Friday, July 17, 2009

ಜನ ಮರುಳೋ ಜಾತ್ರೆ ಮರುಳೋ....









ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮದವರಿಂದ ನಡೆದ ಅನೇಕ ಅಕ್ರಮಗಳ ಬಗ್ಗೆ ವರದಿಯಾಯ್ತು..ಅದರಲ್ಲೂ ಆಂದ್ರಪ್ರದೇಶದಲ್ಲಿ ಪತ್ರಿಕೆಯವರಿಂದ ನಡೆದ ಹಗಲು ದರೋಡೆ ಎಂದರ್ಥದಲ್ಲಿ ಕೆಲವು ವರದಿಗಳು ಪ್ರಕಟಗೊಂಡವು ....ಹಾಗಾದರೆ ಕರ್ನಾಟಕದಲ್ಲಿ ಪತ್ರಿಕೆಗಳು/ಪತ್ರಿಕೋದ್ಯಮಿಗಳು/ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಅಷ್ಟೊಂದು ಜತನದಿಂದ ಪಾಲಿಸಿಕೊಂಡು ಬಂದವೆ? ಇಲ್ಲಿ ಯಾವ ರೀತಿಯ ಅಕ್ರಮಗಳು ನಡೆಯಲೇ ಇಲ್ಲವೇ? ಅಥವಾ ನಡೆದರೂ ಅವು ಬೆಳಕಿಗೆ ಬಾರದೆ ಹೋದವೇ?

ಖಂಡಿತವಾಗಿಯೂ ಕರ್ನಾಟಕದಲ್ಲಿಯೂ ಸಹ ಆಂಧ್ರಪ್ರದೇಶದಲ್ಲಿ ನಡೆದಷ್ಟೇ ವ್ಯಾಪಕವಾದ ಅಕ್ರಮಗಳು ಮಾಧ್ಯಮದವರಿಂದ ನಡೆದಿವೆ..ಆದರೆ ವಿಪರ್ಯಾಸವೆಂದರೆ ಅವ್ಯಾವ ಸಂಗತಿಗಳು ಸಹ ಬೆಳಕಿಗೆ ಬಾರದೆ ಹೋದವು...

ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಮಾರ್ಗರೆಟ್ ಆಳ್ವಾ ಅವರಿಗೆ ಮಾಧ್ಯಮ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದೆ. ಆ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳು ನನ್ನ ಕಣ್ಣ ಮುಂದೆಯೇ ನಡೆದು ಹೋದವು...ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಹೇಳುವದಾದರೆ ಕೇವಲ ಎರಡು ಕನ್ನಡ ಪತ್ರಿಕೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಪತ್ರಿಕೆಗಳು ಇಂತಹ ಅಕ್ರಮಗಳಲ್ಲಿ ಭಾಗಿಯಾದವು...ಅದರ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...

೧. ನಾನು ಶ್ರೀಮತಿ ಮಾರ್ಗರೆಟ್ ಆಳ್ವಾ ಅವರೊಂದಿಗೆ ಕಾರವಾರದಲ್ಲಿದ್ದೆ. ಚುನಾವಣಾ ಪ್ರಚಾರದ ಭರಾಟೆ ಜೋರಾಗಿತ್ತು...ಅಂದು ಮಧ್ಯಾನ್ಹ ೪ ಗಂಟೆಯ ಸಮಯ. ಅಂದು ಬೆಳಿಗ್ಗೆ ಬೆಳಗಾವಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಭಾಷಣ ಮಾಡಲು ಕಾಂಗ್ರೆಸ್ ಮುಖಂಡ ಶ್ರೀ. ಅನಿಲ್ ಲಾಡ್ ಬೆಳಗಾವಿಗೆ ಬಂದು ಸಾರ್ವಜನಿಕ ಸಭೆಯನುದ್ದೇಶಿಸಿ ಭಾಷಣ ಮಾಡಿ ಅದರಲ್ಲಿ ಎಂ.ಇ.ಎಸ್ ಕಾರ್ಯಕರ್ತರಿಗೆ ಇರುಸು-ಮುರುಸಾಗುವ ರೀತಿಯಲಿ ಏನೋ ಮಾತನಾಡಿದ್ದಾರೆ...ಹಿಂದಿನ ದಿನವೇ ಆ ಮುಖಂಡರು ತಮ್ಮ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವುದಾಗಿ ಘೋಷಿಸಿದ್ದರು...ಅನಿಲ್ ಲಾಡ್ ಅವರ ಮಾತು ಆ ಪಕ್ಷದ ಮುಖಂಡರಿಗೆ ಕಸಿವಿಸಿ ಉಂಟುಮಾದಲಿತ್ತು..ಅದನ್ನು ಪತ್ರಿಕೆಯವರು ಸಹ ವರದಿ ಮಾಡಲು ಮುಂದಾಗಿದ್ದರು....ಬೆಳಗಾವಿಯಿಂದ ನನ್ನ ಸ್ನೇಹಿತನೊಬ್ಬ ನನಗೆ ಫೋನಾಯಿಸಿ ನಾಳೆಯ ಪತ್ರಿಕೆಯಲಿ ಈ ವಿಷಯ ಮುಖಪುಟದಲ್ಲಿ ಬರಲಿದ್ದು ನಿಮ್ಮ ಅಭ್ಯರ್ಥಿಗೆ ತೊಂದರೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದ...ಆ ಸುದ್ದಿಯನ್ನು ತಪ್ಪಿಸುವ ಅಥವಾ ಬರದಂತೆ ನೋಡಿಕೊಳ್ಳುವ ಅಥವಾ ಹೆಚ್ಚು ಮುಜುಗರವಾದಂತೆ ಸುದ್ದಿಯನು ಪ್ರಕಟವಾಗಲು ನಾವು ಯಾರನ್ನು ಕಾಣಬೇಕೆಂದು ನನ್ನ ಗೆಳೆಯನನ್ನು ಕೇಳಿದಾಗ ಅವನು ಒಬ್ಬ ಪತ್ರಕರ್ತರ ಹೆಸರನ್ನು ಹೇಳಿದ...ನನ್ನು ತಕ್ಷಣ ಕಾರವಾರದಿಂದ ಬೆಳಗಾವಿಗೆ ಧಾವಿಸಿದೆ..ಬೆಳಗಾವಿಯಲ್ಲಿ ಪಕ್ಷದ ಕೆಲವರಿಗೆ "ಆ ಪತ್ರಿಕೆಗೆ" ಬರಲು ತಿಳಿಸಿದ್ದೆ...ಆ ಸುದ್ದಿ ಬರದಂತೆ ಮಾಡಲು ನಾನು ತೆಗೆದುಕೊಂಡ ಸಮಯ ಕೇವಲ ೧೦ ನಿಮಿಷ..ಮತ್ತು ಖರ್ಚಾದ ಹಣ ಮೂರು ಲಕ್ಷ ರೂಪಾಯಿಗಳು....ಆ ಸುದ್ದಿಯ ವಿಷಯವನ್ನು ನಾನು ಸಂಬಧಿಸಿದ ಪತ್ರಕರ್ತರ ಜೊತೆ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಅವರು ನೇರವಾಗಿ ವ್ಯವಹಾರಕ್ಕಿಳಿದಿದ್ದರು...ನನ್ನನ್ನು ನೇರವಾಗಿ ಕೇಳಿಯೇ ಬಿಟ್ಟರು...ಇಷ್ಟು ಹಣ ಕೊಡಿ ಅಂದರೆ ಸುದ್ದಿ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು.....ಇದು ಆಂಗ್ಲ ಪತ್ರಿಕೆಯೊಂದಿಗೆ ನಡೆದ ಘಟನೆ....

೨. ಮತ್ತೊಂದು ದಿನ ನಾನು ಅಂಕೊಲಾದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದಾಗ ಒಬ್ಬ ಕನ್ನಡ ಪತ್ರಿಕೆಯ ಪತ್ರಕರ್ತರು ನನಗೆ ಫೋನಾಯಿಸಿ... ಅಲ್ಲಿನ ಬೇರೆ ಬೇರೆ ಪಕ್ಷಗಳ ಬೆಳವಣಿಗೆ ಕುರಿತು ಸುದ್ದಿ ರವಾನಿಸಿದರು..ಅನೇಕ ಜನ ಪತ್ರಕರ್ತ ಮಿತ್ರರು ಆಗಾಗ ಹೀಗೆ ಫೋನು ಮಾಡಿ ಈ ರೀತಿಯ ಸುದ್ದಿಗಳನ್ನು ನನಗೆ ಕೊಡುತಿದ್ದರಿಂದ ನನಗೆ ಇದು ಅಂತಹ ವಿಶೇಷವೇನು ಅನಿಸಲಿಲ್ಲ...ಆದರೆ ಈ ಪತ್ರಕರ್ತ ಮಹಾಶಯ ತನ್ನ ಮಾತಿನ ಕೊನೆಯಲ್ಲಿ ಒಂದು ಪ್ರಸ್ತಾಪವನ್ನು ನನ್ನ ಮುಂದಿಟ್ಟ...."ಸರ್ ನಮ್ಮ ಆಫೀಸಿನವರು ನನಗ ಖಾನಾಪುರ ಮತ್ತ ಕಿತ್ತೂರ ಕ್ಷೇತ್ರದ ಸಮೀಕ್ಷಾ ಮಾಡಲಿಕ್ಕೆ ಹೇಳ್ಯಾರ" ಎಂದ. ನಾನು ಅದಕ್ಕೆ "ಮಾಡ್ರಿ..ಒಳ್ಳೇದು" ಎಂದೇ..ಅದಕ್ಕವನು "ಸರ್ ಮ್ಯಾಡಂ ಗ ಹೇಳಿ ನನಗ ಒಂದು ಟ್ಯಾಕ್ಸಿ ಕೊಡಸ್ರಿ...ಅಂದ್ರ ನಾನು ಈ ಸಮೀಕ್ಷಾ ಲಗುಣ ಮುಗಸಬಹುದು" ಎಂದ. ನನಗಿದು ವಿಚಿತ್ರವಾಗಿ ಕಂಡಿತು..ಅವನ ಪತ್ರಿಕೆಯಿಂದ ಅವನಿಗೆ ಸಮೀಕ್ಷೆ ಮಾಡಲು ಆದೇಶ ಬಂದಿದೆ... ಅದಕ್ಕೆ ನಾವು ಅಂದರೆ ಪಕ್ಷದ ವತಿಯಿಂದ ಕಾರನ್ನು ಏಕೆ ಕೊಡಬೇಕು ಅಂದುಕೊಳ್ಳುತ್ತಿದ್ದಂತೆಯೇ ಅವನು "ಸರ್ ಟ್ಯಾಕ್ಸಿ ಕೊದಸಿದ್ರಿ ಅಂದ್ರ ನಾನು ನಿಮ್ಮ ಪಕ್ಷದ ಪರವಾಗಿ ಸಮೀಕ್ಷಾ ಬರೀತೀನಿ" ಅಂದು ಬಿಡಬೇಕೇ? ನನಗೆ ತುಂಬ ಹೇಸಿಗೆ ಅನಿಸಿತು..ಟ್ಯಾಕ್ಸಿ ಕೊಡಲು ಸಾಧ್ಯವಿಲ್ಲ ಎಂದು ನಾನಾ ಫೋನನ್ನು ಇತ್ತು ಬಿಟ್ಟೆ...ಮುಂದೆ ಅವನು ಸಮೀಕ್ಷೆ ಮಾಡಿದನೋ ಇಲ್ಲವೊ..ಮಾಡಿದ್ದರೂ ಅದರಲ್ಲಿ ಏನು ಬರೆದಿದ್ದಾನೆ ಎಂದು ಓದುವ ಗೋಜಿಗೂ ಸಹ ಹೋಗಲಿಲ್ಲ.

೩. ಎಪ್ರಿಲ್ ೨೧ ಬಹಿರಂಗ ಚುನಾವಣಾ ಪ್ರಚಾರಕ್ಕೆ ಕೊನೆಯ ದಿನ. ಅಂದು ಕಾರವಾರಕ್ಕೆ ಮಾರ್ಗರೆಟ್ ಆಳ್ವಾ ಅವರ ಪರ ಪ್ರಚಾರ ಮಾಡಲು ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಬರುವವರಿದ್ದರು...ಕಾರವಾರದಲ್ಲಿ ಅದಕ್ಕೆ ಎಲ್ಲಾ ತಯಾರಿಯನ್ನು ಮಾಡಲಾಗಿತ್ತು... ಅಂದು ನಾನು ಬೆಳಿಗ್ಗೆ ಸುಮಾರು ೧೦ ಗಂಟೆಗೆ ನಾನು ಕುಮುತಾದಲ್ಲಿದ್ದೆ...ಅಲ್ಲಿಂದ ನಾನು ಮತ್ತು ಮ್ಯಾಗಿ ಮೇಡಂ ಕಾರವಾರಕ್ಕೆ ಹೊರಡುವ ತಯಾರಿಯಲ್ಲಿದ್ದೆವು...ಮಂಗಳೂರಿನಿಂದ ಇಂಗ್ಲೀಶ್ ಚಾನೆಲ್ ಒಂದರ ಪ್ರತಿನಿಧಿ ನನಗೆ ಫೋನ್ ಮಾಡಿ ಸಲ್ಮಾನ್ ಖಾನ್ ಕಾರ್ಯಕ್ರಮದ ವಿವರಣೆ ಕೇಳಿದರು..ಎಲ್ಲಾ ವಿವರಣೆ ಕೊಟ್ಟ ನಂತರ ಅವರು ಈ ಕಾರ್ಯಕ್ರಮಕ್ಕೆ ಬರಲು ಮಂದಳುರಿನಿಂದ ಕಾರವಾರಕ್ಕೆ ಒಂದು ಟ್ಯಾಕ್ಸಿ ವ್ಯವಸ್ಥೆ ಮಾಡಲು ಆದೇಶಿಸಿದರು..ನಾನು ಅದು ಸಾಧ್ಯವಿಲ್ಲ ಎಂದಾಗ ಅವರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ..."ನೀವು ಯಾವ ಮಾಧ್ಯಮದವರೊಂದಿಗೆ ಮಾತನಾಡುತ್ತಿದೀರಿ ಗೊತ್ತಾ? ನೀವು ನಮಗೆ ಟ್ಯಾಕ್ಸಿ ವ್ಯವಸ್ಥೆ ಮಾಡದಿದ್ದರೆ ನಿಮ್ಮ ಅಭ್ಯರ್ಥಿಯ ವಿರುದ್ಧ ಸುದ್ದಿಯನ್ನು ಮಾಡಲಾಗುವುದು ಅದು...ಇದು" ಎಂದೆಲ್ಲ ಕೂಗಾಡಲು ಆರಂಭಿಸಿದರು... ನಾನು ಅವರಿಗೆ ಅಷ್ಟೇ ಸೌಮ್ಯವಾಗಿ "ನಾವು ನಿಮಗೆ ಇನ್ವಿಟೇಶನ್ ಕಳಿಸಿರುವುದು ನಿಮ್ಮ ಅವಗಾಹನೆಗೆ...ಬರಲೇ ಬೇಕು ಎಂದಲ್ಲ..ಬರುವುದಾದರೆ ನಿಮ ಖರ್ಚಿನಲ್ಲಿ ಬನ್ನಿ ಖಂಡಿತವಾಗಿ ನಿಮಗೆ ಸ್ವಾಗತವಿದೆ...ಅಷ್ಟಕ್ಕೂ ನೀವು ನಮ್ಮ ಅಭ್ಯರ್ಥಿಯ ವಿರುದ್ಧ ಸುದ್ದಿಯನು ಮಾಡುವುದಾದರೆ ನಿಮ್ಮನ್ನು ತಡೆಯುವ ಶಕ್ತಿ ನನಗಿಲ್ಲ..ದಯವಿಟ್ಟು ಮುಂದುವರೆಯಿರಿ" ಎಂದು ಹೇಳಿ ಮಾತು ಮುಗಿಸಿದೆ...ಮುಂದೆ ಆ ಮನುಷ್ಯ ಕಾರ್ಯಕ್ರಮಕ್ಕೆ ಬಂದು...ನನ್ನನ್ನು ಭೇಟಿ ಮಾಡಿ...ಚಹಾ ಕುಡಿದು ಹೋದರು...

ಹೀಗೆ ಅನೇಕ ಘಟನೆಗಳು ನಾನಾ ಕಣ್ಣ ಮುಂದೆಯೇ ನಡೆದಿದೆ....ಇವು ಯಾವವು ಜಾಹಿರಾತಿಗೆ ಸಂಬಂಧಪತ್ತವಲ್ಲ....ಸಂಪಾದಕೀಯದಲ್ಲೇ ನಡೆಯುವ ಘಟನೆಗಳು...ನೀವು ಅವರಿಗೆ ಬೇಕಾದ ಹಣವನ್ನು ಸಂದಾಯ ಮಾಡಿದರೆ...ಸುದ್ದಿಯ ಪ್ರತಿಯನ್ನು ನಿಮ್ಮ ಅನುಮೊದನೆಗು ಕಳಿಸಿಕೊಡುತ್ತಾರೆ....ನನ್ನ ಹತ್ತಿರ ಅಂತಹ ಪ್ರತಿಗಳು ಸಾಕಷ್ಟಿವೆ...

ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಿಯು ಪತ್ರಿಕಾ ಧರ್ಮ/ನಿಯತ್ತು ಎನ್ನುವುದಿದೆಯೇ? ಹಾಗಾದರೆ ನಾವೆಲ್ಲಾ ಪತ್ರಿಕೆಗಳನ್ನು ಓದುವುದೇಕೆ?

No comments:

Post a Comment