ತಿದ್ದ...ನಾನು ತಕ್ಷಣ ನರಸಿಂಹನಿಗೆ ಅಲರ್ಟ್ ಮಾಡಿದೆ.....ಸ್ವಲ್ಪ ಸೀರಿಯಸ್ ಆಗಿರುವಂತೆ ಅವನಿಗೆ ಹೇಳಿದೆ...ಅವನು ಅದನ್ನು ತನ್ನ ಚೇಷ್ಟೆಯ ವಸ್ತುವನ್ನಾಗಿಸಿಕೊಂಡ....ಅವರು ನೇರವಾಗಿ ನಮ್ಮ ಕಡೆ ಬಂದವರೇ.."ಇಲ್ಲಿ ಯಾರರ ಬಂಡುನ್ನ ನೋಡೀರೇನು?" ಎಂದರು... ನರಸಿಂಹ ತಕ್ಷಣ "ಇಲ್ಲೇ ಎಲ್ಲ್ಯರ ಶೆರೆ ಕುಡಿಲಿಕ್ಕೆ ಹೋಗಿರಬೇಕು ನೋಡ್ರಿ..." ಎಂದುಬಿಟ್ಟ.. ಪಾಪ ಮುದುಕ ಏನು ಮಾಡ ಬೇಕು ಎಂದು ತೋಚದೆ ನಮ್ಮನ್ನು ನೋಡುತ್ತಾ ಅಲ್ಲಿಂದ ಕಾಲ್ಕಿತ್ತರು...

ಮುಂದೆ ಸರಿಯಾಗಿ ೧೦ ನಿಮಿಷದಲ್ಲಿ ಬಂಡು ಆ ವ್ರುದ್ಧರೊಂದಿಗೆ ಅಲ್ಲಿಗೆ ಹಾಜರಾದ...ಬಂದವನೇ ನೇರವಾಗಿ..."ಇಲ್ಲೇ ಈಗ ಹತ್ತು ನಿಮಿಷದ ಕೆಳಗ ಯಾರರ ನನ್ನನ್ನ ಕೇಳಿಕೊಂಡು ಬಂದಿದ್ದರೇನು" ಎಂದ...

ನರಸಿಂಹ ಅದಕ್ಕೆ.." ಹೌದು ಒಬ್ಬ ಯಾರೋ ಮುದುಕ ಮನುಷಾ ಬಂದಿದ್ದರು" ಎಂದ...

ಬಂಡು: ಅವರಿಗೆ ನೀವು ಏನಂತ ಹೇಳಿ ಕಳಸಿದ್ರಿ?

ನರಸಿಂಹ: ಈ ಇಲ್ಲೇ ಎಲ್ಲ್ಯರ ಶೆರೆ ಕುಡಿಲಿಕ್ಕೆ ಹೋಗಿರಬೇಕು ನೋಡ್ರಿ ಅಂದ್ವಿ....

ಬಂಡು ಮೈ ಕೈ ಹರಿದುಕೊಳ್ಳುವುದೊಂದೇ ಬಾಕಿ...ಲೇ ನಿಮ್ಮೌರ್...ಅಂವ ನಮ್ಮಪ್ಪರ್ಲೆ... ಗೊಳಾಡಲು ಆರಂಭಿಸಿದ........

2 comments: