Thursday, July 2, 2009

ಬಂಡು ನಾ ಪಂಕಜಾ ಮಾತಾಡೋದು....ಧಾರವಾಡದಲ್ಲಿದ್ದ ನಮ್ಮ ದಿನಗಳು ನಿಜಕ್ಕೂ ಬಹಳ ಖುಷಿ ನೀಡಿದ ದಿನಗಳು... ಅಲ್ಲಿನ ಗೆಳೆಯರು, ಪರಿಸರ, ನಾವು ಬೆಳೆದ ರೀತಿ..ಎಲ್ಲವು ಕೂಡ ಬಹುಕಾಲ ನೆನಪಿನಲ್ಲಿ ಉಳಿಯುವಂತಹವುಗಳು....

ನರಸಿಂಹ ರಾವ್ ಅತ್ಯಂತ ಉತ್ಸಾಹಿ, ಬಹು ಕೀಟಲೆಯ ಮನುಷ್ಯ...ಎಲ್ಲರನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಈತ ನಿಸ್ಸೀಮ...ಹೆಣ್ಣು ಧನಿಯಲ್ಲಿ ಮಾತನಾಡ ತೊಡಗಿದನೆಂದರೆ ಯಾರಾದರು ಸಹ ಮರುಳಾಗಲೇ ಬೇಕು... ಹೀಗೆ ನಾವು ಗೋಳು ಹೊಯ್ಸಿಕೊಳ್ಳಲು ನಮಗೆ ಮೇಲಿಂದ ಮೇಲೆ ಸಿಗುವ ಆಸಾಮಿ ಎಂದರೆ ಬಂಡು ಕುಲಕರ್ಣಿ.... ಅವನನ್ನು ನಾವು ಅನೇಕ ಬಾರಿ ರಾತ್ರಿ ೧೨ ಗಂಟೆಯ ನಂತರ ಅವನ ರೂಮಿಗೆ ಹೋಗಿ, ಬಾಗಿಲು ಬಡಿದು, ಖ್ಯಾತ ಸಾಹಿತಿಗಳ ಹೆಸರನ್ನು ಹೇಳಿ, ಬಾಗಿಲು ತೆರೆಯಿಸಿ...ಕಾಡುತ್ತಿದ್ದೆವು...ಒಂದು ಸಲವಂತೂ ಗೆಳೆಯ ಗಿರೀಶ್ ಜೋಷಿ ಅವನ ರೋಮಿಗೆ ರಾತ್ರಿ ೧೨ ಗಂಟೆಗೆ ಕಂಠ ಪೂರ್ತಿ ಕುಡಿದು ಹೋಗಿ...ರೂಮಿನಲ್ಲಿ ವಾಂತಿ ಮಾಡಿಕೊಂಡು ಬಂದಿದ್ದ... ಅದನ್ನು ಸ್ವಚ್ಚಗೊಳಿಸಲು ಅವನಿಗೆ ಬರೋಬ್ಬರಿ ೨ ದಿನ ಬೇಕಾಗಿತ್ತು....

ಹೀಗಿರುವಾಗ ಒಂದು ದಿನ ನರಸಿಂಹನಿಗೆ ಅದೇನೋ ಒಂದು ವಿಚಿತ್ರ ಯೋಚನೆ ತಲೆಯಲ್ಲಿ ಬಂತು ಅದನ್ನು ತಕ್ಷಣವೇ ಕಾರ್ಯ ರೂಪಕ್ಕೆ ಇಳಿಸಿಯು ಬಿಟ್ಟ...

ಧಾರವಾಡದಲ್ಲಿ ಆಗ (೧೯೯೫ ರಲ್ಲಿ) "ನಗರ ನೂಪುರ" ಎಂಬ ಹೊಸ ಪತ್ರಿಕೆ ಆರಂಭವಾಗಿತ್ತು...ಬಂಡು ಆಗತಾನೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಈ ಪತ್ರಿಕೆಯನ್ನು ಸೇರಿಕೊಂಡಿದ್ದ...ನರಸಿಂಹ ಬಂದವನೇ ತನ್ನ ಯೋಜನೆಯನ್ನು ಹೇಳಿದಾಗ ನಾವೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು...ಅದರ ವಿವರ ಇಷ್ಟೇ ಪ್ರತಿದಿನ ನರಸಿಂಹ ಬಮ್ದುನಿಗೆ ಹುಡುಗಿಯ ಹೆಸರಿನಲ್ಲಿ ಫೋನ್ ಮಾಡಿ ಅವನನ್ನು ಗೋಳುಹೊಯ್ದುಕೊಳ್ಳುವುದು...ಅದನ್ನು ನಾವು ಎಂಜಾಯ್ ಮಾಡುವುದು...ಅಂತೆಯೇ ನರಸಿಂಹನ ಕೆಲಸ ಆರಂಭವಾಯಿತು...."ಬಂಡು ನಾ ಪಂಕಜಾ ಅಂತ ಮೈಸೂರಿನಿಂದ ಬಂದೇನಿ...ನಿಮ್ಮ ಬಗ್ಗೆ ನಾನು ಮೈಸೂರಿನ ರಂಗಾಯಣದಾಗ ಭಾಳ ಕೇಳೀನಿ..ಪತ್ರಿಕೆ ಯೊಳಗೂ ನಿಮ್ಮ ಲೇಖನಾ ಭಾಳ ಓದೀನಿ...ನಾನು ಈಗ ಧಾರವಾದಕ್ಕ ಬಂದೀನಿ...ನಿಮ್ಮನ್ನ ಕಾಣ ಬೇಕಾಗಿತ್ತು..." ಬಂಡು ಫುಲ್ ಭಾವುಕನಾಗಿಹೋದ... ನರಸಿಂಹ ಫೋನ್ ಮಾಡಿ ತನ್ನ ಪಾಡಿಗೆ ತನ್ನ ಮನೆಗೆ ಹೊರಟು ಬಿಡುತ್ತಿದ್ದ...ಮುಂದೆ ನಮ್ಮ ಕಾರ್ಯಾಚರಣೆ ಆರಂಭವಾಗುತ್ತಿತ್ತು...ನಾನು, ರವಿ, ದಿಲಾವರ್, ಸುರೇಶ ಕುಲಕರ್ಣಿ ಮುಂತಾದವರಿಗೆ ಬಂಡು ಅಕ್ಷರ ಷಹ ಆಹಾರವಾಗುತ್ತಿದ್ದ...ಮೊದಲಿನ ಕೆಲವುದಿನಗಳವರೆಗೆ ಈ ವಿಷಯವನ್ನು ನಮ್ಮ ಮುಂದೆ ಪ್ರಸ್ತಾಪಿಸುತ್ತಲೇ ಇರಲಿಲ್ಲ....ನಾವು ಅವನು ಹೇಳುವವರೆಗೆ ಅದರ ಉಸಾಬರಿಗೆ ಹೋಗಬಾರದೆಂದು ನಿರ್ಧರಿಸಿದ್ದೆವು...

ಹೀಗೆ ಇರುವಾಗ ಒಂದು ದಿನ ಅವನಾಗಿಯೇ ಬಂದು "ರವ್ಯಾ..ಧನ್ಯಾ ನಿಮ್ಮ ಹತ್ರ ಒಂದು ಇಂಪಾರ್ಟೆಂಟ್ ವಿಷ್ಯ ಮಾತಾಡಬೇಕು..ಬರ್ರಿ ಹೋಗೋಣು..." ಎಂದ. ನಮಗೆ ಗೊತ್ತಾಗಿ ಹೋಗಿತ್ತು...ಕುರಿ ಬಂದು ಹಳ್ಳಕ್ಕೆ ಬಿದ್ದಿದೆ ಎಂದು...ಜೊತೆಯಲ್ಲಿ ದಿಲಾವರ್ ಹಾಗು ಸುರೇಶ ಕುಲಕರ್ಣಿ ಇಬ್ಬರು ಬಂದರು...ನಮ್ಮ ಕುಡಿತ ಹಾಗು ಮಾತು ಆರಂಭವಾಯಿತು...ಬಂಡು ಎಂದು ಯಾವ ಕಾರಣಕ್ಕೂ ತನ್ನ ಜೇಬಿನಿಂದ ಹಣ ಬಿಚ್ಚಿದವನಲ್ಲ...ಆದರೆ ಅಂದು ಅವನಾಗಿಯೇ ನಮ್ಮನ್ನು ಕರೆದಿದ್ದರಿಂದ "ನೋಡ್ರಲೇ ನನ್ನ ಹತ್ರ ಬರೇ ನೂರು ರುಪಾಯಿ ಆದವು..ಅಷ್ಟ " ಎಂದ..ನಾವು "ಆತು ಬಂಡು ಅಸ್ಥರಾಗ ಮುಗಸೋನು ಎಂದು ಕಚೇರಿ ಆರಂಭವಾಯ್ತು... ಎಲ್ಲರು ಒಂದೊಂದು ಪೆಗ್ಗು ತೆಗೆದುಕೊಂಡು ಅವನನ್ನು ಮಾತಿಗೆ ಎಲೆಯುತ್ತಿದ್ದಂತೆಯೇ..ಅವನಾಗಿಯೇ ತನ್ನ "ಪ್ರೇಮ ಕಥೆಯನ್ನು" ಆರಂಭಿಸಿದ...

ಧನ್ಯಾ, ರವ್ಯಾ..ನನಗ ಯಾರೋ ಪಂಕಜಾ ಅನ್ನೋ ಹುಡುಗಿ ಫೋನ್ ಮಡ್ಲಿಕತ್ತಾಳ...ಮೈಸುರಿನ್ಯಾಕಂತ...ರಂಗಾಯನದಾಗ ನನ್ನ ಬಗ್ಗೆ ಕೆಲ್ಯಾಳಂತ...ನನ್ನ ಲೇಖನಾನು ಓದ್ಯಾಳಂತ...ಅವನ ಮಾತು ಕೇಳುತ್ತಿದಂತೆಯೇ ಒಂದು ಮೂಲೆಯಲಿ ಕುಳಿತಿದ್ದ ದಿಲಾವರ್ ಹಾಗು ಸುರೇಶ ಕುಲಕರ್ಣಿ ತಮ್ಮಲ್ಲಿಯೇ ಮುಸಿ ಮುಸಿ ನಗುತ್ತದ್ದರು...ನಾವು "ಪಂಕಜಾ" ಳ ಬಗ್ಗೆ ಹೆಚ್ಚಿಗೆ ಹೇಳು ಎಂದು ಬಂಡುನನ್ನು ಹುರಿದುಂಬಿಸುತ್ತಿದ್ದೆವು ...ಅವನು ಮತ್ತೆ ಮತ್ತೆ ಅದನ್ನೇ ಕನವರಿಸುತ್ತಿದ್ದ...ನಮ್ಮ ಖಾಲಿಯಾದ ಗ್ಲಾಸುಗಳಿಗೆ ರಂ ಬಂದು ಬೀಳುತ್ತಿತ್ತು...ಬರೀ ನೂರು ರುಪಾಯಿ ಇದೆ ಎಂದು ಹೇಳುತ್ತಿದ್ದ ಬಂಡು ತನ್ನ ಟೇಬಲ್ಲಿಗೆ ಬಂದ ೪೦೦ ರುಪಾಯಿ ಬಿಲ್ಲನ್ನು ಕೊಟ್ಟು ಹೊರಡುತ್ತಿದ್ದ...

ಈ ಪಂಕಜಾ ಕಥೆ ಒಂದೆರಡು ದಿನದಲ್ಲಿ ಮುಗಿಯಲಿಲ....ನಮಗೆ ಮೋಜು ಮಾದಬೇಕೆನಿಸಿದಾಗೆಲ್ಲ ನಾವು ಹುಬ್ಬಳ್ಳಿಯ ನವನಗರದಿಂದ ನರಸಿಂಹನನ್ನು ಕರೆಸಿಕೊಂಡು ಪಂಕಜಾ ಹೆಸರಿನಲ್ಲಿ ಫೋನ್ ಮಾಡಿಸುವುದು, ನಂತರ ನರಸಿಂಹನನ್ನು ತನ್ನ ಮನೆಗೆ ಕಳುಹಿಸಿ ನಾವು ಬಂಡುನೊಂದಿಗೆ ತೀರ್ಥ ಪ್ರಸಾದದಲ್ಲಿ ಮುಳುಗಿರುತ್ತಿದ್ದೆವು...ಒಂದು ದಿನವಂತೂ ಬಂಡು ಪೂರ್ತಿ ಟೈಟ್ ಆಗಿ "ಐ ಅಂ ಇನ್ ಲವ್ ವಿಥ್ ಪಂಕಜಾ" ಎಂದು ಧಾರವಾಡದ ಎಮ್ಮಿಕೆರಿಯಲಿ ರಾತ್ರಿ ೧೧ ಗಂಟೆಗೆ ರಂಪ ಮಾಡಿದ್ದ...

ಈ ಕಥೆ ಸತತವಾಗಿ ಮೂರೂ ತಿಂಗಳವರೆಗೆ ನಡೆಯಿತು...ಒಂದು ದಿನ ನರಸಿಂಹ ಪಂಕಜಾ ಹೆಸರಿನಲ್ಲಿ ಫೋನ್ ಮಾಡಿ "ಬಂಡು ನಾನು ನಿಮ್ಮನ್ನ ಭೇಟಿ ಆಗಬೇಕಂತ ಮಾಡೀನಿ..ಆದ್ರ ನಿಮ್ಮ ಜೊತಿ ಆ ಗಡ್ಡ ಬಿಟ್ಟೌರು ಇಬ್ಬರು ಇರತಾರ..ಅವರು ನನ್ನನ್ನ ಹ್ಯಾಂಗೋ ನೋಡತಾರ..ಅವರಂದ್ರ ನನಗ ಆಗಿ ಬರಂಗಿಲ್ಲ...ಎಂದಾಗ ಬಂಡುಗೆ ನನ್ನ ಹಾಗು ಸುರೇಶ ಕುಲಕರ್ಣಿ ಮೇಲೆ ಸಂಶಯ ಏಕೆಂದರೆ ನಾವಿಬ್ಬರು ಆಗ ಗಡ್ಡ ಬಿಡುತ್ತಿದ್ದೆವು...ಬಂಡು ಅವನ "ಪಂಕಜಾ" ಳಿಗೆ ಪ್ರಾಮಿಸ್ ಮಾಡಿದ...ನಾನು ಅವರಿಬ್ಬರ ಜೊತಿ ಗೆಳೆತನ ಬಿಡತೀನಿ...ಎಲ್ಲಿ ಭೇಟಿ ಆಗೋನು? ಅದಕ್ಕವಳು..."ನಾಳೆ ಸಂಜೀ ಮುಂದ ವಿದ್ಯಾವರ್ಧಕ ಸಂಘದ ಮುಂದ ಕರೆಕ್ಟಾಗಿ ೭ ಗಂತೆಕ ನಾನು ನೀಲಿ ಬಣ್ಣದ ಸೆಲ್ವಾರ್ ಕಮೀಜ್ ಹಾಕ್ಕೊಂಡು ಬಿಳಿ ಬಣ್ಣದ ಸ್ಕೂಟಿ ಜೊತಿ ನಿಂತಿರತೀನಿ ... ನೀನು ಅದನ್ನ ನೋಡಿದ ಕೂಡಲೇ ನನ್ನನ್ನ ಫಾಲೋ ಮಾಡು ಮುಂದ ಎಲ್ಲರ ಹೋಗಿ ಭೇಟಿ ಆಗೋನು" ಬಂಡು ಈಗ ವಿಶ್ವದ ಅತ್ಯಂತ ತುತ್ತ ತುದಿಯಲ್ಲಿ...ರಾತ್ರಿ ಮತ್ತೆ ನಮ್ಮನ್ನು ಕರೆದುಕೊಂಡು ಹೋಗಿ ಗುಂಡು ಹಾಕಿಸಿದ..ಆದರೆ "ಪಂಕಜಾ" ಳನ್ನು ಭೇಟಿ ಆಗುವ ವಿಷಯವನ್ನು ಮಾತ್ರ ಪ್ರಸ್ತಾಪಿಸಲಿಲ್ಲ...ನಾವು ಕೇಳಲಿಲ್ಲ.....

ಮಾರನೆ ದಿನ ನಾವು ಎಂದಿನಂತೆ ಸಂಘದ ಹತ್ತಿರ ಬಂಡು ಸೇರಿದೆವು..ನಮ್ಮ ಜೊತೆ ನರಸಿಂಹನು ಇದ್ದ ಎಲ್ಲರು ಒಳಗೊಳಗೇ ನಗುತ್ತಿದ್ದೆವು...ಬಂಡು ಬಂಡು ನಮ್ಮಿಂದ ತುಸು ದೂರದಲ್ಲಿ ನಿಂತಿದ್ದ..ನಮ್ಮ ಹತ್ತಿರ ಬರಲು ಆಟ ಸಿದ್ಧನಿರಲಿಲ್ಲ...ಮಾತನಾಡಿಸಿದರೆ ಸಿಟ್ಟಿಗೆಲ ತೊಡಗಿದ... ಅದೇನು ಕಾಕತಾಳೀಯವೋ ಏನೋ ಗೊತ್ತಿಲ ಅದೇ ಸಮಯಕೆ ಸರಿಯಾಗಿ ವಿದ್ಯಾವರ್ಧಕ ಸಂಘದ ಎದುರು ನೀಲಿ ಬಣ್ಣದ ಸೆಲ್ವಾರ್ ಕಮೀಜ್ ಹಾಕಿಕೊಂಡು ಬಿಳಿ ಬಣ್ಣದ ಸ್ಕೂಟಿ ಯೊಂದಿಗ್ಗೆ ಒಬ್ಬ ಯುವತಿ ಅಲ್ಲಿ ಪ್ರತ್ಯಕ್ಷವಾಗಿ ಬಿಟ್ಟಳು..ಬಂಡುಗೆ ಸ್ವರ್ಗಕ್ಕೆ ಮೂರೇ ಗೇಣು...ನಮಗೆ ಇದು ವಿಚಿತ್ರ ಆದರು ಸತ್ಯವಾಗಿ ಕಂಡಿತು....ಅವಳು ಆಟ ಇತ್ತ ನೋಡಿ..ತನ್ನ ಗಾಡಿಯನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಕಾಲ್ಕಿತ್ತಳು...ಬಂಡು ಕೂಡ ತನ್ನ ೧೮ ನೆ ಶತಮಾನದ ಟಿವಿಎಸ್ ಗಾಡಿಯನ್ನು ತೆಗೆದುಕೊಂಡು ಅವಳ ಹಿಂದೆ ಹೊರಟೇಬಿಟ್ಟ....

ಏನಾಗುತ್ತದೆ ಎಂಬ ಕುತೂಹಲ ನಮಗೆಲ್ಲ...ಅದಕ್ಕಾಗಿ ಮಾರನೆದಿನದ ವರೆಗೆ ಕಾಯಲೇ ಬೇಕು....ಸರಿ ಮಾರನೆದಿನ ಮತ್ತೆ ನಾವು ಸಂಘದ ಹತ್ತಿರ ಬಂದು ಸೇರಿದೆವು...ಬಂಡು ಮಾತ್ರ ತನ್ನ ಗಾಡಿ ಬಿಟ್ಟು ಬರಿಗಾಲಿನಲ್ಲಿ ಬಂದಿದ್ದ..ಏಕೆಂದು ಕೇಳಿದಾಗ ಆ ಹುಡುಗಿ ತನ್ನ ಪಾಡಿಗೆ ತಾನು ಸ್ಕೂಟಿಯಲ್ಲಿ ಜೋರಾಗಿ ಸಂದಿಗೊಂದಿಗಳಲ್ಲಿ ನುಗ್ಗಿ ಇವನ ಕೈಗೆ ಸಿಗದಂತೆ ಹೊರತುಹೊಗಿದ್ದಾಳೆ..ಇವನದು ಮೊದಲೇ ಹಳೆಯ ಶತಮಾನದ ಗಾಡಿ...ಮಾರ್ಗ ಮಧ್ಯದಲಿ ಅದರಲ್ಲಿನ ಪೆಟ್ರೋಲ್ ತೀರಿ...ಅಲ್ಲೇ ನಿಂತಿದೆ..ಅಲ್ಲಿಂದ ಬಂಡು ಸುಮಾರು ನಾಲ್ಕು ಕಿಲೋ ಮೀಟರ್ ದೂರ ಗಾಡಿ ತಳ್ಳಿಕೊಂಡು ತನ್ನ ರೂಮಿಗೆ ಬಂದು ಸೇರಿದ್ದಾನೆ...ಮಾರನೆ ದಿನ ಬೆಳಿಗ್ಗೆ ಎದ್ದವನೇ ಯಾರಿಗೂ ಹೇಳದೆ ಕೇಳದೆ ಅದನ್ನು ೧೫೦೦ ರುಪಾಯಿಗೆ ಮಾರಾಟ ಮಾಡಿದ್ದಾನೆ....ನಮಗೆ ನಗಲು ಮತ್ತೆ ಇನ್ನೊಂದು ಕಾರಣ ಸಿಕ್ಕಿತು...ಹೊಟ್ಟೆ ತುಂಬ ನಕ್ಕಿದ್ದೆ ನಕ್ಕಿದ್ದು...

ಕ್ರಮೇಣ ಈ ಪಂಕಜಾಲ ವಿಷಯ ಧಾರವಾಡದಲ್ಲಿ ಬಹುತೇಕ ಎಲ್ಲರಿಗು ತಿಳಿದಿತ್ತು...ಕೊನೆಗೊಂದು ದಿನ ನಮ್ಮ ಗೆಳೆಯರ ವಲಯದಲಿಯೇ ಒಬ್ಬರು ಬಂದುನಿಗೆ ಈ ಕೆಲಸವನ್ನು ಮಾಡುತ್ತಿರುವವರು ನಾವೇ ಎಂದು ತಿಳಿಸಿದರು.....ಬಂದು ಫುಲ್ ಕಂಗಾಲಾಗಿದ್ದ...ಏನು ಮಾಡಬೇಕೆಂದು ತಿಳಿಯದಂತಾದ.....

ಇಂದು ಬಂಡು ಆಕಸ್ಮಿಕವಾಗಿ ನನ್ನ ಬ್ಲಾಗ್ ನೋಡಿ ಫೋನಾಯಿಸಿದ...ನನ್ನ ಬ್ಲಾಗ್ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತ ಪಡಿಸಿದ...ನಾನು ಈ ವಿಷಯವನ್ನು ಬರೆಯುವುದಾಗಿ ಹೇಳಿದಾಗ...ಇದನ್ನು ನೆನೆಸಿಕೊಂಡು ಇಬ್ಬರು ಹೊಟ್ಟೆ ತುಂಬ ನಕ್ಕೆವು.....ಅದಕ್ಕೆ ಇರಬೇಕು ಚಂಪಾ ಬರೆದದ್ದು.."ಪ್ರೀತಿ ಇಲ್ಲದೆ ನಾನು ಏನನ್ನು ಮಾಡುವುದಿಲ್ಲ...ದ್ವೇಷವನ್ನು ಕೂಡ..."

1 comment: